Ashvamedhika Parva: Chapter 38

ಅಶ್ವಮೇಧಿಕ ಪರ್ವ

೩೮

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೧೫).

14038001 ಬ್ರಹ್ಮೋವಾಚ

14038001a ಅತಃ ಪರಂ ಪ್ರವಕ್ಷ್ಯಾಮಿ ತೃತೀಯಂ ಗುಣಮುತ್ತಮಮ್|

14038001c ಸರ್ವಭೂತಹಿತಂ ಲೋಕೇ ಸತಾಂ ಧರ್ಮಮನಿಂದಿತಮ್||

ಬ್ರಹ್ಮನು ಹೇಳಿದನು: “ಇನ್ನು ಮುಂದೆ ನಾನು ಉತ್ತಮವಾದ, ಲೋಕದಲ್ಲಿ ಸರ್ವಭೂತಗಳಿಗೂ ಹಿತಕರವಾದ, ಸತ್ಪುರುಷರ ಧರ್ಮವಾಗಿರುವ ಅನಿಂದಿತ ಮೂರನೆಯ ಗುಣದ ಕುರಿತು ಹೇಳುತ್ತೇನೆ.

14038002a ಆನಂದಃ ಪ್ರೀತಿರುದ್ರೇಕಃ ಪ್ರಾಕಾಶ್ಯಂ ಸುಖಮೇವ ಚ|

14038002c ಅಕಾರ್ಪಣ್ಯಮಸಂರಂಭಃ ಸಂತೋಷಃ ಶ್ರದ್ದಧಾನತಾ||

14038003a ಕ್ಷಮಾ ಧೃತಿರಹಿಂಸಾ ಚ ಸಮತಾ ಸತ್ಯಮಾರ್ಜವಮ್|

14038003c ಅಕ್ರೋಧಶ್ಚಾನಸೂಯಾ ಚ ಶೌಚಂ ದಾಕ್ಷ್ಯಂ ಪರಾಕ್ರಮಃ||

ಆನಂದ, ಪ್ರಸನ್ನತೆ, ಉನ್ನತಿ, ಪ್ರಕಾಶ, ಸುಖ, ಕೃಪಣತೆಯಿಲ್ಲದಿರುವುದು, ನಿರ್ಭಯನಾಗಿರುವುದು, ಸಂತೋಷ, ಶ್ರದ್ಧೆ, ಕ್ಷಮೆ, ಧೈರ್ಯ, ಅಹಿಂಸೆ, ಸಮತಾ, ಸತ್ಯ, ಸರಳತೆ, ಅಕ್ರೋಧ, ಅನಸೂಯಾ, ಶೌಚ, ದಕ್ಷತೆ ಮತ್ತು ಪರಾಕ್ರಮ ಇವು ಸತ್ತ್ವಗುಣದ ಕಾರ್ಯಗಳು.

14038004a ಮುಧಾ ಜ್ಞಾನಂ ಮುಧಾ ವೃತ್ತಂ ಮುಧಾ ಸೇವಾ ಮುಧಾ ಶ್ರಮಃ|

14038004c ಏವಂ ಯೋ ಯುಕ್ತಧರ್ಮಃ ಸ್ಯಾತ್ಸೋಽಮುತ್ರಾನಂತ್ಯಮಶ್ನುತೇ||

ಜ್ಞಾನವು ವ್ಯರ್ಥ, ವ್ಯವಹಾರಗಳು ವ್ಯರ್ಥ, ಸೇವೆಯು ವ್ಯರ್ಥ, ಶ್ರಮವು ವ್ಯರ್ಥ ಎಂದು ಅರಿತುಕೊಂಡು ಧರ್ಮದಲ್ಲಿಯೇ ನಿರತನಾಗಿರುವವನು ಪರಲೋಕದಲ್ಲಿ ಅಕ್ಷಯ ಲೋಕವನ್ನು ಉಪಭೋಗಿಸುತ್ತಾನೆ.

14038005a ನಿರ್ಮಮೋ ನಿರಹಂಕಾರೋ ನಿರಾಶೀಃ ಸರ್ವತಃ ಸಮಃ|

14038005c ಅಕಾಮಹತ ಇತ್ಯೇಷ ಸತಾಂ ಧರ್ಮಃ ಸನಾತನಃ||

ನನ್ನದು ಎಂಬ ಮಮಕಾರವಿಲ್ಲದಿರುವುದು, ನಾನು ಎಂಬ ಅಹಂಕಾರವಿಲ್ಲದಿರುವುದು, ಆಸೆಗಳಿಲ್ಲದಿರುವುದು, ಎಲ್ಲ ಸಂದರ್ಭಗಳಲ್ಲಿಯೂ ಎಲ್ಲವುಗಳ ಜೊತೆಯೂ ಸಮನಾಗಿರುವುದು, ನಿಷ್ಕಾಮಭಾವದಿಂದ ಇರುವುದು ಇವೇ ಸತ್ವಯುತರ ಸನಾತನ ಧರ್ಮ.

14038006a ವಿಶ್ರಂಭೋ ಹ್ರೀಸ್ತಿತಿಕ್ಷಾ ಚ ತ್ಯಾಗಃ ಶೌಚಮತಂದ್ರಿತಾ|

14038006c ಆನೃಶಂಸ್ಯಮಸಂಮೋಹೋ ದಯಾ ಭೂತೇಷ್ವಪೈಶುನಮ್||

14038007a ಹರ್ಷಸ್ತುಷ್ಟಿರ್ವಿಸ್ಮಯಶ್ಚ ವಿನಯಃ ಸಾಧುವೃತ್ತತಾ|

14038007c ಶಾಂತಿಕರ್ಮ ವಿಶುದ್ಧಿಶ್ಚ ಶುಭಾ ಬುದ್ಧಿರ್ವಿಮೋಚನಮ್||

14038008a ಉಪೇಕ್ಷಾ ಬ್ರಹ್ಮಚರ್ಯಂ ಚ ಪರಿತ್ಯಾಗಶ್ಚ ಸರ್ವಶಃ|

14038008c ನಿರ್ಮಮತ್ವಮನಾಶೀಸ್ತ್ವಮಪರಿಕ್ರೀತಧರ್ಮತಾ||

ವಿಶ್ವಾಸ, ಲಜ್ಜೆ, ಸಹನೆ, ತ್ಯಾಗ, ಶೌಚ, ಅನಾಲಸ್ಯ, ಕಾರುಣ್ಯ, ಮೋಹವಿಲ್ಲದಿರುವುದು, ಪ್ರಾಣಿಗಳಲ್ಲಿ ದಯೆ, ಚಾಡಿಹೇಳದಿರುವುದು, ಹರ್ಷ, ತುಷ್ಟಿ, ಗರ್ವವಿಲ್ಲದಿರುವುದು, ವಿನಯ, ಸದ್ವ್ಯವಹಾರ, ಶಾಂತಿಕರ್ಮ, ವಿಶುದ್ಧ ಭಾವ, ಶುಭ ಬುದ್ಧಿ, ಭವ-ಬಂಧ ವಿಮೋಚನೆ, ಲೌಕಿಕ ವ್ಯವಹಾರಗಳಲ್ಲಿ ಉಪೇಕ್ಷೆ, ಬ್ರಹ್ಮಚರ್ಯ, ಸರ್ವಪರಿತ್ಯಾಗ, ನಿರ್ಮಮತೆ, ನಿಷ್ಕಾಮನೆ, ಕಾಮನೆಗಳಿಲ್ಲದೇ ಧರ್ಮವನ್ನು ಅನುಸರಿಸುವುದು – ಇವು ಸತ್ತ್ವಗುಣದ ಕಾರ್ಯಗಳು.

14038009a ಮುಧಾ ದಾನಂ ಮುಧಾ ಯಜ್ಞೋ ಮುಧಾಧೀತಂ ಮುಧಾ ವ್ರತಮ್|

14038009c ಮುಧಾ ಪ್ರತಿಗ್ರಹಶ್ಚೈವ ಮುಧಾ ಧರ್ಮೋ ಮುಧಾ ತಪಃ||

14038010a ಏವಂವೃತ್ತಾಸ್ತು ಯೇ ಕೇ ಚಿಲ್ಲೋಕೇಽಸ್ಮಿನ್ಸತ್ತ್ವಸಂಶ್ರಯಾಃ|

14038010c ಬ್ರಾಹ್ಮಣಾ ಬ್ರಹ್ಮಯೋನಿಸ್ಥಾಸ್ತೇ ಧೀರಾಃ ಸಾಧುದರ್ಶಿನಃ||

ಈ ಲೋಕದಲ್ಲಿ ದಾನ, ಯಜ್ಞ, ಅಧ್ಯಯನ, ವ್ರತ, ಪರಿಗ್ರಹ, ಧರ್ಮ ಮತ್ತು ತಪಸ್ಸು – ಇವೆಲ್ಲವೂ ವ್ಯರ್ಥವಾದವುಗಳೆಂದು ಅರಿತು ಸತ್ತ್ವಗುಣದಲ್ಲಿದ್ದುಕೊಂಡು ನಡೆದುಕೊಳ್ಳುತ್ತಾ ಬ್ರಹ್ಮಯೋನಿಯಲ್ಲಿ ನಿಷ್ಠೆಯುಳ್ಳವರಾದ ಬ್ರಾಹ್ಮಣರೇ ಧೀರರೂ ಸಾಧುದರ್ಶಿಗಳೂ ಆಗಿರುತ್ತಾರೆ.

14038011a ಹಿತ್ವಾ ಸರ್ವಾಣಿ ಪಾಪಾನಿ ನಿಃಶೋಕಾ ಹ್ಯಜರಾಮರಾಃ|

14038011c ದಿವಂ ಪ್ರಾಪ್ಯ ತು ತೇ ಧೀರಾಃ ಕುರ್ವತೇ ವೈ ತತಸ್ತತಃ||

ಇವರು ಸರ್ವ ಪಾಪಗಳನ್ನೂ ಹೋಗಲಾಡಿಸಿಕೊಂಡು ಶೋಕರಹಿತರಾಗಿ ಅಜರಾಮರರಾಗುತ್ತಾರೆ. ಆ ಧೀರರು ಸ್ವರ್ಗಕ್ಕೆ ಹೋಗಿ ಅಲ್ಲಿಯೇ ಕರ್ಮಗಳನ್ನು ಮಾಡುತ್ತಿರುತ್ತಾರೆ.

14038012a ಈಶಿತ್ವಂ ಚ ವಶಿತ್ವಂ ಚ ಲಘುತ್ವಂ ಮನಸಶ್ಚ ತೇ|

14038012c ವಿಕುರ್ವತೇ ಮಹಾತ್ಮಾನೋ ದೇವಾಸ್ತ್ರಿದಿವಗಾ ಇವ||

ಈ ಮಹಾತ್ಮರು ದೇವಲೋಕದಲ್ಲಿ ದೇವತೆಗಳಂತೆ ಈಶಿತ್ವ, ವಶಿತ್ವ ಮತ್ತು ಲಘುತ್ವಗಳೇ ಮೊದಲಾದ ಮಾನಸಿಕ ಸಿದ್ಧಿಗಳನ್ನು ಹೊಂದುತ್ತಾರೆ.

14038013a ಊರ್ಧ್ವಸ್ರೋತಸ ಇತ್ಯೇತೇ ದೇವಾ ವೈಕಾರಿಕಾಃ ಸ್ಮೃತಾಃ|

14038013c ವಿಕುರ್ವತೇ ಪ್ರಕೃತ್ಯಾ ವೈ ದಿವಂ ಪ್ರಾಪ್ತಾಸ್ತತಸ್ತತಃ|

14038013e ಯದ್ಯದಿಚ್ಚಂತಿ ತತ್ಸರ್ವಂ ಭಜಂತೇ ವಿಭಜಂತಿ ಚ||

ಇವರು ಊರ್ಧ್ವಸ್ರೋತಸರೆಂದೂ ವೈಕಾರಿಕ ದೇವತೆಗಳೆಂದೂ ಕರೆಯಲ್ಪಡುತ್ತಾರೆ. ಸ್ವರ್ಗದಲ್ಲಿ ಅವರು ಅಲ್ಲಿಯ ಭೋಗಜನಿತ ಸಂಸ್ಕಾರಗಳಿಂದ ವಿಕಾರಗೊಳ್ಳುತ್ತಾರೆ. ಅವರು ಏನನ್ನು ಇಚ್ಛಿಸುವರೋ ಅವುಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಪ್ರಾರ್ಥಿಸಿದವರಿಗೂ ಅವುಗಳನ್ನು ವಿಭಜಿಸಿ ನೀಡುತ್ತಾರೆ.

14038014a ಇತ್ಯೇತತ್ಸಾತ್ತ್ವಿಕಂ ವೃತ್ತಂ ಕಥಿತಂ ವೋ ದ್ವಿಜರ್ಷಭಾಃ|

14038014c ಏತದ್ವಿಜ್ಞಾಯ ವಿಧಿವಲ್ಲಭತೇ ಯದ್ಯದಿಚ್ಚತಿ||

ದ್ವಿಜರ್ಷಭರೇ! ಸತ್ತ್ವಗುಣದ ವರ್ತನೆಯ ಕುರಿತು ನಿಮಗೆ ಹೇಳಿದ್ದೇನೆ. ಇದನ್ನು ತಿಳಿದವನು ಬಯಸಿದುದೆಲ್ಲವನ್ನೂ ಪಡೆದುಕೊಳ್ಳುತ್ತಾನೆ.

14038015a ಪ್ರಕೀರ್ತಿತಾಃ ಸತ್ತ್ವಗುಣಾ ವಿಶೇಷತೋ

ಯಥಾವದುಕ್ತಂ ಗುಣವೃತ್ತಮೇವ ಚ|

14038015c ನರಸ್ತು ಯೋ ವೇದ ಗುಣಾನಿಮಾನ್ಸದಾ

ಗುಣಾನ್ಸ ಭುಂಕ್ತೇ ನ ಗುಣೈಃ ಸ ಭುಜ್ಯತೇ||

ಸತ್ತ್ವಗುಣದ ವಿಷಯವನ್ನು ವಿಶೇಷವಾಗಿ ಹೇಳಿದ್ದೇನೆ. ಅದರ ಕಾರ್ಯಗಳನ್ನೂ ಯಥಾವತ್ತಾಗಿ ಹೇಳಿದ್ದೇನೆ. ಈ ಗುಣಗಳನ್ನು ಸದಾ ತಿಳಿದುಕೊಂಡಿರುವವನು ಸತ್ತ್ವಗುಣದ ಫಲಗಳನ್ನೇ ಪಡೆಯುತ್ತಾನೆ ಮತ್ತು ಮುಂದೆ ಯಾವ ಗುಣಗಳಿಂದಲೂ ಬಂಧಿಸಲ್ಪಡುವುದಿಲ್ಲ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಅಷ್ಟತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಮೂವತ್ತೆಂಟನೇ ಅಧ್ಯಾಯವು.

Comments are closed.