Ashvamedhika Parva: Chapter 53

ಅಶ್ವಮೇಧಿಕ ಪರ್ವ

೫೩

ಕೃಷ್ಣನು ಉತ್ತಂಕನಿಗೆ ಆಧ್ಯಾತ್ಮತತ್ತ್ವಗಳನ್ನು ಭೋದಿಸುತ್ತಾ “ಮನುಷ್ಯ ಯೋನಿಯಲ್ಲಿ ಅವತರಿಸಿರುವ ನಾನು ಮನುಷ್ಯನಂತೆಯೇ ನಡೆದುಕೊಂಡು ದೀನನಾಗಿ ಪಾಂಡವರೊಡನೆ ಸಂಧಿಮಾಡಿಕೊಳ್ಳುವಂತೆ ಕೌರವರನ್ನು ಪ್ರಾರ್ಥಿಸಿದೆನು. ಆದರೆ ಮೋಹಗ್ರಸ್ತರಾಗಿದ್ದ ಅವರು ನನ್ನ ಹಿತವಚನಗಳನ್ನು ಸ್ವೀಕರಿಸಲಿಲ್ಲ” ಎಂದು ಹೇಳಿದುದು (೧-೨೨).

14053001 ಉತ್ತಂಕ ಉವಾಚ

14053001a ಬ್ರೂಹಿ ಕೇಶವ ತತ್ತ್ವೇನ ತ್ವಮಧ್ಯಾತ್ಮಮನಿಂದಿತಮ್|

14053001c ಶ್ರುತ್ವಾ ಶ್ರೇಯೋಽಭಿಧಾಸ್ಯಾಮಿ ಶಾಪಂ ವಾ ತೇ ಜನಾರ್ದನ||

ಉತ್ತಂಕನು ಹೇಳಿದನು: “ಕೇಶವ! ಜನಾರ್ದನ! ಅನಿಂದಿತ ಆಧ್ಯಾತ್ಮತತ್ತ್ವವನ್ನು ಹೇಳು. ಅದನ್ನು ಕೇಳಿ ನಿನ್ನ ಶ್ರೇಯಸ್ಸಿಗೆ ಆಶೀರ್ವಾದವನ್ನಾದರೂ ಮಾಡುತ್ತೇನೆ ಅಥವಾ ಶಾಪವನ್ನಾದರೂ ಕೊಡುತ್ತೇನೆ.”

14053002 ವಾಸುದೇವ ಉವಾಚ

14053002a ತಮೋ ರಜಶ್ಚ ಸತ್ತ್ವಂ ಚ ವಿದ್ಧಿ ಭಾವಾನ್ಮದಾಶ್ರಯಾನ್|

14053002c ತಥಾ ರುದ್ರಾನ್ವಸೂಂಶ್ಚಾಪಿ ವಿದ್ಧಿ ಮತ್ಪ್ರಭವಾನ್ದ್ವಿಜ||

ವಾಸುದೇವನು ಹೇಳಿದನು: “ದ್ವಿಜ! ತಮ, ರಜ ಮತ್ತು ಸತ್ತ್ವಗುಣಗಳು ನನ್ನನ್ನೇ ಆಶ್ರಯಿಸಿದ ನನ್ನ ಭಾವಗಳು. ಹಾಗೆಯೇ ರುದ್ರರು ಮತ್ತು ವಸುಗಳೂ ನನ್ನಿಂದಲೇ ಆವಿರ್ಭವಿಸಿದರು ಎನ್ನುವುದನ್ನು ತಿಳಿ.

14053003a ಮಯಿ ಸರ್ವಾಣಿ ಭೂತಾನಿ ಸರ್ವಭೂತೇಷು ಚಾಪ್ಯಹಮ್|

14053003c ಸ್ಥಿತ ಇತ್ಯಭಿಜಾನೀಹಿ ಮಾ ತೇಽಭೂದತ್ರ ಸಂಶಯಃ||

ನನ್ನಲ್ಲಿ ಸರ್ವ ಭೂತಗಳೂ ಮತ್ತು ಸರ್ವಭೂತಗಳಲ್ಲಿ ನಾನೂ ನೆಲೆಗೊಂಡಿದ್ದೇವೆ ಎನ್ನುವುದನ್ನು ತಿಳಿ. ಅದರಲ್ಲಿ ಸಂಶಯ ಬೇಡ.

14053004a ತಥಾ ದೈತ್ಯಗಣಾನ್ಸರ್ವಾನ್ಯಕ್ಷರಾಕ್ಷಸಪನ್ನಗಾನ್|

14053004c ಗಂಧರ್ವಾಪ್ಸರಸಶ್ಚೈವ ವಿದ್ಧಿ ಮತ್ಪ್ರಭವಾನ್ದ್ವಿಜ||

ದ್ವಿಜ! ಹಾಗೆಯೇ ಸರ್ವ ದೈತ್ಯಗಣಗಳೂ, ಯಕ್ಷ-ರಾಕ್ಷಸ-ಪನ್ನಗ ಗಣಗಳೂ, ಗಂಧರ್ವ-ಅಪ್ಸರೆಯರೂ ನನ್ನಿಂದಲೇ ಹುಟ್ಟಿದವೆಂದು ತಿಳಿ.

14053005a ಸದಸಚ್ಚೈವ ಯತ್ಪ್ರಾಹುರವ್ಯಕ್ತಂ ವ್ಯಕ್ತಮೇವ ಚ|

14053005c ಅಕ್ಷರಂ ಚ ಕ್ಷರಂ ಚೈವ ಸರ್ವಮೇತನ್ಮದಾತ್ಮಕಮ್||

ಸತ್-ಅಸತ್, ಅವ್ಯಕ್ತ-ವ್ಯಕ್ತ ಮತ್ತು ಅಕ್ಷರ-ಕ್ಷರ ಎಂದು ಯಾವುದನ್ನು ಕರೆಯುವರೋ ಅವೆಲ್ಲವೂ ನನ್ನದೇ ಸ್ವರೂಪಗಳು.

14053006a ಯೇ ಚಾಶ್ರಮೇಷು ವೈ ಧರ್ಮಾಶ್ಚತುರ್ಷು ವಿಹಿತಾ ಮುನೇ|

14053006c ದೈವಾನಿ ಚೈವ ಕರ್ಮಾಣಿ ವಿದ್ಧಿ ಸರ್ವಂ ಮದಾತ್ಮಕಮ್||

ನಾಲ್ಕು ಆಶ್ರಮಗಳ ಧರ್ಮಗಳೂ ದೈವಕರ್ಮಗಳೂ ಎಲ್ಲವೂ ನನ್ನ ಸ್ವರೂಪವೇ ಎನ್ನುವುದನ್ನು ತಿಳಿದುಕೋ.

14053007a ಅಸಚ್ಚ ಸದಸಚ್ಚೈವ ಯದ್ವಿಶ್ವಂ ಸದಸತಃ ಪರಮ್|

14053007c ತತಃ ಪರಂ ನಾಸ್ತಿ ಚೈವ ದೇವದೇವಾತ್ಸನಾತನಾತ್||

ಅವ್ಯಕ್ತ ಮತ್ತು ವ್ಯಕ್ತಾವ್ಯಕ್ತ, ಇವುಗಳ ಆಚೆಯಿರುವ ವಿಶ್ವವೂ ದೇವದೇವನಾದ ಸನಾತನನಾದ ನನ್ನ ಹೊರತಿಲ್ಲ.

14053008a ಓಂಕಾರಪ್ರಭವಾನ್ವೇದಾನ್ವಿದ್ಧಿ ಮಾಂ ತ್ವಂ ಭೃಗೂದ್ವಹ|

14053008c ಯೂಪಂ ಸೋಮಂ ತಥೈವೇಹ ತ್ರಿದಶಾಪ್ಯಾಯನಂ ಮಖೇ||

14053009a ಹೋತಾರಮಪಿ ಹವ್ಯಂ ಚ ವಿದ್ಧಿ ಮಾಂ ಭೃಗುನಂದನ|

14053009c ಅಧ್ವರ್ಯುಃ ಕಲ್ಪಕಶ್ಚಾಪಿ ಹವಿಃ ಪರಮಸಂಸ್ಕೃತಮ್||

ಭೃಗೂದ್ವಹ! ಭೃಗುನಂದನ! ಓಂಕಾರದಿಂದ ಪ್ರಾರಂಭವಾಗುವ ವೇದಗಳೂ ನಾನೆಂದು ತಿಳಿ. ಯಜ್ಞದಲ್ಲಿಯ ಯೂಪ, ಸೋಮ, ಮತ್ತು ಹಾಗೆಯೇ ದೇವತೆಗಳಿಗೆ ತೃಪ್ತಿಯನ್ನುಂಟು ಮಾಡುವ ಹೋತಾರ, ಹವ್ಯ, ಅಧ್ವರ್ಯು, ಕಲ್ಪಕ, ಮತ್ತು ಪರಮಸಂಸ್ಕೃತ ಹವಿಸ್ಸು ಎಲ್ಲವೂ ನನ್ನ ಸ್ವರೂಪಗಳೇ ಆಗಿವೆ ಎನ್ನುವುದನ್ನು ತಿಳಿದುಕೋ.

14053010a ಉದ್ಗಾತಾ ಚಾಪಿ ಮಾಂ ಸ್ತೌತಿ ಗೀತಘೋಷೈರ್ಮಹಾಧ್ವರೇ|

14053010c ಪ್ರಾಯಶ್ಚಿತ್ತೇಷು ಮಾಂ ಬ್ರಹ್ಮನ್ಶಾಂತಿಮಂಗಲವಾಚಕಾಃ|

14053010e ಸ್ತುವಂತಿ ವಿಶ್ವಕರ್ಮಾಣಂ ಸತತಂ ದ್ವಿಜಸತ್ತಮಾಃ||

ಮಹಾಧ್ವರಗಳಲ್ಲಿ ಉದ್ಗಾತರು ಗೀತಘೋಷಗಳಿಂದ ನನ್ನನ್ನೇ ಸ್ತುತಿಸುತ್ತಾರೆ. ಬ್ರಹ್ಮನ್! ಪ್ರಾಯಶ್ಚಿತ್ತ ಕರ್ಮಗಳಲ್ಲಿ ಶಾಂತಿಮಂಗಲವಾಚಕ ದ್ವಿಜಸತ್ತಮರು ಸತತವಾಗಿ ವಿಶ್ವಕರ್ಮನಾದ ನನ್ನನ್ನೇ ಸ್ತುತಿಸುತ್ತಾರೆ.

14053011a ವಿದ್ಧಿ ಮಹ್ಯಂ ಸುತಂ ಧರ್ಮಮಗ್ರಜಂ ದ್ವಿಜಸತ್ತಮ|

14053011c ಮಾನಸಂ ದಯಿತಂ ವಿಪ್ರ ಸರ್ವಭೂತದಯಾತ್ಮಕಮ್||

ದ್ವಿಜಸತ್ತಮ! ವಿಪ್ರ! ಸರ್ವಭೂತದಯಾತ್ಮಕನಾದ ಧರ್ಮನು ನನ್ನ ಪ್ರೀತಿಯ ಹಿರಿಯ ಮಾನಸಪುತ್ರನೆಂದು ತಿಳಿ.

14053012a ತತ್ರಾಹಂ ವರ್ತಮಾನೈಶ್ಚ ನಿವೃತ್ತೈಶ್ಚೈವ ಮಾನವೈಃ|

14053012c ಬಹ್ವೀಃ ಸಂಸರಮಾಣೋ ವೈ ಯೋನೀರ್ಹಿ ದ್ವಿಜಸತ್ತಮ||

14053013a ಧರ್ಮಸಂರಕ್ಷಣಾರ್ಥಾಯ ಧರ್ಮಸಂಸ್ಥಾಪನಾಯ ಚ|

14053013c ತೈಸ್ತೈರ್ವೇಷೈಶ್ಚ ರೂಪೈಶ್ಚ ತ್ರಿಷು ಲೋಕೇಷು ಭಾರ್ಗವ||

ದ್ವಿಜಸತ್ತಮ! ಭಾರ್ಗವ! ನಿವೃತ್ತಧರ್ಮದಲ್ಲಿ ನಡೆದುಕೊಳ್ಳುವ ಮನುಷ್ಯರೊಂದಿಗೆ ನಾನಿರುತ್ತೇನೆ. ಧರ್ಮಸಂರಕ್ಷಣೆಗೋಸ್ಕರ ಮತ್ತು ಧರ್ಮಸಂಸ್ಥಾಪನೆಗೋಸ್ಕರ ನಾನು ಮೂರು ಲೋಕಗಳಲ್ಲಿಯೂ ಬಹುವಿಧದ ಯೋನಿಗಳಲ್ಲಿ ಅವತರಿಸಿ, ಆಯಾ ಯೋನಿಗಳಿಗೆ ಅನುರೂಪವಾದ ರೂಪ-ವೇಷ-ವ್ಯವಹಾರಗಳಿಂದ ಕೂಡಿರುತ್ತೇನೆ.

14053014a ಅಹಂ ವಿಷ್ಣುರಹಂ ಬ್ರಹ್ಮಾ ಶಕ್ರೋಽಥ ಪ್ರಭವಾಪ್ಯಯಃ|

14053014c ಭೂತಗ್ರಾಮಸ್ಯ ಸರ್ವಸ್ಯ ಸ್ರಷ್ಟಾ ಸಂಹಾರ ಏವ ಚ||

ನಾನು ವಿಷ್ಣು. ನಾನು ಬ್ರಹ್ಮ. ಇಂದ್ರನೂ ನನ್ನಿಂದಲೇ ಹುಟ್ಟಿದ್ದಾನೆ. ಸಕಲ ಭೂತಗ್ರಾಮಗಳ ಉತ್ಪತ್ತಿ-ವಿನಾಶಗಳಿಗೆ ನಾನೇ ಕಾರಣನಾಗಿದ್ದೇನೆ.

14053015a ಅಧರ್ಮೇ ವರ್ತಮಾನಾನಾಂ ಸರ್ವೇಷಾಮಹಮಪ್ಯುತ|

14053015c ಧರ್ಮಸ್ಯ ಸೇತುಂ ಬಧ್ನಾಮಿ ಚಲಿತೇ ಚಲಿತೇ ಯುಗೇ|

14053015e ತಾಸ್ತಾ ಯೋನೀಃ ಪ್ರವಿಶ್ಯಾಹಂ ಪ್ರಜಾನಾಂ ಹಿತಕಾಮ್ಯಯಾ||

ಅಧರ್ಮದಲ್ಲಿ ನಡೆದುಕೊಳ್ಳುವ ಎಲ್ಲರನ್ನೂ ನಾನೇ ಶಿಕ್ಷಿಸುತ್ತೇನೆ. ಪ್ರಜೆಗಳ ಹಿತವನ್ನೇ ಬಯಸಿ ಒಂದಾದ ಮೇಲೊಂದು ಬರುತ್ತಿರುವ ಯುಗಗಳಲ್ಲಿ ನಾನು ಆಯಾ ಯೋನಿಗಳನ್ನು ಪ್ರವೇಶಿಸಿ ಧರ್ಮದ ಸೇತುವೆಗಳನ್ನು ಕಟ್ಟುತ್ತೇನೆ.

14053016a ಯದಾ ತ್ವಹಂ ದೇವಯೋನೌ ವರ್ತಾಮಿ ಭೃಗುನಂದನ|

14053016c ತದಾಹಂ ದೇವವತ್ಸರ್ವಮಾಚರಾಮಿ ನ ಸಂಶಯಃ||

ಭೃಗುನಂದನ! ನಾನು ದೇವಯೋನಿಯಲ್ಲಿ ಅವತರಿಸಿದಾಗ ಎಲ್ಲದರಲ್ಲಿಯೂ ದೇವತೆಯಂತೆಯೇ ವರ್ತಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

14053017a ಯದಾ ಗಂಧರ್ವಯೋನೌ ತು ವರ್ತಾಮಿ ಭೃಗುನಂದನ|

14053017c ತದಾ ಗಂಧರ್ವವಚ್ಚೇಷ್ಟಾಃ ಸರ್ವಾಶ್ಚೇಷ್ಟಾಮಿ ಭಾರ್ಗವ||

ಭೃಗುನಂದನ! ಭಾರ್ಗವ! ಗಂಧರ್ವಯೋನಿಯಲ್ಲಿ ಜನಿಸಿದಾಗ ನಾನು ಎಲ್ಲದರಲ್ಲಿಯೂ ಗಂಧರ್ವನಂತೆಯೇ ವರ್ತಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

14053018a ನಾಗಯೋನೌ ಯದಾ ಚೈವ ತದಾ ವರ್ತಾಮಿ ನಾಗವತ್|

14053018c ಯಕ್ಷರಾಕ್ಷಸಯೋನೀಶ್ಚ ಯಥಾವದ್ವಿಚರಾಮ್ಯಹಮ್||

ನಾಗಯೋನಿಯಲ್ಲಿ ಜನಿಸಿದಾಗ ನಾಗದಂತೆಯೇ ವರ್ತಿಸುತ್ತೇನೆ. ಯಕ್ಷ-ರಾಕ್ಷಸ ಯೋನಿಗಳಲ್ಲಿ ಜನಿಸಿದಾಗಲೂ ನಾನು ಅವರಂತೆಯೇ ವರ್ತಿಸುತ್ತೇನೆ.

14053019a ಮಾನುಷ್ಯೇ ವರ್ತಮಾನೇ ತು ಕೃಪಣಂ ಯಾಚಿತಾ ಮಯಾ|

14053019c ನ ಚ ತೇ ಜಾತಸಂಮೋಹಾ ವಚೋ ಗೃಹ್ಣಂತಿ ಮೇ ಹಿತಮ್||

ಈಗ ಮನುಷ್ಯ ಯೋನಿಯಲ್ಲಿ ಅವತರಿಸಿರುವ ನಾನು ಮನುಷ್ಯನಂತೆಯೇ ನಡೆದುಕೊಂಡು ದೀನನಾಗಿ ಪಾಂಡವರೊಡನೆ ಸಂಧಿಮಾಡಿಕೊಳ್ಳುವಂತೆ ಕೌರವರನ್ನು ಪ್ರಾರ್ಥಿಸಿದೆನು. ಆದರೆ ಮೋಹಗ್ರಸ್ತರಾಗಿದ್ದ ಅವರು ನನ್ನ ಹಿತವಚನಗಳನ್ನು ಸ್ವೀಕರಿಸಲಿಲ್ಲ.

14053020a ಭಯಂ ಚ ಮಹದುದ್ದಿಶ್ಯ ತ್ರಾಸಿತಾಃ ಕುರವೋ ಮಯಾ|

14053020c ಕ್ರುದ್ಧೇವ ಭೂತ್ವಾ ಚ ಪುನರ್ಯಥಾವದನುದರ್ಶಿತಾಃ||

14053021a ತೇಽಧರ್ಮೇಣೇಹ ಸಂಯುಕ್ತಾಃ ಪರೀತಾಃ ಕಾಲಧರ್ಮಣಾ|

14053021c ಧರ್ಮೇಣ ನಿಹತಾ ಯುದ್ಧೇ ಗತಾಃ ಸ್ವರ್ಗಂ ನ ಸಂಶಯಃ||

ಮಹಾಭಯವನ್ನುಂಟುಮಾಡಿಯೂ ನಾನು ಕುರುಗಳನ್ನು ಬೆದರಿಸಿದೆನು. ಕ್ರುದ್ಧನಾಗಿಯೂ ಕೂಡ ಪುನಃ ಅವರಿಗೆ ವಿಷಯವೇನೆಂದು ತಿಳಿಸಿದನು. ಆದರೆ ಅಧರ್ಮಸಂಯುಕ್ತರಾದ ಮತ್ತು ಕಾಲಧರ್ಮಕ್ಕೆ ಒಳಗಾದ ಅವರು ಧರ್ಮಯುದ್ಧದಲ್ಲಿ ಹತರಾಗಿ ಸ್ವರ್ಗವನ್ನು ಸೇರಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.

14053022a ಲೋಕೇಷು ಪಾಂಡವಾಶ್ಚೈವ ಗತಾಃ ಖ್ಯಾತಿಂ ದ್ವಿಜೋತ್ತಮ|

14053022c ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ||

ದ್ವಿಜಸತ್ತಮ! ಪಾಂಡವರು ಲೋಕಗಳಲ್ಲಿ ಖ್ಯಾತಿಯನ್ನು ಹೊಂದಿದರು. ಇದೋ ನೀನು ಕೇಳಿರುವುದಕ್ಕೆ ಎಲ್ಲವನ್ನೂ ನಾನು ನಿನಗೆ ಹೇಳಿದ್ದೇನೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಕೃಷ್ಣವಾಕ್ಯೇ ತ್ರಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನೇ ಕೃಷ್ಣವಾಕ್ಯ ಎನ್ನುವ ಐವತ್ಮೂರನೇ ಅಧ್ಯಾಯವು.

Comments are closed.