Ashvamedhika Parva: Chapter 17

ಅಶ್ವಮೇಧಿಕ ಪರ್ವ

೧೭

ಕೃಷ್ಣನು ಅರ್ಜುನನಿಗೆ ಕಾಶ್ಯಪ-ಸಿದ್ಧಪುರುಷರ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೩೯).

14017001 ವಾಸುದೇವ ಉವಾಚ

14017001a ತತಸ್ತಸ್ಯೋಪಸಂಗೃಹ್ಯ ಪಾದೌ ಪ್ರಶ್ನಾನ್ಸುದುರ್ವಚಾನ್|

14017001c ಪಪ್ರಚ್ಚ ತಾಂಶ್ಚ ಸರ್ವಾನ್ಸ ಪ್ರಾಹ ಧರ್ಮಭೃತಾಂ ವರಃ||

ವಾಸುದೇವನು ಹೇಳಿದನು: “ಆಗ ಕಾಶ್ಯಪನು ಅವನ ಎರಡು ಕಾಲುಗಳನ್ನೂ ಹಿಡಿದು ನಮಸ್ಕರಿಸಿ ಉತ್ತರಿಸಲು ಕಠಿನವಾದ ಪ್ರಶ್ನೆಗಳನ್ನು ಕೇಳಿದನು. ಧರ್ಮಭೃತರಲ್ಲಿ ಶ್ರೇಷ್ಠ ಸಿದ್ಧಪುರುಷನು ಅವುಗಳೆಲ್ಲವನ್ನೂ ಉತ್ತರಿಸಿದನು.

14017002 ಕಾಶ್ಯಪ ಉವಾಚ

14017002a ಕಥಂ ಶರೀರಂ ಚ್ಯವತೇ ಕಥಂ ಚೈವೋಪಪದ್ಯತೇ|

14017002c ಕಥಂ ಕಷ್ಟಾಚ್ಚ ಸಂಸಾರಾತ್ಸಂಸರನ್ಪರಿಮುಚ್ಯತೇ||

ಕಾಶ್ಯಪನು ಹೇಳಿದನು: “ಶರೀರವು ಹೇಗೆ ಬಿದ್ದುಹೋಗುತ್ತದೆ? ಮತ್ತೆ ಹೇಗೆ ಇನ್ನೊಂದು ಶರೀರವನ್ನು ಪಡೆಯುತ್ತೇವೆ? ಸಂಸಾರಿಯು ಕಷ್ಟಭರಿತ ಈ ಸಂಸಾರದಿಂದ ಹೇಗೆ ಮುಕ್ತನಾಗುತ್ತಾನೆ?

14017003a ಆತ್ಮಾನಂ ವಾ ಕಥಂ ಯುಕ್ತ್ವಾ ತಚ್ಚರೀರಂ ವಿಮುಂಚತಿ|

14017003c ಶರೀರತಶ್ಚ ನಿರ್ಮುಕ್ತಃ ಕಥಮನ್ಯತ್ಪ್ರಪದ್ಯತೇ||

ಅಥವಾ ಆತ್ಮವು ಜೋಡಿಕೊಂಡಿರುವ ಈ ಶರೀರವನ್ನು ಹೇಗೆ ಬಿಡುತ್ತದೆ? ಶರೀರದಿಂದ ನಿರ್ಮುಕ್ತನಾಗಿ ಹೇಗೆ ಅನ್ಯಶರೀರವನ್ನು ಪಡೆಯುತ್ತದೆ?

14017004a ಕಥಂ ಶುಭಾಶುಭೇ ಚಾಯಂ ಕರ್ಮಣೀ ಸ್ವಕೃತೇ ನರಃ|

14017004c ಉಪಭುಂಕ್ತೇ ಕ್ವ ವಾ ಕರ್ಮ ವಿದೇಹಸ್ಯೋಪತಿಷ್ಠತಿ||

ಮನುಷ್ಯನು ತಾನು ಮಾಡಿದ ಶುಭಾಶುಭ ಕರ್ಮಗಳನ್ನು ಹೇಗೆ ಅನುಭವಿಸುತ್ತಾನೆ? ಅಥವಾ ಶರೀರವನ್ನು ತ್ಯಜಿಸಿದ ನಂತರ ಆ ಕರ್ಮಫಲಗಳು ಎಲ್ಲಿಗೆ ಹೋಗುತ್ತವೆ?”

14017005 ಬ್ರಾಹ್ಮಣ ಉವಾಚ

14017005a ಏವಂ ಸಂಚೋದಿತಃ ಸಿದ್ಧಃ ಪ್ರಶ್ನಾಂಸ್ತಾನ್ಪ್ರತ್ಯಭಾಷತ|

14017005c ಆನುಪೂರ್ವ್ಯೇಣ ವಾರ್ಷ್ಣೇಯ ಯಥಾ ತನ್ಮೇ ವಚಃ ಶೃಣು||

ಬ್ರಾಹ್ಮಣನು ಹೇಳಿದನು: “ಹೀಗೆ ಪ್ರಶ್ನಿಸಲ್ಪಡಲು ಸಿದ್ಧನು ಪ್ರಶ್ನೆಗಳಿಗೆ ಅನುಕ್ರಮವಾಗಿ ಉತ್ತರಿಸಿದನು. ವಾರ್ಷ್ಣೇಯ! ಅದನ್ನು ನಾನು ಹೇಳುತ್ತಿದ್ದೇನೆ. ಕೇಳು!

14017006 ಸಿದ್ಧ ಉವಾಚ

14017006a ಆಯುಃಕೀರ್ತಿಕರಾಣೀಹ ಯಾನಿ ಕರ್ಮಾಣಿ ಸೇವತೇ|

14017006c ಶರೀರಗ್ರಹಣೇಽನ್ಯಸ್ಮಿಂಸ್ತೇಷು ಕ್ಷೀಣೇಷು ಸರ್ವಶಃ||

ಸಿದ್ಧನು ಹೇಳಿದನು: “ಆಯಸ್ಸು ಮತ್ತು ಕೀರ್ತಿಗಾಗಿ ಮಾಡಿದ ಕರ್ಮಫಲಗಳಿಂದ ಜೀವಾತ್ಮನು ಶರೀರಗ್ರಹಣ ಮಾಡುತ್ತಾನೆ. ಆ ಕರ್ಮಫಲಗಳೊಂದಿಗೆ ಎಲ್ಲವೂ ಕ್ಷೀಣವಾಗುತ್ತವೆ.

14017007a ಆಯುಃಕ್ಷಯಪರೀತಾತ್ಮಾ ವಿಪರೀತಾನಿ ಸೇವತೇ|

14017007c ಬುದ್ಧಿರ್ವ್ಯಾವರ್ತತೇ ಚಾಸ್ಯ ವಿನಾಶೇ ಪ್ರತ್ಯುಪಸ್ಥಿತೇ||

ಆಯಸ್ಸು ಕ್ಷೀಣವಾಗಲು ಜೀವಾತ್ಮನು ವಿಪರೀತ ಕರ್ಮಗಳನ್ನು ಮಾಡುತ್ತಾನೆ. ವಿನಾಶಕಾಲವು ಬಂದಂತೆ ಅವನ ಬುದ್ಧಿಯೂ ವ್ಯತ್ಯಾಸಹೊಂದುತ್ತದೆ.

14017008a ಸತ್ತ್ವಂ ಬಲಂ ಚ ಕಾಲಂ ಚಾಪ್ಯವಿದಿತ್ವಾತ್ಮನಸ್ತಥಾ|

14017008c ಅತಿವೇಲಮುಪಾಶ್ನಾತಿ ತೈರ್ವಿರುದ್ಧಾನ್ಯನಾತ್ಮವಾನ್||

ಸತ್ವ, ಬಲ, ಕಾಲಗಳನ್ನು ತಾನು ಅರಿತುಕೊಂಡಿದ್ದರೂ ತನಗೆ ವಿರುದ್ಧವಾದ ಆಹಾರವನ್ನೇ ಅತಿಯಾಗಿ ಸೇವಿಸುತ್ತಾನೆ.

14017009a ಯದಾಯಮತಿಕಷ್ಟಾನಿ ಸರ್ವಾಣ್ಯುಪನಿಷೇವತೇ|

14017009c ಅತ್ಯರ್ಥಮಪಿ ವಾ ಭುಂಕ್ತೇ ನ ವಾ ಭುಂಕ್ತೇ ಕದಾ ಚನ||

ಮನೋನಿಗ್ರಹವಿಲ್ಲದವನು ಶರೀರಕ್ಕೆ ಹಾನಿಕಾರಕವಾದ ಎಲ್ಲ ಆಹಾರಗಳನ್ನೂ ಸೇವಿಸುತ್ತಾನೆ. ಕೆಲವೊಮ್ಮೆ ತುಂಬಾ ಹೆಚ್ಚಾಗಿ ತಿನ್ನುತ್ತಾನೆ. ಇನ್ನು ಕೆಲವೊಮ್ಮೆ ತಿನ್ನುವುದೇ ಇಲ್ಲ.

14017010a ದುಷ್ಟಾನ್ನಂ ವಿಷಮಾನ್ನಂ ಚ ಸೋಽನ್ಯೋನ್ಯೇನ ವಿರೋಧಿ ಚ|

14017010c ಗುರು ವಾಪಿ ಸಮಂ ಭುಂಕ್ತೇ ನಾತಿಜೀರ್ಣೇಽಪಿ ವಾ ಪುನಃ||

ದುಷ್ಟಾನ್ನ, ವಿಷಮಾನ್ನ ಮತ್ತು ಅನ್ಯೋನ್ಯ ವಿರೋಧವಾಗಿರುವ ಆಹಾರ ಅಥವಾ ಜೀರ್ಣವಾಗದ ಆಹಾರ ಮೊದಲಾದವುಗಳನ್ನು ಸೇವಿಸುತ್ತಾನೆ. ಜೀರ್ಣವಾಗದೇ ಇದ್ದರೂ ಪುನಃ ತಿನ್ನುತ್ತಲೇ ಇರುತ್ತಾನೆ.

14017011a ವ್ಯಾಯಾಮಮತಿಮಾತ್ರಂ ವಾ ವ್ಯವಾಯಂ ಚೋಪಸೇವತೇ|

14017011c ಸತತಂ ಕರ್ಮಲೋಭಾದ್ವಾ ಪ್ರಾಪ್ತಂ ವೇಗವಿಧಾರಣಮ್||

ಮಿತಿಮೀರಿ ವ್ಯಾಯಾಮ ಮಾಡುತ್ತಾನೆ ಮತ್ತು ಸಂಭೋಗ ಮಾಡುತ್ತಾನೆ. ಸತತವೂ ಕೆಲಸಮಾಡಬೇಕೆಂಬ ಲೋಭದಿಂದ ಮಲ-ಮೂತ್ರಗಳನ್ನೂ ತಡೆಹಿಡಿದುಕೊಳ್ಳುತ್ತಾನೆ.

14017012a ರಸಾತಿಯುಕ್ತಮನ್ನಂ ವಾ ದಿವಾಸ್ವಪ್ನಂ ನಿಷೇವತೇ|

14017012c ಅಪಕ್ವಾನಾಗತೇ ಕಾಲೇ ಸ್ವಯಂ ದೋಷಾನ್ಪ್ರಕೋಪಯನ್||

ರಸಾತಿಯುಕ್ತವಾದ ಅನ್ನವನ್ನು ಸೇವಿಸುತ್ತಾನೆ. ಅಥವಾ ಹಗಲಿನಲ್ಲಿ ಮಲಗುತ್ತಾನೆ. ಪಕ್ವವಾಗಿರದ ಅನ್ನವನ್ನು ಸೇವಿಸಿ ಕಾಲಾಂತರದಲ್ಲಿ ತಾನೇ ತನ್ನ ಶರೀರದಲ್ಲಿ ದೋಷಗಳನ್ನು ಕೆರಳಿಸಿಕೊಳ್ಳುತ್ತಾನೆ.

14017013a ಸ್ವದೋಷಕೋಪನಾದ್ರೋಗಂ ಲಭತೇ ಮರಣಾಂತಿಕಮ್|

14017013c ಅಥ ಚೋದ್ಬಂಧನಾದೀನಿ ಪರೀತಾನಿ ವ್ಯವಸ್ಯತಿ||

ತನ್ನ ದೇಹದಲ್ಲಿ ದೋಷಗಳನ್ನು ಪ್ರಕೋಪಗೊಳಿಸಿ ಅವನು ಮರಣಾಂತಿಕ ರೋಗವನ್ನು ಪಡೆದುಕೊಳ್ಳುತ್ತಾನೆ. ಆಗ ಉರುಳುಹಾಕಿಕೊಳ್ಳುವುದೇ ಮೊದಲಾದ ವಿಪರೀತ ಮಾರ್ಗವನ್ನಾಶ್ರಯಿಸುತ್ತಾನೆ.

14017014a ತಸ್ಯ ತೈಃ ಕಾರಣೈರ್ಜಂತೋಃ ಶರೀರಾಚ್ಚ್ಯವತೇ ಯಥಾ|

14017014c ಜೀವಿತಂ ಪ್ರೋಚ್ಯಮಾನಂ ತದ್ಯಥಾವದುಪಧಾರಯ||

ಹೀಗೆ ಅನೇಕ ಕಾರಣಗಳಿಂದ ಜಂತುವಿನ ಶರೀರವು ನಷ್ಟವಾಗಿ ಹೋಗುತ್ತದೆ. ಜೀವಿತವೆಂದು ಹೇಳಲ್ಪಡುವ ಇದನ್ನು ಚೆನ್ನಾಗಿ ತಿಳಿದುಕೋ!

14017015a ಊಷ್ಮಾ ಪ್ರಕುಪಿತಃ ಕಾಯೇ ತೀವ್ರವಾಯುಸಮೀರಿತಃ|

14017015c ಶರೀರಮನುಪರ್ಯೇತಿ ಸರ್ವಾನ್ಪ್ರಾಣಾನ್ರುಣದ್ಧಿ ವೈ||

ಶರೀರದಲ್ಲಿನ ತೀವ್ರ ವಾಯುವಿನಿಂದ ಪಿತ್ತವು ಕೆರಳುತ್ತದೆ. ಅದು ಶರೀರವನ್ನು ವ್ಯಾಪಿಸಿ ಸರ್ವ ಪ್ರಾಣಗಳನ್ನೂ ತಡೆದುಬಿಡುತ್ತದೆ.

14017016a ಅತ್ಯರ್ಥಂ ಬಲವಾನೂಷ್ಮಾ ಶರೀರೇ ಪರಿಕೋಪಿತಃ|

14017016c ಭಿನತ್ತಿ ಜೀವಸ್ಥಾನಾನಿ ತಾನಿ ಮರ್ಮಾಣಿ ವಿದ್ಧಿ ಚ||

ಶರೀರದಲ್ಲಿ ಬಲವತ್ತರವಾಗಿರುವ ಪಿತ್ತವು ಪ್ರಕೋಪಗೊಂಡರೆ ಅದು ಜೀವಸ್ಥಾನ ಮರ್ಮಗಳನ್ನೂ ಭೇದಿಸಿಬಿಡುತ್ತದೆ ಎನ್ನುವುದನ್ನು ತಿಳಿದುಕೋ.

14017017a ತತಃ ಸವೇದನಃ ಸದ್ಯೋ ಜೀವಃ ಪ್ರಚ್ಯವತೇ ಕ್ಷರನ್|

14017017c ಶರೀರಂ ತ್ಯಜತೇ ಜಂತುಶ್ಚಿದ್ಯಮಾನೇಷು ಮರ್ಮಸು|

14017017e ವೇದನಾಭಿಃ ಪರೀತಾತ್ಮಾ ತದ್ವಿದ್ಧಿ ದ್ವಿಜಸತ್ತಮ||

ಮರ್ಮಸ್ಥಾನಗಳು ಛಿದ್ರವಾಗಲು ವೇದನೆಯೊಂದಿಗೆ ಜೀವವು ಕ್ಷರರೂಪದ ಶರೀರದಿಂದ ಹೊರಬಂದು ಅದನ್ನು ತ್ಯಜಿಸುತ್ತದೆ. ದ್ವಿಜಸತ್ತಮ! ಆಗ ಜೀವವು ವೇದನೆಗಳಿಂದ ವ್ಯಥೆಪಡುತ್ತಿರುತ್ತದೆ ಎನ್ನುವುದನ್ನು ತಿಳಿದುಕೋ!

14017018a ಜಾತೀಮರಣಸಂವಿಗ್ನಾಃ ಸತತಂ ಸರ್ವಜಂತವಃ|

14017018c ದೃಶ್ಯಂತೇ ಸಂತ್ಯಜಂತಶ್ಚ ಶರೀರಾಣಿ ದ್ವಿಜರ್ಷಭ||

ದ್ವಿಜರ್ಷಭ! ಸರ್ವಜಂತುಗಳೂ ಹುಟ್ಟುವಾಗ ಮತ್ತು ಮರಣಹೊಂದುವಾಗ, ಶರೀರಗಳನ್ನು ಸೇರುವಾಗ ಮತ್ತು ತ್ಯಜಿಸುವಾಗ ಸತತವೂ ವೇದನೆಗಳನ್ನು ಅನುಭವಿಸುವುದು ಕಂಡುಬರುತ್ತದೆ.

14017019a ಗರ್ಭಸಂಕ್ರಮಣೇ ಚಾಪಿ ಮರ್ಮಣಾಮತಿಸರ್ಪಣೇ|

14017019c ತಾದೃಶೀಮೇವ ಲಭತೇ ವೇದನಾಂ ಮಾನವಃ ಪುನಃ||

ಮರ್ಮಗಳು ಹರಿದುಹೋಗುವಾದ ಆಗುವ ವೇದನೆಯನ್ನೇ ಮಾನವನು ಪುನಃ ಗರ್ಭವನ್ನು ಸೇರುವಾಗ ಕೂಡ ಅನುಭವಿಸುತ್ತಾನೆ.

14017020a ಭಿನ್ನಸಂಧಿರಥ ಕ್ಲೇದಮದ್ಭಿಃ ಸ ಲಭತೇ ನರಃ|

14017020c ಯಥಾ ಪಂಚಸು ಭೂತೇಷು ಸಂಶ್ರಿತತ್ವಂ ನಿಗಚ್ಚತಿ|

14017020e ಶೈತ್ಯಾತ್ಪ್ರಕುಪಿತಃ ಕಾಯೇ ತೀವ್ರವಾಯುಸಮೀರಿತಃ||

ಸಾಯುವಾಗ ಶರೀರದಲ್ಲಿ ಸಂಧಿಯು ಒಡೆದುಹೋಗುವಾಗ ಆಗುವ ವೇದನೆಯನ್ನೇ ಹುಟ್ಟುವಾಗ ನೀರು ಒಡೆದಾಗ ನರನು ಅನುಭವಿಸುತ್ತಾನೆ. ತೀವ್ರ ವಾಯುವಿನಿಂದ ಪ್ರಚೋದಿತಗೊಂಡ ಶೈತ್ಯವು ಶರೀರದಲ್ಲಿ ಒಂದಾಗಿದ್ದ ಪಂಚಭೂತಗಳನ್ನೂ ಬೇರ್ಪಡಿಸುತ್ತದೆ.

14017021a ಯಃ ಸ ಪಂಚಸು ಭೂತೇಷು ಪ್ರಾಣಾಪಾನೇ ವ್ಯವಸ್ಥಿತಃ|

14017021c ಸ ಗಚ್ಚತ್ಯೂರ್ಧ್ವಗೋ ವಾಯುಃ ಕೃಚ್ಚ್ರಾನ್ಮುಕ್ತ್ವಾ ಶರೀರಿಣಮ್||

ಪ್ರಾಣ-ಅಪಾನ ಮೊದಲಾಗಿ ಪಂಚ ಭೂತಗಳಲ್ಲಿರುವ ವಾಯುವು ಕಷ್ಟದಿಂದ ಶರೀರವನ್ನು ತೊರೆದು ಊರ್ಧ್ವಗತಿಯಲ್ಲಿ ಹೋಗುತ್ತದೆ.

14017022a ಶರೀರಂ ಚ ಜಹಾತ್ಯೇವ ನಿರುಚ್ಚ್ವಾಸಶ್ಚ ದೃಶ್ಯತೇ|

14017022c ನಿರೂಷ್ಮಾ ಸ ನಿರುಚ್ಚ್ವಾಸೋ ನಿಃಶ್ರೀಕೋ ಗತಚೇತನಃ||

ವಾಯುವು ಶರೀರವನ್ನು ತ್ಯಜಿಸಿದ ನಂತರ ಶರೀರದಲ್ಲಿ ಉಸಿರಾಟವು ಕಂಡುಬರುವುದಿಲ್ಲ. ಗತಚೇತನವಾದ ಶರೀರವು ಉಷ್ಣತೆಯನ್ನೂ, ಉಸಿರಾಟವನ್ನೂ, ಜೀವ ಕಳೆಯನ್ನೂ ಕಳೆದುಕೊಳ್ಳುತ್ತದೆ.

14017023a ಬ್ರಹ್ಮಣಾ ಸಂಪರಿತ್ಯಕ್ತೋ ಮೃತ ಇತ್ಯುಚ್ಯತೇ ನರಃ|

14017023c ಸ್ರೋತೋಭಿರ್ಯೈರ್ವಿಜಾನಾತಿ ಇಂದ್ರಿಯಾರ್ಥಾನ್ಶರೀರಭೃತ್|

14017023e ತೈರೇವ ನ ವಿಜಾನಾತಿ ಪ್ರಾಣಮಾಹಾರಸಂಭವಮ್||

ಜೀವಾತ್ಮನಿಂದ ಪರಿತ್ಯಕ್ತನಾದ ನರನನ್ನು ಮೃತನಿಂದು ಹೇಳುತ್ತಾರೆ. ಶರೀರವನ್ನು ಧರಿಸಿದ ಜೀವನು ಇಂದ್ರಿಯಗಳ ಮೂಲಕ ರೂಪ-ರಸ-ಗಂಧಾದಿ ವಿಷಯಗಳನ್ನು ಅನುಭವಿಸುವನು. ಅವೇ ಇಂದ್ರಿಯಗಳ ಮೂಲಕ ಪ್ರಾಣ-ಆಹಾರಗಳು ತನಗೆ ದೊರೆಯುತ್ತವೆ ಎನ್ನುವುದನ್ನು ಜೀವಾತ್ಮನು ತಿಳಿದಿರುವುದಿಲ್ಲ.

14017024a ತತ್ರೈವ ಕುರುತೇ ಕಾಯೇ ಯಃ ಸ ಜೀವಃ ಸನಾತನಃ|

14017024c ತೇಷಾಂ ಯದ್ಯದ್ಭವೇದ್ಯುಕ್ತಂ ಸಂನಿಪಾತೇ ಕ್ವ ಚಿತ್ಕ್ವ ಚಿತ್|

14017024e ತತ್ತನ್ಮರ್ಮ ವಿಜಾನೀಹಿ ಶಾಸ್ತ್ರದೃಷ್ಟಂ ಹಿ ತತ್ತಥಾ||

ಅದೇ ಶರೀರದಲ್ಲಿದ್ದುಕೊಂಡು ಸನಾತನ ಜೀವನು ಕರ್ಮಗಳನ್ನು ಮಾಡುತ್ತಿರುತ್ತಾನೆ. ಅಂಗಗಳು ಕೂಡಿಕೊಂಡಿರುವ ಸಂಧಿಸ್ಥಾನಗಳು ಮರ್ಮಸ್ಥಾನಗಳೆಂದು ತಿಳಿ. ಇವುಗಳ ಕುರಿತು ಶಾಸ್ತ್ರಗಳಲ್ಲಿ ಕಂಡುಬರುತ್ತದೆ.

14017025a ತೇಷು ಮರ್ಮಸು ಭಿನ್ನೇಷು ತತಃ ಸ ಸಮುದೀರಯನ್|

14017025c ಆವಿಶ್ಯ ಹೃದಯಂ ಜಂತೋಃ ಸತ್ತ್ವಂ ಚಾಶು ರುಣದ್ಧಿ ವೈ|

14017025e ತತಃ ಸ ಚೇತನೋ ಜಂತುರ್ನಾಭಿಜಾನಾತಿ ಕಿಂ ಚನ||

ಆ ಮರ್ಮಗಳು ಭಿನ್ನವಾದ ನಂತರ ಪ್ರಾಣವಾಯುವು ಮೇಲೇರಿ ಹೃದಯವನ್ನು ಹೊಕ್ಕು ಜಂತುವಿನ ಸತ್ತ್ವವನ್ನೇ ತಡೆಯುತ್ತದೆ. ಆಗ ಚೇತನಗೊಂಡಿದ್ದರೂ ಜಂತುವಿಗೆ ಏನೊಂದೂ ತಿಳಿಯುವುದಿಲ್ಲ.

14017026a ತಮಸಾ ಸಂವೃತಜ್ಞಾನಃ ಸಂವೃತೇಷ್ವಥ ಮರ್ಮಸು|

14017026c ಸ ಜೀವೋ ನಿರಧಿಷ್ಠಾನಶ್ಚಾವ್ಯತೇ ಮಾತರಿಶ್ವನಾ||

ತಮಸ್ಸು ಜ್ಞಾನವನ್ನು ಮುಸುಕಿರುತ್ತದೆ ಮತ್ತು ಹಾಗೆಯೇ ಮರ್ಮಗಳನ್ನೂ ಆವರಿಸಿರುತ್ತದೆ. ಆಗ ಜೀವನು ಆಶ್ರಯವಿಲ್ಲದೇ ಪ್ರಾಣವಾಯುವಿನೊಂದಿಗೆ ಹೊರಬರುತ್ತಾನೆ.

14017027a ತತಃ ಸ ತಂ ಮಹೋಚ್ಚ್ವಾಸಂ ಭೃಶಮುಚ್ಚ್ವಸ್ಯ ದಾರುಣಮ್|

14017027c ನಿಷ್ಕ್ರಾಮನ್ಕಂಪಯತ್ಯಾಶು ತಚ್ಚರೀರಮಚೇತನಮ್||

ಬಳಿಕ ಜೀವಾತ್ಮನು ದಾರುಣವಾದ ಮಹಾ ಉಚ್ಛ್ವಾಸದೊಂದಿಗೆ ಹೊರಬರುತ್ತಾನೆ. ಜೋರಾದ ಉಚ್ಛ್ವಾಸದೊಂದಿಗೆ ಹೊರಬರುವಾಗ ಅದು ಅಚೇತನ ಶರೀರವನ್ನು ಕಂಪಿಸುತ್ತದೆ.

14017028a ಸ ಜೀವಃ ಪ್ರಚ್ಯುತಃ ಕಾಯಾತ್ಕರ್ಮಭಿಃ ಸ್ವೈಃ ಸಮಾವೃತಃ|

14017028c ಅಂಕಿತಃ ಸ್ವೈಃ ಶುಭೈಃ ಪುಣ್ಯೈಃ ಪಾಪೈರ್ವಾಪ್ಯುಪಪದ್ಯತೇ||

ಹೊರಬಂದ ಆ ಜೀವವು ತಾನೇ ಮಾಡಿದ ಕರ್ಮಗಳಿಂದ ಸಮಾವೃತಗೊಂಡಿರುತ್ತದೆ. ಅದು ಶುಭಪುಣ್ಯಗಳಿಂದಲೂ ಮತ್ತು ಪಾಪಗಳಿಂದಲೂ ಅಂಕಿತಗೊಂಡಿರುತ್ತದೆ.

14017029a ಬ್ರಾಹ್ಮಣಾ ಜ್ಞಾನಸಂಪನ್ನಾ ಯಥಾವಚ್ಚ್ರುತನಿಶ್ಚಯಾಃ|

14017029c ಇತರಂ ಕೃತಪುಣ್ಯಂ ವಾ ತಂ ವಿಜಾನಂತಿ ಲಕ್ಷಣೈಃ||

ಶ್ರುತಿಗಳ ನಿಶ್ಚಯಗಳನ್ನು ತಿಳಿದಿರುವ ಜ್ಞಾನಸಂಪನ್ನ ಬ್ರಾಹ್ಮಣರು ಜೀವವು ಪುಣ್ಯವನ್ನು ಮಾಡಿರುವುದೋ ಅಥವಾ ಪಾಪಕರ್ಮಗಳನ್ನು ಮಾಡಿರುವುದೋ ಎನ್ನುವುದನ್ನು ಮರಣಕಾಲದ ಲಕ್ಷಣಗಳಿಂದ ತಿಳಿದುಕೊಳ್ಳುತ್ತಾರೆ.

14017030a ಯಥಾಂಧಕಾರೇ ಖದ್ಯೋತಂ ಲೀಯಮಾನಂ ತತಸ್ತತಃ|

14017030c ಚಕ್ಷುಷ್ಮಂತಃ ಪ್ರಪಶ್ಯಂತಿ ತಥಾ ತಂ ಜ್ಞಾನಚಕ್ಷುಷಃ||

14017031a ಪಶ್ಯಂತ್ಯೇವಂವಿಧಾಃ ಸಿದ್ಧಾ ಜೀವಂ ದಿವ್ಯೇನ ಚಕ್ಷುಷಾ|

14017031c ಚ್ಯವಂತಂ ಜಾಯಮಾನಂ ಚ ಯೋನಿಂ ಚಾನುಪ್ರವೇಶಿತಮ್||

ಕಣ್ಣಿರುವ ಮನುಷ್ಯರು ಹೇಗೆ ಅಂಧಕಾರದಲ್ಲಿಯೂ ಹಾರಾಡುವ ಮಿಂಚುಹುಳುಗಳನ್ನು ನೋಡಬಲ್ಲರೋ ಹಾಗೆ ಜ್ಞಾನದ ಕಣ್ಣುಳ್ಳವರು ತಮ್ಮ ದಿವ್ಯದೃಷ್ಟಿಯಿಂದ ಶರೀರದಿಂದ ಹೊರಬರುತ್ತಿರುವ, ಹುಟ್ಟುತ್ತಿರುವ ಮತ್ತು ಗರ್ಭವನ್ನು ಪ್ರವೇಶಿಸುವ ಜೀವನನ್ನು ತಿಳಿಯುತ್ತಾರೆ.

14017032a ತಸ್ಯ ಸ್ಥಾನಾನಿ ದೃಷ್ಟಾನಿ ತ್ರಿವಿಧಾನೀಹ ಶಾಸ್ತ್ರತಃ|

14017032c ಕರ್ಮಭೂಮಿರಿಯಂ ಭೂಮಿರ್ಯತ್ರ ತಿಷ್ಠಂತಿ ಜಂತವಃ||

ಶಾಸ್ತ್ರತಃ ಜೀವಕ್ಕೆ ಮೂರು ವಿಧದ ಸ್ಥಾನಗಳಿವೆಯೆಂದು ತೋರಿಸಿಕೊಟ್ಟಿದ್ದಾರೆ. ಜಂತುಗಳಿರುವ ಈ ಭೂಮಿಯನ್ನು ಕರ್ಮಭೂಮಿಯೆಂದು ಹೇಳುತ್ತಾರೆ.

14017033a ತತಃ ಶುಭಾಶುಭಂ ಕೃತ್ವಾ ಲಭಂತೇ ಸರ್ವದೇಹಿನಃ|

14017033c ಇಹೈವೋಚ್ಚಾವಚಾನ್ಭೋಗಾನ್ಪ್ರಾಪ್ನುವಂತಿ ಸ್ವಕರ್ಮಭಿಃ||

ಸರ್ವದೇಹಿಗಳೂ ಇಲ್ಲಿಯೇ ಶುಭಾಶುಭ ಕರ್ಮಗಳನ್ನು ಮಾಡಿ ಫಲಗಳನ್ನು ಪಡೆಯುತ್ತಾರೆ. ಇಲ್ಲಿಯೇ ಅವರು ತಮ್ಮ ಕರ್ಮಗಳಿಗನುಗುಣವಾದ ಉಚ್ಚ ಮತ್ತು ನೀಚ ಭೋಗಗಳನ್ನು ಅನುಭವಿಸುತ್ತಾರೆ.

14017034a ಇಹೈವಾಶುಭಕರ್ಮಾ ತು ಕರ್ಮಭಿರ್ನಿರಯಂ ಗತಃ|

14017034c ಅವಾಕ್ಸ ನಿರಯೇ ಪಾಪೋ ಮಾನವಃ ಪಚ್ಯತೇ ಭೃಶಮ್|

14017034e ತಸ್ಮಾತ್ಸುದುರ್ಲಭೋ ಮೋಕ್ಷ ಆತ್ಮಾ ರಕ್ಷ್ಯೋ ಭೃಶಂ ತತಃ||

ಇಲ್ಲಿ ಅಶುಭ ಕರ್ಮಗಳನ್ನು ಮಾಡಿದವರು ನರಕಕ್ಕೆ ಹೋಗುತ್ತಾರೆ. ನರಕದಲ್ಲಿ ಮನುಷ್ಯನು ತಾನು ಮಾಡಿದ ಪಾಪಕರ್ಮಗಳ ಫಲವನ್ನು ಅತ್ಯಂತ ಕಷ್ಟದಿಂದ ಅನುಭವಿಸುತ್ತಾನೆ. ಆದುದರಿಂದ ಮೋಕ್ಷವು ಸುಲಭದಲ್ಲಿ ದೊರಕುವುದಲ್ಲ. ಪಾಪಕರ್ಮಗಳಿಂದ ಆತ್ಮದ ರಕ್ಷಣೆಯನ್ನು ಬಹಳವಾಗಿ ಮಾಡಿಕೊಳ್ಳಬೇಕಾಗುತ್ತದೆ.

14017035a ಊರ್ಧ್ವಂ ತು ಜಂತವೋ ಗತ್ವಾ ಯೇಷು ಸ್ಥಾನೇಷ್ವವಸ್ಥಿತಾಃ|

14017035c ಕೀರ್ತ್ಯಮಾನಾನಿ ತಾನೀಹ ತತ್ತ್ವತಃ ಸಂನಿಬೋಧ ಮೇ|

14017035e ತಚ್ಚ್ರುತ್ವಾ ನೈಷ್ಠಿಕೀಂ ಬುದ್ಧಿಂ ಬುಧ್ಯೇಥಾಃ ಕರ್ಮನಿಶ್ಚಯಾತ್||

ಊರ್ಧ್ವಲೋಕಗಳಿಗೆ ಹೋಗುವ ಜಂತುಗಳು ಯಾವ ಯಾವ ಸ್ಥಾನಗಳನ್ನು ಸೇರುತ್ತಾರೆ ಎನ್ನುವುದನ್ನು ನಾನು ನಿನಗೆ ತತ್ತ್ವತಃ ಹೇಳುತ್ತೇನೆ. ಅದನ್ನು ಕೇಳು. ಇದನ್ನು ಕೇಳಿ ಸತ್ಕರ್ಮಗಳಲ್ಲಿ ಬುದ್ಧಿಯುಂಟಾಗುತ್ತದೆ ಮತ್ತು ಕರ್ಮನಿಶ್ಚಯಗಳನ್ನು ತಿಳಿದುಕೊಳ್ಳುತ್ತೀಯೆ.

14017036a ತಾರಾರೂಪಾಣಿ ಸರ್ವಾಣಿ ಯಚ್ಚೈತಚ್ಚಂದ್ರಮಂಡಲಮ್|

14017036c ಯಚ್ಚ ವಿಭ್ರಾಜತೇ ಲೋಕೇ ಸ್ವಭಾಸಾ ಸೂರ್ಯಮಂಡಲಮ್|

14017036e ಸ್ಥಾನಾನ್ಯೇತಾನಿ ಜಾನೀಹಿ ನರಾಣಾಂ ಪುಣ್ಯಕರ್ಮಣಾಮ್||

ಚಂದ್ರಮಂಡಲದಲ್ಲಿ ತಾರೆಗಳ ರೂಪಗಳಲ್ಲಿರುವ ಸರ್ವವೂ ಮತ್ತು ಸೂರ್ಯಮಂಡಲದಲ್ಲಿ ತಮ್ಮದೇ ಬೆಳಕಿನಿಂದ ಲೋಕಗಳನ್ನು ಬೆಳಗಿಸುವವೂ ಪುಣ್ಯಕರ್ಮಗಳನ್ನು ಮಾಡಿದ ಮನುಷ್ಯರ ಸ್ಥಾನಗಳೆಂದು ತಿಳಿ.

14017037a ಕರ್ಮಕ್ಷಯಾಚ್ಚ ತೇ ಸರ್ವೇ ಚ್ಯವಂತೇ ವೈ ಪುನಃ ಪುನಃ|

14017037c ತತ್ರಾಪಿ ಚ ವಿಶೇಷೋಽಸ್ತಿ ದಿವಿ ನೀಚೋಚ್ಚಮಧ್ಯಮಃ||

ಕರ್ಮಫಲಗಳು ಕ್ಷೀಣಿಸಿದಂತೆ ಅವರೆಲ್ಲರೂ ಪುನಃ ಪುನಃ ಕೆಳಗೆ ಜಾರುತ್ತಿರುತ್ತಾರೆ. ಅಲ್ಲಿಯೂ ಕೂಡ ನೀಚ, ಉಚ್ಚ, ಮಧ್ಯಮ ಸ್ಥಾನಗಳೆಂಬ ವ್ಯತ್ಯಾಸವಿದೆ.

14017038a ನ ತತ್ರಾಪ್ಯಸ್ತಿ ಸಂತೋಷೋ ದೃಷ್ಟ್ವಾ ದೀಪ್ತತರಾಂ ಶ್ರಿಯಮ್|

14017038c ಇತ್ಯೇತಾ ಗತಯಃ ಸರ್ವಾಃ ಪೃಥಕ್ತ್ವೇ ಸಮುದೀರಿತಾಃ||

ಅಲ್ಲಿಯೂ ಕೂಡ ತನಗಿಂತಲೂ ಅಧಿಕವಾಗಿ ಬೆಳಗುತ್ತಿರುವವರನ್ನು ನೋಡಿ ಸಂತೋಷ ಪಡುವುದಿಲ್ಲ. ಅಲ್ಲಿಗೆ ಹೋದರೂ ಎಲ್ಲರೂ ಪುನಃ ಕೆಳಗೆ ಜಾರುತ್ತಾರೆ.

14017039a ಉಪಪತ್ತಿಂ ತು ಗರ್ಭಸ್ಯ ವಕ್ಷ್ಯಾಮ್ಯಹಮತಃ ಪರಮ್|

14017039c ಯಥಾವತ್ತಾಂ ನಿಗದತಃ ಶೃಣುಷ್ವಾವಹಿತೋ ದ್ವಿಜ||

ದ್ವಿಜ! ಇನ್ನು ಮುಂದೆ ಜೀವವು ಹೇಗೆ ಗರ್ಭವನ್ನು ಪ್ರವೇಶಿಸಿ ಜನ್ಮತಾಳುವುದು ಎನ್ನುವುದನ್ನು ಹೇಳುತ್ತೇನೆ. ಅದನ್ನು ಏಕಾಗ್ರಚಿತ್ತನಾಗಿ ಕೇಳು.””

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಸಪ್ತದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾ ಎನ್ನುವ ಹದಿನೇಳನೇ ಅಧ್ಯಾಯವು.

Comments are closed.