ಅಶ್ವಮೇಧಿಕ ಪರ್ವ
೧೪
ಯುಧಿಷ್ಠಿರನ ಹಸ್ತಿನಾಪುರ ಪ್ರವೇಶ (೧-೧೭).
14014001 ವೈಶಂಪಾಯನ ಉವಾಚ
14014001a ಏವಂ ಬಹುವಿಧೈರ್ವಾಕ್ಯೈರ್ಮುನಿಭಿಸ್ತೈಸ್ತಪೋಧನೈಃ|
14014001c ಸಮಾಶ್ವಸ್ಯತ ರಾಜರ್ಷಿರ್ಹತಬಂಧುರ್ಯುಧಿಷ್ಠಿರಃ||
ವೈಶಂಪಾಯನನು ಹೇಳಿದನು: “ಈ ರೀತಿ ಮುನಿಗಳು ಮತ್ತು ತಪೋಧನರ ಬಹುವಿಧದ ಮಾತುಗಳನ್ನು ಕೇಳಿ ಬಂಧುಗಳನ್ನು ಕಳೆದುಕೊಂಡಿದ್ದ ರಾಜರ್ಷಿ ಯುಧಿಷ್ಠಿರನು ಸಮಾಧಾನಗೊಂಡನು.
14014002a ಸೋಽನುನೀತೋ ಭಗವತಾ ವಿಷ್ಟರಶ್ರವಸಾ ಸ್ವಯಮ್|
14014002c ದ್ವೈಪಾಯನೇನ ಕೃಷ್ಣೇನ ದೇವಸ್ಥಾನೇನ ಚಾಭಿಭೂಃ||
14014003a ನಾರದೇನಾಥ ಭೀಮೇನ ನಕುಲೇನ ಚ ಪಾರ್ಥಿವಃ|
14014003c ಕೃಷ್ಣಯಾ ಸಹದೇವೇನ ವಿಜಯೇನ ಚ ಧೀಮತಾ||
14014004a ಅನ್ಯೈಶ್ಚ ಪುರುಷವ್ಯಾಘ್ರೈರ್ಬ್ರಾಹ್ಮಣೈಃ ಶಾಸ್ತ್ರದೃಷ್ಟಿಭಿಃ|
14014004c ವ್ಯಜಹಾಚ್ಚೋಕಜಂ ದುಃಖಂ ಸಂತಾಪಂ ಚೈವ ಮಾನಸಮ್||
ಸ್ವಯಂ ಭಗವಂತ ಕೃಷ್ಣ, ದ್ವೈಪಾಯನ ಕೃಷ್ಣ, ಋಷಿ ದೇವಸ್ಥಾನ, ನಾರದ, ಭೀಮ, ನಕುಲ, ಕೃಷ್ಣೆ ದ್ರೌಪದಿ, ಸಹದೇವ, ಧೀಮಂತ ವಿಜಯ ಅರ್ಜುನ, ಅನ್ಯ ಪುರುಷವ್ಯಾಘ್ರರು, ಮತ್ತು ಶಾಸ್ತ್ರದೃಷ್ಟಿಯನ್ನರಿತ ಬ್ರಾಹ್ಮಣರು ಮೊದಲಾದವರಿಂದ ಸಾಂತ್ವನಗೊಳಿಸಲ್ಪಟ್ಟ ಪಾರ್ಥಿವ ಯುಧಿಷ್ಠಿರನು ಮಾನಸಿಕ ಶೋಕ, ದುಃಖ, ಸಂತಾಪಗಳನ್ನು ಕಳೆದುಕೊಂಡನು.
14014005a ಅರ್ಚಯಾಮಾಸ ದೇವಾಂಶ್ಚ ಬ್ರಾಹ್ಮಣಾಂಶ್ಚ ಯುಧಿಷ್ಠಿರಃ|
14014005c ಕೃತ್ವಾಥ ಪ್ರೇತಕಾರ್ಯಾಣಿ ಬಂಧೂನಾಂ ಸ ಪುನರ್ನೃಪಃ|
14014005e ಅನ್ವಶಾಸತ ಧರ್ಮಾತ್ಮಾ ಪೃಥಿವೀಂ ಸಾಗರಾಂಬರಾಮ್||
ನೃಪ ಯುಧಿಷ್ಠಿರನು ಬಂಧುಗಳ ಪ್ರೇತಕಾರ್ಯಗಳನ್ನು ಮಾಡಿ ಪುನಃ ದೇವತೆಗಳನ್ನೂ ಬ್ರಾಹ್ಮಣರನ್ನೂ ಅರ್ಚಿಸತೊಡಗಿದನು. ಆ ಧರ್ಮಾತ್ಮನು ಸಾಗರವನ್ನೇ ವಸ್ತ್ರವನ್ನಾಗಿ ಉಟ್ಟುಕೊಂಡ ಪೃಥ್ವಿಯನ್ನು ಆಳತೊಡಗಿದನು.
14014006a ಪ್ರಶಾಂತಚೇತಾಃ ಕೌರವ್ಯಃ ಸ್ವರಾಜ್ಯಂ ಪ್ರಾಪ್ಯ ಕೇವಲಮ್|
14014006c ವ್ಯಾಸಂ ಚ ನಾರದಂ ಚೈವ ತಾಂಶ್ಚಾನ್ಯಾನಬ್ರವೀನ್ನೃಪಃ||
ಸ್ವರಾಜ್ಯವನ್ನು ಪಡೆದು ಶಾಂತ ಚೇತಸನಾದ ಕೌರವ್ಯ ನೃಪನು ವ್ಯಾಸ, ನಾರದ ಮತ್ತು ಅನ್ಯರನ್ನು ಉದ್ದೇಶಿಸಿ ಹೇಳಿದನು:
14014007a ಆಶ್ವಾಸಿತೋಽಹಂ ಪ್ರಾಗ್ವೃದ್ಧೈರ್ಭವದ್ಭಿರ್ಮುನಿಪುಂಗವೈಃ|
14014007c ನ ಸೂಕ್ಷ್ಮಮಪಿ ಮೇ ಕಿಂ ಚಿದ್ವ್ಯಲೀಕಮಿಹ ವಿದ್ಯತೇ||
“ವೃದ್ಧರು ಮತ್ತು ಮುನಿಪುಂಗವರಿಂದ ನನಗೆ ಪುನಃ ಪುನಃ ಆಶ್ವಾಸನೆಗಳು ದೊರಕಿವೆ. ಈಗ ನನ್ನಲ್ಲಿ ಸೂಕ್ಷ್ಮವಾದಷ್ಟೂ ದುಃಖವಿಲ್ಲ.
14014008a ಅರ್ಥಶ್ಚ ಸುಮಹಾನ್ಪ್ರಾಪ್ತೋ ಯೇನ ಯಕ್ಷ್ಯಾಮಿ ದೇವತಾಃ|
14014008c ಪುರಸ್ಕೃತ್ಯೇಹ ಭವತಃ ಸಮಾನೇಷ್ಯಾಮಹೇ ಮಖಮ್||
ನೀವು ಸೂಚಿಸಿದಂತೆ ಅತಿದೊಡ್ಡ ಸಂಪತ್ತು ಸಿಗುವುದರಲ್ಲಿದೆ. ನಿಮ್ಮೆಲ್ಲರನ್ನೂ ಮುಂದಿರಿಸಿಕೊಂಡು ನಾನು ಯಜ್ಞವನ್ನು ಮಾಡಿ ದೇವತೆಗಳನ್ನು ತೃಪ್ತಿಗೊಳಿಸುತ್ತೇನೆ.
14014009a ಹಿಮವಂತಂ ತ್ವಯಾ ಗುಪ್ತಾ ಗಮಿಷ್ಯಾಮಃ ಪಿತಾಮಹ|
14014009c ಬಹ್ವಾಶ್ಚರ್ಯೋ ಹಿ ದೇಶಃ ಸ ಶ್ರೂಯತೇ ದ್ವಿಜಸತ್ತಮ||
ಪಿತಾಮಹ! ದ್ವಿಜಸತ್ತಮ! ನೀನು ರಕ್ಷಿಸುತ್ತಿರುವ ಹಿಮಾಲಯ ಪರ್ವತದ ಆ ಸ್ಥಳಕ್ಕೆ ಹೋಗೋಣ! ಆ ಪ್ರದೇಶವು ಅನೇಕ ಆಶ್ಚರ್ಯಗಳಿಂದ ಕೂಡಿದೆಯೆಂದು ಕೇಳಿದ್ದೇವೆ.
14014010a ತಥಾ ಭಗವತಾ ಚಿತ್ರಂ ಕಲ್ಯಾಣಂ ಬಹು ಭಾಷಿತಮ್|
14014010c ದೇವರ್ಷಿಣಾ ನಾರದೇನ ದೇವಸ್ಥಾನೇನ ಚೈವ ಹ||
ಪೂಜ್ಯನಾದ ನೀನೂ, ದೇವರ್ಷಿ ನಾರದ ಮತ್ತು ದೇವಸ್ಥಾನರೂ ಕಲ್ಯಾಣಕರವಾದ ಅನೇಕ ವಿಚಿತ್ರ ಮಾತುಗಳನ್ನಾಡಿದ್ದೀರಿ.
14014011a ನಾಭಾಗಧೇಯಃ ಪುರುಷಃ ಕಶ್ಚಿದೇವಂವಿಧಾನ್ಗುರೂನ್|
14014011c ಲಭತೇ ವ್ಯಸನಂ ಪ್ರಾಪ್ಯ ಸುಹೃದಃ ಸಾಧುಸಂಮತಾನ್||
ಸೌಭಾಗ್ಯಶಾಲಿಯಲ್ಲದ ಯಾವ ಪುರುಷನೂ ಕಷ್ಟಸಮಯದಲ್ಲಿ ಇಂತಹ ಸಾಧುಸಮ್ಮತ ಹಿತೈಷಿ ಗುರುಗಳನ್ನು ಪಡೆಯಲಾರನು!”
14014012a ಏವಮುಕ್ತಾಸ್ತು ತೇ ರಾಜ್ಞಾ ಸರ್ವ ಏವ ಮಹರ್ಷಯಃ|
14014012c ಅಭ್ಯನುಜ್ಞಾಪ್ಯ ರಾಜಾನಂ ತಥೋಭೌ ಕೃಷ್ಣಫಲ್ಗುನೌ|
14014012e ಪಶ್ಯತಾಮೇವ ಸರ್ವೇಷಾಂ ತತ್ರೈವಾದರ್ಶನಂ ಯಯುಃ||
ರಾಜನು ಹೀಗೆ ಹೇಳಲು ಎಲ್ಲ ಮಹರ್ಷಿಗಳು ರಾಜನಿಂದ ಮತ್ತು ಹಾಗೆಯೇ ಕೃಷ್ಣ-ಫಲ್ಗುನರಿಂದ ಬೀಳ್ಕೊಂಡರು. ಅವರೆಲ್ಲರೂ ನೋಡುತ್ತಿದ್ದಂತೆಯೇ ಅವರು ಅಲ್ಲಿಯೇ ಅದೃಶ್ಯರಾದರು.
14014013a ತತೋ ಧರ್ಮಸುತೋ ರಾಜಾ ತತ್ರೈವೋಪಾವಿಶತ್ಪ್ರಭುಃ|
14014013c ಏವಂ ನಾತಿಮಹಾನ್ಕಾಲಃ ಸ ತೇಷಾಮಭ್ಯವರ್ತತ||
ಆಗ ರಾಜಾ ಪ್ರಭು ಧರ್ಮಸುತನು ಅಲ್ಲಿಯೇ ಕುಳಿತುಕೊಂಡನು. ಸ್ವಲ್ಪ ಕಾಲದ ನಂತರ ಅವನು ಹಿಂದಿರುಗಿದನು.
14014014a ಕುರ್ವತಾಂ ಶೌಚಕರ್ಮಾಣಿ ಭೀಷ್ಮಸ್ಯ ನಿಧನೇ ತದಾ|
14014014c ಮಹಾದಾನಾನಿ ವಿಪ್ರೇಭ್ಯೋ ದದತಾಮೌರ್ಧ್ವದೈಹಿಕಮ್||
ನಿಧನ ಹೊಂದಿದ ಭೀಷ್ಮನ ಶೌಚಕರ್ಮಗಳನ್ನು ಮಾಡಿ ಔರ್ಧ್ವದೈಹಿಕ ಕರ್ಮಗಳನ್ನು ಮಾಡಿ ವಿಪ್ರರಿಗೆ ಮಹಾದಾನಗಳನ್ನು ನೀಡಿದನು.
14014015a ಭೀಷ್ಮಕರ್ಣಪುರೋಗಾಣಾಂ ಕುರೂಣಾಂ ಕುರುನಂದನ|
14014015c ಸಹಿತೋ ಧೃತರಾಷ್ಟ್ರೇಣ ಪ್ರದದಾವೌರ್ಧ್ವದೈಹಿಕಮ್||
ಧೃತರಾಷ್ಟ್ರನೊಂದಿಗೆ ಕುರುನಂದನನು ಭೀಷ್ಮ-ಕರ್ಣರೇ ಮೊದಲಾದ ಕುರುಗಳ ಔರ್ಧ್ವದೈಹಿಕ ಕರ್ಮಗಳನ್ನು ನೆರವೇರಿಸಿದನು.
14014016a ತತೋ ದತ್ತ್ವಾ ಬಹು ಧನಂ ವಿಪ್ರೇಭ್ಯಃ ಪಾಂಡವರ್ಷಭಃ|
14014016c ಧೃತರಾಷ್ಟ್ರಂ ಪುರಸ್ಕೃತ್ಯ ವಿವೇಶ ಗಜಸಾಹ್ವಯಮ್||
ಅನಂತರ ಪಾಂಡವರ್ಷಭನು ಧೃತರಾಷ್ಟ್ರನನ್ನು ಮುಂದಿರಿಸಿಕೊಂಡು ಹಸ್ತಿನಾಪುರವನ್ನು ಪ್ರವೇಶಿಸಿದನು.
14014017a ಸ ಸಮಾಶ್ವಾಸ್ಯ ಪಿತರಂ ಪ್ರಜ್ಞಾಚಕ್ಷುಷಮೀಶ್ವರಮ್|
14014017c ಅನ್ವಶಾದ್ವೈ ಸ ಧರ್ಮಾತ್ಮಾ ಪೃಥಿವೀಂ ಭ್ರಾತೃಭಿಃ ಸಹ||
ಪ್ರಜ್ಞಾಚಕ್ಷು ತಂದೆ ಈಶ್ವರನನ್ನು ಸಮಾಧಾನಗೊಳಿಸುತ್ತಾ ಧರ್ಮಾತ್ಮ ಯುಧಿಷ್ಠಿರನು ಸಹೋದರರೊಂದಿಗೆ ಭೂಮಿಯನ್ನು ಆಳತೊಡಗಿದನು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಚತುರ್ದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಹದಿನಾಲ್ಕನೇ ಅಧ್ಯಾಯವು.