ಅಶ್ವಮೇಧಿಕ ಪರ್ವ
೫೦
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೪೮). “ಇದನ್ನೇ ನಾನು ಯುದ್ಧದ ಸಮಯದಲ್ಲಿ ನಿನಗೆ ಹೇಳಿದ್ದೆ!” ಎಂದು ಹೇಳಿ ಕೃಷ್ಣನು ಅರ್ಜುನನೊಡನೆ ಹಸ್ತಿನಾಪುರಕ್ಕೆ ಹೊರಟಿದುದು (೪೯-೫೧).
14050001 ಬ್ರಹ್ಮೋವಾಚ
14050001a ಭೂತಾನಾಮಥ ಪಂಚಾನಾಂ ಯಥೈಷಾಮೀಶ್ವರಂ ಮನಃ|
14050001c ನಿಯಮೇ ಚ ವಿಸರ್ಗೇ ಚ ಭೂತಾತ್ಮಾ ಮನ ಏವ ಚ||
ಬ್ರಹ್ಮನು ಹೇಳಿದನು: “ಮನಸ್ಸು ಪಂಚಭೂತಗಳ ಈಶ್ವರವು ಹೇಗೋ ಹಾಗೆ ಸೃಷ್ಟಿ ಮತ್ತು ನಿಯಮಗಳಲ್ಲಿ ಪಂಚಭೂತಗಳ ಆತ್ಮವೂ ಮನಸ್ಸೇ ಆಗಿರುತ್ತದೆ.
14050002a ಅಧಿಷ್ಠಾತಾ ಮನೋ ನಿತ್ಯಂ ಭೂತಾನಾಂ ಮಹತಾಂ ತಥಾ|
14050002c ಬುದ್ಧಿರೈಶ್ವರ್ಯಮಾಚಷ್ಟೇ ಕ್ಷೇತ್ರಜ್ಞಃ ಸರ್ವ ಉಚ್ಯತೇ||
ಪಂಚ ಮಹಾಭೂತಗಳ ನಿತ್ಯ ಆಶ್ರಯವೂ ಮನಸ್ಸೇ ಆಗಿದೆ. ಬುದ್ಧಿಯನ್ನು ಐಶ್ವರ್ಯವೆಂದೂ, ಇವೆಲ್ಲವನ್ನೂ ಕ್ಷೇತ್ರಜ್ಞನೆಂದೂ ಹೇಳುತ್ತಾರೆ.
14050003a ಇಂದ್ರಿಯಾಣಿ ಮನೋ ಯುಂಕ್ತೇ ಸದಶ್ವಾನಿವ ಸಾರಥಿಃ|
14050003c ಇಂದ್ರಿಯಾಣಿ ಮನೋ ಬುದ್ಧಿಂ ಕ್ಷೇತ್ರಜ್ಞೋ ಯುಂಜತೇ ಸದಾ||
ನಿಪುಣ ಸಾರಥಿಯು ಪಳಗಿದ ಕುದುರೆಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವಂತೆ ಮನಸ್ಸು ಎಲ್ಲ ಇಂದ್ರಿಯಗಳನ್ನೂ ತನ್ನ ಹತೋಟಿಯಲ್ಲಿಟ್ಟುಕೊಂಡಿರುತ್ತದೆ. ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳು ಸದಾ ಕ್ಷೇತ್ರಜ್ಞನನ್ನು ಸೇರಿಕೊಂಡಿರುತ್ತವೆ.
14050004a ಮಹಾಭೂತಸಮಾಯುಕ್ತಂ ಬುದ್ಧಿಸಂಯಮನಂ ರಥಮ್|
14050004c ತಮಾರುಹ್ಯ ಸ ಭೂತಾತ್ಮಾ ಸಮಂತಾತ್ಪರಿಧಾವತಿ||
ಮಹಾಭೂತಗಳನ್ನು ಕಟ್ಟಿದ, ಬುದ್ಧಿಯ ನಿಯಂತ್ರಣದಲ್ಲಿರುವ ರಥವನ್ನೇರಿ ಭೂತಾತ್ಮನು ಎಲ್ಲಕಡೆ ತಿರುಗುತ್ತಿರುತ್ತಾನೆ.
14050005a ಇಂದ್ರಿಯಗ್ರಾಮಸಂಯುಕ್ತೋ ಮನಃಸಾರಥಿರೇವ ಚ|
14050005c ಬುದ್ಧಿಸಂಯಮನೋ ನಿತ್ಯಂ ಮಹಾನ್ಬ್ರಹ್ಮಮಯೋ ರಥಃ||
ಇಂದ್ರಿಯಗ್ರಾಮಗಳನ್ನು ಕಟ್ಟಿರುವ, ಮನಸ್ಸೇ ಸಾರಥಿಯಾಗಿರುವ, ಬುದ್ಧಿಯೇ ಚಾವಟಿಯಾಗಿರುವ ಈ ದೇಹವು ನಿತ್ಯವೂ ಮಹಾ ಬ್ರಹ್ಮಮಯ ರಥವು.
14050006a ಏವಂ ಯೋ ವೇತ್ತಿ ವಿದ್ವಾನ್ವೈ ಸದಾ ಬ್ರಹ್ಮಮಯಂ ರಥಮ್|
14050006c ಸ ಧೀರಃ ಸರ್ವಲೋಕೇಷು ನ ಮೋಹಮಧಿಗಚ್ಚತಿ||
ಈ ಬ್ರಹ್ಮಮಯ ರಥವನ್ನು ಸದಾ ತಿಳಿದುಕೊಂಡಿರುವವನೇ ಧೀರ. ಅವನು ಸರ್ವಲೋಕಗಳಲ್ಲಿಯೂ ಮೋಹಿತನಾಗುವುದಿಲ್ಲ.
14050007a ಅವ್ಯಕ್ತಾದಿ ವಿಶೇಷಾಂತಂ ತ್ರಸಸ್ಥಾವರಸಂಕುಲಮ್|
14050007c ಚಂದ್ರಸೂರ್ಯಪ್ರಭಾಲೋಕಂ ಗ್ರಹನಕ್ಷತ್ರಮಂಡಿತಮ್||
14050008a ನದೀಪರ್ವತಜಾಲೈಶ್ಚ ಸರ್ವತಃ ಪರಿಭೂಷಿತಮ್|
14050008c ವಿವಿಧಾಭಿಸ್ತಥಾದ್ಭಿಶ್ಚ ಸತತಂ ಸಮಲಂಕೃತಮ್||
14050009a ಆಜೀವಃ ಸರ್ವಭೂತಾನಾಂ ಸರ್ವಪ್ರಾಣಭೃತಾಂ ಗತಿಃ|
14050009c ಏತದ್ಬ್ರಹ್ಮವನಂ ನಿತ್ಯಂ ಯಸ್ಮಿಂಶ್ಚರತಿ ಕ್ಷೇತ್ರವಿತ್||
ಈ ಜಗತ್ತು ಒಂದು ಬ್ರಹ್ಮವನವು. ಅವ್ಯಕ್ತ ಪ್ರಕೃತಿಯೇ ಇದರ ಆದಿಯು. ವಿಶೇಷವೇ ಅಂತ್ಯವು. ಸ್ಥಾವರ ಸಂಕುಲಗಳು ಈ ವನದಲ್ಲಿ ತುಂಬಿಕೊಂಡಿವೆ. ಚಂದ್ರ-ಸೂರ್ಯರೇ ಇದಕ್ಕೆ ಬೆಳಕು ನೀಡುತ್ತಾರೆ. ಗ್ರಹ-ನಕ್ಷತ್ರ ಮಂಡಲಗಳು ಇದರ ಅಲಂಕಾರ. ನದೀ-ಪರ್ವತಜಾಲಗಳಿಂದ ಎಲ್ಲಕಡೆಗಳಲ್ಲಿ ವಿಭೂಷಿತಗೊಂಡಿದೆ. ವಿವಿಧ ತೀರ್ಥಗಳಿಂದ ಸತತವೂ ಸಮಲಂಕೃತಗೊಂಡಿದೆ. ಸರ್ವಭೂತಗಳ ಜೀವದಾಯಕವೂ ಸರ್ವಪ್ರಾಣಗಳ ಸದ್ಗತಿಪ್ರದವೂ ಆಗಿದೆ. ಈ ಬ್ರಹ್ಮವನದಲ್ಲಿ ನಿತ್ಯವೂ ಕ್ಷೇತ್ರಜ್ಞನು ಸಂಚರಿಸುತ್ತಿರುತ್ತಾನೆ.
14050010a ಲೋಕೇಽಸ್ಮಿನ್ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|
14050010c ತಾನ್ಯೇವಾಗ್ರೇ ಪ್ರಲೀಯಂತೇ ಪಶ್ಚಾದ್ಭೂತಕೃತಾ ಗುಣಾಃ|
14050010e ಗುಣೇಭ್ಯಃ ಪಂಚಭೂತಾನಿ ಏಷ ಭೂತಸಮುಚ್ಚ್ರಯಃ||
ಪ್ರಳಯದಲ್ಲಿ ಈ ಲೋಕದಲ್ಲಿರುವ ಸ್ಥಾವರ-ಚರಗಳೆಲ್ಲವೂ ಮೊದಲು ಪಂಚಮಹಾಭೂತಗಳ ಗುಣಗಳಲ್ಲಿ ಲೀನವಾಗುತ್ತವೆ. ಅನಂತರ ಗುಣಗಳು ಪಂಚಭೂತಗಳಲ್ಲಿಯೂ, ಪಂಚಭೂತಗಳು ಮೂಲ ಪ್ರಕೃತಿಯಲ್ಲಿಯೂ ಲೀನವಾಗುತ್ತವೆ.
14050011a ದೇವಾ ಮನುಷ್ಯಾ ಗಂಧರ್ವಾಃ ಪಿಶಾಚಾಸುರರಾಕ್ಷಸಾಃ|
14050011c ಸರ್ವೇ ಸ್ವಭಾವತಃ ಸೃಷ್ಟಾ ನ ಕ್ರಿಯಾಭ್ಯೋ ನ ಕಾರಣಾತ್||
ದೇವತೆಗಳು, ಮನುಷ್ಯರು, ಗಂಧರ್ವರು, ಪಿಶಾಚ-ಅಸುರ-ರಾಕ್ಷಸರು ಎಲ್ಲರೂ ಸ್ವಭಾವತಃ ಸೃಷ್ಟಿಸಲ್ಪಟ್ಟರೇ ಹೊರತು ಯಾವುದೇ ಕ್ರಿಯೆ-ಕಾರಣಗಳಿಂದಾಗಿ ಅಲ್ಲ.
14050012a ಏತೇ ವಿಶ್ವಕೃತೋ ವಿಪ್ರಾ ಜಾಯಂತೇ ಹ ಪುನಃ ಪುನಃ|
14050012c ತೇಭ್ಯಃ ಪ್ರಸೂತಾಸ್ತೇಷ್ವೇವ ಮಹಾಭೂತೇಷು ಪಂಚಸು|
14050012e ಪ್ರಲೀಯಂತೇ ಯಥಾಕಾಲಮೂರ್ಮಯಃ ಸಾಗರೇ ಯಥಾ||
ವಿಶ್ವವನ್ನು ಸೃಷ್ಟಿಸುವ ಮರೀಚಿ ಮೊದಲಾದ ವಿಪ್ರರು ಸಾಗರದ ಅಲೆಗಳಂತೆ ಪಂಚಮಹಾಭೂತಗಳಿಂದ ಪುನಃ ಪುನಃ ಹುಟ್ಟುತ್ತಿರುತ್ತಾರೆ. ಮತ್ತು ಯಥಾಕಾಲದಲ್ಲಿ ಪಂಚಭೂತಗಳಲ್ಲಿ ಪ್ರಲಯವಾಗುತ್ತಾರೆ ಕೂಡ.
14050013a ವಿಶ್ವಸೃಗ್ಭ್ಯಸ್ತು ಭೂತೇಭ್ಯೋ ಮಹಾಭೂತಾನಿ ಗಚ್ಚತಿ|
14050013c ಭೂತೇಭ್ಯಶ್ಚಾಪಿ ಪಂಚಭ್ಯೋ ಮುಕ್ತೋ ಗಚ್ಚೇತ್ಪ್ರಜಾಪತಿಮ್||
ವಿಶ್ವವನ್ನು ಸೃಷ್ಟಿಸುವ ಭೂತಗಳು ಪಂಚಮಹಾಭೂತಗಳನ್ನು ಸೇರುತ್ತವೆ. ಪಂಚಮಹಾಭೂತಗಳೂ ಮುಕ್ತಗೊಂಡು ಪ್ರಜಾಪತಿಯನ್ನು ಸೇರುತ್ತವೆ.
14050014a ಪ್ರಜಾಪತಿರಿದಂ ಸರ್ವಂ ತಪಸೈವಾಸೃಜತ್ಪ್ರಭುಃ|
14050014c ತಥೈವ ವೇದಾನೃಷಯಸ್ತಪಸಾ ಪ್ರತಿಪೇದಿರೇ||
ಇವೆಲ್ಲವನ್ನೂ ಪ್ರಭು ಪ್ರಜಾಪತಿಯು ತಪಸ್ಸಿನಿಂದಲೇ ಸೃಷ್ಟಿಸಿದನು. ಹಾಗೆಯೇ ಋಷಿಗಳೂ ಕೂಡ ತಪಸ್ಸನ್ನು ತಪಿಸಿಯೇ ಇದನ್ನು ತಿಳಿದುಕೊಂಡರು.
14050015a ತಪಸಶ್ಚಾನುಪೂರ್ವ್ಯೇಣ ಫಲಮೂಲಾಶಿನಸ್ತಥಾ|
14050015c ತ್ರೈಲೋಕ್ಯಂ ತಪಸಾ ಸಿದ್ಧಾಃ ಪಶ್ಯಂತೀಹ ಸಮಾಹಿತಾಃ||
ಫಲಮೂಲಗಳನ್ನೇ ತಿಂದು ಜೀವಿಸುವ ಸಿದ್ಧರು ಸಮಾಹಿತರಾಗಿ ತಪಸ್ಸನ್ನು ಆಚರಿಸಿಯೇ ಮೂರೂ ಲೋಕಗಳನ್ನು ಮೊದಲಿನಿಂದ ಕಡೆಯವರೆಗೂ ಪ್ರತ್ಯಕ್ಷವಾಗಿ ಕಾಣುತ್ತಾರೆ.
14050016a ಓಷಧಾನ್ಯಗದಾದೀನೀ ನಾನಾವಿದ್ಯಾಶ್ಚ ಸರ್ವಶಃ|
14050016c ತಪಸೈವ ಪ್ರಸಿಧ್ಯಂತಿ ತಪೋಮೂಲಂ ಹಿ ಸಾಧನಮ್||
ಔಷಧಿ ಮತ್ತು ಅನ್ಯ ಆರೋಗ್ಯಸಾಧಕಗಳೂ ಸಮಸ್ತವಾದ ನಾನಾ ವಿದ್ಯೆಗಳೂ ತಪಸ್ಸಿನಿಂದಲೇ ಸಿದ್ಧಿಗೊಳ್ಳುತ್ತವೆ. ಸಾಧನೆಯೇ ತಪಸ್ಸಿನ ಮೂಲ.
14050017a ಯದ್ದುರಾಪಂ ದುರಾಮ್ನಾಯಂ ದುರಾಧರ್ಷಂ ದುರನ್ವಯಮ್|
14050017c ತತ್ಸರ್ವಂ ತಪಸಾ ಸಾಧ್ಯಂ ತಪೋ ಹಿ ದುರತಿಕ್ರಮಮ್||
ಹೊಂದಲು ಅಸಾಧ್ಯವಾಗಿರುವುದನ್ನು, ಅತಿಕಷ್ಟವಾಗಿರುವುದನ್ನು, ಎದುರಿಸಲು ಅಸಾಧ್ಯವಾದುದನ್ನು, ಯಾವುದರೊಂದಿಗೆ ಸಂಬಂಧವನ್ನು ಹೊಂದಲು ಕಷ್ಟಕರವಾಗಿರುವುದೋ ಅವೆಲ್ಲವನ್ನೂ ತಪಸ್ಸಿನಿಂದ ಸಾಧಿಸಿಕೊಳ್ಳಬಹುದು. ಏಕೆಂದರೆ ತಪಸ್ಸನ್ನು ಅತಿಕ್ರಮಿಸಲು ಸಾಧ್ಯವಿಲ್ಲ.
14050018a ಸುರಾಪೋ ಬ್ರಹ್ಮಹಾ ಸ್ತೇಯೀ ಭ್ರೂಣಹಾ ಗುರುತಲ್ಪಗಃ|
14050018c ತಪಸೈವ ಸುತಪ್ತೇನ ಮುಚ್ಯಂತೇ ಕಿಲ್ಬಿಷಾತ್ತತಃ||
ಸುರೆಯನ್ನು ಕುಡಿದವನು, ಬ್ರಹ್ಮಹತ್ಯೆಯನ್ನು ಮಾಡಿದವನು, ಕಳ್ಳನು, ಭ್ರೂಣಹತ್ಯೆಯನ್ನು ಮಾಡಿದವನು ಮತ್ತು ಗುರುಪತ್ನಿಯೊಡನೆ ಸಮಾಗಮ ಮಾಡಿದವನು ಉತ್ತಮ ತಪಸ್ಸನ್ನು ತಪಿಸುವುದರಿಂದ ಪಾಪಗಳಿಂದ ಮುಕ್ತರಾಗುತ್ತಾರೆ.
14050019a ಮನುಷ್ಯಾಃ ಪಿತರೋ ದೇವಾಃ ಪಶವೋ ಮೃಗಪಕ್ಷಿಣಃ|
14050019c ಯಾನಿ ಚಾನ್ಯಾನಿ ಭೂತಾನಿ ತ್ರಸಾನಿ ಸ್ಥಾವರಾಣಿ ಚ||
14050020a ತಪಃಪರಾಯಣಾ ನಿತ್ಯಂ ಸಿಧ್ಯಂತೇ ತಪಸಾ ಸದಾ|
14050020c ತಥೈವ ತಪಸಾ ದೇವಾ ಮಹಾಭಾಗಾ ದಿವಂ ಗತಾಃ||
ಮನುಷ್ಯರು, ಪಿತೃಗಳು, ದೇವತೆಗಳು, ಪಶುಗಳು, ಮೃಗ-ಪಕ್ಷಿಗಳು ಮತ್ತು ಇರುವ ಅನ್ಯ ಸ್ಥಾವರ-ಜಂಗಮಗಳೂ ಕೂಡ ನಿತ್ಯವೂ ತಪಃಪರಾಯಣರಾಗಿದ್ದರೆ ತಪಸ್ಸಿನಿಂದಲೇ ಸಿದ್ಧಿಯನ್ನು ಪಡೆಯುತ್ತಾರೆ. ಮಹಾಭಾಗ ದೇವತೆಗಳೂ ಕೂಡ ತಪಸ್ಸಿನಿಂದಲೇ ಸ್ವರ್ಗಕ್ಕೆ ಹೋದರು.
14050021a ಆಶೀರ್ಯುಕ್ತಾನಿ ಕರ್ಮಾಣಿ ಕುರ್ವತೇ ಯೇ ತ್ವತಂದ್ರಿತಾಃ|
14050021c ಅಹಂಕಾರಸಮಾಯುಕ್ತಾಸ್ತೇ ಸಕಾಶೇ ಪ್ರಜಾಪತೇಃ||
ಆಲಸ್ಯವಿಲ್ಲದೇ ಅಹಂಕಾರ ಸಮಾಯುಕ್ತರಾಗಿ ಕರ್ಮಗಳನ್ನು ಶ್ರದ್ಧೆಯಿಂದ ಮಾಡುವವರು ಪ್ರಜಾಪತಿಯ ಬಳಿ ಹೋಗುತ್ತಾರೆ.
14050022a ಧ್ಯಾನಯೋಗೇನ ಶುದ್ಧೇನ ನಿರ್ಮಮಾ ನಿರಹಂಕೃತಾಃ|
14050022c ಪ್ರಾಪ್ನುವಂತಿ ಮಹಾತ್ಮಾನೋ ಮಹಾಂತಂ ಲೋಕಮುತ್ತಮಮ್||
ಶುದ್ಧವಾದ ಧ್ಯಾನಯೋಗದಿಂದ ಮಮಕಾರ-ಅಹಂಕಾರಗಳಿಲ್ಲದೇ ಮಹಾತ್ಮರು ಮಹಾಂತವಾದ ಉತ್ತಮ ಲೋಕಗಳನ್ನು ಪಡೆಯುತ್ತಾರೆ.
14050023a ಧ್ಯಾನಯೋಗಾದುಪಾಗಮ್ಯ ಪ್ರಸನ್ನಮತಯಃ ಸದಾ|
14050023c ಸುಖೋಪಚಯಮವ್ಯಕ್ತಂ ಪ್ರವಿಶಂತ್ಯಾತ್ಮವತ್ತಯಾ||
ಧ್ಯಾನಯೋಗದಲ್ಲಿದ್ದುಕೊಂಡು ಸದಾ ಪ್ರಸನ್ನಮನಸ್ಕರಾಗಿರುವವರು ಸುಖದ ರಾಶಿಯಾಗಿರುವ ಅವ್ಯಕ್ತ ಪರಮಾತ್ಮನನ್ನು ಪ್ರವೇಶಿಸುತ್ತಾರೆ.
14050024a ಧ್ಯಾನಯೋಗಾದುಪಾಗಮ್ಯ ನಿರ್ಮಮಾ ನಿರಹಂಕೃತಾಃ|
14050024c ಅವ್ಯಕ್ತಂ ಪ್ರವಿಶಂತೀಹ ಮಹಾಂತಂ ಲೋಕಮುತ್ತಮಮ್||
ಧ್ಯಾನಯೋಗದಲ್ಲಿದ್ದುಕೊಂಡು ಮಮಕಾರ-ಅಹಂಕಾರಗಳಿಲ್ಲದೇ ಕಾರ್ಯಮಾಡುವವರು ಅವ್ಯಕ್ತವೂ ಮಹಾಂತವೂ ಆದ ಉತ್ತಮ ಲೋಕವನ್ನು ಪ್ರವೇಶಿಸುತ್ತಾರೆ.
14050025a ಅವ್ಯಕ್ತಾದೇವ ಸಂಭೂತಃ ಸಮಯಜ್ಞೋ ಗತಃ ಪುನಃ|
14050025c ತಮೋರಜೋಭ್ಯಾಂ ನಿರ್ಮುಕ್ತಃ ಸತ್ತ್ವಮಾಸ್ಥಾಯ ಕೇವಲಮ್||
ಪುನಃ ಅವ್ಯಕ್ತದಿಂದಲೇ ಹುಟ್ಟಿ ಕೇವಲ ಸತ್ಯಗುಣವನ್ನಾಶ್ರಯಿಸಿ ಸಮಯಜ್ಞನಾಗಿದ್ದುಕೊಂಡು ತಮ ಮತ್ತು ರಜೋಗುಣಗಳಿಂದ ನಿರ್ಮುಕ್ತನಾಗುತ್ತಾನೆ.
14050026a ವಿಮುಕ್ತಃ ಸರ್ವಪಾಪೇಭ್ಯಃ ಸರ್ವಂ ತ್ಯಜತಿ ನಿಷ್ಕಲಃ|
14050026c ಕ್ಷೇತ್ರಜ್ಞ ಇತಿ ತಂ ವಿದ್ಯಾದ್ಯಸ್ತಂ ವೇದ ಸ ವೇದವಿತ್||
ಸರ್ವಪಾಪಗಳಿಂದ ವಿಮುಕ್ತನಾಗಿ ಸರ್ವ ವಿಕಾರಗಳನ್ನೂ ತ್ಯಜಿಸಿದವನನ್ನೇ ಕ್ಷೇತ್ರಜ್ಞನೆಂದು ತಿಳಿಯಬೇಕು. ಆ ಕ್ಷೇತ್ರಜ್ಞನನ್ನು ತಿಳಿದವನೇ ವೇದವಿದು ಎಂದು ತಿಳಿಯಬೇಕು.
14050027a ಚಿತ್ತಂ ಚಿತ್ತಾದುಪಾಗಮ್ಯ ಮುನಿರಾಸೀತ ಸಂಯತಃ|
14050027c ಯಚ್ಚಿತ್ತಸ್ತನ್ಮನಾ ಭೂತ್ವಾ ಗುಹ್ಯಮೇತತ್ಸನಾತನಮ್||
ಮುನಿಯು ಚಿತ್ತವನ್ನು ಚಿತ್ತದಿಂದ ಪಡೆದುಕೊಂಡು ಅದರಲ್ಲಿಯೇ ಸಂಲಗ್ನನಾಗಿರುತ್ತಾನೆ. ಚಿತ್ತವು ಯಾವುದರಲ್ಲಿ ಇದೆಯೋ ಅದೇ ರೂಪವನ್ನು ಅದು ಪಡೆದುಕೊಳ್ಳುತ್ತದೆ. ಇದು ಸನಾತನ ರಹಸ್ಯವು.
14050028a ಅವ್ಯಕ್ತಾದಿ ವಿಶೇಷಾಂತಮವಿದ್ಯಾಲಕ್ಷಣಂ ಸ್ಮೃತಮ್|
14050028c ನಿಬೋಧತ ಯಥಾ ಹೀದಂ ಗುಣೈರ್ಲಕ್ಷಣಮಿತ್ಯುತ||
ಅವ್ಯಕ್ತ ಪ್ರಕೃತಿಯಿಂದ ಹಿಡಿದು ಮಹಾಭೂತಾದಿ ಹದಿನಾರು ತತ್ತ್ವಗಳನ್ನೂ ಅವಿದ್ಯಾಲಕ್ಷಣವೆನ್ನುತ್ತಾರೆ. ಇವುಗಳಲ್ಲಿ ಗುಣಗಳು ಸೇರಿಕೊಂಡಿರುವುದರಿಂದಲೇ ಇವನ್ನು ಹಾಗೆ ಕರೆಯುತ್ತಾರೆಂದು ತಿಳಿಯಿರಿ.
14050029a ದ್ವ್ಯಕ್ಷರಸ್ತು ಭವೇನ್ಮೃತ್ಯುಸ್ತ್ರ್ಯಕ್ಷರಂ ಬ್ರಹ್ಮ ಶಾಶ್ವತಮ್|
14050029c ಮಮೇತಿ ಚ ಭವೇನ್ಮೃತ್ಯುರ್ನ ಮಮೇತಿ ಚ ಶಾಶ್ವತಮ್||
ಎರಡು ಅಕ್ಷರಗಳು ಮೃತ್ಯುವಾಗುತ್ತವೆ. ಮೂರು ಅಕ್ಷರಗಳು ಶಾಶ್ವತ ಬ್ರಹ್ಮವಾಗುತ್ತದೆ. ’ಮಮ’ ಎನ್ನುವುದು ಮೃತ್ಯುವಾಗುತ್ತದೆ. ’ನ ಮಮ’ ಎನ್ನುವುದು ಶಾಶ್ವತವಾಗಿರುವುದು.
14050030a ಕರ್ಮ ಕೇ ಚಿತ್ಪ್ರಶಂಸಂತಿ ಮಂದಬುದ್ಧಿತರಾ ನರಾಃ|
14050030c ಯೇ ತು ಬುದ್ಧಾ ಮಹಾತ್ಮಾನೋ ನ ಪ್ರಶಂಸಂತಿ ಕರ್ಮ ತೇ||
ಕೆಲವು ಮಂದಬುದ್ಧಿ ನರರು ಕಾಮ್ಯ ಕರ್ಮವನ್ನೇ ಪ್ರಶಂಸಿಸುತ್ತಾರೆ. ಆದರೆ ತಿಳಿದ ಮಹಾತ್ಮರು ಕಾಮ್ಯ ಕರ್ಮವನ್ನು ಪ್ರಶಂಸಿಸುವುದಿಲ್ಲ.
14050031a ಕರ್ಮಣಾ ಜಾಯತೇ ಜಂತುರ್ಮೂರ್ತಿಮಾನ್ ಷೋಡಶಾತ್ಮಕಃ|
14050031c ಪುರುಷಂ ಸೃಜತೇಽವಿದ್ಯಾ ಅಗ್ರಾಹ್ಯಮಮೃತಾಶಿನಮ್||
ಕಾಮ್ಯ ಕರ್ಮದಿಂದ ಜಂತುವು ಹದಿನಾರು ವಿಕಾರಗಳಿಂದ ಕೂಡಿದ ಸ್ಥೂಲಶರೀರವನ್ನು ಧರಿಸಿ ಜನ್ಮತಾಳುತ್ತಾನೆ. ಅವಿದ್ಯೆಯು ಪುರುಷನನ್ನು ಸೃಷ್ಟಿಸುತ್ತದೆ. ಈ ಅವಿದ್ಯೆಯು ಅಮೃತಸೇವಿಗಳಾದ ದೇವತೆಗಳನ್ನು ಹಿಡಿಯುವುದಿಲ್ಲ.
14050032a ತಸ್ಮಾತ್ಕರ್ಮಸು ನಿಃಸ್ನೇಹಾ ಯೇ ಕೇ ಚಿತ್ಪಾರದರ್ಶಿನಃ|
14050032c ವಿದ್ಯಾಮಯೋಽಯಂ ಪುರುಷೋ ನ ತು ಕರ್ಮಮಯಃ ಸ್ಮೃತಃ||
ಆದುದರಿಂದ ಕೆಲವು ಪಾರದರ್ಶಿಗಳು ಕರ್ಮಗಳಲ್ಲಿ ನಿಃಸ್ನೇಹಾಭಾವದಿಂದಿರುತ್ತಾರೆ. ಈ ಪುರುಷನು ವಿದ್ಯಾಮಯನೇ ಹೊರತು ಕರ್ಮಮಯನಲ್ಲ ಎಂದು ಹೇಳುತ್ತಾರೆ.
14050033a ಅಪೂರ್ವಮಮೃತಂ ನಿತ್ಯಂ ಯ ಏನಮವಿಚಾರಿಣಮ್|
14050033c ಯ ಏನಂ ವಿಂದತೇಽತ್ಮಾನಮಗ್ರಾಹ್ಯಮಮೃತಾಶಿನಮ್|
14050033e ಅಗ್ರಾಹ್ಯೋಽಮೃತೋ ಭವತಿ ಯ ಏಭಿಃ ಕಾರಣೈರ್ಧ್ರುವಃ||
ಅನಾದಿಯೂ, ಅಮೃತನೂ, ನಿತ್ಯನೂ, ಅವಿಚಾರಿಣಿಯೂ ಆದ ಆತ್ಮವನ್ನು ಹಿಡಿದುಕೊಂಡವನು, ಈ ಕಾರಣಗಳಿಂದ ತಾನೂ ಕೂಡ ಇಂದ್ರಿಯಾತೀತನೂ, ಅಮೃತನೂ, ನಿತ್ಯನೂ ಆಗಿಬಿಡುತ್ತಾನೆ.
14050034a ಅಪೋಹ್ಯ ಸರ್ವಸಂಕಲ್ಪಾನ್ಸಂಯಮ್ಯಾತ್ಮಾನಮಾತ್ಮನಿ|
14050034c ಸ ತದ್ಬ್ರಹ್ಮ ಶುಭಂ ವೇತ್ತಿ ಯಸ್ಮಾದ್ಭೂಯೋ ನ ವಿದ್ಯತೇ||
ಸರ್ವಸಂಕಲ್ಪಗಳನ್ನೂ ತೊರೆದು ಆತ್ಮನನ್ನು ಆತ್ಮನಲ್ಲಿಯೇ ತೊಡಗಿಸಿಕೊಂಡಿರುವವನು ಯಾವುದನ್ನು ತಿಳಿದರೆ ಬೇರೆ ಯಾವುದನ್ನೂ ತಿಳಿಯಬೇಕಾಗಿಲ್ಲವೋ ಆ ಶುಭ ಬ್ರಹ್ಮನನ್ನು ತಿಳಿದುಕೊಳ್ಳುತ್ತಾನೆ.
14050035a ಪ್ರಸಾದೇನೈವ ಸತ್ತ್ವಸ್ಯ ಪ್ರಸಾದಂ ಸಮವಾಪ್ನುಯಾತ್|
14050035c ಲಕ್ಷಣಂ ಹಿ ಪ್ರಸಾದಸ್ಯ ಯಥಾ ಸ್ಯಾತ್ಸ್ವಪ್ನದರ್ಶನಮ್||
ಸತ್ತ್ವದ ಪ್ರಸನ್ನತೆಯಿಂದಲೇ ಪ್ರಸಾದವನ್ನು ಪಡೆಯುತ್ತಾನೆ. ಸ್ವಪ್ನದರ್ಶನದಂತೆ ಧ್ಯಾನಯೋಗದಲ್ಲಿರುವಾಗ ಆತ್ಮದರ್ಶನವಾಗುವುದೇ ಈ ಪ್ರಸಾದದ ಲಕ್ಷಣವು.
14050036a ಗತಿರೇಷಾ ತು ಮುಕ್ತಾನಾಂ ಯೇ ಜ್ಞಾನಪರಿನಿಷ್ಠಿತಾಃ|
14050036c ಪ್ರವೃತ್ತಯಶ್ಚ ಯಾಃ ಸರ್ವಾಃ ಪಶ್ಯಂತಿ ಪರಿಣಾಮಜಾಃ||
ಜ್ಞಾನಪರಿನಿಷ್ಠರಾದ ಮುಕ್ತರ ಮಾರ್ಗವೇ ಇದು. ಸರ್ವ ಪ್ರವೃತ್ತಿಗಳಲ್ಲಿ ಅವರು ಪರಿಣಾಮಗಳು ಹುಟ್ಟುವುದನ್ನು ಕಾಣುತ್ತಾರೆ.
14050037a ಏಷಾ ಗತಿರಸಕ್ತಾನಾಮೇಷ ಧರ್ಮಃ ಸನಾತನಃ|
14050037c ಏಷಾ ಜ್ಞಾನವತಾಂ ಪ್ರಾಪ್ತಿರೇತದ್ವೃತ್ತಮನಿಂದಿತಮ್||
ಇದೇ ಅಸಕ್ತರು ಹೋಗುವ ಮಾರ್ಗ. ಇದೇ ಸನಾತನ ಧರ್ಮ. ಇದು ಜ್ಞಾನವಂತರು ಹೊಂದುವ ಮಾರ್ಗ. ಇದು ಅನಿಂದಿತವಾದ ನಡತೆ.
14050038a ಸಮೇನ ಸರ್ವಭೂತೇಷು ನಿಃಸ್ಪೃಹೇಣ ನಿರಾಶಿಷಾ|
14050038c ಶಕ್ಯಾ ಗತಿರಿಯಂ ಗಂತುಂ ಸರ್ವತ್ರ ಸಮದರ್ಶಿನಾ||
ಸರ್ವಭೂತಗಳಲ್ಲಿ ಸಮನಾಗಿದ್ದುಕೊಂಡು ನಿಃಸ್ಪೃಹನೂ, ಆಸೆಗಳಿಲ್ಲದವನೂ, ಸರ್ವತ್ರ ಸಮದರ್ಶಿನಿಯೂ ಆದವನು ಮಾತ್ರ ಈ ಗತಿಯನ್ನು ಪಡೆಯಲು ಶಕ್ಯ.
14050039a ಏತದ್ವಃ ಸರ್ವಮಾಖ್ಯಾತಂ ಮಯಾ ವಿಪ್ರರ್ಷಿಸತ್ತಮಾಃ|
14050039c ಏವಮಾಚರತ ಕ್ಷಿಪ್ರಂ ತತಃ ಸಿದ್ಧಿಮವಾಪ್ಸ್ಯಥ||
ವಿಪ್ರರ್ಷಿಸತ್ತಮರೇ! ಇವೆಲ್ಲವನ್ನೂ ನಾನು ನಿಮಗೆ ಹೇಳಿದ್ದೇನೆ. ಕ್ಷಿಪ್ರವಾಗಿ ಇವನ್ನು ಆಚರಣೆಗೆ ತನ್ನಿ. ಆಗ ನಿಮಗೆ ಸಿದ್ಧಿಯು ದೊರೆಯುತ್ತದೆ.””
14050040 ಗುರುರುವಾಚ
14050040a ಇತ್ಯುಕ್ತಾಸ್ತೇ ತು ಮುನಯೋ ಬ್ರಹ್ಮಣಾ ಗುರುಣಾ ತಥಾ|
14050040c ಕೃತವಂತೋ ಮಹಾತ್ಮಾನಸ್ತತೋ ಲೋಕಾನವಾಪ್ನುವನ್||
ಗುರುವು ಹೇಳಿದನು: “ಗುರು ಬ್ರಹ್ಮನು ಮುನಿಗಳಿಗೆ ಹೀಗೆ ಹೇಳಲು ಆ ಮಹಾತ್ಮರು ಅವನು ಹೇಳಿದಂತೆಯೇ ಮಾಡಿ ಉತ್ತಮ ಲೋಕಗಳನ್ನು ಪಡೆದರು.
14050041a ತ್ವಮಪ್ಯೇತನ್ಮಹಾಭಾಗ ಯಥೋಕ್ತಂ ಬ್ರಹ್ಮಣೋ ವಚಃ|
14050041c ಸಮ್ಯಗಾಚರ ಶುದ್ಧಾತ್ಮಂಸ್ತತಃ ಸಿದ್ಧಿಮವಾಪ್ಸ್ಯಸಿ||
ಮಹಾಭಾಗ! ಶುದ್ಧಾತ್ಮನ್! ನಾನು ಹೇಳಿರುವ ಬ್ರಹ್ಮನ ವಚನವನ್ನು ಶ್ರದ್ಧೆಯಿಂದ ಆಚರಿಸು. ನಿನಗೆ ಸಿದ್ಧಿಯುಂಟಾಗುತ್ತದೆ.””
14050042 ವಾಸುದೇವ ಉವಾಚ
14050042a ಇತ್ಯುಕ್ತಃ ಸ ತದಾ ಶಿಷ್ಯೋ ಗುರುಣಾ ಧರ್ಮಮುತ್ತಮಮ್|
14050042c ಚಕಾರ ಸರ್ವಂ ಕೌಂತೇಯ ತತೋ ಮೋಕ್ಷಮವಾಪ್ತವಾನ್||
ವಾಸುದೇವನು ಹೇಳಿದನು: “ಕೌಂತೇಯ! ಗುರುವು ಈ ಉತ್ತಮ ಧರ್ಮವನ್ನು ಶಿಷ್ಯನಿಗೆ ಹೇಳಲು, ಶಿಷ್ಯನು ಅವೆಲ್ಲವನ್ನೂ ಮಾಡಿ ಮೋಕ್ಷವನ್ನು ಪಡೆದನು.
14050043a ಕೃತಕೃತ್ಯಶ್ಚ ಸ ತದಾ ಶಿಷ್ಯಃ ಕುರುಕುಲೋದ್ವಹ|
14050043c ತತ್ಪದಂ ಸಮನುಪ್ರಾಪ್ತೋ ಯತ್ರ ಗತ್ವಾ ನ ಶೋಚತಿ||
ಕುರುಕುಲೋದ್ವಹ! ಆ ಶಿಷ್ಯನು ಕೃತಕೃತ್ಯನಾಗಿ ಎಲ್ಲಿಗೆ ಹೋದರೆ ಯಾರೂ ಶೋಕಿಸಬೇಕಾಗಿಲ್ಲವೋ ಅಂತಹ ಬ್ರಹ್ಮಪದವನ್ನು ಪಡೆದನು.”
14050044 ಅರ್ಜುನ ಉವಾಚ
14050044a ಕೋ ನ್ವಸೌ ಬ್ರಾಹ್ಮಣಃ ಕೃಷ್ಣ ಕಶ್ಚ ಶಿಷ್ಯೋ ಜನಾರ್ದನ|
14050044c ಶ್ರೋತವ್ಯಂ ಚೇನ್ಮಯೈತದ್ವೈ ತತ್ತ್ವಮಾಚಕ್ಷ್ವ ಮೇ ವಿಭೋ||
ಅರ್ಜುನನು ಹೇಳಿದನು: “ಕೃಷ್ಣ! ಜನಾರ್ದನ! ವಿಭೋ! ಆ ಬ್ರಾಹ್ಮಣನು ಯಾರಾಗಿದ್ದನು? ಅವನ ಶಿಷ್ಯನು ಯಾರಾಗಿದ್ದನು? ನಾನು ಕೇಳುವ ಈ ಪ್ರಶ್ನೆಗೆ ಉತ್ತರಿಸು!”
14050045 ವಾಸುದೇವ ಉವಾಚ
14050045a ಅಹಂ ಗುರುರ್ಮಹಾಬಾಹೋ ಮನಃ ಶಿಷ್ಯಂ ಚ ವಿದ್ಧಿ ಮೇ|
14050045c ತ್ವತ್ಪ್ರೀತ್ಯಾ ಗುಹ್ಯಮೇತಚ್ಚ ಕಥಿತಂ ಮೇ ಧನಂಜಯ||
ವಾಸುದೇವನು ಹೇಳಿದನು: “ಧನಂಜಯ! ಮಹಾಬಾಹೋ! ನಾನೇ ಆ ಗುರುವು. ನನ್ನ ಮನಸ್ಸೇ ಆ ಶಿಷ್ಯ ಎಂದು ತಿಳಿ. ನಿನ್ನ ಮೇಲಿನ ಪ್ರೀತಿಯಿಂದ ಈ ರಹಸ್ಯವನ್ನು ನಿನಗೆ ಹೇಳಿದ್ದೇನೆ.
14050046a ಮಯಿ ಚೇದಸ್ತಿ ತೇ ಪ್ರೀತಿರ್ನಿತ್ಯಂ ಕುರುಕುಲೋದ್ವಹ|
14050046c ಅಧ್ಯಾತ್ಮಮೇತಚ್ಚ್ರುತ್ವಾ ತ್ವಂ ಸಮ್ಯಗಾಚರ ಸುವ್ರತ||
ಕುರುಕುಲೋದ್ವಹ! ಸುವ್ರತ! ನಿನಗೆ ನನ್ನ ಮೇಲೆ ಪ್ರೀತಿಯಿರುವುದಾದರೆ ಕೇಳಿದ ಈ ಆಧ್ಯಾತ್ಮವಿದ್ಯೆಯನ್ನು ನಿತ್ಯವೂ ಚೆನ್ನಾಗಿ ಆಚರಿಸು!
14050047a ತತಸ್ತ್ವಂ ಸಮ್ಯಗಾಚೀರ್ಣೇ ಧರ್ಮೇಽಸ್ಮಿನ್ಕುರುನಂದನ|
14050047c ಸರ್ವಪಾಪವಿಶುದ್ಧಾತ್ಮಾ ಮೋಕ್ಷಂ ಪ್ರಾಪ್ಸ್ಯಸಿ ಕೇವಲಮ್||
ಕುರುನಂದನ! ಈ ಧರ್ಮವನ್ನು ನೀನು ಉತ್ತಮವಾಗಿ ಆಚರಿಸಿದ್ದೇ ಆದರೆ ಸರ್ವಪಾಪಗಳಿಂದಲೂ ವಿಶುದ್ಧಾತ್ಮನಾಗಿ ಕೇವಲ ಮೋಕ್ಷವನ್ನು ಹೊಂದುತ್ತೀಯೆ.
14050048a ಪೂರ್ವಮಪ್ಯೇತದೇವೋಕ್ತಂ ಯುದ್ಧಕಾಲ ಉಪಸ್ಥಿತೇ|
14050048c ಮಯಾ ತವ ಮಹಾಬಾಹೋ ತಸ್ಮಾದತ್ರ ಮನಃ ಕುರು||
ಮಹಾಬಾಹೋ! ಹಿಂದೆ ಯುದ್ಧಕಾಲವು ಬಂದಿದ್ದಾಗ ನಿನಗೆ ಇದನ್ನೇ ಉಪದೇಶಿಸಿದ್ದೆನು. ಆದುದರಿಂದ ಈಗಲಾದರೂ ಇದನ್ನು ಮನನ ಮಾಡಿಕೋ!
14050049a ಮಯಾ ತು ಭರತಶ್ರೇಷ್ಠ ಚಿರದೃಷ್ಟಃ ಪಿತಾ ವಿಭೋ|
14050049c ತಮಹಂ ದ್ರಷ್ಟುಮಿಚ್ಚಾಮಿ ಸಂಮತೇ ತವ ಫಲ್ಗುನ||
ಭರತಶ್ರೇಷ್ಠ! ವಿಭೋ! ಫಲ್ಗುನ! ನನ್ನ ತಂದೆಯನ್ನು ನೋಡಿ ಬಹಳ ಸಮಯವಾಯಿತು. ನಿನ್ನ ಸಮ್ಮತಿಯಿದ್ದರೆ ನಾನು ಅವನನ್ನು ಕಾಣಲು ಬಯಸುತ್ತೇನೆ.””
14050050 ವೈಶಂಪಾಯನ ಉವಾಚ
14050050a ಇತ್ಯುಕ್ತವಚನಂ ಕೃಷ್ಣಂ ಪ್ರತ್ಯುವಾಚ ಧನಂಜಯಃ|
14050050c ಗಚ್ಚಾವೋ ನಗರಂ ಕೃಷ್ಣ ಗಜಸಾಹ್ವಯಮದ್ಯ ವೈ||
ವೈಶಂಪಾಯನನು ಹೇಳಿದನು: “ಕೃಷ್ಣನು ಹೀಗೆ ಹೇಳಲು ಧನಂಜಯನು ಉತ್ತರಿಸಿದನು: “ಕೃಷ್ಣ! ಗಜಸಾಹ್ವಯ ನಗರಕ್ಕೆ ಇಂದೇ ಹೋಗೋಣ!
14050051a ಸಮೇತ್ಯ ತತ್ರ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಮ್|
14050051c ಸಮನುಜ್ಞಾಪ್ಯ ದುರ್ಧರ್ಷಂ ಸ್ವಾಂ ಪುರೀಂ ಯಾತುಮರ್ಹಸಿ||
ಅಲ್ಲಿ ರಾಜಾ ಧರ್ಮಾತ್ಮ ಯುಧಿಷ್ಠಿರನನ್ನು ಸಂಧಿಸಿ, ಆ ದುರ್ಧರ್ಷನ ಅನುಜ್ಞೆಯನ್ನು ಪಡೆದು ನಿನ್ನ ಪುರಿಗೆ ನೀನು ಪ್ರಯಾಣಿಸಬಹುದು!””
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಐವತ್ತನೇ ಅಧ್ಯಾಯವು.