Ashramavasika Parva: Chapter 9

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

ಯುಧಿಷ್ಠಿರಾನುಶಾಸನ

ಧೃತರಾಷ್ಟ್ರ-ಗಾಂಧಾರಿಯರು ಊಟ ಮಾಡಿದುದು (೧-೬). ಧೃತರಾಷ್ಟ್ರನು ಯುಧಿಷ್ಠಿರನಿಗೆ ರಾಜ್ಯ ಸುರಕ್ಷಣೆಯ ಕುರಿತು ಉಪದೇಶಿಸಿದುದು (೭-೨೬).

15009001 ವೈಶಂಪಾಯನ ಉವಾಚ|

15009001a ತತೋ ರಾಜ್ಞಾಭ್ಯನುಜ್ಞಾತೋ ಧೃತರಾಷ್ಟ್ರಃ ಪ್ರತಾಪವಾನ್|

15009001c ಯಯೌ ಸ್ವಭವನಂ ರಾಜಾ ಗಾಂಧಾರ್ಯಾನುಗತಸ್ತದಾ||

ವೈಶಂಪಾಯನನು ಹೇಳಿದನು: “ಅನಂತರ ರಾಜ ಯುಧಿಷ್ಠಿರನಿಂದ ಅನುಜ್ಞೆ ಪಡೆದ ಪ್ರತಾಪವಾನ್ ರಾಜಾ ಧೃತರಾಷ್ಟ್ರನು ಸ್ವಭವನಕ್ಕೆ ತೆರಳಿದನು. ಗಾಂಧಾರಿಯೂ ಅವನನ್ನು ಹಿಂಬಾಲಿಸಿದಳು.

15009002a ಮಂದಪ್ರಾಣಗತಿರ್ಧೀಮಾನ್ ಕೃಚ್ಚ್ರಾದಿವ ಸಮುದ್ಧರನ್|

15009002c ಪದಾತಿಃ ಸ ಮಹೀಪಾಲೋ ಜೀರ್ಣೋ ಗಜಪತಿರ್ಯಥಾ||

ಬಹಳವಾಗಿ ಶಕ್ತಿಗುಂದಿದ್ದ ಧೀಮಾನ್ ಮಹೀಪಾಲನು ಮುದಿ ಸಲಗದಂತೆ ಕಷ್ಟಪಟ್ಟು ಹೆಜ್ಜೆಯಿಡುತ್ತಿದ್ದನು.

15009003a ತಮನ್ವಗಚ್ಚದ್ವಿದುರೋ ವಿದ್ವಾನ್ಸೂತಶ್ಚ ಸಂಜಯಃ|

15009003c ಸ ಚಾಪಿ ಪರಮೇಷ್ವಾಸಃ ಕೃಪಃ ಶಾರದ್ವತಸ್ತಥಾ||

ವಿದ್ವಾನ್ ವಿದುರ, ಸೂತ ಸಂಜಯ, ಮತ್ತು ಹಾಗೆಯೇ ಪರಮೇಷ್ವಾಸ ಕೃಪ ಶಾರದ್ವತರು ಅವನನ್ನು ಹಿಂಬಾಲಿಸಿ ಹೋದರು.

15009004a ಸ ಪ್ರವಿಶ್ಯ ಗೃಹಂ ರಾಜಾ ಕೃತಪೂರ್ವಾಹ್ಣಿಕಕ್ರಿಯಃ|

15009004c ತರ್ಪಯಿತ್ವಾ ದ್ವಿಜಶ್ರೇಷ್ಠಾನಾಹಾರಮಕರೋತ್ತದಾ||

ಮನೆಯನ್ನು ಸೇರಿ ರಾಜನು ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ದ್ವಿಜಶ್ರೇಷ್ಠರನ್ನು ತೃಪ್ತಿಗೊಳಿಸಿ, ಭೋಜನ ಮಾಡಿದನು.

15009005a ಗಾಂಧಾರೀ ಚೈವ ಧರ್ಮಜ್ಞಾ ಕುಂತ್ಯಾ ಸಹ ಮನಸ್ವಿನೀ|

15009005c ವಧೂಭಿರುಪಚಾರೇಣ ಪೂಜಿತಾಭುಂಕ್ತ ಭಾರತ||

ಭಾರತ! ಮನಸ್ವಿನೀ ಧರ್ಮಜ್ಞೆ ಗಾಂಧಾರಿಯೂ ಕೂಡ ಕುಂತಿಯೊಡನೆ ಸೊಸೆಯಂದಿರಿಂದ ಉಪಚರಿಸಿ ಪೂಜಿಸಲ್ಪಟ್ಟು ಭೋಜನ ಮಾಡಿದಳು.

15009006a ಕೃತಾಹಾರಂ ಕೃತಾಹಾರಾಃ ಸರ್ವೇ ತೇ ವಿದುರಾದಯಃ|

15009006c ಪಾಂಡವಾಶ್ಚ ಕುರುಶ್ರೇಷ್ಠಮುಪಾತಿಷ್ಠಂತ ತಂ ನೃಪಮ್||

ಧೃತರಾಷ್ಟ್ರನು ಊಟಮಾಡಿದ ನಂತರ ವಿದುರಾದಿಗಳು ಮತ್ತು ಪಾಂಡವರೂ ಕೂಡ ಊಟಮಾಡಿ ಕುರುಶ್ರೇಷ್ಠ ನೃಪನ ಬಳಿಯಲ್ಲಿ ಕುಳಿತುಕೊಂಡರು.

15009007a ತತೋಽಬ್ರವೀನ್ಮಹಾರಾಜ ಕುಂತೀಪುತ್ರಮುಪಹ್ವರೇ|

15009007c ನಿಷಣ್ಣಂ ಪಾಣಿನಾ ಪೃಷ್ಠೇ ಸಂಸ್ಪೃಶನ್ನಂಬಿಕಾಸುತಃ||

ಆಗ ಮಹಾರಾಜ ಅಂಬಿಕಾಸುತನು ಸಮೀಪದಲ್ಲಿಯೇ ಕುಳಿತಿದ್ದ ಕುಂತೀಪುತ್ರ ಯುಧಿಷ್ಠಿರನ ಬೆನ್ನನ್ನು ಕೈಯಿಂದ ಸವರುತ್ತಾ ಹೇಳಿದನು:

15009008a ಅಪ್ರಮಾದಸ್ತ್ವಯಾ ಕಾರ್ಯಃ ಸರ್ವಥಾ ಕುರುನಂದನ|

15009008c ಅಷ್ಟಾಂಗೇ ರಾಜಶಾರ್ದೂಲ ರಾಜ್ಯೇ ಧರ್ಮಪುರಸ್ಕೃತೇ||

“ಕುರುನಂದನ! ರಾಜಶಾರ್ದೂಲ! ಅಷ್ಟಾಂಗಯುಕ್ತವಾದ[1] ಮತ್ತು ಧರ್ಮಪುರಸ್ಕೃತವಾದ ರಾಜ್ಯದಲ್ಲಿ ನೀನೂ ಯಾವಾಗಲೂ ಜಾಗರೂಕನಾಗಿರಬೇಕು.

15009009a ತತ್ತು ಶಕ್ಯಂ ಯಥಾ ತಾತ ರಕ್ಷಿತುಂ ಪಾಂಡುನಂದನ|

15009009c ರಾಜ್ಯಂ ಧರ್ಮಂ ಚ ಕೌಂತೇಯ ವಿದ್ವಾನಸಿ ನಿಬೋಧ ತತ್||

ಮಗೂ ಪಾಂಡುನಂದನ! ಕೌಂತೇಯ! ನೀನು ರಾಜ್ಯಧರ್ಮವನ್ನು ತಿಳಿದಿರುವೆ. ಆದರೂ ರಾಜ್ಯವನ್ನು ಹೇಗೆ ರಕ್ಷಿಸಲು ಶಕ್ಯ ಎನ್ನುವುದನ್ನು ಕೇಳು.

15009010a ವಿದ್ಯಾವೃದ್ಧಾನ್ಸದೈವ ತ್ವಮುಪಾಸೀಥಾ ಯುಧಿಷ್ಠಿರ|

15009010c ಶೃಣುಯಾಸ್ತೇ ಚ ಯದ್ಬ್ರೂಯುಃ ಕುರ್ಯಾಶ್ಚೈವಾವಿಚಾರಯನ್||

ವಿದ್ಯೆಯಿಂದ ವೃದ್ಧರಾದವರನ್ನು ನೀನು ಸದಾ ಉಪಾಸಿಸುತ್ತಿರಬೇಕು. ಅವರು ಹೇಳುವುದನ್ನು ಕೇಳಬೇಕು ಮತ್ತು ವಿಚಾರಮಾಡದೇ ಅವರು ಹೇಳಿದಂತೆ ಮಾಡಬೇಕು.

15009011a ಪ್ರಾತರುತ್ಥಾಯ ತಾನ್ರಾಜನ್ಪೂಜಯಿತ್ವಾ ಯಥಾವಿಧಿ|

15009011c ಕೃತ್ಯಕಾಲೇ ಸಮುತ್ಪನ್ನೇ ಪೃಚ್ಚೇಥಾಃ ಕಾರ್ಯಮಾತ್ಮನಃ||

ರಾಜನ್! ಪ್ರಾತಃಕಾಲದಲ್ಲಿ ಎದ್ದು, ಯಥಾವಿಧಿಯಾಗಿ ಅವರನ್ನು ಪೂಜಿಸಿ, ರಾಜಕಾರ್ಯದ ಸಮಯದಲ್ಲಿ ನಿನ್ನ ಕಾರ್ಯಗಳ ಕುರಿತು ಅವರನ್ನು ಪ್ರಶ್ನಿಸಬೇಕು.

15009012a ತೇ ತು ಸಂಮಾನಿತಾ ರಾಜಂಸ್ತ್ವಯಾ ರಾಜ್ಯಹಿತಾರ್ಥಿನಾ|

15009012c ಪ್ರವಕ್ಷ್ಯಂತಿ ಹಿತಂ ತಾತ ಸರ್ವಂ ಕೌರವನಂದನ||

ರಾಜನ್! ಮಗೂ! ಕೌರವನಂದನ! ನಿನ್ನಿಂದ ಸಮ್ಮಾನಿತರಾದ ಆ ರಾಜ್ಯಹಿತಾರ್ಥಿಗಳು ನಿನಗೆ ಹಿತವಾದವುಗಳನ್ನೇ ಹೇಳುತ್ತಾರೆ.

15009013a ಇಂದ್ರಿಯಾಣಿ ಚ ಸರ್ವಾಣಿ ವಾಜಿವತ್ಪರಿಪಾಲಯ|

15009013c ಹಿತಾಯ ವೈ ಭವಿಷ್ಯಂತಿ ರಕ್ಷಿತಂ ದ್ರವಿಣಂ ಯಥಾ||

ಸಾರಥಿಯು ಕುದುರೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಇಂದ್ರಿಯಗಳೆಲ್ಲವನ್ನೂ ಹತೋಟಿಯಲ್ಲಿಕೊಂಡು ರಕ್ಷಿಸು. ರಕ್ಷಿಸಲ್ಪಟ್ಟ ಸಂಪತ್ತಿನಂತೆ ಭವಿಷ್ಯದಲ್ಲಿ ಇಂದ್ರಿಯಗಳೂ ನಿನ್ನ ಹಿತಕ್ಕಾಗಿಯೇ ಬರುತ್ತವೆ.

15009014a ಅಮಾತ್ಯಾನುಪಧಾತೀತಾನ್ಪಿತೃಪೈತಾಮಹಾನ್ಶುಚೀನ್|

15009014c ದಾಂತಾನ್ಕರ್ಮಸು ಸರ್ವೇಷು ಮುಖ್ಯಾನ್ಮುಖ್ಯೇಷು ಯೋಜಯೇಃ||

ಎಲ್ಲ ಮುಖ್ಯ ಕರ್ಮಗಳಲ್ಲಿ ವಂಚನೆಯಿಲ್ಲದೇ ಕೆಲಸಮಾಡುವ, ಪಿತೃ-ಪಿತಾಮಹರ ಕಾಲದಿಂದ ವಂಶಪಾರಂಪರ್ಯವಾಗಿ ಕೆಲಸಮಾಡಿಕೊಂಡು ಬಂದಿರುವ, ಶುದ್ಧಾಂತಃಕರಣರಾದ, ಜಿತೇಂದ್ರಿಯರಾದ ಮುಖ್ಯರನ್ನು ತೊಡಗಿಸಿಕೋ!

15009015a ಚಾರಯೇಥಾಶ್ಚ ಸತತಂ ಚಾರೈರವಿದಿತೈಃ ಪರಾನ್|

15009015c ಪರೀಕ್ಷಿತೈರ್ಬಹುವಿಧಂ ಸ್ವರಾಷ್ಟ್ರೇಷು ಪರೇಷು ಚ||

ಬಹುವಿಧವಾಗಿ ಪರೀಕ್ಷಿಸಲ್ಪಟ್ಟ ಚಾರರಿಂದ ಸತತವೂ ನಿನ್ನ ಮತ್ತು ಪರರ ರಾಷ್ಟ್ರಗಳಲ್ಲಿ ನಡೆಯುವ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಾ ಇರು. ಆದರೆ ನಿನ್ನ ವಿಷಯಗಳು ಮಾತ್ರ ಶತ್ರುಗಳಿಗೆ ತಿಳಿಯಬಾರದು.

15009016a ಪುರಂ ಚ ತೇ ಸುಗುಪ್ತಂ ಸ್ಯಾದ್ದೃಢಪ್ರಾಕಾರತೋರಣಮ್|

15009016c ಅಟ್ಟಾಟ್ಟಾಲಕಸಂಬಾಧಂ ಷಟ್ಪಥಂ ಸರ್ವತೋದಿಶಮ್||

ನಿನ್ನ ನಗರವು ಸುರಕ್ಷಿತವಾಗಿರಬೇಕು. ಪ್ರಾಕಾರಗಳೂ ಮುಖ್ಯದ್ವಾರಗಳೂ ಸುದೃಢವಾಗಿರಬೇಕು. ಆರು ವಿಧದ ದುರ್ಗಗಳು ಎಲ್ಲ ದಿಕ್ಕುಗಳಲ್ಲಿಯೂ ಇರಬೇಕು.

15009017a ತಸ್ಯ ದ್ವಾರಾಣಿ ಕಾರ್ಯಾಣಿ ಪರ್ಯಾಪ್ತಾನಿ ಬೃಹಂತಿ ಚ|

15009017c ಸರ್ವತಃ ಸುವಿಭಕ್ತಾನಿ ಯಂತ್ರೈರಾರಕ್ಷಿತಾನಿ ಚ||

ನಗರದ ದ್ವಾರಗಳು ಸಾಕಷ್ಟು ವಿಶಾಲವಾಗಿಯೂ ದೊಡ್ಡದಾಗಿಯೂ ಇರಬೇಕು. ಅವುಗಳನ್ನು ಎಲ್ಲಕಡೆಗಳಲ್ಲಿ ಸರಿಯಾಗಿ ಅಳೆದು ಕಟ್ಟಿರಬೇಕು ಮತ್ತು ಅವುಗಳ ರಕ್ಷಣೆಗಳಿಗೆ ಯಂತ್ರಗಳನ್ನಿರಿಸಿರಬೇಕು.

15009018a ಪುರುಷೈರಲಮರ್ಥಜ್ಞೈರ್ವಿದಿತೈಃ ಕುಲಶೀಲತಃ|

15009018c ಆತ್ಮಾ ಚ ರಕ್ಷ್ಯಃ ಸತತಂ ಭೋಜನಾದಿಷು ಭಾರತ||

15009019a ವಿಹಾರಾಹಾರಕಾಲೇಷು ಮಾಲ್ಯಶಯ್ಯಾಸನೇಷು ಚ|

ಭಾರತ! ಭೋಜನಾದಿಗಳ, ವಿಹಾರ-ಆಹಾರಗಳ, ಮಾಲೆಗಳನ್ನು ಧರಿಸುವ ಮತ್ತು ಮಲಗುವ ಸಮಯಗಳಲ್ಲಿ ಸತತವೂ ಕುಲಶೀಲಗಳುಳ್ಳ, ಅರ್ಥಜ್ಞರಾದ, ತಿಳಿದುಕೊಂಡಿರುವ ಪುರುಷರನ್ನು ನಿನ್ನ ರಕ್ಷಣೆಗೆ ಇರಿಸಿಕೊಂಡಿರಬೇಕು.

15009019c ಸ್ತ್ರಿಯಶ್ಚ ತೇ ಸುಗುಪ್ತಾಃ ಸ್ಯುರ್ವೃದ್ಧೈರಾಪ್ತೈರಧಿಷ್ಠಿತಾಃ|

15009019e ಶೀಲವದ್ಭಿಃ ಕುಲೀನೈಶ್ಚ ವಿದ್ವದ್ಭಿಶ್ಚ ಯುಧಿಷ್ಠಿರ||

ಯುಧಿಷ್ಠಿರ! ಕುಲೀನರ, ಶೀಲವಂತರ, ವಿದ್ವಾಂಸರ, ವಿಶ್ವಾಸಪಾತ್ರರ ಮತ್ತು ವೃದ್ಧರ ಮೇಲ್ವಿಚಾರಣೆಯಲ್ಲಿ ಅಂತಃಪುರದ ಸ್ತ್ರೀಯರನ್ನು ಎಚ್ಚರದಿಂದ ರಕ್ಷಿಸಬೇಕು.

15009020a ಮಂತ್ರಿಣಶ್ಚೈವ ಕುರ್ವೀಥಾ ದ್ವಿಜಾನ್ವಿದ್ಯಾವಿಶಾರದಾನ್|

15009020c ವಿನೀತಾಂಶ್ಚ ಕುಲೀನಾಂಶ್ಚ ಧರ್ಮಾರ್ಥಕುಶಲಾನೃಜೂನ್||

ವಿದ್ಯಾವಿಶಾರದರೂ, ವಿನೀತರೂ, ಕುಲೀನರೂ, ಧರ್ಮಾರ್ಥಕುಶಲರೂ, ಸತ್ಯವಂತರೂ ಆದ ದ್ವಿಜರನ್ನು ಮಂತ್ರಿಗಳನ್ನಾಗಿ ಮಾಡಿಕೊಳ್ಳಬೇಕು.

15009021a ತೈಃ ಸಾರ್ಧಂ ಮಂತ್ರಯೇಥಾಸ್ತ್ವಂ ನಾತ್ಯರ್ಥಂ ಬಹುಭಿಃ ಸಹ|

15009021c ಸಮಸ್ತೈರಪಿ ಚ ವ್ಯಸ್ತೈರ್ವ್ಯಪದೇಶೇನ ಕೇನ ಚಿತ್||

15009022a ಸುಸಂವೃತಂ ಮಂತ್ರಗೃಹಂ ಸ್ಥಲಂ ಚಾರುಹ್ಯ ಮಂತ್ರಯೇಃ|

15009022c ಅರಣ್ಯೇ ನಿಃಶಲಾಕೇ ವಾ ನ ಚ ರಾತ್ರೌ ಕಥಂ ಚನ||

ಅವರೊಂದಿಗೆ ಮಂತ್ರಾಲೋಚನೆಯನ್ನು ಮಾಡಬೇಕು. ಆದರೆ ಅನೇಕರೊಂದಿಗೆ ಮತ್ತು ಬಹಳ ಹೊತ್ತಿನವರೆಗೆ ಮಂತ್ರಾಲೋಚನೆ ಮಾಡಕೂಡದು. ಎಲ್ಲ ಕಡೆ ಆವರಣವಿರುವ ಮಂತ್ರಗೃಹದಲ್ಲಿಯಾಗಲೀ ಅಥವಾ ಬಯಲಿನಲ್ಲಿಯಾಗಲೀ ಮಂತ್ರಾಲೋಚನೆಮಾಡಬೇಕು. ಹುಲ್ಲು-ಮುಳ್ಳುಗಳಿಲ್ಲದ ಅರಣ್ಯದಲ್ಲಿ ಕೂಡ ಮಂತ್ರಾಲೋಚನೆ ಮಾಡಬಹುದು. ಆದರ ಅಲ್ಲಿ ರಾತ್ರಿ ವೇಳೆ ಮಂತ್ರಾಲೋಚನೆಮಾಡಬಾರದು.

15009023a ವಾನರಾಃ ಪಕ್ಷಿಣಶ್ಚೈವ ಯೇ ಮನುಷ್ಯಾನುಕಾರಿಣಃ|

15009023c ಸರ್ವೇ ಮಂತ್ರಗೃಹೇ ವರ್ಜ್ಯಾ ಯೇ ಚಾಪಿ ಜಡಪಂಗುಕಾಃ||

ಮನುಷ್ಯರೊಂದಿಗೆ ಕಪಿಗಳನ್ನಾಗಲೀ, ಪಕ್ಷಿಗಳನ್ನಾಗಲೀ, ಮೂರ್ಖರನ್ನಾಗಲೀ, ಮತ್ತು ಹೆಳವರನ್ನಾಗಲೀ ಮಂತ್ರಾಲೋಚನಾ ಸ್ಥಳಕ್ಕೆ ಕರೆತರಬಾರದು.

15009024a ಮಂತ್ರಭೇದೇ ಹಿ ಯೇ ದೋಷಾ ಭವಂತಿ ಪೃಥಿವೀಕ್ಷಿತಾಮ್|

15009024c ನ ತೇ ಶಕ್ಯಾಃ ಸಮಾಧಾತುಂ ಕಥಂ ಚಿದಿತಿ ಮೇ ಮತಿಃ||

ಒಂದುವೇಳೆ ರಾಜನ ಗುಪ್ತವಿಷಯಗಳು ಇತರರಿಗೆ ತಿಳಿಯಿತೆಂದಾದರೆ ಉಂಟಾಗುವ ದೋಷಗಳನ್ನು ಸರಿಪಡಿಸಲು ಸಾಧ್ಯವೇ ಇಲ್ಲವೆಂದು ನನಗನ್ನಿಸುತ್ತದೆ.

15009025a ದೋಷಾಂಶ್ಚ ಮಂತ್ರಭೇದೇಷು ಬ್ರೂಯಾಸ್ತ್ವಂ ಮಂತ್ರಿಮಂಡಲೇ|

15009025c ಅಭೇದೇ ಚ ಗುಣಾನ್ರಾಜನ್ಪುನಃ ಪುನರರಿಂದಮ||

ರಾಜನ್! ಅರಿಂದಮ! ಆದುದರಿಂದ ಮಂತ್ರಭೇದದಿಂದ ಆಗುವ ಅನರ್ಥಗಳನ್ನೂ ಮಂತ್ರಗೋಪನದಿಂದ ಆಗುವ ಲಾಭಗಳನ್ನೂ ಪುನಃ ಪುನಃ ವಿಚಾರಿಸುತ್ತಿರಬೇಕು.

15009026a ಪೌರಜಾನಪದಾನಾಂ ಚ ಶೌಚಾಶೌಚಂ ಯುಧಿಷ್ಠಿರ|

15009026c ಯಥಾ ಸ್ಯಾದ್ವಿದಿತಂ ರಾಜಂಸ್ತಥಾ ಕಾರ್ಯಮರಿಂದಮ||

ಯುಧಿಷ್ಠಿರ! ಅರಿಂದಮ! ರಾಜನ್! ಪೌರ ಮತ್ತು ಗ್ರಾಮೀಣ ಜನರ ಒಳ್ಳೆಯ ಮತ್ತು ಕೆಟ್ಟ ಭಾವನೆಗಳ್ಯಾವುವು ಎಂದು ತಿಳಿದು ಕಾರ್ಯಗಳನ್ನು ಕೈಗೊಳ್ಳಬೇಕು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರೋಪದೇಶೇ ನವಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರೋಪದೇಶ ಎನ್ನುವ ಒಂಭತ್ತನೇ ಅಧ್ಯಾಯವು.

[1] ಅರಸು, ಮಂತ್ರಿ, ಸ್ನೇಹಿತ, ಬೊಕ್ಕಸ, ನಾಡು, ದುರ್ಗ, ಸೇನೆ ಮತ್ತು ಪ್ರಜೆಗಳು ರಾಜ್ಯದ ಅಷ್ಟಾಂಗಗಳು.

Comments are closed.