Ashvamedhika Parva: Chapter 13

ಅಶ್ವಮೇಧಿಕ ಪರ್ವ

೧೩

ಕೃಷ್ಣನು ಯುಧಿಷ್ಠಿರನಿಗೆ ಕಾಮಗೀತೆಯನ್ನು ಹೇಳಿ, ಯಜ್ಞಗಳನ್ನು ಮಾಡೆಂದು ಹೇಳಿದುದು (೧-೨೧).

14013001 ವಾಸುದೇವ ಉವಾಚ

14013001a ನ ಬಾಹ್ಯಂ ದ್ರವ್ಯಮುತ್ಸೃಜ್ಯ ಸಿದ್ಧಿರ್ಭವತಿ ಭಾರತ|

14013001c ಶಾರೀರಂ ದ್ರವ್ಯಮುತ್ಸೃಜ್ಯ ಸಿದ್ಧಿರ್ಭವತಿ ವಾ ನ ವಾ||

ವಾಸುದೇವನು ಹೇಳಿದನು: “ಭಾರತ! ಬಾಹ್ಯ ಸಂಪತ್ತನ್ನು ತೊರೆದರೆ ಸಿದ್ಧಿಯು ದೊರಕುವುದಿಲ್ಲ. ಶಾರೀರಿಕ ದ್ರವ್ಯವನ್ನು[1] ತೊರೆದರೆ ಸಿದ್ಧಿಯು ದೊರಕಬಹುದು ಅಥವಾ ದೊರಕದೆಯೂ ಇರಬಹುದು.

14013002a ಬಾಹ್ಯದ್ರವ್ಯವಿಮುಕ್ತಸ್ಯ ಶಾರೀರೇಷು ಚ ಗೃಧ್ಯತಃ|

14013002c ಯೋ ಧರ್ಮೋ ಯತ್ಸುಖಂ ಚೈವ ದ್ವಿಷತಾಮಸ್ತು ತತ್ತಥಾ||

ಬಾಹ್ಯಧರ್ಮವನ್ನು ತ್ಯಜಿಸಿ ಶಾರೀರಿಕ ದ್ರವ್ಯಗಳಿಗೆ ಅಂಟಿಕೊಂಡಿರುವವನ ಧರ್ಮ ಮತ್ತು ಸುಖಗಳು ನಿನ್ನ ಶತ್ರುಗಳಲ್ಲಿ ಮಾತ್ರ ಇರಲಿ!

14013003a ದ್ವ್ಯಕ್ಷರಸ್ತು ಭವೇನ್ಮೃತ್ಯುಸ್ತ್ರ್ಯಕ್ಷರಂ ಬ್ರಹ್ಮ ಶಾಶ್ವತಮ್|

14013003c ಮಮೇತಿ ದ್ವ್ಯಕ್ಷರೋ ಮೃತ್ಯುರ್ನ ಮಮೇತಿ ಚ ಶಾಶ್ವತಮ್||

ಎರಡು ಅಕ್ಷರಗಳಿಂದ ಮೃತ್ಯುವಾಗುತ್ತದೆ ಮತ್ತು ಮೂರು ಅಕ್ಷರಗಳಿಂದ ಶಾಶ್ವತ ಬ್ರಹ್ಮನಾಗುತ್ತದೆ. “ಮಮ” ಎನ್ನುವ ಎರಡಕ್ಷರಗಳು ಮೃತ್ಯು ಮತ್ತು “ನ ಮಮ” ಎನ್ನುವ ಮೂರು ಅಕ್ಷರಗಳು ಶಾಶ್ವತ.

14013004a ಬ್ರಹ್ಮ ಮೃತ್ಯುಶ್ಚ ತೌ ರಾಜನ್ನಾತ್ಮನ್ಯೇವ ವ್ಯವಸ್ಥಿತೌ|

14013004c ಅದೃಶ್ಯಮಾನೌ ಭೂತಾನಿ ಯೋಧಯೇತಾಮಸಂಶಯಮ್||

ರಾಜನ್! ಬ್ರಹ್ಮ-ಮೃತ್ಯುಗಳೆರಡೂ ಆತ್ಮನಲ್ಲಿಯೇ ನೆಲೆಸಿರುತ್ತವೆ. ನಿಶ್ಚಯವಾಗಿಯೂ ಅವು ಭೂತಗಳಿಗೆ ಅದೃಶ್ಯವಾಗಿದ್ದುಕೊಂಡು ಪರಸ್ಪರರೊಡನೆ ಯುದ್ಧಮಾಡುತ್ತಿರುತ್ತವೆ.

14013005a ಅವಿನಾಶೋಽಸ್ಯ ಸತ್ತ್ವಸ್ಯ ನಿಯತೋ ಯದಿ ಭಾರತ|

14013005c ಭಿತ್ತ್ವಾ ಶರೀರಂ ಭೂತಾನಾಮಹಿಂಸಾಂ ಪ್ರತಿಪದ್ಯತೇ||

ಭಾರತ! ಯಾರು ತಮ್ಮನ್ನು ತಾವೇ ನಿಯಂತ್ರಿಸಿಕೊಂಡು ಅವಿನಾಶತ್ವವನ್ನು ಆತ್ಮನಲ್ಲಿ ಕಂಡಿರುತ್ತಾರೋ ಅವರು ಭೂತಗಳ ಶರೀರಗಳನ್ನು ಭೇದಿಸಿದರೂ ಹಿಂಸೆಮಾಡಿದ ಪಾಪವನ್ನು ಪಡೆಯುವುದಿಲ್ಲ[2].

14013006a ಲಬ್ಧ್ವಾಪಿ ಪೃಥಿವೀಂ ಸರ್ವಾಂ ಸಹಸ್ಥಾವರಜಂಗಮಾಮ್|

14013006c ಮಮತ್ವಂ ಯಸ್ಯ ನೈವ ಸ್ಯಾತ್ಕಿಂ ತಯಾ ಸ ಕರಿಷ್ಯತಿ||

ಸ್ಥಾವರ-ಜಂಗಮಗಳೊಂದಿಗೆ ಪೃಥ್ವಿಯೆಲ್ಲವನ್ನು ಪಡೆದುಕೊಂಡರೂ ಯಾರಲ್ಲಿ ಮಮತ್ವವೆನ್ನುವುದು ಇಲ್ಲವೋ ಅವನಿಗೆ ಅದರಿಂದ ಏನಾಗುತ್ತದೆ?[3]

14013007a ಅಥ ವಾ ವಸತಃ ಪಾರ್ಥ ವನೇ ವನ್ಯೇನ ಜೀವತಃ|

14013007c ಮಮತಾ ಯಸ್ಯ ದ್ರವ್ಯೇಷು ಮೃತ್ಯೋರಾಸ್ಯೇ ಸ ವರ್ತತೇ||

ಪಾರ್ಥ! ಅಥವಾ ವನದಲ್ಲಿದ್ದು ವನ್ಯಜೀವನವನ್ನು ನಡೆಸುವವನಿಗೆ ದ್ರವ್ಯಗಳಲ್ಲಿ ಮಮತೆಯಿದ್ದರೆ ಅವನು ಮೃತ್ಯುವಿನ ಬಾಯಿಯಲ್ಲಿರುವನೆಂದೇ ಆಗುತ್ತದೆ.

14013008a ಬಾಹ್ಯಾಂತರಾಣಾಂ ಶತ್ರೂಣಾಂ ಸ್ವಭಾವಂ ಪಶ್ಯ ಭಾರತ|

14013008c ಯನ್ನ ಪಶ್ಯತಿ ತದ್ಭೂತಂ ಮುಚ್ಯತೇ ಸ ಮಹಾಭಯಾತ್||

ಭಾರತ! ಹೊರಗಿನ ಮತ್ತು ಒಳಗಿನ ಶತ್ರುಗಳ ಸ್ವಭಾವವನ್ನು ನೋಡು. ಇದನ್ನು ಕಂಡುಕೊಂಡವನು ಮಹಾಭಯದಿಂದ ಮುಕ್ತನಾಗುತ್ತಾನೆ.

14013009a ಕಾಮಾತ್ಮಾನಂ ನ ಪ್ರಶಂಸಂತಿ ಲೋಕೇ

ನ ಚಾಕಾಮಾತ್ಕಾ ಚಿದಸ್ತಿ ಪ್ರವೃತ್ತಿಃ|

14013009c ದಾನಂ ಹಿ ವೇದಾಧ್ಯಯನಂ ತಪಶ್ಚ

ಕಾಮೇನ ಕರ್ಮಾಣಿ ಚ ವೈದಿಕಾನಿ||

14013010a ವ್ರತಂ ಯಜ್ಞಾನ್ನಿಯಮಾನ್ಧ್ಯಾನಯೋಗಾನ್

ಕಾಮೇನ ಯೋ ನಾರಭತೇ ವಿದಿತ್ವಾ|

14013010c ಯದ್ಯದ್ಧ್ಯಯಂ ಕಾಮಯತೇ ಸ ಧರ್ಮೋ

ನ ಯೋ ಧರ್ಮೋ ನಿಯಮಸ್ತಸ್ಯ ಮೂಲಮ್||

ಕಾಮಾತ್ಮನನ್ನು ಲೋಕವು ಪ್ರಶಂಸಿಸುವುದಿಲ್ಲ. ಆದರೆ ಅಕಾಮನೆಯಿಂದ ಯಾವುದೇ ಪ್ರವೃತ್ತಿಯು ಇರುವುದಿಲ್ಲ. ಇದನ್ನು ತಿಳಿದವನು ದಾನ, ವೇದಾಧ್ಯಯನ, ತಪಸ್ಸು, ಮತ್ತು ವೈದಿಕ ಕಾಮ ಕರ್ಮಗಳು, ವ್ರತ, ಯಜ್ಞ, ನಿಯಮಾನುಷ್ಟಾನಗಳು, ದ್ಯಾನಯೋಗಗಳು ಇವನ್ನು ಕಾಮನಾಪೂರ್ವಕವಾಗಿ ಅನುಷ್ಟಾನ ಮಾಡುವುದಿಲ್ಲ. ಇವುಗಳಿಂದ ಕಾಮನೆಗಳನ್ನು ಅಪೇಕ್ಷಿಸುವುದು ಧರ್ಮವಲ್ಲ. ಕಾಮನೆಗಳನ್ನು ನಿಯಂತ್ರಿಸಿಕೊಳ್ಳುವುದೇ ಧರ್ಮದ ಮೂಲವಾಗಿರುತ್ತದೆ.

14013011a ಅತ್ರ ಗಾಥಾಃ ಕಾಮಗೀತಾಃ ಕೀರ್ತಯಂತಿ ಪುರಾವಿದಃ|

14013011c ಶೃಣು ಸಂಕೀರ್ತ್ಯಮಾನಾಸ್ತಾ ನಿಖಿಲೇನ ಯುಧಿಷ್ಠಿರ||

ಯುಧಿಷ್ಠಿರ! ಈ ವಿಷಯದಲ್ಲಿ ಹಿಂದೆ ತಿಳಿದವರು ಕಾಮಗೀತೆಯನ್ನು ಕೀರ್ತನೆಮಾಡುತ್ತಾರೆ. ಆ ಸಂಕೀರ್ತನೆಯನ್ನು ಸಂಪೂರ್ಣವಾಗಿ ಕೇಳು.

14013012a ನಾಹಂ ಶಕ್ಯೋಽನುಪಾಯೇನ ಹಂತುಂ ಭೂತೇನ ಕೇನ ಚಿತ್|

14013012c ಯೋ ಮಾಂ ಪ್ರಯತತೇ ಹಂತುಂ ಜ್ಞಾತ್ವಾ ಪ್ರಹರಣೇ ಬಲಮ್|

14013012e ತಸ್ಯ ತಸ್ಮಿನ್ಪ್ರಹರಣೇ ಪುನಃ ಪ್ರಾದುರ್ಭವಾಮ್ಯಹಮ್||

“ಉಪಾಯಗಳಿಲ್ಲದೇ ಯಾವ ಜೀವಿಯೂ ನನ್ನನ್ನು ಕೊಲ್ಲಲು ಶಕ್ಯವಿಲ್ಲ. ಹೊಡೆಯುವುದರಲ್ಲಿ ತನ್ನ ಬಲವಿದೆಯೆಂದು ತಿಳಿದುಕೊಂಡವನು ನನ್ನನ್ನು ಹೊಡೆಯಲು ಪ್ರಯತ್ನಿಸಿದರೆ ಆ ಹೊಡೆತದಲ್ಲಿ ಕೂಡ ನಾನು ಪುನಃ ಹುಟ್ಟಿಕೊಳ್ಳುತ್ತೇನೆ.

14013013a ಯೋ ಮಾಂ ಪ್ರಯತತೇ ಹಂತುಂ ಯಜ್ಞೈರ್ವಿವಿಧದಕ್ಷಿಣೈಃ|

14013013c ಜಂಗಮೇಷ್ವಿವ ಕರ್ಮಾತ್ಮಾ ಪುನಃ ಪ್ರಾದುರ್ಭವಾಮ್ಯಹಮ್||

ವಿವಿಧ ದಕ್ಷಿಣಾಯುಕ್ತ ಯಜ್ಞಗಳಿಂದ ನನ್ನನ್ನು ಸಂಹರಿಸಲು ಪ್ರಯತ್ನಿಸಿದರೆ ಅವನಲ್ಲಿಯೂ ನಾನು ಜಂಗಮಗಳಲ್ಲಿ ಕರ್ಮಾತ್ಮನು ಹುಟ್ಟುವಂತೆ ಪುನಃ ಹುಟ್ಟಿಕೊಳ್ಳುತ್ತೇನೆ.

14013014a ಯೋ ಮಾಂ ಪ್ರಯತತೇ ಹಂತುಂ ವೇದೈರ್ವೇದಾಂತಸಾಧನೈಃ|

14013014c ಸ್ಥಾವರೇಷ್ವಿವ ಶಾಂತಾತ್ಮಾ ತಸ್ಯ ಪ್ರಾದುರ್ಭವಾಮ್ಯಹಮ್||

ವೇದ-ವೇದಾಂತ ಸಾಧನೆಗಳಿಂದ ನನ್ನನ್ನು ಸಂಹರಿಸಲು ಪ್ರಯತ್ನಿಸಿದರೆ ಅವರಲ್ಲಿಯೂ ನಾನು ಸ್ಥಾವರಗಳಲ್ಲಿ ಶಾಂತಾತ್ಮನು ಪ್ರಕಟವಾಗುವಂತೆ ಪುನಃ ಹುಟ್ಟಿಕೊಳ್ಳುತ್ತೇನೆ.

14013015a ಯೋ ಮಾಂ ಪ್ರಯತತೇ ಹಂತುಂ ಧೃತ್ಯಾ ಸತ್ಯಪರಾಕ್ರಮಃ|

14013015c ಭಾವೋ ಭವಾಮಿ ತಸ್ಯಾಹಂ ಸ ಚ ಮಾಂ ನಾವಬುಧ್ಯತೇ||

ಯಾರು ಧೃತಿ ಮತು ಸತ್ಯಪರಾಕ್ರಮಗಳಿಂದ ನನ್ನನ್ನು ಸಂಹರಿಸಲು ಪ್ರಯತ್ನಿಸುತ್ತಾನೋ ಅವನಲ್ಲಿ ಕೂಡ ನಾನು ಭಾವನೆಗಳಾಗಿ ಸೇರಿಕೊಳ್ಳುತ್ತೇನೆ.

14013016a ಯೋ ಮಾಂ ಪ್ರಯತತೇ ಹಂತುಂ ತಪಸಾ ಸಂಶಿತವ್ರತಃ|

14013016c ತತಸ್ತಪಸಿ ತಸ್ಯಾಥ ಪುನಃ ಪ್ರಾದುರ್ಭವಾಮ್ಯಹಮ್||

ಯಾವ ಸಂಶಿತವ್ರತನು ತಪಸ್ಸಿನಿಂದ ನನ್ನನ್ನು ಸಂಹರಿಸಲು ಪ್ರಯತ್ನಿಸುತ್ತಾನೋ ಅವನ ತಪಸ್ಸಿನಲ್ಲಿಯೇ ಪುನಃ ನಾನು ಹುಟ್ಟಿಕೊಳ್ಳುತ್ತೇನೆ.

14013017a ಯೋ ಮಾಂ ಪ್ರಯತತೇ ಹಂತುಂ ಮೋಕ್ಷಮಾಸ್ಥಾಯ ಪಂಡಿತಃ|

14013017c ತಸ್ಯ ಮೋಕ್ಷರತಿಸ್ಥಸ್ಯ ನೃತ್ಯಾಮಿ ಚ ಹಸಾಮಿ ಚ|

14013017e ಅವಧ್ಯಃ ಸರ್ವಭೂತಾನಾಮಹಮೇಕಃ ಸನಾತನಃ||

ಯಾವ ಪಂಡಿತನು ಮೋಕ್ಷವನ್ನು ಅವಲಂಬಿಸಿ ನನ್ನನ್ನು ಸಂಹರಿಸಲು ಪ್ರಯತ್ನಿಸುತ್ತಾನೋ ಅವನ ಮೋಕ್ಷದ ಉದ್ದೇಶದಲ್ಲಿಯೇ ನಿಂತು ನಗುತ್ತೇನೆ ಮತ್ತು ನರ್ತಿಸುತ್ತೇನೆ. ಸರ್ವಜೀವಿಗಳಿಂದಲೂ ಅವಧ್ಯನಾದ ನಾನು ಸನಾತನ.”

14013018a ತಸ್ಮಾತ್ತ್ವಮಪಿ ತಂ ಕಾಮಂ ಯಜ್ಞೈರ್ವಿವಿಧದಕ್ಷಿಣೈಃ|

14013018c ಧರ್ಮಂ ಕುರು ಮಹಾರಾಜ ತತ್ರ ತೇ ಸ ಭವಿಷ್ಯತಿ||

ಮಹಾರಾಜ! ಆದುದರಿಂದ ವಿವಿಧದಕ್ಷಿಣಗಳಿಂದ ಕೂಡಿದ ಯಜ್ಞಗಳಿಂದ ಧರ್ಮವನ್ನು ಮಾಡು.

14013019a ಯಜಸ್ವ ವಾಜಿಮೇಧೇನ ವಿಧಿವದ್ದಕ್ಷಿಣಾವತಾ|

14013019c ಅನ್ಯೈಶ್ಚ ವಿವಿಧೈರ್ಯಜ್ಞೈಃ ಸಮೃದ್ಧೈರಾಪ್ತದಕ್ಷಿಣೈಃ||

ವಿವಿಧ ದಕ್ಷಿಣೆಗಳಿಂದ ಕೂಡಿದ ಅಶ್ವಮೇಧವನ್ನು ಯಾಜಿಸು. ಸಮೃದ್ಧ ಆಪ್ತದಕ್ಷಿಣೆಗಳಿಂದ ಕೂಡಿದ ಅನ್ಯ ವಿವಿಧ ಯಜ್ಞಗಳನ್ನೂ ಮಾಡು.

14013020a ಮಾ ತೇ ವ್ಯಥಾಸ್ತು ನಿಹತಾನ್ ಬಂಧೂನ್ವೀಕ್ಷ್ಯ ಪುನಃ ಪುನಃ|

14013020c ನ ಶಕ್ಯಾಸ್ತೇ ಪುನರ್ದ್ರಷ್ಟುಂ ಯೇ ಹತಾಸ್ಮಿನ್ ರಣಾಜಿರೇ||

ಹತರಾದ ಬಂಧುಗಳನ್ನು ನೋಡಿ ಪುನಃ ಪುನಃ ವ್ಯಥೆಪಡಬೇಡ. ರಣರಂಗದಲ್ಲಿ ಹತರಾದ ಅವರನ್ನು ಪುನಃ ನೋಡಲು ನಿನಗೆ ಶಕ್ಯವಿಲ್ಲ.

14013021a ಸ ತ್ವಮಿಷ್ಟ್ವಾ ಮಹಾಯಜ್ಞೈಃ ಸಮೃದ್ಧೈರಾಪ್ತದಕ್ಷಿಣೈಃ|

14013021c ಲೋಕೇ ಕೀರ್ತಿಂ ಪರಾಂ ಪ್ರಾಪ್ಯ ಗತಿಮಗ್ರ್ಯಾಂ ಗಮಿಷ್ಯಸಿ||

ಸಮೃದ್ಧ ಆಪ್ತದಕ್ಷಿಣೆಗಳಿಂದ ಮಹಾಯಜ್ಞಗಳನ್ನು ಮಾಡಿ ಲೋಕದಲ್ಲಿ ಪರಮ ಕೀರ್ತಿಯನ್ನು ಗಳಿಸಿ ಉತ್ತಮ ಗತಿಯನ್ನು ಪಡೆಯುತ್ತೀಯೆ.””

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣಧರ್ಮಸಂವಾದೇ ತ್ರಯೋದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣಧರ್ಮಸಂವಾದ ಎನ್ನುವ ಹದಿಮೂರನೇ ಅಧ್ಯಾಯವು.

[1] ಶಬ್ಧ-ಸ್ಪರ್ಷ-ರೂಪ-ರಸ-ಗಂಧಾದಿಗಳು

[2] ಮಮಕಾರವನ್ನು ತೊರೆದು ಆತ್ಮನಲ್ಲಿ ಶಾಶ್ವತ ಬ್ರಹ್ಮನನ್ನು ಕಂಡವನು ಜೀವಿಗಳನ್ನು ಕೊಂದರೂ ಅಹಿಂಸಕನಾಗಿಯೇ ಇರುತ್ತಾನೆ. ಅವನಿಗೆ ಕೊಂದ ಪಾಪವು ತಗಲುವುದಿಲ್ಲ.

[3] ಯಾವುದೂ ನನ್ನದಲ್ಲ ಎಂದುಕೊಂಡವನಿಗೆ ಭೂಮಿ-ಐಶ್ವರ್ಯಗಳು ಸಿಕ್ಕಿದರೆ ಅಥವಾ ಸಿಗದಿದ್ದರೆ ಸುಖ-ದುಃಖಗಳೇನೂ ಆಗುವುದಿಲ್ಲ.

Comments are closed.