Ashvamedhika Parva: Chapter 51

ಅಶ್ವಮೇಧಿಕ ಪರ್ವ

೫೧

ಮಾರ್ಗದಲ್ಲಿ ಅರ್ಜುನನು ಕೃಷ್ಣನನ್ನು ಸ್ತುತಿಸಿದುದು (೧-೨೩). ಹಸ್ತಿನಾಪುರವನ್ನು ಸೇರಿ ಯುಧಿಷ್ಠಿರನ ಅನುಮತಿಯನ್ನು ಪಡೆದು ಕೃಷ್ಣನು ಸುಭದ್ರೆಯೊಡನೆ ದ್ವಾರಕೆಗೆ ಪ್ರಯಾಣಿಸಿದುದು (೨೪-೫೬).

14051001 ವೈಶಂಪಾಯನ ಉವಾಚ

14051001a ತತೋಽಭ್ಯಚೋದಯತ್ಕೃಷ್ಣೋ ಯುಜ್ಯತಾಮಿತಿ ದಾರುಕಮ್|

14051001c ಮುಹೂರ್ತಾದಿವ ಚಾಚಷ್ಟ ಯುಕ್ತಮಿತ್ಯೇವ ದಾರುಕಃ||

ವೈಶಂಪಾಯನನು ಹೇಳಿದನು: “ಬಳಿಕ ಕೃಷ್ಣನು ರಥವನ್ನು ಸಿದ್ಧಪಡಿಸುವಂತೆ ದಾರುಕನಿಗೆ ಹೇಳಿದನು. ಸ್ವಲ್ಪ ಹೊತ್ತಿನಲ್ಲಿಯೇ ರಥವು ಸಿದ್ಧವಾಗಿದೆಯೆಂದು ದಾರುಕನು ಬಂದು ಹೇಳಿದನು.

14051002a ತಥೈವ ಚಾನುಯಾತ್ರಾಣಿ ಚೋದಯಾಮಾಸ ಪಾಂಡವಃ|

14051002c ಸಜ್ಜಯಧ್ವಂ ಪ್ರಯಾಸ್ಯಾಮೋ ನಗರಂ ಗಜಸಾಹ್ವಯಮ್||

ಹಾಗೆಯೇ ಪಾಂಡವ ಅರ್ಜುನನೂ ಕೂಡ “ರಥವನ್ನು ಸಿದ್ಧಪಡಿಸಿ. ಹಸ್ತಿನಾಪುರ ನಗರಕ್ಕೆ ಪ್ರಯಾಣಿಸೋಣ!” ಎಂದು ಆಜ್ಞಾಪಿಸಿದನು.

14051003a ಇತ್ಯುಕ್ತಾಃ ಸೈನಿಕಾಸ್ತೇ ತು ಸಜ್ಜೀಭೂತಾ ವಿಶಾಂ ಪತೇ|

14051003c ಆಚಖ್ಯುಃ ಸಜ್ಜಮಿತ್ಯೇವ ಪಾರ್ಥಾಯಾಮಿತತೇಜಸೇ||

ವಿಶಾಂಪತೇ! ಹೀಗೆ ಹೇಳಲು ಅವನ ಸೈನಿಕರು ಸಿದ್ಧರಾಗಿ ರಥಗಳು ಸಿದ್ಧವಾಗಿವೆ ಎಂದು ಅಮಿತತೇಜಸ್ವಿ ಪಾರ್ಥನಿಗೆ ಬಂದು ಹೇಳಿದರು.

14051004a ತತಸ್ತೌ ರಥಮಾಸ್ಥಾಯ ಪ್ರಯಾತೌ ಕೃಷ್ಣಪಾಂಡವೌ|

14051004c ವಿಕುರ್ವಾಣೌ ಕಥಾಶ್ಚಿತ್ರಾಃ ಪ್ರೀಯಮಾಣೌ ವಿಶಾಂ ಪತೇ||

ವಿಶಾಂಪತೇ! ಆಗ ಕೃಷ್ಣಾರ್ಜುನರು ರಥದಲ್ಲಿ ಕುಳಿತು, ವಿಚಿತ್ರ ಮಾತುಕಥೆಗಳನ್ನಾಡುತ್ತಾ ಸಂತೋಷದಿಂದ ಪ್ರಯಾಣಿಸಿದರು.

14051005a ರಥಸ್ಥಂ ತು ಮಹಾತೇಜಾ ವಾಸುದೇವಂ ಧನಂಜಯಃ|

14051005c ಪುನರೇವಾಬ್ರವೀದ್ವಾಕ್ಯಮಿದಂ ಭರತಸತ್ತಮ||

ಭರತಸತ್ತಮ! ರಥದಲ್ಲಿ ಕುಳಿತಿದ್ದ ವಾಸುದೇವನಿಗೆ ಮಹಾತೇಜಸ್ವೀ ಧನಂಜಯನು ಪುನಃ ಈ ಮಾತುಗಳನ್ನಾಡಿದನು:

14051006a ತ್ವತ್ಪ್ರಸಾದಾಜ್ಜಯಃ ಪ್ರಾಪ್ತೋ ರಾಜ್ಞಾ ವೃಷ್ಣಿಕುಲೋದ್ವಹ|

14051006c ನಿಹತಾಃ ಶತ್ರವಶ್ಚಾಪಿ ಪ್ರಾಪ್ತಂ ರಾಜ್ಯಮಕಂಟಕಮ್||

“ವೃಷ್ಣಿಕುಲೋದ್ವಹ! ನಿನ್ನ ಅನುಗ್ರಹದಿಂದಲೇ ರಾಜಾ ಯುಧಿಷ್ಠಿರನಿಗೆ ಜಯವು ದೊರಕಿತು. ಶತ್ರುಗಳನ್ನು ಸಂಹರಿಸಿ ಕಂಟಕವಿಲ್ಲದ ಈ ರಾಜ್ಯವನ್ನು ಅವನು ಪಡೆದನು.

14051007a ನಾಥವಂತಶ್ಚ ಭವತಾ ಪಾಂಡವಾ ಮಧುಸೂದನ|

14051007c ಭವಂತಂ ಪ್ಲವಮಾಸಾದ್ಯ ತೀರ್ಣಾಃ ಸ್ಮ ಕುರುಸಾಗರಮ್||

ಮಧುಸೂದನ! ನಿನ್ನಿಂದ ನಾವು ನಾಥವಂತರಾದೆವು. ನಿನ್ನನ್ನೇ ನೌಕೆಯನ್ನಾಗಿಸಿಕೊಂಡು ನಾವು ಕುರುಸಾಗರವನ್ನು ದಾಟಿದೆವು.

14051008a ವಿಶ್ವಕರ್ಮನ್ನಮಸ್ತೇಽಸ್ತು ವಿಶ್ವಾತ್ಮನ್ವಿಶ್ವಸಂಭವ|

14051008c ಯಥಾಹಂ ತ್ವಾ ವಿಜಾನಾಮಿ ಯಥಾ ಚಾಹಂ ಭವನ್ಮನಾಃ||

ವಿಶ್ವಕರ್ಮನೇ! ವಿಶ್ವಾತ್ಮನೇ! ವಿಶ್ವಸಂಭವನೇ! ನಿನಗೆ ನಮಸ್ಕಾರವು. ನಾನು ನಿನಗೆ ತುಂಬಾ ಬೇಕಾದವನು ಎಂದು ತಿಳಿದುಕೊಂಡೆನು.

14051009a ತ್ವತ್ತೇಜಃಸಂಭವೋ ನಿತ್ಯಂ ಹುತಾಶೋ ಮಧುಸೂದನ|

14051009c ರತಿಃ ಕ್ರೀಡಾಮಯೀ ತುಭ್ಯಂ ಮಾಯಾ ತೇ ರೋದಸೀ ವಿಭೋ||

ಮಧುಸೂದನ! ವಿಭೋ! ನಿನ್ನ ತೇಜಸ್ಸಿನಿಂದಲೇ ನಿತ್ಯವೂ ಎಲ್ಲವೂ ಹುಟ್ಟಿಕೊಳ್ಳುತ್ತವೆ. ಎಲ್ಲವೂ ಲಯವಾಗುತ್ತವೆ. ಕ್ರೀಡಾಮಯವಾದ ಈ ಭೂಮಿಯೇ ನಿನಗೆ ಮನೋರಂಜನೆಯ ಸ್ಥಾನವು. ಆಕಾಶ-ಭೂಮಿಗಳು ನಿನ್ನ ಮಾಯೆಯೇ ಆಗಿವೆ.

14051010a ತ್ವಯಿ ಸರ್ವಮಿದಂ ವಿಶ್ವಂ ಯದಿದಂ ಸ್ಥಾಣುಜಂಗಮಮ್|

14051010c ತ್ವಂ ಹಿ ಸರ್ವಂ ವಿಕುರುಷೇ ಭೂತಗ್ರಾಮಂ ಸನಾತನಮ್||

ಈ ಸ್ಥಾವರ-ಜಂಗಮ ವಿಶ್ವವೆಲ್ಲವೂ ನಿನ್ನಲ್ಲಿಯೇ ನೆಲೆಸಿವೆ. ಸನಾತನನಾದ ನೀನೇ ಸರ್ವ ಭೂತಗಣಗಳನ್ನೂ ಸೃಷ್ಟಿಸಿರುವೆ.

14051011a ಪೃಥಿವೀಂ ಚಾಂತರಿಕ್ಷಂ ಚ ತಥಾ ಸ್ಥಾವರಜಂಗಮಮ್|

14051011c ಹಸಿತಂ ತೇಽಮಲಾ ಜ್ಯೋತ್ಸ್ನಾ ಋತವಶ್ಚೇಂದ್ರಿಯಾನ್ವಯಾಃ||

ಪೃಥ್ವಿ, ಅಂತರಿಕ್ಷ, ಮತ್ತು ಹಾಗೆಯೇ ಸ್ಥಾವರ-ಜಂಗಮಗಳು ನಿನ್ನಿಂದಲೇ ಆಗಿವೆ. ನಿರ್ಮಲ ಬೆಳದಿಂಗಳೇ ನಿನ್ನ ಮುಗುಳ್ನಗೆ ಮತ್ತು ಋತುಗಳೇ ನಿನ್ನ ಇಂದ್ರಿಯಗಳು.

14051012a ಪ್ರಾಣೋ ವಾಯುಃ ಸತತಗಃ ಕ್ರೋಧೋ ಮೃತ್ಯುಃ ಸನಾತನಃ|

14051012c ಪ್ರಸಾದೇ ಚಾಪಿ ಪದ್ಮಾ ಶ್ರೀರ್ನಿತ್ಯಂ ತ್ವಯಿ ಮಹಾಮತೇ||

ಸತತವೂ ಚಲಿಸುವ ವಾಯುವೇ ನಿನ್ನ ಪ್ರಾಣ. ಸನಾತನ ಮೃತ್ಯುವೇ ನಿನ್ನ ಕ್ರೋಧ. ಮಹಾಮತೇ! ನಿನ್ನ ಪ್ರಸನ್ನತೆಯಲ್ಲಿ ಪದ್ಮಾ ಶ್ರೀಯು ನೆಲಸಿರುತ್ತಾಳೆ.

14051013a ರತಿಸ್ತುಷ್ಟಿರ್ಧೃತಿಃ ಕ್ಷಾಂತಿಸ್ತ್ವಯಿ ಚೇದಂ ಚರಾಚರಮ್|

14051013c ತ್ವಮೇವೇಹ ಯುಗಾಂತೇಷು ನಿಧನಂ ಪ್ರೋಚ್ಯಸೇಽನಘ||

ಅನಘ! ನಿನ್ನಲ್ಲಿಯೇ ರತಿ, ತುಷ್ಟಿ, ಧೃತಿ, ಮತ್ತು ಕಾಂತಿಗಳು ಹಾಗೂ ಈ ಚರಾಚರಜಗತ್ತು ನೆಲೆಸಿವೆ. ಯುಗಾಂತದಲ್ಲೆ ನಿನ್ನನ್ನೇ ನಿಧನ ಎಂದೂ ಹೇಳುತ್ತಾರೆ.

14051014a ಸುದೀರ್ಘೇಣಾಪಿ ಕಾಲೇನ ನ ತೇ ಶಕ್ಯಾ ಗುಣಾ ಮಯಾ|

14051014c ಆತ್ಮಾ ಚ ಪರಮೋ ವಕ್ತುಂ ನಮಸ್ತೇ ನಲಿನೇಕ್ಷಣ||

ಸುದೀರ್ಘ ಕಾಲವಾದರೂ ನನಗೆ ನಿನ್ನ ಗುಣಗಳನ್ನು ವರ್ಣಿಸಲು ಶಕ್ಯವಿಲ್ಲ. ನಲಿನೇಕ್ಷಣ! ನೀನು ಆತ್ಮ ಮತ್ತು ಪರಮಾತ್ಮನು. ನಿನಗೆ ನಮಸ್ಕಾರ!

14051015a ವಿದಿತೋ ಮೇಽಸಿ ದುರ್ಧರ್ಷ ನಾರದಾದ್ದೇವಲಾತ್ತಥಾ|

14051015c ಕೃಷ್ಣದ್ವೈಪಾಯನಾಚ್ಚೈವ ತಥಾ ಕುರುಪಿತಾಮಹಾತ್||

ದುರ್ಧರ್ಷ! ನಾರದ, ದೇವಲ, ಕೃಷ್ಣದ್ವೈಪಾಯನ ಮತ್ತು ಹಾಗೆಯೇ ಕುರುಪಿತಾಮಹನಿಂದ ನಿನ್ನ ಮಹಾತ್ಮೆಯನ್ನು ತಿಳಿದುಕೊಂಡಿದ್ದೇನೆ.

14051016a ತ್ವಯಿ ಸರ್ವಂ ಸಮಾಸಕ್ತಂ ತ್ವಮೇವೈಕೋ ಜನೇಶ್ವರಃ|

14051016c ಯಚ್ಚಾನುಗ್ರಹಸಂಯುಕ್ತಮೇತದುಕ್ತಂ ತ್ವಯಾನಘ||

14051017a ಏತತ್ಸರ್ವಮಹಂ ಸಮ್ಯಗಾಚರಿಷ್ಯೇ ಜನಾರ್ದನ|

ಎಲ್ಲವೂ ನಿನ್ನಲ್ಲಿಯೇ ಸೇರಿವೆ. ನೀನೊಬ್ಬನೇ ಸಮಸ್ತ ಜನರಿಗೂ ಈಶ್ವರನು. ಅನಘ! ಜನಾರ್ದನ! ಯಾವ ಅನುಗ್ರಹದೊಂದಿಗೆ ನೀನು ನನಗೆ ಉಪದೇಶಿಸಿದ್ದೀಯೋ ಅವೆಲ್ಲವನ್ನೂ ನಾನು ಚೆನ್ನಾಗಿ ಆಚರಿಸುತ್ತೇನೆ.

14051017c ಇದಂ ಚಾದ್ಭುತಮತ್ಯರ್ಥಂ ಕೃತಮಸ್ಮತ್ಪ್ರಿಯೇಪ್ಸಯಾ||

14051018a ಯತ್ಪಾಪೋ ನಿಹತಃ ಸಂಖ್ಯೇ ಕೌರವ್ಯೋ ಧೃತರಾಷ್ಟ್ರಜಃ|

14051018c ತ್ವಯಾ ದಗ್ಧಂ ಹಿ ತತ್ಸೈನ್ಯಂ ಮಯಾ ವಿಜಿತಮಾಹವೇ||

ನಮಗೆ ಪ್ರಿಯವಾದುದನ್ನು ಮಾಡಲು ಬಯಸಿ ನೀನು ಇದೊಂದು ಅದ್ಭುತವನ್ನೇ ಮಾಡಿಬಿಟ್ಟೆ. ಯುದ್ಧದಲ್ಲಿ ಧೃತರಾಷ್ಟ್ರಜ ಪಾಪಿ ಕೌರವ್ಯನು ಹತನಾದನು. ನಿನ್ನ ತೇಜಸ್ಸಿನಿಂದ ಸುಟ್ಟುಹೋಗಿದ್ದ ಆ ಸೇನೆಯನ್ನು ಯುದ್ಧದಲ್ಲಿ ನಾನು ಜಯಿಸಿದೆ!

14051019a ಭವತಾ ತತ್ಕೃತಂ ಕರ್ಮ ಯೇನಾವಾಪ್ತೋ ಜಯೋ ಮಯಾ|

14051019c ದುರ್ಯೋಧನಸ್ಯ ಸಂಗ್ರಾಮೇ ತವ ಬುದ್ಧಿಪರಾಕ್ರಮೈಃ||

14051020a ಕರ್ಣಸ್ಯ ಚ ವಧೋಪಾಯೋ ಯಥಾವತ್ಸಂಪ್ರದರ್ಶಿತಃ|

14051020c ಸೈಂಧವಸ್ಯ ಚ ಪಾಪಸ್ಯ ಭೂರಿಶ್ರವಸ ಏವ ಚ||

ನೀನು ಮಾಡಿದ ಕರ್ಮಗಳಿಂದಲೇ ನನಗೆ ಜಯವು ದೊರಕಿತು. ನಿನ್ನ ಬುದ್ಧಿಪರಾಕ್ರಮಗಳಿಂದಲೇ ನಾವು ಸಂಗ್ರಾಮದಲ್ಲಿ ದುರ್ಯೋಧನ, ಕರ್ಣ, ಸೈಂಧವ ಮತ್ತು ಪಾಪಿ ಭೂರಿಶ್ರವಸರ ವಧೋಪಾಯಗಳನ್ನು ಕಂಡುಕೊಂಡೆವು.

14051021a ಅಹಂ ಚ ಪ್ರೀಯಮಾಣೇನ ತ್ವಯಾ ದೇವಕಿನಂದನ|

14051021c ಯದುಕ್ತಸ್ತತ್ಕರಿಷ್ಯಾಮಿ ನ ಹಿ ಮೇಽತ್ರ ವಿಚಾರಣಾ||

ದೇವಕಿನಂದನ! ನಾನೂ ಕೂಡ ನಿನಗೆ ಪ್ರಿಯವಾದುದನ್ನು ಮಾಡಲೋಸುಗ ನೀನು ಏನೆಲ್ಲ ಹೇಳುತ್ತೀಯೋ ಅವೆಲ್ಲವನ್ನೂ ಮಾಡುತ್ತೇನೆ. ಅದರಲ್ಲಿ ವಿಚಾರಮಾಡಬೇಕಾದುದು ಏನೂ ಇಲ್ಲ.

14051022a ರಾಜಾನಂ ಚ ಸಮಾಸಾದ್ಯ ಧರ್ಮಾತ್ಮಾನಂ ಯುಧಿಷ್ಠಿರಮ್|

14051022c ಚೋದಯಿಷ್ಯಾಮಿ ಧರ್ಮಜ್ಞ ಗಮನಾರ್ಥಂ ತವಾನಘ||

ಧರ್ಮಾತ್ಮ! ಅನಘ! ರಾಜಾ ಧರ್ಮಾತ್ಮ ಯುಧಿಷ್ಠಿರನ ಬಳಿಸಾರಿ ದ್ವಾರಕೆಗೆ ನೀನು ಹೋಗಲು ಅನುಮತಿಯನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ.

14051023a ರುಚಿತಂ ಹಿ ಮಮೈತತ್ತೇ ದ್ವಾರಕಾಗಮನಂ ಪ್ರಭೋ|

14051023c ಅಚಿರಾಚ್ಚೈವ ದೃಷ್ಟಾ ತ್ವಂ ಮಾತುಲಂ ಮಧುಸೂದನ|

14051023e ಬಲದೇವಂ ಚ ದುರ್ಧರ್ಷಂ ತಥಾನ್ಯಾನ್ವೃಷ್ಣಿಪುಂಗವಾನ್||

ಪ್ರಭೋ! ಮಧುಸೂದನ! ನನಗೂ ಕೂಡ ನೀನು ದ್ವಾರಕೆಗೆ ಹೋಗಿ ಬೇಗನೇ ಮಾವ ವಸುದೇವನನ್ನೂ, ದುರ್ಧರ್ಷ ಬಲದೇವನನ್ನೂ ಮತ್ತು ಹಾಗೆಯೇ ಅನ್ಯ ವೃಷ್ಣಿಪುಂಗವರನ್ನೂ ಕಾಣುವುದು ಸರಿಯೆನಿಸುತ್ತಿದೆ.”

14051024a ಏವಂ ಸಂಭಾಷಮಾಣೌ ತೌ ಪ್ರಾಪ್ತೌ ವಾರಣಸಾಹ್ವಯಮ್|

14051024c ತಥಾ ವಿವಿಶತುಶ್ಚೋಭೌ ಸಂಪ್ರಹೃಷ್ಟನರಾಕುಲಮ್||

ಹೀಗೆ ಮಾತನಾಡುತ್ತಿರುವಾಗಲೇ ಅವರಿಬ್ಬರೂ ಹಸ್ತಿನಾಪುರವನ್ನು ತಲುಪಿದರು ಮತ್ತು ಸಂಪ್ರಹೃಷ್ಟ ಪ್ರಜಾಸ್ತೋಮದಿಂದ ಕೂಡಿದ್ದ ಆ ನಗರವನ್ನು ಪ್ರವೇಶಿಸಿದರು.

14051025a ತೌ ಗತ್ವಾ ಧೃತರಾಷ್ಟ್ರಸ್ಯ ಗೃಹಂ ಶಕ್ರಗೃಹೋಪಮಮ್|

14051025c ದದೃಶಾತೇ ಮಹಾರಾಜ ಧೃತರಾಷ್ಟ್ರಂ ಜನೇಶ್ವರಮ್||

14051026a ವಿದುರಂ ಚ ಮಹಾಬುದ್ಧಿಂ ರಾಜಾನಂ ಚ ಯುಧಿಷ್ಠಿರಮ್|

14051026c ಭೀಮಸೇನಂ ಚ ದುರ್ಧರ್ಷಂ ಮಾದ್ರೀಪುತ್ರೌ ಚ ಪಾಂಡವೌ|

14051026e ಧೃತರಾಷ್ಟ್ರಮುಪಾಸೀನಂ ಯುಯುತ್ಸುಂ ಚಾಪರಾಜಿತಮ್||

14051027a ಗಾಂಧಾರೀಂ ಚ ಮಹಾಪ್ರಾಜ್ಞಾಂ ಪೃಥಾಂ ಕೃಷ್ಣಾಂ ಚ ಭಾಮಿನೀಮ್|

14051027c ಸುಭದ್ರಾದ್ಯಾಶ್ಚ ತಾಃ ಸರ್ವಾ ಭರತಾನಾಂ ಸ್ತ್ರಿಯಸ್ತಥಾ|

14051027e ದದೃಶಾತೇ ಸ್ಥಿತಾಃ ಸರ್ವಾ ಗಾಂಧಾರೀಂ ಪರಿವಾರ್ಯ ವೈ||

ಮಹಾರಾಜ! ಅವರಿಬ್ಬರೂ ಇಂದ್ರನ ಅರಮನೆಯಂತಿದ್ದ ಧೃತರಾಷ್ಟ್ರನ ಅರಮನೆಗೆ ಹೋಗಿ ಅಲ್ಲಿ ಜನೇಶ್ವರ ಧೃತರಾಷ್ಟ್ರನನ್ನೂ, ಬಹಾಬುದ್ಧಿ ವಿದುರನನ್ನೂ, ರಾಜಾ ಯುಧಿಷ್ಠಿರನನ್ನೂ, ದುರ್ಧರ್ಷ ಭೀಮಸೇನನನ್ನೂ, ಪಾಂಡವ ಮಾದ್ರೀಪುತ್ರರೀರ್ವರನ್ನೂ, ಧೃತರಾಷ್ಟ್ರನ ಹತ್ತಿರ ಕುಳಿತಿದ್ದ ಅಪರಾಜಿತ ಯುಯುತ್ಸುವನ್ನೂ, ಮಹಾಪ್ರಾಜ್ಞೆ ಗಾಂಧಾರಿಯನ್ನೂ, ಕುಂತಿಯನ್ನೂ, ಭಾಮಿನೀ ಕೃಷ್ಣೆಯನ್ನೂ, ಸುಭದ್ರೆಯನ್ನೂ, ಮತ್ತು ಸರ್ವ ಭರತಸ್ತ್ರೀಯರನ್ನೂ ಕಂಡರು. ಅವರೆಲ್ಲರೂ ಗಾಂಧಾರಿಯನ್ನು ಸುತ್ತುವರೆದಿದ್ದುದನ್ನು ನೋಡಿದರು.

14051028a ತತಃ ಸಮೇತ್ಯ ರಾಜಾನಂ ಧೃತರಾಷ್ಟ್ರಮರಿಂದಮೌ|

14051028c ನಿವೇದ್ಯ ನಾಮಧೇಯೇ ಸ್ವೇ ತಸ್ಯ ಪಾದಾವಗೃಹ್ಣತಾಮ್||

ಅನಂತರ ರಾಜಾ ಧೃತರಾಷ್ಟ್ರನ ಬಳಿಹೋಗಿ ಅವರಿಬ್ಬರು ಅರಿಂದಮರೂ ತಮ್ಮ ತಮ್ಮ ನಾಮಧೇಯಗಳನ್ನು ಹೇಳಿಕೊಂಡು ಅವನ ಪಾದಗಳನ್ನು ಹಿಡಿದು ನಮಸ್ಕರಿಸಿದರು.

14051029a ಗಾಂಧಾರ್ಯಾಶ್ಚ ಪೃಥಾಯಾಶ್ಚ ಧರ್ಮರಾಜ್ಞಸ್ತಥೈವ ಚ|

14051029c ಭೀಮಸ್ಯ ಚ ಮಹಾತ್ಮಾನೌ ತಥಾ ಪಾದಾವಗೃಹ್ಣತಾಮ್||

ಆ ಇಬ್ಬರು ಮಹಾತ್ಮರೂ ಗಾಂಧಾರೀ, ಪೃಥೆ, ಧರ್ಮರಾಜ, ಮತ್ತು ಭೀಮಸೇನರ ಪಾದಗಳನ್ನು ಹಿಡಿದು ನಮಸ್ಕರಿಸಿದರು.

14051030a ಕ್ಷತ್ತಾರಂ ಚಾಪಿ ಸಂಪೂಜ್ಯ ಪೃಷ್ಟ್ವಾ ಕುಶಲಮವ್ಯಯಮ್|

14051030c ತೈಃ ಸಾರ್ಧಂ ನೃಪತಿಂ ವೃದ್ಧಂ ತತಸ್ತಂ ಪರ್ಯುಪಾಸತಾಮ್||

ಕ್ಷತ್ತ ವಿದುರನನ್ನೂ ನಮಸ್ಕರಿಸಿ, ಕುಶಲ-ಆರೋಗ್ಯದ ಕುರಿತು ಪ್ರಶ್ನಿಸಿ ಅವರು ವೃದ್ಧ ನೃಪತಿಯೊಡನೆ ಸ್ವಲ್ಪ ಸಮಯ ತಂಗಿದರು.

14051031a ತತೋ ನಿಶಿ ಮಹಾರಾಜ ಧೃತರಾಷ್ಟ್ರಃ ಕುರೂದ್ವಹಾನ್|

14051031c ಜನಾರ್ದನಂ ಚ ಮೇಧಾವೀ ವ್ಯಸರ್ಜಯತ ವೈ ಗೃಹಾನ್||

ಮಹಾರಾಜ! ರಾತ್ರಿಯಾಗುತ್ತಲೇ ಮೇಧಾವೀ ಧೃತರಾಷ್ಟ್ರನು ಕುರೂದ್ವಹರನ್ನೂ ಮತ್ತು ಜನಾರ್ದನನನ್ನು ತಮ್ಮ ತಮ್ಮ ಮನೆಗಳಿಗೆ ಬೀಳ್ಕೊಟ್ಟನು.

14051032a ತೇಽನುಜ್ಞಾತಾ ನೃಪತಿನಾ ಯಯುಃ ಸ್ವಂ ಸ್ವಂ ನಿವೇಶನಮ್|

14051032c ಧನಂಜಯಗೃಹಾನೇವ ಯಯೌ ಕೃಷ್ಣಸ್ತು ವೀರ್ಯವಾನ್||

ನೃಪತಿಯಿಂದ ಹಾಗೆ ಆಜ್ಞೆಪಡೆದು ಎಲ್ಲರೂ ತಮ್ಮ ತಮ್ಮ ಅರಮನೆಗಳಿಗೆ ತೆರಳಿದರು. ವೀರ್ಯವಾನ್ ಕೃಷ್ಣನಾದರೋ ಧನಂಜಯನ ಅರಮನೆಗೇ ಹೋದನು.

14051033a ತತ್ರಾರ್ಚಿತೋ ಯಥಾನ್ಯಾಯಂ ಸರ್ವಕಾಮೈರುಪಸ್ಥಿತಃ|

14051033c ಕೃಷ್ಣಃ ಸುಷ್ವಾಪ ಮೇಧಾವೀ ಧನಂಜಯಸಹಾಯವಾನ್||

ಧನಂಜಯನ ಸಹಾಯಕನಾಗಿದ್ದ ಮೇಧಾವೀ ಕೃಷ್ಣನು ಅಲ್ಲಿ ಸರ್ವಕಾಮಗಳ ವ್ಯವಸ್ಥೆಗಳಿಂದ ಯಥಾನ್ಯಾಯವಾಗಿ ಅರ್ಚಿತನಾಗಿ ಮಲಗಿದನು.

14051034a ಪ್ರಭಾತಾಯಾಂ ತು ಶರ್ವರ್ಯಾಂ ಕೃತಪೂರ್ವಾಹ್ಣಿಕಕ್ರಿಯೌ|

14051034c ಧರ್ಮರಾಜಸ್ಯ ಭವನಂ ಜಗ್ಮತುಃ ಪರಮಾರ್ಚಿತೌ|

14051034e ಯತ್ರಾಸ್ತೇ ಸ ಸಹಾಮಾತ್ಯೋ ಧರ್ಮರಾಜೋ ಮಹಾಮನಾಃ||

ರಾತ್ರಿಕಳೆದು ಬೆಳಗಾಗುತ್ತಲೇ ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ಅವರಿಬ್ಬರು ಪರಮಾರ್ಚಿತರೂ ಧರ್ಮರಾಜನ ಭವನಕ್ಕೆ ಹೋದರು. ಅಲ್ಲಿ ಮಹಾಮನಸ್ವಿ ಧರ್ಮರಾಜನು ಅಮಾತ್ಯರೊಂದಿಗಿದ್ದನು.

14051035a ತತಸ್ತೌ ತತ್ಪ್ರವಿಶ್ಯಾಥ ದದೃಶಾತೇ ಮಹಾಬಲೌ|

14051035c ಧರ್ಮರಾಜಾನಮಾಸೀನಂ ದೇವರಾಜಮಿವಾಶ್ವಿನೌ||

ಅಶ್ವಿನೀ ದೇವತೆಗಳಂತಿದ್ದ ಆ ಈರ್ವರು ಮಹಾಬಲರೂ ಭವನವನ್ನು ಪ್ರವೇಶಿಸಿ ದೇವರಾಜನಂತೆ ಆಸೀನನಾಗಿದ್ದ ಧರ್ಮರಾಜನನ್ನು ಕಂಡರು.

14051036a ತೌ ಸಮಾಸಾದ್ಯ ರಾಜಾನಂ ವಾರ್ಷ್ಣೇಯಕುರುಪುಂಗವೌ|

14051036c ನಿಷೀದತುರನುಜ್ಞಾತೌ ಪ್ರೀಯಮಾಣೇನ ತೇನ ವೈ||

ರಾಜನನ್ನು ಸಮೀಪಿಸಿದ ಆ ಇಬ್ಬರು ವಾರ್ಷ್ಣೇಯ-ಕುರುಪುಂಗವರೂ ಪ್ರೀತಿಯಿಂದ ಸ್ವಾಗತಿಸಲ್ಪಟ್ಟು, ಅನುಜ್ಞಾತರಾಗಿ ಕುಳಿತುಕೊಂಡರು.

14051037a ತತಃ ಸ ರಾಜಾ ಮೇಧಾವೀ ವಿವಕ್ಷೂ ಪ್ರೇಕ್ಷ್ಯ ತಾವುಭೌ|

14051037c ಪ್ರೋವಾಚ ವದತಾಂ ಶ್ರೇಷ್ಠೋ ವಚನಂ ರಾಜಸತ್ತಮಃ||

ಅನಂತರ ಮೇಧಾವೀ, ಮಾತನಾಡುವವರಲ್ಲಿ ಶ್ರೇಷ್ಠ, ರಾಜಸತ್ತಮ ರಾಜನು ಅವರಿಬ್ಬರನ್ನೂ ನೋಡಿ ಅವರು ಏನೋ ಹೇಳಲಿಕ್ಕೆ ಬಂದಿರುವರೆಂದು ಊಹಿಸಿ ಈ ಮಾತುಗಳನ್ನಾಡಿದನು.

14051038a ವಿವಕ್ಷೂ ಹಿ ಯುವಾಂ ಮನ್ಯೇ ವೀರೌ ಯದುಕುರೂದ್ವಹೌ|

14051038c ಬ್ರೂತ ಕರ್ತಾಸ್ಮಿ ಸರ್ವಂ ವಾಂ ನ ಚಿರಾನ್ಮಾ ವಿಚಾರ್ಯತಾಮ್||

“ವೀರ ಯದುಕುರೂದ್ವಹರೇ! ನೀವಿಬ್ಬರೂ ಎನನ್ನೋ ಹೇಳಲು ಬಯಸಿರುವಿರೆಂದು ತಿಳಿದಿದ್ದೇನೆ. ಅದನ್ನು ಹೇಳಿರಿ. ಅವೆಲ್ಲವನ್ನೂ ನಾನು ಬೇಗನೇ ಮಾಡುತ್ತೇನೆ. ಅದರಲ್ಲಿ ವಿಚಾರಿಸುವುದು ಬೇಡ!”

14051039a ಇತ್ಯುಕ್ತೇ ಫಲ್ಗುನಸ್ತತ್ರ ಧರ್ಮರಾಜಾನಮಬ್ರವೀತ್|

14051039c ವಿನೀತವದುಪಾಗಮ್ಯ ವಾಕ್ಯಂ ವಾಕ್ಯವಿಶಾರದಃ||

ಹೀಗೆ ಹೇಳಲು ವಾಕ್ಯವಿಶಾರದ ಫಲ್ಗುನನು ವಿನೀತನಾಗಿ ಧರ್ಮರಾಜನನ್ನು ಸಮೀಪಿಸಿ ಈ ಮಾತುಗಳನ್ನಾಡಿದನು:

14051040a ಅಯಂ ಚಿರೋಷಿತೋ ರಾಜನ್ವಾಸುದೇವಃ ಪ್ರತಾಪವಾನ್|

14051040c ಭವಂತಂ ಸಮನುಜ್ಞಾಪ್ಯ ಪಿತರಂ ದ್ರಷ್ಟುಮಿಚ್ಚತಿ||

“ರಾಜನ್! ಈ ಪ್ರತಾಪವಾನ್ ವಾಸುದೇವನು ಇಲ್ಲಿ ಬಹಳ ಸಮಯ ಉಳಿದುಕೊಂಡಿದ್ದಾನೆ. ನಿನ್ನ ಅನುಜ್ಞೆಯನ್ನು ಪಡೆದು ಅವನು ತನ್ನ ತಂದೆಯನ್ನು ನೋಡಲು ಬಯಸುತ್ತಿದ್ದಾನೆ.

14051041a ಸ ಗಚ್ಚೇದಭ್ಯನುಜ್ಞಾತೋ ಭವತಾ ಯದಿ ಮನ್ಯಸೇ|

14051041c ಆನರ್ತನಗರೀಂ ವೀರಸ್ತದನುಜ್ಞಾತುಮರ್ಹಸಿ||

ನೀನು ಅಭಿಪ್ರಾಯಪಟ್ಟರೆ ಮತ್ತು ಅನುಜ್ಞೆಯನ್ನಿತ್ತರೆ ಈ ವೀರನು ಆನರ್ತನಗರಿಗೆ ಹೋಗುತ್ತಾನೆ. ಅವನಿಗೆ ಅನುಜ್ಞೆಯನ್ನು ನೀಡಬೇಕು!”

14051042 ಯುಧಿಷ್ಠಿರ ಉವಾಚ

14051042a ಪುಂಡರೀಕಾಕ್ಷ ಭದ್ರಂ ತೇ ಗಚ್ಚ ತ್ವಂ ಮಧುಸೂದನ|

14051042c ಪುರೀಂ ದ್ವಾರವತೀಮದ್ಯ ದ್ರಷ್ಟುಂ ಶೂರಸುತಂ ಪ್ರಭುಮ್||

ಯುಧಿಷ್ಠಿರನು ಹೇಳಿದನು: “ಪುಂಡರೀಕಾಕ್ಷ! ನಿನಗೆ ಮಂಗಳವಾಗಲಿ! ಮಧುಸೂದನ! ಇಂದೇ ನೀನು ಪ್ರಭು ಶೂರಸುತನನ್ನು ಕಾಣಲು ದ್ವಾರವತೀ ಪುರಿಗೆ ಹೋಗು.

14051043a ರೋಚತೇ ಮೇ ಮಹಾಬಾಹೋ ಗಮನಂ ತವ ಕೇಶವ|

14051043c ಮಾತುಲಶ್ಚಿರದೃಷ್ಟೋ ಮೇ ತ್ವಯಾ ದೇವೀ ಚ ದೇವಕೀ||

ಮಹಾಬಾಹೋ! ಕೇಶವ! ನೀನು ಅಲ್ಲಿಗೆ ತೆರಳುವುದು ಸಮುಚಿತವೆಂದು ನನಗೂ ತೋರುತ್ತಿದೆ. ಮಾವ ಮತ್ತು ದೇವೀ ದೇವಕಿಯನ್ನು ನೀನು ನೋಡದೆ ಬಹಳ ಸಮಯವಾಯಿತು.

14051044a ಮಾತುಲಂ ವಸುದೇವಂ ತ್ವಂ ಬಲದೇವಂ ಚ ಮಾಧವ|

14051044c ಪೂಜಯೇಥಾ ಮಹಾಪ್ರಾಜ್ಞ ಮದ್ವಾಕ್ಯೇನ ಯಥಾರ್ಹತಃ||

ಮಾಧವ! ಮಹಾಪ್ರಾಜ್ಞ! ಸೋದರ ಮಾವ ವಸುದೇವ ಮತ್ತು ಬಲದೇವರನ್ನು ನೀನು ನನ್ನ ಪರವಾಗಿ ಯಥಾಯೋಗ್ಯವಾಗಿ ಸತ್ಕರಿಸು.

14051045a ಸ್ಮರೇಥಾಶ್ಚಾಪಿ ಮಾಂ ನಿತ್ಯಂ ಭೀಮಂ ಚ ಬಲಿನಾಂ ವರಮ್|

14051045c ಫಲ್ಗುನಂ ನಕುಲಂ ಚೈವ ಸಹದೇವಂ ಚ ಮಾಧವ||

ಮಾಧವ! ನಿತ್ಯವೂ ನೀನು ನನ್ನನ್ನು, ಬಲಿಗಳಲ್ಲಿ ಶ್ರೇಷ್ಠ ಭೀಮನನ್ನು, ಫಲ್ಗುನನನ್ನು ಮತ್ತು ನಕುಲ-ಸಹದೇವರನ್ನು ನೆನಪಿಸಿಕೊಳ್ಳುತ್ತಲೇ ಇರಬೇಕು.

14051046a ಆನರ್ತಾನವಲೋಕ್ಯ ತ್ವಂ ಪಿತರಂ ಚ ಮಹಾಭುಜ|

14051046c ವೃಷ್ಣೀಂಶ್ಚ ಪುನರಾಗಚ್ಚೇರ್ಹಯಮೇಧೇ ಮಮಾನಘ||

ಮಹಾಭುಜ! ಅನಘ! ಆನರ್ತರನ್ನೂ ತಂದೆಯನ್ನೂ ಮತ್ತು ವೃಷ್ಣಿಗಳನ್ನೂ ಕಂಡು ಪುನಃ ನನ್ನ ಅಶ್ವಮೇಧಕ್ಕೆ ನೀನು ಆಗಮಿಸಬೇಕು.

14051047a ಸ ಗಚ್ಚ ರತ್ನಾನ್ಯಾದಾಯ ವಿವಿಧಾನಿ ವಸೂನಿ ಚ|

14051047c ಯಚ್ಚಾಪ್ಯನ್ಯನ್ಮನೋಜ್ಞಂ ತೇ ತದಪ್ಯಾದತ್ಸ್ವ ಸಾತ್ವತ||

ಸಾತ್ವತ! ರತ್ನಗಳನ್ನೂ, ವಿವಿಧ ಐಶ್ವರ್ಯಗಳನ್ನೂ, ನಿನಗೆ ಮನೋಜ್ಞವಾದ ಇತರ ವಸ್ತುಗಳನ್ನೂ ತೆಗೆದುಕೊಂಡು ಹೋಗು!

14051048a ಇಯಂ ಹಿ ವಸುಧಾ ಸರ್ವಾ ಪ್ರಸಾದಾತ್ತವ ಮಾಧವ|

14051048c ಅಸ್ಮಾನುಪಗತಾ ವೀರ ನಿಹತಾಶ್ಚಾಪಿ ಶತ್ರವಃ||

ಮಾಧವ! ವೀರ! ನಿನ್ನ ಪ್ರಸಾದದಿಂದಲೇ ನಾವು ಶತ್ರುಗಳನ್ನು ವಧಿಸಿ ಈ ಸರ್ವ ವಸುಧೆಯನ್ನೂ ಪಡೆದುಕೊಂಡಿದ್ದೇವೆ.”

14051049a ಏವಂ ಬ್ರುವತಿ ಕೌರವ್ಯೇ ಧರ್ಮರಾಜೇ ಯುಧಿಷ್ಠಿರೇ|

14051049c ವಾಸುದೇವೋ ವರಃ ಪುಂಸಾಮಿದಂ ವಚನಮಬ್ರವೀತ್||

ಕೌರವ್ಯ ಧರ್ಮರಾಜ ಯುಧಿಷ್ಠಿರನು ಹೀಗೆ ಹೇಳಲು ಪುರುಷಶ್ರೇಷ್ಠ ವಾಸುದೇವನು ಇಂತೆಂದನು:

14051050a ತವೈವ ರತ್ನಾನಿ ಧನಂ ಚ ಕೇವಲಮ್

ಧರಾ ಚ ಕೃತ್ಸ್ನಾ ತು ಮಹಾಭುಜಾದ್ಯ ವೈ|

14051050c ಯದಸ್ತಿ ಚಾನ್ಯದ್ದ್ರವಿಣಂ ಗೃಹೇಷು ಮೇ

ತ್ವಮೇವ ತಸ್ಯೇಶ್ವರ ನಿತ್ಯಮೀಶ್ವರಃ||

“ಈಶ್ವರ! ಮಹಾಭುಜ! ರತ್ನಗಳು, ಧನ, ಸಮಗ್ರ ಭೂಮಂಡಲ ಇವೆಲ್ಲವೂ ಇಂದು ನಿನ್ನದೇ ಆಗಿವೆ. ಇಷ್ಟೇ ಅಲ್ಲದೇ ನನ್ನ ಅರಮನೆಯಲ್ಲಿರುವ ಎಲ್ಲ ಸಂಪತ್ತೂ ನಿನಗೇ ಸೇರಿದ್ದು. ಅವುಗಳಿಗೆ ನೀನೇ ಒಡೆಯ!”

14051051a ತಥೇತ್ಯಥೋಕ್ತಃ ಪ್ರತಿಪೂಜಿತಸ್ತದಾ

ಗದಾಗ್ರಜೋ ಧರ್ಮಸುತೇನ ವೀರ್ಯವಾನ್|

14051051c ಪಿತೃಷ್ವಸಾಮಭ್ಯವದದ್ಯಥಾವಿಧಿ

ಸಂಪೂಜಿತಶ್ಚಾಪ್ಯಗಮತ್ಪ್ರದಕ್ಷಿಣಮ್||

ಧರ್ಮಸುತನು ಹಾಗೆಯೇ ಆಗಲೆಂದು ಹೇಳಿ ಅವನನ್ನು ಪುರಸ್ಕರಿಸಲು ಗದಾಗ್ರಜ ವೀರ್ಯವಾನ್ ಕೃಷ್ಣನು ತನ್ನ ತಂದೆಯ ತಂಗಿ ಕುಂತಿಯ ಬಳಿ ಹೋಗಿ ಯಥಾವಿಧಿಯಾಗಿ ಅವಳನ್ನು ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಪೂಜಿಸಿದನು.

14051052a ತಯಾ ಸ ಸಮ್ಯಕ್ಪ್ರತಿನಂದಿತಸ್ತದಾ

ತಥೈವ ಸರ್ವೈರ್ವಿದುರಾದಿಭಿಸ್ತತಃ|

14051052c ವಿನಿರ್ಯಯೌ ನಾಗಪುರಾದ್ಗದಾಗ್ರಜೋ

ರಥೇನ ದಿವ್ಯೇನ ಚತುರ್ಯುಜಾ ಹರಿಃ||

ಅವಳಿಂದ ಪ್ರತಿನಂದಿಸಲ್ಪಟ್ಟು ಮತ್ತು ಹಾಗೆಯೇ ವಿದುರಾದಿ ಎಲ್ಲರಿಂದ ಬೀಳ್ಕೊಂಡು ಗದಾಗ್ರಜ ಜತುರ್ಭುಜ ಹರಿಯು ದಿವ್ಯರಥದಲ್ಲಿ ಕುಳಿತು ಹಸ್ತಿನಾಪುರದಿಂದ ಹೊರಟನು.

14051053a ರಥಂ ಸುಭದ್ರಾಮಧಿರೋಪ್ಯ ಭಾಮಿನೀಂ

ಯುಧಿಷ್ಠಿರಸ್ಯಾನುಮತೇ ಜನಾರ್ದನಃ|

14051053c ಪಿತೃಷ್ವಸಾಯಾಶ್ಚ ತಥಾ ಮಹಾಭುಜೋ

ವಿನಿರ್ಯಯೌ ಪೌರಜನಾಭಿಸಂವೃತಃ||

ಯುಧಿಷ್ಠಿರನ ಮತ್ತು ಅತ್ತೆ ಕುಂತಿಯ ಅನುಮತಿಯನ್ನು ಪಡೆದು ಮಹಾಭುಜ ಜನಾರ್ದನನು ಭಾಮಿನೀ ಸುಭದ್ರೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಪೌರಜನರಿಂದ ಬೀಳ್ಕೊಂಡು ಹೊರಟನು.

14051054a ತಮನ್ವಗಾದ್ವಾನರವರ್ಯಕೇತನಃ

ಸಸಾತ್ಯಕಿರ್ಮಾದ್ರವತೀಸುತಾವಪಿ|

14051054c ಅಗಾಧಬುದ್ಧಿರ್ವಿದುರಶ್ಚ ಮಾಧವಂ

ಸ್ವಯಂ ಚ ಭೀಮೋ ಗಜರಾಜವಿಕ್ರಮಃ||

ಕಪಿಧ್ವಜ ಅರ್ಜುನ, ಸಾತ್ಯಕಿ, ಮಾದ್ರೀಸುತರೀರ್ವರು, ಅಗಾಧ ಬುದ್ಧಿ ವಿದುರ ಮತ್ತು ಗಜರಾಜ ವಿಕ್ರಮಿ ಸ್ವಯಂ ಬೀಮ ಇವರು ಸ್ವಲ್ಪ ದೂರದವರೆಗೆ ಮಾಧವನನ್ನು ಅನುಸರಿಸಿ ಹೋದರು.

14051055a ನಿವರ್ತಯಿತ್ವಾ ಕುರುರಾಷ್ಟ್ರವರ್ಧನಾಂಸ್

ತತಃ ಸ ಸರ್ವಾನ್ವಿದುರಂ ಚ ವೀರ್ಯವಾನ್|

14051055c ಜನಾರ್ದನೋ ದಾರುಕಮಾಹ ಸತ್ವರಃ

ಪ್ರಚೋದಯಾಶ್ವಾನಿತಿ ಸಾತ್ಯಕಿಸ್ತದಾ||

ವಿದುರ ಮತ್ತು ಇತರ ಎಲ್ಲ ಕುರುರಾಷ್ಟ್ರವರ್ಧನರನ್ನೂ ಹಿಂದಿರುಗಲು ಹೇಳಿ ವೀರ್ಯವಾನ್ ಜನಾರ್ದನನು ಕುದುರೆಗಳನ್ನು ವೇಗವಾಗಿ ಹೋಗಲು ಪ್ರಚೋದಿಸುವಂತೆ ದಾರುಕ ಮತ್ತು ಸಾತ್ಯಕಿಯರಿಗೆ ಹೇಳಿದನು.

14051056a ತತೋ ಯಯೌ ಶತ್ರುಗಣಪ್ರಮರ್ದನಃ

ಶಿನಿಪ್ರವೀರಾನುಗತೋ ಜನಾರ್ದನಃ|

14051056c ಯಥಾ ನಿಹತ್ಯಾರಿಗಣಾನ್ಶತಕ್ರತುರ್

ದಿವಂ ತಥಾನರ್ತಪುರೀಂ ಪ್ರತಾಪವಾನ್||

ಅನಂತರ ಶತ್ರುಗಣಪ್ರಮರ್ದನ ಪ್ರತಾಪವಾನ್ ಜನಾರ್ದನನು ಶಿನಿಪ್ರವೀರನೊಂದಿಗೆ ಅರಿಗಣಗಳನ್ನು ಸಂಹರಿಸಿ ಶತಕ್ರತುವು ಸ್ವರ್ಗಕ್ಕೆ ಹೇಗೋ ಹಾಗೆ ಆನರ್ತಪುರಿಯನ್ನು ತಲುಪಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣಪ್ರಯಾಣೇ ಏಕಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣಪ್ರಯಾಣ ಎನ್ನುವ ಐವತ್ತೊಂದನೇ ಅಧ್ಯಾಯವು.

Comments are closed.