ಅಶ್ವಮೇಧಿಕ ಪರ್ವ
೫೭
ಸೌದಾಸನಿಂದ ಕುರುಹಿನ ಮಾತನ್ನು ಮದವಂತಿಗೆ ಹೇಳಿ ಅವಳಿಂದ ಉತ್ತಂಕನು ಕುಂಡಲಗಳನ್ನು ಪಡೆದುದು (೧-೩). ತನ್ನಲ್ಲಿ ಸೌಹಾರ್ದತೆಯಿಂದ ಮಾತನಾಡಿದ ಉತ್ತಂಕನಿಗೆ ಪುನಃ ನೀನು ನನ್ನಲ್ಲಿಗೆ ಬರುವುದು ನಿನಗೆ ಕ್ಷೇಮಕರವಲ್ಲ ಎಂದು ಕಳುಹಿಸಿದುದು (೪-೧೬). ಉತ್ತಂಕನು ಕುಂಡಲಗಳನ್ನು ತೆಗೆದುಕೊಂಡು ಪ್ರಯಾಣಿಸುತ್ತಿರುವಾಗ ನಾಗನಿಂದ ಅವುಗಳ ಅಪಹರಣ (೧೭-೨೩). ಭೂಮಿಯನ್ನು ಅಗೆಯಲು ಪ್ರಯತ್ನಿಸುತ್ತಿದ್ದ ಉತ್ತಂಕನಿಗೆ ಇಂದ್ರನ ಸಹಾಯ (೨೪-೩೩). ಪಾತಾಳಲೋಕಕ್ಕೆ ಹೋದ ಉತ್ತಂಕನಿಗೆ ಅಗ್ನಿಯ ಸಹಾಯದಿಂದ ಕುಂಡಲಗಳು ಪುನಃ ದೊರಕಿದುದು (೩೪-೫೩). ಅವನು ಕುಂಡಲಗಳನ್ನು ಗುರುಪತ್ನಿಗೆ ನೀಡಿದುದು (೫೪-೫೬).
14057001 ವೈಶಂಪಾಯನ ಉವಾಚ
14057001a ಸ ಮಿತ್ರಸಹಮಾಸಾದ್ಯ ತ್ವಭಿಜ್ಞಾನಮಯಾಚತ|
14057001c ತಸ್ಮೈ ದದಾವಭಿಜ್ಞಾನಂ ಸ ಚೇಕ್ಷ್ವಾಕುವರಸ್ತದಾ||
ವೈಶಂಪಾಯನನು ಹೇಳಿದನು: “ಉತ್ತಂಕನು ಮಿತ್ರಸಹ ಸೌದಾಸನ ಬಳಿಹೋಗಿ ಗುರುತನ್ನು ಕೇಳಿದನು. ಆ ಇಕ್ಷ್ವಾಕುಕುವರನು ಅವನಿಗೆ ಗುರುತೊಂದನ್ನು ಕೊಟ್ಟನು.
14057002 ಸೌದಾಸ ಉವಾಚ
14057002a ನ ಚೈವೈಷಾ ಗತಿಃ ಕ್ಷೇಮ್ಯಾ ನ ಚಾನ್ಯಾ ವಿದ್ಯತೇ ಗತಿಃ|
14057002c ಏತನ್ಮೇ ಮತಮಾಜ್ಞಾಯ ಪ್ರಯಚ್ಚ ಮಣಿಕುಂಡಲೇ||
ಸೌದಾಸನು ಹೇಳಿದನು: “ನನ್ನ ಈ ಗತಿಯು ಕ್ಷೇಮಕರವಾದುದೇನೂ ಅಲ್ಲ. ಆದರೂ ಬೇರೆ ಯಾವ ಗತಿಯನ್ನೂ ಕಾಣೆ. ಈ ನನ್ನ ಅಭಿಪ್ರಾಯವನ್ನು ತಿಳಿದುಕೊಂಡು ಮಣಿಕುಂಡಲಗಳನ್ನು ಕೊಡು!””
14057003 ವೈಶಂಪಾಯನ ಉವಾಚ
14057003a ಇತ್ಯುಕ್ತಸ್ತಾಮುತ್ತಂಕಸ್ತು ಭರ್ತುರ್ವಾಕ್ಯಮಥಾಬ್ರವೀತ್|
14057003c ಶ್ರುತ್ವಾ ಚ ಸಾ ತತಃ ಪ್ರಾದಾತ್ತಸ್ಮೈ ತೇ ಮಣಿಕುಂಡಲೇ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಉತ್ತಂಕನು ಪತಿಯ ವಾಕ್ಯವನ್ನು ಮದಯಂತಿಗೆ ಹೇಳಿದನು. ಅದನ್ನು ಕೇಳುತ್ತಲೇ ಅವಳು ಅವನಿಗೆ ಮಣಿಕುಂಡಲಗಳನ್ನು ಕೊಟ್ಟಳು.
14057004a ಅವಾಪ್ಯ ಕುಂಡಲೇ ತೇ ತು ರಾಜಾನಂ ಪುನರಬ್ರವೀತ್|
14057004c ಕಿಮೇತದ್ಗುಹ್ಯವಚನಂ ಶ್ರೋತುಮಿಚ್ಚಾಮಿ ಪಾರ್ಥಿವ||
ಆ ಕುಂಡಲಗಳನ್ನು ಪಡೆದುಕೊಂಡು ಉತ್ತಂಕನು ರಾಜ ಸೌದಾಸನಲ್ಲಿಗೆ ಹೋಗಿ ಪುನಃ ಅವನಿಗೆ ಕೇಳಿದನು: “ಪಾರ್ಥಿವ! ನಿನ್ನ ಆ ಗೂಢವಚನದ ಅರ್ಥವೇನೆಂದು ಕೇಳ ಬಯಸುತ್ತೇನೆ!”
14057005 ಸೌದಾಸ ಉವಾಚ
14057005a ಪ್ರಜಾ ನಿಸರ್ಗಾದ್ವಿಪ್ರಾನ್ವೈ ಕ್ಷತ್ರಿಯಾಃ ಪೂಜಯಂತಿ ಹ|
14057005c ವಿಪ್ರೇಭ್ಯಶ್ಚಾಪಿ ಬಹವೋ ದೋಷಾಃ ಪ್ರಾದುರ್ಭವಂತಿ ನಃ||
ಸೌದಾಸನು ಹೇಳಿದನು: “ಸೃಷ್ಟಿಯ ಪ್ರಾರಂಭದಿಂದಲೂ ಕ್ಷತ್ರಿಯರು ವಿಪ್ರರನ್ನು ಪೂಜಿಸುತ್ತಾ ಬಂದಿದ್ದಾರೆ. ಆದರೂ ವಿಪ್ರರು ನಮ್ಮಲ್ಲಿ ಅನೇಕ ದೋಷಗಳನ್ನು ಹುಟ್ಟಿಸುತ್ತಾರೆ.
14057006a ಸೋಽಹಂ ದ್ವಿಜೇಭ್ಯಃ ಪ್ರಣತೋ ವಿಪ್ರಾದ್ದೋಷಮವಾಪ್ತವಾನ್|
14057006c ಗತಿಮನ್ಯಾಂ ನ ಪಶ್ಯಾಮಿ ಮದಯಂತೀಸಹಾಯವಾನ್|
14057006e ಸ್ವರ್ಗದ್ವಾರಸ್ಯ ಗಮನೇ ಸ್ಥಾನೇ ಚೇಹ ದ್ವಿಜೋತ್ತಮ||
ನಾನೂ ಕೂಡ ದ್ವಿಜರನ್ನು ಪೂಜಿಸುತ್ತಿದ್ದೆನು. ಆದರೆ ವಿಪ್ರನಿಂದಲೇ ಈ ದೋಷವನ್ನು ಪಡೆದುಕೊಂಡಿದ್ದೇನೆ. ಮದಯಂತಿಯನ್ನು ಬಿಟ್ಟು ಬೇರೆ ಯಾವ ಸಹಾಯಕರನ್ನೂ ನಾನು ಕಾಣುತ್ತಿಲ್ಲ. ದ್ವಿಜೋತ್ತಮ! ಈ ಪರಿಸ್ಥಿತಿಯಲ್ಲಿ ಸ್ವರ್ಗದ್ವಾರಕ್ಕೆ ಹೋಗಲು ದಾನವೊಂದೇ ಮಾರ್ಗವಲ್ಲವೇ?
14057007a ನ ಹಿ ರಾಜ್ಞಾ ವಿಶೇಷೇಣ ವಿರುದ್ಧೇನ ದ್ವಿಜಾತಿಭಿಃ|
14057007c ಶಕ್ಯಂ ನೃಲೋಕೇ ಸಂಸ್ಥಾತುಂ ಪ್ರೇತ್ಯ ವಾ ಸುಖಮೇಧಿತುಮ್||
ದ್ವಿಜಾತಿಯವರಿಗೆ ವಿರುದ್ಧವಾಗಿದ್ದವನು, ಅದರಲ್ಲೂ ವಿಶೇಷವಾಗಿ ರಾಜನು, ಈ ನರಲೋಕದಲ್ಲಿಯೂ ಅಥವಾ ಮರಣದ ನಂತರವೂ ಸುಖದಿಂದಿರಲು ಶಕ್ಯವಿಲ್ಲ.
14057008a ತದಿಷ್ಟೇ ತೇ ಮಯೈವೈತೇ ದತ್ತೇ ಸ್ವೇ ಮಣಿಕುಂಡಲೇ|
14057008c ಯಃ ಕೃತಸ್ತೇಽದ್ಯ ಸಮಯಃ ಸಫಲಂ ತಂ ಕುರುಷ್ವ ಮೇ||
ನಿನಗಿಷ್ಟವಾಗಿರುವ ಈ ಮಣಿಕುಂಡಲಗಳನ್ನು ಕೊಟ್ಟಿದ್ದೇನೆ. ಇಂದು ನೀನು ಮಾಡಬೇಕಾದುದನ್ನು ಮಾಡಿ ಒಪ್ಪಂದವನ್ನು ಸಫಲಗೊಳಿಸು!”
14057009 ಉತ್ತಂಕ ಉವಾಚ
14057009a ರಾಜಂಸ್ತಥೇಹ ಕರ್ತಾಸ್ಮಿ ಪುನರೇಷ್ಯಾಮಿ ತೇ ವಶಮ್|
14057009c ಪ್ರಶ್ನಂ ತು ಕಂ ಚಿತ್ಪ್ರಷ್ಟುಂ ತ್ವಾಂ ವ್ಯವಸಿಷ್ಯೇ ಪರಂತಪ||
ಉತ್ತಂಕನು ಹೇಳಿದನು: “ರಾಜನ್! ಹಾಗೆಯೇ ಮಾಡುತ್ತೇನೆ. ಪುನಃ ನಿನ್ನ ವಶದಲ್ಲಿ ಬರುತ್ತೇನೆ. ಪರಂತಪ! ನಿನ್ನಲ್ಲಿ ಯಾವುದೋ ಒಂದು ಪ್ರಶ್ನೆಯನ್ನು ಕೇಳುವುದೂ ಬಾಕಿಯಿದೆ.”
14057010 ಸೌದಾಸ ಉವಾಚ
14057010a ಬ್ರೂಹಿ ವಿಪ್ರ ಯಥಾಕಾಮಂ ಪ್ರತಿವಕ್ತಾಸ್ಮಿ ತೇ ವಚಃ|
14057010c ಚೇತ್ತಾಸ್ಮಿ ಸಂಶಯಂ ತೇಽದ್ಯ ನ ಮೇಽತ್ರಾಸ್ತಿ ವಿಚಾರಣಾ||
ಸೌದಾಸನು ಹೇಳಿದನು: “ವಿಪ್ರ! ನಿನ್ನ ಅಪೇಕ್ಷೆಯಂತೆ ಕೇಳು. ಅದಕ್ಕೆ ಉತ್ತರಿಸುತ್ತೇನೆ. ನಿನ್ನ ಸಂಶಯವನ್ನು ನಿವಾರಿಸುತ್ತೇನೆ. ಅದರ ಕುರಿತು ವಿಚಾರಿಸಬೇಕಾಗಿಲ್ಲ!”
14057011 ಉತ್ತಂಕ ಉವಾಚ
14057011a ಪ್ರಾಹುರ್ವಾಕ್ಸಂಗತಂ ಮಿತ್ರಂ ಧರ್ಮನೈಪುಣ್ಯದರ್ಶಿನಃ|
14057011c ಮಿತ್ರೇಷು ಯಶ್ಚ ವಿಷಮಃ ಸ್ತೇನ ಇತ್ಯೇವ ತಂ ವಿದುಃ||
ಉತ್ತಂಕನು ಹೇಳಿದನು: “ಧರ್ಮನೈಪುಣ್ಯವನ್ನು ಕಂಡವರು ಮಾತಿನಲ್ಲಿ ಸಂಯಮವಿರುವವನನ್ನು ಮಿತ್ರನೆಂದೂ ಮಿತ್ರನಿಗೆ ಪ್ರತಿಕೂಲವಾಗಿ ನಡೆದುಕೊಳ್ಳುವವನನ್ನು ಕಳ್ಳನೆಂದೂ ಹೇಳುತ್ತಾರೆ.
14057012a ಸ ಭವಾನ್ಮಿತ್ರತಾಮದ್ಯ ಸಂಪ್ರಾಪ್ತೋ ಮಮ ಪಾರ್ಥಿವ|
14057012c ಸ ಮೇ ಬುದ್ಧಿಂ ಪ್ರಯಚ್ಚಸ್ವ ಸಮಾಂ ಬುದ್ಧಿಮತಾಂ ವರ||
ಪಾರ್ಥಿವ! ಇಂದು ನೀನು ನನ್ನೊಡನೆ ಮಿತ್ರತ್ವವನ್ನು ಹೊಂದಿರುವೆ. ಬುದ್ಧಿವಂತರಲ್ಲಿ ಶ್ರೇಷ್ಠನೇ! ಆದುದರಿಂದ ನೀನು ನನಗೆ ಉತ್ತಮ ಬುದ್ಧಿಯನ್ನು ನೀಡು.
14057013a ಅವಾಪ್ತಾರ್ಥೋಽಹಮದ್ಯೇಹ ಭವಾಂಶ್ಚ ಪುರುಷಾದಕಃ|
14057013c ಭವತ್ಸಕಾಶಮಾಗಂತುಂ ಕ್ಷಮಂ ಮಮ ನ ವೇತಿ ವಾ||
ನನ್ನ ಒಂದು ಉದ್ದೇಶದಿಂದ ಇಂದು ನಾನು ನಿನ್ನ ಬಳಿ ಬಂದಿದ್ದೇನೆ. ನರಭಕ್ಷಕನಾಗಿರುವ ನಿನ್ನ ಬಳಿ ಪುನಃ ಬರುವುದು ನನಗೆ ಕ್ಷೇಮಕರವಾದುದೇ ಅಥವಾ ಅಲ್ಲವೇ ಎನ್ನುವುದನ್ನು ಹೇಳು!”
14057014 ಸೌದಾಸ ಉವಾಚ
14057014a ಕ್ಷಮಂ ಚೇದಿಹ ವಕ್ತವ್ಯಂ ಮಯಾ ದ್ವಿಜವರೋತ್ತಮ|
14057014c ಮತ್ಸಮೀಪಂ ದ್ವಿಜಶ್ರೇಷ್ಠ ನಾಗಂತವ್ಯಂ ಕಥಂ ಚನ||
ಸೌದಾಸನು ಹೇಳಿದನು: “ದ್ವಿಜವರೋತ್ತಮ! ದ್ವಿಜಶ್ರೇಷ್ಠ! ಈ ವಿಷಯದಲ್ಲಿ ಉಚಿತವಾದುದನ್ನೇ ಹೇಳಬೇಕೆಂದಾದರೆ ಯಾವ ಕಾರಣಕ್ಕೂ ನೀನು ಪುನಃ ನನ್ನ ಬಳಿ ಬರಬಾರದು ಎಂದೇ ಹೇಳುತ್ತೇನೆ.
14057015a ಏವಂ ತವ ಪ್ರಪಶ್ಯಾಮಿ ಶ್ರೇಯೋ ಭೃಗುಕುಲೋದ್ವಹ|
14057015c ಆಗಚ್ಚತೋ ಹಿ ತೇ ವಿಪ್ರ ಭವೇನ್ಮೃತ್ಯುರಸಂಶಯಮ್||
ಭೃಗುಕುಲೋದ್ವಹ! ಹೀಗೆ ಮಾಡುವುದರಲ್ಲಿಯೇ ನಿನ್ನ ಶ್ರೇಯಸ್ಸನ್ನು ಕಾಣುತ್ತೇನೆ. ವಿಪ್ರ! ಪುನಃ ನೀನು ಇಲ್ಲಿಗೆ ಬಂದರೆ ಸಾಯುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.””
14057016 ವೈಶಂಪಾಯನ ಉವಾಚ
14057016a ಇತ್ಯುಕ್ತಃ ಸ ತದಾ ರಾಜ್ಞಾ ಕ್ಷಮಂ ಬುದ್ಧಿಮತಾ ಹಿತಮ್|
14057016c ಸಮನುಜ್ಞಾಪ್ಯ ರಾಜಾನಮಹಲ್ಯಾಂ ಪ್ರತಿ ಜಗ್ಮಿವಾನ್||
ವೈಶಂಪಾಯನನು ಹೇಳಿದನು: “ರಾಜನಿಂದ ಹೀಗೆ ಹಿತಕರವಾದ ಬುದ್ಧಿಮಾತನ್ನು ಕೇಳಿ ರಾಜನಿಂದ ಅನುಜ್ಞೆಯನ್ನು ಪಡೆದು ಉತ್ತಂಕನು ಅಹಲ್ಯೆಯ ಬಳಿ ಹೊರಟನು.
14057017a ಗೃಹೀತ್ವಾ ಕುಂಡಲೇ ದಿವ್ಯೇ ಗುರುಪತ್ನ್ಯಾಃ ಪ್ರಿಯಂಕರಃ|
14057017c ಜವೇನ ಮಹತಾ ಪ್ರಾಯಾದ್ಗೌತಮಸ್ಯಾಶ್ರಮಂ ಪ್ರತಿ||
ಗುರುಪತ್ನಿಗೆ ಪ್ರಿಯಕರವಾಗಿದ್ದ ಆ ದಿವ್ಯ ಕುಂಡಲಗಳನ್ನು ಹಿಡಿದುಕೊಂಡು ಅವನು ಮಹಾ ವೇಗದಿಂದ ಗೌತಮನ ಆಶ್ರಮದ ಕಡೆ ಪ್ರಯಾಣಿಸಿದನು.
14057018a ಯಥಾ ತಯೋ ರಕ್ಷಣಂ ಚ ಮದಯಂತ್ಯಾಭಿಭಾಷಿತಮ್|
14057018c ತಥಾ ತೇ ಕುಂಡಲೇ ಬದ್ಧ್ವಾ ತಥಾ ಕೃಷ್ಣಾಜಿನೇಽನಯತ್||
ಅವುಗಳ ರಕ್ಷಣೆಯನ್ನು ಹೇಗೆ ಮಾಡಬೇಕೆಂದು ಮದಯಂತಿಯು ಹೇಳಿದ್ದಳೋ ಹಾಗೆಯೇ ಕುಂಡಲಗಳನ್ನು ಕೃಷ್ಣಾಜಿನದಲ್ಲಿ ಕಟ್ಟಿ ಕೊಂಡೊಯ್ದನು.
14057019a ಸ ಕಸ್ಮಿಂಶ್ಚಿತ್ಕ್ಷುಧಾವಿಷ್ಟಃ ಫಲಭಾರಸಮನ್ವಿತಮ್|
14057019c ಬಿಲ್ವಂ ದದರ್ಶ ಕಸ್ಮಿಂಶ್ಚಿದಾರುರೋಹ ಕ್ಷುಧಾನ್ವಿತಃ||
ಹಸಿವಿನಿಂದ ಬಳಲಿದ ಅವನು ಹಣ್ಣುಗಳ ಭಾರಗಳಿಂದ ಕೂಡಿದ್ದ ಯಾವುದೋ ಒಂದು ಬಿಲ್ವವೃಕ್ಷವನ್ನು ಕಂಡನು. ಹಸಿದಿದ್ದ ಅವನು ಆ ಮರವನ್ನು ಹತ್ತಿದನು.
14057020a ಶಾಖಾಸ್ವಾಸಜ್ಯ ತಸ್ಯೈವ ಕೃಷ್ಣಾಜಿನಮರಿಂದಮ|
14057020c ಯಸ್ಮಿಂಸ್ತೇ ಕುಂಡಲೇ ಬದ್ಧೇ ತದಾ ದ್ವಿಜವರೇಣ ವೈ||
ಅರಿಂದಮ! ಆ ಮರದ ರೆಂಬೆಗೇ ದ್ವಿಜವರನು ಕುಂಡಲಗಳನ್ನು ಕಟ್ಟಿದ್ದ ಕೃಷ್ಣಾಜಿನವನ್ನೂ ಕಟ್ಟಿದನು.
14057021a ವಿಶೀರ್ಣಬಂಧನೇ ತಸ್ಮಿನ್ಗತೇ ಕೃಷ್ಣಾಜಿನೇ ಮಹೀಮ್|
14057021c ಅಪಶ್ಯದ್ಭುಜಗಃ ಕಶ್ಚಿತ್ತೇ ತತ್ರ ಮಣಿಕುಂಡಲೇ||
ಸಡಿಲಾಗಿ ಕಟ್ಟಿದ್ದ ಆ ಕೃಷ್ಣಾಜಿನವು ನೆಲದ ಮೇಲೆ ಬಿದ್ದಿತು. ಆಗ ಆ ಮಣಿಕುಂಡಲಗಳನ್ನು ಸರ್ಪವೊಂದು ನೋಡಿತು.
14057022a ಐರಾವತಕುಲೋತ್ಪನ್ನಃ ಶೀಘ್ರೋ ಭೂತ್ವಾ ತದಾ ಸ ವೈ|
14057022c ವಿದಶ್ಯಾಸ್ಯೇನ ವಲ್ಮೀಕಂ ವಿವೇಶಾಥ ಸ ಕುಂಡಲೇ||
ಐರಾವತಕುಲೋತ್ಪನ್ನ ಆ ಸರ್ಪವು ಶೀಘ್ರದಲ್ಲಿಯೇ ಆ ಕುಂಡಲಗಳನ್ನು ತನ್ನ ಹಲ್ಲುಗಳಿಂದ ಕಚ್ಚಿಕೊಂಡು ಹುತ್ತದ ಬಿಲವನ್ನು ಹೊಕ್ಕಿತು.
14057023a ಹ್ರಿಯಮಾಣೇ ತು ದೃಷ್ಟ್ವಾ ಸ ಕುಂಡಲೇ ಭುಜಗೇನ ಹ|
14057023c ಪಪಾತ ವೃಕ್ಷಾತ್ಸೋದ್ವೇಗೋ ದುಃಖಾತ್ಪರಮಕೋಪನಃ||
ಆ ಸರ್ಪವು ಕುಂಡಲಗಳನ್ನು ಅಪಹರಿಸಿಕೊಂಡು ಹೋಗುತ್ತಿರುವುದನ್ನು ಕಂಡು ಪರಮ ಕುಪಿತನಾದ ಉತ್ತಂಕನು ದುಃಖ-ಉದ್ವೇಗಗಳೊಂದಿಗೆ ಆ ಮರದಿಂದ ಕೆಳಕ್ಕೆ ಹಾರಿದನು.
14057024a ಸ ದಂಡಕಾಷ್ಠಮಾದಾಯ ವಲ್ಮೀಕಮಖನತ್ತದಾ|
14057024c ಕ್ರೋಧಾಮರ್ಷಾಭಿತಪ್ತಾಂಗಸ್ತತೋ ವೈ ದ್ವಿಜಪುಂಗವಃ||
ಕ್ರೋಧ-ರೋಷಗಳಿಂದ ಅಂಗಗಳು ಉರಿಯುತ್ತಿದ್ದ ಆ ದ್ವಿಜಪುಂಗವನು ಒಂದು ಮರದ ಕೋಲನ್ನು ತೆಗೆದುಕೊಂಡು ಹುತ್ತವನ್ನು ಅಗೆಯ ತೊಡಗಿದನು.
14057025a ತಸ್ಯ ವೇಗಮಸಹ್ಯಂ ತಮಸಹಂತೀ ವಸುಂಧರಾ|
14057025c ದಂಡಕಾಷ್ಠಾಭಿನುನ್ನಾಂಗೀ ಚಚಾಲ ಭೃಶಮಾತುರಾ||
ಸಹಿಸಲಸಾಧ್ಯವಾದ ಅವನ ವೇಗವನ್ನು ಸಹಿಸಲಾರದೇ ವಸುಂಧರೆಯು ಮರದ ಕೋಲಿನಿಂದ ಗಾಯಗೊಂಡು ಅತ್ಯಂತ ಆತುರಳಾಗಿ ನಡುಗಿದಳು.
14057026a ತತಃ ಖನತ ಏವಾಥ ವಿಪ್ರರ್ಷೇರ್ಧರಣೀತಲಮ್|
14057026c ನಾಗಲೋಕಸ್ಯ ಪಂಥಾನಂ ಕರ್ತುಕಾಮಸ್ಯ ನಿಶ್ಚಯಾತ್||
14057027a ರಥೇನ ಹರಿಯುಕ್ತೇನ ತಂ ದೇಶಮುಪಜಗ್ಮಿವಾನ್|
14057027c ವಜ್ರಪಾಣಿರ್ಮಹಾತೇಜಾ ದದರ್ಶ ಚ ದ್ವಿಜೋತ್ತಮಮ್||
ಹೀಗೆ ಆ ವಿಪ್ರರ್ಷಿಯು ನಾಗಲೋಕಕ್ಕೆ ದಾರಿಯನ್ನು ಮಾಡುವ ನಿಶ್ಚಯದಿಂದ ಭೂಮಿಯನ್ನು ಅಗೆಯುತ್ತಿರುವಾಗ ಕುದುರೆಗಳನ್ನು ಕಟ್ಟಿದ ರಥದಲ್ಲಿ ಮಹಾತೇಜಸ್ವಿ ವಜ್ರಪಾಣಿ ಇಂದ್ರನು ಆ ಪ್ರದೇಶಕ್ಕೆ ಬಂದು ದ್ವಿಜೋತ್ತಮನನ್ನು ಕಂಡನು.
14057028a ಸ ತು ತಂ ಬ್ರಾಹ್ಮಣೋ ಭೂತ್ವಾ ತಸ್ಯ ದುಃಖೇನ ದುಃಖಿತಃ|
14057028c ಉತ್ತಂಕಮಬ್ರವೀತ್ತಾತ ನೈತಚ್ಚಕ್ಯಂ ತ್ವಯೇತಿ ವೈ||
ಅವನ ದುಃಖದಿಂದ ದುಃಖಿತನಾದ ಬ್ರಾಹ್ಮಣನ ವೇಷವನ್ನು ಧರಿಸಿ ಅವನು ಉತ್ತಂಕನಿಗೆ ಹೇಳಿದನು: “ಮಗೂ! ನಿನಗೆ ಇದನ್ನು ಮಾಡಿಮುಗಿಸಲು ಶಕ್ಯವಿಲ್ಲ!
14057029a ಇತೋ ಹಿ ನಾಗಲೋಕೋ ವೈ ಯೋಜನಾನಿ ಸಹಸ್ರಶಃ|
14057029c ನ ದಂಡಕಾಷ್ಠಸಾಧ್ಯಂ ಚ ಮನ್ಯೇ ಕಾರ್ಯಮಿದಂ ತವ||
ಇಲ್ಲಿಂದ ನಾಗಲೋಕವು ಸಹಸ್ರಾರು ಯೋಜನ ದೂರದಲ್ಲಿದೆ. ಈ ಮರದ ಕೋಲಿನಿಂದ ಆ ಕೆಲಸವನ್ನು ಮಾಡಬಲ್ಲೆ ಎಂದು ನನಗನ್ನಿಸುವುದಿಲ್ಲ!”
14057030 ಉತ್ತಂಕ ಉವಾಚ
14057030a ನಾಗಲೋಕೇ ಯದಿ ಬ್ರಹ್ಮನ್ನ ಶಕ್ಯೇ ಕುಂಡಲೇ ಮಯಾ|
14057030c ಪ್ರಾಪ್ತುಂ ಪ್ರಾಣಾನ್ವಿಮೋಕ್ಷ್ಯಾಮಿ ಪಶ್ಯತಸ್ತೇ ದ್ವಿಜೋತ್ತಮ||
ಉತ್ತಂಕನು ಹೇಳಿದನು: “ಬ್ರಹ್ಮನ್! ದ್ವಿಜೋತ್ತಮ! ನಾಗಲೋಕದಿಂದ ಕುಂಡಲಗಳನ್ನು ಪಡೆಯಲು ನನಗೆ ಸಾಧ್ಯವಾಗದಿದ್ದರೆ ನೀನು ನೋಡುತ್ತಿದ್ದಂತೆಯೇ ನನ್ನ ಪ್ರಾಣಗಳನ್ನು ತೊರೆಯುತ್ತೇನೆ!”
14057031a ಯದಾ ಸ ನಾಶಕತ್ತಸ್ಯ ನಿಶ್ಚಯಂ ಕರ್ತುಮನ್ಯಥಾ|
14057031c ವಜ್ರಪಾಣಿಸ್ತದಾ ದಂಡಂ ವಜ್ರಾಸ್ತ್ರೇಣ ಯುಯೋಜ ಹ||
ಅವನ ನಿಶ್ಚಯವನ್ನು ಬದಲಾಯಿಸಲು ಸಾಧ್ಯವಾಗದಿದ್ದಾಗ ವಜ್ರಪಾಣಿಯು ಆ ಕೋಲಿಗೆ ವಜ್ರಾಸ್ತ್ರವನ್ನು ಸೇರಿಸಿದನು.
14057032a ತತೋ ವಜ್ರಪ್ರಹಾರೈಸ್ತೈರ್ದಾರ್ಯಮಾಣಾ ವಸುಂಧರಾ|
14057032c ನಾಗಲೋಕಸ್ಯ ಪಂಥಾನಮಕರೋಜ್ಜನಮೇಜಯ||
ಜನಮೇಜಯ! ವಜ್ರಪ್ರಹಾರದಿಂದ ಭೂಮಿಯನ್ನು ಅಗೆದು ಅವನು ನಾಗಲೋಕಕ್ಕೆ ದಾರಿಯನ್ನು ಮಾಡಿದನು.
14057033a ಸ ತೇನ ಮಾರ್ಗೇಣ ತದಾ ನಾಗಲೋಕಂ ವಿವೇಶ ಹ|
14057033c ದದರ್ಶ ನಾಗಲೋಕಂ ಚ ಯೋಜನಾನಿ ಸಹಸ್ರಶಃ||
ಅವನು ಆ ಮಾರ್ಗದಿಂದ ನಾಗಲೋಕವನ್ನು ಪ್ರವೇಶಿಸಿದನು. ಸಹಸ್ರಾರು ಯೋಜನಗಳ ನಾಗಲೋಕವನ್ನು ಕಂಡನು.
14057034a ಪ್ರಾಕಾರನಿಚಯೈರ್ದಿವ್ಯೈರ್ಮಣಿಮುಕ್ತಾಭ್ಯಲಂಕೃತೈಃ|
14057034c ಉಪಪನ್ನಂ ಮಹಾಭಾಗ ಶಾತಕುಂಭಮಯೈಸ್ತಥಾ||
14057035a ವಾಪೀಃ ಸ್ಫಟಿಕಸೋಪಾನಾ ನದೀಶ್ಚ ವಿಮಲೋದಕಾಃ|
14057035c ದದರ್ಶ ವೃಕ್ಷಾಂಶ್ಚ ಬಹೂನ್ನಾನಾದ್ವಿಜಗಣಾಯುತಾನ್||
ಮಹಾಭಾಗ! ಅಲ್ಲಿ ದಿವ್ಯ ಮಣಿ-ಮುತ್ತುಗಳಿಂದ ಅಲಂಕೃತವಾದ ಚಿನ್ನದ ಪ್ರಾಕಾರಗಳನ್ನೂ, ಸ್ಪಟಿಕ ಸೋಪಾನಗಳ ಬಾವಿಗಳನ್ನೂ, ಶುದ್ಧನೀರಿನ ನದಿಗಳನ್ನೂ, ಅನೇಕ ಪಕ್ಷಿಸಂಕುಲಗಳಿಂದ ಕೂಡಿದ್ದ ವೃಕ್ಷಗಳನ್ನೂ ನೋಡಿದನು.
14057036a ತಸ್ಯ ಲೋಕಸ್ಯ ಚ ದ್ವಾರಂ ದದರ್ಶ ಸ ಭೃಗೂದ್ವಹಃ|
14057036c ಪಂಚಯೋಜನವಿಸ್ತಾರಮಾಯತಂ ಶತಯೋಜನಮ್||
ಆ ಭೃಗೂದ್ವಹನು ಐದು ಯೋಜನ ವಿಸ್ತಾರದ ಮತ್ತು ನೂರು ಯೋಜನ ಉದ್ದವಾಗಿಯೂ ಇದ್ದ ನಾಗಲೋಕದ ದ್ವಾರವನ್ನು ನೋಡಿದನು.
14057037a ನಾಗಲೋಕಮುತ್ತಂಕಸ್ತು ಪ್ರೇಕ್ಷ್ಯ ದೀನೋಽಭವತ್ತದಾ|
14057037c ನಿರಾಶಶ್ಚಾಭವತ್ತಾತ ಕುಂಡಲಾಹರಣೇ ಪುನಃ||
ಮಗೂ! ಆ ನಾಗಲೋಕವನ್ನು ನೋಡಿ ಉತ್ತಂಕನು ದೀನನಾದನು. ಕುಂಡಲಗಳನ್ನು ಪುನಃ ಪಡೆಯುವುದರ ಕುರಿತು ನಿರಾಶನಾದನು.
14057038a ತತ್ರ ಪ್ರೋವಾಚ ತುರಗಸ್ತಂ ಕೃಷ್ಣಶ್ವೇತವಾಲಧಿಃ|
14057038c ತಾಮ್ರಾಸ್ಯನೇತ್ರಃ ಕೌರವ್ಯ ಪ್ರಜ್ವಲನ್ನಿವ ತೇಜಸಾ||
ಅಲ್ಲಿ ಒಂದು ಕಪ್ಪು-ಬಿಳಿ ಕೂದಲುಗಳಿದ್ದ ಬಾಲದ, ಕೆಂಪಾದ ಮುಖ-ಕಣ್ಣುಗಳ, ತೇಜಸ್ಸಿನಿಂದ ಪ್ರಜ್ಚಲಿಸುತ್ತಿದ್ದ ಕುದುರೆಯು ಅವನಿಗೆ ಹೇಳಿತು:
14057039a ಧಮಸ್ವಾಪಾನಮೇತನ್ಮೇ ತತಸ್ತ್ವಂ ವಿಪ್ರ ಲಲ್ಪ್ಸ್ಯಸೇ|
14057039c ಐರಾವತಸುತೇನೇಹ ತವಾನೀತೇ ಹಿ ಕುಂಡಲೇ||
“ವಿಪ್ರ! ನನ್ನ ಅಪಾನಸ್ಥಾನವನ್ನು ಗಟ್ಟಿಯಾಗಿ ಊದು. ಅಗ ನೀನು ಐರಾವತಸುತನು ತೆಗೆದುಕೊಂಡು ಹೋದ ಕುಂಡಲಗಳನ್ನು ಪಡೆಯುತ್ತೀಯೆ.
14057040a ಮಾ ಜುಗುಪ್ಸಾಂ ಕೃಥಾಃ ಪುತ್ರ ತ್ವಮತ್ರಾರ್ಥೇ ಕಥಂ ಚನ|
14057040c ತ್ವಯೈತದ್ಧಿ ಸಮಾಚೀರ್ಣಂ ಗೌತಮಸ್ಯಾಶ್ರಮೇ ತದಾ||
ಪುತ್ರ! ಇದನ್ನು ಮಾಡುವುದರಲ್ಲಿ ಯಾವುದೇ ರೀತಿಯ ಜಿಗುಪ್ಸೆಯನ್ನೂ ತಾಳಬೇಡ. ಗೌತಮನ ಆಶ್ರಮದಲ್ಲಿದ್ದಾಗ ನೀನು ಹೀಗೆ ಮಾಡಿದ್ದೆ ಎನ್ನುವುದನ್ನು ನೆನಪಿಸಿಕೋ!”
14057041 ಉತ್ತಂಕ ಉವಾಚ
14057041a ಕಥಂ ಭವಂತಂ ಜಾನೀಯಾಮುಪಾಧ್ಯಾಯಾಶ್ರಮಂ ಪ್ರತಿ|
14057041c ಯನ್ಮಯಾ ಚೀರ್ಣಪೂರ್ವಂ ಚ ಶ್ರೋತುಮಿಚ್ಚಾಮಿ ತದ್ಧ್ಯಹಮ್||
ಉತ್ತಂಕನು ಹೇಳಿದನು: “ಉಪಾಧ್ಯಾಯನ ಆಶ್ರಮದಲ್ಲಿದ್ದಾಗ ಹಿಂದೆ ನಾನು ಹೀಗೆ ಊದಿದ್ದೆನು ಎನ್ನುವುದು ನಿನಗೆ ಹೇಗೆ ತಿಳಿಯಿತು? ಅದನ್ನು ಕೇಳಲು ಬಯಸುತ್ತೇನೆ.”
14057042 ಅಶ್ವ ಉವಾಚ
14057042a ಗುರೋರ್ಗುರುಂ ಮಾಂ ಜಾನೀಹಿ ಜ್ವಲಿತಂ ಜಾತವೇದಸಮ್|
14057042c ತ್ವಯಾ ಹ್ಯಹಂ ಸದಾ ವತ್ಸ ಗುರೋರರ್ಥೇಽಭಿಪೂಜಿತಃ||
ಕುದುರೆಯು ಹೇಳಿತು: “ವತ್ಸ! ನಿನ್ನ ಗುರುವಿಗೂ ಗುರುವಾದ ಪ್ರಜ್ವಲಿಸುವ ಜಾತವೇದಸನೆಂದು ನನ್ನನ್ನು ತಿಳಿ. ಸದಾ ನೀನು ನನ್ನನ್ನು ಗುರುವಿನ ಸಲುವಾಗಿ ಪೂಜಿಸುತ್ತಿದ್ದೆ.
14057043a ಸತತಂ ಪೂಜಿತೋ ವಿಪ್ರ ಶುಚಿನಾ ಭೃಗುನಂದನ|
14057043c ತಸ್ಮಾಚ್ಚ್ರೇಯೋ ವಿಧಾಸ್ಯಾಮಿ ತವೈವಂ ಕುರು ಮಾ ಚಿರಮ್||
ವಿಪ್ರ! ಭೃಗುನಂದನ! ಶುಚಿಯಾಗಿದ್ದು ಸತತವೂ ನನ್ನನ್ನು ಪೂಜಿಸುತ್ತಿದ್ದ ನಿನಗೆ ಶ್ರೇಯಸ್ಸನ್ನುಂಟುಮಾಡುತ್ತೇನೆ. ತಡಮಾಡದೇ ನಾನು ಹೇಳಿದ ಹಾಗೆ ಮಾಡು!”
14057044a ಇತ್ಯುಕ್ತಃ ಸ ತಥಾಕಾರ್ಷೀದುತ್ತಂಕಶ್ಚಿತ್ರಭಾನುನಾ|
14057044c ಘೃತಾರ್ಚಿಃ ಪ್ರೀತಿಮಾಂಶ್ಚಾಪಿ ಪ್ರಜಜ್ವಾಲ ದಿಧಕ್ಷಯಾ||
ಹೀಗೆ ಹೇಳಲು ಉತ್ತಂಕನು ಚಿತ್ರಭಾನುವು ಬಯಸಿದಂತೆಯೇ ಮಾಡಿದನು. ಆಗ ಪ್ರೀತನಾದ ಘೃತಾರ್ಚಿಯು ನಾಗಲೋಕವನ್ನು ಸುಡಲು ಉರಿದು ಪ್ರಜ್ಚಲಿಸಿದನು.
14057045a ತತೋಽಸ್ಯ ರೋಮಕೂಪೇಭ್ಯೋ ಧ್ಮಾಯಮಾನಸ್ಯ ಭಾರತ|
14057045c ಘನಃ ಪ್ರಾದುರಭೂದ್ಧೂಮೋ ನಾಗಲೋಕಭಯಾವಹಃ||
ಭಾರತ! ಅವನು ಊದುತ್ತಿದ್ದಂತೆಯೇ ಕುದುರೆಯ ರೋಮಕೂಪಗಳಿಂದ ದಟ್ಟವಾದ ಹೊಗೆಯು ಹೊರಹೊಮ್ಮಿ, ನಾಗಲೋಕಕ್ಕೇ ಭಯವನ್ನುಂಟುಮಾಡಿತು.
14057046a ತೇನ ಧೂಮೇನ ಸಹಸಾ ವರ್ಧಮಾನೇನ ಭಾರತ|
14057046c ನಾಗಲೋಕೇ ಮಹಾರಾಜ ನ ಪ್ರಜ್ಞಾಯತ ಕಿಂ ಚನ||
ಭಾರತ! ಮಹಾರಾಜ! ಕ್ಷಣ-ಕ್ಷಣಕ್ಕೂ ಹೆಚ್ಚಾಗುತ್ತಿದ್ದ ಆ ಹೊಗೆಯಿಂದ ನಾಗಲೋಕದಲ್ಲಿ ಏನೂ ಕಾಣದಂತಾಯಿತು.
14057047a ಹಾಹಾಕೃತಮಭೂತ್ಸರ್ವಮೈರಾವತನಿವೇಶನಮ್|
14057047c ವಾಸುಕಿಪ್ರಮುಖಾನಾಂ ಚ ನಾಗಾನಾಂ ಜನಮೇಜಯ||
ಜನಮೇಜಯ! ಐರಾವತನ ಅರಮನೆಯಲ್ಲಿದ್ದ ವಾಸುಕಿಯೇ ಮೊದಲಾದ ನಾಗಗಳೆಲ್ಲರಲ್ಲಿ ಹಾಹಾಕಾರವುಂಟಾಯಿತು.
14057048a ನ ಪ್ರಕಾಶಂತ ವೇಶ್ಮಾನಿ ಧೂಮರುದ್ಧಾನಿ ಭಾರತ|
14057048c ನೀಹಾರಸಂವೃತಾನೀವ ವನಾನಿ ಗಿರಯಸ್ತಥಾ||
ಭಾರತ! ಹೊಗೆಯಿಂದ ಆವೃತವಾದ ಅರಮನೆಗಳು ಮಂಜಿನಿಂದ ಮುಚ್ಚಲ್ಪಟ್ಟ ವನ-ಗಿರಿಗಳಂತೆ ಕಳಾಹೀನವಾದವು.
14057049a ತೇ ಧೂಮರಕ್ತನಯನಾ ವಹ್ನಿತೇಜೋಭಿತಾಪಿತಾಃ|
14057049c ಆಜಗ್ಮುರ್ನಿಶ್ಚಯಂ ಜ್ಞಾತುಂ ಭಾರ್ಗವಸ್ಯಾತಿತೇಜಸಃ||
ಹೊಗೆತುಂಬಿ ಕೆಂಪಾಗಿದ್ದ ಕಣ್ಣುಗಳ ಮತ್ತು ಬೆಂಕಿಯ ಬಿಸಿಯಿಂದ ಪರಿತಪಿಸುತ್ತಿದ್ದ ಅವರು ಅತಿತೇಜಸ್ವಿ ಭಾರ್ಗವನ ನಿಶ್ಚಯವೇನೆಂದು ತಿಳಿಯಲು ಅವನ ಬಳಿ ಬಂದರು.
14057050a ಶ್ರುತ್ವಾ ಚ ನಿಶ್ಚಯಂ ತಸ್ಯ ಮಹರ್ಷೇಸ್ತಿಗ್ಮತೇಜಸಃ|
14057050c ಸಂಭ್ರಾಂತಮನಸಃ ಸರ್ವೇ ಪೂಜಾಂ ಚಕ್ರುರ್ಯಥಾವಿಧಿ||
ಆ ಉಗ್ರ ತೇಜಸ್ವೀ ಮಹರ್ಷಿಯ ನಿಶ್ಚಯವನ್ನು ಕೇಳಿ ಸಂಭ್ರಾಂತಮನಸ್ಕರಾದ ಅವರೆಲ್ಲರೂ ಅವನನ್ನು ಯಥಾವಿಧಿಯಾಗಿ ಪೂಜಿಸಿದರು.
14057051a ಸರ್ವೇ ಪ್ರಾಂಜಲಯೋ ನಾಗಾ ವೃದ್ಧಬಾಲಪುರೋಗಮಾಃ|
14057051c ಶಿರೋಭಿಃ ಪ್ರಣಿಪತ್ಯೋಚುಃ ಪ್ರಸೀದ ಭಗವನ್ನಿತಿ||
“ಭಗವನ್! ಕರುಣಿಸು!” ಎಂದು ವೃದ್ಧ-ಬಾಲರಿಂದ ಹಿಡಿದು ಎಲ್ಲ ನಾಗಗಳೂ ಕೈಮುಗಿದು ತಲೆಬಾಗಿ ಕೇಳಿಕೊಂಡವು.
14057052a ಪ್ರಸಾದ್ಯ ಬ್ರಾಹ್ಮಣಂ ತೇ ತು ಪಾದ್ಯಮರ್ಘ್ಯಂ ನಿವೇದ್ಯ ಚ|
14057052c ಪ್ರಾಯಚ್ಚನ್ಕುಂಡಲೇ ದಿವ್ಯೇ ಪನ್ನಗಾಃ ಪರಮಾರ್ಚಿತೇ||
ಪಾದ್ಯ-ಅರ್ಘ್ಯ-ನೈವೇದ್ಯಗಳಿಂದ ಬ್ರಾಹ್ಮಣನನ್ನು ತೃಪ್ತಿಗೊಳಿಸಿ ಪನ್ನಗಗಳು ಆ ಪರಮಾರ್ಚಿತ ದಿವ್ಯ ಕುಂಡಲಗಳನ್ನು ಅವನಿಗೆ ಒಪ್ಪಿಸಿದವು.
14057053a ತತಃ ಸಂಪೂಜಿತೋ ನಾಗೈಸ್ತತ್ರೋತ್ತಂಕಃ ಪ್ರತಾಪವಾನ್|
14057053c ಅಗ್ನಿಂ ಪ್ರದಕ್ಷಿಣಂ ಕೃತ್ವಾ ಜಗಾಮ ಗುರುಸದ್ಮ ತತ್||
ನಾಗಗಳಿಂದ ಪೂಜಿತನಾದ ಪ್ರತಾಪವಾನ್ ಉತ್ತಂಕನು ಅಗ್ನಿಗೆ ಪ್ರದಕ್ಷಿಣೆ ಮಾಡಿ ಗುರುಗೃಹಕ್ಕೆ ಹೋದನು.
14057054a ಸ ಗತ್ವಾ ತ್ವರಿತೋ ರಾಜನ್ಗೌತಮಸ್ಯ ನಿವೇಶನಮ್|
14057054c ಪ್ರಾಯಚ್ಚತ್ಕುಂಡಲೇ ದಿವ್ಯೇ ಗುರುಪತ್ನ್ಯೈ ತದಾನಘ||
ರಾಜನ್! ಅನಘ! ತ್ವರೆಮಾಡಿ ಗೌತಮನ ಆಶ್ರಮಕ್ಕೆ ಹೋಗಿ ಅವನು ಆ ದಿವ್ಯ ಕುಂಡಲಗಳನ್ನು ಗುರುಪತ್ನಿಗೆ ನೀಡಿದನು.
14057055a ಏವಂ ಮಹಾತ್ಮನಾ ತೇನ ತ್ರೀಽಲ್ಲೋಕಾನ್ಜನಮೇಜಯ|
14057055c ಪರಿಕ್ರಮ್ಯಾಹೃತೇ ದಿವ್ಯೇ ತತಸ್ತೇ ಮಣಿಕುಂಡಲೇ||
ಜನಮೇಜಯ! ಹೀಗೆ ಆ ಮಹಾತ್ಮನು ಮೂರುಲೋಕಗಳನ್ನೂ ಸಂಚರಿಸಿ ದಿವ್ಯ ಮಣಿಕುಂಡಲಗಳನ್ನು ತಂದನು.
14057056a ಏವಂಪ್ರಭಾವಃ ಸ ಮುನಿರುತ್ತಂಕೋ ಭರತರ್ಷಭ|
14057056c ಪರೇಣ ತಪಸಾ ಯುಕ್ತೋ ಯನ್ಮಾಂ ತ್ವಂ ಪರಿಪೃಚ್ಚಸಿ||
ಭರತರ್ಷಭ! ನೀನು ಕೇಳಿದ ಆ ಪರಮ ತಪಸ್ಸಿನಿಂದ ಯುಕ್ತನಾಗಿದ್ದ ಉತ್ತಂಕನು ಇಷ್ಟು ಪ್ರಭಾವಶಾಲಿಯಾಗಿದ್ದನು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಸಪ್ತಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನ ಎನ್ನುವ ಐವತ್ತೇಳನೇ ಅಧ್ಯಾಯವು.