ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೩೫
ವ್ಯಾಸವಾಕ್ಯ
ಧೃತರಾಷ್ಟ್ರನ ಕುರಿತು ಪ್ರಶ್ನಿಸಿ ವ್ಯಾಸನು ವಿದುರನು ಧರ್ಮನೆಂದೂ, ಅದೇ ವಿದುರನೇ ಯುಧಿಷ್ಠಿರನೆಂದೂ ತಿಳಿಸಿದುದು (೧-೨೨). “ಅಮಾನುಷವಾದ ಏನನ್ನು ಪಡೆಯಲು ಬಯಸುತ್ತೀಯೆ? ಅಥವಾ ಏನನ್ನು ನೋಡಲು, ಸೃಷ್ಟಿಸಲು ಮತ್ತು ಕೇಳಲು ಬಯಸುತ್ತೀಯೆ?” ಎಂದು ವ್ಯಾಸನು ಧೃತರಾಷ್ಟ್ರನಿಗೆ ಕೇಳಿದುದು (೨೩-೨೫).
15035001 ವೈಶಂಪಾಯನ ಉವಾಚ|
15035001a ತಥಾ ಸಮುಪವಿಷ್ಟೇಷು ಪಾಂಡವೇಷು ಮಹಾತ್ಮಸು|
15035001c ವ್ಯಾಸಃ ಸತ್ಯವತೀಪುತ್ರಃ ಪ್ರೋವಾಚಾಮಂತ್ರ್ಯ ಪಾರ್ಥಿವಮ್||
ವೈಶಂಪಾಯನನು ಹೇಳಿದನು: “ಮಹಾತ್ಮ ಪಾಂಡವರೆಲ್ಲರೂ ಕುಳಿತುಕೊಳ್ಳಲು ಸತ್ಯವತೀ ಪುತ್ರ ವ್ಯಾಸನು ಪಾರ್ಥಿವನನ್ನು ಉದ್ದೇಶಿಸಿ ಹೇಳಿದನು:
15035002a ಧೃತರಾಷ್ಟ್ರ ಮಹಾಬಾಹೋ ಕಚ್ಚಿತ್ತೇ ವರ್ಧತೇ ತಪಃ|
15035002c ಕಚ್ಚಿನ್ಮನಸ್ತೇ ಪ್ರೀಣಾತಿ ವನವಾಸೇ ನರಾಧಿಪ||
“ಮಹಾಬಾಹೋ! ಧೃತರಾಷ್ಟ್ರ! ನರಾಧಿಪ! ನಿನ್ನ ತಪಸ್ಸು ವರ್ಧಿಸುತ್ತಿದೆ ತಾನೆ? ವನವಾಸದಲ್ಲಿ ನಿನ್ನ ಮನಸ್ಸು ಸಂತೋಷಗೊಂಡಿದೆ ತಾನೆ?
15035003a ಕಚ್ಚಿದ್ಧೃದಿ ನ ತೇ ಶೋಕೋ ರಾಜನ್ಪುತ್ರವಿನಾಶಜಃ|
15035003c ಕಚ್ಚಿಜ್ಞಾನಾನಿ ಸರ್ವಾಣಿ ಪ್ರಸನ್ನಾನಿ ತವಾನಘ||
ರಾಜನ್! ಪುತ್ರವಿನಾಶದಿಂದ ಉಂಟಾದ ಶೋಕವು ನಿನ್ನ ಹೃದಯದಲ್ಲಿ ಉಳಿದುಕೊಂಡಿಲ್ಲ ತಾನೇ? ಅನಘ! ನಿನ್ನಲ್ಲಿರುವ ಸರ್ವ ಜ್ಞಾನಗಳೂ ನಿನಗೆ ಪ್ರಸನ್ನತೆಯನ್ನು ನೀಡುತ್ತಿವೆ ತಾನೇ?
15035004a ಕಚ್ಚಿದ್ಬುದ್ಧಿಂ ದೃಢಾಂ ಕೃತ್ವಾ ಚರಸ್ಯಾರಣ್ಯಕಂ ವಿಧಿಮ್|
15035004c ಕಚ್ಚಿದ್ವಧೂಶ್ಚ ಗಾಂಧಾರೀ ನ ಶೋಕೇನಾಭಿಭೂಯತೇ||
ಬುದ್ಧಿಯನ್ನು ದೃಢವಾಗಿರಿಸಿಕೊಂಡು ಅರಣ್ಯವಾಸದ ವಿಧಿಯನ್ನು ಪೂರೈಸುತ್ತಿರುವೆ ತಾನೆ? ಸೊಸೆ ಗಾಂಧಾರಿಯು ಶೋಕವನ್ನು ಅನುಭವಿಸುತ್ತಿಲ್ಲ ತಾನೆ?
15035005a ಮಹಾಪ್ರಜ್ಞಾ ಬುದ್ಧಿಮತೀ ದೇವೀ ಧರ್ಮಾರ್ಥದರ್ಶಿನೀ|
15035005c ಆಗಮಾಪಾಯತತ್ತ್ವಜ್ಞಾ ಕಚ್ಚಿದೇಷಾ ನ ಶೋಚತಿ||
ಮಹಾಪ್ರಾಜ್ಞೆ, ಬುದ್ಧಿಮತೀ, ಧರ್ಮಾರ್ಥದರ್ಶಿನೀ, ಹುಟ್ಟು-ಸಾವುಗಳ ತತ್ತ್ವಗಳನ್ನು ತಿಳಿದುಕೊಂಡಿರುವ ಆ ದೇವಿಯು ಶೋಕಿಸುತ್ತಿಲ್ಲ ತಾನೇ?
15035006a ಕಚ್ಚಿತ್ಕುಂತೀ ಚ ರಾಜಂಸ್ತ್ವಾಂ ಶುಶ್ರೂಷುರನಹಂಕೃತಾ|
15035006c ಯಾ ಪರಿತ್ಯಜ್ಯ ರಾಜ್ಯಂ ಸ್ವಂ ಗುರುಶುಶ್ರೂಷಣೇ ರತಾ||
ರಾಜನ್! ಗುರುಶುಶ್ರೂಷಣೆಯಲ್ಲಿಯೇ ನಿರತಳಾಗಿದ್ದ ಮತ್ತು ತನ್ನ ರಾಜ್ಯವನ್ನು ತ್ಯಜಿಸಿರುವ ಕುಂತಿಯು ಅಹಂಕಾರವಿಲ್ಲದೇ ನಿನ್ನ ಶುಶ್ರೂಷೆಗೈಯುತ್ತಿರುವಳು ತಾನೇ?
15035007a ಕಚ್ಚಿದ್ಧರ್ಮಸುತೋ ರಾಜಾ ತ್ವಯಾ ಪ್ರೀತ್ಯಾಭಿನಂದಿತಃ|
15035007c ಭೀಮಾರ್ಜುನಯಮಾಶ್ಚೈವ ಕಚ್ಚಿದೇತೇಽಪಿ ಸಾಂತ್ವಿತಾಃ||
ರಾಜಾ ಧರ್ಮಸುತನನ್ನು ನೀನು ಪ್ರೀತಿಯಿಂದ ಅಭಿನಂದಿಸುತ್ತೀಯೆ ತಾನೇ? ಭೀಮ-ಅರ್ಜುನ-ಯಮಳರನ್ನು ಕೂಡ ನೀನು ಸಾಂತ್ವನಗೊಳಿಸಿದ್ದೀಯೆ ತಾನೇ?
15035008a ಕಚ್ಚಿನ್ನಂದಸಿ ದೃಷ್ಟ್ವೈತಾನ್ಕಚ್ಚಿತ್ತೇ ನಿರ್ಮಲಂ ಮನಃ|
15035008c ಕಚ್ಚಿದ್ವಿಶುದ್ಧಭಾವೋಽಸಿ ಜಾತಜ್ಞಾನೋ ನರಾಧಿಪ||
ನರಾಧಿಪ! ಇವರನ್ನು ನೋಡಿ ನಿನಗೆ ಸಂತೋಷವಾಯಿತು ತಾನೇ? ನಿನ್ನ ಮನಸ್ಸು ನಿರ್ಮಲಗೊಂಡಿದೆ ತಾನೆ? ಜ್ಞಾನವನ್ನು ಪಡೆದು ನೀನು ಶುದ್ಧಭಾವನಾಗಿರುವೆ ತಾನೇ?
15035009a ಏತದ್ಧಿ ತ್ರಿತಯಂ ಶ್ರೇಷ್ಠಂ ಸರ್ವಭೂತೇಷು ಭಾರತ|
15035009c ನಿರ್ವೈರತಾ ಮಹಾರಾಜ ಸತ್ಯಮದ್ರೋಹ ಏವ ಚ||
ಭಾರತ! ಮಹಾರಾಜ! ನಿರ್ವೈರ್ಯತೆ, ಸತ್ಯ ಮತ್ತು ದ್ರೋಹಬಗೆಯದೇ ಇರುವುದು ಈ ಮೂರು ಸರ್ವಭೂತಗಳಿಗೂ ಶ್ರೇಷ್ಠವೆಂದು ತಿಳಿದುಕೋ!
15035010a ಕಚ್ಚಿತ್ತೇ ನಾನುತಾಪೋಽಸ್ತಿ ವನವಾಸೇನ ಭಾರತ|
15035010c ಸ್ವದತೇ ವನ್ಯಮನ್ನಂ ವಾ ಮುನಿವಾಸಾಂಸಿ ವಾ ವಿಭೋ||
ಭಾರತ! ವನದಲ್ಲಿ ಸಿಗುವ ಆಹಾರವನ್ನು ಸೇವಿಸುವ ಅಥವಾ ಮುನಿಗಳಂತೆ ಜೀವಿಸುವ ಈ ವನವಾಸದಿಂದ ನೀನು ಪರಿತಪಿಸುತ್ತಿಲ್ಲ ತಾನೇ?
15035011a ವಿದಿತಂ ಚಾಪಿ ಮೇ ರಾಜನ್ವಿದುರಸ್ಯ ಮಹಾತ್ಮನಃ|
15035011c ಗಮನಂ ವಿಧಿನಾ ಯೇನ ಧರ್ಮಸ್ಯ ಸುಮಹಾತ್ಮನಃ||
ರಾಜನ್! ಮಹಾತ್ಮ ವಿದುರನು ಯಾವ ಮಹಾ ಧರ್ಮದ ವಿಧಿಯಿಂದ ಹೊರಟುಹೋದನೆನ್ನುವುದು ನನಗೆ ತಿಳಿದಿದೆ.
15035012a ಮಾಂಡವ್ಯಶಾಪಾದ್ಧಿ ಸ ವೈ ಧರ್ಮೋ ವಿದುರತಾಂ ಗತಃ|
15035012c ಮಹಾಬುದ್ಧಿರ್ಮಹಾಯೋಗೀ ಮಹಾತ್ಮಾ ಸುಮಹಾಮನಾಃ||
ಮಾಂಡವ್ಯನ ಶಾಪದಿಂದಾಗಿ ಧರ್ಮನೇ ಆ ಮಹಾಬುದ್ಧಿ, ಮಹಾಯೋಗೀ, ಮಹಾತ್ಮ, ಮಹಾಮನ ವಿದುರನಾಗಿದ್ದನೆಂದು ತಿಳಿ.
15035013a ಬೃಹಸ್ಪತಿರ್ವಾ ದೇವೇಷು ಶುಕ್ರೋ ವಾಪ್ಯಸುರೇಷು ಯಃ|
15035013c ನ ತಥಾ ಬುದ್ಧಿಸಂಪನ್ನೋ ಯಥಾ ಸ ಪುರುಷರ್ಷಭಃ||
ದೇವತೆಗಳ ಬೃಹಸ್ಪತಿಯಾಗಲೀ ಅಥವಾ ಅಸುರರ ಶುಕ್ರನಾಗಲೀ ಆ ಪುರುಷರ್ಷಭ ವಿದುರನಷ್ಟು ಬುದ್ಧಿಸಂಪನ್ನರಾಗಿಲ್ಲ.
15035014a ತಪೋಬಲವ್ಯಯಂ ಕೃತ್ವಾ ಸುಮಹಚ್ಚಿರಸಂಭೃತಮ್|
15035014c ಮಾಂಡವ್ಯೇನರ್ಷಿಣಾ ಧರ್ಮೋ ಹ್ಯಭಿಭೂತಃ ಸನಾತನಃ||
ಬಹಳ ಕಾಲದಿಂದ ಸಂಪಾದಿಸಿ ಇಟ್ಟುಕೊಂಡಿದ್ದ ತಪೋಬಲವನ್ನು ವ್ಯಯಿಸಿ ಋಷಿಮಾಂಡವ್ಯನು ಸನಾತನ ಧರ್ಮನಿಗೆ ಶಾಪವನ್ನಿತ್ತು ಪರಾಭವಗೊಳಿಸಿದ್ದನು.
15035015a ನಿಯೋಗಾದ್ಬ್ರಹ್ಮಣಃ ಪೂರ್ವಂ ಮಯಾ ಸ್ವೇನ ಬಲೇನ ಚ|
15035015c ವೈಚಿತ್ರವೀರ್ಯಕೇ ಕ್ಷೇತ್ರೇ ಜಾತಃ ಸ ಸುಮಹಾಮತಿಃ||
ಹಿಂದೆ ಬ್ರಹ್ಮನ ನಿಯೋಗದಿಂದ ಮತ್ತು ತನ್ನದೇ ಬಲದಿಂದ ಆ ಸುಮಹಾಮತಿ ಧರ್ಮನು ವಿಚಿತ್ರವೀರ್ಯನ ಕ್ಷೇತ್ರದಲ್ಲಿ ನನ್ನ ಮಗನಾಗಿ ಜನಿಸಿದನು.
15035016a ಭ್ರಾತಾ ತವ ಮಹಾರಾಜ ದೇವದೇವಃ ಸನಾತನಃ|
15035016c ಧಾರಣಾಚ್ಛ್ರೇಯಸೋ ಧ್ಯಾನಾದ್ಯಂ ಧರ್ಮಂ ಕವಯೋ ವಿದುಃ||
ಮಹಾರಾಜ! ನಿನ್ನ ತಮ್ಮನು ಸನಾತನ ದೇವದೇವ ಧರ್ಮನಾಗಿದ್ದನು. ಧರ್ಮವನ್ನು ಧಾರಣೆಮಾಡಿ ಯಾವಾಗಲೂ ಧರ್ಮದ ವಿಷಯದಲ್ಲಿಯೇ ಯೋಚಿಸುತ್ತಿದ್ದ ಅವನನ್ನು ವಿದ್ವಾಂಸರು ಧರ್ಮನೆಂದೇ ತಿಳಿದಿದ್ದರು.
15035017a ಸತ್ಯೇನ ಸಂವರ್ಧಯತಿ ದಮೇನ ನಿಯಮೇನ ಚ|
15035017c ಅಹಿಂಸಯಾ ಚ ದಾನೇನ ತಪಸಾ ಚ ಸನಾತನಃ||
ಆ ಸನಾತನ ಧರ್ಮನು ಸತ್ಯ, ದಮ, ನಿಯಮ, ಅಹಿಂಸೆ, ದಾನ ಮತ್ತು ತಪಸ್ಸುಗಳಿಂದ ವೃದ್ಧಿಸುತ್ತಾನೆ.
15035018a ಯೇನ ಯೋಗಬಲಾಜ್ಜಾತಃ ಕುರುರಾಜೋ ಯುಧಿಷ್ಠಿರಃ|
15035018c ಧರ್ಮ ಇತ್ಯೇಷ ನೃಪತೇ ಪ್ರಾಜ್ಞೇನಾಮಿತಬುದ್ಧಿನಾ||
ನೃಪತೇ! ಯಾರ ಯೋಗಬಲದಿಂದ ಕುರುರಾಜ ಯುಧಿಷ್ಠಿರನು ಹುಟ್ಟಿದನೋ ಅವನೇ ಆ ಅಮಿತಬುದ್ಧಿ ಧರ್ಮನೆಂದು ತಿಳಿಯಬೇಕು.
15035019a ಯಥಾ ಹ್ಯಗ್ನಿರ್ಯಥಾ ವಾಯುರ್ಯಥಾಪಃ ಪೃಥಿವೀ ಯಥಾ|
15035019c ಯಥಾಕಾಶಂ ತಥಾ ಧರ್ಮ ಇಹ ಚಾಮುತ್ರ ಚ ಸ್ಥಿತಃ||
ಹೇಗೆ ಅಗ್ನಿ-ವಾಯು-ಜಲ-ಪೃಥ್ವೀ-ಆಕಾಶಗಳು ಇಹ-ಪರಗಳೆರಡರಲ್ಲಿಯೂ ಇರುತ್ತವೆಯೋ ಹಾಗೆ ಧರ್ಮನು ಎರಡೂ ಲೋಕಗಳಲ್ಲಿ ವ್ಯಾಪ್ತನಾಗಿದ್ದಾನೆ.
15035020a ಸರ್ವಗಶ್ಚೈವ ಕೌರವ್ಯ ಸರ್ವಂ ವ್ಯಾಪ್ಯ ಚರಾಚರಮ್|
15035020c ದೃಶ್ಯತೇ ದೇವದೇವಃ ಸ ಸಿದ್ಧೈರ್ನಿರ್ದಗ್ಧಕಿಲ್ಬಿಷೈಃ||
ಕೌರವ್ಯ! ಎಲ್ಲಕಡೆ ಹೋಗಬಲ್ಲ ಮತ್ತು ಚರಾಚರಗಳೆಲ್ಲವನ್ನೂ ವ್ಯಾಪಿಸಿರುವ ಆ ದೇವದೇವ ಧರ್ಮನು ಪಾಪಗಳು ಸುಟ್ಟುಹೋದ ಸಿದ್ಧರಿಗೆ ಕಾಣಿಸುತ್ತಾನೆ.
15035021a ಯೋ ಹಿ ಧರ್ಮಃ ಸ ವಿದುರೋ ವಿದುರೋ ಯಃ ಸ ಪಾಂಡವಃ|
15035021c ಸ ಏಷ ರಾಜನ್ವಶ್ಯಸ್ತೇ ಪಾಂಡವಃ ಪ್ರೇಷ್ಯವತ್ ಸ್ಥಿತಃ||
ರಾಜನ್! ಧರ್ಮನೇ ವಿದುರನು. ವಿದುರನೇ ಈ ಪಾಂಡವನು. ನಿನ್ನ ಮುಂದೆ ಸೇವಕನಂತೆ ನಿಂತಿರುವ ಈ ಪಾಂಡವನೇ ಅವನು.
15035022a ಪ್ರವಿಷ್ಟಃ ಸ ಸ್ವಮಾತ್ಮಾನಂ ಭ್ರಾತಾ ತೇ ಬುದ್ಧಿಸತ್ತಮಃ|
15035022c ದಿಷ್ಟ್ಯಾ ಮಹಾತ್ಮಾ ಕೌಂತೇಯಂ ಮಹಾಯೋಗಬಲಾನ್ವಿತಃ||
ಮಹಾಯೋಗಬಲಾನ್ವಿತನಾದ ನಿನ್ನ ಆ ಬುದ್ಧಿಸತ್ತಮ ತಮ್ಮನು ತನ್ನ ಆತ್ಮವನ್ನು ಅದೃಷ್ಟವಶಾತ್ ಈ ಮಹಾತ್ಮ ಕೌಂತೇಯನಲ್ಲಿ ಪ್ರವೇಶಿಸಿದ್ದಾನೆ.
15035023a ತ್ವಾಂ ಚಾಪಿ ಶ್ರೇಯಸಾ ಯೋಕ್ಷ್ಯೇ ನಚಿರಾದ್ಭರತರ್ಷಭ|
15035023c ಸಂಶಯಚ್ಚೇದನಾರ್ಥಂ ಹಿ ಪ್ರಾಪ್ತಂ ಮಾಂ ವಿದ್ಧಿ ಪುತ್ರಕ||
ಭರತರ್ಷಭ! ಪುತ್ರಕ! ನಿನಗೂ ಕೂಡ ಬೇಗನೇ ಶ್ರೇಯಸ್ಸುಂಟಾಗುವಂತೆ ಮಾಡುತ್ತೇನೆ. ನಿನ್ನ ಸಂಶಯವನ್ನು ದೂರಗೊಳಿಸಲೆಂದೇ ನಾನು ಇಲ್ಲಿಗೆ ಬಂದಿದ್ದೇನೆಂದು ತಿಳಿ.
15035024a ನ ಕೃತಂ ಯತ್ಪುರಾ ಕೈಶ್ಚಿತ್ಕರ್ಮ ಲೋಕೇ ಮಹರ್ಷಿಭಿಃ|
15035024c ಆಶ್ಚರ್ಯಭೂತಂ ತಪಸಃ ಫಲಂ ಸಂದರ್ಶಯಾಮಿ ವಃ||
ಲೋಕದ ಯಾವ ಮಹರ್ಷಿಗಳೂ ಈ ಹಿಂದೆ ಮಾಡಿರದಂತಹ ಕರ್ಮವನ್ನು ಮಾಡಲಿದ್ದೇನೆ. ಆಶ್ಚರ್ಯಭೂತವಾದ ನನ್ನ ತಪಸ್ಸಿನ ಫಲವನ್ನು ತೋರಿಸಿಕೊಡುತ್ತೇನೆ.
15035025a ಕಿಮಿಚ್ಚಸಿ ಮಹೀಪಾಲ ಮತ್ತಃ ಪ್ರಾಪ್ತುಮಮಾನುಷಮ್|
15035025c ದ್ರಷ್ಟುಂ ಸ್ಪ್ರಷ್ಟುಮಥ ಶ್ರೋತುಂ ವದ ಕರ್ತಾಸ್ಮಿ ತತ್ತಥಾ||
ಮಹೀಪಾಲ! ಅಮಾನುಷವಾದ ಏನನ್ನು ಪಡೆಯಲು ಬಯಸುತ್ತೀಯೆ? ಅಥವಾ ಏನನ್ನು ನೋಡಲು, ಸೃಷ್ಟಿಸಲು ಮತ್ತು ಕೇಳಲು ಬಯಸುತ್ತೀಯೆ? ಹೇಳು. ಅದನ್ನೇ ನಾನು ಮಾಡಿ ತೋರಿಸುತ್ತೇನೆ!””
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ವ್ಯಾಸವಾಕ್ಯೇ ಪಂಚತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಮೂವತ್ತೈದನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆಶ್ರಮವಾಸಿಕಪರ್ವಣಿ ಆಶ್ರಮವಾಸ ಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಆಶ್ರಮವಾಸಿಕ ಪರ್ವದಲ್ಲಿ ಆಶ್ರಮವಾಸಪರ್ವವು|
ಇದೂವರೆಗಿನ ಒಟ್ಟು ಮಹಾಪರ್ವಗಳು – ೧೪/೧೮, ಉಪಪರ್ವಗಳು-೯೦/೧೦೦, ಅಧ್ಯಾಯಗಳು-೧೯೬೬/೧೯೯೫, ಶ್ಲೋಕಗಳು-೭೨೮೮೬/೭೩೭೮೪