Ashvamedhika Parva: Chapter 16

ಅಶ್ವಮೇಧಿಕ ಪರ್ವ

೧೬

ಇಂದ್ರಪ್ರಸ್ಥದಲ್ಲಿ ವಿಹರಿಸುತ್ತಿರುವಾಗ ಅರ್ಜುನನು ಕೃಷ್ಣನಿಗೆ ಯುದ್ಧದ ಮೊದಲು “ನೀನು ಏನೆಲ್ಲವನ್ನು ಹೇಳಿದ್ದೆಯೋ ಅವೆಲ್ಲವನ್ನೂ ನಷ್ಟಚೇತನನಾದ ನಾನು ಮರೆತುಹೋಗಿದ್ದೇನೆ” ಎಂದು ಹೇಳಿ ಅದರ ಅರ್ಥವನ್ನು ಪುನಃ ಹೇಳಬೇಕೆಂದು ಕೃಷ್ಣನಲ್ಲಿ ಕೇಳಿಕೊಳ್ಳುವುದು (೧-೭). ಬ್ರಹ್ಮಪದಕ್ಕೆ ಪರ್ಯಾಪ್ತವಾದ ಅದನ್ನು ಪುನಃ ಹೇಳಲು ಶಕ್ಯವಿಲ್ಲವೆಂದೂ, ಆದರೆ ಅದೇ ಅರ್ಥವನ್ನು ಕೊಡುವ ಪುರಾತನ ಇತಿಹಾಸವನ್ನು ಹೇಳುತ್ತೇನೆಂದು ಕೃಷ್ಣನು ಅರ್ಜುನನಿಗೆ ಓರ್ವ ಬ್ರಾಹ್ಮಣ ಮತ್ತು ತನ್ನ ನಡುವೆ ನಡೆದ ಸಂಭಾಷಣೆಯನ್ನು ವರ್ಣಿಸುತ್ತಾ ಅದರಲ್ಲಿ ಕಾಶ್ಯಪ-ಸಿದ್ಧಪುರುಷರ ಸಂವಾದವನ್ನು ತಿಳಿಸಿದುದು (೮-೪೩).

14016001 ಜನಮೇಜಯ ಉವಾಚ

14016001a ಸಭಾಯಾಂ ವಸತೋಸ್ತಸ್ಯಾಂ ನಿಹತ್ಯಾರೀನ್ಮಹಾತ್ಮನೋಃ|

14016001c ಕೇಶವಾರ್ಜುನಯೋಃ ಕಾ ನು ಕಥಾ ಸಮಭವದ್ದ್ವಿಜ||

ಜನಮೇಜಯನು ಹೇಳಿದನು: “ದ್ವಿಜ! ಶತ್ರುಗಳನ್ನು ಸಂಹರಿಸಿ ಮಹಾತ್ಮ ಕೇಶವಾರ್ಜುನರು ಮಯಸಭೆಯಲ್ಲಿ ವಾಸಿಸುತ್ತಿದ್ದಾಗ ಏನೇನು ಮಾತನಾಡಿದರು?”

14016002 ವೈಶಂಪಾಯನ ಉವಾಚ

14016002a ಕೃಷ್ಣೇನ ಸಹಿತಃ ಪಾರ್ಥಃ ಸ್ವರಾಜ್ಯಂ ಪ್ರಾಪ್ಯ ಕೇವಲಮ್|

14016002c ತಸ್ಯಾಂ ಸಭಾಯಾಂ ರಮ್ಯಾಯಾಂ ವಿಜಹಾರ ಮುದಾ ಯುತಃ||

ವೈಶಂಪಾಯನನು ಹೇಳಿದನು: “ಸ್ವರಾಜ್ಯವನ್ನು ಪಡೆದು ಪಾರ್ಥನು ಕೃಷ್ಣನೊಂದಿಗೆ ಆ ರಮ್ಯಸಭೆಯಲ್ಲಿ ಮುದಿತನಾಗಿ ವಿಹರಿಸಿದನು.

14016003a ತತಃ ಕಂ ಚಿತ್ಸಭೋದ್ದೇಶಂ ಸ್ವರ್ಗೋದ್ದೇಶಸಮಂ ನೃಪ|

14016003c ಯದೃಚ್ಚಯಾ ತೌ ಮುದಿತೌ ಜಗ್ಮತುಃ ಸ್ವಜನಾವೃತೌ||

ನೃಪ! ಸ್ವರ್ಗದ ಪ್ರದೇಶದಂತಿದ್ದ ಆ ಸಭಾಪ್ರದೇಶದಲ್ಲಿ ಅವರಿಬ್ಬರೂ ಸ್ವಜನರಿಂದ ಪರಿವೃತರಾಗಿ ಮೋದದಿಂದ ತಿರುಗಾಡಿದರು.

14016004a ತತಃ ಪ್ರತೀತಃ ಕೃಷ್ಣೇನ ಸಹಿತಃ ಪಾಂಡವೋಽರ್ಜುನಃ|

14016004c ನಿರೀಕ್ಷ್ಯ ತಾಂ ಸಭಾಂ ರಮ್ಯಾಮಿದಂ ವಚನಮಬ್ರವೀತ್||

ಆಗ ಆ ರಮ್ಯ ಸಭೆಯನ್ನು ನೋಡುತ್ತಾ ಕೃಷ್ಣನ ಸಹಿತ ನಡೆಯುತ್ತಿದ್ದ ಪಾಂಡವ ಅರ್ಜುನನು ಈ ಮಾತನ್ನಾಡಿದನು:

14016005a ವಿದಿತಂ ತೇ ಮಹಾಬಾಹೋ ಸಂಗ್ರಾಮೇ ಸಮುಪಸ್ಥಿತೇ|

14016005c ಮಾಹಾತ್ಮ್ಯಂ ದೇವಕೀಮಾತಸ್ತಚ್ಚ ತೇ ರೂಪಮೈಶ್ವರಮ್||

“ಮಹಾಬಾಹೋ! ದೇವಕೀಪುತ್ರ! ಸಂಗ್ರಾಮವು ಪ್ರಾರಂಭವಾಗುವಾಗ ನಾನು ನಿನ್ನ ಮಹಾತ್ಮೆಯನ್ನೂ ಈಶ್ವರನ ರೂಪವನ್ನೂ ತಿಳಿದುಕೊಂಡೆನು.

14016006a ಯತ್ತು ತದ್ಭವತಾ ಪ್ರೋಕ್ತಂ ತದಾ ಕೇಶವ ಸೌಹೃದಾತ್|

14016006c ತತ್ಸರ್ವಂ ಪುರುಷವ್ಯಾಘ್ರ ನಷ್ಟಂ ಮೇ ನಷ್ಟಚೇತಸಃ||

ಕೇಶವ! ಪುರುಷವ್ಯಾಘ್ರ! ಅಂದು ಸೌಹಾರ್ದತೆಯಿಂದ ನೀನು ಏನೆಲ್ಲವನ್ನು ಹೇಳಿದ್ದೆಯೋ ಅವೆಲ್ಲವನ್ನೂ ನಷ್ಟಚೇತನನಾದ ನಾನು ಮರೆತುಹೋಗಿದ್ದೇನೆ.

14016007a ಮಮ ಕೌತೂಹಲಂ ತ್ವಸ್ತಿ ತೇಷ್ವರ್ಥೇಷು ಪುನಃ ಪ್ರಭೋ|

14016007c ಭವಾಂಶ್ಚ ದ್ವಾರಕಾಂ ಗಂತಾ ನಚಿರಾದಿವ ಮಾಧವ||

ಮಾಧವ! ಸ್ವಲ್ಪಸಮಯದಲ್ಲಿಯೇ ನೀನು ದ್ವಾರಕೆಗೆ ಹೋಗುವವನಿದ್ದೀಯೆ! ಪ್ರಭೋ! ಅದಕ್ಕೆ ಮೊದಲು ನಿನ್ನಿಂದ ಅದರ ಅರ್ಥವನ್ನು ಪುನಃ ತಿಳಿದುಕೊಳ್ಳಲು ನನಗೆ ಕುತೂಹಲವಾಗಿದೆ.”

14016008a ಏವಮುಕ್ತಸ್ತತಃ ಕೃಷ್ಣಃ ಫಲ್ಗುನಂ ಪ್ರತ್ಯಭಾಷತ|

14016008c ಪರಿಷ್ವಜ್ಯ ಮಹಾತೇಜಾ ವಚನಂ ವದತಾಂ ವರಃ||

ಹೀಗೆ ಹೇಳಲು ಮಹಾತೇಜಸ್ವಿ, ಮಾತನಾಡುವವರಲ್ಲಿ ಶ್ರೇಷ್ಠ ಕೃಷ್ಣನು ಫಲ್ಗುನನನ್ನು ಬಿಗಿದಪ್ಪಿ ಈ ಮಾತುಗಳನ್ನಾಡಿದನು:

14016009a ಶ್ರಾವಿತಸ್ತ್ವಂ ಮಯಾ ಗುಹ್ಯಂ ಜ್ಞಾಪಿತಶ್ಚ ಸನಾತನಮ್|

14016009c ಧರ್ಮಂ ಸ್ವರೂಪಿಣಂ ಪಾರ್ಥ ಸರ್ವಲೋಕಾಂಶ್ಚ ಶಾಶ್ವತಾನ್||

“ಪಾರ್ಥ! ಗುಹ್ಯವೂ ಸನಾತನವೂ ಆದ ಸರ್ವಲೋಕಗಳಲ್ಲಿ ಶಾಶ್ವತ ಧರ್ಮದ ಸ್ವರೂಪ ಜ್ಞಾನವನ್ನು ನಿನಗೆ ನಾನು ಹೇಳಿದ್ದೆನು.

14016010a ಅಬುದ್ಧ್ವಾ ಯನ್ನ ಗೃಹ್ಣೀಥಾಸ್ತನ್ಮೇ ಸುಮಹದಪ್ರಿಯಮ್|

14016010c ನೂನಮಶ್ರದ್ದಧಾನೋಽಸಿ ದುರ್ಮೇಧಾಶ್ಚಾಸಿ ಪಾಂಡವ||

ಪಾಂಡವ! ಆದರೆ ನೀನು ಬುದ್ಧಿಯಿಲ್ಲದೇ ಅದನ್ನು ಗ್ರಹಿಸಿಕೊಳ್ಳಲಿಲ್ಲ ಎನ್ನುವುದು ನನಗೆ ಬಹಳ ಅಪ್ರಿಯವಾಗಿದೆ. ನೀನು ತುಂಬಾ ಅಶ್ರದ್ಧೆಯುಳ್ಳವನೂ ಮಂದಬುದ್ಧಿಯುಳ್ಳವನೂ ಆಗಿರುವೆ.

14016011a ಸ ಹಿ ಧರ್ಮಃ ಸುಪರ್ಯಾಪ್ತೋ ಬ್ರಹ್ಮಣಃ ಪದವೇದನೇ|

14016011c ನ ಶಕ್ಯಂ ತನ್ಮಯಾ ಭೂಯಸ್ತಥಾ ವಕ್ತುಮಶೇಷತಃ||

ಏಕೆಂದರೆ ಬ್ರಹ್ಮಪದವನ್ನು ಪಡೆಯುವುದಕ್ಕೆ ಅದು ತುಂಬಾ ಪರ್ಯಾಪ್ತವಾಗಿತ್ತು. ಅದನ್ನು ಪುನಃ ಸಂಪೂರ್ಣವಾಗಿ ಹೇಳಲು ನನ್ನಿಂದ ಶಕ್ಯವಿಲ್ಲ.

14016012a ಪರಂ ಹಿ ಬ್ರಹ್ಮ ಕಥಿತಂ ಯೋಗಯುಕ್ತೇನ ತನ್ಮಯಾ|

14016012c ಇತಿಹಾಸಂ ತು ವಕ್ಷ್ಯಾಮಿ ತಸ್ಮಿನ್ನರ್ಥೇ ಪುರಾತನಮ್||

ಆಗ ನಾನು ಯೋಗಯುಕ್ತನಾಗಿದ್ದುದರಿಂದ ಆ ಬ್ರಹ್ಮತತ್ತ್ವವನ್ನು ವಿವರಿಸಿ ಹೇಳಿದ್ದೆನು. ಆದರೆ ಅದೇ ಅರ್ಥಕೊಡುವ ಪುರಾತನ ಇತಿಹಾಸವನ್ನು ನಿನಗೆ ಹೇಳುತ್ತೇನೆ.

14016013a ಯಥಾ ತಾಂ ಬುದ್ಧಿಮಾಸ್ಥಾಯ ಗತಿಮಗ್ರ್ಯಾಂ ಗಮಿಷ್ಯಸಿ|

14016013c ಶೃಣು ಧರ್ಮಭೃತಾಂ ಶ್ರೇಷ್ಠ ಗದತಃ ಸರ್ವಮೇವ ಮೇ||

ಆ ಬುದ್ಧಿಯಲ್ಲಿದ್ದುಕೊಂಡರೆ ನೀನು ಉತ್ತಮ ಲೋಕಗಳಿಗೆ ಹೋಗುತ್ತೀಯೆ. ಧರ್ಮಭೃತರಲ್ಲಿ ಶ್ರೇಷ್ಠ! ಕೇಳು. ಎಲ್ಲವನ್ನೂ ನಿನಗೆ ಹೇಳುತ್ತೇನೆ.

14016014a ಆಗಚ್ಚದ್ಬ್ರಾಹ್ಮಣಃ ಕಶ್ಚಿತ್ ಸ್ವರ್ಗಲೋಕಾದರಿಂದಮ|

14016014c ಬ್ರಹ್ಮಲೋಕಾಚ್ಚ ದುರ್ಧರ್ಷಃ ಸೋಽಸ್ಮಾಭಿಃ ಪೂಜಿತೋಽಭವತ್||

ಅರಿಂದಮ! ಹಿಂದೊಮ್ಮೆ ಓರ್ವ ಬ್ರಾಹ್ಮಣನು ಸ್ವರ್ಗಲೋಕದಿಂದ ಬಂದನು. ಬ್ರಹ್ಮಲೋಕದವನಾಗಿದ್ದ ಅವನ ತೇಜಸ್ಸನ್ನು ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಅವನನ್ನು ನಾವು ಸ್ವಾಗತಿಸಿ ಸತ್ಕರಿಸಿದೆವು.

14016015a ಅಸ್ಮಾಭಿಃ ಪರಿಪೃಷ್ಟಶ್ಚ ಯದಾಹ ಭರತರ್ಷಭ|

14016015c ದಿವ್ಯೇನ ವಿಧಿನಾ ಪಾರ್ಥ ತಚ್ಚೃಣುಷ್ವಾವಿಚಾರಯನ್||

ಭರತರ್ಷಭ! ಪಾರ್ಥ! ನಮ್ಮ ಪ್ರಶ್ನೆಗಳಿಗೆ ಅವನು ಉತ್ತರಿಸಿದ ದಿವ್ಯ ವಿಧಿಯನ್ನು ಕೇಳು.

14016016 ಬ್ರಾಹ್ಮಣ ಉವಾಚ

14016016a ಮೋಕ್ಷಧರ್ಮಂ ಸಮಾಶ್ರಿತ್ಯ ಕೃಷ್ಣ ಯನ್ಮಾನುಪೃಚ್ಚಸಿ|

14016016c ಭೂತಾನಾಮನುಕಂಪಾರ್ಥಂ ಯನ್ಮೋಹಚ್ಚೇದನಂ ಪ್ರಭೋ||

ಬ್ರಾಹ್ಮಣನು ಹೇಳಿದನು: “ಪ್ರಭೋ! ಕೃಷ್ಣ! ಜೀವಿಗಳ ಮೇಲಿನ ಅನುಕಂಪದಿಂದ ಮೋಹವನ್ನು ಛೇದಿಸುವ ಮೋಕ್ಷಧರ್ಮದ ಕುರಿತು ನೀನು ಪ್ರಶ್ನಿಸುತ್ತಿದ್ದೀಯೆ[1].

14016017a ತತ್ತೇಽಹಂ ಸಂಪ್ರವಕ್ಷ್ಯಾಮಿ ಯಥಾವನ್ಮಧುಸೂದನ|

14016017c ಶೃಣುಷ್ವಾವಹಿತೋ ಭೂತ್ವಾ ಗದತೋ ಮಮ ಮಾಧವ||

ಮಾಧವ! ಮಧುಸೂದನ! ಯಥಾವತ್ತಾಗಿ ಅದನ್ನು ನಿನಗೆ ವಿವರಿಸುತ್ತೇನೆ. ನಾನು ಹೇಳುವುದನ್ನು ಅನನ್ಯಚಿತ್ತದಿಂದ ಕೇಳು.

14016018a ಕಶ್ಚಿದ್ವಿಪ್ರಸ್ತಪೋಯುಕ್ತಃ ಕಾಶ್ಯಪೋ ಧರ್ಮವಿತ್ತಮಃ|

14016018c ಆಸಸಾದ ದ್ವಿಜಂ ಕಂ ಚಿದ್ಧರ್ಮಾಣಾಮಾಗತಾಗಮಮ್||

ಒಮ್ಮೆ ತಪೋಯುಕ್ತನೂ ಧರ್ಮವಿತ್ತಮನೂ ಆದ ಕಾಶ್ಯಪ ದ್ವಿಜನು ಧರ್ಮದ ರಹಸ್ಯಗಳನ್ನು ತಿಳಿದಿದ್ದ ಓರ್ವ ದ್ವಿಜನನ್ನು ಸಂಧಿಸಿದನು.

14016019a ಗತಾಗತೇ ಸುಬಹುಶೋ ಜ್ಞಾನವಿಜ್ಞಾನಪಾರಗಮ್|

14016019c ಲೋಕತತ್ತ್ವಾರ್ಥಕುಶಲಂ ಜ್ಞಾತಾರಂ ಸುಖದುಃಖಯೋಃ||

ಅವನು ಹಿಂದಾದುದನ್ನೂ ಮತ್ತು ಮುಂದಾಗುವುದನ್ನೂ ತಿಳಿದಿದ್ದನು. ಜ್ಞಾನ ಮತ್ತು ವಿಜ್ಞಾನಗಳೆರಡರಲ್ಲೂ ಪಾರಂಗತನಾಗಿದ್ದನು. ಲೋಕತತ್ತ್ವದ ಅರ್ಥದಲ್ಲಿ ಕುಶಲನಾಗಿದ್ದನು ಮತ್ತು ಸುಖ-ದುಃಖಗಳ ರಹಸ್ಯವನ್ನು ತಿಳಿದಿದ್ದನು.

14016020a ಜಾತೀಮರಣತತ್ತ್ವಜ್ಞಂ ಕೋವಿದಂ ಪುಣ್ಯಪಾಪಯೋಃ|

14016020c ದ್ರಷ್ಟಾರಮುಚ್ಚನೀಚಾನಾಂ ಕರ್ಮಭಿರ್ದೇಹಿನಾಂ ಗತಿಮ್||

ಹುಟ್ಟು-ಮರಣಗಳ ತತ್ತ್ವಗಳನ್ನು ತಿಳಿದಿದ್ದನು, ಮತ್ತು ಪುಣ್ಯ-ಪಾಪಗಳ ಕುರಿತು ಕೋವಿದನಾಗಿದ್ದನು. ಕರ್ಮಗಳಿಗನುಗುಣವಾಗಿ ಜೀವಿಗಳು ಉಚ್ಚ-ನೀಚ ಯೋನಿಗಳಲ್ಲಿ ಹುಟ್ಟುವುದನ್ನು ಕಂಡಿದ್ದನು.

14016021a ಚರಂತಂ ಮುಕ್ತವತ್ಸಿದ್ಧಂ ಪ್ರಶಾಂತಂ ಸಂಯತೇಂದ್ರಿಯಮ್|

14016021c ದೀಪ್ಯಮಾನಂ ಶ್ರಿಯಾ ಬ್ರಾಹ್ಮ್ಯಾ ಕ್ರಮಮಾಣಂ ಚ ಸರ್ವಶಃ||

ಮುಕ್ತನಾದವನಂತೆ ಸರ್ವತ್ರ ಸಂಚರಿಸುತ್ತಿದ್ದ ಆ ಸಿದ್ಧನು ಪ್ರಶಾಂತನೂ, ಸಂಯತೇಂದ್ರಿಯನೂ ಆಗಿದ್ದು, ಬ್ರಹ್ಮಶ್ರೀಯಿಂದ ಬೆಳಗುತ್ತಿದ್ದನು.

14016022a ಅಂತರ್ಧಾನಗತಿಜ್ಞಂ ಚ ಶ್ರುತ್ವಾ ತತ್ತ್ವೇನ ಕಾಶ್ಯಪಃ|

14016022c ತಥೈವಾಂತರ್ಹಿತೈಃ ಸಿದ್ಧೈರ್ಯಾಂತಂ ಚಕ್ರಧರೈಃ ಸಹ||

14016023a ಸಂಭಾಷಮಾಣಮೇಕಾಂತೇ ಸಮಾಸೀನಂ ಚ ತೈಃ ಸಹ|

14016023c ಯದೃಚ್ಚಯಾ ಚ ಗಚ್ಚಂತಮಸಕ್ತಂ ಪವನಂ ಯಥಾ||

ಗಾಳಿಯಂತೆ ನಿರ್ಲಿಪ್ತನಾಗಿ ಸ್ವಚ್ಛಂದ ತಿರುಗುತ್ತಿದ್ದ ಅವನು ಅಂತರ್ಧಾನ ವಿದ್ಯೆಯನ್ನು ತಿಳಿದಿದ್ದನು. ಅವನು ಚಕ್ರಧಾರಿ ಸಿದ್ಧರೊಡನೆ ಪ್ರಯಾಣಮಾಡುತ್ತಾ ಅವರೊಂದಿಗೆ ಏಕಾಂತದಲ್ಲಿ ಕುಳಿತು ಸಂಭಾಷಣೆ ನಡೆಸುತ್ತಿದ್ದುದನ್ನು ಕಾಶ್ಯಪನು ಕೇಳಿದನು.

14016024a ತಂ ಸಮಾಸಾದ್ಯ ಮೇಧಾವೀ ಸ ತದಾ ದ್ವಿಜಸತ್ತಮಃ|

14016024c ಚರಣೌ ಧರ್ಮಕಾಮೋ ವೈ ತಪಸ್ವೀ ಸುಸಮಾಹಿತಃ|

14016024e ಪ್ರತಿಪೇದೇ ಯಥಾನ್ಯಾಯಂ ಭಕ್ತ್ಯಾ ಪರಮಯಾ ಯುತಃ||

ಧರ್ಮಾರ್ಥಗಳನ್ನು ತಿಳಿದುಕೊಳ್ಳಲು ಬಯಸಿದ್ದ ಆ ಮೇಧಾವೀ ದ್ವಿಜಸತ್ತಮನು ಆ ತಪಸ್ವಿಯ ಬಳಿಸಾರಿ ಪರಮ ಭಕ್ತಿಯಿಂದ ಯಥಾನ್ಯಾಯವಾಗಿ ಅವನ ಚರಣಗಳಿಗೆ ವಂದಿಸಿದನು.

14016025a ವಿಸ್ಮಿತಶ್ಚಾದ್ಭುತಂ ದೃಷ್ಟ್ವಾ ಕಾಶ್ಯಪಸ್ತಂ ದ್ವಿಜೋತ್ತಮಮ್|

14016025c ಪರಿಚಾರೇಣ ಮಹತಾ ಗುರುಂ ವೈದ್ಯಮತೋಷಯತ್||

ಅದ್ಭುತನಾಗಿದ್ದ ಆ ದ್ವಿಜೋತ್ತಮನನ್ನು ನೋಡಿ ವಿಸ್ಮಿತನಾದ ಕಾಶ್ಯಪನು ಅವನನ್ನು ಗುರುವೆಂದೇ ತಿಳಿದು ಮಹಾ ಶುಶ್ರೂಷೆಗಳಿಂದ ಸಂತೋಷಗೊಳಿಸಿದನು.

14016026a ಪ್ರೀತಾತ್ಮಾ ಚೋಪಪನ್ನಶ್ಚ ಶ್ರುತಚಾರಿತ್ರಸಂಯುತಃ|

14016026c ಭಾವೇನ ತೋಷಯಚ್ಚೈನಂ ಗುರುವೃತ್ತ್ಯಾ ಪರಂತಪಃ||

ಶ್ರುತಚಾರಿತ್ರ ಸಂಯುಕ್ತನೂ ಪರಂತಪನೂ ಪ್ರೀತಾತ್ಮನೂ ಆದ ಆ ಕಾಶ್ಯಪನು ಗುರುಭಾವದಿಂದ ದ್ವಿಜನನ್ನು ಸಂತೊಷಗೊಳಿಸಿದನು.

14016027a ತಸ್ಮೈ ತುಷ್ಟಃ ಸ ಶಿಷ್ಯಾಯ ಪ್ರಸನ್ನೋಽಥಾಬ್ರವೀದ್ಗುರುಃ|

14016027c ಸಿದ್ಧಿಂ ಪರಾಮಭಿಪ್ರೇಕ್ಷ್ಯ ಶೃಣು ತನ್ಮೇ ಜನಾರ್ದನ||

ಜನಾರ್ದನ! ಶಿಷ್ಯನ ಕುರಿತು ಸಂತುಷ್ಟನಾದ ಗುರುವು ಪ್ರಸನ್ನನಾಗಿ ಅವನಿಗೆ ಪರಾಸಿದ್ಧಿಯ ಕುರಿತು ಹೇಳಿದುದನ್ನು ಕೇಳು.

14016028a ವಿವಿಧೈಃ ಕರ್ಮಭಿಸ್ತಾತ ಪುಣ್ಯಯೋಗೈಶ್ಚ ಕೇವಲೈಃ|

14016028c ಗಚ್ಚಂತೀಹ ಗತಿಂ ಮರ್ತ್ಯಾ ದೇವಲೋಕೇಽಪಿ ಚ ಸ್ಥಿತಿಮ್||

“ಅಯ್ಯಾ! ಮನುಷ್ಯರು ವಿವಿಧ ಕರ್ಮಗಳಿಂದುಂಟಾದ ಪುಣ್ಯಯೋಗಗಳಿಂದ ಮಾತ್ರವೇ ದೇವಲೋಕದಲ್ಲಿ ಉತ್ತಮ ಸ್ಥಾನವನ್ನೂ ಪಡೆದುಕೊಳ್ಳುತ್ತಾರೆ.

14016029a ನ ಕ್ವ ಚಿತ್ಸುಖಮತ್ಯಂತಂ ನ ಕ್ವ ಚಿಚ್ಚಾಶ್ವತೀ ಸ್ಥಿತಿಃ|

14016029c ಸ್ಥಾನಾಚ್ಚ ಮಹತೋ ಭ್ರಂಶೋ ದುಃಖಲಬ್ಧಾತ್ಪುನಃ ಪುನಃ||

ಆದರೆ ಜೀವನಿಗೆ ಎಲ್ಲಿಯೂ ಅತ್ಯಂತ ಸುಖವಿರುವುದಿಲ್ಲ. ಮತ್ತು ಯಾವ ಲೋಕದಲ್ಲಿಯೂ ಶಾಶ್ವತವಾಗಿ ಇರುವುದಿಲ್ಲ. ಸ್ಥಾನವು ಎಷ್ಟೇ ಮಹತ್ತರವಾದುದಿರಲಿ, ಅವನು ಪುನಃ ಪುನಃ ದುಃಖವನ್ನು ಪಡೆಯುತ್ತಲೇ ಇರುತ್ತಾನೆ.

14016030a ಅಶುಭಾ ಗತಯಃ ಪ್ರಾಪ್ತಾಃ ಕಷ್ಟಾ ಮೇ ಪಾಪಸೇವನಾತ್|

14016030c ಕಾಮಮನ್ಯುಪರೀತೇನ ತೃಷ್ಣಯಾ ಮೋಹಿತೇನ ಚ||

ಕಾಮ-ಕೋಪಗಳಿಂದ ತುಂಬಿ ತೃಷ್ಣೆಯಿಂದ ಮೋಹಿತನಾಗಿ ಪಾಪಕರ್ಮಗಳನ್ನು ಮಾಡಿದುದರಿಂದ ನನಗೆ ಅಶುಭ ಗತಿಗಳೇ ಪ್ರಾಪ್ತವಾಗಿ ಅನೇಕ ಕಷ್ಟಗಳನ್ನು ಅನುಭವಿಸಿದೆನು.

14016031a ಪುನಃ ಪುನಶ್ಚ ಮರಣಂ ಜನ್ಮ ಚೈವ ಪುನಃ ಪುನಃ|

14016031c ಆಹಾರಾ ವಿವಿಧಾ ಭುಕ್ತಾಃ ಪೀತಾ ನಾನಾವಿಧಾಃ ಸ್ತನಾಃ||

ಪುನಃ ಪುನಃ ಮರಣಹೊಂದಿ ಪುನಃ ಪುನಃ ಹುಟ್ಟಿ ವಿವಿಧ ಆಹಾರಗಳನ್ನು ಭೋಜಿಸಿದೆನು ಮತ್ತು ನಾನಾ ವಿಧದ ಮೊಲೆಹಾಲನ್ನು ಕುಡಿದೆನು.

14016032a ಮಾತರೋ ವಿವಿಧಾ ದೃಷ್ಟಾಃ ಪಿತರಶ್ಚ ಪೃಥಗ್ವಿಧಾಃ|

14016032c ಸುಖಾನಿ ಚ ವಿಚಿತ್ರಾಣಿ ದುಃಖಾನಿ ಚ ಮಯಾನಘ||

ಅನಘ! ವಿವಿಧ ತಾಯಂದಿರನ್ನು ಕಂಡೆನು ಮತ್ತು ವಿವಿಧ ತಂದೆಯಂದಿರನ್ನೂ ನೋಡಿದೆನು. ವಿಚಿತ್ರವಾದ ಸುಖಗಳನ್ನೂ ದುಃಖಗಳನ್ನೂ ಅನುಭವಿಸಿದೆನು.

14016033a ಪ್ರಿಯೈರ್ವಿವಾಸೋ ಬಹುಶಃ ಸಂವಾಸಶ್ಚಾಪ್ರಿಯೈಃ ಸಹ|

14016033c ಧನನಾಶಶ್ಚ ಸಂಪ್ರಾಪ್ತೋ ಲಬ್ಧ್ವಾ ದುಃಖೇನ ತದ್ಧನಮ್||

ಅನೇಕ ಪ್ರಿಯರಿಂದ ದೂರಾದೆನು. ಅನೇಕ ಅಪ್ರಿಯರ ಸಹವಾಸವನ್ನೂ ಮಾಡಿದೆನು. ಬಹಳ ಕಷ್ಟದಿಂದ ಸಂಪಾದಿಸಿದ ಧನನಾಶವನ್ನೂ ಕಂಡೆನು.

14016034a ಅವಮಾನಾಃ ಸುಕಷ್ಟಾಶ್ಚ ಪರತಃ ಸ್ವಜನಾತ್ತಥಾ|

14016034c ಶಾರೀರಾ ಮಾನಸಾಶ್ಚಾಪಿ ವೇದನಾ ಭೃಶದಾರುಣಾಃ||

ಸ್ವಜನರು ಮತ್ತು ಪರರಿಂದ ಅಪಾರ ಅವಮಾನ-ಕಷ್ಟಗಳನ್ನು ಅನುಭವಿಸಿದೆನು. ಅತಿ ದಾರುಣ ಶಾರೀರಿಕ-ಮಾನಸಿಕ ವೇದನೆಗಳನ್ನೂ ಅನುಭವಿಸಿದೆನು.

14016035a ಪ್ರಾಪ್ತಾ ವಿಮಾನನಾಶ್ಚೋಗ್ರಾ ವಧಬಂಧಾಶ್ಚ ದಾರುಣಾಃ|

14016035c ಪತನಂ ನಿರಯೇ ಚೈವ ಯಾತನಾಶ್ಚ ಯಮಕ್ಷಯೇ||

ಉಗ್ರ ಅಪಮಾನಗಳನ್ನೂ ದಾರುಣ ಮರಣ ದಂಡನೆ-ಬಂಧನಗಳನ್ನೂ ಅನುಭವಿಸಿದೆನು. ನರಕದಲ್ಲಿಯೂ ಬಿದ್ದಿದ್ದೇನೆ ಮತ್ತು ಯಮಕ್ಷಯದಲ್ಲಿಯೂ ಯಾತನೆಗಳನ್ನು ಅನುಭವಿಸಿದ್ದೇನೆ.

14016036a ಜರಾ ರೋಗಾಶ್ಚ ಸತತಂ ವಾಸನಾನಿ ಚ ಭೂರಿಶಃ|

14016036c ಲೋಕೇಽಸ್ಮಿನ್ನನುಭೂತಾನಿ ದ್ವಂದ್ವಜಾನಿ ಭೃಶಂ ಮಯಾ||

ಈ ಲೋಕದಲ್ಲಿ ಅನೇಕಜನ್ಮಗಳನ್ನು ತಾಳಿದ ನಾನು ಸತತವಾಗಿ ಮುಪ್ಪು-ರೋಗಗಳಿಂದಲೂ ಅನೇಕ ಚಿಂತೆಗಳಿಂದಲೂ, ಶೀತೋಷ್ಣ, ಸುಖದುಃಖಾದಿ ದ್ವಂದ್ವಗಳಿಂದಲೂ ಬಳಲಿದೆನು.

14016037a ತತಃ ಕದಾ ಚಿನ್ನಿರ್ವೇದಾನ್ನಿಕಾರಾನ್ನಿಕೃತೇನ ಚ|

14016037c ಲೋಕತಂತ್ರಂ ಪರಿತ್ಯಕ್ತಂ ದುಃಖಾರ್ತೇನ ಭೃಶಂ ಮಯಾ|

14016037e ತತಃ ಸಿದ್ಧಿರಿಯಂ ಪ್ರಾಪ್ತಾ ಪ್ರಸಾದಾದಾತ್ಮನೋ ಮಯಾ||

ಹೀಗಿರುವಾಗ ಒಮ್ಮೆ ನಿರಾಶೆಯಿಂದ ನಿರಾಕಾರನನ್ನು ಆಶ್ರಯಿಸಿದೆನು. ಅತ್ಯಂತ ದುಃಖಿತನಾಗಿ ಲೋಕತಂತ್ರವನ್ನೇ ಪರಿತ್ಯಜಿಸಿದೆನು. ಆತ್ಮನ ಪ್ರಸಾದದಿಂದ ಆಗ ನನಗೆ ಈ ಸಿದ್ಧಿಯು ಪ್ರಾಪ್ತವಾಯಿತು.

14016038a ನಾಹಂ ಪುನರಿಹಾಗಂತಾ ಲೋಕಾನಾಲೋಕಯಾಮ್ಯಹಮ್|

14016038c ಆ ಸಿದ್ಧೇರಾ ಪ್ರಜಾಸರ್ಗಾದಾತ್ಮನೋ ಮೇ ಗತಿಃ ಶುಭಾ||

ಪುನಃ ನಾನು ಈ ಲೋಕಕ್ಕೆ ಬರುವುದಿಲ್ಲ. ಎಲ್ಲಿಯವರೆಗೆ ಸೃಷ್ಟಿಕಾರ್ಯವು ನಡೆಯುತ್ತಿರುತ್ತಿದೆಯೋ ಅಲ್ಲಿಯವರೆ ನಾನು ಸಿದ್ಧನಾಗಿ ಲೋಕಗಳ ಶುಭ ಗತಿಯನ್ನು ನೋಡುತ್ತಲೇ ಇರುತ್ತೇನೆ.

14016039a ಉಪಲಬ್ಧಾ ದ್ವಿಜಶ್ರೇಷ್ಠ ತಥೇಯಂ ಸಿದ್ಧಿರುತ್ತಮಾ|

14016039c ಇತಃ ಪರಂ ಗಮಿಷ್ಯಾಮಿ ತತಃ ಪರತರಂ ಪುನಃ|

14016039e ಬ್ರಹ್ಮಣಃ ಪದಮವ್ಯಗ್ರಂ ಮಾ ತೇ ಭೂದತ್ರ ಸಂಶಯಃ||

ದ್ವಿಜಶ್ರೇಷ್ಠ! ಈ ಉತ್ತಮ ಸಿದ್ಧಿಯನ್ನು ಪಡೆದು ನಾನು ಇಲ್ಲಿಂದ ಮೇಲಿನ ಲೋಕಕ್ಕೆ ಹೋಗುತ್ತೇನೆ. ಪುನಃ ಅಲ್ಲಿಂದ ಅದಕ್ಕಿಂದಲೂ ಮೇಲಿನ ಲೋಕಕ್ಕೆ ಹೋಗುತ್ತೇನೆ. ಕೊನೆಯಲ್ಲಿ ಅದಕ್ಕೂ ಮೇಲಿದ್ದ ಬ್ರಹ್ಮಪದಕ್ಕೆ ಹೋಗುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

14016040a ನಾಹಂ ಪುನರಿಹಾಗಂತಾ ಮರ್ತ್ಯಲೋಕಂ ಪರಂತಪ|

14016040c ಪ್ರೀತೋಽಸ್ಮಿ ತೇ ಮಹಾಪ್ರಾಜ್ಞ ಬ್ರೂಹಿ ಕಿಂ ಕರವಾಣಿ ತೇ||

ಪರಂತಪ! ನಾನು ಪುನಃ ಈ ಮರ್ತ್ಯಲೋಕಕ್ಕೆ ಹಿಂದಿರುಗುವುದಿಲ್ಲ. ಮಹಾಪ್ರಾಜ್ಞ! ನಿನ್ನ ಮೇಲೆ ಪ್ರೀತನಾಗಿದ್ದೇನೆ. ನಾನು ನಿನಗೇನು ಮಾಡಬೇಕು ಎನ್ನುವುದನ್ನು ಹೇಳು.

14016041a ಯದೀಪ್ಸುರುಪಪನ್ನಸ್ತ್ವಂ ತಸ್ಯ ಕಾಲೋಽಯಮಾಗತಃ|

14016041c ಅಭಿಜಾನೇ ಚ ತದಹಂ ಯದರ್ಥಂ ಮಾ ತ್ವಮಾಗತಃ|

14016041e ಅಚಿರಾತ್ತು ಗಮಿಷ್ಯಾಮಿ ಯೇನಾಹಂ ತ್ವಾಮಚೂಚುದಮ್||

ನೀನು ಏನನ್ನು ಪಡೆಯಲು ಇಲ್ಲಿಗೆ ಬಂದಿರುವೆಯೋ ಅದರ ಕಾಲವು ಈಗ ಬಂದೊದಗಿದೆ. ನೀನು ನನ್ನಲ್ಲಿಗೆ ಯಾಕಾಗಿ ಬಂದಿರುವೆ ಎನ್ನುವುದನ್ನು ನಾನು ಅರಿತಿರುವೆನು. ಇನ್ನು ಸ್ವಲ್ಪ ಸಮಯದಲ್ಲಿಯೇ ನಾನು ಹೋಗುತ್ತಿದ್ದೇನೆ. ಆದುದರಿಂದ ನಿನಗೆ ಇದನ್ನು ಹೇಳುತ್ತಿದ್ದೇನೆ.

14016042a ಭೃಶಂ ಪ್ರೀತೋಽಸ್ಮಿ ಭವತಶ್ಚಾರಿತ್ರೇಣ ವಿಚಕ್ಷಣ|

14016042c ಪರಿಪೃಚ್ಚ ಯಾವದ್ಭವತೇ ಭಾಷೇಯಂ ಯತ್ತವೇಪ್ಸಿತಮ್||

ವಿದ್ವಾಂಸನೇ! ನಿನ್ನ ಚಾರಿತ್ರ್ಯದಿಂದ ನಾನು ಅತ್ಯಂತ ಸಂತೋಷಗೊಂಡಿದ್ದೇನೆ. ನಿನಗೆ ಇಷ್ಟವಾದ ವಿಷಯದ ಕುರಿತು ಕೇಳು. ನಾನು ಉತ್ತರಿಸುತ್ತೇನೆ.

14016043a ಬಹು ಮನ್ಯೇ ಚ ತೇ ಬುದ್ಧಿಂ ಭೃಶಂ ಸಂಪೂಜಯಾಮಿ ಚ|

14016043c ಯೇನಾಹಂ ಭವತಾ ಬುದ್ಧೋ ಮೇಧಾವೀ ಹ್ಯಸಿ ಕಾಶ್ಯಪ||

ಕಾಶ್ಯಪ! ನನ್ನನ್ನು ಗುರುತಿಸಿದ ನೀನು ಬುದ್ಧಿವಂತನೂ ಮೇಧಾವಿಯೂ ಆಗಿರುವೆ. ನಿನ್ನ ಬುದ್ಧಿಯನ್ನು ಮನ್ನಿಸುತ್ತೇನೆ ಮತ್ತು ಪೂಜಿಸುತ್ತೇನೆ ಕೂಡ!”””

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಷೋಡಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾ ಎನ್ನುವ ಹದಿನಾರನೇ ಅಧ್ಯಾಯವು.

[1] ಸರ್ವವನ್ನೂ ತಿಳಿದಿದ್ದ ಭಗವಂತನು ಮೋಕ್ಷಧರ್ಮದ ಕುರಿತು ಕೇಳುತ್ತಿದ್ದಾನೆಂದರೆ, ಇದಕ್ಕೆ ಕಾರಣ ಇತರ ಜೀವಿಗಳಿಗೆ ಇದು ಪ್ರಯೋಜನವಾಗಲಿ ಎಂಬ ಅನುಕಂಪದಿಂದಲೇ ಹೊರತು ತನಗೆ ಇದು ತಿಳಿಯದೇ ಇದ್ದುದರಿಂದ ತಿಳಿದುಕೊಳ್ಳಬೇಕು ಎನ್ನುವುದಲ್ಲ ಎನ್ನುವುದನ್ನು ಆ ಬ್ರಾಹ್ಮಣನು ಕಂಡಿದ್ದನು.

Comments are closed.