ಅಶ್ವಮೇಧಿಕ ಪರ್ವ
೩೦
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೩೧).
14030001 ಪಿತರ ಊಚುಃ
14030001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
14030001c ಶ್ರುತ್ವಾ ಚ ತತ್ತಥಾ ಕಾರ್ಯಂ ಭವತಾ ದ್ವಿಜಸತ್ತಮ||
ಪಿತೃಗಳು ಹೇಳಿದರು: “ದ್ವಿಜಸತ್ತಮ! ಇದಕ್ಕೆ ಸಂಬಂಧಿಸಿದಂತೆ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ. ಇದನ್ನು ಕೇಳಿ ಅದರಂತೆಯೇ ನೀನು ಆಚರಿಸಬೇಕು.
14030002a ಅಲರ್ಕೋ ನಾಮ ರಾಜರ್ಷಿರಭವತ್ಸುಮಹಾತಪಾಃ|
14030002c ಧರ್ಮಜ್ಞಃ ಸತ್ಯಸಂಧಶ್ಚ ಮಹಾತ್ಮಾ ಸುಮಹಾವ್ರತಃ||
ಮಹಾತಪಸ್ವಿಯಾದ ಅಲರ್ಕ ಎಂಬ ಹೆಸರಿನ ರಾಜರ್ಷಿಯಿದ್ದನು. ಅವನು ಧರ್ಮಜ್ಞನೂ, ಸತ್ಯಸಂಧನೂ, ಮಹಾತ್ಮನೂ, ಮಹಾವ್ರತನೂ ಆಗಿದ್ದನು.
14030003a ಸ ಸಾಗರಾಂತಾಂ ಧನುಷಾ ವಿನಿರ್ಜಿತ್ಯ ಮಹೀಮಿಮಾಮ್|
14030003c ಕೃತ್ವಾ ಸುದುಷ್ಕರಂ ಕರ್ಮ ಮನಃ ಸೂಕ್ಷ್ಮೇ ಸಮಾದಧೇ||
ಅವನು ತನ್ನ ಧನುಸ್ಸಿನ ಬಲದಿಂದ ಸಾಗರಾಂತವಾದ ಈ ಮಹಿಯನ್ನು ಗೆದ್ದು, ಆ ದುಷ್ಕರ ಕರ್ಮವನ್ನೆಸಗಿ, ಮನಸ್ಸನ್ನು ಸೂಕ್ಷ್ಮತತ್ತ್ವದಲ್ಲಿ ಇರಿಸಿಕೊಂಡನು.
14030004a ಸ್ಥಿತಸ್ಯ ವೃಕ್ಷಮೂಲೇಽಥ ತಸ್ಯ ಚಿಂತಾ ಬಭೂವ ಹ|
14030004c ಉತ್ಸೃಜ್ಯ ಸುಮಹದ್ರಾಜ್ಯಂ ಸೂಕ್ಷ್ಮಂ ಪ್ರತಿ ಮಹಾಮತೇ||
ಮಹಾರಾಜ್ಯವನ್ನು ತೊರೆದು ವೃಕ್ಷದ ಅಡಿಯಲ್ಲಿ ಕುಳಿತಿದ್ದ ಆ ಮಹಾಮತಿಯಲ್ಲಿ ಸೂಕ್ಷ್ಮತತ್ತ್ವದ ಕುರಿತು ಒಂದು ಯೋಚನೆಯು ಹುಟ್ಟಿತು.
14030005 ಅಲರ್ಕ ಉವಾಚ
14030005a ಮನಸೋ ಮೇ ಬಲಂ ಜಾತಂ ಮನೋ ಜಿತ್ವಾ ಧ್ರುವೋ ಜಯಃ|
14030005c ಅನ್ಯತ್ರ ಬಾಣಾನಸ್ಯಾಮಿ ಶತ್ರುಭಿಃ ಪರಿವಾರಿತಃ||
ಅಲರ್ಕನು ಹೇಳಿದನು: “ನನ್ನ ಮನಸ್ಸಿಗೆ ಅತ್ಯಂತ ಬಲವು ಬಂದುಬಿಟ್ಟಿದೆ. ಮನಸ್ಸನ್ನು ಗೆದ್ದರೆ ಜಯವು ನಿಶ್ಚಿತವಾದದ್ದು. ಶತ್ರುಗಳಿಂದ ಸುತ್ತುವರೆಯಲ್ಪಟ್ಟಿರುವ ನಾನು ಬೇರೆ ಕಡೆ ಬಾಣಗಳ ಪ್ರಯೋಗವನ್ನು ಮಾಡುವುದಿಲ್ಲ.
14030006a ಯದಿದಂ ಚಾಪಲಾನ್ಮೂರ್ತೇಃ ಸರ್ವಮೇತಚ್ಚಿಕೀರ್ಷತಿ|
14030006c ಮನಃ ಪ್ರತಿ ಸುತೀಕ್ಷ್ಣಾಗ್ರಾನಹಂ ಮೋಕ್ಷ್ಯಾಮಿ ಸಾಯಕಾನ್||
ಈ ಮನಸ್ಸಿನ ಚಾಪಲ್ಯವೇ ಮನುಷ್ಯರಿಂದ ಎಲ್ಲವನ್ನೂ ಮಾಡಿಸುತ್ತದೆ. ಆದುದರಿಂದ ಮನಸ್ಸನ್ನೇ ಗುರಿಯಿಟ್ಟು ಸುತೀಕ್ಷ್ಣ ಸಾಯಕಗಳನ್ನು ಪ್ರಯೋಗಿಸುತ್ತೇನೆ.”
14030007 ಮನ ಉವಾಚ
14030007a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ|
14030007c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ||
ಮನಸ್ಸು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!
14030008a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ|
14030008c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್||
ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.
14030009 ಅಲರ್ಕ ಉವಾಚ
14030009a ಆಘ್ರಾಯ ಸುಬಹೂನ್ಗಂಧಾಂಸ್ತಾನೇವ ಪ್ರತಿಗೃಧ್ಯತಿ|
14030009c ತಸ್ಮಾದ್ಘ್ರಾಣಂ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್||
ಅಲರ್ಕನು ಹೇಳಿದನು: “ಅನೇಕ ಗಂಧಗಳನ್ನು ಆಘ್ರಾಣಿಸಿದರೂ ಘ್ರಾಣವು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತದೆ. ಆದುದರಿಂದ ಘ್ರಾಣಕ್ಕೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”
14030010 ಘ್ರಾಣ ಉವಾಚ
14030010a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ|
14030010c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ||
ಘ್ರಾಣವು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!
14030011a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ|
14030011c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್||
ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.
14030012 ಅಲರ್ಕ ಉವಾಚ
14030012a ಇಯಂ ಸ್ವಾದೂನ್ರಸಾನ್ಭುಕ್ತ್ವಾ ತಾನೇವ ಪ್ರತಿಗೃಧ್ಯತಿ|
14030012c ತಸ್ಮಾಜ್ಜಿಹ್ವಾಂ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್||
ಅಲರ್ಕನು ಹೇಳಿದನು: “ಅನೇಕ ಸ್ವಾದು ರಸಗಳನ್ನು ಭುಂಜಿಸಿದರೂ ಇದು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತದೆ. ಆದುದರಿಂದ ನಾಲಿಗೆಗೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”
14030013 ಜಿಹ್ವೋವಾಚ
14030013a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ|
14030013c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ||
ನಾಲಿಗೆಯು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!
14030014a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ|
14030014c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್||
ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.
14030015 ಅಲರ್ಕ ಉವಾಚ
14030015a ಸ್ಪೃಷ್ಟ್ವಾ ತ್ವಗ್ವಿವಿಧಾನ್ ಸ್ಪರ್ಶಾಂಸ್ತಾನೇವ ಪ್ರತಿಗೃಧ್ಯತಿ|
14030015c ತಸ್ಮಾತ್ತ್ವಚಂ ಪಾಟಯಿಷ್ಯೇ ವಿವಿಧೈಃ ಕಂಕಪತ್ರಿಭಿಃ||
ಅಲರ್ಕನು ಹೇಳಿದನು: “ವಿವಿಧ ಸ್ಪರ್ಶಗಳನ್ನು ಅನುಭವಿಸಿಯೂ ಈ ಚರ್ಮವು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತದೆ. ಆದುದರಿಂದ ಚರ್ಮಕ್ಕೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”
14030016 ತ್ವಗುವಾಚ
14030016a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ|
14030016c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ||
ಚರ್ಮವು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!
14030017a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ|
14030017c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್||
ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.
14030018 ಅಲರ್ಕ ಉವಾಚ
14030018a ಶ್ರುತ್ವಾ ವೈ ವಿವಿಧಾನ್ಶಬ್ದಾಂಸ್ತಾನೇವ ಪ್ರತಿಗೃಧ್ಯತಿ|
14030018c ತಸ್ಮಾಚ್ಚ್ರೋತ್ರಂ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್||
ಅಲರ್ಕನು ಹೇಳಿದನು: “ವಿವಿಧ ಶಬ್ಧಗಳನ್ನು ಕೇಳಿಯೂ ಈ ಕಿವಿಗಳು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತವೆ. ಆದುದರಿಂದ ಶ್ರೋತ್ರಕ್ಕೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”
14030019 ಶ್ರೋತ್ರ ಉವಾಚ
14030019a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ|
14030019c ತವೈವ ಮರ್ಮ ಭೇತ್ಸ್ಯಂತಿ ತತೋ ಹಾಸ್ಯಸಿ ಜೀವಿತಮ್||
ಶ್ರೋತ್ರವು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!
14030020a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ|
14030020c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್||
ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.
14030021 ಅಲರ್ಕ ಉವಾಚ
14030021a ದೃಷ್ಟ್ವಾ ವೈ ವಿವಿಧಾನ್ಭಾವಾಂಸ್ತಾನೇವ ಪ್ರತಿಗೃಧ್ಯತಿ|
14030021c ತಸ್ಮಾಚ್ಚಕ್ಷುಃ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್||
ಅಲರ್ಕನು ಹೇಳಿದನು: “ವಿವಿಧ ಭಾವಗಳನ್ನು ನೋಡಿಯೂ ಈ ಕಣ್ಣುಗಳು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತವೆ. ಆದುದರಿಂದ ಕಣ್ಣುಗಳಿಗೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”
14030022 ಚಕ್ಷುರುವಾಚ
14030022a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ|
14030022c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ||
ಕಣ್ಣುಗಳು ಹೇಳಿದವು: “ಅಲರ್ಕ! ಈ ಬಾಣಗಳು ಎಂದೂ ನಮ್ಮನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!
14030023a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ|
14030023c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್||
ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.
14030024 ಅಲರ್ಕ ಉವಾಚ
14030024a ಇಯಂ ನಿಷ್ಠಾ ಬಹುವಿಧಾ ಪ್ರಜ್ಞಯಾ ತ್ವಧ್ಯವಸ್ಯತಿ|
14030024c ತಸ್ಮಾದ್ಬುದ್ಧಿಂ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್||
ಅಲರ್ಕನು ಹೇಳಿದನು: “ಈ ಬುದ್ಧಿಯು ಪ್ರಜ್ಞಾಪೂರ್ವಕವಾಗಿ ಬಹುವಿಧದ ನಿಶ್ಚಯಗಳನ್ನು ಮಾಡುತ್ತಲೇ ಇರುತ್ತದೆ. ಆದುದರಿಂದ ಬುದ್ಧಿಗೇ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”
14030025 ಬುದ್ಧಿರುವಾಚ
14030025a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ|
14030025c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ||
ಬುದ್ಧಿಯು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!””
14030026 ಪಿತರ ಊಚುಃ
14030026a ತತೋಽಲರ್ಕಸ್ತಪೋ ಘೋರಮಾಸ್ಥಾಯಾಥ ಸುದುಷ್ಕರಮ್|
14030026c ನಾಧ್ಯಗಚ್ಚತ್ಪರಂ ಶಕ್ತ್ಯಾ ಬಾಣಮೇತೇಷು ಸಪ್ತಸು|
14030026e ಸುಸಮಾಹಿತಚೇತಾಸ್ತು ತತೋಽಚಿಂತಯತ ಪ್ರಭುಃ||
ಪಿತೃಗಳು ಹೇಳಿದರು: “ಅನಂತರ ಅಲರ್ಕನು ದುಷ್ಕರವಾದ ಘೋರ ತಪಸ್ಸನ್ನು ಆಚರಿಸಿದನು. ಆದರೂ ಈ ಏಳರನ್ನು ವಿನಾಶಗೊಳಿಸುವ ಪರಮ ಶಕ್ತಿಯನ್ನು ಪಡೆಯಲೇ ಇಲ್ಲ. ಆಗ ಆ ಪ್ರಭುವು ಸುಸಮಾಹಿತನಾಗಿ ಚಿಂತಿಸತೊಡಗಿದನು.
14030027a ಸ ವಿಚಿಂತ್ಯ ಚಿರಂ ಕಾಲಮಲರ್ಕೋ ದ್ವಿಜಸತ್ತಮ|
14030027c ನಾಧ್ಯಗಚ್ಚತ್ಪರಂ ಶ್ರೇಯೋ ಯೋಗಾನ್ಮತಿಮತಾಂ ವರಃ||
ದ್ವಿಜಸತ್ತಮ! ಮತಿವಂತರಲ್ಲಿ ಶ್ರೇಷ್ಠನಾದ ಅಲರ್ಕನು ಬಹಳಕಾಲ ಯೋಚಿಸಿಯೂ ಆ ಪರಮ ಶ್ರೇಯಸ್ಕರವಾದ ಯೋಗವನ್ನು ಪಡೆಯಲಿಲ್ಲ.
14030028a ಸ ಏಕಾಗ್ರಂ ಮನಃ ಕೃತ್ವಾ ನಿಶ್ಚಲೋ ಯೋಗಮಾಸ್ಥಿತಃ|
14030028c ಇಂದ್ರಿಯಾಣಿ ಜಘಾನಾಶು ಬಾಣೇನೈಕೇನ ವೀರ್ಯವಾನ್|
14030028e ಯೋಗೇನಾತ್ಮಾನಮಾವಿಶ್ಯ ಸಂಸಿದ್ಧಿಂ ಪರಮಾಂ ಯಯೌ||
ಅನಂತರ ಆ ವೀರ್ಯವಾನನು ಮನಸ್ಸನ್ನು ಏಕಾಗ್ರಗೊಳಿಸಿ ನಿಶ್ಚಲನಾಗಿ ಯೋಗವನ್ನು ಆಶ್ರಯಿಸಿ, ಅದೊಂದೇ ಬಾಣದಿಂದ ಇಂದ್ರಿಯಗಳನ್ನು ವಿನಾಶಗೊಳಿಸಿದನು. ಆತ್ಮನನ್ನು ಯೋಗದಲ್ಲಿ ಲೀನಗೊಳಿಸಿ ಪರಮ ಸಂಸಿದ್ಧಿಯನ್ನು ಪಡೆದನು.
14030029a ವಿಸ್ಮಿತಶ್ಚಾಪಿ ರಾಜರ್ಷಿರಿಮಾಂ ಗಾಥಾಂ ಜಗಾದ ಹ|
14030029c ಅಹೋ ಕಷ್ಟಂ ಯದಸ್ಮಾಭಿಃ ಪೂರ್ವಂ ರಾಜ್ಯಮನುಷ್ಠಿತಮ್|
14030029e ಇತಿ ಪಶ್ಚಾನ್ಮಯಾ ಜ್ಞಾತಂ ಯೋಗಾನ್ನಾಸ್ತಿ ಪರಂ ಸುಖಮ್||
ಅದರಿಂದ ವಿಸ್ಮಿತನಾದ ರಾಜರ್ಷಿಯು ಈ ಶ್ಲೋಕವನ್ನು ಹೇಳಿದನು: “ಅಯ್ಯೋ ಕಷ್ಟವೇ! ಇದೂವರೆಗೆ ನಾವು ರಾಜ್ಯವನ್ನು ನಡೆಸಿಕೊಂಡು ಬಂದೆವು. ಯೋಗಕ್ಕಿಂತ ಪರಮ ಸುಖವು ಇಲ್ಲವೆಂದು ಬಹಳ ಕಾಲದ ನಂತರ ನನಗೆ ಅರಿವಾಯಿತು!”
14030030a ಇತಿ ತ್ವಮಪಿ ಜಾನೀಹಿ ರಾಮ ಮಾ ಕ್ಷತ್ರಿಯಾನ್ಜಹಿ|
14030030c ತಪೋ ಘೋರಮುಪಾತಿಷ್ಠ ತತಃ ಶ್ರೇಯೋಽಭಿಪತ್ಸ್ಯಸೇ||
ರಾಮ! ಇದನ್ನು ನೀನೂ ಕೂಡ ಅರಿತುಕೋ! ಕ್ಷತ್ರಿಯರನ್ನು ಕೊಲ್ಲಬೇಡ! ಘೋರ ತಪಸ್ಸನ್ನು ಕೈಗೊಳ್ಳು. ಇದರಿಂದ ನಿನಗೆ ಶ್ರೇಯಸ್ಸುಂಟಾಗುತ್ತದೆ!””
14030031 ಬ್ರಾಹ್ಮಣ ಉವಾಚ
14030031a ಇತ್ಯುಕ್ತಃ ಸ ತಪೋ ಘೋರಂ ಜಾಮದಗ್ನ್ಯಃ ಪಿತಾಮಹೈಃ|
14030031c ಆಸ್ಥಿತಃ ಸುಮಹಾಭಾಗೋ ಯಯೌ ಸಿದ್ಧಿಂ ಚ ದುರ್ಗಮಾಮ್||
ಬ್ರಾಹ್ಮಣನು ಹೇಳಿದನು: “ಪಿತಾಮಹರು ಹೀಗೆ ಹೇಳಲು ಮಹಾಭಾಗ ಜಾಮದಗ್ನಿ ರಾಮನು ಘೋರತಪಸ್ಸಿನಲ್ಲಿ ನಿರತನಾಗಿ ದುರ್ಗಮ ಸಿದ್ಧಿಯನ್ನು ಪಡೆದನು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಮೂವತ್ತನೇ ಅಧ್ಯಾಯವು.