|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ
೩೬
“ನಿನ್ನ ಯಾವ ಕಾಮನೆಯನ್ನು ನಡೆಯಿಸಿಕೊಡಲಿ? ನಾನೀಗ ವರವನ್ನು ಕೊಡಲು ಉತ್ಸುಕನಾಗಿದ್ದೇನೆ. ನನ್ನ ತಪಸ್ಸಿನ ಬಲವನ್ನು ನೋಡು!” ಎಂದು ವ್ಯಾಸನು ಧೃತರಾಷ್ಟ್ರನಿಗೆ ಹೇಳಿದುದು (೧-೨೧). ಧೃತರಾಷ್ಟ್ರನು ತನ್ನ ಸಂಶಯ-ದುಃಖಗಳನ್ನು ಹೇಳಿಕೊಂಡಿದುದು (೨೨-೩೩).
15036001 ಜನಮೇಜಯ ಉವಾಚ|
15036001a ವನವಾಸಂ ಗತೇ ವಿಪ್ರ ಧೃತರಾಷ್ಟ್ರೇ ಮಹೀಪತೌ|
15036001c ಸಭಾರ್ಯೇ ನೃಪಶಾರ್ದೂಲೇ ವಧ್ವಾ ಕುಂತ್ಯಾ ಸಮನ್ವಿತೇ||
15036002a ವಿದುರೇ ಚಾಪಿ ಸಂಸಿದ್ಧೇ ಧರ್ಮರಾಜಂ ವ್ಯಪಾಶ್ರಿತೇ|
15036002c ವಸತ್ಸು ಪಾಂಡುಪುತ್ರೇಷು ಸರ್ವೇಷ್ವಾಶ್ರಮಮಂಡಲೇ||
15036003a ಯತ್ತದಾಶ್ಚರ್ಯಮಿತಿ ವೈ ಕರಿಷ್ಯಾಮೀತ್ಯುವಾಚ ಹ|
15036003c ವ್ಯಾಸಃ ಪರಮತೇಜಸ್ವೀ ಮಹರ್ಷಿಸ್ತದ್ವದಸ್ವ ಮೇ||
ಜನಮೇಜಯನು ಹೇಳಿದನು: "ವಿಪ್ರ! ನೃಪಶಾರ್ದೂಲ ಮಹೀಪತಿ ಧೃತರಾಷ್ಟ್ರನು ಭಾರ್ಯೆ ಮತ್ತು ಸೊಸೆ ಕೊಂತಿಯೊಡನೆ ವನವಾಸಕ್ಕೆ ಹೋದಾಗ, ವಿದುರನೂ ಕೂಡ ಸಿದ್ಧಿಯನ್ನು ಪಡೆದು ಧರ್ಮರಾಜನಲ್ಲಿ ಸೇರಿಕೊಂಡ ನಂತರ, ಪಾಂಡುಪುತ್ರರೆಲ್ಲರೂ ಆ ಆಶ್ರಮ ಮಂಡಲದಲ್ಲಿ ವಾಸಿಸುತ್ತಿದ್ದಾಗ ಮಹರ್ಷಿ ಪರಮ ತೇಜಸ್ವಿ ವ್ಯಾಸನು ಆಶ್ಚರ್ಯವೊಂದನ್ನು ಮಾಡಿತೋರಿಸುತ್ತೇನೆ ಎಂದು ಹೇಳಿದುದರ ಕುರಿತು ನನಗೆ ಹೇಳು.
15036004a ವನವಾಸೇ ಚ ಕೌರವ್ಯಃ ಕಿಯಂತಂ ಕಾಲಮಚ್ಯುತಃ|
15036004c ಯುಧಿಷ್ಠಿರೋ ನರಪತಿರ್ನ್ಯವಸತ್ಸಜನೋ ದ್ವಿಜ||
ದ್ವಿಜ! ಅಚ್ಯುತ ಕೌರವ್ಯ ನರಪತಿ ಯುಧಿಷ್ಠಿರನು ಸಜನರೊಂದಿಗೆ ಎಷ್ಟು ಸಮಯ ಆ ವನದಲ್ಲಿ ವಾಸಮಾಡಿಕೊಂಡಿದ್ದನು?
15036005a ಕಿಮಾಹಾರಾಶ್ಚ ತೇ ತತ್ರ ಸಸೈನ್ಯಾ ನ್ಯವಸನ್ಪ್ರಭೋ|
15036005c ಸಾಂತಃಪುರಾ ಮಹಾತ್ಮಾನ ಇತಿ ತದ್ಬ್ರೂಹಿ ಮೇಽನಘ||
ಪ್ರಭೋ! ಅನಘ! ಸೇನೆಗಳೊಂದಿಗೆ ಅಲ್ಲಿ ವಾಸಿಸುತ್ತಿದ್ದ ಆ ಮಹಾತ್ಮ ಮತ್ತು ಅಂತಃಪುರದ ಸ್ತ್ರೀಯರು ಆಹಾರಕ್ಕೆ ಏನು ಮಾಡುತ್ತಿದ್ದರು? ಅದನ್ನು ನನಗೆ ಹೇಳು."
15036006 ವೈಶಂಪಾಯನ ಉವಾಚ|
15036006a ತೇಽನುಜ್ಞಾತಾಸ್ತದಾ ರಾಜನ್ಕುರುರಾಜೇನ ಪಾಂಡವಾಃ|
15036006c ವಿವಿಧಾನ್ಯನ್ನಪಾನಾನಿ ವಿಶ್ರಾಮ್ಯಾನುಭವಂತಿ ತೇ||
ವೈಶಂಪಾಯನನು ಹೇಳಿದನು: "ರಾಜನ್! ಕುರುರಾಜ ಧೃತರಾಷ್ಟ್ರನ ಅನುಜ್ಞೆ ಪಡೆದು ಪಾಂಡವರು ವಿವಿಧ ಅನ್ನ-ಪಾನಗಳನ್ನು ಸೇವಿಸುತ್ತಾ ವಿಶ್ರಮಿಸುತ್ತಿದ್ದರು.
15036007a ಮಾಸಮೇಕಂ ವಿಜಹ್ರುಸ್ತೇ ಸಸೈನ್ಯಾಂತಃಪುರಾ ವನೇ|
15036007c ಅಥ ತತ್ರಾಗಮದ್ವ್ಯಾಸೋ ಯಥೋಕ್ತಂ ತೇ ಮಯಾನಘ||
ಅನಘ! ಹೀಗೆ ಅವರು ವನದಲ್ಲಿ ಸೈನ್ಯ-ಸ್ತ್ರೀಯರೊಂದಿಗೆ ಒಂದು ತಿಂಗಳು ವಾಸಿಸುತ್ತಿರಲು ಅಲ್ಲಿಗೆ ನಾನು ಮೊದಲೇ ಹೇಳಿದಂತೆ ವ್ಯಾಸನು ಆಗಮಿಸಿದನು.
15036008a ತಥಾ ತು ತೇಷಾಂ ಸರ್ವೇಷಾಂ ಕಥಾಭಿರ್ನೃಪಸಂನಿಧೌ|
15036008c ವ್ಯಾಸಮನ್ವಾಸತಾಂ ರಾಜನ್ನಾಜಗ್ಮುರ್ಮುನಯೋಽಪರೇ||
15036009a ನಾರದಃ ಪರ್ವತಶ್ಚೈವ ದೇವಲಶ್ಚ ಮಹಾತಪಾಃ|
15036009c ವಿಶ್ವಾವಸುಸ್ತುಂಬುರುಶ್ಚ ಚಿತ್ರಸೇನಶ್ಚ ಭಾರತ||
ರಾಜನ್! ನೃಪನ ಸನ್ನಿಧಿಯಲ್ಲಿ ಅವರೆಲ್ಲರೂ ವ್ಯಾಸನನ್ನು ಸುತ್ತುವರೆದು ಮಾತನಾಡುತ್ತಿರಲು ಇತರ ಮಹಾತಪಸ್ವಿ ಮುನಿಗಳಾದ ನಾರದ, ಪರ್ವತ, ದೇವಲ, ವಿಶ್ವಾವಸು, ತುಂಬುರು ಮತ್ತು ಚಿತ್ರಸೇನರೂ ಅಲ್ಲಿಗೆ ಆಗಮಿಸಿದರು.
15036010a ತೇಷಾಮಪಿ ಯಥಾನ್ಯಾಯಂ ಪೂಜಾಂ ಚಕ್ರೇ ಮಹಾಮನಾಃ|
15036010c ಧೃತರಾಷ್ಟ್ರಾಭ್ಯನುಜ್ಞಾತಃ ಕುರುರಾಜೋ ಯುಧಿಷ್ಠಿರಃ||
ಧೃತರಾಷ್ಟ್ರನಿಂದ ಅನುಜ್ಞಾತನಾದ ಕುರುರಾಜಾ ಯುಧಿಷ್ಠಿರನು ಮಹಾಮನಸ್ಕರಾದ ಅವರೆಲ್ಲರನ್ನೂ ಯಥಾನ್ಯಾಯವಾಗಿ ಪೂಜಿಸಿದನು.
15036011a ನಿಷೇದುಸ್ತೇ ತತಃ ಸರ್ವೇ ಪೂಜಾಂ ಪ್ರಾಪ್ಯ ಯುಧಿಷ್ಠಿರಾತ್|
15036011c ಆಸನೇಷ್ವಥ ಪುಣ್ಯೇಷು ಬರ್ಹಿಷ್ಕೇಷು ವರೇಷು ಚ||
ಯುಧಿಷ್ಠಿರನಿಂದ ಪೂಜೆಗಳನ್ನು ಸ್ವೀಕರಿಸಿ ಅವರೆಲ್ಲರೂ ಶ್ರೇಷ್ಠ ನವಿಲುಗರಿಗಳಿಂದ ಮಾಡಲ್ಪಟ್ಟ ಪುಣ್ಯ ಆಸನಗಳಲ್ಲಿ ಕುಳಿತುಕೊಂಡರು.
15036012a ತೇಷು ತತ್ರೋಪವಿಷ್ಟೇಷು ಸ ತು ರಾಜಾ ಮಹಾಮತಿಃ|
15036012c ಪಾಂಡುಪುತ್ರೈಃ ಪರಿವೃತೋ ನಿಷಸಾದ ಕುರೂದ್ವಹಃ||
ಹಾಗೆ ಅವರು ಅಲ್ಲಿ ಕುಳಿತುಕೊಳ್ಳಲು ಮಹಾಮತಿ ರಾಜಾ ಕುರೂದ್ವಹ ಧೃತರಾಷ್ಟ್ರನು ಪಾಂಡುಪುತ್ರರಿಂದ ಪರಿವೃತನಾಗಿ ಕುಳಿತುಕೊಂಡನು.
15036013a ಗಾಂಧಾರೀ ಚೈವ ಕುಂತೀ ಚ ದ್ರೌಪದೀ ಸಾತ್ವತೀ ತಥಾ|
15036013c ಸ್ತ್ರಿಯಶ್ಚಾನ್ಯಾಸ್ತಥಾನ್ಯಾಭಿಃ ಸಹೋಪವಿವಿಶುಸ್ತತಃ||
ಗಾಂಧಾರೀ, ಕುಂತೀ, ದ್ರೌಪದೀ, ಸಾತ್ವತೀ ಸುಭದ್ರೆ ಹಾಗೂ ಅನ್ಯ ಸ್ತ್ರೀಯರೂ ಕೂಡ ಒಟ್ಟಿಗೇ ಅಲ್ಲಲ್ಲಿ ಕುಳಿತುಕೊಂಡರು.
15036014a ತೇಷಾಂ ತತ್ರ ಕಥಾ ದಿವ್ಯಾ ಧರ್ಮಿಷ್ಠಾಶ್ಚಾಭವನ್ನೃಪ|
15036014c ಋಷೀಣಾಂ ಚ ಪುರಾಣಾನಾಂ ದೇವಾಸುರವಿಮಿಶ್ರಿತಾಃ||
ನೃಪ! ಅಲ್ಲಿ ಧರ್ಮಿಷ್ಠರಾದ ಋಷಿಗಳ ಮತ್ತು ದೇವಾಸುರರ ಮಿಶ್ರಿತ ಪುರಾಣಕಥೆಗಳು ನಡೆದವು.
15036015a ತತಃ ಕಥಾಂತೇ ವ್ಯಾಸಸ್ತಂ ಪ್ರಜ್ಞಾಚಕ್ಷುಷಮೀಶ್ವರಮ್|
15036015c ಪ್ರೋವಾಚ ವದತಾಂ ಶ್ರೇಷ್ಠಃ ಪುನರೇವ ಸ ತದ್ವಚಃ|
15036015e ಪ್ರೀಯಮಾಣೋ ಮಹಾತೇಜಾಃ ಸರ್ವವೇದವಿದಾಂ ವರಃ||
ಆಗ ಕಥೆಗಳ ಅಂತ್ಯದಲ್ಲಿ ಮಾತನಾಡುವವರಲ್ಲಿ ಶ್ರೇಷ್ಠ ಮಹಾತೇಜಸ್ವಿ ಸರ್ವವೇದವಿದರಲ್ಲಿ ಶ್ರೇಷ್ಠ ವ್ಯಾಸನು ಪ್ರಜ್ಞಾಚಕ್ಷು ರಾಜಾ ಧೃತರಾಷ್ಟ್ರನಿಗೆ ಪುನಃ ಪ್ರೀತಿಪೂರ್ವಕವಾದ ಅದೇ ಮಾತನಾಡಿದನು:
15036016a ವಿದಿತಂ ಮಮ ರಾಜೇಂದ್ರ ಯತ್ತೇ ಹೃದಿ ವಿವಕ್ಷಿತಮ್|
15036016c ದಹ್ಯಮಾನಸ್ಯ ಶೋಕೇನ ತವ ಪುತ್ರಕೃತೇನ ವೈ||
“ರಾಜೇಂದ್ರ! ನಿನ್ನ ಪುತ್ರರ ಕರ್ಮಗಳ ಕುರಿತಾದ ಶೋಕಿಸಿ ಸುಡುತ್ತಿರುವ ನಿನ್ನ ಹೃದಯದಲ್ಲಿ ಅಡಗಿಕೊಂಡಿರುವುದನ್ನು ನಾನು ತಿಳಿದುಕೊಂಡಿದ್ದೇನೆ.
15036017a ಗಾಂಧಾರ್ಯಾಶ್ಚೈವ ಯದ್ದುಃಖಂ ಹೃದಿ ತಿಷ್ಠತಿ ಪಾರ್ಥಿವ|
15036017c ಕುಂತ್ಯಾಶ್ಚ ಯನ್ಮಹಾರಾಜ ದ್ರೌಪದ್ಯಾಶ್ಚ ಹೃದಿ ಸ್ಥಿತಮ್||
15036018a ಯಚ್ಚ ಧಾರಯತೇ ತೀವ್ರಂ ದುಃಖಂ ಪುತ್ರವಿನಾಶಜಮ್|
15036018c ಸುಭದ್ರಾ ಕೃಷ್ಣಭಗಿನೀ ತಚ್ಚಾಪಿ ವಿದಿತಂ ಮಮ||
ಪಾರ್ಥಿವ! ಮಹಾರಾಜ! ಹಾಗೆಯೇ ಗಾಂಧಾರಿಯ ಹೃದಯದಲ್ಲಿ ನೆಲೆಸಿರುವ ದುಃಖವೇನಿದೆಯೋ, ಕುಂತಿ ಮತ್ತು ದ್ರೌಪದಿಯರ ಹೃದಯದಲ್ಲಿರುವ ದುಃಖವನ್ನೂ, ಕೃಷ್ಣನ ತಂಗಿ ಸುಭದ್ರೆಯು ಸಹಿಸಿಕೊಂಡಿರುವ ಪುತ್ರವಿನಾಶದಿಂದುಂಟಾದ ತೀವ್ರ ದುಃಖವನ್ನೂ ನಾನು ತಿಳಿದುಕೊಂಡಿರುವೆನು.
15036019a ಶ್ರುತ್ವಾ ಸಮಾಗಮಮಿಮಂ ಸರ್ವೇಷಾಂ ವಸ್ತತೋ ನೃಪ|
15036019c ಸಂಶಯಚ್ಚೇದನಾಯಾಹಂ ಪ್ರಾಪ್ತಃ ಕೌರವನಂದನ||
ನೃಪ! ಕೌರವನಂದನ! ವಾಸ್ತವವಾಗಿ ಎಲ್ಲರೂ ಇಲ್ಲಿ ಬಂದು ಸೇರಿರುವರೆಂದೇ ನಿನ್ನಲ್ಲಿರುವ ಸಂಶಯವನ್ನು ನಿವಾರಿಸುವ ಸಲುವಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ.
15036020a ಇಮೇ ಚ ದೇವಗಂಧರ್ವಾಃ ಸರ್ವೇ ಚೈವ ಮಹರ್ಷಯಃ|
15036020c ಪಶ್ಯಂತು ತಪಸೋ ವೀರ್ಯಮದ್ಯ ಮೇ ಚಿರಸಂಭೃತಮ್||
ಬಹುಕಾಲದಿಂದ ಸಂಗ್ರಹಿಸಿ ಇಟ್ಟುಕೊಂಡಿರುವ ನನ್ನ ತಪಸ್ಸಿನ ವೀರ್ಯವನ್ನು ಇಂದು ಈ ಎಲ್ಲ ದೇವಗಂಧರ್ವರೂ ಮಹರ್ಷಿಗಳೂ ನೋಡಲಿ!
15036021a ತದುಚ್ಯತಾಂ ಮಹಾಬಾಹೋ ಕಂ ಕಾಮಂ ಪ್ರದಿಶಾಮಿ ತೇ|
15036021c ಪ್ರವಣೋಽಸ್ಮಿ ವರಂ ದಾತುಂ ಪಶ್ಯ ಮೇ ತಪಸೋ ಬಲಮ್||
ಮಹಾಬಾಹೋ! ಹೇಳು! ನಿನ್ನ ಯಾವ ಕಾಮನೆಯನ್ನು ನಡೆಯಿಸಿಕೊಡಲಿ? ನಾನೀಗ ವರವನ್ನು ಕೊಡಲು ಉತ್ಸುಕನಾಗಿದ್ದೇನೆ. ನನ್ನ ತಪಸ್ಸಿನ ಬಲವನ್ನು ನೋಡು!"
15036022a ಏವಮುಕ್ತಃ ಸ ರಾಜೇಂದ್ರೋ ವ್ಯಾಸೇನಾಮಿತಬುದ್ಧಿನಾ|
15036022c ಮುಹೂರ್ತಮಿವ ಸಂಚಿಂತ್ಯ ವಚನಾಯೋಪಚಕ್ರಮೇ||
ಅಮಿತಬುದ್ಧಿ ವ್ಯಾಸನು ಹೀಗೆ ಹೇಳಲು ರಾಜೇಂದ್ರ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಈ ಮಾತನ್ನಾಡಲು ಪ್ರಾರಂಭಿಸಿದನು:
15036023a ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಸಫಲಂ ಜೀವಿತಂ ಚ ಮೇ|
15036023c ಯನ್ಮೇ ಸಮಾಗಮೋಽದ್ಯೇಹ ಭವದ್ಭಿಃ ಸಹ ಸಾಧುಭಿಃ||
"ನಿಮ್ಮಂಥಹ ಸಾಧುಗಳೊಡನೆ ನನ್ನ ಸಮಾಗಮವಾಯಿತೆಂದರೆ ನನ್ನ ಜೀವಿತವು ಸಫಲವಾಯಿತೆಂದೇ! ಧನ್ಯನಾಗಿದ್ದೇನೆ. ಅನುಗೃಹೀತನಾಗಿದ್ದೇನೆ!
15036024a ಅದ್ಯ ಚಾಪ್ಯವಗಚ್ಚಾಮಿ ಗತಿಮಿಷ್ಟಾಮಿಹಾತ್ಮನಃ|
15036024c ಭವದ್ಭಿರ್ಬ್ರಹ್ಮಕಲ್ಪೈರ್ಯತ್ಸಮೇತೋಽಹಂ ತಪೋಧನಾಃ||
ತಪೋಧನರೇ! ಬ್ರಹ್ಮಕಲ್ಪರಾದ ನಿಮ್ಮೊಡನೆ ಸಮಾಗಮವಾಗಿರುವುದರಿಂದಲೇ ನನಗೆ ಇಷ್ಟವಾದ ಈ ಸ್ಥಿತಿಯನ್ನು ಪಡೆದಿದ್ದೇನೆ.
15036025a ದರ್ಶನಾದೇವ ಭವತಾಂ ಪೂತೋಽಹಂ ನಾತ್ರ ಸಂಶಯಃ|
15036025c ವಿದ್ಯತೇ ನ ಭಯಂ ಚಾಪಿ ಪರಲೋಕಾನ್ಮಮಾನಘಾಃ||
ಅನಘರೇ! ನಿಮ್ಮ ದರ್ಶನಮಾತ್ರದಿಂದಲೇ ನಾನು ಪವಿತ್ರನಾಗಿರುವೆನೆನ್ನುವುದರಲ್ಲಿ ಸಂಶಯವಿಲ್ಲ. ನನಗೆ ಪರಲೋಕದ ಯಾವ ಭಯವೂ ಇಲ್ಲವಾಗಿದೆ.
15036026a ಕಿಂ ತು ತಸ್ಯ ಸುದುರ್ಬುದ್ಧೇರ್ಮಂದಸ್ಯಾಪನಯೈರ್ಭೃಶಮ್|
15036026c ದೂಯತೇ ಮೇ ಮನೋ ನಿತ್ಯಂ ಸ್ಮರತಃ ಪುತ್ರಗೃದ್ಧಿನಃ||
ಆದರೆ ಅತ್ಯಂತ ದುರ್ಬುದ್ಧಿಯಾಗಿದ್ದ, ಮೂಡ ದುರ್ಯೋಧನನ ಅನ್ಯಾಯದಿಂದ ನನ್ನ ಎಲ್ಲ ಮಕ್ಕಳೂ ಹತರಾದರೆನ್ನುವುದನ್ನು ಸ್ಮರಿಸಿಕೊಂಡು ನಿತ್ಯವೂ ನನ್ನ ಮನಸ್ಸು ನೋಯುತ್ತದೆ.
15036027a ಅಪಾಪಾಃ ಪಾಂಡವಾ ಯೇನ ನಿಕೃತಾಃ ಪಾಪಬುದ್ಧಿನಾ|
15036027c ಘಾತಿತಾ ಪೃಥಿವೀ ಚೇಯಂ ಸಹಸಾ ಸನರದ್ವಿಪಾ||
ಪಾಪಬುದ್ಧಿಯ ಅವನು ಪಾಪಿಗಳಲ್ಲದ ಪಾಂಡವರನ್ನು ಮೋಸಗೊಳಿಸಿ, ಬಹುಬೇಗ ಸೈನಿಕರು-ವಾಹನಗಳೊಂದಿಗೆ ಇಡೀ ಪೃಥ್ವಿಯನ್ನೇ ನಾಶಗೊಳಿಸಿಬಿಟ್ಟನು.
15036028a ರಾಜಾನಶ್ಚ ಮಹಾತ್ಮಾನೋ ನಾನಾಜನಪದೇಶ್ವರಾಃ|
15036028c ಆಗಮ್ಯ ಮಮ ಪುತ್ರಾರ್ಥೇ ಸರ್ವೇ ಮೃತ್ಯುವಶಂ ಗತಾಃ||
ನಾನಾ ಜನಪದಗಳ ಒಡೆಯರು ಮಹಾತ್ಮ ರಾಜರು ಎಲ್ಲರೂ ನನ್ನ ಮಗನಿಗಾಗಿ ಬಂದು ಎಲ್ಲರೂ ಮೃತ್ಯುವಶರಾದರು.
15036029a ಯೇ ತೇ ಪುತ್ರಾಂಶ್ಚ ದಾರಾಶ್ಚ ಪ್ರಾಣಾಂಶ್ಚ ಮನಸಃ ಪ್ರಿಯಾನ್|
15036029c ಪರಿತ್ಯಜ್ಯ ಗತಾಃ ಶೂರಾಃ ಪ್ರೇತರಾಜನಿವೇಶನಮ್||
ಆ ಶೂರರು ಪುತ್ರರನ್ನು, ಪತ್ನಿಯರನ್ನು ಮತ್ತು ಮನಸ್ಸಿಗೆ ಅತ್ಯಂತ ಪ್ರಿಯವಾದ ಪ್ರಾಣಗಳನ್ನೂ ತೊರೆದು ಪ್ರೇತರಾಜನ ನಿವೇಶನವನ್ನು ಸೇರಿಬಿಟ್ಟರು.
15036030a ಕಾ ನು ತೇಷಾಂ ಗತಿರ್ಬ್ರಹ್ಮನ್ಮಿತ್ರಾರ್ಥೇ ಯೇ ಹತಾ ಮೃಧೇ|
15036030c ತಥೈವ ಪುತ್ರಪೌತ್ರಾಣಾಂ ಮಮ ಯೇ ನಿಹತಾ ಯುಧಿ||
ಬ್ರಹ್ಮನ್! ಮಿತ್ರನಿಗಾಗಿ ಯುದ್ಧದಲ್ಲಿ ಹತರಾದ ಅವರ ಗತಿಯೇನಾಗಿರಬಹುದು? ಹಾಗೆಯೇ ಯುದ್ಧದಲ್ಲಿ ಹತರಾದ ನನ್ನ ಪುತ್ರ-ಪೌತ್ರರ ಗತಿಯೇನಾಗಿರಬಹುದು?
15036031a ದೂಯತೇ ಮೇ ಮನೋಽಭೀಕ್ಷ್ಣಂ ಘಾತಯಿತ್ವಾ ಮಹಾಬಲಮ್|
15036031c ಭೀಷ್ಮಂ ಶಾಂತನವಂ ವೃದ್ಧಂ ದ್ರೋಣಂ ಚ ದ್ವಿಜಸತ್ತಮಮ್||
ಮಹಾಬಲ ಶಾಂತನವ ಬೀಷ್ಮ ಮತ್ತು ದ್ವಿಜಸತ್ತಮ ವೃದ್ಧ ದ್ರೋಣರನ್ನು ಸಾವಿಗೀಡುಮಾಡಿ ನನ್ನ ಮನಸ್ಸಿಗೆ ಸತತವೂ ನೋವಾಗುತ್ತಿದೆ.
15036032a ಮಮ ಪುತ್ರೇಣ ಮೂಢೇನ ಪಾಪೇನ ಸುಹೃದದ್ವಿಷಾ|
15036032c ಕ್ಷಯಂ ನೀತಂ ಕುಲಂ ದೀಪ್ತಂ ಪೃಥಿವೀರಾಜ್ಯಮಿಚ್ಚತಾ||
ಭೂಮಿ-ರಾಜ್ಯಗಳನ್ನು ಬಯಸಿದ್ದ ನನ್ನ ಮೂಢ ಪುತ್ರನ ಪಾಪದಿಂದಾಗಿ ಸುಹೃದಯರೊಂದಿಗೆ ದ್ವೇಷಕಟ್ಟಿಕೊಂಡು ಬೆಳಗುತ್ತಿದ್ದ ಈ ಕುಲವು ನಾಶವಾಗಿಬಿಟ್ಟಿತು.
15036033a ಏತತ್ಸರ್ವಮನುಸ್ಮೃತ್ಯ ದಹ್ಯಮಾನೋ ದಿವಾನಿಶಮ್|
15036033c ನ ಶಾಂತಿಮಧಿಗಚ್ಚಾಮಿ ದುಃಖಶೋಕಸಮಾಹತಃ|
15036033e ಇತಿ ಮೇ ಚಿಂತಯಾನಸ್ಯ ಪಿತಃ ಶರ್ಮ ನ ವಿದ್ಯತೇ||
ಇವೆಲ್ಲವನ್ನೂ ಸ್ಮರಿಸಿಕೊಂಡು ಹಗಲು-ರಾತ್ರಿ ಚಿಂತಾಗ್ನಿಯಿಂದ ಬೆಂದುಹೋಗುತ್ತಿರುವ ದುಃಖಶೋಕಗಳಿಂದ ಪೀಡಿತನಾಗಿರುವ ನನಗೆ ಶಾಂತಿಯೇ ಇಲ್ಲವಾಗಿದೆ. ತಂದೆಯೇ! ಹೀಗೆ ಚಿಂತಿಸುತ್ತಿರುವ ನನಗೆ ನೆಲೆಯೇ ಇಲ್ಲದಂತಾಗಿದೆ!""
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಧೃತರಾಷ್ಟ್ರಾದಿಕೃತಪ್ರಾರ್ಥನೇ ಷಟ್ತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಧೃತರಾಷ್ಟ್ರಾದಿಕೃತಪ್ರಾರ್ಥನ ಎನ್ನುವ ಮೂವತ್ತಾರನೇ ಅಧ್ಯಾಯವು.