ಅಶ್ವಮೇಧಿಕ ಪರ್ವ
೨೭
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೨೫).
14027001 ಬ್ರಾಹ್ಮಣ ಉವಾಚ
14027001a ಸಂಕಲ್ಪದಂಶಮಶಕಂ ಶೋಕಹರ್ಷಹಿಮಾತಪಮ್|
14027001c ಮೋಹಾಂಧಕಾರತಿಮಿರಂ ಲೋಭವ್ಯಾಲಸರೀಸೃಪಮ್||
14027002a ವಿಷಯೈಕಾತ್ಯಯಾಧ್ವಾನಂ ಕಾಮಕ್ರೋಧವಿರೋಧಕಮ್|
14027002c ತದತೀತ್ಯ ಮಹಾದುರ್ಗಂ ಪ್ರವಿಷ್ಟೋಽಸ್ಮಿ ಮಹದ್ವನಮ್||
ಬ್ರಾಹ್ಮಣನು ಹೇಳಿದನು: “ಸಂಕಲ್ಪಗಳೇ ಕಾಡುನೊಣ-ಸೊಳ್ಳೆಗಳಂತಿರುವ, ಶೋಕ-ಹರ್ಷಗಳೇ ಛಳಿ-ಬಿಸಿಲುಗಳಂತಿರುವ, ಮೋಹಾಂಧಕಾರವೇ ಕತ್ತಲೆಯಂತಿರುವ, ಲೋಭವೇ ಹರಿಯುವ ಸರ್ಪಗಳಂತಿರುವ, ವಿಷಯಗಳೆಂಬ ಅಡಚಣೆಗಳನ್ನು ಒಬ್ಬನೇ ದಾಟಿಹೋಗಬೇಕಾದ, ಕಾಮ-ಕ್ರೋಧಗಳೆಂಬ ವಿರೋಧವಿರುವ ಮಹಾದುರ್ಗವನ್ನು ದಾಟಿ ನಾನೊಂದು ಮಹಾವನವನ್ನು ಪ್ರವೇಶಿಸಿದ್ದೇನೆ!”
14027003 ಬ್ರಾಹ್ಮಣ್ಯುವಾಚ
14027003a ಕ್ವ ತದ್ವನಂ ಮಹಾಪ್ರಾಜ್ಞ ಕೇ ವೃಕ್ಷಾಃ ಸರಿತಶ್ಚ ಕಾಃ|
14027003c ಗಿರಯಃ ಪರ್ವತಾಶ್ಚೈವ ಕಿಯತ್ಯಧ್ವನಿ ತದ್ವನಮ್||
ಬ್ರಾಹ್ಮಣಿಯು ಹೇಳಿದಳು: “ಮಹಾಪ್ರಾಜ್ಞ! ಆ ವನವು ಎಲ್ಲಿದೆ? ಅದರಲ್ಲಿರುವ ವೃಕ್ಷಗಳು ಯಾವುವು? ನದಿ-ಝರಿಗಳು ಯಾವುವು? ಗಿರಿ-ಪರ್ವತಗಳು ಯಾವುವು? ಮತ್ತು ಆ ವನವು ಎಷ್ಟು ದೂರದಲ್ಲಿದೆ?”
14027004 ಬ್ರಾಹ್ಮಣ ಉವಾಚ
[1]14027004a ನ ತದಸ್ತಿ ಪೃಥಗ್ಭಾವೇ ಕಿಂ ಚಿದನ್ಯತ್ತತಃ ಸಮಮ್|
14027004c ನ ತದಸ್ತ್ಯಪೃಥಗ್ಭಾವೇ ಕಿಂ ಚಿದ್ದೂರತರಂ ತತಃ||
ಬ್ರಾಹ್ಮಣನು ಹೇಳಿದನು: “ಇದರಿಂದ ಪ್ರತ್ಯೇಕವಾದ ಬೇರೆ ಯಾವುದೂ ಇಲ್ಲ ಎನ್ನುವುದಕ್ಕಿಂತ ಹೆಚ್ಚಿನ ಸಮಭಾವವು ಬೇರೆ ಏನಿದೆ? ಪ್ರತ್ಯೇಕತೆಯ ಭಾವವೇ ಇಲ್ಲದಿರುವಾಗ ಇದಕ್ಕಿಂತಲೂ ಹತ್ತಿರವಾದುದು ಏನಿದೆ?
[2]14027005a ತಸ್ಮಾದ್ಧ್ರಸ್ವತರಂ ನಾಸ್ತಿ ನ ತತೋಽಸ್ತಿ ಬೃಹತ್ತರಮ್|
14027005c ನಾಸ್ತಿ ತಸ್ಮಾದ್ದುಃಖತರಂ ನಾಸ್ತ್ಯನ್ಯತ್ತತ್ಸಮಂ ಸುಖಮ್||
ಅದಕ್ಕಿಂತ ಚಿಕ್ಕುದಾದುದು ಇಲ್ಲ. ಅದಕ್ಕಿಂತ ದೊಡ್ದದಾದುದೂ ಇಲ್ಲ. ಅದಕ್ಕಿಂತಲೂ ಹೆಚ್ಚಿನ ದುಃಖವಿಲ್ಲ. ಅದಕ್ಕಿಂತಲೂ ಹೆಚ್ಚಿನ ಸುಖವೂ ಇಲ್ಲ.
14027006a ನ ತತ್ಪ್ರವಿಶ್ಯ ಶೋಚಂತಿ ನ ಪ್ರಹೃಷ್ಯಂತಿ ಚ ದ್ವಿಜಾಃ|
14027006c ನ ಚ ಬಿಭ್ಯತಿ ಕೇಷಾಂ ಚಿತ್ತೇಭ್ಯೋ ಬಿಭ್ಯತಿ ಕೇ ಚ ನ||
ಅದನ್ನು ಪ್ರವೇಶಿಸಿ ದ್ವಿಜರು ಶೋಕಿಸುವುದಿಲ್ಲ ಮತ್ತು ಹರ್ಷಿತರೂ ಆಗುವುದಿಲ್ಲ. ಅಲ್ಲಿ ಯಾರಿಂದಲೂ ಭಯವಿಲ್ಲ. ಅವರಿಂದಲೂ ಅಲ್ಲಿ ಯಾರಿಗೂ ಭಯವಿಲ್ಲ.
14027007a ತಸ್ಮಿನ್ವನೇ ಸಪ್ತ ಮಹಾದ್ರುಮಾಶ್ಚ
ಫಲಾನಿ ಸಪ್ತಾತಿಥಯಶ್ಚ ಸಪ್ತ|
14027007c ಸಪ್ತಾಶ್ರಮಾಃ ಸಪ್ತ ಸಮಾಧಯಶ್ಚ
ದೀಕ್ಷಾಶ್ಚ ಸಪ್ತೈತದರಣ್ಯರೂಪಮ್||
ಆ ವನದಲ್ಲಿ ಏಳು ಮಹಾವೃಕ್ಷಗಳೂ[3], ಏಳು ಫಲಗಳೂ[4], ಏಳು ಅತಿಥಿಗಳೂ[5], ಏಳು ಆಶ್ರಮಗಳೂ[6], ಏಳು ದೀಕ್ಷೆಗಳೂ[7] ಇವೆ. ಇದು ಆ ಅರಣ್ಯದ ರೂಪವು.
14027008a ಪಂಚವರ್ಣಾನಿ ದಿವ್ಯಾನಿ ಪುಷ್ಪಾಣಿ ಚ ಫಲಾನಿ ಚ|
14027008c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್||
ಐದು ಬಣ್ಣಗಳ ದಿವ್ಯ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027009a ಸುವರ್ಣಾನಿ ದ್ವಿವರ್ಣಾನಿ ಪುಷ್ಪಾಣಿ ಚ ಫಲಾನಿ ಚ|
14027009c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್||
ಸುಂದರವಾದ ಎರಡು ಬಣ್ಣಗಳ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027010a ಚತುರ್ವರ್ಣಾನಿ ದಿವ್ಯಾನಿ ಪುಷ್ಪಾಣಿ ಚ ಫಲಾನಿ ಚ|
14027010c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್||
ನಾಲ್ಕು ಬಣ್ಣಗಳ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027011a ಶಂಕರಾಣಿ ತ್ರಿವರ್ಣಾನಿ ಪುಷ್ಪಾಣಿ ಚ ಫಲಾನಿ ಚ|
14027011c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್||
ಮಿಶ್ರಿತವಾದ ಮೂರು ಬಣ್ಣಗಳ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027012a ಸುರಭೀಣ್ಯೇಕವರ್ಣಾನಿ ಪುಷ್ಪಾಣಿ ಚ ಫಲಾನಿ ಚ|
14027012c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್||
ಸುಗಂಧಿತ ಒಂದೇ ಬಣ್ಣದ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027013a ಬಹೂನ್ಯವ್ಯಕ್ತವರ್ಣಾನಿ ಪುಷ್ಪಾಣಿ ಚ ಫಲಾನಿ ಚ|
14027013c ವಿಸೃಜಂತೌ ಮಹಾವೃಕ್ಷೌ ತದ್ವನಂ ವ್ಯಾಪ್ಯ ತಿಷ್ಠತಃ||
ಅನೇಕ ಅವ್ಯಕ್ತ ಬಣ್ಣಗಳ ಪುಷ್ಪ-ಫಲಗಳನ್ನು ಕೊಡುವ ಮಹಾವೃಕ್ಷಗಳೆರಡೂ ಆ ವನವನ್ನು ವ್ಯಾಪಿಸಿ ನಿಂತಿವೆ.
14027014a ಏಕೋ ಹ್ಯಗ್ನಿಃ ಸುಮನಾ ಬ್ರಾಹ್ಮಣೋಽತ್ರ
ಪಂಚೇಂದ್ರಿಯಾಣಿ ಸಮಿಧಶ್ಚಾತ್ರ ಸಂತಿ|
14027014c ತೇಭ್ಯೋ ಮೋಕ್ಷಾಃ ಸಪ್ತ ಭವಂತಿ ದೀಕ್ಷಾ
ಗುಣಾಃ ಫಲಾನ್ಯತಿಥಯಃ ಫಲಾಶಾಃ||
ಅಲ್ಲಿ ಒಂದೇ ಅಗ್ನಿಯಿದೆ. ಮನಸ್ಸೇ ಬ್ರಾಹ್ಮಣನು. ಐದು ಇಂದ್ರಿಯಗಳು ಸಮಿಧೆಗಳು. ಏಳು ದೀಕ್ಷೆಗಳಿಂದ ಏಳು ಮೋಕ್ಷಗಳು ದೊರೆಯುತ್ತವೆ. ಗುಣಗಳೇ ಅತಿಥಿಗಳು ಭುಂಜಿಸುವ ಫಲಗಳು.
14027015a ಆತಿಥ್ಯಂ ಪ್ರತಿಗೃಹ್ಣಂತಿ ತತ್ರ ಸಪ್ತ ಮಹರ್ಷಯಃ|
14027015c ಅರ್ಚಿತೇಷು ಪ್ರಲೀನೇಷು ತೇಷ್ವನ್ಯದ್ರೋಚತೇ ವನಮ್||
ಅಲ್ಲಿ ಸಪ್ತ ಮಹರ್ಷಿಗಳು ಆತಿಥ್ಯವನ್ನು ಸ್ವೀಕರಿಸುತ್ತಾರೆ. ಅರ್ಚಿತಗೊಂಡ ಅವರು ಲಯಹೊಂದುತ್ತಾರೆ. ಆಗ ಆ ವನವು ಅನ್ಯರೂಪದಿಂದ ಪ್ರಕಾಶಿಸುತ್ತದೆ.
14027016a ಪ್ರತಿಜ್ಞಾವೃಕ್ಷಮಫಲಂ[8] ಶಾಂತಿಚ್ಚಾಯಾಸಮನ್ವಿತಮ್|
14027016c ಜ್ಞಾನಾಶ್ರಯಂ ತೃಪ್ತಿತೋಯಮಂತಃಕ್ಷೇತ್ರಜ್ಞಭಾಸ್ಕರಮ್||
ಆ ವನದಲ್ಲಿ ಹಣ್ಣಿಲ್ಲದ ವೃಕ್ಷವೇ ಪ್ರತಿಜ್ಞೆ. ಆ ವೃಕ್ಷದಡಿಯಲ್ಲಿ ಶಾಂತಿಯೆಂಬ ನೆರಳಿದೆ. ಜ್ಞಾನವು ಅದರಡಿಯಲ್ಲಿ ಆಶ್ರಯವನ್ನು ಹೊಂದಿರುತ್ತದೆ. ತೃಪ್ತಿಯೇ ಅದಕ್ಕೆ ಹಾಕುವ ನೀರು. ಆ ವೃಕ್ಷದಲ್ಲಿ ಕ್ಷೇತ್ರಜ್ಞ ಸೂರ್ಯನು ಬೆಳಗುತ್ತಿರುತ್ತಾನೆ.
14027017a ಯೇಽಧಿಗಚ್ಚಂತಿ ತತ್ಸಂತಸ್ತೇಷಾಂ ನಾಸ್ತಿ ಭಯಂ ಪುನಃ|
14027017c ಊರ್ಧ್ವಂ ಚಾವಾಕ್ಚ ತಿರ್ಯಕ್ಚ ತಸ್ಯ ನಾಂತೋಽಧಿಗಮ್ಯತೇ||
ಆ ವೃಕ್ಷದಡಿಯಲ್ಲಿ ಆಶ್ರಯಹೊಂದಿದ ಸಂತರಿಗೆ ಪುನಃ ಭಯವೇ ಇರುವುದಿಲ್ಲ. ಕೊನೆಯೇ ಇಲ್ಲದ ಆ ವೃಕ್ಷವು ಮೇಲೆ, ಕೆಳಗೆ, ಮತ್ತು ಅಡ್ಡವಾಗಿ ಬೆಳೆದಿರುತ್ತದೆ.
14027018a ಸಪ್ತ ಸ್ತ್ರಿಯಸ್ತತ್ರ ವಸಂತಿ ಸದ್ಯೋ
ಅವಾಙ್ಮುಖಾ ಭಾನುಮತ್ಯೋ ಜನಿತ್ರ್ಯಃ|
14027018c ಊರ್ಧ್ವಂ ರಸಾನಾಂ ದದತೇ ಪ್ರಜಾಭ್ಯಃ
ಸರ್ವಾನ್ಯಥಾ ಸರ್ವಮನಿತ್ಯತಾಂ ಚ||
ಅಲ್ಲಿ ಸದಾ ಅಧೋಮುಖರಾಗಿ ಪ್ರಕಾಶಿಸುವ ಏಳು ಜನನೀ ಸ್ತ್ರೀಯರು ವಾಸಿಸಿರುತ್ತಾರೆ. ಅನಿತ್ಯತೆಯು ಎಲ್ಲವನ್ನೂ ಸ್ವೀಕರಿಸುವಂತೆ ಮೇಲಿರುವ ಪ್ರಜೆಗಳಿಂದ ಉತ್ತಮ ರಸವನ್ನು ಅವರು ಸ್ವೀಕರಿಸುತ್ತಾರೆ.
14027019a ತತ್ರೈವ ಪ್ರತಿತಿಷ್ಠಂತಿ ಪುನಸ್ತತ್ರೋದಯಂತಿ ಚ|
14027019c ಸಪ್ತ ಸಪ್ತರ್ಷಯಃ ಸಿದ್ಧಾ ವಸಿಷ್ಠಪ್ರಮುಖಾಃ ಸಹ||
ಅಲ್ಲಿಯೇ ವಸಿಷ್ಠ ಪ್ರಮುಖರಾದ ಸಪ್ತ ಋಷಿಗಳು ವಾಸಿಸುತ್ತಾರೆ ಮತ್ತು ಪುನಃ ಅಲ್ಲಿಂದಲೇ ಉದಯಿಸುತ್ತಾರೆ.
14027020a ಯಶೋ ವರ್ಚೋ ಭಗಶ್ಚೈವ ವಿಜಯಃ ಸಿದ್ಧಿತೇಜಸೀ|
14027020c ಏವಮೇವಾನುವರ್ತಂತೇ ಸಪ್ತ ಜ್ಯೋತೀಂಷಿ ಭಾಸ್ಕರಮ್||
ಹೀಗೆಯೇ ಯಶಸ್ಸು, ವರ್ಚಸ್ಸು, ಐಶ್ವರ್ಯ, ಮಹಾತ್ಮೆ, ವಿಜಯ, ಸಿದ್ಧಿ, ಮತ್ತು ತೇಜಸ್ಸು ಈ ಏಳು ಜ್ಯೋತಿಗಳೂ ಭಾಸ್ಕರನನ್ನು ಅನುಸರಿಸಿ ಹೋಗುತ್ತವೆ.
14027021a ಗಿರಯಃ ಪರ್ವತಾಶ್ಚೈವ ಸಂತಿ ತತ್ರ ಸಮಾಸತಃ|
14027021c ನದ್ಯಶ್ಚ ಸರಿತೋ ವಾರಿ ವಹಂತ್ಯೋ ಬ್ರಹ್ಮಸಂಭವಮ್||
ಗಿರಿಗಳೂ, ಪರ್ವತಗಳು, ಬ್ರಹ್ಮಸಂಭವ ನೀರಿನಿಂದ ಹರಿಯುವ ನದಿ-ಸರಿತ್ತುಗಳೂ ಅಲ್ಲಿ ಇವೆ.
14027022a ನದೀನಾಂ ಸಂಗಮಸ್ತತ್ರ ವೈತಾನಃ ಸಮುಪಹ್ವರೇ|
14027022c ಸ್ವಾತ್ಮತೃಪ್ತಾ ಯತೋ ಯಾಂತಿ ಸಾಕ್ಷಾದ್ದಾಂತಾಃ ಪಿತಾಮಹಮ್||
ಅಲ್ಲಿ ನಿಗೂಢ ಪ್ರದೇಶಗಳಲ್ಲಿ ಆತ್ಮತೃಪ್ತ ಯತಿಗಳನ್ನು ಸಾಕ್ಷಾತ್ ಪಿತಾಮಹನೆಡೆಗೆ ಕೊಂಡೊಯ್ಯುವ ನದಿಗಳ ಯಾಗ ಸಂಗಮಗಳೂ ಇವೆ.
14027023a ಕೃಶಾಶಾಃ ಸುವ್ರತಾಶಾಶ್ಚ ತಪಸಾ ದಗ್ಧಕಿಲ್ಬಿಷಾಃ|
14027023c ಆತ್ಮನ್ಯಾತ್ಮಾನಮಾವೇಶ್ಯ ಬ್ರಹ್ಮಾಣಂ ಸಮುಪಾಸತೇ||
ಆಸೆಗಳನ್ನು ಕ್ಷಣಿಸಿದವರೂ, ಸುವ್ರತರೂ, ತಪಸ್ಸಿನಿಂದ ಪಾಪಗಳನ್ನು ಸುಟ್ಟವರೂ ಅಲ್ಲಿ ಅತ್ಮನಿಂದ ಆತ್ಮನನ್ನು ಪ್ರವೇಶಿಸಿ ಬ್ರಹ್ಮನನ್ನು ಉಪಾಸಿಸುತ್ತಾರೆ.
14027024a ಋಚಮಪ್ಯತ್ರ ಶಂಸಂತಿ ವಿದ್ಯಾರಣ್ಯವಿದೋ ಜನಾಃ|
14027024c ತದರಣ್ಯಮಭಿಪ್ರೇತ್ಯ ಯಥಾಧೀರಮಜಾಯತ||
ವಿದ್ಯೆಯ ಈ ಅರಣ್ಯವನ್ನು ತಿಳಿದ ಜನರು ಅಲ್ಲಿ ಸತ್ಯವನ್ನೇ ನುಡಿಯುತ್ತಾರೆ. ಆ ಅರಣ್ಯವನ್ನು ಸೇರಿ ಧೀರರಾಗಿಯೇ ಹುಟ್ಟುತ್ತಾರೆ.
14027025a ಏತದೇತಾದೃಶಂ ದಿವ್ಯಮರಣ್ಯಂ ಬ್ರಾಹ್ಮಣಾ ವಿದುಃ|
14027025c ವಿದಿತ್ವಾ ಚಾನ್ವತಿಷ್ಠಂತ ಕ್ಷೇತ್ರಜ್ಞೇನಾನುದರ್ಶಿತಮ್||
ಇಂತಹ ದಿವ್ಯ ಅರಣ್ಯವನ್ನು ಬ್ರಾಹ್ಮಣರು ತಿಳಿದಿರುತ್ತಾರೆ. ಇದನ್ನು ತಿಳಿದು ಅವರು ಕ್ಷೇತ್ರಜ್ಞನಿಂದ ಉಪದೇಶಿಸಲ್ಪಟ್ಟು ಅದರಂತೆಯೇ ನಡೆದುಕೊಳ್ಳುತ್ತಾರೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಸಪ್ತವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.
[1] ನೈತದಸ್ತಿ ಪೃಥಗ್ಭಾವಃ ಕಿಂಚಿತನ್ಯತ್ತತಃ ಸುಖಮ್| ನೈತದಸ್ತ್ಯಪೃಥಗ್ಭಾವಃ ಕಿಂಚಿದ್ದುಃಖತರಂ ತತಃ|| ಅರ್ಥಾತ್ ಇದರಿಂದ ಪ್ರತ್ಯೇಕವಾದ ಬೇರೆ ಯಾವುದೂ ಇಲ್ಲ ಎನ್ನುವುದಕ್ಕಿಂತ ಹೆಚ್ಚಿನ ಸುಖವು ಯಾವುದು? ಇದರಿಂದ ಪ್ರತ್ಯೇಕವಾದ ಬೇರೆ ಒಂದಿದೆ ಎನ್ನುವುದಕ್ಕಿಂತ ಹೆಚ್ಚಿನ ದುಃಖವು ಯಾವುದು? ಎಂಬ ಪಾಠಾಂತರವಿದೆ.
[2] ತಸ್ಮಾದ್ಧ್ರಸ್ವತರಂ ನಾಸ್ತಿ ನ ತತೋಽಸ್ತಿ ಮಹತ್ತರಮ್| ನಾಸ್ತಿ ತಸ್ಮಾತ್ಸೂಕ್ಷ್ಮತರಂ ನಾಸ್ತ್ಯನ್ಯತ್ತತ್ಸಮಂ ಸುಖಮ್|| ಅರ್ಥಾತ್ ಅದಕ್ಕಿಂತಲೂ ಚಿಕ್ಕುದಾದ ಅಥವಾ ದೊಡ್ಡದಾದುದು ಇಲ್ಲ. ಅದಕ್ಕಿಂತಲೂ ಸೂಕ್ಷ್ಮವಾದುದು ಯಾವುದೂ ಇಲ್ಲ. ಅಲ್ಲಿ ದೊರಕುವ ಸುಖಕ್ಕೆ ಸಮನಾದ ಸುಖವು ಮತ್ತೆಲ್ಲೂ ದೊರಕುವುದಿಲ್ಲ ಎಂಬ ಪಾಠಾಂತರವಿದೆ.
[3] ಘ್ರಾಣ, ಜಿಹ್ವೆ, ಚಕ್ಷುಸ್ಸು, ತ್ವಚ, ಶ್ರೋತ್ರ, ಮನಸ್ಸು ಮತ್ತು ಬುದ್ಧಿ ಈ ಏಳು ಮಹಾವೃಕ್ಷಗಳು.
[4] ಗಂಧ, ರಸ, ರೂಪ, ಶಬ್ಧ, ಸ್ಪರ್ಶ, ಮಂತ್ರ ಮತ್ತು ಬೋಧ ಈ ಏಳು ಫಲಗಳು.
[5] ಘ್ರಾತಾ, ಭಕ್ಷಯಿತಾ, ದ್ರಷ್ಟಾ, ವಕ್ತಾ, ಶ್ರೋತಾ, ಮಂತಾ ಮತ್ತು ಬೋದ್ಧಾ ಇವು ಏಳು ಅತಿಥಿಗಳು.
[6] ಸಪ್ತಋಷಿಗಳ ಏಳು ಆಶ್ರಮಗಳು.
[7] ಅಹಿಂಸೆ, ಸತ್ಯ, ಅಕ್ರೋಧ, ತ್ಯಾಗ, ಶಾಂತಿ, ಅಪೈಶುನ (ಚಾಡಿಹೇಳದಿರುವುದು) ಮತ್ತು ಪ್ರಾಣಿಗಳಲ್ಲಿ ದಯೆ ಇವೇ ಏಳು ದೀಕ್ಷೆಗಳು.
[8] ಪ್ರಜ್ಞಾವೃಕ್ಷಂ ಮೋಕ್ಷಫಲಂ ಅರ್ಥಾತ್ ಪ್ರಜ್ಞಾರೂಪದ ವೃಕ್ಷ ಮತ್ತು ಮೋಕ್ಷರೂಪದ ಫಲ ಎಂಬ ಪಾಠಾಂತರವಿದೆ.