Ashvamedhika Parva: Chapter 24

ಅಶ್ವಮೇಧಿಕ ಪರ್ವ

೨೪

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೨೦).

14024001 ಬ್ರಾಹ್ಮಣ ಉವಾಚ

14024001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

14024001c ನಾರದಸ್ಯ ಚ ಸಂವಾದಮೃಷೇರ್ದೇವಮತಸ್ಯ ಚ||

ಬ್ರಾಹ್ಮಣನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ನಾರದ ಮತ್ತು ಋಷಿ ದೇವಮತರ ಸಂವಾದರೂಪವಾದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

14024002 ದೇವಮತ ಉವಾಚ

14024002a ಜಂತೋಃ ಸಂಜಾಯಮಾನಸ್ಯ ಕಿಂ ನು ಪೂರ್ವಂ ಪ್ರವರ್ತತೇ|

14024002c ಪ್ರಾಣೋಽಪಾನಃ ಸಮಾನೋ ವಾ ವ್ಯಾನೋ ವೋದಾನ ಏವ ಚ||

ದೇವಮತನು ಹೇಳಿದನು: “ಜಂತುವು ಹುಟ್ಟುವಾಗ ಪ್ರಾಣ, ಅಪಾನ, ಸಮಾನ, ವ್ಯಾನ, ಮತ್ತು ಉದಾನಗಳಲ್ಲಿ ಯಾವುದು ಮೊದಲು ಕಾರ್ಯಪ್ರವೃತ್ತವಾಗುತ್ತದೆ?”

14024003 ನಾರದ ಉವಾಚ

14024003a ಯೇನಾಯಂ ಸೃಜ್ಯತೇ ಜಂತುಸ್ತತೋಽನ್ಯಃ ಪೂರ್ವಮೇತಿ ತಮ್|

14024003c ಪ್ರಾಣದ್ವಂದ್ವಂ ಚ ವಿಜ್ಞೇಯಂ ತಿರ್ಯಗಂ ಚೋರ್ಧ್ವಗಂ ಚ ಯತ್||

ನಾರದನು ಹೇಳಿದನು: “ಯಾವುದರಿಂದ ಜಂತುವು ಹುಟ್ಟುತ್ತದೆಯೋ ಅದು ಪ್ರಾಣಾದಿ ವಾಯುಗಳಿಗಿಂಥ ಭಿನ್ನವಾಗಿದ್ದು, ಮೊದಲೇ ಅದನ್ನು ಪ್ರವೇಶಿಸಿರುತ್ತದೆ. ಮೇಲೆ-ಕೆಳಗೆ ಮತ್ತು ಅಡ್ಡವಾಗಿ ಚಲಿಸುವ ಪ್ರಾಣದ್ವಂದ್ವಗಳ ಕುರಿತು ತಿಳಿದುಕೊಳ್ಳಬೇಕು.”

14024004 ದೇವಮತ ಉವಾಚ

14024004a ಕೇನಾಯಂ ಸೃಜ್ಯತೇ ಜಂತುಃ ಕಶ್ಚಾನ್ಯಃ ಪೂರ್ವಮೇತಿ ತಮ್|

14024004c ಪ್ರಾಣದ್ವಂದ್ವಂ ಚ ಮೇ ಬ್ರೂಹಿ ತಿರ್ಯಗೂರ್ಧ್ವಂ ಚ ನಿಶ್ಚಯಾತ್||

ದೇವಮತನು ಹೇಳಿದನು: “ಯಾವ ಕಾರಣದಿಂದ ಜಂತುವು ಜೀವಹೊಂದುತ್ತದೆ? ಮೊದಲೇ ಅದರಲ್ಲಿರುವ ಅನ್ಯ ವಸ್ತು ಯಾವುದು? ಮೇಲೆ-ಕೆಳಗೆ ಮತ್ತು ಅಡ್ಡವಾಗಿ ಚಲಿಸುವ ಪ್ರಾಣದ್ವಂದ್ವಗಳೇನು? ಇವುಗಳನ್ನು ನಿಶ್ಚಯಿಸಿ ಹೇಳು.”

14024005 ನಾರದ ಉವಾಚ

14024005a ಸಂಕಲ್ಪಾಜ್ಜಾಯತೇ ಹರ್ಷಃ ಶಬ್ದಾದಪಿ ಚ ಜಾಯತೇ|

14024005c ರಸಾತ್ಸಂಜಾಯತೇ ಚಾಪಿ ರೂಪಾದಪಿ ಚ ಜಾಯತೇ||

ನಾರದನು ಹೇಳಿದನು: “ಸಂಕಲ್ಪದಿಂದ ಹರ್ಷವುಂಟಾಗುತ್ತದೆ. ಶಬ್ಧವನ್ನು ಕೇಳುವುದರಿಂದಲೂ, ರಸದ ಆಸ್ವಾದನೆಯಿಂದಲೂ, ರೂಪವನ್ನು ನೋಡುವುದರಿಂದಲೂ ಹರ್ಷವುಂಟಾಗುತ್ತದೆ.

14024006a ಸ್ಪರ್ಶಾತ್ಸಂಜಾಯತೇ ಚಾಪಿ ಗಂಧಾದಪಿ ಚ ಜಾಯತೇ|

14024006c ಏತದ್ರೂಪಮುದಾನಸ್ಯ ಹರ್ಷೋ ಮಿಥುನಸಂಭವಃ||

ಸ್ಪರ್ಶದಿಂದಲೂ ಹರ್ಷವುಂಟಾಗುತ್ತದೆ. ಮೂಸುವುದರಿಂದಲೂ ಹರ್ಷವುಂಟಾಗುತ್ತದೆ. ಮೈಥುನದಿಂದ ಹುಟ್ಟುವ ಹರ್ಷವು ಉದಾನ ಸ್ವರೂಪವು.

14024007a ಕಾಮಾತ್ಸಂಜಾಯತೇ ಶುಕ್ರಂ ಕಾಮಾತ್ಸಂಜಾಯತೇ ರಸಃ|

14024007c ಸಮಾನವ್ಯಾನಜನಿತೇ ಸಾಮಾನ್ಯೇ ಶುಕ್ರಶೋಣಿತೇ||

ಶುಕ್ರವು ಕಾಮದಿಂದ ಹುಟ್ಟುತ್ತದೆ. ರಸವೂ ಕಾಮದಿಂದಲೇ ಹುಟ್ಟುತ್ತದೆ. ಈ ಶುಕ್ರ-ಶೋಣಿತಗಳು ಸಾಮಾನ್ಯವಾಗಿ ಸಮಾನ-ವ್ಯಾನಗಳಿಂದ ಹುಟ್ಟುತ್ತವೆ.

14024008a ಶುಕ್ರಾಚ್ಚೋಣಿತಸಂಸೃಷ್ಟಾತ್ಪೂರ್ವಂ ಪ್ರಾಣಃ ಪ್ರವರ್ತತೇ|

14024008c ಪ್ರಾಣೇನ ವಿಕೃತೇ ಶುಕ್ರೇ ತತೋಽಪಾನಃ ಪ್ರವರ್ತತೇ||

ಶುಕ್ರ-ಶೋಣಿತಗಳು ಸೇರಿ, ಮೊದಲು ಪ್ರಾಣವು ಕಾರ್ಯಪ್ರವೃತ್ತವಾಗುತ್ತದೆ. ಪ್ರಾಣದಿಂದ ವಿಕೃತವಾದ ಶುಕ್ರದಲ್ಲಿ ಅಪಾನವು ಕಾರ್ಯಪ್ರವೃತ್ತವಾಗುತ್ತದೆ.

14024009a ಪ್ರಾಣಾಪಾನಾವಿದಂ ದ್ವಂದ್ವಮವಾಕ್ಚೋರ್ಧ್ವಂ ಚ ಗಚ್ಚತಃ|

14024009c ವ್ಯಾನಃ ಸಮಾನಶ್ಚೈವೋಭೌ ತಿರ್ಯಗ್ದ್ವಂದ್ವತ್ವಮುಚ್ಯತೇ||

ಮೇಲೆ ಮತ್ತು ಕೆಳಕ್ಕೆ ಚಲಿಸುವ ಪ್ರಾಣ-ಅಪಾನಗಳು ಒಂದು ದ್ವಂದ್ವವಾದರೆ, ಎಡ-ಬಲಗಳಲ್ಲಿ ಅಡ್ಡವಾಗಿ ಚಲಿಸುವ ವ್ಯಾನ-ಸಮಾನಗಳಿಗೂ ದ್ವಂದ್ವವೆಂದೇ ಹೇಳುತ್ತಾರೆ.

14024010a ಅಗ್ನಿರ್ವೈ ದೇವತಾಃ ಸರ್ವಾ ಇತಿ ವೇದಸ್ಯ ಶಾಸನಮ್|

14024010c ಸಂಜಾಯತೇ ಬ್ರಾಹ್ಮಣೇಷು ಜ್ಞಾನಂ ಬುದ್ಧಿಸಮನ್ವಿತಮ್||

ಅಗ್ನಿಯೇ ಸರ್ವ ದೇವತಾಸ್ವರೂಪನು ಎಂದು ವೇದದ ಶಾಸನವಾಗಿದೆ. ಅಗ್ನಿಯಿಂದಲೇ ಬ್ರಾಹ್ಮಣನಲ್ಲಿ ಬುದ್ಧಿಸಮನ್ವಿತ ಜ್ಞಾನವು ಹುಟ್ಟುತ್ತದೆ.

14024011a ತಸ್ಯ ಧೂಮಸ್ತಮೋರೂಪಂ ರಜೋ ಭಸ್ಮ ಸುರೇತಸಃ|

14024011c ಸತ್ತ್ವಂ ಸಂಜಾಯತೇ ತಸ್ಯ ಯತ್ರ ಪ್ರಕ್ಷಿಪ್ಯತೇ ಹವಿಃ||

ಅಗ್ನಿಯ ಧೂಮವು ತಮೋರೂಪದ್ದೂ ಭಸ್ಮವು ರಜೋರೂಪದ್ದೂ ಆಗಿರುತ್ತದೆ. ಆ ಅಗ್ನಿಯಲ್ಲಿ ಹವಿಸ್ಸನ್ನು ಹಾಕುವುದರಿಂದ ಸತ್ತ್ವವು ಹುಟ್ಟಿಕೊಳ್ಳುತ್ತದೆ.

14024012a ಆಘಾರೌ ಸಮಾನೋ ವ್ಯಾನಶ್ಚ ಇತಿ ಯಜ್ಞವಿದೋ ವಿದುಃ|

14024012c ಪ್ರಾಣಾಪಾನಾವಾಜ್ಯಭಾಗೌ ತಯೋರ್ಮಧ್ಯೇ ಹುತಾಶನಃ|

14024012e ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ||

ಯಜ್ಞವನ್ನು ತಿಳಿದವರು ಸಮಾನ-ವ್ಯಾನಗಳು ಆಘಾರ[1]ಗಳು ಮತ್ತು ಪ್ರಾಣ-ಅಪಾನಗಳು ಆಜ್ಯಭಾಗಗಳು ಎಂದು ತಿಳಿದಿದ್ದಾರೆ. ಇವುಗಳ ಮಧ್ಯೆ ಇರುವ ಹುತಾಶನನೇ ಉದಾನದ ಪರಮ ರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.

14024013a ನಿರ್ದ್ವಂದ್ವಮಿತಿ ಯತ್ತ್ವೇತತ್ತನ್ಮೇ ನಿಗದತಃ ಶೃಣು|

14024014a ಅಹೋರಾತ್ರಮಿದಂ ದ್ವಂದ್ವಂ ತಯೋರ್ಮಧ್ಯೇ ಹುತಾಶನಃ|

14024014c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ||

ಯಾವುದನ್ನು ನಿರ್ದ್ವಂದ್ವವೆಂದು ಕರೆಯುವರೋ ಅದರ ಕುರಿತು ಹೇಳುತ್ತೇನೆ. ಕೇಳು. ಹಗಲು-ರಾತ್ರಿಗಳು ದ್ವಂದ್ವವು. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.

14024015a ಉಭೇ ಚೈವಾಯನೇ ದ್ವಂದ್ವಂ ತಯೋರ್ಮಧ್ಯೇ ಹುತಾಶನಃ|

14024015c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ||

ಉಚ್ಛ್ವಾಸ-ನಿಃಶ್ವಾಸಗಳೆರಡೂ ದ್ವಂದ್ವವು. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.

14024016a ಉಭೇ ಸತ್ಯಾನೃತೇ ದ್ವಂದ್ವಂ ತಯೋರ್ಮಧ್ಯೇ ಹುತಾಶನಃ|

14024016c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ||

ಸತ್ಯ ಮತ್ತು ಅಸತ್ಯಗಳು ದ್ವಂದ್ವವು. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.

14024017a ಉಭೇ ಶುಭಾಶುಭೇ ದ್ವಂದ್ವಂ ತಯೋರ್ಮಧ್ಯೇ ಹುತಾಶನಃ|

14024017c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ||

ಶುಭ-ಅಶುಭಗಳು ದ್ವಂದ್ವ. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.

14024018a ಸಚ್ಚಾಸಚ್ಚೈವ ತದ್ದ್ವಂದ್ವಂ ತಯೋರ್ಮಧ್ಯೇ ಹುತಾಶನಃ|

14024018c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ||

ಇರುವಿಕೆ ಮತ್ತು ಇಲ್ಲದಿರುವಿಕೆಗಳು ದ್ವಂದ್ವ. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.

14024019a ಪ್ರಥಮಂ ಸಮಾನೋ ವ್ಯಾನೋ ವ್ಯಸ್ಯತೇ ಕರ್ಮ ತೇನ ತತ್|

14024019c ತೃತೀಯಂ ತು ಸಮಾನೇನ ಪುನರೇವ ವ್ಯವಸ್ಯತೇ||

ಮೊದಲು ಸಮಾನ-ವ್ಯಾನಗಳು ಕರ್ಮಗಳನ್ನು ಪ್ರಾರಂಭಿಸುತ್ತವೆ. ಮೂರನೆಯದಾಗಿ ಸಮಾನವು ಪುನಃ ಕಾರ್ಯಗತವಾಗುತ್ತದೆ.

14024020a ಶಾಂತ್ಯರ್ಥಂ ವಾಮದೇವಂ ಚ ಶಾಂತಿರ್ಬ್ರಹ್ಮ ಸನಾತನಮ್|

14024020c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ||

ಶಾಂತಿಗಾಗಿ ವಾಮದೇವನೂ ಶಾಂತಿಯು ಸನಾತನ ಬ್ರಹ್ಮನೂ ಆಗಿವೆ. ಇದನ್ನೇ ಉದಾನದ ಪರಮ ರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.””

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಚತುರ್ವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.

[1] ಪ್ರಧಾನಾಹುತಿಗಿಂತ ಮೊದಲು ಅಗ್ನಿಯಲ್ಲಿ ವಾಯುವ್ಯದಿಂದ ಅಗ್ನೇಯದವರೆಗೂ ನೈರುತ್ಯದಿಂದ ಈಶಾನ್ಯದವರೆಗೂ ಸರ್ವೇಂಧನಸಂಯುಕ್ತವಾಗುವಂತೆ ಪ್ರಜಾಪತಿಗೆ ಕೊಡುವ ಆಹುತಿಯೇ ಆಘಾರ.

Comments are closed.