ಅಶ್ವಮೇಧಿಕ ಪರ್ವ
೩೯
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೨೪).
14039001 ಬ್ರಹ್ಮೋವಾಚ
14039001a ನೈವ ಶಕ್ಯಾ ಗುಣಾ ವಕ್ತುಂ ಪೃಥಕ್ತ್ವೇನೇಹ ಸರ್ವಶಃ|
14039001c ಅವಿಚ್ಛಿನ್ನಾನಿ ದೃಶ್ಯಂತೇ ರಜಃ ಸತ್ತ್ವಂ ತಮಸ್ತಥಾ||
ಬ್ರಹ್ಮನು ಹೇಳಿದನು: “ಈ ಗುಣಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನಿರೂಪಿಸುವುದು ಶಕ್ಯವಿಲ್ಲ. ಏಕೆಂದರೆ ರಜ-ಸತ್ತ್ವ-ತಮಗಳು ಬೇರೆಬೇರೆಯಾಗಿರದೇ ಅವಿಚ್ಛಿನ್ನವಾಗಿಯೇ ಕಾಣುತ್ತವೆ.
14039002a ಅನ್ಯೋನ್ಯಮನುಷಜ್ಜಂತೇ ಅನ್ಯೋನ್ಯಂ ಚಾನುಜೀವಿನಃ|
14039002c ಅನ್ಯೋನ್ಯಾಪಾಶ್ರಯಾಃ ಸರ್ವೇ ತಥಾನ್ಯೋನ್ಯಾನುವರ್ತಿನಃ||
ಈ ಗುಣಗಳು ಅನ್ಯೋನ್ಯರನ್ನು ಸೇರಿಕೊಂಡೇ ಇರುತ್ತವೆ. ಅನ್ಯೋನ್ಯರನ್ನು ಅವಲಂಬಿಸಿಯೇ ಇರುತ್ತವೆ. ಅನ್ಯೋನ್ಯರನ್ನು ಆಶ್ರಯಿಸಿಕೊಂಡಿರುತ್ತವೆ. ಹಾಗೆಯೇ ಅನ್ಯೋನ್ಯರನ್ನು ಅನುಸರಿಸಿಕೊಂಡಿರುತ್ತವೆ.
14039003a ಯಾವತ್ಸತ್ತ್ವಂ ತಮಸ್ತಾವದ್ವರ್ತತೇ ನಾತ್ರ ಸಂಶಯಃ|
14039003c ಯಾವತ್ತಮಶ್ಚ ಸತ್ತ್ವಂ ಚ ರಜಸ್ತಾವದಿಹೋಚ್ಯತೇ||
ಎಲ್ಲಿಯವರೆಗೆ ಸತ್ತ್ವಗುಣವಿರುತ್ತದೆಯೋ ಅಲ್ಲಿಯವರೆಗೆ ತಮೋಗುಣವೂ ಇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಎಲ್ಲಿಯವರೆಗೆ ತಮೋಗುಣ-ಸತ್ವಗುಣಗಳಿರುತ್ತವೆಯೋ ಅಲ್ಲಿಯವರೆಗೆ ರಜೋಗುಣವೂ ಇದ್ದೇ ಇರುತ್ತದೆ.
14039004a ಸಂಹತ್ಯ ಕುರ್ವತೇ ಯಾತ್ರಾಂ ಸಹಿತಾಃ ಸಂಘಚಾರಿಣಃ|
14039004c ಸಂಘಾತವೃತ್ತಯೋ ಹ್ಯೇತೇ ವರ್ತಂತೇ ಹೇತ್ವಹೇತುಭಿಃ||
ಇವು ಒಟ್ಟಿಗೇ ಸಂಘಚಾರಿಗಳಾಗಿ ಯಾತ್ರೆಮಾಡುತ್ತಿರುತ್ತವೆ. ಶರೀರಗಳಲ್ಲಿ ಇವು ಯಾವಾಗಲೂ ಪರಸ್ಪರ ಸೇರಿಕೊಂಡೇ ಇರುತ್ತವೆ.
14039005a ಉದ್ರೇಕವ್ಯತಿರೇಕಾಣಾಂ ತೇಷಾಮನ್ಯೋನ್ಯವರ್ತಿನಾಮ್|
14039005c ವರ್ತತೇ ತದ್ಯಥಾನ್ಯೂನಂ ವ್ಯತಿರಿಕ್ತಂ ಚ ಸರ್ವಶಃ||
ಅನ್ಯೋನ್ಯರನ್ನು ಅನುಸರಿಸಿಕೊಂಡಿದ್ದರೂ ಅವುಗಳಲ್ಲಿ ಉದ್ರೇಕ-ಅತಿರೇಕಗಳುಂಟಾಗುತ್ತವೆ. ಕೆಲವು ಸಮಯಗಳಲ್ಲಿ ಒಂದು ಗುಣವು ಮತ್ತೊಂದು ಗುಣಕ್ಕಿಂತಲೂ ಹೆಚ್ಚಾಗಿರುವುದೂ ಕಮ್ಮಿಯಾಗಿರುವೂ ಕಂಡುಬರುತ್ತದೆ.
14039006a ವ್ಯತಿರಿಕ್ತಂ ತಮೋ ಯತ್ರ ತಿರ್ಯಗ್ಭಾವಗತಂ ಭವೇತ್|
14039006c ಅಲ್ಪಂ ತತ್ರ ರಜೋ ಜ್ಞೇಯಂ ಸತ್ತ್ವಂ ಚಾಲ್ಪತರಂ ತತಃ||
ತಿರ್ಯಗ್ಯೋನಿಗಳಲ್ಲಿ (ಪಶು-ಪಕ್ಷಿಗಳಲ್ಲಿ) ತಮೋಗುಣವು ಅಧಿಕವಾಗಿಯೂ, ರಜೋಗುಣವು ಅಲ್ಪವಾಗಿಯೂ ಮತ್ತು ಸತ್ತ್ವಗುಣವು ಅತ್ಯಲ್ಪವಾಗಿಯೂ ಇರುತ್ತವೆ.
14039007a ಉದ್ರಿಕ್ತಂ ಚ ರಜೋ ಯತ್ರ ಮಧ್ಯಸ್ರೋತೋಗತಂ ಭವೇತ್|
14039007c ಅಲ್ಪಂ ತತ್ರ ತಮೋ ಜ್ಞೇಯಂ ಸತ್ತ್ವಂ ಚಾಲ್ಪತರಂ ತತಃ||
ರಜೋಗುಣವು ಉದ್ರಿಕ್ತವಾದವರು ಮಧ್ಯಸ್ರೋತ[1] ಗತಿಯಲ್ಲಿರುತ್ತಾರೆ. ಅವರಲ್ಲಿ ತಮೋಗುಣವು ಅಲ್ಪವಾಗಿಯೂ ಸತ್ತ್ವಗುಣವು ಅತ್ಯಲ್ಪವಾಗಿಯೂ ಇರುತ್ತವೆ.
14039008a ಉದ್ರಿಕ್ತಂ ಚ ಯದಾ ಸತ್ತ್ವಮೂರ್ಧ್ವಸ್ರೋತೋಗತಂ ಭವೇತ್|
14039008c ಅಲ್ಪಂ ತತ್ರ ರಜೋ ಜ್ಞೇಯಂ ತಮಶ್ಚಾಲ್ಪತರಂ ತತಃ||
ಸತ್ತ್ವಗುಣವು ಉದ್ರಿಕ್ತವಾದವರು ಊರ್ಧ್ವಸ್ರೋತಗತಿಯಲ್ಲಿರುತ್ತಾರೆ. ಅವರಲ್ಲಿ ರಜೋಗುಣವು ಅಲ್ಪವಾಗಿಯೂ ತಮೋಗುಣವು ಅತ್ಯಲ್ಪವಾಗಿಯೂ ಇರುತ್ತವೆ.
14039009a ಸತ್ತ್ವಂ ವೈಕಾರಿಕಂ ಯೋನಿರಿಂದ್ರಿಯಾಣಾಂ ಪ್ರಕಾಶಿಕಾ|
14039009c ನ ಹಿ ಸತ್ತ್ವಾತ್ಪರೋ ಭಾವಃ ಕಶ್ಚಿದನ್ಯೋ ವಿಧೀಯತೇ||
ಇಂದ್ರಿಯಗಳಿಗೆ ಕಾರಣೀಭೂತವಾದ ಸತ್ತ್ವಗುಣವು ಇಂದ್ರಿಯಗಳನ್ನು ಪ್ರಕಾಶಗೊಳಿಸುತ್ತದೆ. ಸತ್ತ್ವಗುಣಕ್ಕಿಂತಲೂ ಮಿಗಿಲಾದ ಬೇರೆ ಧರ್ಮವು ಇಲ್ಲ.
14039010a ಊರ್ಧ್ವಂ ಗಚ್ಚಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ|
14039010c ಜಘನ್ಯಗುಣಸಂಯುಕ್ತಾ ಯಾಂತ್ಯಧಸ್ತಾಮಸಾ ಜನಾಃ||
ಸತ್ತ್ವಗುಣದಲ್ಲಿರುವವರು ಸ್ವರ್ಗಾದಿ ಉಚ್ಛಲೋಕಗಳಿಗೆ ಹೋಗುತ್ತಾರೆ. ರಾಜಸಗುಣವು ಹೆಚ್ಚಾಗಿರುವವರು ಮಧ್ಯಮವಾದ ಮನುಷ್ಯ ಲೋಕದಲ್ಲಿ ಹುಟ್ಟುತ್ತಿರುತ್ತಾರೆ. ಅನ್ಯವಾದ ತಾಮಸ ಗುಣಸಂಯುಕ್ತ ಜನರು ಅಧೋಗತಿಯನ್ನು ಹೊಂದುತ್ತಾರೆ.
14039011a ತಮಃ ಶೂದ್ರೇ ರಜಃ ಕ್ಷತ್ರೇ ಬ್ರಾಹ್ಮಣೇ ಸತ್ತ್ವಮುತ್ತಮಮ್|
14039011c ಇತ್ಯೇವಂ ತ್ರಿಷು ವರ್ಣೇಷು ವಿವರ್ತಂತೇ ಗುಣಾಸ್ತ್ರಯಃ||
ಶೂದ್ರನಲ್ಲಿ ತಮೋಗುಣವೂ, ಕ್ಷತ್ರಿಯನಲ್ಲಿ ರಜೋಗುಣವೂ ಮತ್ತು ಬ್ರಾಹ್ಮಣನಲ್ಲಿ ಉತ್ತಮ ಸತ್ತ್ವಗುಣವೂ ಪ್ರಧಾನವಾಗಿರುತ್ತದೆ. ಹೀಗೆ ಈ ಮೂರು ವರ್ಣಗಳಲ್ಲಿ ಈ ಮೂರು ಗುಣಗಳು ವಿಶೇಷವಾಗಿರುತ್ತವೆ.
14039012a ದೂರಾದಪಿ ಹಿ ದೃಶ್ಯಂತೇ ಸಹಿತಾಃ ಸಂಘಚಾರಿಣಃ|
14039012c ತಮಃ ಸತ್ತ್ವಂ ರಜಶ್ಚೈವ ಪೃಥಕ್ತ್ವಂ ನಾನುಶುಶ್ರುಮ||
ಈ ಮೂರುಗುಣಗಳೂ ಜೊತೆ-ಜೊತೆಯಲ್ಲಿ ಸಂಚರಿಸುತ್ತಾ ಪರಸ್ಪರರಲ್ಲಿ ಸೇರಿಕೊಂಡಿರುವುದನ್ನು ನಾವು ದೂರದಿಂದಲೇ ಕಾಣಬಹುದು. ಆದರೆ ಸತ್ತ್ವ-ರಜ-ತಮೋಗುಣಗಳು ಪ್ರತ್ಯೇಕ-ಪ್ರತ್ಯೇಕವಾಗಿರುವುದನ್ನು ನಾವು ಕೇಳಿಯೇ ಇಲ್ಲ.
14039013a ದೃಷ್ಟ್ವಾ ಚಾದಿತ್ಯಮುದ್ಯಂತಂ ಕುಚೋರಾಣಾಂ ಭಯಂ ಭವೇತ್|
14039013c ಅಧ್ವಗಾಃ ಪರಿತಪ್ಯೇರಂಸ್ತೃಷ್ಣಾರ್ತಾ ದುಃಖಭಾಗಿನಃ||
ಸೂರ್ಯೋದಯವನ್ನು ನೋಡುತ್ತಿದ್ದಂತೆಯೇ ದುರಾಚಾರಿಗಳಿಗೆ ಭಯವಾಗುತ್ತದೆ. ಅಂಥಹ ದಾರಿಹೋಕರು ಬಾಯಾರಿಕೆಯಿಂದ ಪೀಡಿತರಾಗಿ ದುಃಖದಿಂದ ಪರಿತಪಿಸುತ್ತಾರೆ.
14039014a ಆದಿತ್ಯಃ ಸತ್ತ್ವಮುದ್ದಿಷ್ಟಂ ಕುಚೋರಾಸ್ತು ಯಥಾ ತಮಃ|
14039014c ಪರಿತಾಪೋಽಧ್ವಗಾನಾಂ ಚ ರಾಜಸೋ ಗುಣ ಉಚ್ಯತೇ||
ಸೂರ್ಯೋದಯವೇ ಸತ್ತ್ವಗುಣದ ಆವಿರ್ಭಾವ. ದುರಾಚಾರಿಗಳ ಭಯವೇ ತಮೋಗುಣ. ದಾರಿಹೋಕರ ಪರಿತಾಪವೇ ರಾಜಸ ಗುಣ ಎಂದು ಹೇಳುತ್ತಾರೆ.
14039015a ಪ್ರಾಕಾಶ್ಯಂ ಸತ್ತ್ವಮಾದಿತ್ಯೇ ಸಂತಾಪೋ ರಾಜಸೋ ಗುಣಃ|
14039015c ಉಪಪ್ಲವಸ್ತು ವಿಜ್ಞೇಯಸ್ತಾಮಸಸ್ತಸ್ಯ ಪರ್ವಸು||
ಸೂರ್ಯನ ಪ್ರಕಾಶವೇ ಸತ್ತ್ವಗುಣ. ಅವನಿಂದ ಉಂಟಾಗುವ ಸಂತಾಪವೇ ರಾಜಸ ಗುಣ. ಪರ್ವಕಾಲಗಳಲ್ಲಿ ಆಗುವ ಸೂರ್ಯನ ಗ್ರಹಣಗಳೇ ತಮ ಎಂದು ತಿಳಿಯಬೇಕು.
14039016a ಏವಂ ಜ್ಯೋತಿಃಷು ಸರ್ವೇಷು ವಿವರ್ತಂತೇ ಗುಣಾಸ್ತ್ರಯಃ|
14039016c ಪರ್ಯಾಯೇಣ ಚ ವರ್ತಂತೇ ತತ್ರ ತತ್ರ ತಥಾ ತಥಾ||
ಹೀಗೆ ಎಲ್ಲ ಜ್ಯೋತಿಗಳಲ್ಲಿಯೂ ಈ ಮೂರು ಗುಣಗಳು ಅಲ್ಲಲ್ಲಿ ಒಂದಾದ ಮೇಲೆ ಮತ್ತೊಂದರಂತೆ ಪ್ರಕಟವಾಗುತ್ತಿರುತ್ತವೆ ಮತ್ತು ಲೀನವಾಗುತ್ತಿರುತ್ತವೆ.
14039017a ಸ್ಥಾವರೇಷು ಚ ಭೂತೇಷು ತಿರ್ಯಗ್ಭಾವಗತಂ ತಮಃ|
14039017c ರಾಜಸಾಸ್ತು ವಿವರ್ತಂತೇ ಸ್ನೇಹಭಾವಸ್ತು ಸಾತ್ತ್ವಿಕಃ||
ಸ್ಥಾವರ ಮತ್ತು ಪ್ರಾಣಿಗಳಲ್ಲಿ ತಮೋಗುಣವು ಅಧಿಕವಾಗಿರುತ್ತದೆ. ಅವುಗಳಲ್ಲಿ ಆಗುವ ಪರಿವರ್ತನೆಗಳೇ ರಜೋ ಗುಣ. ಸ್ನೇಹಭಾವವೇ ಸಾತ್ತ್ವಿಕ ಗುಣ.
14039018a ಅಹಸ್ತ್ರಿಧಾ ತು ವಿಜ್ಞೇಯಂ ತ್ರಿಧಾ ರಾತ್ರಿರ್ವಿಧೀಯತೇ|
14039018c ಮಾಸಾರ್ಧಮಾಸವರ್ಷಾಣಿ ಋತವಃ ಸಂಧಯಸ್ತಥಾ||
ಈ ಗುಣಗಳ ಪ್ರಭಾವದಿಂದಲೇ ಹಗಲು, ರಾತ್ರಿ, ಮಾಸ, ಪಕ್ಷ, ವರ್ಷ, ಋತು ಮತ್ತು ಸಂಧಿಗಳು ಮೂರು ಪ್ರಕಾರವಾಗಿರುತ್ತವೆ.
14039019a ತ್ರಿಧಾ ದಾನಾನಿ ದೀಯಂತೇ ತ್ರಿಧಾ ಯಜ್ಞಃ ಪ್ರವರ್ತತೇ|
14039019c ತ್ರಿಧಾ ಲೋಕಾಸ್ತ್ರಿಧಾ ವೇದಾಸ್ತ್ರಿಧಾ ವಿದ್ಯಾಸ್ತ್ರಿಧಾ ಗತಿಃ||
ಗುಣಭೇದಗಳಿಗನುಗುಣವಾಗಿ ಕೊಡುವ ದಾನಗಳಲ್ಲಿ ಮೂರು ಪ್ರಕಾರಗಳಿವೆ. ಮೂರು ಪ್ರಕಾರದ ಯಜ್ಞಗಳಿವೆ, ಮೂರು ವಿಧದ ಲೋಕಗಳೂ, ಮೂರು ವಿಧದ ದೇವತೆಗಳೂ, ಮೂರು ವಿಧದ ವಿದ್ಯೆಗಳೂ ಮತ್ತು ಮೂರು ಪ್ರಕಾರದ ಮಾರ್ಗಗಳೂ ಇವೆ.
14039020a ಭೂತಂ ಭವ್ಯಂ ಭವಿಷ್ಯಚ್ಚ ಧರ್ಮೋಽರ್ಥಃ ಕಾಮ ಇತ್ಯಪಿ|
14039020c ಪ್ರಾಣಾಪಾನಾವುದಾನಶ್ಚಾಪ್ಯೇತ ಏವ ತ್ರಯೋ ಗುಣಾಃ||
ಭೂತ-ಭವ್ಯ-ಭವಿಷ್ಯಗಳು, ಧರ್ಮ-ಅರ್ಥ-ಕಾಮಗಳೂ, ಪ್ರಾಣ-ಅಪಾನ-ಉದಾನಗಳೂ ತ್ರಿಗುಣಾತ್ಮಕವಾಗಿವೆ.
14039021a ಯತ್ಕಿಂ ಚಿದಿಹ ವೈ ಲೋಕೇ ಸರ್ವಮೇಷ್ವೇವ ತತ್ತ್ರಿಷು|
14039021c ತ್ರಯೋ ಗುಣಾಃ ಪ್ರವರ್ತಂತೇ ಅವ್ಯಕ್ತಾ ನಿತ್ಯಮೇವ ತು|
14039021e ಸತ್ತ್ವಂ ರಜಸ್ತಮಶ್ಚೈವ ಗುಣಸರ್ಗಃ ಸನಾತನಃ||
ಈ ಲೋಕದಲ್ಲಿರುವ ಎಲ್ಲವೂ ಈ ಮೂರುಗುಣಗಳನ್ನು ಹೊಂದಿರುತ್ತವೆ. ಈ ಮೂರು ಗುಣಗಳು ಎಲ್ಲದರಲ್ಲಿಯೂ ಸದಾ ಅವ್ಯಕ್ತವಾಗಿ ಕಾರ್ಯಮಾಡುತ್ತಿರುತ್ತವೆ. ಸತ್ತ್ವ-ರಜ-ತಮೋಗುಣಗಳ ಸೃಷ್ಟಿಯು ಸನಾತನವಾದುದು.
14039022a ತಮೋಽವ್ಯಕ್ತಂ ಶಿವಂ ನಿತ್ಯಮಜಂ ಯೋನಿಃ ಸನಾತನಃ|
14039022c ಪ್ರಕೃತಿರ್ವಿಕಾರಃ ಪ್ರಲಯಃ ಪ್ರಧಾನಂ ಪ್ರಭವಾಪ್ಯಯೌ||
14039023a ಅನುದ್ರಿಕ್ತಮನೂನಂ ಚ ಹ್ಯಕಂಪಮಚಲಂ ಧ್ರುವಮ್|
14039023c ಸದಸಚ್ಚೈವ ತತ್ಸರ್ವಮವ್ಯಕ್ತಂ ತ್ರಿಗುಣಂ ಸ್ಮೃತಮ್|
14039023e ಜ್ಞೇಯಾನಿ ನಾಮಧೇಯಾನಿ ನರೈರಧ್ಯಾತ್ಮಚಿಂತಕೈಃ||
ಪ್ರಕೃತಿಗೆ ಇರುವ ಈ ನಾಮಧೇಯಗಳನ್ನು – ತಮ, ವ್ಯಕ್ತ, ನಿತ್ಯ, ಶಿವ, ಅಜ, ಯೋನಿ, ಸನಾತನ, ಪ್ರಕೃತಿ, ವಿಕಾರ, ಪ್ರಲಯ, ಪ್ರಧಾನ, ಪ್ರಭವ, ಅಪ್ಯಯ, ಅನುದ್ರಿಕ್ತ, ಅನೂನ, ಅಕಂಪ, ಅಚಲ, ಧ್ರುವ, ಸತ್, ಅಸತ್, ತ್ರಿಗುಣ ಮತ್ತು ಅವ್ಯಕ್ತ – ಆಧ್ಯಾತ್ಮ ಚಿಂತಕ ಮನುಷ್ಯರು ತಿಳಿದುಕೊಂಡಿರುತ್ತಾರೆ.
14039024a ಅವ್ಯಕ್ತನಾಮಾನಿ ಗುಣಾಂಶ್ಚ ತತ್ತ್ವತೋ
ಯೋ ವೇದ ಸರ್ವಾಣಿ ಗತೀಶ್ಚ ಕೇವಲಾಃ|
14039024c ವಿಮುಕ್ತದೇಹಃ ಪ್ರವಿಭಾಗತತ್ತ್ವವಿತ್
ಸ ಮುಚ್ಯತೇ ಸರ್ವಗುಣೈರ್ನಿರಾಮಯಃ||
ಅವ್ಯಕ್ತ ಪ್ರಕೃತಿಯ ಈ ಹೆಸರುಗಳು, ಗುಣಗಳು ಮತ್ತು ಗತಿಗಳನ್ನು ಎಲ್ಲವನ್ನೂ ತಿಳಿದುಕೊಂಡಿರುವ ಗುಣವಿಭಾಗ ತತ್ತ್ವಜ್ಞನು ಸರ್ವಗುಣಗಳಿಂದ ಮುಕ್ತನಾಗಿ ನಿರಾಮಯನಾಗಿ ದೇಹವನ್ನು ತ್ಯಜಿಸುತ್ತಾನೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಏಕೋನಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.
[1] ತಿರ್ಯಕ್ ಸ್ರೋತಸರು ಪಶುಗಳು; ಮಧ್ಯ ಸ್ರೋತಸರು ಮನುಷ್ಯರು ಮತ್ತು ಊರ್ದ್ವಸ್ರೋತಸರು ಯೋಗಿಗಳೆಂದು ಹೇಳುತ್ತಾರೆ. ತಿಂದ ಆಹಾರವು ಹೊಟ್ಟೆಯಲ್ಲಿ ಅಡ್ಡಡ್ಡವಾಗಿ (ತಿರ್ಯಗ್ಗತಿ) ಸಂಚರಿಸುವುದರಿಂದ ಪ್ರಾಣಿಗಳಿಗೆ ತಿರ್ಯಗ್ಯೋನಿಗಳೆಂದೂ, ಮಧ್ಯದಲ್ಲಿ ಸಂಚರಿಸುವುದರಿಂದ ಮನುಷ್ಯರಿಗೆ ಮಧ್ಯಸ್ರೋತಸರೆಂದೂ ಹೇಳುತ್ತಾರೆ. ಊರ್ಧ್ವಸ್ರೋತಸಃ = ಊರ್ಧ್ವಗತಂ ಸ್ರೋತಃ ರೇತಃ ಪ್ರವಾಹಃ ಯಸ್ಯ ಸಃ ಅರ್ಥಾತ್ ರೇತಸ್ಸಿನ ಪ್ರವಾಹವನ್ನು ಕೆಳಮುಖವಾಗಿ ಬಿಡದೇ ಮೇಲ್ಮುಖವಾಗಿ ತಡೆದು ನಿಲ್ಲಿಸುವ ಯೋಗಿಯು ಎಂದು ಅರ್ಥೈಸಿದ್ದಾರೆ.