ಅಶ್ವಮೇಧಿಕ ಪರ್ವ
೪೧
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೫).
14041001 ಬ್ರಹ್ಮೋವಾಚ
14041001a ಯ ಉತ್ಪನ್ನೋ ಮಹಾನ್ಪೂರ್ವಮಹಂಕಾರಃ ಸ ಉಚ್ಯತೇ|
14041001c ಅಹಮಿತ್ಯೇವ ಸಂಭೂತೋ ದ್ವಿತೀಯಃ ಸರ್ಗ ಉಚ್ಯತೇ||
ಬ್ರಹ್ಮನು ಹೇಳಿದನು: “ಮೊದಲು ಹುಟ್ಟಿದ ಮಹತ್ತತ್ತ್ವವನ್ನು ಅಹಂಕಾರವೆಂದೂ ಕರೆಯುತ್ತಾರೆ. ಅದು “ನಾನು” ಎಂದುಕೊಂಡೇ ಹುಟ್ಟಿದುದರಿಂದ ಅದನ್ನು ಎರಡನೆಯ ಸೃಷ್ಟಿಯೆಂದು ಹೇಳುತ್ತಾರೆ.
14041002a ಅಹಂಕಾರಶ್ಚ ಭೂತಾದಿರ್ವೈಕಾರಿಕ ಇತಿ ಸ್ಮೃತಃ|
14041002c ತೇಜಸಶ್ಚೇತನಾ ಧಾತುಃ ಪ್ರಜಾಸರ್ಗಃ ಪ್ರಜಾಪತಿಃ||
ಅಹಂಕಾರವು ಪ್ರಾಣಿಗಳೇ ಮೊದಲಾದ ವಿಕಾರಗಳಿಗೆ ಕಾರಣವಾದುದರಿಂದ ಇದನ್ನು ವೈಕಾರಿಕ ಎಂದೂ ಕರೆಯುತ್ತಾರೆ. ಚೇತನ ಮತ್ತು ತೇಜಸ್ಸುಗಳುಳ್ಳ ಇದು ಪ್ರಜೆಗಳ ಸೃಷ್ಟಿಗೆ ಧಾತುರೂಪವಾದುದು. ಆದುದರಿಂದ ಇದನ್ನು ಪ್ರಜಾಪತಿ ಎಂದೂ ಕರೆಯುತ್ತಾರೆ.
14041003a ದೇವಾನಾಂ ಪ್ರಭವೋ ದೇವೋ ಮನಸಶ್ಚ ತ್ರಿಲೋಕಕೃತ್|
14041003c ಅಹಮಿತ್ಯೇವ ತತ್ಸರ್ವಮಭಿಮಂತಾ ಸ ಉಚ್ಯತೇ||
ಈ ಅಹಂಕಾರವು ದೇವತೆಗಳ ಮತ್ತು ಮನಸ್ಸಿನ ಉತ್ಪತ್ತಿಸ್ಥಾನವಾಗಿರುವುದರಿಂದ ಇದನ್ನು ತ್ರಿಲೋಕಕೃತ್ ಎಂದೂ ಅಭಿಮಂತಾ ಎಂದೂ ಕರೆಯುತ್ತಾರೆ.
14041004a ಅಧ್ಯಾತ್ಮಜ್ಞಾನನಿತ್ಯಾನಾಂ ಮುನೀನಾಂ ಭಾವಿತಾತ್ಮನಾಮ್|
14041004c ಸ್ವಾಧ್ಯಾಯಕ್ರತುಸಿದ್ಧಾನಾಮೇಷ ಲೋಕಃ ಸನಾತನಃ||
ನಿತ್ಯವೂ ಅಧ್ಯಾತ್ಮಜ್ಞಾನನಿರತರಾದ ಭಾವಿತಾತ್ಮ ಮುನಿಗಳ ಮತ್ತು ಸ್ವಾಧ್ಯಾಯ-ಕ್ರತುಗಳಲ್ಲಿ ನಿರತರಾದ ಸಿದ್ಧರಿಗೆ ಇದೇ ಸನಾತನ ಲೋಕವು ದೊರಕುವುದು.
14041005a ಅಹಂಕಾರೇಣಾಹರತೋ ಗುಣಾನಿಮಾನ್
ಭೂತಾದಿರೇವಂ ಸೃಜತೇ ಸ ಭೂತಕೃತ್|
14041005c ವೈಕಾರಿಕಃ ಸರ್ವಮಿದಂ ವಿಚೇಷ್ಟತೇ
ಸ್ವತೇಜಸಾ ರಂಜಯತೇ ಜಗತ್ತಥಾ||
ಸಮಸ್ತ ಭೂತಗಳಿಗೂ ಆದಿಯಾದ ಮತ್ತು ಎಲ್ಲವನ್ನೂ ಸೃಷ್ಟಿಸುವ ಅಹಂಕಾರಕ್ಕೆ ಆಧಾರಭೂತನಾದ ಜೀವಾತ್ಮನು ಅಹಂಕಾರದ ಮೂಲಕವೇ ಎಲ್ಲ ಗುಣಗಳನ್ನೂ ಸೃಷ್ಟಿಸುತ್ತಾನೆ ಮತ್ತು ಅವುಗಳನ್ನೇ ಉಪಭೋಗಿಸುತ್ತಾನೆ. ಜಗತ್ತಿನಲ್ಲಿ ನಡೆಯುವ ಎಲ್ಲ ಚೇಷ್ಟೆಗಳೂ ವಿಕಾರಕ್ಕೆ ಒಳಗಾಗಬಲ್ಲ ಅಹಂಕಾರದ ಸ್ವರೂಪಗಳೇ ಆಗಿವೆ. ಈ ಅಹಂಕಾರವೇ ತನ್ನ ಪ್ರಭಾವದಿಂದ ಜಗತ್ತೆಲ್ಲವನ್ನೂ ರಜೋಮಯವನ್ನಾಗಿ (ಭೋಗೇಚ್ಛುವಾಗಿ) ಮಾಡಿರುವುದು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಏಕಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೊಂದನೇ ಅಧ್ಯಾಯವು.