ಅಶ್ವಮೇಧಿಕ ಪರ್ವ
೨೨
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೨೯).
14022001 ಬ್ರಾಹ್ಮಣ ಉವಾಚ
14022001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
14022001c ಸುಭಗೇ ಸಪ್ತಹೋತೄಣಾಂ ವಿಧಾನಮಿಹ ಯಾದೃಶಮ್||
ಬ್ರಾಹ್ಮಣನು ಹೇಳಿದನು: “ಸುಭಗೇ! ಸಪ್ತಹೋತೃಗಳ ವಿಧಾನವು ಯಾವರೀತಿಯದು ಎನ್ನುವುದಕ್ಕೆ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
14022002a ಘ್ರಾಣಂ ಚಕ್ಷುಶ್ಚ ಜಿಹ್ವಾ ಚ ತ್ವಕ್ ಶ್ರೋತ್ರಂ ಚೈವ ಪಂಚಮಮ್|
14022002c ಮನೋ ಬುದ್ಧಿಶ್ಚ ಸಪ್ತೈತೇ ಹೋತಾರಃ ಪೃಥಗಾಶ್ರಿತಾಃ||
ಮೂಗು, ಕಣ್ಣುಗಳು, ನಾಲಿಗೆ, ಚರ್ಮ, ಮತ್ತು ಐದನೆಯದಾಗಿ ಕಿವಿಗಳು, ಮನಸ್ಸು ಮತ್ತು ಬುದ್ಧಿ ಈ ಏಳು ಪ್ರತ್ಯೇಕ ಹೋತಾರರು.
14022003a ಸೂಕ್ಷ್ಮೇಽವಕಾಶೇ ಸಂತಸ್ತೇ ನ ಪಶ್ಯಂತೀತರೇತರಮ್|
14022003c ಏತಾನ್ವೈ ಸಪ್ತಹೋತೄಂಸ್ತ್ವಂ ಸ್ವಭಾವಾದ್ವಿದ್ಧಿ ಶೋಭನೇ||
ಸೂಕ್ಷ್ಮ ಶರೀರದಲ್ಲಿರುವ ಇವುಗಳು ಪರಸ್ಪರರನ್ನು ನೋಡುವುದಿಲ್ಲ. ಶೋಭನೇ! ಈ ಸಪ್ತಹೋತೃಗಳ ಸ್ವಭಾವಗಳನ್ನು ನೀನು ತಿಳಿದುಕೋ!”
14022004 ಬ್ರಾಹ್ಮಣ್ಯುವಾಚ
14022004a ಸೂಕ್ಷ್ಮೇಽವಕಾಶೇ ಸಂತಸ್ತೇ ಕಥಂ ನಾನ್ಯೋನ್ಯದರ್ಶಿನಃ|
14022004c ಕಥಂಸ್ವಭಾವಾ ಭಗವನ್ನೇತದಾಚಕ್ಷ್ವ ಮೇ ವಿಭೋ||
ಬ್ರಾಹ್ಮಣಿಯು ಹೇಳಿದಳು: “ಸೂಕ್ಷ್ಮಶರೀರದಲ್ಲಿರುವ ಇವುಗಳು ಅನ್ಯೋನ್ಯರನ್ನು ಹೇಗೆ ನೋಡುವುದಿಲ್ಲ? ಭಗವನ್! ವಿಭೋ! ಇವುಗಳ ಸ್ವಭಾವಗಳು ಹೇಗೆ ಎನ್ನುವುದನ್ನು ನನಗೆ ಹೇಳು!”
14022005 ಬ್ರಾಹ್ಮಣ ಉವಾಚ
14022005a ಗುಣಾಜ್ಞಾನಮವಿಜ್ಞಾನಂ ಗುಣಿಜ್ಞಾನಮಭಿಜ್ಞತಾ|
14022005c ಪರಸ್ಪರಗುಣಾನೇತೇ ನ ವಿಜಾನಂತಿ ಕರ್ಹಿ ಚಿತ್||
ಬ್ರಾಹ್ಮಣನು ಹೇಳಿದನು: “ಗುಣಗಳ ಅಜ್ಞಾನವೇ ಅಜ್ಞಾನವು. ಗುಣಗಳನ್ನು ತಿಳಿದುಕೊಳ್ಳುವುದೇ ಅರ್ಥಮಾಡಿಕೊಳ್ಳುವುದು. ಆದರೆ ಈ ಸಪ್ತ ಹೋತೃಗಳು ಪರಸ್ಪರರ ಗುಣಗಳನ್ನು ಎಂದೂ ತಿಳಿಯಲಾರವು!
14022006a ಜಿಹ್ವಾ ಚಕ್ಷುಸ್ತಥಾ ಶ್ರೋತ್ರಂ ತ್ವಗ್ಮನೋ ಬುದ್ಧಿರೇವ ಚ|
14022006c ನ ಗಂಧಾನಧಿಗಚ್ಚಂತಿ ಘ್ರಾಣಸ್ತಾನಧಿಗಚ್ಚತಿ||
ನಾಲಿಗೆ, ಕಣ್ಣುಗಳು, ಕಿವಿಗಳು, ಚರ್ಮ, ಮನಸ್ಸು ಮತ್ತು ಬುದ್ಧಿಗಳು ವಾಸನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಮೂಗು ವಾಸನೆಗಳನ್ನು ಅರ್ಥಮಾಡಿಕೊಳ್ಳುತ್ತದೆ.
14022007a ಘ್ರಾಣಂ ಚಕ್ಷುಸ್ತಥಾ ಶ್ರೋತ್ರಂ ತ್ವಗ್ಮನೋ ಬುದ್ಧಿರೇವ ಚ|
14022007c ನ ರಸಾನಧಿಗಚ್ಚಂತಿ ಜಿಹ್ವಾ ತಾನಧಿಗಚ್ಚತಿ||
ಮೂಗು, ಕಣ್ಣುಗಳು, ಕಿವಿಗಳು, ಚರ್ಮ, ಮನಸ್ಸು, ಮತ್ತು ಬುದ್ಧಿಗಳು ರುಚಿಯನ್ನು ಅರ್ಥಮಾಡಿಕೊಳ್ಳಲಾರವು. ಆದರೆ ನಾಲಿಗೆಗೆ ಅದು ಅರ್ಥವಾಗುತ್ತದೆ.
14022008a ಘ್ರಾಣಂ ಜಿಹ್ವಾ ತಥಾ ಶ್ರೋತ್ರಂ ತ್ವಗ್ಮನೋ ಬುದ್ಧಿರೇವ ಚ|
14022008c ನ ರೂಪಾಣ್ಯಧಿಗಚ್ಚಂತಿ ಚಕ್ಷುಸ್ತಾನ್ಯಧಿಗಚ್ಚತಿ||
ಮೂಗು, ನಾಲಿಗೆ, ಕಿವಿಗಳು, ಚರ್ಮ, ಮನಸ್ಸು ಮತ್ತು ಬುದ್ಧಿಗಳು ರೂಪವನ್ನು ತಿಳಿದುಕೊಳ್ಳಲಾರವು. ಆದರೆ ಕಣ್ಣುಗಳಿಗೆ ರೂಪವು ಕಾಣಿಸುತ್ತದೆ.
14022009a ಘ್ರಾಣಂ ಜಿಹ್ವಾ ಚ ಚಕ್ಷುಶ್ಚ ಶ್ರೋತ್ರಂ ಬುದ್ಧಿರ್ಮನಸ್ತಥಾ|
14022009c ನ ಸ್ಪರ್ಶಾನಧಿಗಚ್ಚಂತಿ ತ್ವಕ್ಚ ತಾನಧಿಗಚ್ಚತಿ||
ಮೂಗು, ನಾಲಿಗೆ, ಕಣ್ಣುಗಳು, ಕಿವಿಗಳು, ಬುದ್ಧಿ ಮತ್ತು ಮನಸ್ಸುಗಳು ಸ್ಪರ್ಶವನ್ನು ತಿಳಿಯಲಾರವು. ಆದರೆ ಚರ್ಮಕ್ಕೆ ಸ್ಪರ್ಶವು ತಿಳಿಯುತ್ತದೆ.
14022010a ಘ್ರಾಣಂ ಜಿಹ್ವಾ ಚ ಚಕ್ಷುಶ್ಚ ತ್ವಗ್ಮನೋ ಬುದ್ಧಿರೇವ ಚ|
14022010c ನ ಶಬ್ದಾನಧಿಗಚ್ಚಂತಿ ಶ್ರೋತ್ರಂ ತಾನಧಿಗಚ್ಚತಿ||
ಮೂಗು, ನಾಲಿಗೆ, ಕಣ್ಣು, ಚರ್ಮ, ಮನಸ್ಸು ಮತ್ತು ಬುದ್ಧಿಗಳಿಗೆ ಶಬ್ಧವು ತಿಳಿಯಲಾರದು. ಆದರೆ ಕಿವಿಗಳಿಗೆ ಶಬ್ಧವು ತಿಳಿಯುತ್ತದೆ.
14022011a ಘ್ರಾಣಂ ಜಿಹ್ವಾ ಚ ಚಕ್ಷುಶ್ಚ ತ್ವಕ್ಶ್ರೋತ್ರಂ ಬುದ್ಧಿರೇವ ಚ|
14022011c ಸಂಶಯಾನ್ನಾಧಿಗಚ್ಚಂತಿ ಮನಸ್ತಾನಧಿಗಚ್ಚತಿ||
ಮೂಗು, ನಾಲಿಗೆ, ಕಣ್ಣುಗಳು, ಚರ್ಮ, ಕಿವಿಗಳು ಮತ್ತು ಬುದ್ಧಿ ಇವು ಸಂಶಯಪಡಲಾರವು. ಆದರೆ ಮನಸ್ಸು ಸಂದೇಹಪಡುತ್ತದೆ.
14022012a ಘ್ರಾಣಂ ಜಿಹ್ವಾ ಚ ಚಕ್ಷುಶ್ಚ ತ್ವಕ್ಶ್ರೋತ್ರಂ ಮನ ಏವ ಚ|
14022012c ನ ನಿಷ್ಠಾಮಧಿಗಚ್ಚಂತಿ ಬುದ್ಧಿಸ್ತಾಮಧಿಗಚ್ಚತಿ||
ಮೂಗು, ನಾಲಿಗೆ, ಕಣ್ಣುಗಳು, ಚರ್ಮ, ಕಿವಿ, ಮತ್ತು ಮನಸ್ಸು ಕೂಡ ನಿಶ್ಚಯಮಾಡಲಾರವು. ಬುದ್ಧಿ ಮಾತ್ರ ನಿಶ್ಚಯಿಸಬಲ್ಲದು.
14022013a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
14022013c ಇಂದ್ರಿಯಾಣಾಂ ಚ ಸಂವಾದಂ ಮನಸಶ್ಚೈವ ಭಾಮಿನಿ||
ಭಾಮಿನಿ! ಇದಕ್ಕೆ ಸಂಬಂಧಿಸಿದಂತೆ ಇಂದ್ರಿಯಗಳ ಮತ್ತು ಮನಸ್ಸಿನ ಪುರಾತನ ಸಂವಾದವನ್ನು ಇತಿಹಾಸರೂಪದಲ್ಲಿ ಉದಾಹರಿಸುತ್ತಾರೆ.
14022014 ಮನ ಉವಾಚ
14022014a ನ ಘ್ರಾತಿ ಮಾಮೃತೇ ಘ್ರಾಣಂ ರಸಂ ಜಿಹ್ವಾ ನ ಬುಧ್ಯತೇ|
14022014c ರೂಪಂ ಚಕ್ಷುರ್ನ ಗೃಹ್ಣಾತಿ ತ್ವಕ್ಸ್ಪರ್ಶಂ ನಾವಬುಧ್ಯತೇ||
ಮನಸ್ಸು ಹೇಳಿತು: “ನಾನಿಲ್ಲದೇ ಮೂಗು ಮೂಸಲಾರದು. ನಾಲಿಗೆಯು ರುಚಿಯನ್ನು ತಿಳಿಯಲಾರದು. ಕಣ್ಣುಗಳು ರೂಪವನ್ನು ನೋಡಲಾರವು. ಚರ್ಮವು ಸ್ಪರ್ಶವನ್ನು ತಿಳಿಯಲಾರದು.
14022015a ನ ಶ್ರೋತ್ರಂ ಬುಧ್ಯತೇ ಶಬ್ದಂ ಮಯಾ ಹೀನಂ ಕಥಂ ಚನ|
14022015c ಪ್ರವರಂ ಸರ್ವಭೂತಾನಾಮಹಮಸ್ಮಿ ಸನಾತನಮ್||
ನಾನಿಲ್ಲದೇ ಕಿವಿಗಳು ಶಬ್ಧವನ್ನು ತಿಳಿಯಲಾರವು. ಆದುದರಿಂದ ನಾನೇ ಸರ್ವಭೂತಗಳಲ್ಲಿ ಮೊದಲಿಗ ಮತ್ತು ಸನಾತನ.
14022016a ಅಗಾರಾಣೀವ ಶೂನ್ಯಾನಿ ಶಾಂತಾರ್ಚಿಷ ಇವಾಗ್ನಯಃ|
14022016c ಇಂದ್ರಿಯಾಣಿ ನ ಭಾಸಂತೇ ಮಯಾ ಹೀನಾನಿ ನಿತ್ಯಶಃ||
ನಾನಿಲ್ಲದೇ ಇಂದ್ರಿಯಗಳು – ಶೂನ್ಯ ಮನೆಗಳಂತೆ ಮತ್ತು ಆರಿಹೋದ ಅಗ್ನಿಯಂತೆ – ಎಂದೂ ಪ್ರಕಾಶಿಸುವುದಿಲ್ಲ.
14022017a ಕಾಷ್ಠಾನೀವಾರ್ದ್ರಶುಷ್ಕಾಣಿ ಯತಮಾನೈರಪೀಂದ್ರಿಯೈಃ|
14022017c ಗುಣಾರ್ಥಾನ್ನಾಧಿಗಚ್ಚಂತಿ ಮಾಮೃತೇ ಸರ್ವಜಂತವಃ||
ಇಂದ್ರಿಯಗಳ ಮೂಲಕ ಪ್ರಯತ್ನಿಸಿದರೂ ಸರ್ವಜಂತುಗಳು ನಾನಿಲ್ಲದಿದ್ದರೆ ಹಸಿಯಾದ ಅಥವಾ ಲೊಡ್ಡಾದ ಕಟ್ಟಿಗೆಗಳಂತೆ ವಿಷಯಾನುಭವವನ್ನು ಹೊಂದಲಾರರು.”
14022018 ಇಂದ್ರಿಯಾಣ್ಯೂಚುಃ
14022018a ಏವಮೇತದ್ಭವೇತ್ಸತ್ಯಂ ಯಥೈತನ್ಮನ್ಯತೇ ಭವಾನ್|
14022018c ಋತೇಽಸ್ಮಾನಸ್ಮದರ್ಥಾಂಸ್ತು ಭೋಗಾನ್ಭುಂಕ್ತೇ ಭವಾನ್ಯದಿ||
ಇಂದ್ರಿಯಗಳು ಹೇಳಿದವು: “ಒಂದುವೇಳೆ ನಾವಿಲ್ಲದೇ ಇದ್ದರೂ ನೀನು ವಿಷಯಗಳನ್ನು ಭೋಗಿಸಬಲ್ಲೆಯಾದರೆ ನೀನು ಏನನ್ನು ಭಾವಿಸಿರುವೆಯೋ ಮತ್ತು ಹೇಳುತ್ತಿರುವೆಯೋ ಅದು ಸತ್ಯವೇ ಸರಿ!
14022019a ಯದ್ಯಸ್ಮಾಸು ಪ್ರಲೀನೇಷು ತರ್ಪಣಂ ಪ್ರಾಣಧಾರಣಮ್|
14022019c ಭೋಗಾನ್ಭುಂಕ್ಷೇ ರಸಾನ್ಭುಂಕ್ಷೇ ಯಥೈತನ್ಮನ್ಯತೇ ತಥಾ||
ನಾವು ಲಯಹೊಂದಿದನಂತರವೂ ನೀನು ಪ್ರಾಣಧಾರಣೆಮಾಡಿಕೊಂಡು ಭೋಗಗಳನ್ನು ಭೋಗಿಸುತ್ತೀಯೆ ಮತ್ತು ರಸಗಳನ್ನು ಆನಂದಿಸುತ್ತೀಯೆ ಎಂದಾದರೆ ನೀನು ತಿಳಿದಂತೆಯೇ ಸರಿ!
14022020a ಅಥ ವಾಸ್ಮಾಸು ಲೀನೇಷು ತಿಷ್ಠತ್ಸು ವಿಷಯೇಷು ಚ|
14022020c ಯದಿ ಸಂಕಲ್ಪಮಾತ್ರೇಣ ಭುಂಕ್ತೇ ಭೋಗಾನ್ಯಥಾರ್ಥವತ್||
ಅಥವಾ ನಾವು ಲೀನವಾದ ನಂತರ ಇರುವ ವಿಷಯ-ಭೋಗಗಳನ್ನು ಸಂಕಲ್ಪಮಾತ್ರದಿಂದಲೇ ನೀನು ಭೋಗಿಸಬಲ್ಲೆಯಾದರೆ ನೀನು ಭಾವಿಸಿರುವುದು ಸತ್ಯವಾದೀತು.
14022021a ಅಥ ಚೇನ್ಮನ್ಯಸೇ ಸಿದ್ಧಿಮಸ್ಮದರ್ಥೇಷು ನಿತ್ಯದಾ|
14022021c ಘ್ರಾಣೇನ ರೂಪಮಾದತ್ಸ್ವ ರಸಮಾದತ್ಸ್ವ ಚಕ್ಷುಷಾ||
14022022a ಶ್ರೋತ್ರೇಣ ಗಂಧಮಾದತ್ಸ್ವ ನಿಷ್ಠಾಮಾದತ್ಸ್ವ ಜಿಹ್ವಯಾ|
14022022c ತ್ವಚಾ ಚ ಶಬ್ದಮಾದತ್ಸ್ವ ಬುದ್ಧ್ಯಾ ಸ್ಪರ್ಶಮಥಾಪಿ ಚ||
ನಮಗೆ ಸಂಬಂಧಿಸಿದ ವಿಷಯಗಳಲ್ಲಿ ನಿನಗೆ ನಿತ್ಯವೂ ಸಿದ್ಧಿಯಿದೆ ಎಂದು ನೀನು ತಿಳಿದಿರುವೆಯಾದರೆ ಮೂಗಿನಿಂದ ರೂಪವನ್ನು ನೋಡು, ಕಣ್ಣಿನಿಂದ ರಸವನ್ನು ಆಸ್ವಾದಿಸು, ಕಿವಿಗಳಿಂದ ವಾಸನೆಯನ್ನು ಮೂಸು, ನಾಲಿಗೆಯಿಂದ ನಿಶ್ಚಯಿಸು, ಚರ್ಮದಿಂದ ಶಬ್ಧವನ್ನು ಕೇಳು ಮತ್ತು ಬುದ್ಧಿಯಿಂದ ಸ್ಪರ್ಶಿಸು!
14022023a ಬಲವಂತೋ ಹ್ಯನಿಯಮಾ ನಿಯಮಾ ದುರ್ಬಲೀಯಸಾಮ್|
14022023c ಭೋಗಾನಪೂರ್ವಾನಾದತ್ಸ್ವ ನೋಚ್ಚಿಷ್ಟಂ ಭೋಕ್ತುಮರ್ಹಸಿ||
ಬಲವಂತರಿಗೆ ನಿಯಮಗಳಿಲ್ಲ. ನಿಯಮಗಳು ದುರ್ಬಲರಿಗೆ ಮಾತ್ರ. ಅಪೂರ್ವವಾದ ಭೋಗಗಳನ್ನು ಭೋಗಿಸು. ಆದರೆ ನಾವು ಭೋಗಿಸಿದ ನಂತರ ಉಳಿದ ಉಚ್ಚಿಷ್ಟವನ್ನು ಭೋಗಿಸಬಾರದು.
14022024a ಯಥಾ ಹಿ ಶಿಷ್ಯಃ ಶಾಸ್ತಾರಂ ಶ್ರುತ್ಯರ್ಥಮಭಿಧಾವತಿ|
14022024c ತತಃ ಶ್ರುತಮುಪಾದಾಯ ಶ್ರುತಾರ್ಥಮುಪತಿಷ್ಠತಿ||
14022025a ವಿಷಯಾನೇವಮಸ್ಮಾಭಿರ್ದರ್ಶಿತಾನಭಿಮನ್ಯಸೇ|
14022025c ಅನಾಗತಾನತೀತಾಂಶ್ಚ ಸ್ವಪ್ನೇ ಜಾಗರಣೇ ತಥಾ||
ಶಿಷ್ಯನು ಹೇಗೆ ಶ್ರುತಿಗಳ ಅರ್ಥವನ್ನು ತಿಳಿಯಲು ಗುರುವಿನ ಬಳಿಹೋಗಿ ಅವುಗಳ ಅರ್ಥವನ್ನು ತಿಳಿದು ಶ್ರುತಿಗಳ ಅರ್ಥದಲ್ಲಿಯೇ ತಲ್ಲೀನನಾಗುವಂತೆ ನೀನು ಈ ಹಿಂದೆ ಅಥವಾ ಮುಂದೆ ನಮ್ಮಿಂದ ತೋರಿಸಲ್ಪಟ್ಟ/ತೋರಿಸಲ್ಪಡುವ ವಿಷಯಗಳನ್ನು ಸ್ವಪ್ನ ಮತ್ತು ಜಾಗೃತಾವಸ್ಥೆಗಳಲ್ಲಿ ನೀನೇ ನೋಡಿದುದೆಂದು ಅಭಿಮಾನಪಟ್ಟುಕೊಳ್ಳುತ್ತಿರುವೆ.
14022026a ವೈಮನಸ್ಯಂ ಗತಾನಾಂ ಚ ಜಂತೂನಾಮಲ್ಪಚೇತಸಾಮ್|
14022026c ಅಸ್ಮದರ್ಥೇ ಕೃತೇ ಕಾರ್ಯೇ ದೃಶ್ಯತೇ ಪ್ರಾಣಧಾರಣಮ್||
ಮನಸ್ಸೇ ಇಲ್ಲದ ಅಲ್ಪಬುದ್ಧಿಯ ಪ್ರಾಣಿಗಳೂ ಕೂಡ ನಮಗಾಗಿಯೇ ಪ್ರಾಣಧಾರಣೆ ಮಾಡಿಕೊಂಡು ಕಾರ್ಯ ನಿರ್ವಹಿಸುವುದು ಕಾಣುತ್ತದೆ.
14022027a ಬಹೂನಪಿ ಹಿ ಸಂಕಲ್ಪಾನ್ಮತ್ವಾ ಸ್ವಪ್ನಾನುಪಾಸ್ಯ ಚ|
14022027c ಬುಭುಕ್ಷಯಾ ಪೀಡ್ಯಮಾನೋ ವಿಷಯಾನೇವ ಧಾವಸಿ||
ಅನೇಕ ಸಂಕಲ್ಪಗಳನ್ನು ಹೊಂದಿದ್ದರೂ ಸ್ವಪ್ನಾವಸ್ಥೆಯಲ್ಲಿದ್ದರೂ ಆ ಪ್ರಾಣಿಗಳು ಭೋಗದ ಪೀಡೆಗೊಳಗಾಗಿ ವಿಷಯಗಳ ಕಡೆಗೇ ಓಡುತ್ತವೆ.
14022028a ಅಗಾರಮದ್ವಾರಮಿವ ಪ್ರವಿಶ್ಯ
ಸಂಕಲ್ಪಭೋಗೋ ವಿಷಯಾನವಿಂದನ್|
14022028c ಪ್ರಾಣಕ್ಷಯೇ ಶಾಂತಿಮುಪೈತಿ ನಿತ್ಯಂ
ದಾರುಕ್ಷಯೇಽಗ್ನಿರ್ಜ್ವಲಿತೋ ಯಥೈವ||
ವಿಷಯ ಭೋಗದ ಸಂಕಲ್ಪದ ಬಂಧನಕ್ಕೆ ಒಳಗಾಗಿ ಮನಸ್ಸು ದ್ವಾರವಿಲ್ಲದ ಮನೆಯಂತಿರುವ ದೇಹವನ್ನು ಪ್ರವೇಶಿಸಿ ಉಪಭೋಗಿಸುತ್ತದೆ. ಇಂಧನವು ಮುಗಿದುಹೋದ ನಂತರ ಉರಿಯುತ್ತಿರುವ ಬೆಂಕಿಯು ಹೇಗೋ ಹಾಗೆ ಪ್ರಾಣಹೋದಕೂಡಲೇ ಅದು ಶಾಶ್ವತ ಶಾಂತಿಯನ್ನು ಹೊಂದುತ್ತದೆ.
14022029a ಕಾಮಂ ತು ನಃ ಸ್ವೇಷು ಗುಣೇಷು ಸಂಗಃ
ಕಾಮಂ ಚ ನಾನ್ಯೋನ್ಯಗುಣೋಪಲಬ್ಧಿಃ|
14022029c ಅಸ್ಮಾನೃತೇ ನಾಸ್ತಿ ತವೋಪಲಬ್ಧಿಸ್
ತ್ವಾಮಪ್ಯೃತೇಽಸ್ಮಾನ್ನ ಭಜೇತ ಹರ್ಷಃ||
ನಮ್ಮ ನಮ್ಮ ಗುಣಗಳಿಗೆ ತಕ್ಕಂತೆ ನಾವು ವಿಷಯಗಳ ಸಂಗಮಾಡಲು ಬಯಸುತ್ತಿರಬಹುದು. ಅನ್ಯೋನ್ಯರ ಗುಣಗಳನ್ನು ತಿಳಿಯಲು ಬಯಸದೇ ಇರಬಹುದು. ಆದರೆ ನಾವಿಲ್ಲದೇ ನಿನಗೆ ಅನುಭವವು ದೊರೆಯಲಾರದು. ಹಾಗೆಯೇ ನೀನಿಲ್ಲದೇ ನಾವೂ ಕೂಡ ಹರ್ಷಗೊಳ್ಳಲಾರೆವು!”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ದ್ವಾವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.