Ashvamedhika Parva: Chapter 48

ಅಶ್ವಮೇಧಿಕ ಪರ್ವ

೪೮

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೨೯).

14048001 ಬ್ರಹ್ಮೋವಾಚ

14048001a ಕೇ ಚಿದ್ಬ್ರಹ್ಮಮಯಂ ವೃಕ್ಷಂ ಕೇ ಚಿದ್ಬ್ರಹ್ಮಮಯಂ ಮಹತ್|

14048001c ಕೇ ಚಿತ್ಪುರುಷಮವ್ಯಕ್ತಂ ಕೇ ಚಿತ್ಪರಮನಾಮಯಮ್|

14048001e ಮನ್ಯಂತೇ ಸರ್ವಮಪ್ಯೇತದವ್ಯಕ್ತಪ್ರಭವಾವ್ಯಯಮ್||

ಬ್ರಹ್ಮನು ಹೇಳಿದನು: “ಕೆಲವರು ಇದು ಬ್ರಹ್ಮಮಯ ವೃಕ್ಷವೆಂದೂ, ಕೆಲವರು ಇದು ಬ್ರಹ್ಮಮಯ ಮಹತ್ತೆಂದೂ, ಕೆಲವರು ಇದು ಅವ್ಯಕ್ತ ಪುರುಷನೆಂದೂ, ಕೆಲವರು ಇದು ಪರಮ ಅನಾಮಯವೆಂದೂ ಅಭಿಪ್ರಾಯಪಡುತ್ತಾರೆ. ಎಲ್ಲರೂ ಇದು ಅವ್ಯಯವಾದ ಅವ್ಯಕ್ತದಿಂದ ಹುಟ್ಟಿದುದೆಂದು ಹೇಳುತ್ತಾರೆ.

14048002a ಉಚ್ಚ್ವಾಸಮಾತ್ರಮಪಿ ಚೇದ್ಯೋಽಂತಕಾಲೇ ಸಮೋ ಭವೇತ್|

14048002c ಆತ್ಮಾನಮುಪಸಂಗಮ್ಯ ಸೋಽಮೃತತ್ವಾಯ ಕಲ್ಪತೇ||

ಮರಣಕಾಲದಲ್ಲಿ ಉಸಿರನ್ನು ಮೇಲಕ್ಕೆ ಎಳೆದುಕೊಳ್ಳುವ ಕಾಲದಲ್ಲಿಯಾದರೂ ಬುದ್ಧಿಯನ್ನು ಆತ್ಮನಲ್ಲಿ ಲೀನಗೊಳಿಸಿ ಸಮತ್ವವನ್ನು ಹೊಂದಿದರೆ ಅದರಿಂದಲೇ ಅವನು ಅಮೃತತ್ವಕ್ಕೆ ಭಾಗಿಯಾಗುತ್ತಾನೆ.

14048003a ನಿಮೇಷಮಾತ್ರಮಪಿ ಚೇತ್ಸಂಯಮ್ಯಾತ್ಮಾನಮಾತ್ಮನಿ|

14048003c ಗಚ್ಚತ್ಯಾತ್ಮಪ್ರಸಾದೇನ ವಿದುಷಾಂ ಪ್ರಾಪ್ತಿಮವ್ಯಯಾಮ್||

ಕಣ್ಣುಮುಚ್ಚಿತೆರೆಯುವಷ್ಟು ಕಾಲವಾದರೂ ಮನಸ್ಸನ್ನು ಆತ್ಮನಲ್ಲಿ ಸಮಾವೇಶಗೊಳಿಸಿದ್ದೇ ಆದರೆ ಅದರಿಂದ ಲಭಿಸುವ ಮನಸ್ಸಿನ ಪ್ರಸನ್ನತೆಯಿಂದ ವಿದುಷರು ಹೊಂದುವ ಅವ್ಯಯವನ್ನು ಪಡೆಯಬಹುದು.

14048004a ಪ್ರಾಣಾಯಾಮೈರಥ ಪ್ರಾಣಾನ್ಸಂಯಮ್ಯ ಸ ಪುನಃ ಪುನಃ|

14048004c ದಶದ್ವಾದಶಭಿರ್ವಾಪಿ ಚತುರ್ವಿಂಶಾತ್ಪರಂ ತತಃ||

ಹತ್ತು ಅಥವಾ ಹನ್ನೆರಡು ಪ್ರಾಣಾಯಾಮಗಳ ಮೂಲಕ ಪುನಃ ಪುನಃ ಪ್ರಾಣಗಳನ್ನು ಸಂಯಮದಲ್ಲಿರಿಸುವ ಸಾಧಕನೂ ಕೂಡ ಇಪ್ಪತ್ನಾಲ್ಕು ತತ್ತ್ವಗಳ ಆಚೆಯಿರುವ ಇಪ್ಪತ್ತೈದನೆಯದಾದ ಆತ್ಮನನ್ನು ಹೊಂದುತ್ತಾನೆ.

14048005a ಏವಂ ಪೂರ್ವಂ ಪ್ರಸನ್ನಾತ್ಮಾ ಲಭತೇ ಯದ್ಯದಿಚ್ಚತಿ|

14048005c ಅವ್ಯಕ್ತಾತ್ಸತ್ತ್ವಮುದ್ರಿಕ್ತಮಮೃತತ್ವಾಯ ಕಲ್ಪತೇ||

ಹೀಗೆ ಮೊದಲು ಆತ್ಮನನ್ನು ಪ್ರಸನ್ನಗೊಳಿಸಿದವನಿಗೆ ಬಯಸಿದುದೆಲ್ಲವೂ ದೊರೆಯುತ್ತದೆ. ಅವ್ಯಕ್ತದ ಆಚೆಯಿರುವ ಸತ್ತ್ವರೂಪ ಆತ್ಮನು ಅಮೃತತ್ತ್ವನು ಎಂದು ಹೇಳುತ್ತಾರೆ.

14048006a ಸತ್ತ್ವಾತ್ಪರತರಂ ನಾನ್ಯತ್ಪ್ರಶಂಸಂತೀಹ ತದ್ವಿದಃ|

14048006c ಅನುಮಾನಾದ್ವಿಜಾನೀಮಃ ಪುರುಷಂ ಸತ್ತ್ವಸಂಶ್ರಯಮ್|

14048006e ನ ಶಕ್ಯಮನ್ಯಥಾ ಗಂತುಂ ಪುರುಷಂ ತಮಥೋ ದ್ವಿಜಾಃ||

ಸತ್ತ್ವಕ್ಕಿಂತಲೂ ಮಿಗಿಲಾದುದು ಬೇರೆ ಯಾವುದೂ ಇಲ್ಲ ಎಂದು ತಿಳಿದವರು ಹೇಳುತ್ತಾರೆ. ದ್ವಿಜರೇ! ಪುರುಷನು ಸತ್ತ್ವವನ್ನು ಆಶ್ರಯಿಸಿದ್ದಾನೆ ಎಂದು ಅನುಮಾನದಿಂದ ತಿಳಿದಿರುತ್ತೇವೆ. ಅನ್ಯಥಾ ಈ ಪುರುಷನನ್ನು ತಲುಪಲು ಶಕ್ಯವಿಲ್ಲ.

14048007a ಕ್ಷಮಾ ಧೃತಿರಹಿಂಸಾ ಚ ಸಮತಾ ಸತ್ಯಮಾರ್ಜವಮ್|

14048007c ಜ್ಞಾನಂ ತ್ಯಾಗೋಽಥ ಸಂನ್ಯಾಸಃ ಸಾತ್ತ್ವಿಕಂ ವೃತ್ತಮಿಷ್ಯತೇ||

ಕ್ಷಮೆ, ಧೈರ್ಯ, ಅಹಿಂಸೆ, ಸಮತೆ, ಸತ್ಯ, ಸರಳತೆ, ಜ್ಞಾನ, ತ್ಯಾಗ ಮತ್ತು ಸಂನ್ಯಾಸ ಇವು ಸಾತ್ತ್ವಿಕ ವೃತ್ತಿಗಳೆಂದು ಹೇಳುತ್ತಾರೆ.

14048008a ಏತೇನೈವಾನುಮಾನೇನ ಮನ್ಯಂತೇಽಥ ಮನೀಷಿಣಃ|

14048008c ಸತ್ತ್ವಂ ಚ ಪುರುಷಶ್ಚೈಕಸ್ತತ್ರ ನಾಸ್ತಿ ವಿಚಾರಣಾ||

ಇದೇ ಅನುಮಾನದಿಂದ ಮನೀಷಿಣರು ಸತ್ತ್ವ ಮತ್ತು ಪುರುಷ ಎರಡನ್ನೂ ಒಂದಾಗಿಯೇ ಕಾಣುತ್ತಾರೆ. ಇದರಲ್ಲಿ ವಿಚಾರಿಸುವುದೇ ಇಲ್ಲ.

14048009a ಆಹುರೇಕೇ ಚ ವಿದ್ವಾಂಸೋ ಯೇ ಜ್ಞಾನೇ ಸುಪ್ರತಿಷ್ಠಿತಾಃ|

14048009c ಕ್ಷೇತ್ರಜ್ಞಸತ್ತ್ವಯೋರೈಕ್ಯಮಿತ್ಯೇತನ್ನೋಪಪದ್ಯತೇ||

ಸುಪ್ರತಿಷ್ಠಿತ ಜ್ಞಾನವುಳ್ಳ ಕೆಲವು ವಿದ್ವಾಂಸರು ಕ್ಷೇತ್ರಜ್ಞ ಮತ್ತು ಸತ್ತ್ವಗಳ ಏಕತೆಯು ಸುಳ್ಳು ಎಂದು ಅಭಿಪ್ರಾಯಪಡುತ್ತಾರೆ.

14048010a ಪೃಥಗ್ಭೂತಸ್ತತೋ ನಿತ್ಯಮಿತ್ಯೇತದವಿಚಾರಿತಮ್|

14048010c ಪೃಥಗ್ಭಾವಶ್ಚ ವಿಜ್ಞೇಯಃ ಸಹಜಶ್ಚಾಪಿ ತತ್ತ್ವತಃ||

ಸತ್ತ್ವವು ಪುರುಷನಿಗಿಂತಲೂ ಪ್ರತ್ಯೇಕವಾಗಿದೆ ಎನ್ನುವುದರ ಕುರಿತು ವಿಚಾರಮಾಡಬೇಕಾದುದೇ ಇಲ್ಲ. ತತ್ತ್ವತಃ ಮತ್ತು ಸಹಜವಾಗಿ ಇವು ಬೇರೆ ಬೇರೆಯಾಗಿವೆ ಎಂದು ತಿಳಿಯಬೇಕು.

14048011a ತಥೈವೈಕತ್ವನಾನಾತ್ವಮಿಷ್ಯತೇ ವಿದುಷಾಂ ನಯಃ|

14048011c ಮಶಕೋದುಂಬರೇ ತ್ವೈಕ್ಯಂ ಪೃಥಕ್ತ್ವಮಪಿ ದೃಶ್ಯತೇ||

ಹಾಗೆಯೇ ಏಕತ್ವದಲ್ಲಿ ನಾನಾತ್ವವನ್ನು ವಿದುಷರು ಕಂಡಿದ್ದಾರೆ. ಅತ್ತಿಯ ಹಣ್ಣಿನಲ್ಲಿರುವ ಹುಳುಗಳಂತೆ ಏಕತ್ವದಲ್ಲಿ ಪ್ರತ್ಯೇಕತೆಯೂ ಕಾಣುತ್ತದೆ.

14048012a ಮತ್ಸ್ಯೋ ಯಥಾನ್ಯಃ ಸ್ಯಾದಪ್ಸು ಸಂಪ್ರಯೋಗಸ್ತಥಾನಯೋಃ|

14048012c ಸಂಬಂಧಸ್ತೋಯಬಿಂದೂನಾಂ ಪರ್ಣೇ ಕೋಕನದಸ್ಯ ಚ||

ಮೀನು ನೀರಿಗಿಂತ ಬೇರೆಯಾಗಿದ್ದರೂ ಅದರೊಡನೆ ಕೂಡಿಕೊಂಡೇ ಇರುವಂತೆ ಹಾಗು ಕಮಲದ ಎಲೆಯ ಮೇಲಿರುವ ನೀರಿನ ಬಿಂದುವಿಗೂ ಮತ್ತು ಎಲೆಗೂ ಇರುವ ಸಂಬಂಧದಂತೆ ಸತ್ತ್ವ-ಪುರುಷರ ಸಂಬಂಧವಿದೆ.””

14048013 ಗುರುರುವಾಚ

14048013a ಇತ್ಯುಕ್ತವಂತಂ ತೇ ವಿಪ್ರಾಸ್ತದಾ ಲೋಕಪಿತಾಮಹಮ್|

14048013c ಪುನಃ ಸಂಶಯಮಾಪನ್ನಾಃ ಪಪ್ರಚ್ಚುರ್ದ್ವಿಜಸತ್ತಮಾಃ||

ಗುರುವು ಹೇಳಿದನು: “ಹೀಗೆ ಲೋಕಪಿತಾಮಹನು ವಿಪ್ರರಿಗೆ ಹೇಳಲು ಸಂಶಯಸ್ಥರಾಗಿದ್ದ ದ್ವಿಜಸತ್ತಮರು ಪುನಃ ಅವನನ್ನು ಕೇಳಿದರು:

14048014 ಋಷಯ ಊಚುಃ

14048014a ಕಿಂ ಸ್ವಿದೇವೇಹ ಧರ್ಮಾಣಾಮನುಷ್ಠೇಯತಮಂ ಸ್ಮೃತಮ್|

14048014c ವ್ಯಾಹತಾಮಿವ ಪಶ್ಯಾಮೋ ಧರ್ಮಸ್ಯ ವಿವಿಧಾಂ ಗತಿಮ್||

ಋಷಿಗಳು ಹೇಳಿದರು: “ಇಲ್ಲಿ ಯಾವ ಧರ್ಮವನ್ನು ಅನುಸರಿಸುವುದು ಶ್ರೇಷ್ಠವೆಂದು ನಿನಗನ್ನಿಸುತ್ತದೆ? ಧರ್ಮದ ವಿವಿಧ ಗತಿಗಳು ಒಂದನ್ನೊಂದು ಘರ್ಷಿಸುವಂತೆ ತೋರುತ್ತವೆ.

14048015a ಊರ್ಧ್ವಂ ದೇಹಾದ್ವದಂತ್ಯೇಕೇ ನೈತದಸ್ತೀತಿ ಚಾಪರೇ|

14048015c ಕೇ ಚಿತ್ಸಂಶಯಿತಂ ಸರ್ವಂ ನಿಃಸಂಶಯಮಥಾಪರೇ||

ದೇಹಾವಸಾನದ ನಂತರ ಯಾವುದೂ ಇಲ್ಲವೆಂದು ಒಬ್ಬರು ಹೇಳಿದರೆ ಇತರರು ದೇಹಾವಸಾನದ ನಂತರ ಇದೆಯೆಂದು ಹೇಳುತ್ತಾರೆ. ಕೆಲವರು ಎಲ್ಲ ಧರ್ಮಗಳನ್ನೂ ಸಂಶಯಿಸಿದರೆ ಇತರರು ಎಲ್ಲವನ್ನು ನಿಃಸಂಶಯವಾಗಿ ಕಾಣುತ್ತಾರೆ.

14048016a ಅನಿತ್ಯಂ ನಿತ್ಯಮಿತ್ಯೇಕೇ ನಾಸ್ತ್ಯಸ್ತೀತ್ಯಪಿ ಚಾಪರೇ|

14048016c ಏಕರೂಪಂ ದ್ವಿಧೇತ್ಯೇಕೇ ವ್ಯಾಮಿಶ್ರಮಿತಿ ಚಾಪರೇ|

14048016e ಏಕಮೇಕೇ ಪೃಥಕ್ಚಾನ್ಯೇ ಬಹುತ್ವಮಿತಿ ಚಾಪರೇ||

ಅನಿತ್ಯವಾದುದು ಅಥವಾ ನಿತ್ಯವಾದುದು ಎಂದು ಓರ್ವರು ಹೇಳಿದರೆ ಎಲ್ಲವೂ ನಾಸ್ತಿ ಇಂದು ಇತರರು ಹೇಳುತ್ತಾರೆ. ಒಂದೇ ರೂಪದ್ದು, ಎರಡು ರೂಪದ್ದು ಎಂದು ಕೆಲವರು ಹೇಳಿದರೆ ಇತರರು ಅನೇಕ ಮಿಶ್ರರೂಪದ್ದು ಎಂದು ಹೇಳುತ್ತಾರೆ. ಎಲ್ಲವು ಒಂದೇ, ಎಲ್ಲವೂ ಪ್ರತ್ಯೇಕವಾದವುಗಳು ಎಂದು ಕೆಲವರು ಹೇಳಿದರೆ ಇತರರು ಬಹುತ್ವದ ಕುರಿತು ಹೇಳುತ್ತಾರೆ.

14048017a ಮನ್ಯಂತೇ ಬ್ರಾಹ್ಮಣಾ ಏವಂ ಪ್ರಾಜ್ಞಾಸ್ತತ್ತ್ವಾರ್ಥದರ್ಶಿನಃ|

14048017c ಜಟಾಜಿನಧರಾಶ್ಚಾನ್ಯೇ ಮುಂಡಾಃ ಕೇ ಚಿದಸಂವೃತಾಃ||

ತತ್ತ್ವದರ್ಶಿಗಳು ಬ್ರಾಹ್ಮಣರನ್ನು ಪ್ರಾಜ್ಞರೆಂದು ಮನ್ನಿಸುತ್ತಾರೆ. ಕೆಲವರು ಜಟಾಜಿನಗಳನ್ನು ಧರಿಸಿರುತ್ತಾರೆ. ಅನ್ಯರು ಮುಂಡನ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ದಿಗಂಬರರಾಗಿರುತ್ತಾರೆ.

14048018a ಅಸ್ನಾನಂ ಕೇ ಚಿದಿಚ್ಚಂತಿ ಸ್ನಾನಮಿತ್ಯಪಿ ಚಾಪರೇ|

14048018c ಆಹಾರಂ ಕೇ ಚಿದಿಚ್ಚಂತಿ ಕೇ ಚಿಚ್ಚಾನಶನೇ ರತಾಃ||

ಕೆಲವರು ಸ್ನಾನಮಾಡದೇ ಇರಲು ಬಯಸುತ್ತಾರೆ. ಇತರರು ಸ್ನಾನಮಾಡಬೇಕೆನ್ನುತ್ತಾರೆ. ಆಹಾರವನ್ನು ಕೆಲವರು ಬಯಸುತ್ತಾರೆ. ಇನ್ನು ಕೆಲವರು ನಿರಾಹಾರರಾಗಿರುತ್ತಾರೆ.

14048019a ಕರ್ಮ ಕೇ ಚಿತ್ಪ್ರಶಂಸಂತಿ ಪ್ರಶಾಂತಿಮಪಿ ಚಾಪರೇ|

14048019c ದೇಶಕಾಲಾವುಭೌ ಕೇ ಚಿನ್ನೈತದಸ್ತೀತಿ ಚಾಪರೇ|

14048019e ಕೇ ಚಿನ್ಮೋಕ್ಷಂ ಪ್ರಶಂಸಂತಿ ಕೇ ಚಿದ್ಭೋಗಾನ್ಪೃಥಗ್ವಿಧಾನ್||

ಕೆಲವರು ಕರ್ಮವನ್ನು ಪ್ರಶಂಸಿಸುತ್ತಾರೆ. ಇನ್ನು ಕೆಲವರು ಪ್ರಶಾಂತತೆಯನ್ನು ಪ್ರಶಂಸಿಸುತ್ತಾರೆ. ದೇಶ-ಕಾಲಗಳೆರಡೂ ನಿತ್ಯವೆಂದು ಕೆಲವರು ಹೇಳಿದರೆ ಇನ್ನು ಕೆಲವರು ಇವೆರಡೂ ಇಲ್ಲವೆಂದು ಹೇಳುತ್ತಾರೆ.

14048020a ಧನಾನಿ ಕೇ ಚಿದಿಚ್ಚಂತಿ ನಿರ್ಧನತ್ವಂ ತಥಾಪರೇ|

14048020c ಉಪಾಸ್ಯಸಾಧನಂ ತ್ವೇಕೇ ನೈತದಸ್ತೀತಿ ಚಾಪರೇ||

ಕೆಲವರು ಧನವನ್ನು ಬಯಸುತ್ತಾರೆ. ಇನ್ನು ಕೆಲವರು ನಿರ್ಧನತ್ವವನ್ನು ಬಯಸುತ್ತಾರೆ. ಉಪಾಸನೆಯು ಸಾಧನೆಯೆಂದು ಕೆಲವರು ಹೇಳಿದರೆ ಇನ್ನು ಕೆಲವರು ಅದು ಅಲ್ಲವೆಂದು ಹೇಳುತ್ತಾರೆ.

14048021a ಅಹಿಂಸಾನಿರತಾಶ್ಚಾನ್ಯೇ ಕೇ ಚಿದ್ಧಿಂಸಾಪರಾಯಣಾಃ|

14048021c ಪುಣ್ಯೇನ ಯಶಸೇತ್ಯೇಕೇ ನೈತದಸ್ತೀತಿ ಚಾಪರೇ||

ಕೆಲವರು ಅಹಿಂಸಾನಿರತರಾಗಿದ್ದರೆ ಇನ್ನು ಕೆಲವರು ಹಿಂಸಾಪರಾಯಣರಾಗಿರುತ್ತಾರೆ. ಪುಣ್ಯದಿಂದ ಯಶಸ್ಸಾಗುತ್ತದೆ ಎಂದು ಕೆಲವರು ಹೇಳಿದರೆ ಇತರರು ಅದು ಅಲ್ಲವೆಂದು ಹೇಳುತ್ತಾರೆ.

14048022a ಸದ್ಭಾವನಿರತಾಶ್ಚಾನ್ಯೇ ಕೇ ಚಿತ್ಸಂಶಯಿತೇ ಸ್ಥಿತಾಃ|

14048022c ದುಃಖಾದನ್ಯೇ ಸುಖಾದನ್ಯೇ ಧ್ಯಾನಮಿತ್ಯಪರೇ ಸ್ಥಿತಾಃ||

ಕೆಲವರು ಸದ್ಭಾವನಿರರತಾಗಿದ್ದರೆ ಇನ್ನು ಕೆಲವರು ಸಂಶಯಸ್ಥರಾಗಿಯೇ ಇರುತ್ತಾರೆ. ಕೆಲವರು ದುಃಖಿತರಾಗಿ, ಇನ್ನು ಕೆಲವರು ಸುಖಿಗಳಾಗಿ ಮತ್ತು ಇನ್ನೂ ಇತರರು ಧ್ಯಾನಪರರಾಗಿರುತ್ತಾರೆ.

14048023a ಯಜ್ಞಮಿತ್ಯಪರೇ ಧೀರಾಃ ಪ್ರದಾನಮಿತಿ ಚಾಪರೇ|

14048023c ಸರ್ವಮೇಕೇ ಪ್ರಶಂಸಂತಿ ನ ಸರ್ವಮಿತಿ ಚಾಪರೇ||

ಕೆಲವರು ಯಜ್ಞವನ್ನು, ಮತ್ತು ತಿಳಿದ ಇನ್ನಿತರರು ದಾನವನ್ನು ಪ್ರಶಂಸಿಸುತ್ತಾರೆ. ಕೆಲವರು ಎಲ್ಲವನ್ನೂ ಪ್ರಶಂಸಿಸುತ್ತಾರೆ. ಇನ್ನು ಕೆಲವರು ಏನನ್ನೂ ಪ್ರಶಂಸಿಸುವುದಿಲ್ಲ.

14048024a ತಪಸ್ತ್ವನ್ಯೇ ಪ್ರಶಂಸಂತಿ ಸ್ವಾಧ್ಯಾಯಮಪರೇ ಜನಾಃ|

14048024c ಜ್ಞಾನಂ ಸಂನ್ಯಾಸಮಿತ್ಯೇಕೇ ಸ್ವಭಾವಂ ಭೂತಚಿಂತಕಾಃ||

ಅನ್ಯರು ತಪಸ್ಸನ್ನು ಪ್ರಶಂಸಿಸುತ್ತಾರೆ. ಸ್ವಾಧ್ಯಾಯವನ್ನು ಇತರ ಜನರು ಪ್ರಶಂಸಿಸುತ್ತಾರೆ. ಭೂತಚಿಂತಕರು ಜ್ಞಾನ ಮತ್ತು ಸಂನ್ಯಾಸ ಇವೆರಡೂ ಒಂದೇ ಸ್ವಭಾವದ್ದು ಎಂದು ತಿಳಿಯುತ್ತಾರೆ.

14048025a ಏವಂ ವ್ಯುತ್ಥಾಪಿತೇ ಧರ್ಮೇ ಬಹುಧಾ ವಿಪ್ರಧಾವತಿ|

14048025c ನಿಶ್ಚಯಂ ನಾಧಿಗಚ್ಚಾಮಃ ಸಂಮೂಢಾಃ ಸುರಸತ್ತಮ||

ಸುರಸತ್ತಮ! ಹೀಗೆ ಧರ್ಮವು ಅನೇಕ ಪ್ರಕಾರವಾಗಿದ್ದು ಪರಸ್ಪರ ವಿರೋಧವಾಗಿ ಹೇಳಲ್ಪಟ್ಟಿರುವುದರಿಂದ ಸಂಮೂಢರಾದ ನಾವು ನಿಶ್ಚಯಕ್ಕೆ ಬರಲು ಅಸಮರ್ಥರಾಗಿದ್ದೇವೆ.

14048026a ಇದಂ ಶ್ರೇಯ ಇದಂ ಶ್ರೇಯ ಇತ್ಯೇವಂ ಪ್ರಸ್ಥಿತೋ ಜನಃ|

14048026c ಯೋ ಹಿ ಯಸ್ಮಿನ್ರತೋ ಧರ್ಮೇ ಸ ತಂ ಪೂಜಯತೇ ಸದಾ||

ಇದೇ ಶ್ರೇಯಸ್ಕರವಾದುದು ಇದೇ ಶ್ರೇಯಸ್ಕರವಾದುದು ಎಂದು ಹೇಳಿಕೊಂಡು ಜನರು ಒಬ್ಬರು ಮತ್ತೊಬ್ಬರ ಧರ್ಮವನ್ನು ವಿರೋಧಿಸುತ್ತಾರೆ. ತಾನು ಯಾವಧರ್ಮದಲ್ಲಿ ನಿರತನಾಗಿರುವನೋ ಆ ಧರ್ಮವನ್ನು ಮಾತ್ರ ಅವನು ಸದಾ ಗೌರವಿಸುತ್ತಾನೆ.

14048027a ತತ್ರ ನೋ ವಿಹತಾ ಪ್ರಜ್ಞಾ ಮನಶ್ಚ ಬಹುಲೀಕೃತಮ್|

14048027c ಏತದಾಖ್ಯಾತುಮಿಚ್ಚಾಮಃ ಶ್ರೇಯಃ ಕಿಮಿತಿ ಸತ್ತಮ||

ಸತ್ತಮ! ಈ ವಿಷಯದಲ್ಲಿ ನಮ್ಮ ಪ್ರಜ್ಞೆ-ಮನಸ್ಸುಗಳು ಅನೇಕ ಧಾರೆಗಳಾಗಿ ಹರಿದು ಹೋಗಿದೆ. ಶ್ರೇಯಸ್ಸಾದುದು ಯಾವುದು ಎಂಬ ಒಂದನ್ನೇ ಹೇಳಬೇಕೆಂದು ಬಯಸುತ್ತೇವೆ.

14048028a ಅತಃ ಪರಂ ಚ ಯದ್ಗುಹ್ಯಂ ತದ್ಭವಾನ್ವಕ್ತುಮರ್ಹತಿ|

14048028c ಸತ್ತ್ವಕ್ಷೇತ್ರಜ್ಞಯೋಶ್ಚೈವ ಸಂಬಂಧಃ ಕೇನ ಹೇತುನಾ||

ಆದುದರಿಂದ ಪರಮ ಗುಹ್ಯವಾದುದು ಏನಿದೆಯೋ ಅದನ್ನು ನೀನು ಹೇಳಬೇಕು. ಸತ್ತ್ವ ಮತ್ತು ಕ್ಷೇತ್ರಜ್ಞರ ಸಂಬಂಧವು ಏನೆಂದು ಹೇಳಬೇಕು.”

14048029a ಏವಮುಕ್ತಃ ಸ ತೈರ್ವಿಪ್ರೈರ್ಭಗವಾಽಲ್ಲೋಕಭಾವನಃ|

14048029c ತೇಭ್ಯಃ ಶಶಂಸ ಧರ್ಮಾತ್ಮಾ ಯಾಥಾತಥ್ಯೇನ ಬುದ್ಧಿಮಾನ್||

ಆ ವಿಪ್ರರು ಹೀಗೆ ಕೇಳಿಕೊಳ್ಳಲು ಧರ್ಮಾತ್ಮ ಬುದ್ಧಿಮಾನ್ ಲೋಕಭಾವನ ಭಗವಾನನು ಅವರಿಗೆ ಇದ್ದುದನ್ನು ಇದ್ದಹಾಗೆ ಹೇಳಿದನು.

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಅಷ್ಟಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.

Comments are closed.