ಅಶ್ವಮೇಧಿಕ ಪರ್ವ
೫
ವ್ಯಾಸನು ಸಂವರ್ತ-ಮರುತ್ತರ ಕಥೆಯನ್ನು ಮುಂದುವರೆಸಿದುದು (೧-೨೬).
14005001 ಯುಧಿಷ್ಠಿರ ಉವಾಚ
14005001a ಕಥಂವೀರ್ಯಃ ಸಮಭವತ್ಸ ರಾಜಾ ವದತಾಂ ವರಃ|
14005001c ಕಥಂ ಚ ಜಾತರೂಪೇಣ ಸಮಯುಜ್ಯತ ಸ ದ್ವಿಜ||
ಯುಧಿಷ್ಠಿರನು ಹೇಳಿದನು: “ಮಾತನಾಡುವವರಲ್ಲಿ ಶ್ರೇಷ್ಠನೇ! ದ್ವಿಜ! ಆ ರಾಜನು ಎಷ್ಟು ವೀರ್ಯವಂತನಾಗಿದ್ದನು? ಅವನಿಗೆ ಅಷ್ಟೊಂದು ಚಿನ್ನವು ಹೇಗೆ ದೊರೆಯಿತು?
14005002a ಕ್ವ ಚ ತತ್ಸಾಂಪ್ರತಂ ದ್ರವ್ಯಂ ಭಗವನ್ನವತಿಷ್ಠತೇ|
14005002c ಕಥಂ ಚ ಶಕ್ಯಮಸ್ಮಾಭಿಸ್ತದವಾಪ್ತುಂ ತಪೋಧನ||
ಭಗವನ್! ಆ ದ್ರವ್ಯವು ಈಗ ಎಲ್ಲಿದೆ? ತಪೋಧನ! ಅದನ್ನು ನಾವು ಹೇಗೆ ಪಡೆದುಕೊಳ್ಳಬಹುದು?”
14005003 ವ್ಯಾಸ ಉವಾಚ
14005003a ಅಸುರಾಶ್ಚೈವ ದೇವಾಶ್ಚ ದಕ್ಷಸ್ಯಾಸನ್ಪ್ರಜಾಪತೇಃ|
14005003c ಅಪತ್ಯಂ ಬಹುಲಂ ತಾತ ತೇಽಸ್ಪರ್ಧಂತ ಪರಸ್ಪರಮ್||
ವ್ಯಾಸನು ಹೇಳಿದನು: “ಮಗೂ! ಪ್ರಜಾಪತಿ ದಕ್ಷನಿಗೆ ಅಸುರರು ಮತ್ತು ದೇವತೆಗಳೆಂಬ ಅನೇಕ ಮಕ್ಕಳಿದ್ದರು. ಅವರು ಪರಸ್ಪರ ಸ್ಪರ್ಧಿಸುತ್ತಲೇ ಇದ್ದರು.
14005004a ತಥೈವಾಂಗಿರಸಃ ಪುತ್ರೌ ವ್ರತತುಲ್ಯೌ ಬಭೂವತುಃ|
14005004c ಬೃಹಸ್ಪತಿರ್ಬೃಹತ್ತೇಜಾಃ ಸಂವರ್ತಶ್ಚ ತಪೋಧನಃ||
ಹಾಗೆಯೇ ಅಂಗಿರಸನಿಗೆ ವ್ರತದಲ್ಲಿ ಸರಿಸಮರಾದ ಪುತ್ರರಿಬ್ಬರಿದ್ದರು: ಮಹಾತೇಜಸ್ವೀ ಬೃಹಸ್ಪತಿ ಮತ್ತು ತಪೋಧನ ಸಂವರ್ತ.
14005005a ತಾವಪಿ ಸ್ಪರ್ಧಿನೌ ರಾಜನ್ಪೃಥಗಾಸ್ತಾಂ ಪರಸ್ಪರಮ್|
14005005c ಬೃಹಸ್ಪತಿಶ್ಚ ಸಂವರ್ತಂ ಬಾಧತೇ ಸ್ಮ ಪುನಃ ಪುನಃ||
ರಾಜನ್! ಬೇರೆ ಬೇರೆ ಇದ್ದ ಅವರಿಬ್ಬರೂ ಸದಾ ಪರಸ್ಪರರಲ್ಲಿ ಸ್ಪರ್ಧಿಸುತ್ತಲೇ ಇದ್ದರು. ಬೃಹಸ್ಪತಿಯಾದರೋ ಸಂವರ್ತನನ್ನು ಪುನಃ ಪುನಃ ಬಾಧಿಸುತ್ತಿದ್ದನು.
14005006a ಸ ಬಾಧ್ಯಮಾನಃ ಸತತಂ ಭ್ರಾತ್ರಾ ಜ್ಯೇಷ್ಠೇನ ಭಾರತ|
14005006c ಅರ್ಥಾನುತ್ಸೃಜ್ಯ ದಿಗ್ವಾಸಾ ವನವಾಸಮರೋಚಯತ್||
ಭಾರತ! ಹಿರಿಯ ಅಣ್ಣನಿಂದ ಸತತವೂ ಪೀಡಿಸಲ್ಪಡುತ್ತಿದ್ದ ಸಂವರ್ತನು ಸಂಪತ್ತನ್ನು ತೊರೆದು ದಿಗಂಬರನಾಗಿ ವನವಾಸವನ್ನು ಬಯಸಿದನು.
14005007a ವಾಸವೋಽಪ್ಯಸುರಾನ್ಸರ್ವಾನ್ನಿರ್ಜಿತ್ಯ ಚ ನಿಹತ್ಯ ಚ|
14005007c ಇಂದ್ರತ್ವಂ ಪ್ರಾಪ್ಯ ಲೋಕೇಷು ತತೋ ವವ್ರೇ ಪುರೋಹಿತಮ್|
14005007e ಪುತ್ರಮಂಗಿರಸೋ ಜ್ಯೇಷ್ಠಂ ವಿಪ್ರಶ್ರೇಷ್ಠಂ ಬೃಹಸ್ಪತಿಮ್||
ವಾಸವನು ಎಲ್ಲ ಅಸುರರನ್ನೂ ಸಂಹರಿಸಿ ಗೆದ್ದು ಲೋಕದ ಇಂದ್ರತ್ವವನ್ನು ಪಡೆದುಕೊಳ್ಳಲು ಅವನು ಅಂಗಿರಸನ ಜ್ಯೇಷ್ಠ ಪುತ್ರ ವಿಪ್ರಶ್ರೇಷ್ಠ ಬೃಹಸ್ಪತಿಯನ್ನು ಪುರೋಹಿತನನ್ನಾಗಿ ಆರಿಸಿಕೊಂಡನು.
14005008a ಯಾಜ್ಯಸ್ತ್ವಂಗಿರಸಃ ಪೂರ್ವಮಾಸೀದ್ರಾಜಾ ಕರಂಧಮಃ|
14005008c ವೀರ್ಯೇಣಾಪ್ರತಿಮೋ ಲೋಕೇ ವೃತ್ತೇನ ಚ ಬಲೇನ ಚ|
14005008e ಶತಕ್ರತುರಿವೌಜಸ್ವೀ ಧರ್ಮಾತ್ಮಾ ಸಂಶಿತವ್ರತಃ||
ಹಿಂದೆ ವೀರ್ಯ-ನಡತೆ-ಬಲಗಳಲ್ಲಿ ಲೋಕಗಳಲ್ಲಿಯೇ ಅಪ್ರತಿಮನಾಗಿದ್ದ, ಶತ್ರುಕ್ರತುವಿನಂತೆ ಓಜಸ್ವಿಯೂ, ಧರ್ಮಾತ್ಮನೂ, ಸಂಶಿತವ್ರತನೂ ಆಗಿದ್ದ ರಾಜಾ ಕರಂಧಮನು ಆಂಗಿರಸನ ಮೂಲಕ ಯಜ್ಞಗಳನ್ನು ನಡೆಸಿದ್ದನು.
14005009a ವಾಹನಂ ಯಸ್ಯ ಯೋಧಾಶ್ಚ ದ್ರವ್ಯಾಣಿ ವಿವಿಧಾನಿ ಚ|
14005009c ಧ್ಯಾನಾದೇವಾಭವದ್ರಾಜನ್ಮುಖವಾತೇನ ಸರ್ವಶಃ||
ರಾಜನ್! ಕರಂಧಮನು ಧ್ಯಾನಿಸಿದೊಡನೆಯೇ ಅವನ ಬಾಯಿಯಿಂದ ಹೊರಡುವ ಶ್ವಾಸದಿಂದ ವಾಹನಗಳು, ಯೋಧರು, ಮತ್ತು ವಿವಿಧ ದ್ರವ್ಯಗಳು ಎಲ್ಲಕಡೆಗಳಿಂದ ಹುಟ್ಟುತ್ತಿದ್ದವು.
14005010a ಸ ಗುಣೈಃ ಪಾರ್ಥಿವಾನ್ಸರ್ವಾನ್ವಶೇ ಚಕ್ರೇ ನರಾಧಿಪಃ|
14005010c ಸಂಜೀವ್ಯ ಕಾಲಮಿಷ್ಟಂ ಚ ಸಶರೀರೋ ದಿವಂ ಗತಃ||
ಆ ನರಾಧಿಪನು ತನ್ನ ಗುಣಗಳಿಂದ ಸರ್ವ ಪಾರ್ಥಿವರನ್ನೂ ವಶದಲ್ಲಿ ತಂದುಕೊಂಡು, ಇಷ್ಟವಿದ್ದಷ್ಟು ಕಾಲ ಜೀವಂತವಿದ್ದು, ಸಶರೀರರನಾಗಿ ದಿವಂಗತನಾದನು.
14005011a ಬಭೂವ ತಸ್ಯ ಪುತ್ರಸ್ತು ಯಯಾತಿರಿವ ಧರ್ಮವಿತ್|
14005011c ಅವಿಕ್ಷಿನ್ನಾಮ ಶತ್ರುಕ್ಷಿತ್ಸ ವಶೇ ಕೃತವಾನ್ಮಹೀಮ್|
14005011e ವಿಕ್ರಮೇಣ ಗುಣೈಶ್ಚೈವ ಪಿತೇವಾಸೀತ್ಸ ಪಾರ್ಥಿವಃ||
ಅವಿಕ್ಷಿತನೆಂಬ ಹೆಸರಿನ ಅವನ ಮಗನಾದರೋ ಯಯಾತಿಯಂತೆ ಧರ್ಮವಿದುವಾಗಿದ್ದು ಇಡೀ ಭೂಮಿಯನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದನು. ಆ ಪಾರ್ಥಿವನು ಗುಣ ಮತ್ತು ವಿಕ್ರಮಗಳಲ್ಲಿ ಅವನ ತಂದೆಯಂತೆಯೇ ಇದ್ದನು.
14005012a ತಸ್ಯ ವಾಸವತುಲ್ಯೋಽಭೂನ್ಮರುತ್ತೋ ನಾಮ ವೀರ್ಯವಾನ್|
14005012c ಪುತ್ರಸ್ತಮನುರಕ್ತಾಭೂತ್ಪೃಥಿವೀ ಸಾಗರಾಂಬರಾ||
ಅವನಿಗೆ ಮರುತ್ತ ಎಂಬ ಹೆಸರಿನ, ವಾಸವನಿಗೆ ಸಮನಾಗಿದ್ದ, ವೀರ್ಯವಾನ್ ಪುತ್ರನಿದ್ದನು. ಅವನು ಸಾಗರಾಂಬರೆ ಪೃಥ್ವಿಯಲ್ಲಿಯೇ ಅನುರಕ್ತನಾಗಿದ್ದನು.
14005013a ಸ್ಪರ್ಧತೇ ಸತತಂ ಸ ಸ್ಮ ದೇವರಾಜೇನ ಪಾರ್ಥಿವಃ|
14005013c ವಾಸವೋಽಪಿ ಮರುತ್ತೇನ ಸ್ಪರ್ಧತೇ ಪಾಂಡುನಂದನ||
ಪಾಂಡುನಂದನ! ಆ ಪಾರ್ಥಿವನು ಸತತವೂ ದೇವರಾಜನೊಡನೆ ಸ್ಪರ್ಧಿಸುತ್ತಿದ್ದನು. ವಾಸವನೂ ಕೂಡ ಮರುತ್ತನೊಡನೆ ಸ್ಪರ್ಧಿಸುತ್ತಿದ್ದನು.
14005014a ಶುಚಿಃ ಸ ಗುಣವಾನಾಸೀನ್ಮರುತ್ತಃ ಪೃಥಿವೀಪತಿಃ|
14005014c ಯತಮಾನೋಽಪಿ ಯಂ ಶಕ್ರೋ ನ ವಿಶೇಷಯತಿ ಸ್ಮ ಹ||
ಪೃಥಿವೀಪತಿ ಶುಚಿ ಮರುತ್ತನು ಅತ್ಯಂತ ಗುಣವಂತನಾಗಿದ್ದನು. ಪ್ರಯತ್ನಪಟ್ಟರೂ ಶಕ್ರನು ಅವನನ್ನು ಮೀರಿಸಲು ಶಕ್ಯನಾಗಿರಲಿಲ್ಲ.
14005015a ಸೋಽಶಕ್ನುವನ್ವಿಶೇಷಾಯ ಸಮಾಹೂಯ ಬೃಹಸ್ಪತಿಮ್|
14005015c ಉವಾಚೇದಂ ವಚೋ ದೇವೈಃ ಸಹಿತೋ ಹರಿವಾಹನಃ||
ಅವನನ್ನು ಮೀರಿಸಲು ಅಸಾಧ್ಯನಾದಾಗ ಹರಿವಾಹನ ಇಂದ್ರನು ದೇವತೆಗಳೊಂದಿಗೆ ಬೃಹಸ್ಪತಿಯನ್ನು ಕರೆದು ಅವನಿಗೆ ಈ ಮಾತನ್ನಾಡಿದನು:
14005016a ಬೃಹಸ್ಪತೇ ಮರುತ್ತಸ್ಯ ಮಾ ಸ್ಮ ಕಾರ್ಷೀಃ ಕಥಂ ಚನ|
14005016c ದೈವಂ ಕರ್ಮಾಥ ವಾ ಪಿತ್ರ್ಯಂ ಕರ್ತಾಸಿ ಮಮ ಚೇತ್ಪ್ರಿಯಮ್||
“ಬೃಹಸ್ಪತೇ! ನೀನು ಎಂದೂ ಮರುತ್ತನಿಗೆ ಪುರೋಹಿತನಾಗಬೇಡ! ದೈವಕರ್ಮವಾಗಲೀ ಅಥವಾ ಪಿತೃಕರ್ಮವಾಗಲೀ ನನಗೆ ಇಷ್ಟವಾಗುವಂತೆ ನೀನು ಮಾಡುತ್ತೀಯೆ.
14005017a ಅಹಂ ಹಿ ತ್ರಿಷು ಲೋಕೇಷು ಸುರಾಣಾಂ ಚ ಬೃಹಸ್ಪತೇ|
14005017c ಇಂದ್ರತ್ವಂ ಪ್ರಾಪ್ತವಾನೇಕೋ ಮರುತ್ತಸ್ತು ಮಹೀಪತಿಃ||
ಬೃಹಸ್ಪತೇ! ನಾನಾದರೋ ಮೂರುಲೋಕಗಳ ಮತ್ತು ಸುರರ ಇಂದ್ರತ್ವವನ್ನು ಪಡೆದಿರುವೆ. ಮರುತ್ತನಾದರೋ ಕೇವಲ ಭೂಮಿಯ ಓರ್ವ ಒಡೆಯ!
14005018a ಕಥಂ ಹ್ಯಮರ್ತ್ಯಂ ಬ್ರಹ್ಮಂಸ್ತ್ವಂ ಯಾಜಯಿತ್ವಾ ಸುರಾಧಿಪಮ್|
14005018c ಯಾಜಯೇರ್ಮೃತ್ಯುಸಂಯುಕ್ತಂ ಮರುತ್ತಮವಿಶಂಕಯಾ||
ಮೃತ್ಯುವಿಲ್ಲದ ಸುರಾಧಿಪನಿಗೆ ಬ್ರಹ್ಮನಾಗಿ ಯಾಗಮಾಡಿಸುವ ನೀನು ಹೇಗೆ ತಾನೇ ಏನೂ ಶಂಕೆಯಿಲ್ಲದೇ ಮೃತ್ಯುಪರನಾಗಿರುವ ಮರುತ್ತನಿಗೆ ಯಾಗಮಾಡಿಸುವೆ?
14005019a ಮಾಂ ವಾ ವೃಣೀಷ್ವ ಭದ್ರಂ ತೇ ಮರುತ್ತಂ ವಾ ಮಹೀಪತಿಮ್|
14005019c ಪರಿತ್ಯಜ್ಯ ಮರುತ್ತಂ ವಾ ಯಥಾಜೋಷಂ ಭಜಸ್ವ ಮಾಮ್||
ನಿನಗೆ ಮಂಗಳವಾಗಲಿ! ನೀನು ನನ್ನನ್ನಾಗಲೀ ಅಥವಾ ಮಹೀಪತಿ ಮರುತ್ತನನ್ನಾಗಲೀ ಆರಿಸಿಕೋ! ಮರುತ್ತನನ್ನು ಬಿಟ್ಟುಬಿಡು ಅಥವಾ ನನಗೆ ಪ್ರೀತಿಪಾತ್ರನಾಗದೇ ಇರು.”
14005020a ಏವಮುಕ್ತಃ ಸ ಕೌರವ್ಯ ದೇವರಾಜ್ಞಾ ಬೃಹಸ್ಪತಿಃ|
14005020c ಮುಹೂರ್ತಮಿವ ಸಂಚಿಂತ್ಯ ದೇವರಾಜಾನಮಬ್ರವೀತ್||
ಕೌರವ್ಯ! ದೇವರಾಜನು ಹೀಗೆ ಹೇಳಲು ಬೃಹಸ್ಪತಿಯು ಒಂದು ಕ್ಷಣ ಆಲೋಚಿಸಿ ದೇವರಾಜನಿಗೆ ಹೇಳಿದನು:
14005021a ತ್ವಂ ಭೂತಾನಾಮಧಿಪತಿಸ್ತ್ವಯಿ ಲೋಕಾಃ ಪ್ರತಿಷ್ಠಿತಾಃ|
14005021c ನಮುಚೇರ್ವಿಶ್ವರೂಪಸ್ಯ ನಿಹಂತಾ ತ್ವಂ ಬಲಸ್ಯ ಚ||
“ಭೂತಗಳ ಅಧಿಪತಿಯೆಂದು ಲೋಕಗಳು ನಿನ್ನನ್ನು ಪ್ರತಿಷ್ಠಾಪಿಸಿವೆ. ನೀನು ನಮುಚಿ, ವಿಶ್ವರೂಪ ಮತ್ತು ಬಲರನ್ನು ಸಂಹರಿಸಿರುವೆ.
14005022a ತ್ವಮಾಜಹರ್ಥ ದೇವಾನಾಮೇಕೋ ವೀರ ಶ್ರಿಯಂ ಪರಾಮ್|
14005022c ತ್ವಂ ಬಿಭರ್ಷಿ ಭುವಂ ದ್ಯಾಂ ಚ ಸದೈವ ಬಲಸೂದನ||
ವೀರ! ನೀನೊಬ್ಬನೇ ದೇವತೆಗಳಿಗೆ ಪರಮ ಸಂಪತ್ತನ್ನು ಪಡೆದುಕೊಟ್ಟವನು. ಬಲಸೂದನ! ನೀನು ಭೂಲೋಕ-ಸ್ವರ್ಗಲೋಕಗಳ ಪಾಲನೆ-ಪೋಷಣೆ ಮಾಡುತ್ತೀಯೆ.
14005023a ಪೌರೋಹಿತ್ಯಂ ಕಥಂ ಕೃತ್ವಾ ತವ ದೇವಗಣೇಶ್ವರ|
14005023c ಯಾಜಯೇಯಮಹಂ ಮರ್ತ್ಯಂ ಮರುತ್ತಂ ಪಾಕಶಾಸನ||
ದೇವಗಣೇಶ್ವರ! ಪಾಕಶಾಸನ! ನಿನ್ನ ಪೌರೋಹಿತ್ಯವನ್ನು ಮಾಡಿಕೊಂಡ ನಾನು ಹೇಗೆ ತಾನೇ ಮನುಷ್ಯ ಮರುತ್ತನ ಯಜ್ಞದ ಪೌರೋಹಿತ್ಯವನ್ನು ಮಾಡಲಿ?
14005024a ಸಮಾಶ್ವಸಿಹಿ ದೇವೇಶ ನಾಹಂ ಮರ್ತ್ಯಾಯ ಕರ್ಹಿ ಚಿತ್|
14005024c ಗ್ರಹೀಷ್ಯಾಮಿ ಸ್ರುವಂ ಯಜ್ಞೇ ಶೃಣು ಚೇದಂ ವಚೋ ಮಮ||
ದೇವೇಶ! ನನ್ನ ಈ ಮಾತನ್ನು ಕೇಳು! ಮನುಷ್ಯರ ಯಜ್ಞವನ್ನು ಮಾಡಿಸುವ ಕಾರ್ಯವನ್ನು ನಾನು ಎಂದೂ ಹಿಡಿಯುವುದಿಲ್ಲ. ನನ್ನ ಆಶ್ವಾಸನೆಯಿದೆ.
14005025a ಹಿರಣ್ಯರೇತಸೋಽಂಭಃ ಸ್ಯಾತ್ಪರಿವರ್ತೇತ ಮೇದಿನೀ|
14005025c ಭಾಸಂ ಚ ನ ರವಿಃ ಕುರ್ಯಾನ್ಮತ್ಸತ್ಯಂ ವಿಚಲೇದ್ಯದಿ||
ಹಿರಣ್ಯರೇತಸ ಅಗ್ನಿಯು ತಣ್ಣಗಾಗಬಹುದು. ಮೇದಿನಿಯು ತಲೆಕೆಳಗಾಗಬಹುದು. ಸೂರ್ಯನು ಪ್ರಕಾಶಿಸದೆಯೂ ಇರಬಹುದು. ಆದರೆ ನನ್ನ ಸತ್ಯವಚನವು ಸುಳ್ಳಾಗುವುದಿಲ್ಲ!”
14005026a ಬೃಹಸ್ಪತಿವಚಃ ಶ್ರುತ್ವಾ ಶಕ್ರೋ ವಿಗತಮತ್ಸರಃ|
14005026c ಪ್ರಶಸ್ಯೈನಂ ವಿವೇಶಾಥ ಸ್ವಮೇವ ಭವನಂ ತದಾ||
ಬೃಹಸ್ಪತಿಯ ಮಾತನ್ನು ಕೇಳಿ ಶಕ್ರನು ಮತ್ಸರವನ್ನು ಕಳೆದುಕೊಂಡನು. ಬೃಹಸ್ಪತಿಯನ್ನು ಪ್ರಶಂಸೆಮಾಡಿ ತನ್ನ ಭವನವನ್ನು ಪ್ರವೇಶಿಸಿದನು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ಪಂಚಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಐದನೇ ಅಧ್ಯಾಯವು.