Ashvamedhika Parva: Chapter 54

ಅಶ್ವಮೇಧಿಕ ಪರ್ವ

೫೪

ಕೃಷ್ಣನು ಉತ್ತಂಕನಿಗೆ ಹಿಂದೆ ಅರ್ಜುನನಿಗೆ ತೋರಿಸಿದ್ದ ತನ್ನ ಶಾಶ್ವತ ವೈಷ್ಣವೀ ರೂಪವನ್ನು ತೋರಿಸಿದುದು, ಉತ್ತಂಕನಿಂದ ಕೃಷ್ಣಸ್ತುತಿ (೧-೮). ಉತ್ತಂಕನಿಗೆ “ಮರುಭೂಮಿಯಲ್ಲಿ ನಿನಗೆ ನೀರು ಬೇಕೆಂದಾಗಲೆಲ್ಲಾ ನನ್ನನ್ನು ಸ್ಮರಿಸು!” ಎಂದು ಹೇಳಿ ಕೃಷ್ಣನು ದ್ವಾರಕೆಗೆ ತೆರಳಿದುದು (೯-೧೩). ಒಮ್ಮೆ ಮಾತಂಗನಿಂದ ನೀರನ್ನು ಸ್ವೀಕರಿಸದೇ ಇದ್ದ ಉತ್ತಂಕನಿಗೆ ಕೃಷ್ಣನು ಮಾಂತಂಗ ವೇಷದಲ್ಲಿದ್ದ ಇಂದ್ರನು ಅವನಿಗೆ ಅಮೃತವನ್ನು ನೀಡಲು ಬಂದಿದ್ದನು ಎಂದು ಹೇಳಿ ಅವನಿಗೆ ಮರುಭೂಮಿಯಲ್ಲಿಯೂ ಮಳೆಸುರಿಸುವ ವರವನ್ನು ನೀಡಿದುದು (೧೪-೩೫).

14054001 ಉತ್ತಂಕ ಉವಾಚ

14054001a ಅಭಿಜಾನಾಮಿ ಜಗತಃ ಕರ್ತಾರಂ ತ್ವಾಂ ಜನಾರ್ದನ|

14054001c ನೂನಂ ಭವತ್ಪ್ರಸಾದೋಽಯಮಿತಿ ಮೇ ನಾಸ್ತಿ ಸಂಶಯಃ||

ಉತ್ತಂಕನು ಹೇಳಿದನು: “ಜನಾರ್ದನ! ನೀನೇ ಈ ಜಗತ್ತಿನ ಕರ್ತಾರನೆಂದು ತಿಳಿದುಕೊಂಡಿದ್ದೇನೆ. ಈ ಆಧ್ಯಾತ್ಮತತ್ತ್ವವು ನಿನ್ನ ಪ್ರಸಾದದಿಂದಲೇ ನನಗೆ ದೊರೆಯಿತು ಎನ್ನುವುದರಲ್ಲಿ ಸಂಶಯವಿಲ್ಲ.

14054002a ಚಿತ್ತಂ ಚ ಸುಪ್ರಸನ್ನಂ ಮೇ ತ್ವದ್ಭಾವಗತಮಚ್ಯುತ|

14054002c ವಿನಿವೃತ್ತಶ್ಚ ಮೇ ಕೋಪ ಇತಿ ವಿದ್ಧಿ ಪರಂತಪ||

ಅಚ್ಯುತ! ನಿನ್ನಮೇಲಿನ ಭಕ್ತಿಯಿಂದ ನನ್ನ ಚಿತ್ತವು ಪ್ರಸನ್ನವಾಗಿದೆ. ಪರಂತಪ! ನನ್ನ ಕೋಪವೂ ಹೊರಟುಹೋಯಿತೆಂದು ತಿಳಿ.

14054003a ಯದಿ ತ್ವನುಗ್ರಹಂ ಕಂ ಚಿತ್ತ್ವತ್ತೋಽರ್ಹೋಽಹಂ ಜನಾರ್ದನ|

14054003c ದ್ರಷ್ಟುಮಿಚ್ಚಾಮಿ ತೇ ರೂಪಮೈಶ್ವರಂ ತನ್ನಿದರ್ಶಯ||

ನಿನ್ನ ಅನುಗ್ರಹಕ್ಕೆ ನಾನು ಸ್ವಲ್ಪವಾದರೂ ಅರ್ಹನಾಗಿದ್ದರೆ ಜನಾರ್ದನ! ನಿನ್ನ ಈಶ್ವರೀ ರೂಪವನ್ನು ನೋಡಲು ಬಯಸುತ್ತೇನೆ. ಅದನ್ನು ತೋರಿಸು!””

14054004 ವೈಶಂಪಾಯನ ಉವಾಚ

14054004a ತತಃ ಸ ತಸ್ಮೈ ಪ್ರೀತಾತ್ಮಾ ದರ್ಶಯಾಮಾಸ ತದ್ವಪುಃ|

14054004c ಶಾಶ್ವತಂ ವೈಷ್ಣವಂ ಧೀಮಾನ್ದದೃಶೇ ಯದ್ಧನಂಜಯಃ||

ವೈಶಂಪಾಯನನು ಹೇಳಿದನು: “ಆಗ ಧೀಮಾನ್ ಕೃಷ್ಣನು ಪ್ರೀತಾತ್ಮನಾಗಿ ಧನಂಜಯನಿಗೆ ತೋರಿಸಿದ್ದ ಶಾಶ್ವತ ವೈಷ್ಣವೀ ರೂಪವನ್ನು ಉತ್ತಂಕನಿಗೂ ತೋರಿಸಿದನು.

14054005a ಸ ದದರ್ಶ ಮಹಾತ್ಮಾನಂ ವಿಶ್ವರೂಪಂ ಮಹಾಭುಜಮ್|

14054005c ವಿಸ್ಮಯಂ ಚ ಯಯೌ ವಿಪ್ರಸ್ತದ್ದೃಷ್ಟ್ವಾ ರೂಪಮೈಶ್ವರಮ್||

ವಿಪ್ರನು ಆ ಮಹಾತ್ಮ ವಿಶ್ವರೂಪ ಮಹಾಭುಜನನ್ನು ನೋಡಿದನು. ಅವನ ಈಶ್ವರೀಯ ರೂಪವನ್ನು ನೋಡಿ ವಿಸ್ಮಿತನಾದನು.

14054006 ಉತ್ತಂಕ ಉವಾಚ

14054006a ವಿಶ್ವಕರ್ಮನ್ನಮಸ್ತೇಽಸ್ತು ಯಸ್ಯ ತೇ ರೂಪಮೀದೃಶಮ್|

14054006c ಪದ್ಭ್ಯಾಂ ತೇ ಪೃಥಿವೀ ವ್ಯಾಪ್ತಾ ಶಿರಸಾ ಚಾವೃತಂ ನಭಃ||

ಉತ್ತಂಕನು ಹೇಳಿದನು: “ವಿಶ್ವಕರ್ಮನ್! ಈ ರೂಪವಿರುವ ನಿನಗೆ ನಮಸ್ಕಾರಗಳು. ನಿನ್ನ ಪಾದಗಳು ಭೂಮಿಯನ್ನು ವ್ಯಾಪಿಸಿವೆ ಮತ್ತು ಶಿರಸ್ಸು ನಭವನ್ನು ಆವರಿಸಿದೆ!

14054007a ದ್ಯಾವಾಪೃಥಿವ್ಯೋರ್ಯನ್ಮಧ್ಯಂ ಜಠರೇಣ ತದಾವೃತಮ್|

14054007c ಭುಜಾಭ್ಯಾಮಾವೃತಾಶ್ಚಾಶಾಸ್ತ್ವಮಿದಂ ಸರ್ವಮಚ್ಯುತ||

ಆಕಾಶ-ಪೃಥ್ವಿಗಳ ನಡುವಿನ ಭಾಗವು ನಿನ್ನ ಜಠರಿಂದಲೇ ವ್ಯಾಪ್ತವಾಗಿದೆ. ಅಚ್ಯುತ! ನಿನ್ನ ಎರಡು ಭುಜಗಳಿಂದ ದಿಕ್ಕುಗಳೆಲ್ಲವೂ ವ್ಯಾಪ್ತವಾಗಿವೆ. ಹೀಗೆ ಎಲ್ಲವನ್ನೂ ನೀನೇ ಆವರಿಸಿರುವೆ!

14054008a ಸಂಹರಸ್ವ ಪುನರ್ದೇವ ರೂಪಮಕ್ಷಯ್ಯಮುತ್ತಮಮ್|

14054008c ಪುನಸ್ತ್ವಾಂ ಸ್ವೇನ ರೂಪೇಣ ದ್ರಷ್ಟುಮಿಚ್ಚಾಮಿ ಶಾಶ್ವತಮ್||

ದೇವ! ನಿನ್ನ ಈ ಅಕ್ಷಯ ಅನುತ್ತಮ ರೂಪವನ್ನು ಪುನಃ ಹಿಂದೆ ತೆಗೆದುಕೋ! ಪುನಃ ನಿನ್ನ ಅದೇ ಶಾಶ್ವತ ರೂಪದಿಂದ ನೋಡಲು ಬಯಸುತ್ತೇನೆ.””

14054009 ವೈಶಂಪಾಯನ ಉವಾಚ

14054009a ತಮುವಾಚ ಪ್ರಸನ್ನಾತ್ಮಾ ಗೋವಿಂದೋ ಜನಮೇಜಯ|

14054009c ವರಂ ವೃಣೀಷ್ವೇತಿ ತದಾ ತಮುತ್ತಂಕೋಽಬ್ರವೀದಿದಮ್||

ವೈಶಂಪಾಯನನು ಹೇಳಿದನು: “ಜನಮೇಜಯ! ಪ್ರಸನ್ನನಾದ ಗೋವಿಂದನು ಅವನಿಗೆ “ವರವನ್ನು ಕೇಳಿಕೋ!” ಎಂದು ಹೇಳಿದನು. ಆಗ ಉತ್ತಂಕನು ಹೇಳಿದನು:

14054010a ಪರ್ಯಾಪ್ತ ಏಷ ಏವಾದ್ಯ ವರಸ್ತ್ವತ್ತೋ ಮಹಾದ್ಯುತೇ|

14054010c ಯತ್ತೇ ರೂಪಮಿದಂ ಕೃಷ್ಣ ಪಶ್ಯಾಮಿ ಪ್ರಭವಾಪ್ಯಯಮ್||

“ಮಹಾದ್ಯುತೇ! ಕೃಷ್ಣ! ನಿನ್ನ ಈ ವಿಶ್ವರೂಪವನ್ನೇನು ನಾನು ಕಾಣುತ್ತಿರುವೆನೋ ಅದೇ ಇಂದು ನೀನು ನನಗೆ ನೀಡಿರುವ ವರ!”

14054011a ತಮಬ್ರವೀತ್ಪುನಃ ಕೃಷ್ಣೋ ಮಾ ತ್ವಮತ್ರ ವಿಚಾರಯ|

14054011c ಅವಶ್ಯಮೇತತ್ಕರ್ತವ್ಯಮಮೋಘಂ ದರ್ಶನಂ ಮಮ||

ಕೃಷ್ಣನು ಪುನಃ ಅವನಿಗೆ “ನನ್ನ ಈ ವಿಶ್ವರೂಪ ದರ್ಶನವು ಅಮೋಘವಾದುದು. ಆದುದರಿಂದ ನೀನು ಅವಶ್ಯವಾಗಿ ವರವನ್ನು ಕೇಳಿಕೋ! ಅದರಲ್ಲಿ ವಿಚಾರಿಸಬೇಡ!” ಎಂದನು.

14054012 ಉತ್ತಂಕ ಉವಾಚ

14054012a ಅವಶ್ಯಕರಣೀಯಂ ವೈ ಯದ್ಯೇತನ್ಮನ್ಯಸೇ ವಿಭೋ|

14054012c ತೋಯಮಿಚ್ಚಾಮಿ ಯತ್ರೇಷ್ಟಂ ಮರುಷ್ವೇತದ್ಧಿ ದುರ್ಲಭಮ್||

ಉತ್ತಂಕನು ಹೇಳಿದನು: “ವಿಭೋ! ನಾನು ಅವಶ್ಯವಾದುದನ್ನು ಮಾಡಲೇಬೇಕೆಂದು ನಿನ್ನ ಅಭಿಪ್ರಾಯವಾದರೆ ಇಷ್ಟವಾದಲ್ಲಿ ನೀರು ದೊರಕುವಂತೆ ಬಯಸುತ್ತೇನೆ. ಈ ಮರುಭೂಮಿಯಲ್ಲಿ ನೀರು ದುರ್ಲಭವಾಗಿದೆ.””

14054013 ವೈಶಂಪಾಯನ ಉವಾಚ

14054013a ತತಃ ಸಂಹೃತ್ಯ ತತ್ತೇಜಃ ಪ್ರೋವಾಚೋತ್ತಂಕಮೀಶ್ವರಃ|

14054013c ಏಷ್ಟವ್ಯೇ ಸತಿ ಚಿಂತ್ಯೋಽಹಮಿತ್ಯುಕ್ತ್ವಾ ದ್ವಾರಕಾಂ ಯಯೌ||

ವೈಶಂಪಾಯನನು ಹೇಳಿದನು: “ಅನಂತರ ಈಶ್ವರ ಕೃಷ್ಣನು ತನ್ನ ತೇಜಸ್ಸನ್ನು ಹಿಂದೆತೆಗೆದುಕೊಂಡು “ನಿನಗೆ ನೀರು ಬೇಕಾದಾಗಲೆಲ್ಲಾ ನನ್ನನ್ನು ಸ್ಮರಿಸು!” ಎಂದು ಹೇಳಿ ದ್ವಾರಕೆಗೆ ತೆರಳಿದನು.

14054014a ತತಃ ಕದಾ ಚಿದ್ಭಗವಾನುತ್ತಂಕಸ್ತೋಯಕಾಂಕ್ಷಯಾ|

14054014c ತೃಷಿತಃ ಪರಿಚಕ್ರಾಮ ಮರೌ ಸಸ್ಮಾರ ಚಾಚ್ಯುತಮ್||

ಬಳಿಕ ಒಮ್ಮೆ ಭಗವಾನ್ ಉತ್ತಂಕನು ಅತ್ಯಂತ ಬಾಯಾರಿದವನಾಗಿ ಮರುಭೂಮಿಯಲ್ಲಿ ನೀರನ್ನು ಬಯಸಿ ಅಚ್ಯುತನನ್ನು ಸ್ಮರಿಸುತ್ತಾ ನೀರಿಗಾಗಿ ಹುಡುಕಾಡಿದನು.

14054015a ತತೋ ದಿಗ್ವಾಸಸಂ ಧೀಮಾನ್ಮಾತಂಗಂ ಮಲಪಂಕಿನಮ್|

14054015c ಅಪಶ್ಯತ ಮರೌ ತಸ್ಮಿನ್ಶ್ವಯೂಥಪರಿವಾರಿತಮ್||

ಆಗ ಮರುಭೂಮಿಯಲ್ಲಿ ಅವನು ದಿಗಂಬರನೂ ಕೊಳಕಿನಿಂದ ಕೂಡಿದವನೂ ನಾಯಿಗಳಿಂದ ಪರಿವೃತನೂ ಆಗಿದ್ದ ಮಾತಂಗನೊಬ್ಬನನ್ನು ಕಂಡನು.

14054016a ಭೀಷಣಂ ಬದ್ಧನಿಸ್ತ್ರಿಂಶಂ ಬಾಣಕಾರ್ಮುಕಧಾರಿಣಮ್|

14054016c ತಸ್ಯಾಧಃ ಸ್ರೋತಸೋಽಪಶ್ಯದ್ವಾರಿ ಭೂರಿ ದ್ವಿಜೋತ್ತಮಃ||

ಖಡ್ಗವನ್ನು ಬಿಗಿದು, ಬಾಣ-ಬಿಲ್ಲುಗಳನ್ನು ಹಿಡಿದು ಭೀಷಣನಾಗಿದ್ದ ಅವನ ಬಳಿ ನೀರುತುಂಬಿ ಸುರಿಯುತ್ತಿರುವುದನ್ನು ಆ ದ್ವಿಜೋತ್ತಮನು ಕಂಡನು.

14054017a ಸ್ಮರನ್ನೇವ ಚ ತಂ ಪ್ರಾಹ ಮಾತಂಗಃ ಪ್ರಹಸನ್ನಿವ|

14054017c ಏಹ್ಯುತ್ತಂಕ ಪ್ರತೀಚ್ಚಸ್ವ ಮತ್ತೋ ವಾರಿ ಭೃಗೂದ್ವಹ|

14054017e ಕೃಪಾ ಹಿ ಮೇ ಸುಮಹತೀ ತ್ವಾಂ ದೃಷ್ಟ್ವಾ ತೃಟ್ಸಮಾಹತಮ್||

ಕೃಷ್ಣನನ್ನು ಸ್ಮರಿಸುತ್ತಿದ್ದಂತೆಯೇ ಆ ಮಾತಂಗನು ನಗುತ್ತಿರುವನೋ ಎನ್ನುವಂತೆ ಉತ್ತಂಕನಿಗೆ ಹೇಳಿದನು: “ಭೃಗೂದ್ವಹ! ಉತ್ತಂಕ! ಇತ್ತ ಬಾ! ನನ್ನ ಈ ನೀರನ್ನು ತೆಗೆದುಕೋ! ಬಾಯಾರಿಕೆಯಿಂದ ಬಳಲಿರುವ ನಿನ್ನನ್ನು ನೋಡಿ ನನಗೆ ಅತ್ಯಂತ ಕನಿಕರವುಂಟಾಗಿದೆ!”

14054018a ಇತ್ಯುಕ್ತಸ್ತೇನ ಸ ಮುನಿಸ್ತತ್ತೋಯಂ ನಾಭ್ಯನಂದತ|

14054018c ಚಿಕ್ಷೇಪ ಚ ಸ ತಂ ಧೀಮಾನ್ವಾಗ್ಭಿರುಗ್ರಾಭಿರಚ್ಯುತಮ್||

ಅವನು ಹೀಗೆ ಹೇಳಲು ಮುನಿಯು ಆ ನೀರನ್ನು ಸ್ವೀಕರಿಸಲಿಲ್ಲ. ಆ ಧೀಮಾನನು ಅಚ್ಯುತನ ಮಾತುಗಳನ್ನು ಉಗ್ರವಾಗಿ ನಿಂದಿಸಿದನು.

14054019a ಪುನಃ ಪುನಶ್ಚ ಮಾತಂಗಃ ಪಿಬಸ್ವೇತಿ ತಮಬ್ರವೀತ್|

14054019c ನ ಚಾಪಿಬತ್ಸ ಸಕ್ರೋಧಃ ಕ್ಷುಭಿತೇನಾಂತರಾತ್ಮನಾ||

ಮಾತಂಗನು ಅವನಿಗೆ ಪುನಃ ಪುನಃ ನೀರನ್ನು ಕುಡಿ ಎಂದು ಹೇಳಿದನು. ಆದರೆ ಅವನು ಕ್ರೋಧದಿಂದಾಗಿ ಮತ್ತು ತನ್ನೊಳಗೇ ಕ್ಷೋಭೆಗೊಂಡವನಾಗಿ ನೀರನ್ನು ಕುಡಿಯಲಿಲ್ಲ.

14054020a ಸ ತಥಾ ನಿಶ್ಚಯಾತ್ತೇನ ಪ್ರತ್ಯಾಖ್ಯಾತೋ ಮಹಾತ್ಮನಾ|

14054020c ಶ್ವಭಿಃ ಸಹ ಮಹಾರಾಜ ತತ್ರೈವಾಂತರಧೀಯತ||

ಮಹಾರಾಜ! ಆ ಮಹಾತ್ಮನು ತನ್ನ ನಿಶ್ಚಯವನ್ನು ತಿಳಿಸಿದ ನಂತರ ನಾಯಿಗಳೊಂದಿಗೆ ಆ ಮಾತಂಗನು ಅಲ್ಲಿಯೇ ಅಂತರ್ಧಾನನಾದನು.

14054021a ಉತ್ತಂಕಸ್ತಂ ತಥಾ ದೃಷ್ಟ್ವಾ ತತೋ ವ್ರೀಡಿತಮಾನಸಃ|

14054021c ಮೇನೇ ಪ್ರಲಬ್ಧಮಾತ್ಮಾನಂ ಕೃಷ್ಣೇನಾಮಿತ್ರಘಾತಿನಾ||

ಅವನು ಹಾಗೆ ಅಂತರ್ಧಾನನಾದುದನ್ನು ನೋಡಿ ಉತ್ತಂಕನು ಅಮಿತ್ರಘಾತಿ ಕೃಷ್ಣನಿಂದ ತಾನು ಮೋಸಹೋದೆನೆಂದು ನಾಚಿಕೊಂಡನು.

14054022a ಅಥ ತೇನೈವ ಮಾರ್ಗೇಣ ಶಂಖಚಕ್ರಗದಾಧರಃ|

14054022c ಆಜಗಾಮ ಮಹಾಬಾಹುರುತ್ತಂಕಶ್ಚೈನಮಬ್ರವೀತ್||

ಆಗ ಅದೇ ಮಾರ್ಗದಿಂದ ಶಂಕಚಕ್ರಗದಾಧರನು ಬಂದನು. ಮಹಾಬಾಹು ಉತ್ತಂಕನು ಅವನಿಗೆ ಹೀಗೆ ಹೇಳಿದನು:

14054023a ನ ಯುಕ್ತಂ ತಾದೃಶಂ ದಾತುಂ ತ್ವಯಾ ಪುರುಷಸತ್ತಮ|

14054023c ಸಲಿಲಂ ವಿಪ್ರಮುಖ್ಯೇಭ್ಯೋ ಮಾತಂಗಸ್ರೋತಸಾ ವಿಭೋ||

“ಪುರುಷಸತ್ತಮ! ವಿಭೋ! ಹಾಗೆ ವಿಪ್ರಮುಖ್ಯನಿಗೆ ಮಾತಂಗನ ಮೂಲಕ ನೀರನ್ನು ಕೊಡುವಂತೆ ಮಾಡಿದುದು ನಿನಗೆ ಯುಕ್ತವಲ್ಲ!”

14054024a ಇತ್ಯುಕ್ತವಚನಂ ಧೀಮಾನ್ಮಹಾಬುದ್ಧಿರ್ಜನಾರ್ದನಃ|

14054024c ಉತ್ತಂಕಂ ಶ್ಲಕ್ಷ್ಣಯಾ ವಾಚಾ ಸಾಂತ್ವಯನ್ನಿದಮಬ್ರವೀತ್||

ಇದನ್ನು ಕೇಳಿದ ಧೀಮಾನ್ ಮಹಾಬುದ್ಧಿವಂತ ಜನಾರ್ದನನು ಉತ್ತಂಕನನ್ನು ಸಂತವಿಸುತ್ತಾ ಮಧುರವಾದ ಈ ಮಾತನ್ನಾಡಿದನು:

14054025a ಯಾದೃಶೇನೇಹ ರೂಪೇಣ ಯೋಗ್ಯಂ ದಾತುಂ ವೃತೇನ ವೈ|

14054025c ತಾದೃಶಂ ಖಲು ಮೇ ದತ್ತಂ ತ್ವಂ ತು ತನ್ನಾವಬುಧ್ಯಸೇ||

“ನಿನಗೆ ಯಾವರೂಪದಲ್ಲಿ ನೀರನ್ನು ಕೊಡುವುದು ಉಚಿತವಾಗಿತ್ತೋ ಅದೇ ರೂಪವನ್ನು ಧರಿಸಿ ಅವನು ನಿನಗೆ ನೀರನ್ನು ಕುಡಿಯಲು ಕೊಟ್ಟಿರುವನು. ಆದರೆ ನೀನು ಆ ರಹಸ್ಯವನ್ನು ತಿಳಿದುಕೊಳ್ಳಲಿಲ್ಲ.

14054026a ಮಯಾ ತ್ವದರ್ಥಮುಕ್ತೋ ಹಿ ವಜ್ರಪಾಣಿಃ ಪುರಂದರಃ|

14054026c ಉತ್ತಂಕಾಯಾಮೃತಂ ದೇಹಿ ತೋಯರೂಪಮಿತಿ ಪ್ರಭುಃ||

ನಿನಗೋಸ್ಕರವಾಗಿ ನಾನು ವಜ್ರಪಾಣಿ ಪ್ರಭು ಪುರಂದರನಲ್ಲಿ ಉತ್ತಂಕನಿಗೆ ನೀರಿನ ರೂಪದಲ್ಲಿ ಅಮೃತವನ್ನು ಕೊಡು ಎಂದು ಹೇಳಿದ್ದೆನು.

14054027a ಸ ಮಾಮುವಾಚ ದೇವೇಂದ್ರೋ ನ ಮರ್ತ್ಯೋಽಮರ್ತ್ಯತಾಂ ವ್ರಜೇತ್|

14054027c ಅನ್ಯಮಸ್ಮೈ ವರಂ ದೇಹೀತ್ಯಸಕೃದ್ಭೃಗುನಂದನ||

ಭೃಗುನಂದನ! ಆಗ ದೇವೇಂದ್ರನು “ಮನುಷ್ಯರಿಗೆ ಅಮರ್ತ್ಯರಾಗುವಂಥಹ ಅಮೃತವನ್ನು ಕೊಡಬಾರದು. ಅವನಿಗೆ ಬೇರೆ ಏನಾದರೂ ವರವನ್ನು ಕೊಡು!” ಎಂದು ನನಗೆ ಹೇಳಿದ್ದನು.

14054028a ಅಮೃತಂ ದೇಯಮಿತ್ಯೇವ ಮಯೋಕ್ತಃ ಸ ಶಚೀಪತಿಃ|

14054028c ಸ ಮಾಂ ಪ್ರಸಾದ್ಯ ದೇವೇಂದ್ರಃ ಪುನರೇವೇದಮಬ್ರವೀತ್||

“ಅಮೃತವನ್ನೇ ಕೊಡಬೇಕು!” ಎಂದು ನಾನು ಹೇಳಲು ಶಚೀಪತಿ ದೇವೇಂದ್ರನು ನನ್ನನ್ನು ಪ್ರಸನ್ನಗೊಳಿಸಲು ಪುನಃ ಇದನ್ನು ಹೇಳಿದನು:

14054029a ಯದಿ ದೇಯಮವಶ್ಯಂ ವೈ ಮಾತಂಗೋಽಹಂ ಮಹಾದ್ಯುತೇ|

14054029c ಭೂತ್ವಾಮೃತಂ ಪ್ರದಾಸ್ಯಾಮಿ ಭಾರ್ಗವಾಯ ಮಹಾತ್ಮನೇ||

“ಮಹಾದ್ಯುತೇ! ಒಂದುವೇಳೆ ಅವನಿಗೆ ಅಮೃತವನ್ನೇ ಅವಶ್ಯವಾಗಿ ಕೊಡಬೇಕಾದರೆ ನಾನು ಮಾತಂಗನಾಗಿ ಮಹಾತ್ಮ ಭಾರ್ಗವನಿಗೆ ಕೊಡುತ್ತೇನೆ.

14054030a ಯದ್ಯೇವಂ ಪ್ರತಿಗೃಹ್ಣಾತಿ ಭಾರ್ಗವೋಽಮೃತಮದ್ಯ ವೈ|

14054030c ಪ್ರದಾತುಮೇಷ ಗಚ್ಚಾಮಿ ಭಾರ್ಗವಾಯಾಮೃತಂ ಪ್ರಭೋ|

14054030e ಪ್ರತ್ಯಾಖ್ಯಾತಸ್ತ್ವಹಂ ತೇನ ನ ದದ್ಯಾಮಿತಿ ಭಾರ್ಗವ||

ಪ್ರಭೋ! ಒಂದು ವೇಳೆ ಆ ಭಾರ್ಗವನು ಇಂದು ನನ್ನಿಂದ ಹೀಗೆ ಅಮೃತವನ್ನು ಸ್ವೀಕರಿಸುತ್ತಾನಾದರೆ ಭಾರ್ಗವನಿಗೆ ಅಮೃತವನ್ನು ನೀಡಲು ಹೋಗುತ್ತೇನೆ. ಭಾರ್ಗವನು ಅದನ್ನು ತಿರಸ್ಕರಿಸಿದರೆ ನಾನು ಅವನಿಗೆ ಅದನ್ನು ಕೊಡುವುದಿಲ್ಲ!”

14054031a ಸ ತಥಾ ಸಮಯಂ ಕೃತ್ವಾ ತೇನ ರೂಪೇಣ ವಾಸವಃ|

14054031c ಉಪಸ್ಥಿತಸ್ತ್ವಯಾ ಚಾಪಿ ಪ್ರತ್ಯಾಖ್ಯಾತೋಽಮೃತಂ ದದತ್|

14054031e ಚಂಡಾಲರೂಪೀ ಭಗವಾನ್ಸುಮಹಾಂಸ್ತೇ ವ್ಯತಿಕ್ರಮಃ||

ಹೀಗೆ ನನ್ನೊಡನೆ ಒಪ್ಪಂದವನ್ನು ಮಾಡಿಕೊಂಡು ವಾಸವನು ಆ ರೂಪದಿಂದ ನಿನಗೆ ಅಮೃತವನ್ನು ಕೊಡಲು ಬಂದಾಗ ನೀನು ಅದನ್ನು ತಿರಸ್ಕರಿಸಿದೆ. ಚಂಡಾಲರೂಪದಲ್ಲಿದ್ದ ಭಗವಂತನಿಗೆ ನೀನು ಮಹಾ ಅಪರಾಧವನ್ನೆಸಗಿರುವೆ!

14054032a ಯತ್ತು ಶಕ್ಯಂ ಮಯಾ ಕರ್ತುಂ ಭೂಯ ಏವ ತವೇಪ್ಸಿತಮ್|

14054032c ತೋಯೇಪ್ಸಾಂ ತವ ದುರ್ಧರ್ಷ ಕರಿಷ್ಯೇ ಸಫಲಾಮಹಮ್||

ಆದರೂ ನಿನ್ನ ಬಯಕೆಯಂತೆ ನನ್ನಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ. ದುರ್ಧರ್ಷ! ನಿನ್ನ ಈ ನೀರಿನ ಬಯಕೆಯನ್ನು ಸಫಲಗೊಳಿಸುತ್ತೇನೆ.

14054033a ಯೇಷ್ವಹಃಸು ತವ ಬ್ರಹ್ಮನ್ಸಲಿಲೇಚ್ಚಾ ಭವಿಷ್ಯತಿ|

14054033c ತದಾ ಮರೌ ಭವಿಷ್ಯಂತಿ ಜಲಪೂರ್ಣಾಃ ಪಯೋಧರಾಃ||

ಬ್ರಹ್ಮನ್! ನಿನಗೆ ಯಾವಾಗಲೆಲ್ಲ ನೀರಿನ ಬಯಕೆಯಾಗುತ್ತದೆಯೋ ಆಗ ಈ ಮರುಭೂಮಿಯಲ್ಲಿ ಮಳೆತುಂಬಿದ ಮೋಡಗಳು ಕವಿಯುತ್ತವೆ.

14054034a ರಸವಚ್ಚ ಪ್ರದಾಸ್ಯಂತಿ ತೇ ತೋಯಂ ಭೃಗುನಂದನ|

14054034c ಉತ್ತಂಕಮೇಘಾ ಇತ್ಯುಕ್ತಾಃ ಖ್ಯಾತಿಂ ಯಾಸ್ಯಂತಿ ಚಾಪಿ ತೇ||

ಭೃಗುನಂದನ! ಅವು ರಸವತ್ತಾದ ಮಳೆಯನ್ನು ಸುರಿಸುತ್ತವೆ. ಆ ಮೋಡಗಳು ಉತ್ತಂಕಮೇಘಗಳೆಂದೇ ಖ್ಯಾತಿಹೊಂದುತ್ತವೆ!”

14054035a ಇತ್ಯುಕ್ತಃ ಪ್ರೀತಿಮಾನ್ವಿಪ್ರಃ ಕೃಷ್ಣೇನ ಸ ಬಭೂವ ಹ|

14054035c ಅದ್ಯಾಪ್ಯುತ್ತಂಕಮೇಘಾಶ್ಚ ಮರೌ ವರ್ಷಂತಿ ಭಾರತ||

ಭಾರತ! ಕೃಷ್ಣನು ಹೀಗೆ ಹೇಳಲು ವಿಪ್ರನು ಸಂತೋಷಗೊಂಡನು. ಇಂದೂ ಕೂಡ ಮರುಭೂಮಿಯಲ್ಲಿ ಆ ಉತ್ತಂಕಮೇಘಗಳು ಮಳೆಗರೆಯುತ್ತವೆ.” 

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಚತುಷ್ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನ ಎನ್ನುವ ಐವತ್ನಾಲ್ಕನೇ ಅಧ್ಯಾಯವು.

Comments are closed.