Ashvamedhika Parva: Chapter 11

ಅಶ್ವಮೇಧಿಕ ಪರ್ವ

೧೧

“ನಿನ್ನ ಶರೀರದಲ್ಲಿಯೇ ಇರುವ ಶತ್ರುವನ್ನು ನೀನು ಇನ್ನೂ ಜಯಿಸಿಲ್ಲ!” ಎಂದು ವಾಸುದೇವನು ಯುಧಿಷ್ಠಿರನಿಗೆ ಇಂದ್ರ-ವೃತ್ರರ ಯುದ್ಧದ ಧರ್ಮರಹಸ್ಯವನ್ನು ಉದಾಹರಿಸಿದುದು (೧-೨೦).

14011001 ವೈಶಂಪಾಯನ ಉವಾಚ

14011001a ಇತ್ಯುಕ್ತೇ ನೃಪತೌ ತಸ್ಮಿನ್ವ್ಯಾಸೇನಾದ್ಭುತಕರ್ಮಣಾ|

14011001c ವಾಸುದೇವೋ ಮಹಾತೇಜಾಸ್ತತೋ ವಚನಮಾದದೇ||

ವೈಶಂಪಾಯನನು ಹೇಳಿದನು: “ಅದ್ಭುತ ಕರ್ಮಿ ವ್ಯಾಸನು ನೃಪತಿಗೆ ಹೀಗೆ ಹೇಳಲು ಮಹಾತೇಜಸ್ವಿ ವಾಸುದೇವನು ಅವನಿಗೆ ಈ ಮಾತುಗಳನ್ನಾಡಿದನು.

14011002a ತಂ ನೃಪಂ ದೀನಮನಸಂ ನಿಹತಜ್ಞಾತಿಬಾಂಧವಮ್|

14011002c ಉಪಪ್ಲುತಮಿವಾದಿತ್ಯಂ ಸಧೂಮಮಿವ ಪಾವಕಮ್||

14011003a ನಿರ್ವಿಣ್ಣಮನಸಂ ಪಾರ್ಥಂ ಜ್ಞಾತ್ವಾ ವೃಷ್ಣಿಕುಲೋದ್ವಹಃ|

14011003c ಆಶ್ವಾಸಯನ್ಧರ್ಮಸುತಂ ಪ್ರವಕ್ತುಮುಪಚಕ್ರಮೇ||

ಜ್ಞಾತಿಬಾಂಧವರ ಸಂಹಾರದಿಂದ ದೀನಮನಸ್ಕನಾಗಿದ್ದ, ಮುಳುಗುತ್ತಿರುವ ಸೂರ್ಯನಂತಿದ್ದ ಮತ್ತು ಹೊಗೆಯಿರುವ ಅಗ್ನಿಯಂತಿದ್ದ, ನಿರ್ವಿಣ್ಣ ಮನಸ್ಕನಾದ ಪಾರ್ಥ ನೃಪನನ್ನು ಅರ್ಥಮಾಡಿಕೊಂಡ ವೃಷ್ಣಿಕುಲೋದ್ವಹನು ಧರ್ಮಸುತನನ್ನು ಸಮಾಧಾನಪಡಿಸುತ್ತಾ ಹೇಳಲು ಉಪಕ್ರಮಿಸಿದನು.

14011004 ವಾಸುದೇವ ಉವಾಚ

14011004a ಸರ್ವಂ ಜಿಹ್ಮಂ ಮೃತ್ಯುಪದಮಾರ್ಜವಂ ಬ್ರಹ್ಮಣಃ ಪದಮ್|

14011004c ಏತಾವಾನ್ ಜ್ಞಾನವಿಷಯಃ ಕಿಂ ಪ್ರಲಾಪಃ ಕರಿಷ್ಯತಿ||

ವಾಸುದೇವನು ಹೇಳಿದನು: “ಕುಟಿಲತೆಯು ಮೃತ್ಯುವಿಗೆ ದಾರಿ ಮತ್ತು ಸರಳತೆಯು ಬ್ರಹ್ಮಪದ. ಈ ವಿಷಯವನ್ನು ತಿಳಿದ ನೀನು ಏಕೆ ಪ್ರಲಪಿಸುತ್ತಿರುವೆ?

14011005a ನೈವ ತೇ ನಿಷ್ಠಿತಂ ಕರ್ಮ ನೈವ ತೇ ಶತ್ರವೋ ಜಿತಾಃ|

14011005c ಕಥಂ ಶತ್ರುಂ ಶರೀರಸ್ಥಮಾತ್ಮಾನಂ ನಾವಬುಧ್ಯಸೇ||

ಇನ್ನೂ ನೀನು ಮಾಡಬೇಕಾದ ಕರ್ಮಗಳೆಲ್ಲವನ್ನೂ ಮಾಡಿಮುಗಿಸಿಲ್ಲ ಮತ್ತು ನಿನ್ನ ಶತ್ರುಗಳೆಲ್ಲರನ್ನೂ ನೀನು ಜಯಿಸಿಲ್ಲ. ನಿನ್ನ ಶರೀರದಲ್ಲಿಯೇ ಇರುವ ಶತ್ರುವನ್ನು ನೀನು ಹೇಗೆ ಅರಿತುಕೊಳ್ಳುತ್ತಿಲ್ಲ?

14011006a ಅತ್ರ ತೇ ವರ್ತಯಿಷ್ಯಾಮಿ ಯಥಾಧರ್ಮಂ ಯಥಾಶ್ರುತಮ್|

14011006c ಇಂದ್ರಸ್ಯ ಸಹ ವೃತ್ರೇಣ ಯಥಾ ಯುದ್ಧಮವರ್ತತ||

ಇದಕ್ಕೆ ಸಂಬಂಧಿಸಿದಂತೆ ವೃತ್ರನೊಂದಿಗೆ ನಡೆದ ಯುದ್ಧದ ಕುರಿತು ಯಥಾಧರ್ಮವಾಗಿ ಕೇಳಿದಂತೆ ನಿನಗೆ ಹೇಳುತ್ತೇನೆ.

14011007a ವೃತ್ರೇಣ ಪೃಥಿವೀ ವ್ಯಾಪ್ತಾ ಪುರಾ ಕಿಲ ನರಾಧಿಪ|

14011007c ದೃಷ್ಟ್ವಾ ಸ ಪೃಥಿವೀಂ ವ್ಯಾಪ್ತಾಂ ಗಂಧಸ್ಯ ವಿಷಯೇ ಹೃತೇ|

14011007e ಧರಾಹರಣದುರ್ಗಂಧೋ ವಿಷಯಃ ಸಮಪದ್ಯತ||

ನರಾಧಿಪ! ಹಿಂದೆ ವೃತ್ರನಿಂದ ಇಡೀ ಪೃಥ್ವಿಯೇ ವ್ಯಾಪ್ತವಾಗಿಬಿಟ್ಟಿತ್ತಲ್ಲವೇ? ಅವನು ಪೃಥ್ವಿಯನ್ನು ವ್ಯಾಪಿಸಿ ಭೂಮಿಯಿಂದ ಅದರ ಸುಗಂಧವನ್ನೂ ಅಪಹರಿಸಿಬಿಟ್ಟಿದ್ದನು. ಆಗ ಭೂಮಿಯಲ್ಲೆಲ್ಲ ದುರ್ಗಂಧವೇ ಪಸರಿಸಿತು.

14011008a ಶತಕ್ರತುಶ್ಚುಕೋಪಾಥ ಗಂಧಸ್ಯ ವಿಷಯೇ ಹೃತೇ|

14011008c ವೃತ್ರಸ್ಯ ಸ ತತಃ ಕ್ರುದ್ಧೋ ವಜ್ರಂ ಘೋರಮವಾಸೃಜತ್||

ಭೂಮಿಯಿಂದ ಗಂಧವನ್ನು ಅಪಹರಿಸಲು ಶತಕ್ರತುವಿಗೆ ಕೋಪವುಂಟಾಯಿತು. ಕ್ರುದ್ಧನಾದ ಅವನು ವೃತ್ರನ ಮೇಲೆ ಘೋರ ವಜ್ರವನ್ನು ಪ್ರಯೋಗಿಸಿದನು.

14011009a ಸ ವಧ್ಯಮಾನೋ ವಜ್ರೇಣ ಪೃಥಿವ್ಯಾಂ ಭೂರಿತೇಜಸಾ|

14011009c ವಿವೇಶ ಸಹಸೈವಾಪೋ ಜಗ್ರಾಹ ವಿಷಯಂ ತತಃ||

ಅತ್ಯಂತ ತೇಜಸ್ಸಿದ್ದ ವಜ್ರದಿಂದ ಕೊಲ್ಲಲ್ಪಡುತ್ತಿದ್ದ ವೃತ್ರನು ಒಡನೆಯೇ ಭೂಮಿಯನ್ನು ಬಿಟ್ಟು ಜಲಪ್ರದೇಶವನ್ನು ಆವರಿಸಿದನು.

14011010a ವ್ಯಾಪ್ತಾಸ್ವಥಾಪ್ಸು ವೃತ್ರೇಣ ರಸೇ ಚ ವಿಷಯೇ ಹೃತೇ|

14011010c ಶತಕ್ರತುರಭಿಕ್ರುದ್ಧಸ್ತಾಸು ವಜ್ರಮವಾಸೃಜತ್||

ನೀರಿನಲ್ಲಿ ವ್ಯಾಪ್ತನಾದ ವೃತ್ರನು ಅದರಲ್ಲಿರುವ ರಸವನ್ನು ಅಪಹರಿಸಲು ಶತಕ್ರತುವು ಪುನಃ ಕ್ರುದ್ಧನಾಗಿ ಅವನ ಮೇಲೆ ವಜ್ರವನ್ನು ಪ್ರಯೋಗಿಸಿದನು.

14011011a ಸ ವಧ್ಯಮಾನೋ ವಜ್ರೇಣ ಸಲಿಲೇ ಭೂರಿತೇಜಸಾ|

14011011c ವಿವೇಶ ಸಹಸಾ ಜ್ಯೋತಿರ್ಜಗ್ರಾಹ ವಿಷಯಂ ತತಃ||

ಅತ್ಯಂತ ತೇಜೋಯುಕ್ತ ವಜ್ರದಿಂದ ವಧಿಸಲ್ಪಡುತ್ತಿದ್ದ ವೃತ್ರನು ಕೂಡಲೆ ಜ್ಯೋತಿಯನ್ನು ಪ್ರವೇಶಿಸಿ ಆ ಪ್ರದೇಶವನ್ನು ಆವರಿಸಿದನು.

14011012a ವ್ಯಾಪ್ತೇ ಜ್ಯೋತಿಷಿ ವೃತ್ರೇಣ ರೂಪೇಽಥ ವಿಷಯೇ ಹೃತೇ|

14011012c ಶತಕ್ರತುರಭಿಕ್ರುದ್ಧಸ್ತತ್ರ ವಜ್ರಮವಾಸೃಜತ್||

ಜ್ಯೋತಿಯನ್ನು ವ್ಯಾಪಿಸಿ ವೃತ್ರನು ಅದರಲ್ಲಿರುವ ರೂಪವನ್ನು ಅಪಹರಿಸಲು ಶತುಕ್ರತುವು ಕ್ರುದ್ಧನಾಗಿ ಪುನಃ ಅವನ ಮೇಲೆ ವಜ್ರವನ್ನು ಪ್ರಯೋಗಿಸಿದನು.

14011013a ಸ ವಧ್ಯಮಾನೋ ವಜ್ರೇಣ ಸುಭೃಶಂ ಭೂರಿತೇಜಸಾ|

14011013c ವಿವೇಶ ಸಹಸಾ ವಾಯುಂ ಜಗ್ರಾಹ ವಿಷಯಂ ತತಃ||

ಅತ್ಯಂತ ತೇಜೋಯುಕ್ತ ವಜ್ರದಿಂದ ವಧಿಸಲ್ಪಡುತ್ತಿದ್ದ ವೃತ್ರನು ಕೂಡಲೇ ವಾಯುವನ್ನು ಪ್ರವೇಶಿಸಿ ಅದನ್ನು ವ್ಯಾಪಿಸಿದನು.

14011014a ವ್ಯಾಪ್ತೇ ವಾಯೌ ತು ವೃತ್ರೇಣ ಸ್ಪರ್ಶೇಽಥ ವಿಷಯೇ ಹೃತೇ|

14011014c ಶತಕ್ರತುರಭಿಕ್ರುದ್ಧಸ್ತತ್ರ ವಜ್ರಮವಾಸೃಜತ್||

ವಾಯುವನ್ನು ವ್ಯಾಪಿಸಿ ವೃತ್ರನು ಅದರಲ್ಲಿರುವ ಸ್ಪರ್ಶಗುಣವನ್ನು ಅಪಹರಿಸಲು ಶತಕ್ರತುವು ಕ್ರುದ್ಧನಾಗಿ ಅವನ ಮೇಲೆ ಪುನಃ ವಜ್ರವನ್ನು ಪ್ರಯೋಗಿಸಿದನು.

14011015a ಸ ವಧ್ಯಮಾನೋ ವಜ್ರೇಣ ತಸ್ಮಿನ್ನಮಿತತೇಜಸಾ|

14011015c ಆಕಾಶಮಭಿದುದ್ರಾವ ಜಗ್ರಾಹ ವಿಷಯಂ ತತಃ||

ಆ ಅಮಿತ ತೇಜಸ್ವೀ ವಜ್ರದಿಂದ ವಧಿಸಲ್ಪಡುತ್ತಿದ್ದ ವೃತ್ರನು ಕೂಡಲೇ ಆಕಾಶಕ್ಕೆ ಹಾರಿ ಆ ಪ್ರದೇಶವನ್ನು ವ್ಯಾಪಿಸಿದನು.

14011016a ಆಕಾಶೇ ವೃತ್ರಭೂತೇ ಚ ಶಬ್ದೇ ಚ ವಿಷಯೇ ಹೃತೇ|

14011016c ಶತಕ್ರತುರಭಿಕ್ರುದ್ಧಸ್ತತ್ರ ವಜ್ರಮವಾಸೃಜತ್||

ಅಕಾಶವನ್ನು ವ್ಯಾಪಿಸಿ ವೃತ್ರನು ಅದರಲ್ಲಿರುವ ಶಬ್ಧವನ್ನು ಅಪಹರಿಸಲು ಕ್ರುದ್ಧನಾದ ಶತಕ್ರತುವು ಅವನ ಮೇಲೆ ಪುನಃ ವಜ್ರವನ್ನು ಪ್ರಯೋಗಿಸಿದನು.

14011017a ಸ ವಧ್ಯಮಾನೋ ವಜ್ರೇಣ ತಸ್ಮಿನ್ನಮಿತತೇಜಸಾ|

14011017c ವಿವೇಶ ಸಹಸಾ ಶಕ್ರಂ ಜಗ್ರಾಹ ವಿಷಯಂ ತತಃ||

ಆ ಅಮಿತ ತೇಜಸ ವಜ್ರದಿಂದ ವಧಿಸಲ್ಪಡುತಿದ್ದ ವೃತ್ರನು ಕೂಡಲೇ ಶಕ್ರನನ್ನು ಪ್ರವೇಶಿಸಿ ಅವನ ವಿಷಯವನ್ನು ವ್ಯಾಪಿಸಿದನು.

14011018a ತಸ್ಯ ವೃತ್ರಗೃಹೀತಸ್ಯ ಮೋಹಃ ಸಮಭವನ್ಮಹಾನ್|

14011018c ರಥಂತರೇಣ ತಂ ತಾತ ವಸಿಷ್ಠಃ ಪ್ರತ್ಯಬೋಧಯತ್||

ವೃತ್ರಾಸುರನು ಹಿಡಿದ ಅವನಲ್ಲಿ ಮಹಾ ಮೋಹವುಂಟಾಯಿತು. ಮಗೂ! ಆಗ ರಥಂತರ ಮಂತ್ರದಿಂದ ವಸಿಷ್ಠನು ಶಕ್ರನನ್ನು ಪುನಃ ಎಚ್ಚರಗೊಳಿಸಿದನು.

14011019a ತತೋ ವೃತ್ರಂ ಶರೀರಸ್ಥಂ ಜಘಾನ ಭರತರ್ಷಭ|

14011019c ಶತಕ್ರತುರದೃಶ್ಯೇನ ವಜ್ರೇಣೇತೀಹ ನಃ ಶ್ರುತಮ್||

ಭರತರ್ಷಭ! ಆಗ ಶರೀರಸ್ಥನಾಗಿದ್ದ ವೃತ್ರನನ್ನು ಶತಕ್ರತುವು ಅದೃಶ್ಯ ವಜ್ರದಿಂದಲೇ ಸಂಹರಿಸಿದನೆಂದು ನಾವು ಕೇಳಿದ್ದೇವೆ.

14011020a ಇದಂ ಧರ್ಮರಹಸ್ಯಂ ಚ ಶಕ್ರೇಣೋಕ್ತಂ ಮಹರ್ಷಿಷು|

14011020c ಋಷಿಭಿಶ್ಚ ಮಮ ಪ್ರೋಕ್ತಂ ತನ್ನಿಬೋಧ ನರಾಧಿಪ||

ನರಾಧಿಪ! ಈ ಧರ್ಮರಹಸ್ಯವನ್ನು ಇಂದ್ರನೇ ಮಹರ್ಷಿಗಳಿಗೆ ಹೇಳಿದನು. ಋಷಿಗಳು ನನಗೆ ಹೇಳಿದುದನ್ನು ನೀನು ಕೇಳು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣಧರ್ಮಸಂವಾದೇ ಏಕಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣಧರ್ಮಸಂವಾದ ಎನ್ನುವ ಹನ್ನೊಂದನೇ ಅಧ್ಯಾಯವು.

Comments are closed.