Ashvamedhika Parva: Chapter 35

ಅಶ್ವಮೇಧಿಕ ಪರ್ವ

೩೫

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಹೇಳಿದುದು (೧-೪೦).

14035001 ಅರ್ಜುನ ಉವಾಚ

14035001a ಬ್ರಹ್ಮ ಯತ್ಪರಮಂ ವೇದ್ಯಂ ತನ್ಮೇ ವ್ಯಾಖ್ಯಾತುಮರ್ಹಸಿ|

14035001c ಭವತೋ ಹಿ ಪ್ರಸಾದೇನ ಸೂಕ್ಷ್ಮೇ ಮೇ ರಮತೇ ಮತಿಃ||

ಅರ್ಜುನನು ಹೇಳಿದನು: “ನಿನ್ನ ಅನುಗ್ರಹದಿಂದ ನನ್ನ ಬುದ್ಧಿಯು ಈಗ ಸೂಕ್ಷ್ಮ ವಿಷಯಗಳ ಕುರಿತು ಆಸಕ್ತವಾಗಿದೆ. ಪರಮವೇದ್ಯವಾದ ಬ್ರಹ್ಮದ ಕುರಿತು ನನಗೆ ಹೇಳಬೇಕು.”

14035002 ವಾಸುದೇವ ಉವಾಚ

14035002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

14035002c ಸಂವಾದಂ ಮೋಕ್ಷಸಂಯುಕ್ತಂ ಶಿಷ್ಯಸ್ಯ ಗುರುಣಾ ಸಹ||

ವಾಸುದೇವನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಈ ಮೋಕ್ಷವಿಷಯಕ ಗುರು-ಶಿಷ್ಯರ ಸಂವಾದವನ್ನು ಉದಾಹರಿಸುತ್ತಾರೆ.

14035003a ಕಶ್ಚಿದ್ಬ್ರಾಹ್ಮಣಮಾಸೀನಮಾಚಾರ್ಯಂ ಸಂಶಿತವ್ರತಮ್|

14035003c ಶಿಷ್ಯಃ ಪಪ್ರಚ್ಚ ಮೇಧಾವೀ ಕಿಂ ಸ್ವಿಚ್ಚ್ರೇಯಃ ಪರಂತಪ||

ಪರಂತಪ! ಕುಳಿತಿದ್ದ ಸಂಶಿತವ್ರತ ಆಚಾರ್ಯ ಬ್ರಾಹ್ಮಣನೊಬ್ಬನನ್ನು ಅವನ ಮೇಧಾವೀ ಶಿಷ್ಯನು “ಶ್ರೇಯವಾದುದು ಏನು?” ಎಂದು ಪ್ರಶ್ನಿಸಿದನು.

14035004a ಭಗವಂತಂ ಪ್ರಪನ್ನೋಽಹಂ ನಿಃಶ್ರೇಯಸಪರಾಯಣಃ|

14035004c ಯಾಚೇ ತ್ವಾಂ ಶಿರಸಾ ವಿಪ್ರ ಯದ್ಬ್ರೂಯಾಂ ತದ್ವಿಚಕ್ಷ್ವ ಮೇ||

“ನಿಃಶ್ರೇಯಸ ಪರಾಯಣನಾಗಿ ನಿಮಗೆ ಶರಣುಬಂದಿದ್ದೇನೆ. ಶಿರಸಾ ವಂದಿಸಿ ಬೇಡಿಕೊಳ್ಳುತ್ತಿದ್ದೇನೆ. ಶ್ರೇಯವಾದುದರ ಕುರಿತು ನನಗೆ ತಿಳಿಯಹೇಳಿ!”

14035005a ತಮೇವಂವಾದಿನಂ ಪಾರ್ಥ ಶಿಷ್ಯಂ ಗುರುರುವಾಚ ಹ|

14035005c ಕಥಯಸ್ವ ಪ್ರವಕ್ಷ್ಯಾಮಿ ಯತ್ರ ತೇ ಸಂಶಯೋ ದ್ವಿಜ||

ಪಾರ್ಥ! ಹಾಗೆ ಹೇಳಿದ ಶಿಷ್ಯನಿಗೆ ಗುರುವು ಹೇಳಿದನು: “ದ್ವಿಜ! ನಿನ್ನ ಸಂಶಯವು ಎಲ್ಲಿದೆ ಹೇಳು. ಅದರ ಕುರಿತು ಹೇಳುತ್ತೇನೆ.”

14035006a ಇತ್ಯುಕ್ತಃ ಸ ಕುರುಶ್ರೇಷ್ಠ ಗುರುಣಾ ಗುರುವತ್ಸಲಃ|

14035006c ಪ್ರಾಂಜಲಿಃ ಪರಿಪಪ್ರಚ್ಚ ಯತ್ತಚ್ಚೃಣು ಮಹಾಮತೇ||

ಮಹಾಮತೇ! ಕುರುಶ್ರೇಷ್ಠ! ಗುರುವು ಹೀಗೆ ಹೇಳಲು ಆ ಗುರುವತ್ಸಲನು ಕೈಮುಗಿದು ಏನನ್ನು ಕೇಳಿದನು ಎನ್ನುವುದನ್ನು ಕೇಳು.

14035007 ಶಿಷ್ಯ ಉವಾಚ

14035007a ಕುತಶ್ಚಾಹಂ ಕುತಶ್ಚ ತ್ವಂ ತತ್ಸತ್ಯಂ ಬ್ರೂಹಿ ಯತ್ಪರಮ್|

14035007c ಕುತೋ ಜಾತಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ||

ಶಿಷ್ಯನು ಹೇಳಿದನು: “ನಾನು ಎಲ್ಲಿಂದ ಬಂದಿರುವೆನು? ನೀವು ಎಲ್ಲಿಂದ ಬಂದಿರುವಿರಿ? ಈ ಸ್ಥಾವರ-ಚರ ಭೂತಗಳು ಎಲ್ಲಿಂದ ಹುಟ್ಟಿವೆ? ಇದನ್ನು ಯಥಾವತ್ತಾಗಿ ಹೇಳಿ.

14035008a ಕೇನ ಜೀವಂತಿ ಭೂತಾನಿ ತೇಷಾಮಾಯುಃ ಕಿಮಾತ್ಮಕಮ್|

14035008c ಕಿಂ ಸತ್ಯಂ ಕಿಂ ತಪೋ ವಿಪ್ರ ಕೇ ಗುಣಾಃ ಸದ್ಭಿರೀರಿತಾಃ|

14035008e ಕೇ ಪಂಥಾನಃ ಶಿವಾಃ ಸಂತಿ ಕಿಂ ಸುಖಂ ಕಿಂ ಚ ದುಷ್ಕೃತಮ್||

ವಿಪ್ರ! ಭೂತಗಳು ಯಾವುದರಿಂದ ಜೀವಿಸುತ್ತವೆ? ಅವುಗಳ ಆಯುಗಳು ಎಷ್ಟು? ಸತ್ಯವೆಂದರೇನು? ತಪಸ್ಸೆಂದರೇನು? ಸತ್ಪುರುಷರು ಪ್ರಶಂಸಿಸುವ ಗುಣಗಳು ಯಾವುವು? ಮಂಗಳಕರ ಮಾರ್ಗಗಳು ಯಾವುವು? ಸುಖವೆಂದರೇನು? ಮತ್ತು ಪಾಪವೆಂದರೇನು?

14035009a ಏತಾನ್ಮೇ ಭಗವನ್ಪ್ರಶ್ನಾನ್ಯಾಥಾತಥ್ಯೇನ ಸತ್ತಮ|

14035009c ವಕ್ತುಮರ್ಹಸಿ ವಿಪ್ರರ್ಷೇ ಯಥಾವದಿಹ ತತ್ತ್ವತಃ||

ಭಗವನ್! ಸತ್ತಮ! ಇವುಗಳು ನನ್ನ ಪ್ರಶ್ನೆಗಳು. ಇವುಗಳಿಗೆ ಯಥಾತಥ್ಯವಾದ ಉತ್ತರವನ್ನು ಹೇಳಬೇಕು.”” 

14035010 ವಾಸುದೇವ ಉವಾಚ

14035010a ತಸ್ಮೈ ಸಂಪ್ರತಿಪನ್ನಾಯ ಯಥಾವತ್ಪರಿಪೃಚ್ಚತೇ|

14035010c ಶಿಷ್ಯಾಯ ಗುಣಯುಕ್ತಾಯ ಶಾಂತಾಯ ಗುರುವರ್ತಿನೇ|

14035010e ಚಾಯಾಭೂತಾಯ ದಾಂತಾಯ ಯತಯೇ ಬ್ರಹ್ಮಚಾರಿಣೇ||

14035011a ತಾನ್ಪ್ರಶ್ನಾನಬ್ರವೀತ್ಪಾರ್ಥ ಮೇಧಾವೀ ಸ ಧೃತವ್ರತಃ|

14035011c ಗುರುಃ ಕುರುಕುಲಶ್ರೇಷ್ಠ ಸಮ್ಯಕ್ಸರ್ವಾನರಿಂದಮ||

ವಾಸುದೇವನು ಹೇಳಿದನು: “ಪಾರ್ಥ! ಕುರುಕುಲಶ್ರೇಷ್ಠ! ಅರಿಂದಮ! ಅತ್ಯಂತ ವಿನೀತನಾಗಿದ್ದ, ಶಾಂತಸ್ವಭಾವದವನಾಗಿದ್ದ, ಗುರುವನ್ನೇ ಅನುಸರಿಸಿ ನಡೆಯುತ್ತಿದ್ದ, ಜಿತೇಂದ್ರಿಯನಾಗಿದ್ದ, ಪ್ರಯತ್ನಶೀಲನಾದ ಮತ್ತು ಯಥೋಚಿತವಾದ ಪ್ರಶ್ನೆಗಳನ್ನೇ ಕೇಳಿದ ಆ ಗುಣಯುಕ್ತ ಶಿಷ್ಯನ ಆ ಪ್ರಶ್ನೆಗಳಿಗೆ ಮೇಧಾವೀ ಮತ್ತು ವ್ರತನಿಷ್ಠ ಗುರುವು ಸಮಂಜಸವಾದ ಉತ್ತರಗಳನ್ನು ಹೇಳಿದನು.

14035012a ಬ್ರಹ್ಮಪ್ರೋಕ್ತಮಿದಂ ಧರ್ಮಮೃಷಿಪ್ರವರಸೇವಿತಮ್|

14035012c ವೇದವಿದ್ಯಾಸಮಾವಾಪ್ಯಂ ತತ್ತ್ವಭೂತಾರ್ಥಭಾವನಮ್||

“ವೇದವಿದ್ಯೆಯನ್ನು ಆಧರಿಸಿದ, ತತ್ತ್ವಭೂತಾರ್ಥಭಾವನೆಗಳುಳ್ಳ ಮತ್ತು ಋಷಿಶ್ರೇಷ್ಠರು ಆಶ್ರಯಿಸಿರುವ ಈ ಧರ್ಮವನ್ನು ಬ್ರಹ್ಮನೇ ಹೇಳಿದ್ದನು.

14035013a ಭೂತಭವ್ಯಭವಿಷ್ಯಾದಿಧರ್ಮಕಾಮಾರ್ಥನಿಶ್ಚಯಮ್|

14035013c ಸಿದ್ಧಸಂಘಪರಿಜ್ಞಾತಂ ಪುರಾಕಲ್ಪಂ ಸನಾತನಮ್||

14035014a ಪ್ರವಕ್ಷ್ಯೇಽಹಂ ಮಹಾಪ್ರಾಜ್ಞ ಪದಮುತ್ತಮಮದ್ಯ ತೇ|

14035014c ಬುದ್ಧ್ವಾ ಯದಿಹ ಸಂಸಿದ್ಧಾ ಭವಂತೀಹ ಮನೀಷಿಣಃ||

ಮಹಾಪ್ರಾಜ್ಞ! ಭೂತ-ಭವಿಷ್ಯ-ವರ್ತಮಾನಗಳಲ್ಲಿ ಧರ್ಮ-ಕಾಮ-ಅರ್ಥಗಳ ನಿಶ್ಚಯಕ್ಕೆ ಸಾಧಕವಾದ, ಸಿದ್ಧಸಂಘರು ಅರ್ಥಮಾಡಿಕೊಂಡ, ಉತ್ತಮ ಪದವನ್ನು ನೀಡುವ ಮತ್ತು ಹಿಂದಿನ ಕಲ್ಪದ ಸನಾತನ ವಿಷಯವನ್ನು ಇಂದು ನಾನು ಹೇಳುತ್ತೇನೆ. ಇದನ್ನರಿತುಕೊಂಡ ವಿದ್ವಾಂಸರು ಸಂಸಿದ್ಧರೇ ಆಗುತ್ತಾರೆ.

14035015a ಉಪಗಮ್ಯರ್ಷಯಃ ಪೂರ್ವಂ ಜಿಜ್ಞಾಸಂತಃ ಪರಸ್ಪರಮ್|

14035015c ಬೃಹಸ್ಪತಿಭರದ್ವಾಜೌ ಗೌತಮೋ ಭಾರ್ಗವಸ್ತಥಾ||

14035016a ವಸಿಷ್ಠಃ ಕಾಶ್ಯಪಶ್ಚೈವ ವಿಶ್ವಾಮಿತ್ರೋಽತ್ರಿರೇವ ಚ|

14035016c ಮಾರ್ಗಾನ್ಸರ್ವಾನ್ಪರಿಕ್ರಮ್ಯ ಪರಿಶ್ರಾಂತಾಃ ಸ್ವಕರ್ಮಭಿಃ||

ಹಿಂದೊಮ್ಮೆ ತಮ್ಮ ಕರ್ಮಗಳ ಮೂಲಕ ಸಮಸ್ತ ಮಾರ್ಗಗಳನ್ನೂ ಅತಿಕ್ರಮಿಸಿ ಬಹಳವಾಗಿ ಆಯಾಸಗೊಂಡಿದ್ದ ಬೃಹಸ್ಪತಿ, ಭರದ್ವಾಜ, ಗೌತಮ, ಭಾರ್ಗವ, ವಸಿಷ್ಠ, ಕಶ್ಯಪ, ವಿಶ್ವಾಮಿತ್ರ ಮತ್ತು ಅತ್ರಿ ಋಷಿಗಳು ಪರಸ್ಪರರಲ್ಲಿ ಜಿಜ್ಞಾಸೆಮಾಡುತ್ತಿದ್ದರು.

14035017a ಋಷಿಮಾಂಗಿರಸಂ ವೃದ್ಧಂ ಪುರಸ್ಕೃತ್ಯ ತು ತೇ ದ್ವಿಜಾಃ|

14035017c ದದೃಶುರ್ಬ್ರಹ್ಮಭವನೇ ಬ್ರಹ್ಮಾಣಂ ವೀತಕಲ್ಮಷಮ್||

ಆ ದ್ವಿಜರು ವೃದ್ಧ ಋಷಿ ಆಂಗಿರಸನನ್ನು ಮುಂದೆಮಾಡಿಕೊಂಡು ಪಾಪರಹಿತನಾದ ಬ್ರಹ್ಮನನ್ನು ಕಾಣಲು ಬ್ರಹ್ಮಭವನಕ್ಕೆ ಹೋದರು.

14035018a ತಂ ಪ್ರಣಮ್ಯ ಮಹಾತ್ಮಾನಂ ಸುಖಾಸೀನಂ ಮಹರ್ಷಯಃ|

14035018c ಪಪ್ರಚ್ಚುರ್ವಿನಯೋಪೇತಾ ನಿಃಶ್ರೇಯಸಮಿದಂ ಪರಮ್||

ಸುಖಾಸೀನನಾಗಿದ್ದ ಆ ಮಹಾತ್ಮನಿಗೆ ವಿನಯೋಪೇತರಾಗಿ ನಮಸ್ಕರಿಸಿ ಆ ಮಹರ್ಷಿಗಳು ಪರಮ ಶ್ರೇಯಸ್ಕರವಾದ ಈ ಪ್ರಶ್ನೆಯನ್ನು ಕೇಳಿದರು:

14035019a ಕಥಂ ಕರ್ಮ ಕ್ರಿಯಾತ್ಸಾಧು ಕಥಂ ಮುಚ್ಯೇತ ಕಿಲ್ಬಿಷಾತ್|

14035019c ಕೇ ನೋ ಮಾರ್ಗಾಃ ಶಿವಾಶ್ಚ ಸ್ಯುಃ ಕಿಂ ಸತ್ಯಂ ಕಿಂ ಚ ದುಷ್ಕೃತಮ್||

“ಉತ್ತಮ ಕರ್ಮಗಳನ್ನು ಹೇಗೆ ಮಾಡಬೇಕು? ಪಾಪಗಳಿಂದ ಹೇಗೆ ಮುಕ್ತನಾಗಬೇಕು? ಮಂಗಳಕರ ಮಾರ್ಗಗಳು ಯಾವುವು? ಸತ್ಯವೆಂದರೇನು? ಪಾಪವೆಂದರೇನು?

14035020a ಕೇನೋಭೌ ಕರ್ಮಪಂಥಾನೌ ಮಹತ್ತ್ವಂ ಕೇನ ವಿಂದತಿ|

14035020c ಪ್ರಲಯಂ ಚಾಪವರ್ಗಂ ಚ ಭೂತಾನಾಂ ಪ್ರಭವಾಪ್ಯಯೌ||

ಕರ್ಮಗಳ ಎರಡು ಮಾರ್ಗಗಳು ಯಾವುವು? ಯಾವುದರಿಂದ ಮಹತ್ತ್ವ, ಪ್ರಲಯ, ಅಪವರ್ಗ ಮತ್ತು ಜೀವಿಗಳ ಹುಟ್ಟು-ಸಾವುಗಳು – ಇವುಗಳನ್ನು ತಿಳಿದುಕೊಳ್ಳಬಹುದು?”

14035021a ಇತ್ಯುಕ್ತಃ ಸ ಮುನಿಶ್ರೇಷ್ಠೈರ್ಯದಾಹ ಪ್ರಪಿತಾಮಹಃ|

14035021c ತತ್ತೇಽಹಂ ಸಂಪ್ರವಕ್ಷ್ಯಾಮಿ ಶೃಣು ಶಿಷ್ಯ ಯಥಾಗಮಮ್||

ಆ ಮುನಿಶ್ರೇಷ್ಠರು ಹೀಗೆ ಹೇಳಲು ಪ್ರಪಿತಾಮಹನು ಉತ್ತರವನ್ನಿತ್ತನು. ಶಿಷ್ಯ! ಅದನ್ನು ನಿನಗೆ ಹೇಳುತ್ತೇನೆ. ಕೇಳು!

14035022 ಬ್ರಹ್ಮೋವಾಚ

14035022a ಸತ್ಯಾದ್ಭೂತಾನಿ ಜಾತಾನಿ ಸ್ಥಾವರಾಣಿ ಚರಾಣಿ ಚ|

14035022c ತಪಸಾ ತಾನಿ ಜೀವಂತಿ ಇತಿ ತದ್ವಿತ್ತ ಸುವ್ರತಾಃ||

ಬ್ರಹ್ಮನು ಹೇಳಿದನು: “ಸುವ್ರತರೇ! ಸ್ಥಾವರ-ಚರ ಭೂತಗಳು ಸತ್ಯದಿಂದಲೇ ಹುಟ್ಟುತ್ತವೆ. ಅವು ತಪಸ್ಸಿನಿಂದ ಜೀವಿಸುತ್ತವೆ. ಇದನ್ನು ತಿಳಿದುಕೊಳ್ಳಿರಿ!

14035023a ಸ್ವಾಂ ಯೋನಿಂ ಪುನರಾಗಮ್ಯ ವರ್ತಂತೇ ಸ್ವೇನ ಕರ್ಮಣಾ|

14035023c ಸತ್ಯಂ ಹಿ ಗುಣಸಂಯುಕ್ತಂ ನಿಯತಂ ಪಂಚಲಕ್ಷಣಮ್||

ತಮ್ಮ ತಮ್ಮ ಕರ್ಮಗಳಿಂದ ಪುನಃ ಯೋನಿಗಳಲ್ಲಿ ಹುಟ್ಟುತ್ತಲೇ ಇರುತ್ತವೆ. ಗುಣಸಂಯುಕ್ತವಾದ ಸತ್ಯವು ಐದು ಲಕ್ಷಣಗಳಿಂದ ಕೂಡಿದೆಯೆಂದು ನಿಯತವಾಗಿದೆ.

14035024a ಬ್ರಹ್ಮ ಸತ್ಯಂ ತಪಃ ಸತ್ಯಂ ಸತ್ಯಂ ಚೈವ ಪ್ರಜಾಪತಿಃ|

14035024c ಸತ್ಯಾದ್ಭೂತಾನಿ ಜಾತಾನಿ ಭೂತಂ ಸತ್ಯಮಯಂ ಮಹತ್||

ಬ್ರಹ್ಮವು ಸತ್ಯ, ತಪಸ್ಸು ಸತ್ಯ. ಪ್ರಜಾಪತಿಯು ಸತ್ಯ. ಇರುವವು ಸತ್ಯದಿಂದಲೇ ಹುಟ್ಟುತ್ತವೆ. ಇರುವುದೆಲ್ಲವೂ ಸತ್ಯಮಯವೇ ಆಗಿದೆ.

14035025a ತಸ್ಮಾತ್ಸತ್ಯಾಶ್ರಯಾ ವಿಪ್ರಾ ನಿತ್ಯಂ ಯೋಗಪರಾಯಣಾಃ|

14035025c ಅತೀತಕ್ರೋಧಸಂತಾಪಾ ನಿಯತಾ ಧರ್ಮಸೇತವಃ||

ಆದುದರಿಂದ ನಿತ್ಯಯೋಗಪರಾಯಣರಾಗಿ ಕ್ರೋಧ-ಸಂತಾಪಗಳಿಂದ ದೂರವಿರುವ ಸತ್ಯವನ್ನೇ ಆಶ್ರಯಿಸಿರುವ ವಿಪ್ರರು ಧರ್ಮಸೇತುಗಳೆಂದು ನಿಯತರಾಗಿದ್ದಾರೆ.

14035026a ಅನ್ಯೋನ್ಯನಿಯತಾನ್ವೈದ್ಯಾನ್ಧರ್ಮಸೇತುಪ್ರವರ್ತಕಾನ್|

14035026c ತಾನಹಂ ಸಂಪ್ರವಕ್ಷ್ಯಾಮಿ ಶಾಶ್ವತಾನ್ಲೋಕಭಾವನಾನ್||

ಅನ್ಯೋನ್ಯರಿಗೆ ವೈದ್ಯರೆನಿಸಿಕೊಂಡಿರುವ, ಧರ್ಮಸೇತುವನ್ನು ಕಟ್ಟುವ ಈ ಶಾಶ್ವತ ಲೋಕಭಾವನರ ಕುರಿತು ನಾನು ಹೇಳುತ್ತೇನೆ.

14035027a ಚಾತುರ್ವಿದ್ಯಂ ತಥಾ ವರ್ಣಾಂಶ್ಚತುರಶ್ಚಾಶ್ರಮಾನ್ಪೃಥಕ್|

14035027c ಧರ್ಮಮೇಕಂ ಚತುಷ್ಪಾದಂ ನಿತ್ಯಮಾಹುರ್ಮನೀಷಿಣಃ||

ಹಾಗೆಯೇ ನಾಲ್ಕು ವರ್ಣಗಳ ಮತ್ತು ನಾಲ್ಕು ಆಶ್ರಮಗಳ ಪ್ರತ್ಯೇಕ ಧರ್ಮಗಳ ವಿದ್ಯೆಯ ಕುರಿತು ಹೇಳುತ್ತೇನೆ. ನಿತ್ಯವಾದ ಒಂದೇ ಧರ್ಮವು ನಾಲ್ಕು ಪಾದಗಳುಳ್ಳದ್ದು ಎಂದು ವಿದ್ವಾಂಸರು ಹೇಳುತ್ತಾರೆ.

14035028a ಪಂಥಾನಂ ವಃ ಪ್ರವಕ್ಷ್ಯಾಮಿ ಶಿವಂ ಕ್ಷೇಮಕರಂ ದ್ವಿಜಾಃ|

14035028c ನಿಯತಂ ಬ್ರಹ್ಮಭಾವಾಯ ಯಾತಂ ಪೂರ್ವಂ ಮನೀಷಿಭಿಃ||

ಪೂರ್ವದಲ್ಲಿ ವಿದ್ವಾಂಸ ದ್ವಿಜರು ಬ್ರಹ್ಮಭಾವವನ್ನು ಹೊಂದಲು ಹಾಕಿಕೊಂಡ ನಿಯತವೂ ಕ್ಷೇಮಕರವೂ ಆದ ಮಾರ್ಗದ ಕುರಿತು ಹೇಳುತ್ತೇನೆ.

14035029a ಗದತಸ್ತಂ ಮಮಾದ್ಯೇಹ ಪಂಥಾನಂ ದುರ್ವಿದಂ ಪರಮ್|

14035029c ನಿಬೋಧತ ಮಹಾಭಾಗಾ ನಿಖಿಲೇನ ಪರಂ ಪದಮ್||

ಮಹಾಭಾಗರೇ! ನಾನೀಗ ಹೇಳಲಿರುವ ಮಾರ್ಗವನ್ನು ತಿಳಿದುಕೊಳ್ಳುವುದು ಪರಮ ಕಷ್ಟಕರವಾದುದು. ಪರಮ ಪದದ ಕುರಿತು ಸಂಪೂರ್ಣವಾಗಿ ಕೇಳಿರಿ.

14035030a ಬ್ರಹ್ಮಚಾರಿಕಮೇವಾಹುರಾಶ್ರಮಂ ಪ್ರಥಮಂ ಪದಮ್|

14035030c ಗಾರ್ಹಸ್ಥ್ಯಂ ತು ದ್ವಿತೀಯಂ ಸ್ಯಾದ್ವಾನಪ್ರಸ್ಥಮತಃ ಪರಮ್|

14035030e ತತಃ ಪರಂ ತು ವಿಜ್ಞೇಯಮಧ್ಯಾತ್ಮಂ ಪರಮಂ ಪದಮ್||

ಬ್ರಹ್ಮಚರ್ಯಾಶ್ರಮವನ್ನು ಮೊದಲನೆಯ ಆಶ್ರಮವೆಂದು ಹೇಳುತ್ತಾರೆ. ಗೃಹಸ್ಥಾಶ್ರಮವು ಎರಡನೆಯದು. ವಾನಪ್ರಸ್ಥವು ನಂತರದ ಆಶ್ರಮವು. ಅದರ ನಂತರದ್ದು ಪರಮ ಪದವನ್ನು ನೀಡುವ ಆಧ್ಯಾತ್ಮದ ಆಶ್ರಮವು.

14035031a ಜ್ಯೋತಿರಾಕಾಶಮಾದಿತ್ಯೋ ವಾಯುರಿಂದ್ರಃ ಪ್ರಜಾಪತಿಃ|

14035031c ನೋಪೈತಿ ಯಾವದಧ್ಯಾತ್ಮಂ ತಾವದೇತಾನ್ನ ಪಶ್ಯತಿ|

14035031e ತಸ್ಯೋಪಾಯಂ ಪ್ರವಕ್ಷ್ಯಾಮಿ ಪುರಸ್ತಾತ್ತಂ ನಿಬೋಧತ||

ಎಲ್ಲಿಯವರೆಗೆ ಆಧ್ಯಾತ್ಮ ಪದವನ್ನು ತಲುಪುವುದಿಲ್ಲವೋ ಅಲ್ಲಿಯವರೆಗೆ ಜ್ಯೋತಿ, ಆಕಾಶ, ಆದಿತ್ಯ, ವಾಯು, ಇಂದ್ರ ಮತ್ತು ಪ್ರಜಾಪತಿಯರ ನಿಜಸ್ವರೂಪವನ್ನು ಅವನು ಕಾಣುವುದಿಲ್ಲ. ಆದುದರಿಂದ ಮೊದಲು ನಾನು ಆಧ್ಯಾತ್ಮದ ಉಪಾಯವನ್ನು ಹೇಳುತ್ತೇನೆ. ಕೇಳಿರಿ.

14035032a ಫಲಮೂಲಾನಿಲಭುಜಾಂ ಮುನೀನಾಂ ವಸತಾಂ ವನೇ|

14035032c ವಾನಪ್ರಸ್ಥಂ ದ್ವಿಜಾತೀನಾಂ ತ್ರಯಾಣಾಮುಪದಿಶ್ಯತೇ||

ವನದಲ್ಲಿ ವಾಸವಾಗಿದ್ದುಕೊಂಡು ಫಲ-ಮೂಲಗಳನ್ನು ಮತ್ತು ಗಾಳಿಯನ್ನೇ ಸೇವಿಸಿಕೊಂಡು ಮುನಿಗಳಂತಿರುವ ವಾನಪ್ರಸ್ಥಾಶ್ರಮವು ಮೂರು ದ್ವಿಜಾತಿಯವರಿಗೂ[1] ಉಪದೇಶಿಸಲ್ಪಟ್ಟಿದೆ.

14035033a ಸರ್ವೇಷಾಮೇವ ವರ್ಣಾನಾಂ ಗಾರ್ಹಸ್ಥ್ಯಂ ತದ್ವಿಧೀಯತೇ|

14035033c ಶ್ರದ್ಧಾಲಕ್ಷಣಮಿತ್ಯೇವಂ ಧರ್ಮಂ ಧೀರಾಃ ಪ್ರಚಕ್ಷತೇ||

ಗೃಹಸ್ಥಾಶ್ರಮವು ಎಲ್ಲವರ್ಣದವರಿಗೂ ವಿಹಿತವಾಗಿದೆ. ಧೀರರು ಶ್ರದ್ಧೆಯೇ ಧರ್ಮದ ಲಕ್ಷಣವೆಂದು ಹೇಳುತ್ತಾರೆ.

14035034a ಇತ್ಯೇತೇ ದೇವಯಾನಾ ವಃ ಪಂಥಾನಃ ಪರಿಕೀರ್ತಿತಾಃ|

14035034c ಸದ್ಭಿರಧ್ಯಾಸಿತಾ ಧೀರೈಃ ಕರ್ಮಭಿರ್ಧರ್ಮಸೇತವಃ||

ದೇವಯಾನಮಾರ್ಗಗಳ ಕುರಿತು ನಾನು ನಿಮಗೆ ಹೇಳಿದೆ. ಧೀರ ಸತ್ಪುರುಷರು ಧರ್ಮಸೇತು ಕರ್ಮಗಳಿಂದ ಈ ಮಾರ್ಗಗಳನ್ನು ಅನುಸರಿಸುತ್ತಾರೆ.

14035035a ಏತೇಷಾಂ ಪೃಥಗಧ್ಯಾಸ್ತೇ ಯೋ ಧರ್ಮಂ ಸಂಶಿತವ್ರತಃ|

14035035c ಕಾಲಾತ್ಪಶ್ಯತಿ ಭೂತಾನಾಂ ಸದೈವ ಪ್ರಭವಾಪ್ಯಯೌ||

ಸಂಶಿತವ್ರತನಾದ ಯಾರು ಇವುಗಳಲ್ಲಿ ಯಾವುದೇ ಒಂದನ್ನು ಪ್ರತ್ಯೇಕವಾಗಿ ಅನುಷ್ಠಾನ ಮಾಡುತ್ತಾನೋ ಅವನು ಕಾಲಾನುಕ್ರಮವಾಗಿ ಎಲ್ಲ ಪ್ರಾಣಿಗಳ ಹುಟ್ಟು-ಸಾವುಗಳನ್ನು ಸದೈವ ಕಾಣುತ್ತಿರುತ್ತಾನೆ.

14035036a ಅತಸ್ತತ್ತ್ವಾನಿ ವಕ್ಷ್ಯಾಮಿ ಯಾಥಾತಥ್ಯೇನ ಹೇತುನಾ|

14035036c ವಿಷಯಸ್ಥಾನಿ ಸರ್ವಾಣಿ ವರ್ತಮಾನಾನಿ ಭಾಗಶಃ||

ಈಗ ನಾನು ಯಥಾರ್ಥವಾಗಿ ಹೇತು ತತ್ತ್ವಗಳೆಲ್ಲವುಗಳ ಕುರಿತು ಪ್ರತ್ಯೇಕ ಪ್ರತ್ಯೇಕವಾಗಿ ವಿವರಿಸುತ್ತೇನೆ.

14035037a ಮಹಾನಾತ್ಮಾ ತಥಾವ್ಯಕ್ತಮಹಂಕಾರಸ್ತಥೈವ ಚ|

14035037c ಇಂದ್ರಿಯಾಣಿ ದಶೈಕಂ ಚ ಮಹಾಭೂತಾನಿ ಪಂಚ ಚ||

14035038a ವಿಶೇಷಾಃ ಪಂಚಭೂತಾನಾಮಿತ್ಯೇಷಾ ವೈದಿಕೀ ಶ್ರುತಿಃ|

14035038c ಚತುರ್ವಿಂಶತಿರೇಷಾ ವಸ್ತತ್ತ್ವಾನಾಂ ಸಂಪ್ರಕೀರ್ತಿತಾ||

ಮಹಾ ಆತ್ಮ (ಮಹತ್ತತ್ತ್ವ), ಅವ್ಯಕ್ತ ಪ್ರಕೃತಿ, ಅಹಂಕಾರ, ಹತ್ತು ಇಂದ್ರಿಯಗಳು, ಐದು ಮಹಾಭೂತಗಳು ಮತ್ತು ಈ ಮಹಾಭೂತಗಳ ಐದು ವಿಶೇಷಗುಣಗಳು ಇವು ವೇದಪ್ರಮಾಣವಾದುದೆಂದು ಕೇಳಿದ್ದೇವೆ. ಈ ಇಪ್ಪತ್ನಾಲ್ಕು ಅಂಶಗಳು ತತ್ತ್ವಗಳೆಂದು ಹೇಳಲ್ಪಟ್ಟಿವೆ.

14035039a ತತ್ತ್ವಾನಾಮಥ ಯೋ ವೇದ ಸರ್ವೇಷಾಂ ಪ್ರಭವಾಪ್ಯಯೌ|

14035039c ಸ ಧೀರಃ ಸರ್ವಭೂತೇಷು ನ ಮೋಹಮಧಿಗಚ್ಚತಿ||

ಈ ಎಲ್ಲ ತತ್ತ್ವಗಳ ಉತ್ಪತ್ತಿ-ಲಯಗಳನ್ನು ತಿಳಿದುಕೊಂಡಿರುವವನೇ ಸರ್ವಭೂತಗಳಲ್ಲಿ ಧೀರನೆನಿಸಿಕೊಳ್ಳುತ್ತಾನೆ ಮತ್ತು ಎಂದಿಗೂ ಮೋಹಪರವಶನಾಗುವುದಿಲ್ಲ.

14035040a ತತ್ತ್ವಾನಿ ಯೋ ವೇದಯತೇ ಯಥಾತಥಂ

ಗುಣಾಂಶ್ಚ ಸರ್ವಾನಖಿಲಾಶ್ಚ ದೇವತಾಃ|

14035040c ವಿಧೂತಪಾಪ್ಮಾ ಪ್ರವಿಮುಚ್ಯ ಬಂಧನಂ

ಸ ಸರ್ವಲೋಕಾನಮಲಾನ್ಸಮಶ್ನುತೇ||

ಈ ತತ್ತ್ವಗಳನ್ನು, ಅವುಗಳ ಸರ್ವ ಗುಣಗಳನ್ನು ಮತ್ತು ಅಖಿಲ ದೇವತೆಗಳನ್ನೂ ಯಾರು ಯಥಾವತ್ತಾಗಿ ತಿಳಿದುಕೊಂಡಿರುವನೋ ಅವನು ಪಾಪಗಳನ್ನು ತೊಳೆದುಕೊಂಡು ಬಂಧನದಿಂದ ಬಿಡುಗಡೆಹೊಂದಿ ಸರ್ವ ದಿವ್ಯಲೋಕಗಳನ್ನೂ ಅನುಭವಿಸುತ್ತಾನೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಪಂಚತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಮೂವತ್ತೈದನೇ ಅಧ್ಯಾಯವು.

[1] ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಈ ಮೂರು ದ್ವಿಜಾತಿಗಳು.

Comments are closed.