ಅಶ್ವಮೇಧಿಕ ಪರ್ವ
೪
ವ್ಯಾಸನು ಯುಧಿಷ್ಠಿರನಿಗೆ ರಾಜಾ ಮರುತ್ತನ ಕಥೆಯನ್ನು ಹೇಳಿದುದು (೧-೨೭).
14004001 ಯುಧಿಷ್ಠಿರ ಉವಾಚ
14004001a ಶುಶ್ರೂಷೇ ತಸ್ಯ ಧರ್ಮಜ್ಞ ರಾಜರ್ಷೇಃ ಪರಿಕೀರ್ತನಮ್|
14004001c ದ್ವೈಪಾಯನ ಮರುತ್ತಸ್ಯ ಕಥಾಂ ಪ್ರಬ್ರೂಹಿ ಮೇಽನಘ||
ಯುಧಿಷ್ಠಿರನು ಹೇಳಿದನು: “ಅನಘ! ದ್ವೈಪಾಯನ! ಧರ್ಮಜ್ಞ! ಆ ರಾಜರ್ಷಿ ಮರುತ್ತನ ಕಥೆ ಮತ್ತು ಅವನ ಕುರಿತಾದ ಕೀರ್ತನೆಯನ್ನು ಹೇಳು!”
14004002 ವ್ಯಾಸ ಉವಾಚ
14004002a ಆಸೀತ್ಕೃತಯುಗೇ ಪೂರ್ವಂ ಮನುರ್ಧಂಡಧರಃ ಪ್ರಭುಃ|
14004002c ತಸ್ಯ ಪುತ್ರೋ ಮಹೇಷ್ವಾಸಃ ಪ್ರಜಾತಿರಿತಿ ವಿಶ್ರುತಃ||
ವ್ಯಾಸನು ಹೇಳಿದನು: “ಹಿಂದೆ ಕೃತಯುಗದಲ್ಲಿ ದಂಡಧಾರಿ ಮನುವು ರಾಜನಾಗಿದ್ದನು. ಅವನಿಗೆ ಪ್ರಜಾತಿ ಎನ್ನುವ ವಿಖ್ಯಾತ ಮಹೇಷ್ವಾಸ ಮಗನಿದ್ದನು.
14004003a ಪ್ರಜಾತೇರಭವತ್ಪುತ್ರಃ ಕ್ಷುಪ ಇತ್ಯಭಿವಿಶ್ರುತಃ|
14004003c ಕ್ಷುಪಸ್ಯ ಪುತ್ರಸ್ತ್ವಿಕ್ಷ್ವಾಕುರ್ಮಹೀಪಾಲೋಽಭವತ್ಪ್ರಭುಃ||
ಪ್ರಜಾತಿಗೆ ಕ್ಷುಪ ಎನ್ನುವ ವಿಖ್ಯಾತ ಮಗನಿದ್ದನು. ಕ್ಷುಪನಿಗೆ ಮಹೀಪಾಲ ಪ್ರಭು ಇಕ್ಷ್ವಾಕು ಎನ್ನುವ ಮಗನಿದ್ದನು.
14004004a ತಸ್ಯ ಪುತ್ರಶತಂ ರಾಜನ್ನಾಸೀತ್ಪರಮಧಾರ್ಮಿಕಮ್|
14004004c ತಾಂಸ್ತು ಸರ್ವಾನ್ಮಹೀಪಾಲಾನಿಕ್ಷ್ವಾಕುರಕರೋತ್ಪ್ರಭುಃ||
ರಾಜನ್! ಅವನಿಗೆ ಪರಮಧಾರ್ಮಿಕರಾದ ನೂರು ಮಕ್ಕಳಿದ್ದರು. ಪ್ರಭು ಇಕ್ಷ್ವಾಕುವು ಅವರೆಲ್ಲರನ್ನೂ ಮಹೀಪಾಲರನ್ನಾಗಿಸಿದನು.
14004005a ತೇಷಾಂ ಜ್ಯೇಷ್ಠಸ್ತು ವಿಂಶೋಽಭೂತ್ಪ್ರತಿಮಾನಂ ಧನುಷ್ಮತಾಮ್|
14004005c ವಿಂಶಸ್ಯ ಪುತ್ರಃ ಕಲ್ಯಾಣೋ ವಿವಿಂಶೋ ನಾಮ ಭಾರತ||
ಧನುಷ್ಮಂತರಿಗೆ ಆದರ್ಶಪ್ರಾಯನಾಗಿದ್ದ ವಿಂಶನು ಅವರಲ್ಲಿ ಜ್ಯೇಷ್ಠನಾಗಿದ್ದನು. ಭಾರತ! ವಿಂಶನ ಕಲ್ಯಾಣ ಪುತ್ರನ ಹೆಸರು ವಿವಿಂಶ ಎಂದಾಗಿತ್ತು.
14004006a ವಿವಿಂಶಸ್ಯ ಸುತಾ ರಾಜನ್ಬಭೂವುರ್ದಶ ಪಂಚ ಚ|
14004006c ಸರ್ವೇ ಧನುಷಿ ವಿಕ್ರಾಂತಾ ಬ್ರಹ್ಮಣ್ಯಾಃ ಸತ್ಯವಾದಿನಃ||
ರಾಜನ್! ವಿವಿಂಶನಿಗೆ ಐವತ್ತು ಮಕ್ಕಳಾದರು. ಅವರೆಲ್ಲರೂ ಧನುರ್ಯುದ್ಧದಲ್ಲಿ ವಿಕ್ರಾಂತರೂ ಬ್ರಹ್ಮಣ್ಯರೂ ಸತ್ಯವಾದಿಗಳೂ ಆಗಿದ್ದರು.
14004007a ದಾನಧರ್ಮರತಾಃ ಸಂತಃ ಸತತಂ ಪ್ರಿಯವಾದಿನಃ|
14004007c ತೇಷಾಂ ಜ್ಯೇಷ್ಠಃ ಖನೀನೇತ್ರಃ ಸ ತಾನ್ಸರ್ವಾನಪೀಡಯತ್||
ಅವರು ದಾನಧರ್ಮ ನಿರತರೂ, ಸಂತರೂ, ಸತತವೂ ಪ್ರಿಯವಾದುದನ್ನೇ ಮಾತನಾಡುವವರೂ ಆಗಿದ್ದರು. ಅವರಲ್ಲಿ ಹಿರಿಯವನಾದ ಖನೀನೇತ್ರನು ಅವರೆಲ್ಲರನ್ನೂ ಪೀಡಿಸುತ್ತಿದ್ದನು.
14004008a ಖನೀನೇತ್ರಸ್ತು ವಿಕ್ರಾಂತೋ ಜಿತ್ವಾ ರಾಜ್ಯಮಕಂಟಕಮ್|
14004008c ನಾಶಕ್ನೋದ್ರಕ್ಷಿತುಂ ರಾಜ್ಯಂ ನಾನ್ವರಜ್ಯಂತ ತಂ ಪ್ರಜಾಃ||
ವಿಕ್ರಾಂತನಾದ ಖನೀನೇತ್ರನಾದರೋ ಯಾವುದೇ ಕಂಟಕಗಳಿಲ್ಲದೇ ರಾಜ್ಯವನ್ನು ಗೆದ್ದನು. ಆದರೆ ಅವನ ಪ್ರಜೆಗಳು ಅವನನ್ನು ಇಷ್ಟಪಡದೇ ಇದ್ದುದರಿಂದ ಅವನಿಗೆ ರಾಜ್ಯವನ್ನು ರಕ್ಷಿಸಲು ಆಗಲಿಲ್ಲ.
14004009a ತಮಪಾಸ್ಯ ಚ ತದ್ರಾಷ್ಟ್ರಂ ತಸ್ಯ ಪುತ್ರಂ ಸುವರ್ಚಸಮ್|
14004009c ಅಭ್ಯಷಿಂಚತ ರಾಜೇಂದ್ರ ಮುದಿತಂ ಚಾಭವತ್ತದಾ||
ರಾಜೇಂದ್ರ! ಪ್ರಜೆಗಳು ಅವನನ್ನು ರಾಷ್ಟ್ರದಿಂದ ಓಡಿಸಿ, ಅವನ ಮಗ ಸುವರ್ಚಸನನ್ನು ರಾಜನನ್ನಾಗಿ ಅಭಿಷೇಕಿಸಿ ಮುದಿತರಾದರು.
14004010a ಸ ಪಿತುರ್ವಿಕ್ರಿಯಾಂ ದೃಷ್ಟ್ವಾ ರಾಜ್ಯಾನ್ನಿರಸನಂ ತಥಾ|
14004010c ನಿಯತೋ ವರ್ತಯಾಮಾಸ ಪ್ರಜಾಹಿತಚಿಕೀರ್ಷಯಾ||
ತಂದೆಯ ದುಷ್ಕೃತಗಳನ್ನೂ ಮತ್ತು ಅವನನ್ನು ರಾಜ್ಯದಿಂದ ಹೊರಗೋಡಿಸಿದುದನ್ನು ನೋಡಿ ಸುವರ್ಚಸನು ಪ್ರಜೆಗಳ ಹಿತವನ್ನೇ ಬಯಸಿ ನಿಯತನಾಗಿ ವರ್ತಿಸತೊಡಗಿದನು.
14004011a ಬ್ರಹ್ಮಣ್ಯಃ ಸತ್ಯವಾದೀ ಚ ಶುಚಿಃ ಶಮದಮಾನ್ವಿತಃ|
14004011c ಪ್ರಜಾಸ್ತಂ ಚಾನ್ವರಜ್ಯಂತ ಧರ್ಮನಿತ್ಯಂ ಮನಸ್ವಿನಮ್||
ಬ್ರಹ್ಮಣ್ಯನೂ, ಸತ್ಯವಾದಿಯೂ, ಶುಚಿಯೂ, ಶಮ-ದಮಗಳಿಂದ ಕೂಡಿದವನೂ, ಧರ್ಮನಿತ್ಯನೂ, ಮನಸ್ವಿಯೂ ಆದ ಸುವರ್ಚಸನನ್ನು ಪ್ರಜೆಗಳು ಪ್ರೀತಿಸುತ್ತಿದ್ದರು.
14004012a ತಸ್ಯ ಧರ್ಮಪ್ರವೃತ್ತಸ್ಯ ವ್ಯಶೀರ್ಯತ್ಕೋಶವಾಹನಮ್|
14004012c ತಂ ಕ್ಷೀಣಕೋಶಂ ಸಾಮಂತಾಃ ಸಮಂತಾತ್ಪರ್ಯಪೀಡಯನ್||
ಧರ್ಮಪ್ರವೃತ್ತನಾಗಿದ್ದ ಅವನ ಕೋಶ-ವಾಹನಗಳು ಕ್ಷೀಣವಾದವು. ಅವನ ಕೋಶವು ಕಡಿಮೆಯಾದುದನ್ನು ನೋಡಿ ಸಾಮಂತರು ಎಲ್ಲಕಡೆಗಳಿಂದ ಪೀಡಿಸತೊಡಗಿದರು.
14004013a ಸ ಪೀಡ್ಯಮಾನೋ ಬಹುಭಿಃ ಕ್ಷೀಣಕೋಶಸ್ತ್ವವಾಹನಃ|
14004013c ಆರ್ತಿಮಾರ್ಚತ್ಪರಾಂ ರಾಜಾ ಸಹ ಭೃತ್ಯೈಃ ಪುರೇಣ ಚ||
ಕೋಶ-ವಾಹನಗಳನ್ನು ಕಳೆದುಕೊಂಡು ಅನೇಕ ಶತ್ರುಗಳಿಂದ ಪೀಡಿಸಲ್ಪಟ್ಟ ಅವನು ಸೇವಕ-ಪುರಜನರೊಂದಿಗೆ ಅತಿ ಆರ್ತನಾದನು.
14004014a ನ ಚೈನಂ ಪರಿಹರ್ತುಂ ತೇಽಶಕ್ನುವನ್ಪರಿಸಂಕ್ಷಯೇ|
14004014c ಸಮ್ಯಗ್ವೃತ್ತೋ ಹಿ ರಾಜಾ ಸ ಧರ್ಮನಿತ್ಯೋ ಯುಧಿಷ್ಠಿರ||
ಯುಧಿಷ್ಠಿರ! ಆ ರಾಜನು ಧರ್ಮನಿತ್ಯನೂ ಸದಾಚಾರಿಯೂ ಆದುದರಿಂದ ಶತ್ರುಗಳಿಗೆ ಅವನನ್ನು ಸೋಲಿಸಲು ಸಾಧ್ಯವಾಗಲಿಲ್ಲ.
14004015a ಯದಾ ತು ಪರಮಾಮಾರ್ತಿಂ ಗತೋಽಸೌ ಸಪುರೋ ನೃಪಃ|
14004015c ತತಃ ಪ್ರದಧ್ಮೌ ಸ ಕರಂ ಪ್ರಾದುರಾಸೀತ್ತತೋ ಬಲಮ್||
ಹೀಗೆ ಪುರಜನರೊಂದಿಗೆ ಪರಮ ಕಷ್ಟಕ್ಕೊಳಗಾಗಿರಲು ನೃಪನು ಕೈಯನ್ನೇ ಶಂಖವನ್ನಾಗಿ ಮಾಡಿಕೊಂಡು ಜೋರಾಗಿ ಊದಿದನು. ಆಗ ದೊಡ್ಡದಾದ ಸೇನೆಯೇ ಪ್ರಕಟವಾಯಿತು.
14004016a ತತಸ್ತಾನಜಯತ್ಸರ್ವಾನ್ಪ್ರಾತಿಸೀಮಾನ್ನರಾಧಿಪಾನ್|
14004016c ಏತಸ್ಮಾತ್ಕಾರಣಾದ್ರಾಜನ್ವಿಶ್ರುತಃ ಸ ಕರಂಧಮಃ||
ಅನಂತರ ಅವನು ಸೀಮೆಯ ಗಡಿಯಲ್ಲಿದ್ದ ಎಲ್ಲ ನರಾಧಿಪರನ್ನೂ ಸೋಲಿಸಿದನು. ರಾಜನ್! ಈ ಕಾರಣದಿಂದಲೇ ಅವನು ಕರಂಧಮ – ಕೈಯಿಂದ ಶಬ್ಧಮಾಡಿದವನು – ಎಂದು ಪ್ರಖ್ಯಾತನಾದನು.
14004017a ತಸ್ಯ ಕಾರಂಧಮಃ ಪುತ್ರಸ್ತ್ರೇತಾಯುಗಮುಖೇಽಭವತ್|
14004017c ಇಂದ್ರಾದನವರಃ ಶ್ರೀಮಾನ್ ದೇವೈರಪಿ ಸುದುರ್ಜಯಃ||
ತ್ರೇತಾಯುಗದ ಪ್ರಾರಂಭದಲ್ಲಿ ಅವನಿಗೆ ಕಾರಂಧಮ (ಅವಿಕ್ಷಿತ್) ಎನ್ನುವ ಮಗನು ಹುಟ್ಟಿದನು. ಅಮೋಘ ಕಾಂತಿಯಿಂದ ಕೂಡಿದ್ದ ಅವನು ಇಂದ್ರನಿಗೇನೂ ಕಡಿಮೆಯಾಗಿರಲಿಲ್ಲ. ದೇವತೆಗಳಿಗೂ ಅವನು ಸೋಲಿಸಲಸಾಧ್ಯನಾಗಿದ್ದನು.
14004018a ತಸ್ಯ ಸರ್ವೇ ಮಹೀಪಾಲಾ ವರ್ತಂತೇ ಸ್ಮ ವಶೇ ತದಾ|
14004018c ಸ ಹಿ ಸಮ್ರಾಡಭೂತ್ತೇಷಾಂ ವೃತ್ತೇನ ಚ ಬಲೇನ ಚ||
ಆಗ ಸರ್ವ ಮಹೀಪಾಲರೂ ಅವನ ವಶದಲ್ಲಿದ್ದರು. ನಡತೆ ಮತ್ತು ಬಲಗಳಲ್ಲಿ ಅವನು ಅವರೆಲ್ಲರಿಗೂ ಸಾಮ್ರಾಟನಂತಿದ್ದನು.
14004019a ಅವಿಕ್ಷಿನ್ನಾಮ ಧರ್ಮಾತ್ಮಾ ಶೌರ್ಯೇಣೇಂದ್ರಸಮೋಽಭವತ್|
14004019c ಯಜ್ಞಶೀಲಃ ಕರ್ಮರತಿರ್ಧೃತಿಮಾನ್ ಸಂಯತೇಂದ್ರಿಯಃ||
ಅವಿಕ್ಷಿತ್ ಎಂಬ ಹೆಸರಿನ ಆ ಧರ್ಮಾತ್ಮನು ಶೌರ್ಯದಲ್ಲಿ ಇಂದ್ರನಿಗೆ ಸಮನಾಗಿದ್ದನು. ಧೃತಿಮಾನ್ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡಿದ್ದ ಅವನು ಯಜ್ಞಶೀಲನೂ ಕರ್ಮರತಿಯೂ ಆಗಿದ್ದನು.
14004020a ತೇಜಸಾದಿತ್ಯಸದೃಶಃ ಕ್ಷಮಯಾ ಪೃಥಿವೀಸಮಃ|
14004020c ಬೃಹಸ್ಪತಿಸಮೋ ಬುದ್ಧ್ಯಾ ಹಿಮವಾನಿವ ಸುಸ್ಥಿರಃ||
ತೇಜಸ್ಸಿನಲ್ಲಿ ಆದಿತ್ಯನಂತಿದ್ದನು. ಕ್ಷಮೆಯಲ್ಲಿ ಭೂಮಿಗೆ ಸಮನಾಗಿದ್ದನು. ಬುದ್ಧಿಯಲ್ಲಿ ಬೃಹಸ್ಪತಿಯ ಸಮನಾಗಿದ್ದ ಅವನು ಹಿಮವತ್ಪರ್ವತದಂತೆ ಸುಸ್ಥಿರವಾಗಿದ್ದನು.
14004021a ಕರ್ಮಣಾ ಮನಸಾ ವಾಚಾ ದಮೇನ ಪ್ರಶಮೇನ ಚ|
14004021c ಮನಾಂಸ್ಯಾರಾಧಯಾಮಾಸ ಪ್ರಜಾನಾಂ ಸ ಮಹೀಪತಿಃ||
ಕರ್ಮ, ಮನಸ್ಸು, ಮಾತು, ದಮ, ಪ್ರಶಮನ ಮತ್ತು ಮನಸ್ಸುಗಳಿಂದ ಆ ಮಹೀಪತಿಯು ಪ್ರಜೆಗಳನ್ನು ಆರಾಧಿಸುತ್ತಿದ್ದನು.
14004022a ಯ ಈಜೇ ಹಯಮೇಧಾನಾಂ ಶತೇನ ವಿಧಿವತ್ಪ್ರಭುಃ|
14004022c ಯಾಜಯಾಮಾಸ ಯಂ ವಿದ್ವಾನ್ಸ್ವಯಮೇವಾಂಗಿರಾಃ ಪ್ರಭುಃ||
ಆ ಪ್ರಭುವು ವಿಧಿವತ್ತಾಗಿ ನೂರು ಅಶ್ವಮೇಧಗಳನ್ನು ನಡೆಸಿದನು. ವಿದ್ವಾನ್ ಸ್ವಯಂ ಪ್ರಭು ಆಂಗಿರಸನು ಅವುಗಳನ್ನು ನಡೆಸಿಕೊಟ್ಟನು.
14004023a ತಸ್ಯ ಪುತ್ರೋಽತಿಚಕ್ರಾಮ ಪಿತರಂ ಗುಣವತ್ತಯಾ|
14004023c ಮರುತ್ತೋ ನಾಮ ಧರ್ಮಜ್ಞಶ್ಚಕ್ರವರ್ತೀ ಮಹಾಯಶಾಃ||
ಅವನ ಮಗ ಧರ್ಮಜ್ಞ ಚಕ್ರವರ್ತಿ ಮಹಾಯಶಸ್ವೀ ಮರುತ್ತ ಎನ್ನುವವನು ಗುಣಗಳಲ್ಲಿ ತಂದೆಯನ್ನೂ ಮೀರಿದ್ದನು.
14004024a ನಾಗಾಯುತಸಮಪ್ರಾಣಃ ಸಾಕ್ಷಾದ್ವಿಷ್ಣುರಿವಾಪರಃ|
14004024c ಸ ಯಕ್ಷ್ಯಮಾಣೋ ಧರ್ಮಾತ್ಮಾ ಶಾತಕುಂಭಮಯಾನ್ಯುತ|
14004024e ಕಾರಯಾಮಾಸ ಶುಭ್ರಾಣಿ ಭಾಜನಾನಿ ಸಹಸ್ರಶಃ||
ಹತ್ತುಸಾವಿರ ಆನೆಗಳ ಬಲವಿದ್ದ ಅವನು ಸಾಕ್ಷಾದ್ ವಿಷ್ಣುವಿನಂತೆಯೇ ತೋರುತ್ತಿದ್ದನು. ಆ ಧರ್ಮಾತ್ಮನು ಯಜ್ಞಮಾಡುವಾಗ ಸಾವಿರಾರು ಸುವರ್ಣಮಯ ಶುಭ್ರ ಯಜ್ಞಪಾತ್ರೆಗಳನ್ನು ಮಾಡಿಸಿದನು.
14004025a ಮೇರುಂ ಪರ್ವತಮಾಸಾದ್ಯ ಹಿಮವತ್ಪಾರ್ಶ್ವ ಉತ್ತರೇ|
14004025c ಕಾಂಚನಃ ಸುಮಹಾನ್ಪಾದಸ್ತತ್ರ ಕರ್ಮ ಚಕಾರ ಸಃ||
ಹಿಮವತ್ಪರ್ವತದ ಉತ್ತರದಲ್ಲಿ ಮೇರು ಪರ್ವತದ ಬಳಿಹೋಗಿ ಅಲ್ಲಿದ್ದ ಮಹಾ ಕಾಂಚನ ಪರ್ವತದಲ್ಲಿ ಯಜ್ಞಗಳನ್ನು ಮಾಡಿದನು.
14004026a ತತಃ ಕುಂಡಾನಿ ಪಾತ್ರೀಶ್ಚ ಪಿಠರಾಣ್ಯಾಸನಾನಿ ಚ|
14004026c ಚಕ್ರುಃ ಸುವರ್ಣಕರ್ತಾರೋ ಯೇಷಾಂ ಸಂಖ್ಯಾ ನ ವಿದ್ಯತೇ||
ಅಲ್ಲಿ ಬಂಗಾರದ ಕೆಲಸಗಾರರು ಯಜ್ಞದ ಸಲುವಾಗಿ ಸುವರ್ಣಕುಂಡಗಳನ್ನೂ, ಪಾತ್ರೆಗಳನ್ನೂ, ಪೀಠಗಳನ್ನೂ ಮಾಡಿದರು. ಅವುಗಳ ಸಂಖ್ಯೆಯೆಷ್ಟೆಂದು ಗೊತ್ತಿಲ್ಲ.
14004027a ತಸ್ಯೈವ ಚ ಸಮೀಪೇ ಸ ಯಜ್ಞವಾಟೋ ಬಭೂವ ಹ|
14004027c ಈಜೇ ತತ್ರ ಸ ಧರ್ಮಾತ್ಮಾ ವಿಧಿವತ್ಪೃಥಿವೀಪತಿಃ|
14004027e ಮರುತ್ತಃ ಸಹಿತೈಃ ಸರ್ವೈಃ ಪ್ರಜಾಪಾಲೈರ್ನರಾಧಿಪಃ||
ಅದರ ಬಳಿಯಲ್ಲಿಯೇ ಯಜ್ಞವಾಟಿಕೆಯಿತ್ತು. ಅಲ್ಲಿಯೇ ಧರ್ಮಾತ್ಮಾ ಪೃಥಿವೀಪತಿ ನರಾಧಿಪ ಮರುತ್ತನು ಸರ್ವ ಪ್ರಜಾಪಾಲರೊಂದಿಗೆ ವಿಧಿವತ್ತಾಗಿ ಯಜ್ಞಮಾಡಿದನು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ಚತುರ್ಥೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ನಾಲ್ಕನೇ ಅಧ್ಯಾಯವು.