ಅಶ್ವಮೇಧಿಕ ಪರ್ವ
೧೨
ತನ್ನೊಳಗಿರುವ ಮಾನಸಿಕ ಯುದ್ಧವನ್ನು ಗೆಲ್ಲಬೇಕೆಂದು ಯುಧಿಷ್ಠಿರನಿಗೆ ಕೃಷ್ಣನು ಹೇಳಿದುದು (೧-೧೪).
14012001 ವಾಸುದೇವ ಉವಾಚ
14012001a ದ್ವಿವಿಧೋ ಜಾಯತೇ ವ್ಯಾಧಿಃ ಶಾರೀರೋ ಮಾನಸಸ್ತಥಾ|
14012001c ಪರಸ್ಪರಂ ತಯೋರ್ಜನ್ಮ ನಿರ್ದ್ವಂದ್ವಂ ನೋಪಲಭ್ಯತೇ||
ವಾಸುದೇವನು ಹೇಳಿದನು: “ಶಾರೀರಿಕ ಮತ್ತು ಮಾನಸಿಕ ಎಂದು ಎರಡು ರೀತಿಯ ವ್ಯಾಧಿಗಳಿವೆ. ಶರೀರ ಮತ್ತು ಮನಸ್ಸು ಇವುಗಳ ಪರಸ್ಪರ ಸಹಯೋಗವಿಲ್ಲದೇ ವ್ಯಾಧಿಯು ಹುಟ್ಟುವುದಿಲ್ಲ.
14012002a ಶರೀರೇ ಜಾಯತೇ ವ್ಯಾಧಿಃ ಶಾರೀರೋ ನಾತ್ರ ಸಂಶಯಃ|
14012002c ಮಾನಸೋ ಜಾಯತೇ ವ್ಯಾಧಿರ್ಮನಸ್ಯೇವೇತಿ ನಿಶ್ಚಯಃ||
ಶರೀರದಿಂದ ಹುಟ್ಟುವ ವ್ಯಾಧಿಯು ಶಾರೀರಿಕವ್ಯಾಧಿಯೆನ್ನುವುದರಲ್ಲಿ ಸಂಶಯವಿಲ್ಲ. ಮನಸ್ಸಿನಿಂದ ಹುಟ್ಟುವ ವ್ಯಾಧಿಯು ಮಾನಸಿಕ ಎನ್ನುವುದು ನಿಶ್ಚಿತ.
14012003a ಶೀತೋಷ್ಣೇ ಚೈವ ವಾಯುಶ್ಚ ಗುಣಾ ರಾಜನ್ಶರೀರಜಾಃ|
14012003c ತೇಷಾಂ ಗುಣಾನಾಂ ಸಾಮ್ಯಂ ಚೇತ್ತದಾಹುಃ ಸ್ವಸ್ಥಲಕ್ಷಣಮ್|
14012003e ಉಷ್ಣೇನ ಬಾಧ್ಯತೇ ಶೀತಂ ಶೀತೇನೋಷ್ಣಂ ಚ ಬಾಧ್ಯತೇ||
ರಾಜನ್! ಶೀತ, ಉಷ್ಣ ಮತ್ತು ವಾಯುಗಳು ಶರೀರದ ಗುಣಗಳು. ಆ ಗುಣಗಳ ಸಾಮ್ಯವು ಆರೋಗ್ಯದ ಲಕ್ಷಣಗಳೆಂದು ಹೇಳುತ್ತಾರೆ. ಉಷ್ಣದಿಂದ ಶೀತವನ್ನು ಹೋಗಲಾಡಿಸಬಹುದು ಮತ್ತು ಶೀತದಿಂದ ಉಷ್ಣವನ್ನು ಹೋಗಲಾಡಿಸಬಹುದು.
14012004a ಸತ್ತ್ವಂ ರಜಸ್ತಮಶ್ಚೇತಿ ತ್ರಯಸ್ತ್ವಾತ್ಮಗುಣಾಃ ಸ್ಮೃತಾಃ|
14012004c ತೇಷಾಂ ಗುಣಾನಾಂ ಸಾಮ್ಯಂ ಚೇತ್ತದಾಹುಃ ಸ್ವಸ್ಥಲಕ್ಷಣಮ್|
14012004e ತೇಷಾಮನ್ಯತಮೋತ್ಸೇಕೇ ವಿಧಾನಮುಪದಿಶ್ಯತೇ||
ಸತ್ವ, ರಜ, ಮತ್ತು ತಮಗಳೆಂಬ ಮೂರು ಆತ್ಮದ ಗುಣಗಳೆಂದು ಹೇಳುತ್ತಾರೆ. ಆ ಗುಣಗಳ ಸಾಮ್ಯತೆಯು ಆರೋಗ್ಯದ ಲಕ್ಷಣವೆಂದು ಹೇಳುತ್ತಾರೆ. ಇವುಗಳಲ್ಲಿ ಯಾವುದೊಂದು ಗುಣವೂ ಅಧಿಕವಾಗಿದ್ದರೆ ಅದನ್ನು ಇನ್ನೊಂದು ಗುಣದೊಂದಿಗೆ ಸೇರಿಸಿಕೊಳ್ಳಬೇಕೆಂಬ ವಿಧಾನವನ್ನು ಉಪದೇಶಿಸಿದ್ದಾರೆ.
14012005a ಹರ್ಷೇಣ ಬಾಧ್ಯತೇ ಶೋಕೋ ಹರ್ಷಃ ಶೋಕೇನ ಬಾಧ್ಯತೇ|
14012005c ಕಶ್ಚಿದ್ದುಃಖೇ ವರ್ತಮಾನಃ ಸುಖಸ್ಯ ಸ್ಮರ್ತುಮಿಚ್ಚತಿ|
14012005e ಕಶ್ಚಿತ್ಸುಖೇ ವರ್ತಮಾನೋ ದುಃಖಸ್ಯ ಸ್ಮರ್ತುಮಿಚ್ಚತಿ||
ಹರ್ಷದಿಂದ ಶೋಕವು ದೂರವಾಗುತ್ತದೆ ಮತ್ತು ಶೋಕದಿಂದ ಹರ್ಷವು ದೂರವಾಗುತ್ತದೆ. ಒಂದು ವೇಳೆ ವರ್ತಮಾನದಲ್ಲಿ ದುಃಖವು ಆಗುತ್ತಿದ್ದರೆ ಸುಖದ ವೇಳೆಯನ್ನು ಸ್ಮರಿಸಿಕೊಳ್ಳಬೇಕು. ಒಂದು ವೇಳೆ ವರ್ತಮಾನದಲ್ಲಿ ಸುಖವು ಆಗುತ್ತಿದ್ದರೆ ದುಃಖದ ವೇಳೆಯನ್ನು ಸ್ಮರಿಸಿಕೊಳ್ಳಬೇಕು.
14012006a ಸ ತ್ವಂ ನ ದುಃಖೀ ದುಃಖಸ್ಯ ನ ಸುಖೀ ಸುಸುಖಸ್ಯ ವಾ|
14012006c ಸ್ಮರ್ತುಮಿಚ್ಚಸಿ ಕೌಂತೇಯ ದಿಷ್ಟಂ ಹಿ ಬಲವತ್ತರಮ್||
ಆದರೆ ನೀನು ದುಃಖಿಯಾಗಿದ್ದುಕೊಂಡು ದುಃಖದ ನಿವಾರಣೆಗಾಗಿ ಸುಖವನ್ನು ಸ್ಮರಿಸಿಕೊಳ್ಳುತ್ತಿಲ್ಲ. ಸುಖಿಯಾಗಿದ್ದುಕೊಂಡು ಆ ಸುಖವನ್ನು ಸಮನ್ವಯಗೊಳಿಸುವುದಕ್ಕಾಗಿ ನೀನು ದುಃಖವನ್ನೂ ನೆನಪಿಸಿಕೊಳ್ಳುತ್ತಿಲ್ಲ. ಕೌಂತೇಯ! ದೈವವೇ ಬಲವತ್ತರವೆನ್ನುವುದನ್ನು ಸ್ಮರಿಸಿಕೊಳ್ಳಬೇಕು.
14012007a ಅಥ ವಾ ತೇ ಸ್ವಭಾವೋಽಯಂ ಯೇನ ಪಾರ್ಥಾವಕೃಷ್ಯಸೇ|
14012007c ದೃಷ್ಟ್ವಾ ಸಭಾಗತಾಂ ಕೃಷ್ಣಾಮೇಕವಸ್ತ್ರಾಂ ರಜಸ್ವಲಾಮ್|
14012007e ಮಿಷತಾಂ ಪಾಂಡವೇಯಾನಾಂ ನ ತತ್ಸಂಸ್ಮರ್ತುಮಿಚ್ಚಸಿ||
ಅಥವಾ ಪಾರ್ಥ! ದುಃಖಿಸುತ್ತಿರುವುದೇ ನಿನ್ನ ಸ್ವಭಾವವೂ ಆಗಿರಬಹುದು. ಪಾಂಡವರು ನೋಡುತ್ತಿದ್ದಂತೆಯೇ ಏಕವಸ್ತ್ರದಲ್ಲಿದ್ದ ರಜಸ್ವಲೆ ಕೃಷ್ಣೆಯನ್ನು ಸಭೆಗೆ ಎಳೆದುತಂದ ದೃಶ್ಯವನ್ನು ಈಗ ನೀನು ಸ್ಮರಿಸಿಕೊಳ್ಳುತ್ತಿಲ್ಲ!
14012008a ಪ್ರವ್ರಾಜನಂ ಚ ನಗರಾದಜಿನೈಶ್ಚ ವಿವಾಸನಮ್|
14012008c ಮಹಾರಣ್ಯನಿವಾಸಶ್ಚ ನ ತಸ್ಯ ಸ್ಮರ್ತುಮಿಚ್ಚಸಿ||
ಜಿನಗಳನ್ನುಟ್ಟು ನಗರದಿಂದ ಹೊರಬಂದಿದ್ದುದನ್ನು, ಮತ್ತು ಮಹಾರಣ್ಯದಲ್ಲಿ ವಾಸಿಸುದನ್ನು ನೀನು ಈಗ ನೆನಪಿಸಿಕೊಳ್ಳುತ್ತಿಲ್ಲ!
14012009a ಜಟಾಸುರಾತ್ಪರಿಕ್ಲೇಶಶ್ಚಿತ್ರಸೇನೇನ ಚಾಹವಃ|
14012009c ಸೈಂಧವಾಚ್ಚ ಪರಿಕ್ಲೇಶೋ ನ ತಸ್ಯ ಸ್ಮರ್ತುಮಿಚ್ಚಸಿ||
ಜಟಾಸುರನಿಂದುಂಟಾದ ಕಷ್ಟವನ್ನು, ಚಿತ್ರಸೇನನೊಡನೆ ನಡೆದ ಯುದ್ಧವನ್ನು, ಮತ್ತು ಸೈಂಧವನಿಂದುಂಟಾದ ಕಷ್ಟವನ್ನು ನೀನು ನೆನಪಿಸಿಕೊಳ್ಳಲು ಬಯಸುತ್ತಿಲ್ಲ!
14012010a ಪುನರಜ್ಞಾತಚರ್ಯಾಯಾಂ ಕೀಚಕೇನ ಪದಾ ವಧಃ|
14012010c ಯಾಜ್ಞಸೇನ್ಯಾಸ್ತದಾ ಪಾರ್ಥ ನ ತಸ್ಯ ಸ್ಮರ್ತುಮಿಚ್ಚಸಿ||
ಪಾರ್ಥ! ಪುನಃ ಅಜ್ಞಾತವಾಸದಲ್ಲಿ ಪರಿಚಾರಿಕೆಗಳನ್ನು ಮಾಡಿದುದು, ಯಾಜ್ಞಸೇನಿಯನ್ನು ಕೀಚಕನು ಕಾಲಿನಿಂದ ಒದೆದುದು ಇದನ್ನು ನೀನು ನೆನಪಿಸಿಕೊಳ್ಳಲು ಬಯಸುತ್ತಿಲ್ಲ.
14012011a ಯಚ್ಚ ತೇ ದ್ರೋಣಭೀಷ್ಮಾಭ್ಯಾಂ ಯುದ್ಧಮಾಸೀದರಿಂದಮ|
14012011c ಮನಸೈಕೇನ ಯೋದ್ಧವ್ಯಂ ತತ್ತೇ ಯುದ್ಧಮುಪಸ್ಥಿತಮ್|
14012011e ತಸ್ಮಾದಭ್ಯುಪಗಂತವ್ಯಂ ಯುದ್ಧಾಯ ಭರತರ್ಷಭ||
ಅರಿಂದಮ! ನೀನು ದ್ರೋಣ-ಭೀಷ್ಮರೊಂದಿಗೆ ಮಾಡಿದ ಯುದ್ಧವನ್ನು ಮಾತ್ರ ನೆನಪಿಸಿಕೊಳ್ಳುತ್ತಿದ್ದೀಯೆ. ನಿನ್ನ ಮನಸ್ಸಿನಲ್ಲಿರುವ ಈ ಯುದ್ಧವನ್ನೇ ನೀನು ಹೋರಾಡಬೇಕು. ಭರತರ್ಷಭ! ಆ ಯುದ್ಧದಿಂದ ಗೆದ್ದು ನೀನು ಮೇಲೆ ಬರಬೇಕು!
14012012a ಪರಮವ್ಯಕ್ತರೂಪಸ್ಯ ಪರಂ ಮುಕ್ತ್ವಾ ಸ್ವಕರ್ಮಭಿಃ|
14012012c ಯತ್ರ ನೈವ ಶರೈಃ ಕಾರ್ಯಂ ನ ಭೃತ್ಯೈರ್ನ ಚ ಬಂಧುಭಿಃ|
14012012e ಆತ್ಮನೈಕೇನ ಯೋದ್ಧವ್ಯಂ ತತ್ತೇ ಯುದ್ಧಮುಪಸ್ಥಿತಮ್||
ಸ್ವಕರ್ಮಗಳಿಂದ ಮನಸ್ಸನ್ನು ಗೆದ್ದು ಪರಮ ಅವ್ಯಕ್ತರೂಪನನ್ನು ಪಡೆಯಬೇಕು. ಅಲ್ಲಿ ಶರಗಳದ್ದಾಗಲೀ, ಸೇವಕರದ್ದಾಗಲೀ ಮತ್ತು ಬಂಧುಗಳದ್ದಾಗಲೀ ಯಾವ ಕಾರ್ಯವೂ ಇಲ್ಲ. ಅಲ್ಲಿರುವ ಯುದ್ಧವನ್ನು ಆತ್ಮನೊಬ್ಬನೇ ಹೋರಾಡಬೇಕು.
14012013a ತಸ್ಮಿನ್ನನಿರ್ಜಿತೇ ಯುದ್ಧೇ ಕಾಮವಸ್ಥಾಂ ಗಮಿಷ್ಯಸಿ|
14012013c ಏತಜ್ಞಾತ್ವಾ ತು ಕೌಂತೇಯ ಕೃತಕೃತ್ಯೋ ಭವಿಷ್ಯಸಿ||
ಕೌಂತೇಯ! ಅಂಥಹ ಯುದ್ಧವನ್ನು ಗೆಲ್ಲದೇ ಇದ್ದರೆ ನೀನು ಎಂತಹ ಅವಸ್ಥೆಯನ್ನು ಹೊಂದುವೆ ಎನ್ನುವುದನ್ನು ತಿಳಿದುಕೊಂಡರೂ ನೀನು ಕೃತಕೃತ್ಯನಾಗುವೆ!
14012014a ಏತಾಂ ಬುದ್ಧಿಂ ವಿನಿಶ್ಚಿತ್ಯ ಭೂತಾನಾಮಾಗತಿಂ ಗತಿಮ್|
14012014c ಪಿತೃಪೈತಾಮಹೇ ವೃತ್ತೇ ಶಾಧಿ ರಾಜ್ಯಂ ಯಥೋಚಿತಮ್||
ಭೂತಗಳ ಆಗು ಹೋಗುಗಳ ಕುರಿತು ಹೀಗೆ ಬುದ್ಧಿಯಲ್ಲಿ ನಿಶ್ಚಯಿಸಿ ನಿನ್ನ ಪಿತೃ-ಪಿತಾಮಹರ ವೃತ್ತಿಯನ್ನನುಸರಿಸಿ ಯಥೋಚಿತವಾಗಿ ರಾಜ್ಯವನ್ನಾಳು!”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣಧರ್ಮಸಂವಾದೇ ದ್ವಾದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣಧರ್ಮಸಂವಾದ ಎನ್ನುವ ಹನ್ನೆರಡನೇ ಅಧ್ಯಾಯವು.