ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೩೨
ಪಾಂಡವವರ್ಣನ
ಋಷಿ-ಮುನಿಗಳಿಗೆ ಸಂಜಯನು ಪಾಂಡವರು ಮತ್ತು ಕುರುಸ್ತ್ರೀಯರ ಪರಿಚಯವನ್ನು ಮಾಡಿಕೊಡುವುದು (೧-೧೮).
15032001 ವೈಶಂಪಾಯನ ಉವಾಚ|
15032001a ಸ ತೈಃ ಸಹ ನರವ್ಯಾಘ್ರೈರ್ಭ್ರಾತೃಭಿರ್ಭರತರ್ಷಭ|
15032001c ರಾಜಾ ರುಚಿರಪದ್ಮಾಕ್ಷೈರಾಸಾಂ ಚಕ್ರೇ ತದಾಶ್ರಮೇ||
ವೈಶಂಪಾಯನನು ಹೇಳಿದನು: “ಭರತರ್ಷಭ! ಆ ಆಶ್ರಮದಲ್ಲಿ ರಾಜಾ ಧೃತರಾಷ್ಟ್ರನು ಸುಂದರ ಕಮಲಗಳಂತಹ ಕಣ್ಣುಗಳುಳ್ಳ ನರವ್ಯಾಘ್ರ ಸಹೋದರರೊಂದಿಗೆ ಕುಳಿತುಕೊಂಡನು.
15032002a ತಾಪಸೈಶ್ಚ ಮಹಾಭಾಗೈರ್ನಾನಾದೇಶಸಮಾಗತೈಃ|
15032002c ದ್ರಷ್ಟುಂ ಕುರುಪತೇಃ ಪುತ್ರಾನ್ಪಾಂಡವಾನ್ಪೃಥುವಕ್ಷಸಃ||
ಮಹಾಭಾಗ ತಾಪಸರು ಕೂಡ ಪೃಥುವಕ್ಷಸ ಕುರುಪತಿಯ ಪುತ್ರರಾದ ಪಾಂಡವರನ್ನು ನೋಡಲು ನಾನಾದೇಶಗಳಿಂದ ಬಂದು ಸೇರಿದ್ದರು.
15032003a ತೇಽಬ್ರುವನ್ ಜ್ಞಾತುಮಿಚ್ಚಾಮಃ ಕತಮೋಽತ್ರ ಯುಧಿಷ್ಠಿರಃ|
15032003c ಭೀಮಾರ್ಜುನಯಮಾಶ್ಚೈವ ದ್ರೌಪದೀ ಚ ಯಶಸ್ವಿನೀ||
ಅವರು – “ಇವರಲ್ಲಿ ಯುಧಿಷ್ಠಿರನು ಯಾರು? ಭೀಮಾರ್ಜುನ-ಯಮಳರು ಯಾರು ಮತ್ತು ಯಶಸ್ವಿನೀ ದ್ರೌಪದಿಯು ಯಾರು ಎಂದು ತಿಳಿಯಲು ಬಯಸುತ್ತೇವೆ” – ಎಂದು ಕೇಳಿಕೊಂಡರು.
15032004a ತಾನಾಚಖ್ಯೌ ತದಾ ಸೂತಃ ಸರ್ವಾನ್ನಾಮಾಭಿನಾಮತಃ|
15032004c ಸಂಜಯೋ ದ್ರೌಪದೀಂ ಚೈವ ಸರ್ವಾಶ್ಚಾನ್ಯಾಃ ಕುರುಸ್ತ್ರಿಯಃ||
ಆಗ ಸೂತ ಸಂಜಯನು ಅವರಿಗೆ ದ್ರೌಪದಿ ಮತ್ತು ಸರ್ವ ಕುರುಸ್ತ್ರೀಯರನ್ನೂ ಸೇರಿಸಿ ಎಲ್ಲರ ಹೆಸರುಗಳನ್ನು ಹೇಳುತ್ತಾ ಪರಿಚಯ ಮಾಡಿಕೊಟ್ಟನು.
15032005a ಯ ಏಷ ಜಾಂಬೂನದಶುದ್ಧಗೌರ
ತನುರ್ಮಹಾಸಿಂಹ ಇವ ಪ್ರವೃದ್ಧಃ|
15032005c ಪ್ರಚಂಡಘೋಣಃ ಪೃಥುದೀರ್ಘನೇತ್ರಸ್
ತಾಮ್ರಾಯತಾಸ್ಯಃ ಕುರುರಾಜ ಏಷಃ||
“ಶುದ್ಧ ಚಿನ್ನದಂತೆ ಗೌರಾಂಗನಾಗಿರುವ, ಮಹಾಸಿಂಹದಂತೆ ಬೆಳೆದ ಶರೀರವುಳ್ಳ, ತೀಕ್ಷ್ಣವಾದ ಮೂಗಿರುವ, ವಿಶಾಲವಾಗಿಯೂ, ತೀಕ್ಷ್ಣವಾಗಿಯೂ ಮತ್ತು ಕೆಂಪಾಗಿಯೂ ಇರುವ ಕಣ್ಣುಗಳುಳ್ಳ ಇವನೇ ಕುರುರಾಜ ಯುಧಿಷ್ಠಿರನು!
15032006a ಅಯಂ ಪುನರ್ಮತ್ತಗಜೇಂದ್ರಗಾಮೀ
ಪ್ರತಪ್ತಚಾಮೀಕರಶುದ್ಧಗೌರಃ|
15032006c ಪೃಥ್ವಾಯತಾಂಸಃ ಪೃಥುದೀರ್ಘಬಾಹುರ್
ವೃಕೋದರಃ ಪಶ್ಯತ ಪಶ್ಯತೈನಮ್||
ಮದಿಸಿದ ಗಜರಾಜನ ನಡುಗೆಯುಳ್ಳ, ಪುಟಕ್ಕೆ ಹಾಕಿದ ಚಿನ್ನದಂತೆ ಶುದ್ಧ ಗೌರವರ್ಣದ, ವಿಶಾಲವಾದ ಮತ್ತು ದಷ್ಟಪುಷ್ಟವಾದ ಹೆಗಲುಗಳುಳ್ಳ, ದಪ್ಪವಾಗಿಯೂ ನೀಳವಾಗಿಯೂ ಇರುವ ತೋಳುಗಳುಳ್ಳ ಇವನೇ ವೃಕೋದರನು. ಇವನನ್ನು ಚೆನ್ನಾಗಿ ನೋಡಿರಿ!
15032007a ಯಸ್ತ್ವೇಷ ಪಾರ್ಶ್ವೇಽಸ್ಯ ಮಹಾಧನುಷ್ಮಾನ್
ಶ್ಯಾಮೋ ಯುವಾ ವಾರಣಯೂಥಪಾಭಃ|
15032007c ಸಿಂಹೋನ್ನತಾಂಸೋ ಗಜಖೇಲಗಾಮೀ
ಪದ್ಮಾಯತಾಕ್ಷೋಽರ್ಜುನ ಏಷ ವೀರಃ||
ಇವನ ಪಕ್ಕದಲ್ಲಿಯೇ ಇರುವ ಶ್ಯಾಮಲ ವರ್ಣದ, ಯುವಕ, ಗಜಗಣಗಳ ಪತಿ ಸಲಗದಂತೆ ಪ್ರಕಾಶಿಸುತ್ತಿರುವ, ಸಿಂಹದ ಹೆಗಲಿನಂತೆ ವಿಸ್ತಾರವಾದ ಹೆಗಲುಳ್ಳ, ಗಜಕ್ರೀಡೆಯಂಥಹ ನಡುಗೆಯುಳ್ಳ, ಕಮಲದಂತೆ ವಿಶಾಲ ಕಣ್ಣುಗಳುಳ್ಳ ಮಹಾಧನುಷ್ಮಂತನಾದ ಇವನೇ ವೀರ ಅರ್ಜುನ!
15032008a ಕುಂತೀಸಮೀಪೇ ಪುರುಷೋತ್ತಮೌ ತು
ಯಮಾವಿಮೌ ವಿಷ್ಣುಮಹೇಂದ್ರಕಲ್ಪೌ|
15032008c ಮನುಷ್ಯಲೋಕೇ ಸಕಲೇ ಸಮೋಽಸ್ತಿ
ಯಯೋರ್ನ ರೂಪೇ ನ ಬಲೇ ನ ಶೀಲೇ||
ಕುಂತಿಯ ಸಮೀಪದಲ್ಲಿ ಕುಳಿತಿರುವ, ವಿಷ್ಣು-ಮಹೇಂದ್ರ ಸದೃಶರಾದ, ಪುರುಷೋತ್ತಮರೀರ್ವರು, ಅವಳೀ ಮಕ್ಕಳಾದ ಇವರೇ ನಕುಲ ಸಹದೇವರು. ಮನುಷ್ಯಲೋಕದಲ್ಲಿ ರೂಪದಲ್ಲಾಗಲೀ, ಬಲದಲ್ಲಾಗಲೀ ಅಥವಾ ಶೀಲದಲ್ಲಾಗಲೀ ಇವರಿಗೆ ಸಮನಾದವರು ಬೇರೆ ಯಾರೂ ಇಲ್ಲ!
15032009a ಇಯಂ ಪುನಃ ಪದ್ಮದಲಾಯತಾಕ್ಷೀ
ಮಧ್ಯಂ ವಯಃ ಕಿಂ ಚಿದಿವ ಸ್ಪೃಶಂತೀ|
15032009c ನೀಲೋತ್ಪಲಾಭಾ ಪುರದೇವತೇವ
ಕೃಷ್ಣಾ ಸ್ಥಿತಾ ಮೂರ್ತಿಮತೀವ ಲಕ್ಷ್ಮೀಃ||
ಮಧ್ಯ ವಯಸ್ಸಿನ ಈ ಪದ್ಮದಳಾಯತಾಕ್ಷೀ, ನೀಲಕಮಲದ ಕಾಂತಿಯಂಥ ಶ್ಯಾಮಲ ವರ್ಣದವಳು, ದೇವತೆಗಳಿಗೂ ದೇವಿಯಂತಿರುವ, ಮೂರ್ತಿಮತ್ತಾಗಿ ಬಂದಿರುವ ಲಕ್ಷ್ಮಿಯಂತೆ ನಿಂತಿರುವ ಇವಳೇ ಕೃಷ್ಣೆ ದ್ರೌಪದೀ.
15032010a ಅಸ್ಯಾಸ್ತು ಪಾರ್ಶ್ವೇ ಕನಕೋತ್ತಮಾಭಾ
ಯೈಷಾ ಪ್ರಭಾ ಮೂರ್ತಿಮತೀವ ಗೌರೀ|
15032010c ಮಧ್ಯೇ ಸ್ಥಿತೈಷಾ ಭಗಿನೀ ದ್ವಿಜಾಗ್ರ್ಯಾ
ಚಕ್ರಾಯುಧಸ್ಯಾಪ್ರತಿಮಸ್ಯ ತಸ್ಯ||
ದ್ವಿಜಾಗ್ರರೇ! ಅವಳ ಪಕ್ಕದಲ್ಲಿ ಸ್ತ್ರೀಯರ ಮಧ್ಯದಲ್ಲಿ ಕುಳಿತಿರುವ, ಚಿನ್ನಕ್ಕೂ ಹೆಚ್ಚಿನ ಕಾಂತಿಯುಳ್ಳ, ಮೂರ್ತಿಮತ್ತಾಗಿ ಬಂದಿರುವ ಗೌರಿಯಂತೆಯೇ ಇರುವ, ಅವಳೇ ಅಪ್ರತಿಮ ಚಕ್ರಾಯುಧ ಕೃಷ್ಣನ ತಂಗಿ ಸುಭದ್ರೆ.
[1]15032011a ಇಯಂ ಸ್ವಸಾ ರಾಜಚಮೂಪತೇಸ್ತು
ಪ್ರವೃದ್ಧನೀಲೋತ್ಪಲದಾಮವರ್ಣಾ|
15032011c ಪಸ್ಪರ್ಧ ಕೃಷ್ಣೇನ ನೃಪಃ ಸದಾ ಯೋ
ವೃಕೋದರಸ್ಯೈಷ ಪರಿಗ್ರಹೋಽಗ್ರ್ಯಃ||
ಬೆಳೆದ ನೀಲಕಮಲದ ಹಾರದ ಬಣ್ಣದಂತೆ ಶ್ಯಾಮಲವರ್ಣವುಳ್ಳ ಇವಳು – ಶ್ರೀ ಕೃಷ್ಣನೊಡನೆ ಸಾರಥ್ಯದ ಕೌಶಲ್ಯದಲ್ಲಿ ಸದಾ ಸ್ಪರ್ಧಿಸುತ್ತಿದ್ದ ಮತ್ತು ದುರ್ಯೋಧನನ ಸೇನಾ ನಾಯಕನಾಗಿದ್ದ ಶಲ್ಯನ ತಂಗಿ ಮತ್ತು ಭೀಮಸೇನನ ಶ್ರೇಷ್ಠ ಭಾರ್ಯೆಯು.
15032012a ಇಯಂ ಚ ರಾಜ್ಞೋ ಮಗಧಾಧಿಪಸ್ಯ
ಸುತಾ ಜರಾಸಂಧ ಇತಿ ಶ್ರುತಸ್ಯ|
15032012c ಯವೀಯಸೋ ಮಾದ್ರವತೀಸುತಸ್ಯ
ಭಾರ್ಯಾ ಮತಾ ಚಂಪಕದಾಮಗೌರೀ||
ಸಂಪಿಗೆ ಹೂವಿನ ಮಾಲೆಯಂತೆ ಗೌರವರ್ಣವುಳ್ಳ, ಮಗಧಾಧಿಪನೆಂದು ಖ್ಯಾತನಾದ ಜರಾಸಂಧನ ಮಗಳು ಇವಳು ಮಾದ್ರಿಯ ಕಡೆಯ ಮಗ ಸಹದೇವನ ಭಾರ್ಯೆ.
15032013a ಇಂದೀವರಶ್ಯಾಮತನುಃ ಸ್ಥಿತಾ ತು
ಯೈಷಾಪರಾಸನ್ನಮಹೀತಲೇ ಚ|
15032013c ಭಾರ್ಯಾ ಮತಾ ಮಾದ್ರವತೀಸುತಸ್ಯ
ಜ್ಯೇಷ್ಠಸ್ಯ ಸೇಯಂ ಕಮಲಾಯತಾಕ್ಷೀ||
ಅವಳ ಸಮೀಪದಲ್ಲಿ ನೆಲದ ಮೇಲೆ ಕುಳಿತುಕೊಂಡಿರುವ, ಇಂದೀವರದಂತೆ ಶ್ಯಾಮಲ ವರ್ಣದ ಶರೀರವುಳ್ಳ, ಕಮಲಾಯತಾಕ್ಷಿಯು ಜ್ಯೇಷ್ಠ ಮಾದ್ರೀ ಸುತ ನಕುಲನ ಭಾರ್ಯೆಯು.
15032014a ಇಯಂ ತು ನಿಷ್ಟಪ್ತಸುವರ್ಣಗೌರೀ
ರಾಜ್ಞೋ ವಿರಾಟಸ್ಯ ಸುತಾ ಸಪುತ್ರಾ|
15032014c ಭಾರ್ಯಾಭಿಮನ್ಯೋರ್ನಿಹತೋ ರಣೇ ಯೋ
ದ್ರೋಣಾದಿಭಿಸ್ತೈರ್ವಿರಥೋ ರಥಸ್ಥೈಃ||
ಪುಟಕ್ಕೆ ಹಾಕಿದ ಚಿನ್ನದಂತೆ ಗೌರವರ್ಣವುಳ್ಳ, ಮಗನೊಂದಿಗಿರುವ ಇವಳು ರಾಜ ವಿರಾಟನ ಮಗಳು ಮತ್ತು ವಿರಥನಾಗಿದ್ದಾಗ ರಥಸ್ಥರಾಗಿದ್ದ ದ್ರೋಣಾದಿಗಳು ರಣದಲ್ಲಿ ಸಂಹರಿಸಿದ ಆ ಅಭಿಮನ್ಯುವಿನ ಭಾರ್ಯೆಯು.
15032015a ಏತಾಸ್ತು ಸೀಮಂತಶಿರೋರುಹಾ ಯಾಃ
ಶುಕ್ಲೋತ್ತರೀಯಾ ನರರಾಜಪತ್ನ್ಯಃ|
15032015c ರಾಜ್ಞೋಽಸ್ಯ ವೃದ್ಧಸ್ಯ ಪರಂಶತಾಖ್ಯಾಃ
ಸ್ನುಷಾ ವಿವೀರಾ ಹತಪುತ್ರನಾಥಾಃ||
ಬಿಳಿಯ ಉತ್ತರೀಯವನ್ನು ಹೊದೆದಿರುವ ಮತ್ತು ಬೈತಲೆಗಳಲ್ಲಿ ಕುಂಕುಮಗಳಿಲ್ಲದಿರುವ ಇವರು ನರರಾಜ ದುರ್ಯೋಧನನ ಮತ್ತು ಅವನ ತಮ್ಮಂದಿರ ಪತ್ನಿಯರು. ವೃದ್ಧ ರಾಜನ ನೂರಕ್ಕು ಹೆಚ್ಚಿನ ಸಂಖ್ಯೆಯ ಈ ಸೊಸೆಯಂದಿರು ನರವೀರರಾದ ಪತಿ-ಪುತ್ರರನ್ನು ಕಳೆದುಕೊಂಡಿದ್ದಾರೆ.
15032016a ಏತಾ ಯಥಾಮುಖ್ಯಮುದಾಹೃತಾ ವೋ
ಬ್ರಾಹ್ಮಣ್ಯಭಾವಾದೃಜುಬುದ್ಧಿಸತ್ತ್ವಾಃ|
15032016c ಸರ್ವಾ ಭವದ್ಭಿಃ ಪರಿಪೃಚ್ಚ್ಯಮಾನಾ
ನರೇಂದ್ರಪತ್ನ್ಯಃ ಸುವಿಶುದ್ಧಸತ್ತ್ವಾಃ||
ಭಾವದಲ್ಲಿ ಸರಳತೆಯನ್ನೂ ಬುದ್ಧಿಗಳಲ್ಲಿ ಸತ್ತ್ವಗಳನ್ನೂ ಪಡೆದಿರುವ ಬ್ರಾಹ್ಮಣರೇ! ನೀವುಗಳೆಲ್ಲ ಕೇಳಿದುದಕ್ಕೆ ನಾನು ಮುಖ್ಯರಾದವರ ಪರಿಚಯ ಮಾಡಿಕೊಟ್ಟಿದ್ದೇನೆ. ಈ ಎಲ್ಲ ನರೇಂದ್ರಪತ್ನಿಯರೂ ವಿಶುದ್ಧಸತ್ತ್ವರು.”
15032017a ಏವಂ ಸ ರಾಜಾ ಕುರುವೃದ್ಧವರ್ಯಃ
ಸಮಾಗತಸ್ತೈರ್ನರದೇವಪುತ್ರೈಃ|
15032017c ಪಪ್ರಚ್ಚ ಸರ್ವಾನ್ಕುಶಲಂ ತದಾನೀಂ
ಗತೇಷು ಸರ್ವೇಷ್ವಥ ತಾಪಸೇಷು||
ಸರ್ವ ತಾಪಸರು ಹೊರಟುಹೋದ ನಂತರ ಕುರುವೃದ್ಧವರ್ಯ ರಾಜನು ಸೇರಿರುವ ನರದೇವಪುತ್ರರೆಲ್ಲರ ಕುಶಲವನ್ನು ಪ್ರಶ್ನಿಸಿದನು.
15032018a ಯೋಧೇಷು ಚಾಪ್ಯಾಶ್ರಮಮಂಡಲಂ ತಂ
ಮುಕ್ತ್ವಾ ನಿವಿಷ್ಟೇಷು ವಿಮುಚ್ಯ ಪತ್ರಮ್|
15032018c ಸ್ತ್ರೀವೃದ್ಧಬಾಲೇ ಚ ಸುಸಂನಿವಿಷ್ಟೇ
ಯಥಾರ್ಹತಃ ಕುಶಲಂ ಪರ್ಯಪೃಚ್ಚತ್||
ಯೋಧರು ಆಶ್ರಮಮಂಡಲದ ಗಡಿಯಲ್ಲಿಯೇ ವಾಹನಗಳನ್ನು ಬಿಚ್ಚಿ ಅಲ್ಲಿಯೇ ಸ್ತ್ರೀ-ವೃದ್ಧ-ಬಾಲಕರಿಗೆ ಉಳಿಯಲು ವ್ಯವಸ್ಥೆಮಾಡಿದರು. ಆಗ ಧೃತರಾಷ್ಟ್ರನು ಯಥಾರ್ಹವಾಗಿ ಕುಶಲ ಪ್ರಶ್ನೆಗಳನ್ನು ಕೇಳಿದನು.
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಋಷೀನ್ ಪ್ರತಿ ಯುಧಿಷ್ಠಿರಾದಿಕಥನೇ ದ್ವಿತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಋಷಿನ್ ಪ್ರತಿ ಯುಧಿಷ್ಠಿರಾದಿಕಥನ ಎನ್ನುವ ಮೂವತ್ತೆರಡನೇ ಅಧ್ಯಾಯವು.
[1] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಶ್ಲೋಕವಿದೆ: ಇಯಂ ಚ ಜಾಂಬೂನದಶುದ್ಧಗೌರೀ ಪಾರ್ಥಸ್ಯ ಭಾರ್ಯಾ ಭುಜಗೇಂದ್ರಕನ್ಯಾ| ಚಿತ್ರಾಂಗದಾ ಚೈವ ನರೇಂದ್ರಕನ್ಯಾ ಯೈಷಾ ಸವರ್ಣಾರ್ದ್ರಮಧೂಕಪುಷ್ಪಃ|| ಅರ್ಥಾತ್ ವಿಶುದ್ಧ ಚಿನ್ನದಂತೆ ಗೌರಾಂಗಳಾಗಿರುವ, ಭುಜಗೇಂದ್ರನ ಮಗಳು ಅರ್ಜುನನ ಭಾರ್ಯೆ ಇವಳೇ ಉಲೂಪಿಯು. ಅರಳಿದ ಹಿಪ್ಪೇ ಹೂಗಳ ವರ್ಣಕ್ಕೆ ಸಮಾನ ವರ್ಣವುಳ್ಳ ರಾಜಕುಮಾರಿ ಇವಳೇ ಅರ್ಜುನನ ಮತ್ತೊಬ್ಬ ಪತ್ನಿ ಚಿತ್ರಾಂಗದೆಯು.