Ashramavasika Parva: Chapter 31

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೩೧

ಪಾಂಡವರ ಮತ್ತು ಧೃತರಾಷ್ಟ್ರಾದಿಗಳ ಮಿಲನ (೧-೨೦).

15031001 ವೈಶಂಪಾಯನ ಉವಾಚ|

15031001a ತತಸ್ತೇ ಪಾಂಡವಾ ದೂರಾದವತೀರ್ಯ ಪದಾತಯಃ|

15031001c ಅಭಿಜಗ್ಮುರ್ನರಪತೇರಾಶ್ರಮಂ ವಿನಯಾನತಾಃ||

ವೈಶಂಪಾಯನನು ಹೇಳಿದನು: “ಅನಂತರ ಪಾಂಡವರು ದೂರದಲ್ಲಿಯೇ ಇಳಿದು ವಿನಯದಿಂದ ಕಾಲ್ನಡುಗೆಯಲ್ಲಿಯೇ ನರಪತಿಯ ಆಶ್ರಮದ ಕಡೆ ನಡೆದರು.

15031002a ಸ ಚ ಪೌರಜನಃ ಸರ್ವೋ ಯೇ ಚ ರಾಷ್ಟ್ರನಿವಾಸಿನಃ|

15031002c ಸ್ತ್ರಿಯಶ್ಚ ಕುರುಮುಖ್ಯಾನಾಂ ಪದ್ಭಿರೇವಾನ್ವಯುಸ್ತದಾ||

ಸರ್ವ ಪೌರಜನರೂ, ರಾಷ್ಟ್ರ ನಿವಾಸಿಗಳೂ, ಕುರುಮುಖ್ಯ ಸ್ತ್ರೀಯರೂ ಕೂಡ ಪದಾತಿಗಳಾಗಿಯೇ ಆಶ್ರಮವನ್ನು ಪ್ರವೇಶಿಸಿದರು.

15031003a ಆಶ್ರಮಂ ತೇ ತತೋ ಜಗ್ಮುರ್ಧೃತರಾಷ್ಟ್ರಸ್ಯ ಪಾಂಡವಾಃ|

15031003c ಶೂನ್ಯಂ ಮೃಗಗಣಾಕೀರ್ಣಂ ಕದಲೀವನಶೋಭಿತಮ್||

ಅನಂತರ ಆ ಪಾಂಡವರು ನಿರ್ಜನವಾಗಿದ್ದ, ಮೃಗಗಣಗಳಿಂದ ತುಂಬಿದ್ದ, ಬಾಳೆಯ ತೋಟದಿಂದ ಶೋಭಿಸುತ್ತಿದ್ದ ಧೃತರಾಷ್ಟ್ರನ ಆಶ್ರಮವನ್ನು ತಲುಪಿದರು.

15031004a ತತಸ್ತತ್ರ ಸಮಾಜಗ್ಮುಸ್ತಾಪಸಾ ವಿವಿಧವ್ರತಾಃ|

15031004c ಪಾಂಡವಾನಾಗತಾನ್ದ್ರಷ್ಟುಂ ಕೌತೂಹಲಸಮನ್ವಿತಾಃ||

ಆಗ ಅಲ್ಲಿಗೆ ಆಗಮಿಸಿದ್ದ ಪಾಂಡವರನ್ನು ನೋಡಲು ಕುತೂಹಲದಿಂದ ಕೂಡಿದ್ದ ವಿವಿಧ ವ್ರತಗಳಲ್ಲಿ ನಿರತರಾಗಿದ್ದ ತಾಪಸರು ಬಂದು ಸೇರಿದರು.

15031005a ತಾನಪೃಚ್ಚತ್ತತೋ ರಾಜಾ ಕ್ವಾಸೌ ಕೌರವವಂಶಭೃತ್|

15031005c ಪಿತಾ ಜ್ಯೇಷ್ಠೋ ಗತೋಽಸ್ಮಾಕಮಿತಿ ಬಾಷ್ಪಪರಿಪ್ಲುತಃ||

ಅವರನ್ನು ಕೌರವವಂಶಧಾರಕನಾದ ರಾಜಾ ಯುಧಿಷ್ಠಿರನು ಕಂಬನಿದುಂಬಿದವನಾಗಿ – “ನಮ್ಮ ಜ್ಯೇಷ್ಠ ಪಿತನು ಎಲ್ಲಿಗೆ ಹೋಗಿದ್ದಾನೆ?” ಎಂದು ಪ್ರಶ್ನಿಸಿದನು.

15031006a ತಮೂಚುಸ್ತೇ ತತೋ ವಾಕ್ಯಂ ಯಮುನಾಮವಗಾಹಿತುಮ್|

15031006c ಪುಷ್ಪಾಣಾಮುದಕುಂಭಸ್ಯ ಚಾರ್ಥೇ ಗತ ಇತಿ ಪ್ರಭೋ||

ಹಾಗೆ ಕೇಳಲು ಅವರು “ಪ್ರಭೋ! ಅವನು ಸ್ನಾನಕ್ಕೆಂದು, ಮತ್ತು ಹೂವು-ನೀರನ್ನು ತರಲು ಯಮುನಾ ನದಿಗೆ ಹೋಗಿದ್ದಾನೆ” ಎಂದರು.

15031007a ತೈರಾಖ್ಯಾತೇನ ಮಾರ್ಗೇಣ ತತಸ್ತೇ ಪ್ರಯಯುಸ್ತದಾ|

15031007c ದದೃಶುಶ್ಚಾವಿದೂರೇ ತಾನ್ಸರ್ವಾನಥ ಪದಾತಯಃ||

ಅವರು ಹೇಳಿದ ಮಾರ್ಗದಲ್ಲಿಯೇ ಮುಂದುವರೆಯಲು ಪಾಂಡವರು ಅನತಿದೂರದಲ್ಲಿಯೇ ಕಾಲ್ನಡುಗೆಯಲ್ಲಿ ಬರುತ್ತಿದ್ದ ಧೃತರಾಷ್ಟ್ರಾದಿ ಎಲ್ಲರನ್ನೂ ಕಂಡರು.

15031008a ತತಸ್ತೇ ಸತ್ವರಾ ಜಗ್ಮುಃ ಪಿತುರ್ದರ್ಶನಕಾಂಕ್ಷಿಣಃ|

15031008c ಸಹದೇವಸ್ತು ವೇಗೇನ ಪ್ರಾಧಾವದ್ಯೇನ ಸಾ ಪೃಥಾ||

15031009a ಸಸ್ವನಂ ಪ್ರರುದನ್ಧೀಮಾನ್ಮಾತುಃ ಪಾದಾವುಪಸ್ಪೃಶನ್|

15031009c ಸಾ ಚ ಬಾಷ್ಪಾವಿಲಮುಖೀ ಪ್ರದದರ್ಶ ಪ್ರಿಯಂ ಸುತಮ್||

ತಂದೆಯನ್ನು ಕಾಣುವ ಬಯಕೆಯಿಂದ ಅವರು ಬಹಳ ಶೀಘ್ರವಾಗಿ ಮುಂದುವರೆದರು. ಸಹದೇವನಾದರೋ ಬಹಳ ವೇಗವಾಗಿ ಓಡಿ ಹೋಗಿ ಪೃಥೆಯ ಕಾಲುಗಳನ್ನು ಹಿಡುದುಕೊಂಡು ಜೋರಾಗಿ ಅಳತೊಡಗಿದನು. ಕುಂತಿಯೂ ಕೂಡ ಕಂಬನಿದುಂಬಿದ ಕಣ್ಣುಗಳಿಂದ ತನ್ನ ಪ್ರಿಯ ಸುತನನ್ನು ನೋಡಿದಳು.

15031010a ಬಾಹುಭ್ಯಾಂ ಸಂಪರಿಷ್ವಜ್ಯ ಸಮುನ್ನಾಮ್ಯ ಚ ಪುತ್ರಕಮ್|

15031010c ಗಾಂಧಾರ್ಯಾಃ ಕಥಯಾಮಾಸ ಸಹದೇವಮುಪಸ್ಥಿತಮ್||

ಮಗನನ್ನು ಮೇಲಕ್ಕೆತ್ತಿ ಬಾಹುಗಳಿಂದ ಬಿಗಿದಪ್ಪಿ ಕುಂತಿಯು ಸಹದೇವನು ಬಂದಿರುವುದನ್ನು ಗಾಂಧಾರಿಗೂ ತಿಳಿಸಿದಳು.

15031011a ಅನಂತರಂ ಚ ರಾಜಾನಂ ಭೀಮಸೇನಮಥಾರ್ಜುನಮ್|

15031011c ನಕುಲಂ ಚ ಪೃಥಾ ದೃಷ್ಟ್ವಾ ತ್ವರಮಾಣೋಪಚಕ್ರಮೇ||

ಹತ್ತಿರದಲ್ಲಿಯೇ ಇದ್ದ ರಾಜ ಯುಧಿಷ್ಠಿರ, ಭೀಮಸೇನ, ಅರ್ಜುನ ಮತ್ತು ನಕುಲರನ್ನು ನೋಡಿ ಪೃಥೆಯು ತ್ವರೆಮಾಡಿ ಮುಂದೆಬಂದಳು.

15031012a ಸಾ ಹ್ಯಗ್ರೇಽಗಚ್ಚತ ತಯೋರ್ದಂಪತ್ಯೋರ್ಹತಪುತ್ರಯೋಃ|

15031012c ಕರ್ಷಂತೀ ತೌ ತತಸ್ತೇ ತಾಂ ದೃಷ್ಟ್ವಾ ಸಂನ್ಯಪತನ್ಭುವಿ||

ಪುತ್ರರನ್ನು ಕಳೆದುಕೊಂಡ ಆ ದಂಪತಿಗಳನ್ನು ಎಳೆದುಕೊಂಡು ಮುಂದೆ ಮುಂದೆ ಬರುತ್ತಿದ್ದ ಅವಳನ್ನು ನೋಡಿ ಪಾಂಡವರು ಭೂಮಿಯ ಮೇಲೆಯೇ ಅಡ್ಡಬಿದ್ದರು.

15031013a ತಾನ್ರಾಜಾ ಸ್ವರಯೋಗೇನ ಸ್ಪರ್ಶೇನ ಚ ಮಹಾಮನಾಃ|

15031013c ಪ್ರತ್ಯಭಿಜ್ಞಾಯ ಮೇಧಾವೀ ಸಮಾಶ್ವಾಸಯತ ಪ್ರಭುಃ||

ಮಹಾಮನಸ್ವಿ ಮೇಧಾವೀ ಪ್ರಭು ರಾಜಾ ಧೃತರಾಷ್ಟ್ರನು ಸ್ವರಗಳಿಂದ ಮತ್ತು ಸ್ಪರ್ಶದಿಂದ ಪ್ರತಿಯೊಬ್ಬರನ್ನೂ ಗುರುತಿಸಿ ಸಮಾಧಾನಗೊಳಿಸಿದನು.

15031014a ತತಸ್ತೇ ಬಾಷ್ಪಮುತ್ಸೃಜ್ಯ ಗಾಂಧಾರೀಸಹಿತಂ ನೃಪಮ್|

15031014c ಉಪತಸ್ಥುರ್ಮಹಾತ್ಮಾನೋ ಮಾತರಂ ಚ ಯಥಾವಿಧಿ||

ಆಗ ಆ ಮಹಾತ್ಮರು ಕಣ್ಣೀರು ಸುರಿಸುತ್ತಾ ಗಾಂಧಾರೀ ಸಹಿತನಾದ ನೃಪನಿಗೂ ಮತ್ತು ತಾಯಿಗೂ ಯಥಾವಿಧಿಯಾಗಿ ನಮಸ್ಕರಿಸಿದರು.

15031015a ಸರ್ವೇಷಾಂ ತೋಯಕಲಶಾನ್ಜಗೃಹುಸ್ತೇ ಸ್ವಯಂ ತದಾ|

15031015c ಪಾಂಡವಾ ಲಬ್ಧಸಂಜ್ಞಾಸ್ತೇ ಮಾತ್ರಾ ಚಾಶ್ವಾಸಿತಾಃ ಪುನಃ||

ತಾಯಿಯಿಂದ ಸಮಾಧಾನಗೊಳಿಸಲ್ಪಟ್ಟ ಪಾಂಡವರು ಪುನಃ ಚೇತರಿಸಿಕೊಂಡು ನೀರಿನ ಎಲ್ಲ ಕೊಡಗಳನ್ನೂ ಸ್ವಯಂ ತಾವೇ ಎತ್ತಿಕೊಂಡರು.

15031016a ತತೋ ನಾರ್ಯೋ ನೃಸಿಂಹಾನಾಂ ಸ ಚ ಯೋಧಜನಸ್ತದಾ|

15031016c ಪೌರಜಾನಪದಾಶ್ಚೈವ ದದೃಶುಸ್ತಂ ನರಾಧಿಪಮ್||

ಅನಂತರ ನರಸಿಂಹರ ನಾರಿಯರು, ಯೋಧಜನರು, ಪೌರ-ಜಾನಪದ ಜನರು ನರಾಧಿಪ ಧೃತರಾಷ್ಟ್ರನನ್ನು ಸಂದರ್ಶಿಸಿದರು.

15031017a ನಿವೇದಯಾಮಾಸ ತದಾ ಜನಂ ತಂ ನಾಮಗೋತ್ರತಃ|

15031017c ಯುಧಿಷ್ಠಿರೋ ನರಪತಿಃ ಸ ಚೈನಾನ್ಪ್ರತ್ಯಪೂಜಯತ್||

ಯುಧಿಷ್ಠಿರನು ಅವರೆಲ್ಲರನ್ನೂ ನಾಮ-ಗೋತ್ರಗಳನ್ನು ಹೇಳಿ ಪರಿಚಯ ಮಾಡಿಕೊಟ್ಟ ನಂತರ ನರಪತಿ ಧೃತರಾಷ್ಟ್ರನು ಅವರನ್ನು ಅಭಿನಂದಿಸಿದನು.

15031018a ಸ ತೈಃ ಪರಿವೃತೋ ಮೇನೇ ಹರ್ಷಬಾಷ್ಪಾವಿಲೇಕ್ಷಣಃ|

15031018c ರಾಜಾತ್ಮಾನಂ ಗೃಹಗತಂ ಪುರೇವ ಗಜಸಾಹ್ವಯೇ||

ಪುರಜನರಿಂದ ಪರಿವೃತನಾದ ರಾಜನು ಆನಂದ ಭಾಷ್ಪಗಳನ್ನು ಸುರಿಸುತ್ತಾ ತಾನು ಹಿಂದಿನಂತೆಯೇ ಹಸ್ತಿನಾಪುರದ ಅರಮನೆಯಲ್ಲಿರುವನೋ ಎಂದು ಭಾವಿಸಿದನು.

15031019a ಅಭಿವಾದಿತೋ ವಧೂಭಿಶ್ಚ ಕೃಷ್ಣಾದ್ಯಾಭಿಃ ಸ ಪಾರ್ಥಿವಃ|

15031019c ಗಾಂಧಾರ್ಯಾ ಸಹಿತೋ ಧೀಮಾನ್ಕುಂತ್ಯಾ ಚ ಪ್ರತ್ಯನಂದತ||

ಕೃಷ್ಣೆಯೇ ಮೊದಲಾದ ಸೊಸೆಯಂದಿರೂ ಕೂಡ ಕುಂತಿ-ಗಾಂಧಾರಿಯರ ಸಹಿತ ಪಾರ್ಥಿವನನ್ನು ಅಭಿನಂದಿಸಲು ಪ್ರತಿಯಾಗಿ ಅವನೂ ಅವರನ್ನು ಅಭಿನಂದಿಸಿದನು.

15031020a ತತಶ್ಚಾಶ್ರಮಮಾಗಚ್ಚತ್ಸಿದ್ಧಚಾರಣಸೇವಿತಮ್|

15031020c ದಿದೃಕ್ಷುಭಿಃ ಸಮಾಕೀರ್ಣಂ ನಭಸ್ತಾರಾಗಣೈರಿವ||

ಅನಂತರ ಅವನು ಸಿದ್ಧ-ಚಾರಣರಿಂದ ಸಂಸೇವಿತವಾಗಿದ್ದ ತನ್ನ ಆಶ್ರಮಕ್ಕೆ ಹೋದನು. ಪ್ರೇಕ್ಷಕರಿಂದ ತುಂಬಿಹೋಗಿದ್ದ ಆ ಆಶ್ರಮವು ಆಗ ನಕ್ಷತ್ರಗಳಿಂದ ತುಂಬಿದ ಆಕಾಶದಂತೆ ಕಾಣುತ್ತಿತ್ತು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಯುಧಿಷ್ಠಿರಾದಿಧೃತರಾಷ್ಟ್ರಸಮಾಗಮೇ ಏಕತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಯುಧಿಷ್ಠಿರಾದಿಧೃತರಾಷ್ಟ್ರಸಮಾಗಮ ಎನ್ನುವ ಮೂವತ್ತೊಂದನೇ ಅಧ್ಯಾಯವು.

Related image

Comments are closed.