ಆಶ್ರಮವಾಸಿಕ ಪರ್ವ: ನಾರದಾಗಮನ ಪರ್ವ
೪೬
ಯುಧಿಷ್ಠಿರನ ಶೋಕ (೧-೨೦).
15046001 ಯುಧಿಷ್ಠಿರ ಉವಾಚ|
15046001a ತಥಾ ಮಹಾತ್ಮನಸ್ತಸ್ಯ ತಪಸ್ಯುಗ್ರೇ ಚ ವರ್ತತಃ|
15046001c ಅನಾಥಸ್ಯೇವ ನಿಧನಂ ತಿಷ್ಠತ್ಸ್ವಸ್ಮಾಸು ಬಂಧುಷು||
ಯುಧಿಷ್ಠಿರನು ಹೇಳಿದನು: "ಬಂಧುಗಳಾದ ನಾವು ಇದ್ದರೂ ಉಗ್ರತಪಸ್ಸಿನಲ್ಲಿ ನಿರತನಾಗಿದ್ದ ಆ ಮಹಾತ್ಮನ ನಿಧನವು ಅನಾಥನ ರೀತಿಯಲ್ಲಿ ಆಗಿಹೋಯಿತು!
15046002a ದುರ್ವಿಜ್ಞೇಯಾ ಹಿ ಗತಯಃ ಪುರುಷಾಣಾಂ ಮತಾ ಮಮ|
15046002c ಯತ್ರ ವೈಚಿತ್ರವೀರ್ಯೋಽಸೌ ದಗ್ಧ ಏವಂ ದವಾಗ್ನಿನಾ||
ವೈಚಿತ್ರವೀರ್ಯನು ಈ ರೀತಿ ಕಾಡ್ಗಿಚ್ಚಿನಲ್ಲಿ ಸುಟ್ಟುಹೋದನೆಂದರೆ ಮನುಷ್ಯನ ಗತಿಯನ್ನು ತಿಳಿದುಕೊಳ್ಳುವುದು ಕಷ್ಟಸಾಧ್ಯ ಎಂದು ನನ್ನ ಮತ.
15046003a ಯಸ್ಯ ಪುತ್ರಶತಂ ಶ್ರೀಮದಭವದ್ಬಾಹುಶಾಲಿನಃ|
15046003c ನಾಗಾಯುತಬಲೋ ರಾಜಾ ಸ ದಗ್ಧೋ ಹಿ ದವಾಗ್ನಿನಾ||
ನೂರು ಮಕ್ಕಳನ್ನು ಹೊಂದಿದ್ದ, ಸ್ವಯಂ ತಾನೇ ಹತ್ತು ಸಾವಿರ ಆನೆಗಳ ಬಲವುಳ್ಳವನಾಗಿದ್ದ ಆ ಶ್ರೀಮಾನ್ ರಾಜನು ಕಾಡ್ಗಿಚ್ಚಿನಿಂದ ಸುಟ್ಟುಹೋದನು!
15046004a ಯಂ ಪುರಾ ಪರ್ಯವೀಜಂತ ತಾಲವೃಂತೈರ್ವರಸ್ತ್ರಿಯಃ|
15046004c ತಂ ಗೃಧ್ರಾಃ ಪರ್ಯವೀಜಂತ ದಾವಾಗ್ನಿಪರಿಕಾಲಿತಮ್||
ಹಿಂದೆ ಯಾರಿಗೆ ಸುಂದರ ಸ್ತ್ರೀಯರು ತಾಳೇಗರಿಯ ಬೀಸಣಿಗೆಗಳಿಂದ ಗಾಳಿಯನ್ನು ಬೀಸುತ್ತಿದ್ದರೋ ಅವನು ಈಗ ಕಾಡ್ಗಿಚ್ಚಿಗೆ ಸಿಲುಕಿ ರಣಹದ್ದುಗಳು ರೆಕ್ಕೆಗಳಿಂದ ಗಾಳಿಯನ್ನು ಬೀಸುವಂತೆ ಆಗಿಹೋಯಿತು!
15046005a ಸೂತಮಾಗಧಸಂಘೈಶ್ಚ ಶಯಾನೋ ಯಃ ಪ್ರಬೋಧ್ಯತೇ|
15046005c ಧರಣ್ಯಾಂ ಸ ನೃಪಃ ಶೇತೇ ಪಾಪಸ್ಯ ಮಮ ಕರ್ಮಭಿಃ||
ಮಲಗಿದ್ದಾಗ ಯಾವ ಪ್ರಭುವನ್ನು ಸೂತ-ಮಾಗಧ ಗುಂಪುಗಳು ಎಬ್ಬಿಸುತ್ತಿದ್ದವೋ ಆ ನೃಪತಿಯು ನನ್ನ ಪಾಪಕರ್ಮಗಳಿಂದಾಗಿ ನೆಲದಮೇಲೆ ಮಲಗಿಕೊಳ್ಳುವಂತಾಯಿತು!
15046006a ನ ತು ಶೋಚಾಮಿ ಗಾಂಧಾರೀಂ ಹತಪುತ್ರಾಂ ಯಶಸ್ವಿನೀಮ್|
15046006c ಪತಿಲೋಕಮನುಪ್ರಾಪ್ತಾಂ ತಥಾ ಭರ್ತೃವ್ರತೇ ಸ್ಥಿತಾಮ್||
ಪುತ್ರರನ್ನು ಕಳೆದುಕೊಂಡ ಯಶಸ್ವಿನೀ ಗಾಂಧಾರಿಯು ಕುರಿತು ನಾನು ಶೋಕಿಸುತ್ತಿಲ್ಲ. ಪತಿವ್ರತೆಯಾಗಿದ್ದ ಅವಳು ಪತಿಲೋಕವನ್ನು ಪಡೆದುಕೊಂಡಿದ್ದಾಳೆ.
15046007a ಪೃಥಾಮೇವ ತು ಶೋಚಾಮಿ ಯಾ ಪುತ್ರೈಶ್ವರ್ಯಮೃದ್ಧಿಮತ್|
15046007c ಉತ್ಸೃಜ್ಯ ಸುಮಹದ್ದೀಪ್ತಂ ವನವಾಸಮರೋಚಯತ್||
ಆದರೆ ಸಮೃದ್ಧವಾದ ಮತ್ತು ಉಜ್ವಲವಾದ ಪುತ್ರೈಶ್ವರವನ್ನು ತ್ಯಜಿಸಿ ವನವಾಸವನ್ನು ಬಯಸಿದ ಪೃಥೆಯ ಕುರಿತು ದುಃಖಿಸುತ್ತಿದ್ದೇನೆ.
15046008a ಧಿಗ್ರಾಜ್ಯಮಿದಮಸ್ಮಾಕಂ ಧಿಗ್ಬಲಂ ಧಿಕ್ಪರಾಕ್ರಮಮ್|
15046008c ಕ್ಷತ್ರಧರ್ಮಂ ಚ ಧಿಗ್ಯಸ್ಮಾನ್ಮೃತಾ ಜೀವಾಮಹೇ ವಯಮ್||
ನಮ್ಮ ಈ ರಾಜ್ಯಕ್ಕೆ ಧಿಕ್ಕಾರ! ಈ ಬಲಕ್ಕೆ ಧಿಕ್ಕಾರ! ಪರಾಕ್ರಮಕ್ಕೆ ಧಿಕ್ಕಾರ! ಕ್ಷತ್ರಧರ್ಮಕ್ಕೆ ಧಿಕ್ಕಾರ! ಜೀವಿತರಾಗಿರುವ ನಾವೂ ಮೃತರಾದಂತೆಯೇ!
15046009a ಸುಸೂಕ್ಷ್ಮಾ ಕಿಲ ಕಾಲಸ್ಯ ಗತಿರ್ದ್ವಿಜವರೋತ್ತಮ|
15046009c ಯತ್ಸಮುತ್ಸೃಜ್ಯ ರಾಜ್ಯಂ ಸಾ ವನವಾಸಮರೋಚಯತ್||
ದ್ವಿಜವರೋತ್ತಮ! ರಾಜ್ಯವನ್ನು ತೊರೆದು ವನವಾಸವನ್ನು ಆಕೆಯು ಬಯಸಿದಳೆಂದರೆ ಕಾಲದ ಗತಿಯು ಅತ್ಯಂತ ಸೂಕ್ಷ್ಮವಾದುದಷ್ಟೇ!
15046010a ಯುಧಿಷ್ಠಿರಸ್ಯ ಜನನೀ ಭೀಮಸ್ಯ ವಿಜಯಸ್ಯ ಚ|
15046010c ಅನಾಥವತ್ಕಥಂ ದಗ್ಧಾ ಇತಿ ಮುಹ್ಯಾಮಿ ಚಿಂತಯನ್||
ಯುಧಿಷ್ಠಿರನ, ಭೀಮನ ಮತ್ತು ವಿಜಯನ ಜನನಿಯು ಅನಾಥೆಯಂತೆ ಹೇಗೆ ಸುಟ್ಟುಹೋದಳು ಎಂದು ಚಿಂತಿಸಿಯೇ ನಾನು ಮೂರ್ಛೆಗೊಳ್ಳುತ್ತಿದ್ದೇನೆ.
15046011a ವೃಥಾ ಸಂತೋಷಿತೋ ವಹ್ನಿಃ ಖಾಂಡವೇ ಸವ್ಯಸಾಚಿನಾ|
15046011c ಉಪಕಾರಮಜಾನನ್ಸ ಕೃತಘ್ನ ಇತಿ ಮೇ ಮತಿಃ||
ಖಾಂಡವದಲ್ಲಿ ಸವ್ಯಸಾಚಿಯು ಅಗ್ನಿಯನ್ನು ತೃಪ್ತಿಗೊಳಿಸಿದುದು ವ್ಯರ್ಥವಾಗಿ ಹೋಯಿತು. ಆ ಉಪಕಾರವನ್ನು ಸ್ಮರಿಸದೆಯೇ ಇದ್ದ ಅಗ್ನಿಯು ಕೃತಘ್ನನೆಂದು ನನಗನ್ನಿಸುತ್ತಿದೆ.
15046012a ಯತ್ರಾದಹತ್ಸ ಭಗವಾನ್ಮಾತರಂ ಸವ್ಯಸಾಚಿನಃ|
15046012c ಕೃತ್ವಾ ಯೋ ಬ್ರಾಹ್ಮಣಚ್ಚದ್ಮ ಭಿಕ್ಷಾರ್ಥೀ ಸಮುಪಾಗತಃ|
15046012e ಧಿಗಗ್ನಿಂ ಧಿಕ್ಚ ಪಾರ್ಥಸ್ಯ ವಿಶ್ರುತಾಂ ಸತ್ಯಸಂಧತಾಮ್||
ಬ್ರಾಹ್ಮಣನ ವೇಷಧರಿಸಿ ಭಿಕ್ಷಾರ್ಥಿಯಾಗಿ ಸವ್ಯಸಾಚಿಯ ಬಳಿಬಂದಿದ್ದ ಆ ಭಗವಂತನು ತಾಯಿಯನ್ನು ಸುಟ್ಟನೆಂದರೆ ಆ ಅಗ್ನಿಗೆ ಧಿಕ್ಕಾರ! ಪಾರ್ಥನ ವಿಶ್ರುತ ಸತ್ಯಸಂಧತೆಗೂ ಧಿಕ್ಕಾರ!
15046013a ಇದಂ ಕಷ್ಟತರಂ ಚಾನ್ಯದ್ಭಗವನ್ಪ್ರತಿಭಾತಿ ಮೇ|
15046013c ವೃಥಾಗ್ನಿನಾ ಸಮಾಯೋಗೋ ಯದಭೂತ್ಪೃಥಿವೀಪತೇಃ||
ಭಗವನ್! ಪೃಥಿವೀಪತಿಯು ವೃಥಾ ಅಗ್ನಿಯಲ್ಲಿ ಸಮಾವೇಶನಾದನೆಂದರೆ ಇದಕ್ಕಿಂತಲೂ ಕಷ್ಟತರವಾದುದು ಬೇರೆ ಏನೂ ನನಗೆ ತೋಚುತ್ತಿಲ್ಲ.
15046014a ತಥಾ ತಪಸ್ವಿನಸ್ತಸ್ಯ ರಾಜರ್ಷೇಃ ಕೌರವಸ್ಯ ಹ|
15046014c ಕಥಮೇವಂವಿಧೋ ಮೃತ್ಯುಃ ಪ್ರಶಾಸ್ಯ ಪೃಥಿವೀಮಿಮಾಮ್||
ತಪಸ್ವಿಯೂ ರಾಜರ್ಷಿಯೂ ಆಗಿದ್ದುಕೊಂಡು ಈ ಭೂಮಿಯನ್ನೇ ಆಳಿದ ಆ ಕೌರವನಿಗೆ ಈ ವಿಧದ ಮೃತ್ಯುವು ಹೇಗಾಯಿತು?
15046015a ತಿಷ್ಠತ್ಸು ಮಂತ್ರಪೂತೇಷು ತಸ್ಯಾಗ್ನಿಷು ಮಹಾವನೇ|
15046015c ವೃಥಾಗ್ನಿನಾ ಸಮಾಯುಕ್ತೋ ನಿಷ್ಠಾಂ ಪ್ರಾಪ್ತಃ ಪಿತಾ ಮಮ||
ಮಂತ್ರಪೂತವಾದ ಅವನ ಮೂರು ಅಗ್ನಿಗಳು ಜೊತೆಯಲ್ಲಿದ್ದಿದ್ದರೂ ನನ್ನ ತಂದೆಯು ವೃಥಾ ಮಹಾವನದ ಕಾಡ್ಗಿಚ್ಚಿಗೆ ಸೇರಿ ನಿಧನ ಹೊಂದಿದನು!
15046016a ಮನ್ಯೇ ಪೃಥಾ ವೇಪಮಾನಾ ಕೃಶಾ ಧಮನಿಸಂತತಾ|
15046016c ಹಾ ತಾತ ಧರ್ಮರಾಜೇತಿ ಸಮಾಕ್ರಂದನ್ಮಹಾಭಯೇ||
ಕೃಶಳಾಗಿ ನರನಾಡಿಗಳನ್ನು ಮಾತ್ರವೇ ಹೊಂದಿದ್ದ ಪೃಥೆಯು ಮಹಾಭಯದಿಂದ "ಹಾ ಮಗೂ! ಹಾ ಧರ್ಮರಾಜ!" ಎಂದು ಕೂಗಿಕೊಂಡಿರಬಹುದೆಂದು ನನಗನ್ನಿಸುತ್ತಿದೆ.
15046017a ಭೀಮ ಪರ್ಯಾಪ್ನುಹಿ ಭಯಾದಿತಿ ಚೈವಾಭಿವಾಶತೀ|
15046017c ಸಮಂತತಃ ಪರಿಕ್ಷಿಪ್ತಾ ಮಾತಾ ಮೇಽಭೂದ್ದವಾಗ್ನಿನಾ||
"ಭೀಮ! ಕಾಪಾಡು!" ಎಂದು ಭಯದಿಂದ ಕೂಗಿಕೊಳ್ಳುತ್ತಾ ಅರಣ್ಯದಲ್ಲೆಲ್ಲಾ ಎದ್ದು-ಬಿದ್ದು ಒದ್ದಾಡುತ್ತಿದ್ದ ನನ್ನ ತಾಯಿಯನ್ನು ದಾವಾಗ್ನಿಯು ಸುಟ್ಟು ಭಸ್ಮಮಾಡಿರಬಹುದು!
15046018a ಸಹದೇವಃ ಪ್ರಿಯಸ್ತಸ್ಯಾಃ ಪುತ್ರೇಭ್ಯೋಽಧಿಕ ಏವ ತು|
15046018c ನ ಚೈನಾಂ ಮೋಕ್ಷಯಾಮಾಸ ವೀರೋ ಮಾದ್ರವತೀಸುತಃ||
ಅವಳಿಗೆ ಪ್ರಿಯನಾಗಿದ್ದ, ಪುತ್ರರಲ್ಲಿಯೇ ಅಧಿಕನಾಗಿದ್ದ ವೀರ ಮಾದ್ರವತೀಸುತ ಸಹದೇವನೂ ಕೂಡ ಅವಳನ್ನು ಆ ಆಪತ್ತಿನಿಂದ ಬಿಡಿಸಲಾಗಲಿಲ್ಲ!"
15046019a ತಚ್ಛೃತ್ವಾ ರುರುದುಃ ಸರ್ವೇ ಸಮಾಲಿಂಗ್ಯ ಪರಸ್ಪರಮ್|
15046019c ಪಾಂಡವಾಃ ಪಂಚ ದುಃಖಾರ್ತಾ ಭೂತಾನೀವ ಯುಗಕ್ಷಯೇ||
ಅವನ ಆ ಮಾತುಗಳನ್ನು ಕೇಳಿ ಪಂಚ ಪಾಂಡವರೆಲ್ಲರೂ ದುಃಖಾರ್ತರಾಗಿ ಪರಸ್ಪರರನ್ನು ಆಲಂಗಿಸಿಕೊಂಡು ಯುಗಕ್ಷಯದಲ್ಲಿ ಪೀಡೆಗೊಳಗಾಗುವ ಭೂತಗಳಂತೆ ಗೋಳಾಡಿದರು.
15046020a ತೇಷಾಂ ತು ಪುರುಷೇಂದ್ರಾಣಾಂ ರುದತಾಂ ರುದಿತಸ್ವನಃ|
15046020c ಪ್ರಾಸಾದಾಭೋಗಸಂರುದ್ಧೋ ಅನ್ವರೌತ್ಸೀತ್ಸ ರೋದಸೀ||
ಗಟ್ಟಿಯಾಗಿ ರೋದಿಸುತ್ತಿದ್ದ ಆ ಪುರುಷೇಂದ್ರರ ಅಳುವಿನ ಧ್ವನಿಯು ಪ್ರಾಸಾದದ ಆವರಣವೆಲ್ಲವನ್ನೂ ತುಂಬಿಕೊಂಡು ಹೊರಹೋಗಲಾರದೇ ಭೂಮ್ಯಂತರಿಕ್ಷಗಳಲ್ಲಿ ಪ್ರತಿಧ್ವನಿಸಿತು.
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ನಾರದಾಗಮನಪರ್ವಣಿ ಯುಧಿಷ್ಠಿರವಿಲಾಪೇ ಷಟ್ಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ನರದಾಗಮನಪರ್ವದಲ್ಲಿ ಯುಧಿಷ್ಠಿರವಿಲಾಪ ಎನ್ನುವ ನಲ್ವತ್ತಾರನೇ ಅಧ್ಯಾಯವು.