ಅಶ್ವಮೇಧಿಕ ಪರ್ವ
೨೬
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೧೮).
14026001 ಬ್ರಾಹ್ಮಣ ಉವಾಚ
14026001a ಏಕಃ ಶಾಸ್ತಾ ನ ದ್ವಿತೀಯೋಽಸ್ತಿ ಶಾಸ್ತಾ
ಯಥಾ ನಿಯುಕ್ತೋಽಸ್ಮಿ ತಥಾ ಚರಾಮಿ|
14026001c ಹೃದ್ಯೇಷ ತಿಷ್ಠನ್ಪುರುಷಃ ಶಾಸ್ತಿ ಶಾಸ್ತಾ
ತೇನೈವ ಯುಕ್ತಃ ಪ್ರವಣಾದಿವೋದಕಮ್||
ಬ್ರಾಹ್ಮಣನು ಹೇಳಿದನು: “ಶಾಸಕನು ಒಬ್ಬನೇ. ಇನ್ನೊಬ್ಬ ಶಾಸಕನಿಲ್ಲ. ಅವನ ನಿಯೋಗದಂತೆಯೇ ನಡೆಯುತ್ತೇನೆ. ಹೃದಯದಲ್ಲಿರುವ ಈ ಶಾಸಕನು ಶಾಸನಮಾಡುತ್ತಾನೆ. ಇಳಿಜಾರಿನಲ್ಲಿ ಹರಿಯುವ ನೀರಿನಂತೆ ನಾನು ಅವನ ಕಡೆಯೇ ನಡೆಯುತ್ತೇನೆ.
14026002a ಏಕೋ ಗುರುರ್ನಾಸ್ತಿ ತತೋ ದ್ವಿತೀಯೋ
ಯೋ ಹೃಚ್ಚಯಸ್ತಮಹಮನುಬ್ರವೀಮಿ|
14026002c ತೇನಾನುಶಿಷ್ಟಾ ಗುರುಣಾ ಸದೈವ
ಪರಾಭೂತಾ ದಾನವಾಃ ಸರ್ವ ಏವ||
ಗುರುವು ಒಬ್ಬನೇ. ಇನ್ನೊಬ್ಬನಿಲ್ಲ. ಹೃದಯದಲ್ಲಿ ನೆಲೆಸಿರುವ ಅವನ ಕುರಿತು ಹೇಳುತ್ತಿದ್ದೇನೆ. ಆ ಗುರುವಿನ ಅನುಶಾಸನದಿಂದಲೇ ದಾನವರೆಲ್ಲರೂ ಸದಾ ಪರಾಭವರಾಗುತ್ತಾರೆ.
14026003a ಏಕೋ ಬಂಧುರ್ನಾಸ್ತಿ ತತೋ ದ್ವಿತೀಯೋ
ಯೋ ಹೃಚ್ಚಯಸ್ತಮಹಮನುಬ್ರವೀಮಿ|
14026003c ತೇನಾನುಶಿಷ್ಟಾ ಬಾಂಧವಾ ಬಂಧುಮಂತಃ
ಸಪ್ತರ್ಷಯಃ ಸಪ್ತ ದಿವಿ ಪ್ರಭಾಂತಿ||
ಅವನೊಬ್ಬನೇ ಬಂಧುವು. ಇನ್ನೊಬ್ಬ ಬಂಧುವಿಲ್ಲ. ಹೃದಯದಲ್ಲಿ ನೆಲೆಸಿರುವ ಅವನ ಕುರಿತು ಹೇಳುತ್ತಿದ್ದೇನೆ. ಅವನ ಆಜ್ಞೆಯಂತೆಯೇ ಬಾಂಧವರು ಬಂಧುಗಳನ್ನು ಪಡೆಯುತ್ತಾರೆ ಮತ್ತು ಸಪ್ತರ್ಷಿಗಳು ದಿವಿಯಲ್ಲಿ ಪ್ರಕಾಶಿಸುತ್ತಾರೆ.
14026004a ಏಕಃ ಶ್ರೋತಾ ನಾಸ್ತಿ ತತೋ ದ್ವಿತೀಯೋ
ಯೋ ಹೃಚ್ಚಯಸ್ತಮಹಮನುಬ್ರವೀಮಿ|
14026004c ತಸ್ಮಿನ್ಗುರೌ ಗುರುವಾಸಂ ನಿರುಷ್ಯ
ಶಕ್ರೋ ಗತಃ ಸರ್ವಲೋಕಾಮರತ್ವಮ್||
ಕೇಳುವವನು ಅವನೊಬ್ಬನೇ. ಇನ್ನೊಬ್ಬನಿಲ್ಲ. ಹೃದಯದಲ್ಲಿ ನೆಲೆಸಿರುವ ಅವನ ಕುರಿತು ಹೇಳುತ್ತಿದ್ದೇನೆ. ಅದೇ ಗುರುವಿನೊಂದಿಗೆ ಗುರುವಾಸವನ್ನು ಮಾಡಿ ಶಕ್ರನು ಸರ್ವಲೋಕದಲ್ಲಿ ಅಮರತ್ವವನ್ನು ಪಡೆದನು.
14026005a ಏಕೋ ದ್ವೇಷ್ಟಾ ನಾಸ್ತಿ ತತೋ ದ್ವಿತೀಯೋ
ಯೋ ಹೃಚ್ಚಯಸ್ತಮಹಮನುಬ್ರವೀಮಿ|
14026005c ತೇನಾನುಶಿಷ್ಟಾ ಗುರುಣಾ ಸದೈವ
ಲೋಕದ್ವಿಷ್ಟಾಃ ಪನ್ನಗಾಃ ಸರ್ವ ಏವ||
ದ್ವೇಷಿಯೊಬ್ಬನೇ ಇದ್ದಾನೆ. ಇನ್ನೊಬ್ಬನಿಲ್ಲ. ಹೃದಯದಲ್ಲಿ ನೆಲೆಸಿರುವ ಅವನ ಕುರಿತು ಹೇಳುತ್ತಿದ್ದೇನೆ. ಆ ಗುರುವಿನಿಂದ ಉಪದೇಶಿಸಲ್ಪಟ್ಟು ಪನ್ನಗಗಳು ಎಲ್ಲವೂ ಲೋಕದ ದ್ವೇಷಿಗಳಾದವು.
14026006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
14026006c ಪ್ರಜಾಪತೌ ಪನ್ನಗಾನಾಂ ದೇವರ್ಷೀಣಾಂ ಚ ಸಂವಿದಮ್||
ಇದರ ಕುರಿತು ಪ್ರಜಾಪತಿಯು ಪನ್ನಗ ಮತ್ತು ದೇವರ್ಷಿಗಳಿಗೆ ನಿಯಮಿಸಿದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
14026007a ದೇವರ್ಷಯಶ್ಚ ನಾಗಾಶ್ಚ ಅಸುರಾಶ್ಚ ಪ್ರಜಾಪತಿಮ್|
14026007c ಪರ್ಯಪೃಚ್ಚನ್ನುಪಾಸೀನಾಃ ಶ್ರೇಯೋ ನಃ ಪ್ರೋಚ್ಯತಾಮಿತಿ||
ದೇವರ್ಷಿಗಳು, ನಾಗಗಳು ಮತ್ತು ಅಸುರರು ಪ್ರಜಾಪತಿಯ ಬಳಿಸಾರಿ ನಮಗೆ ಶ್ರೇಯಸ್ಸುಂಟಾಗುವುದನ್ನು ಹೇಳು ಎಂದು ಕೇಳಿಕೊಂಡರು.
14026008a ತೇಷಾಂ ಪ್ರೋವಾಚ ಭಗವಾನ್ಶ್ರೇಯಃ ಸಮನುಪೃಚ್ಚತಾಮ್|
14026008c ಓಮಿತ್ಯೇಕಾಕ್ಷರಂ ಬ್ರಹ್ಮ ತೇ ಶ್ರುತ್ವಾ ಪ್ರಾದ್ರವನ್ ದಿಶಃ||
ಶ್ರೇಯಸ್ಸೇನೆಂದು ಕೇಳಿದ ಅವರಿಗೆ ಭಗವಾನ್ ಬ್ರಹ್ಮನು ಓಂ ಎಂದು ಏಕಾಕ್ಷರವನ್ನು ಹೇಳಲು ಅದನ್ನು ಕೇಳಿ ಅವರು ದಿಕ್ಕುದಿಕ್ಕುಗಳಲ್ಲಿ ಓಡಿ ಹೋದರು[1].
14026009a ತೇಷಾಂ ಪ್ರಾದ್ರವಮಾಣಾನಾಮುಪದೇಶಾರ್ಥಮಾತ್ಮನಃ|
14026009c ಸರ್ಪಾಣಾಂ ದಶನೇ ಭಾವಃ ಪ್ರವೃತ್ತಃ ಪೂರ್ವಮೇವ ತು||
ಓಡಿಹೋಗುತ್ತಿದ್ದ ಅವರು ತಮ್ಮ ಸ್ವಭಾವಗುಣವೇ ಶ್ರೇಯಸ್ಕರವೆಂದು ಆ ಉಪದೇಶವನ್ನು ಅರ್ಥೈಸಿಕೊಂಡರು[2]. ಸರ್ಪಗಳಿಗೆ ಮೊದಲಿನಿಂದಲೇ ಕಚ್ಚುವ ಸ್ವಭಾವವಿತ್ತು.
14026010a ಅಸುರಾಣಾಂ ಪ್ರವೃತ್ತಸ್ತು ದಂಭಭಾವಃ ಸ್ವಭಾವಜಃ|
14026010c ದಾನಂ ದೇವಾ ವ್ಯವಸಿತಾ ದಮಮೇವ ಮಹರ್ಷಯಃ||
ದಂಭಭಾವವು ಸ್ವಭಾವತಃ ಅಸುರರ ಪ್ರವೃತ್ತಿಯಾಗಿತ್ತು. ದೇವತೆಗಳ ಸ್ವಭಾವವು ದಾನವೂ, ದಮವು ಮಹರ್ಷಿಗಳ ಸ್ವಭಾವವೂ ಆಗಿತ್ತು.
14026011a ಏಕಂ ಶಾಸ್ತಾರಮಾಸಾದ್ಯ ಶಬ್ದೇನೈಕೇನ ಸಂಸ್ಕೃತಾಃ|
14026011c ನಾನಾ ವ್ಯವಸಿತಾಃ ಸರ್ವೇ ಸರ್ಪದೇವರ್ಷಿದಾನವಾಃ||
ಒಬ್ಬನೇ ಶಾಸಕನ ಬಳಿಸಾರಿ ಒಂದೇ ಶಬ್ಧದಿಂದ ಉಪದೇಶಿಸಲ್ಪಟ್ಟ ಸರ್ಪ-ದೇವರ್ಷಿ-ದಾನವರು ಎಲ್ಲರೂ ನಾನಾ ವರ್ತನೆಗಳಲ್ಲಿ ತೊಡಗಿದರು.
14026012a ಶೃಣೋತ್ಯಯಂ ಪ್ರೋಚ್ಯಮಾನಂ ಗೃಹ್ಣಾತಿ ಚ ಯಥಾತಥಮ್|
14026012c ಪೃಚ್ಚತಸ್ತಾವತೋ ಭೂಯೋ ಗುರುರನ್ಯೋಽನುಮನ್ಯತೇ||
ಗುರುವು ಹೇಳುವುದನ್ನು ಶಿಷ್ಯನು ಕೇಳುತ್ತಾನೆ. ಆದರೆ ಅದನ್ನು ಅವನು ತನ್ನ ಸ್ವಭಾವಕ್ಕೆ ಅನುಗುಣವಾಗಿ ಅಂಗೀಕರಿಸುತ್ತಾನೆ. ಆದುದರಿಂದ ಪ್ರಶ್ನಿಸುವ ಶಿಷ್ಯನಿಗೆ ತನ್ನ ಅಂತರ್ಯಾಮಿಗಿಂತಲೂ ಮಿಗಿಲಾದ ಗುರುವು ಬೇರೊಬ್ಬನಿಲ್ಲ.
14026013a ತಸ್ಯ ಚಾನುಮತೇ ಕರ್ಮ ತತಃ ಪಶ್ಚಾತ್ಪ್ರವರ್ತತೇ|
14026013c ಗುರುರ್ಬೋದ್ಧಾ ಚ ಶತ್ರುಶ್ಚ ದ್ವೇಷ್ಟಾ ಚ ಹೃದಿ ಸಂಶ್ರಿತಃ||
ಅವನ ಅನುಮತಿಯಿಂದಲೇ ಕರ್ಮಗಳು ಒಂದಾದಮೇಲೆ ಒಂದರಂತೆ ನಡೆಯುತ್ತಿರುತ್ತವೆ. ಗುರು, ಶಿಷ್ಯ, ಶತ್ರು ಮತ್ತು ದ್ವೇಷಿಯು ಹೃದಯದಲ್ಲಿಯೇ ನೆಲೆಸಿರುತ್ತಾನೆ.
14026014a ಪಾಪೇನ ವಿಚರಽಲ್ಲೋಕೇ ಪಾಪಚಾರೀ ಭವತ್ಯಯಮ್|
14026014c ಶುಭೇನ ವಿಚರಽಲ್ಲೋಕೇ ಶುಭಚಾರೀ ಭವತ್ಯುತ||
ಲೋಕದಲ್ಲಿ ಪಾಪಕರ್ಮಗಳನ್ನು ಮಾಡಿಕೊಂಡಿರುವವನು ಪಾಪಚಾರಿಯಾಗುತ್ತಾನೆ. ಶುಭಕರ್ಮಗಳನ್ನು ಮಾಡಿಕೊಂಡಿರುವವನು ಲೋಕದಲ್ಲಿ ಶುಭಚಾರಿಯಾಗುತ್ತಾನೆ.
14026015a ಕಾಮಚಾರೀ ತು ಕಾಮೇನ ಯ ಇಂದ್ರಿಯಸುಖೇ ರತಃ|
14026015c ವ್ರತವಾರೀ ಸದೈವೈಷ ಯ ಇಂದ್ರಿಯಜಯೇ ರತಃ||
ಕಾಮಚಾರಿಯಾದವನು ಕಾಮದಿಂದ ಇಂದ್ರಿಯಸುಖಗಳಲ್ಲಿಯೇ ನಿರತನಾಗಿರುತ್ತಾನೆ. ವ್ರತವಾರಿಯಾದವನು ಸದೈವವೂ ಇಂದ್ರಿಯಗಳನ್ನು ಜಯಿಸುವುದರಲ್ಲಿಯೇ ನಿರತನಾಗಿರುತ್ತಾನೆ.
14026016a ಅಪೇತವ್ರತಕರ್ಮಾ ತು ಕೇವಲಂ ಬ್ರಹ್ಮಣಿ ಶ್ರಿತಃ|
14026016c ಬ್ರಹ್ಮಭೂತಶ್ಚರಽಲ್ಲೋಕೇ ಬ್ರಹ್ಮಚಾರೀ ಭವತ್ಯಯಮ್||
ಯಾರು ವ್ರತ ಮತ್ತು ಕರ್ಮಗಳನ್ನು ತ್ಯಜಿಸಿ ಕೇವಲ ಬ್ರಹ್ಮನಲ್ಲಿಯೇ ಆಶ್ರಿತನಾಗಿ ಬ್ರಹ್ಮಭೂತನಾಗಿ ಇರುವನೋ ಅವನು ಲೋಕದಲ್ಲಿ ಬ್ರಹ್ಮಚಾರಿ ಎನಿಸಿಕೊಳ್ಳುವನು.
14026017a ಬ್ರಹ್ಮೈವ ಸಮಿಧಸ್ತಸ್ಯ ಬ್ರಹ್ಮಾಗ್ನಿರ್ಬ್ರಹ್ಮಸಂಸ್ತರಃ|
14026017c ಆಪೋ ಬ್ರಹ್ಮ ಗುರುರ್ಬ್ರಹ್ಮ ಸ ಬ್ರಹ್ಮಣಿ ಸಮಾಹಿತಃ||
ಅವನಿಗೆ ಬ್ರಹ್ಮವೇ ಸಮಿತ್ತು. ಬ್ರಹ್ಮನೇ ಅಗ್ನಿ. ಬ್ರಹ್ಮವೇ ಅಗ್ನಿಯ ಮೂಲ. ಬ್ರಹ್ಮನೇ ಜಲ. ಬ್ರಹ್ಮನೇ ಗುರು. ಮತ್ತು ಅವನೂ ಕೂಡ ಬ್ರಹ್ಮನಲ್ಲಿಯೇ ಲೀನನಾಗಿರುತ್ತಾನೆ.
14026018a ಏತದೇತಾದೃಶಂ ಸೂಕ್ಷ್ಮಂ ಬ್ರಹ್ಮಚರ್ಯಂ ವಿದುರ್ಬುಧಾಃ|
14026018c ವಿದಿತ್ವಾ ಚಾನ್ವಪದ್ಯಂತ ಕ್ಷೇತ್ರಜ್ಞೇನಾನುದರ್ಶಿನಃ||
ಇದನ್ನೇ ತಿಳಿದವರು ಸೂಕ್ಷ್ಮವಾದ ಬ್ರಹ್ಮಚರ್ಯವೆಂದು ತಿಳಿದಿರುತ್ತಾರೆ. ಇದನ್ನು ತಿಳಿದು ಕ್ಷೇತ್ರಜ್ಞನಿಂದ ತೋರಿಸಿಕೊಟ್ಟ ದಾರಿಯಲ್ಲಿಯೇ ಅವರು ಅನುಸರಿಸಿಹೋಗುತ್ತಾರೆ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಷಡ್ವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತಾರನೇ ಅಧ್ಯಾಯವು.
[1] ಬ್ರಹ್ಮನ ಶ್ರೇಯಸ್ಸೆಂಬ ಉಪದೇಶವು ಓಂಕಾರದಲ್ಲಿ ದೊರಕಿತೆಂದು ತಿಳಿದು ಎಲ್ಲರೂ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು ಎಂದರ್ಥ.
[2] ಓಂ ಎಂದರೆ ಅಂಗೀಕಾರ ಎಂಬ ಅರ್ಥವೂ ಇದೆ.