ಅಶ್ವಮೇಧಿಕ ಪರ್ವ
೩೨
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೨೫).
14032001 ಬ್ರಾಹ್ಮಣ ಉವಾಚ
14032001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
14032001c ಬ್ರಾಹ್ಮಣಸ್ಯ ಚ ಸಂವಾದಂ ಜನಕಸ್ಯ ಚ ಭಾಮಿನಿ||
ಬ್ರಾಹ್ಮಣನು ಹೇಳಿದನು: “ಭಾಮಿನೀ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಈ ಜನಕ ಮತ್ತು ಬ್ರಾಹ್ಮಣರ ಸಂವಾದವನ್ನು ಉದಾಹರಿಸುತ್ತಾರೆ.
14032002a ಬ್ರಾಹ್ಮಣಂ ಜನಕೋ ರಾಜಾ ಸನ್ನಂ ಕಸ್ಮಿಂಶ್ಚಿದಾಗಮೇ|
14032002c ವಿಷಯೇ ಮೇ ನ ವಸ್ತವ್ಯಮಿತಿ ಶಿಷ್ಟ್ಯರ್ಥಮಬ್ರವೀತ್||
ಒಮ್ಮೆ ರಾಜಾ ಜನಕನು ಯಾವುದೋ ಅಪರಾಧದಲ್ಲಿ ಸಿಕ್ಕಿಹಾಕಿಕೊಂಡಿದ್ದ ಬ್ರಾಹ್ಮಣನಿಗೆ “ನನ್ನ ರಾಜ್ಯದಲ್ಲಿ ಇರಬೇಡ!” ಎಂದು ಆಜ್ಞೆಮಾಡಿದನು.
14032003a ಇತ್ಯುಕ್ತಃ ಪ್ರತ್ಯುವಾಚಾಥ ಬ್ರಾಹ್ಮಣೋ ರಾಜಸತ್ತಮಮ್|
14032003c ಆಚಕ್ಷ್ವ ವಿಷಯಂ ರಾಜನ್ಯಾವಾಂಸ್ತವ ವಶೇ ಸ್ಥಿತಃ||
ಇದನ್ನು ಕೇಳಿದ ಬ್ರಾಹ್ಮಣನು ಆ ರಾಜಸತ್ತಮನಿಗೆ ಕೇಳಿದನು: “ರಾಜನ್! ಎಲ್ಲಿಯವರೆಗೆ ನಿನ್ನ ವಶದಲ್ಲಿರುವ ರಾಜ್ಯವಿದೆ ಎನ್ನುವುದನ್ನು ಹೇಳು.
14032004a ಸೋಽನ್ಯಸ್ಯ ವಿಷಯೇ ರಾಜ್ಞೋ ವಸ್ತುಮಿಚ್ಚಾಮ್ಯಹಂ ವಿಭೋ|
14032004c ವಚಸ್ತೇ ಕರ್ತುಮಿಚ್ಚಾಮಿ ಯಥಾಶಾಸ್ತ್ರಂ ಮಹೀಪತೇ||
ವಿಭೋ! ಅನ್ಯ ರಾಜನ ರಾಜ್ಯದಲ್ಲಿ ವಾಸಿಸಲು ಬಯಸುತ್ತೇನೆ. ಮಹೀಪತೇ! ನೀನು ಹೇಳಿದುದನ್ನು ಯಥಾಶಾಸ್ತ್ರವಾಗಿ ಮಾಡಲು ಬಯಸುತ್ತೇನೆ.”
14032005a ಇತ್ಯುಕ್ತಃ ಸ ತದಾ ರಾಜಾ ಬ್ರಾಹ್ಮಣೇನ ಯಶಸ್ವಿನಾ|
14032005c ಮುಹುರುಷ್ಣಂ ಚ ನಿಃಶ್ವಸ್ಯ ನ ಸ ತಂ ಪ್ರತ್ಯಭಾಷತ||
ಯಶಸ್ವೀ ಬ್ರಾಹ್ಮಣನು ಹೀಗೆ ಹೇಳಲು ರಾಜನು ಪುನಃ ಪುನಃ ದೀರ್ಘ ಬಿಸಿ ನಿಟ್ಟುಸಿರನ್ನು ಬಿಟ್ಟನು. ಯಾವ ಉತ್ತರವನ್ನೂ ಕೊಡಲಿಲ್ಲ.
14032006a ತಮಾಸೀನಂ ಧ್ಯಾಯಮಾನಂ ರಾಜಾನಮಮಿತೌಜಸಮ್|
14032006c ಕಶ್ಮಲಂ ಸಹಸಾಗಚ್ಚದ್ಭಾನುಮಂತಮಿವ ಗ್ರಹಃ||
ಯೋಚಿಸುತ್ತಾ ಕುಳಿತಿದ್ದ ಆ ಅಮಿತ ತೇಜಸ್ವಿ ರಾಜನನ್ನು – ಸೂರ್ಯನನ್ನು ರಾಹುವು ಆವರಿಸುವಂತೆ - ಒಮ್ಮಿಂದೊಮ್ಮೆಲೇ ಮೋಹವು ಆವರಿಸಿಕೊಂಡಿತು.
14032007a ಸಮಾಶ್ವಾಸ್ಯ ತತೋ ರಾಜಾ ವ್ಯಪೇತೇ ಕಶ್ಮಲೇ ತದಾ|
14032007c ತತೋ ಮುಹೂರ್ತಾದಿವ ತಂ ಬ್ರಾಹ್ಮಣಂ ವಾಕ್ಯಮಬ್ರವೀತ್||
ಮೋಹದಿಂದ ನಡುಗುತ್ತಿದ್ದ ರಾಜನು ಸ್ವಲ್ಪ ಹೊತ್ತು ಕಳೆದ ನಂತರ ಸಮಾಧಾನತಳೆದು ಬ್ರಾಹ್ಮಣನಿಗೆ ಇಂತೆಂದನು:
14032008a ಪಿತೃಪೈತಾಮಹೇ ರಾಜ್ಯೇ ವಶ್ಯೇ ಜನಪದೇ ಸತಿ|
14032008c ವಿಷಯಂ ನಾಧಿಗಚ್ಚಾಮಿ ವಿಚಿನ್ವನ್ಪೃಥಿವೀಮಿಮಾಮ್||
“ಪಿತೃ-ಪಿತಾಮಹರ ಈ ರಾಜ್ಯ ಜನಪದಗಳು ನನ್ನ ವಶದಲ್ಲಿವೆ. ಆದರೂ ಇಡೀ ಭೂಮಿಯನ್ನೇ ಹುಡುಕಿದರೂ ನನ್ನ ರಾಜ್ಯವೆಲ್ಲಿಯವರೆಗಿದೆ ಎನ್ನುವುದು ತಿಳಿಯುತ್ತಿಲ್ಲ.
14032009a ನಾಧ್ಯಗಚ್ಚಂ ಯದಾ ಪೃಥ್ವ್ಯಾಂ ಮಿಥಿಲಾ ಮಾರ್ಗಿತಾ ಮಯಾ|
14032009c ನಾಧ್ಯಗಚ್ಚಂ ಯದಾ ತಸ್ಯಾಂ ಸ್ವಪ್ರಜಾ ಮಾರ್ಗಿತಾ ಮಯಾ||
ಭೂಮಿಯಲ್ಲೆಲ್ಲಾ ನನ್ನ ರಾಜ್ಯದ ಗಡಿಯನ್ನು ಕಾಣಲಾರದೇ ನಾನು ಮಿಥಿಲಾ ಪ್ರಾಂತದಲ್ಲಿಯೇ ನನ್ನ ರಾಜ್ಯವನ್ನು ಹುಡುಕತೊಡಗಿದೆನು. ಅಲ್ಲಿಯೂ ಕೂಡ ನನ್ನ ರಾಜ್ಯವೆಷ್ಟೆಂದು ತಿಳಿಯದೇ ನನ್ನ ಪ್ರಜೆಗಳು ಯಾರು ಎಂದು ಹುಡುಕತೊಡಗಿದೆನು.
14032010a ನಾಧ್ಯಗಚ್ಚಂ ಯದಾ ತಾಸು ತದಾ ಮೇ ಕಶ್ಮಲೋಽಭವತ್|
14032010c ತತೋ ಮೇ ಕಶ್ಮಲಸ್ಯಾಂತೇ ಮತಿಃ ಪುನರುಪಸ್ಥಿತಾ||
ಅವರನ್ನೂ ನಾನು ಗುರುತಿಸಲು ಸಾಧ್ಯವಾಗದಿದ್ದಾಗ ನಾನು ಮೋಹಪರವಶನಾದೆನು. ಮೋಹವು ಕಳೆದ ನಂತರ ನನ್ನ ಬುದ್ಧಿಯು ಪುನಃ ಸ್ತಿಮಿತಕ್ಕೆ ಬಂದಿತು.
14032011a ತಯಾ ನ ವಿಷಯಂ ಮನ್ಯೇ ಸರ್ವೋ ವಾ ವಿಷಯೋ ಮಮ|
14032011c ಆತ್ಮಾಪಿ ಚಾಯಂ ನ ಮಮ ಸರ್ವಾ ವಾ ಪೃಥಿವೀ ಮಮ|
14032011e ಉಷ್ಯತಾಂ ಯಾವದುತ್ಸಾಹೋ ಭುಜ್ಯತಾಂ ಯಾವದಿಷ್ಯತೇ||
ನನ್ನ ರಾಜ್ಯವೆಂಬುದೇ ಇಲ್ಲ ಅಥವಾ ಎಲ್ಲವೂ ನನ್ನ ರಾಜ್ಯವೇ! ಈ ನನ್ನ ಆತ್ಮವೂ ನನ್ನದಲ್ಲ ಅಥವಾ ಇಡೀ ಭೂಮಿಯೇ ನನ್ನದು! ಆದುದರಿಂದ ನೀನು ನಿನಗಿಷ್ಟವಿದ್ದಷ್ಟು ಕಾಲ ಇಲ್ಲಿಯೇ ಇದ್ದು ಸುಖಭೋಗಗಳನ್ನು ಅನುಭವಿಸು!”
14032012 ಬ್ರಾಹ್ಮಣ ಉವಾಚ
14032012a ಪಿತೃಪೈತಾಮಹೇ ರಾಜ್ಯೇ ವಶ್ಯೇ ಜನಪದೇ ಸತಿ|
14032012c ಬ್ರೂಹಿ ಕಾಂ ಬುದ್ಧಿಮಾಸ್ಥಾಯ ಮಮತ್ವಂ ವರ್ಜಿತಂ ತ್ವಯಾ||
ಬ್ರಾಹ್ಮಣನು ಹೇಳಿದನು: “ಪಿತೃ-ಪಿತಾಮಹರ ಈ ರಾಜ್ಯ ಜನಪದಗಳು ನಿನ್ನ ವಶದಲ್ಲಿರುವಾಗ ಯಾವ ಬುದ್ಧಿಯಿಂದ ನೀನು ಮಮತ್ವವನ್ನು ವರ್ಜಿಸಿದೆ ಎನ್ನುವುದನ್ನು ಹೇಳು.
14032013a ಕಾಂ ವಾ ಬುದ್ಧಿಂ ವಿನಿಶ್ಚಿತ್ಯ ಸರ್ವೋ ವೈ ವಿಷಯಸ್ತವ|
14032013c ನಾವೈಷಿ ವಿಷಯಂ ಯೇನ ಸರ್ವೋ ವಾ ವಿಷಯಸ್ತವ||
ಅಥವಾ ಯಾವ ಬುದ್ಧಿಯಿಂದ ನೀನು ಇವೆಲ್ಲವೂ ನಿನ್ನದೇ ರಾಜ್ಯವೆಂದು ನಿಶ್ಚಯಿಸಿದೆ? ಅಥವಾ ನಿನ್ನ ಆಡಳಿತದಲ್ಲಿರುವ ಈ ರಾಜ್ಯವು ನಿನ್ನ ರಾಜ್ಯವೆಲ್ಲವೆಂದು ಹೇಗೆ ನಿಶ್ಚಯಿಸಿದೆ?”
14032014 ಜನಕ ಉವಾಚ
14032014a ಅಂತವಂತ ಇಹಾರಂಭಾ ವಿದಿತಾಃ ಸರ್ವಕರ್ಮಸು|
14032014c ನಾಧ್ಯಗಚ್ಚಮಹಂ ಯಸ್ಮಾನ್ಮಮೇದಮಿತಿ ಯದ್ಭವೇತ್||
ಜನಕನು ಹೇಳಿದನು: “ಇಲ್ಲಿ ಆರಂಭಗೊಂಡ ಎಲ್ಲ ಕರ್ಮಗಳೂ ಅಂತ್ಯಗೊಳ್ಳುತ್ತವೆ ಎನ್ನುವುದು ತಿಳಿದಿದೆ. ಆದುದರಿಂದ ನನ್ನದು ಎಂಬ ವಸ್ತುವು ಯಾವುದು ಎನ್ನುವುದನ್ನು ತಿಳಿಯಲು ನನಗೆ ಸಾಧ್ಯವಾಗಲಿಲ್ಲ.
14032015a ಕಸ್ಯೇದಮಿತಿ ಕಸ್ಯ ಸ್ವಮಿತಿ ವೇದವಚಸ್ತಥಾ|
14032015c ನಾಧ್ಯಗಚ್ಚಮಹಂ ಬುದ್ಧ್ಯಾ ಮಮೇದಮಿತಿ ಯದ್ಭವೇತ್||
“ಇದು ಯಾರ ವಸ್ತುವು?” ಮತ್ತು “ಇದು ಯಾರ ಧನವು?” ಎಂಬ ವೇದವಚನವಿದೆ. ಈ ಕಾರಣದಿಂದ ನನ್ನ ಬುದ್ಧಿಗೆ “ಇದು ನನ್ನದು” ಎಂದು ಹೇಳಿಕೊಳ್ಳುವ ಯಾವ ವಿಷಯವೂ ತಿಳಿಯಲಿಲ್ಲ.
14032016a ಏತಾಂ ಬುದ್ಧಿಂ ವಿನಿಶ್ಚಿತ್ಯ ಮಮತ್ವಂ ವರ್ಜಿತಂ ಮಯಾ|
14032016c ಶೃಣು ಬುದ್ಧಿಂ ತು ಯಾಂ ಜ್ಞಾತ್ವಾ ಸರ್ವತ್ರ ವಿಷಯೋ ಮಮ||
ಹೀಗೆ ನನ್ನ ಬುದ್ಧಿಯು ನಿಶ್ಚಯಿಸಿ ಮಮತ್ವವನ್ನು ವರ್ಜಿಸಿತು. ಯಾವ ಕಾರಣದಿಂದ ನನ್ನ ಬುದ್ಧಿಯು ಎಲ್ಲವೂ ನನ್ನ ರಾಜ್ಯವೆಂದು ತಿಳಿದುಕೊಂಡಿತು ಎನ್ನುವುದನ್ನು ಕೇಳು.
14032017a ನಾಹಮಾತ್ಮಾರ್ಥಮಿಚ್ಚಾಮಿ ಗಂಧಾನ್ ಘ್ರಾಣಗತಾನಪಿ|
14032017c ತಸ್ಮಾನ್ಮೇ ನಿರ್ಜಿತಾ ಭೂಮಿರ್ವಶೇ ತಿಷ್ಠತಿ ನಿತ್ಯದಾ||
ವಾಸನೆಯನ್ನು ಮೂಸಿದರೂ ಅದನ್ನು ನಾನು ನನಗೋಸ್ಕರವಾಗಿ ಮೂಸುವುದಿಲ್ಲ. ಈ ಕಾರಣದಿಂದ ನಾನು ಭೂಮಿಯನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032018a ನಾಹಮಾತ್ಮಾರ್ಥಮಿಚ್ಚಾಮಿ ರಸಾನಾಸ್ಯೇಽಪಿ ವರ್ತತಃ|
14032018c ಆಪೋ ಮೇ ನಿರ್ಜಿತಾಸ್ತಸ್ಮಾದ್ವಶೇ ತಿಷ್ಠಂತಿ ನಿತ್ಯದಾ||
ರಸವನ್ನು ಸ್ವಾದಿಸಿದರೂ ಅದನ್ನು ನಾನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ಅಪವನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032019a ನಾಹಮಾತ್ಮಾರ್ಥಮಿಚ್ಚಾಮಿ ರೂಪಂ ಜ್ಯೋತಿಶ್ಚ ಚಕ್ಷುಷಾ|
14032019c ತಸ್ಮಾನ್ಮೇ ನಿರ್ಜಿತಂ ಜ್ಯೋತಿರ್ವಶೇ ತಿಷ್ಠತಿ ನಿತ್ಯದಾ||
ರೂಪವನ್ನು ಕಣ್ಣುಗಳಿಂದ ಕಂಡರೂ ಅದನ್ನು ನಾನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ಜ್ಯೋತಿಯನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032020a ನಾಹಮಾತ್ಮಾರ್ಥಮಿಚ್ಚಾಮಿ ಸ್ಪರ್ಶಾಂಸ್ತ್ವಚಿ ಗತಾಶ್ಚ ಯೇ|
14032020c ತಸ್ಮಾನ್ಮೇ ನಿರ್ಜಿತೋ ವಾಯುರ್ವಶೇ ತಿಷ್ಠತಿ ನಿತ್ಯದಾ||
ಚರ್ಮದ ಮೂಲಕ ಸ್ಪರ್ಶವನ್ನು ಅನುಭವಿಸಿದರೂ ಅದನ್ನು ನಾನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ವಾಯುವನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032021a ನಾಹಮಾತ್ಮಾರ್ಥಮಿಚ್ಚಾಮಿ ಶಬ್ದಾನ್ಶ್ರೋತ್ರಗತಾನಪಿ|
14032021c ತಸ್ಮಾನ್ಮೇ ನಿರ್ಜಿತಾಃ ಶಬ್ದಾ ವಶೇ ತಿಷ್ಠಂತಿ ನಿತ್ಯದಾ||
ಕಿವಿಗಳಿಗೆ ಶಬ್ಧವು ಕೇಳಿಸಿದರೂ ಅದನ್ನು ನಾನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ಶಬ್ಧವನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032022a ನಾಹಮಾತ್ಮಾರ್ಥಮಿಚ್ಚಾಮಿ ಮನೋ ನಿತ್ಯಂ ಮನೋಂತರೇ|
14032022c ಮನೋ ಮೇ ನಿರ್ಜಿತಂ ತಸ್ಮಾದ್ವಶೇ ತಿಷ್ಠತಿ ನಿತ್ಯದಾ||
ನಾನು ಮನಸ್ಸಿನಲ್ಲಿ ಹುಟ್ಟುವ ವಿಚಾರಗಳನ್ನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ಮನಸ್ಸನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032023a ದೇವೇಭ್ಯಶ್ಚ ಪಿತೃಭ್ಯಶ್ಚ ಭೂತೇಭ್ಯೋಽತಿಥಿಭಿಃ ಸಹ|
14032023c ಇತ್ಯರ್ಥಂ ಸರ್ವ ಏವೇಮೇ ಸಮಾರಂಭಾ ಭವಂತಿ ವೈ||
ನನ್ನ ಸರ್ವ ಕರ್ಮಗಳೂ ದೇವತೆ, ಪಿತೃ, ಭೂತಗಳು ಮತ್ತು ಅತಿಥಿಗಳ ಸಲುವಾಗಿಯೇ ಮಾಡಲ್ಪಡುತ್ತವೆ.”
14032024a ತತಃ ಪ್ರಹಸ್ಯ ಜನಕಂ ಬ್ರಾಹ್ಮಣಃ ಪುನರಬ್ರವೀತ್|
14032024c ತ್ವಜ್ಜಿಜ್ಞಾಸಾರ್ಥಮದ್ಯೇಹ ವಿದ್ಧಿ ಮಾಂ ಧರ್ಮಮಾಗತಮ್||
ಅನಂತರ ಬ್ರಾಹ್ಮಣನು ನಕ್ಕು ಜನಕನಿಗೆ ಪುನಃ ಹೇಳಿದನು: “ನಿನ್ನ ಜಿಜ್ಞಾಸೆಯನ್ನು ತಿಳಿದುಕೊಳ್ಳಲು ಬಂದಿರುವ ಧರ್ಮನೇ ನಾನೆಂದು ತಿಳಿ!
14032025a ತ್ವಮಸ್ಯ ಬ್ರಹ್ಮನಾಭಸ್ಯ ಬುದ್ಧ್ಯಾರಸ್ಯಾನಿವರ್ತಿನಃ|
14032025c ಸತ್ತ್ವನೇಮಿನಿರುದ್ಧಸ್ಯ ಚಕ್ರಸ್ಯೈಕಃ ಪ್ರವರ್ತಕಃ||
ಸತ್ತ್ವವೆಂಬ ಪಟ್ಟಿಯನ್ನು ಹೊಂದಿರುವ ಬ್ರಹ್ಮನಾಭಿಯುಳ್ಳ ಹಿಂದೆ ಚಲಿಸದ ಮತ್ತು ತಡೆಯಲಾಗದ ಈ ಚಕ್ರವನ್ನು ತಿರುಗಿಸುತ್ತಿರುವವನು ನೀನೊಬ್ಬನೇ ಸರಿ!””
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ದ್ವಾತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಮೂವತ್ತೆರಡನೇ ಅಧ್ಯಾಯವು.