ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೩೦
ಧೃತರಾಷ್ಟ್ರನ ಆಶ್ರಮದತ್ತ ಪಾಂಡವರ ಪ್ರಯಾಣ (೧-೧೮).
15030001 ವೈಶಂಪಾಯನ ಉವಾಚ|
15030001a ಆಜ್ಞಾಪಯಾಮಾಸ ತತಃ ಸೇನಾಂ ಭರತಸತ್ತಮಃ|
15030001c ಅರ್ಜುನಪ್ರಮುಖೈರ್ಗುಪ್ತಾಂ ಲೋಕಪಾಲೋಪಮೈರ್ನರೈಃ||
ವೈಶಂಪಾಯನನು ಹೇಳಿದನು: “ಅನಂತರ ಭರತಸತ್ತಮನು ಲೋಕಪಾಲರ ಸಮನಾದ ಅರ್ಜುಜಪ್ರಮುಖರ ರಕ್ಷಣೆಯಲ್ಲಿದ್ದ ಸೇನೆಯನ್ನು ಆಜ್ಞಾಪಿಸಿದನು.
15030002a ಯೋಗೋ ಯೋಗ ಇತಿ ಪ್ರೀತ್ಯಾ ತತಃ ಶಬ್ದೋ ಮಹಾನಭೂತ್|
15030002c ಕ್ರೋಶತಾಂ ಸಾದಿನಾಂ ತತ್ರ ಯುಜ್ಯತಾಂ ಯುಜ್ಯತಾಮಿತಿ||
“ರಥಗಳನ್ನು ಹೂಡಿ! ಹೂಡಿ!” ಎಂಬ ಸಂತೋಷದ ಕೂಗುಗಳೂ, ಕುದುರೆ ಸವಾರರ “ಸಿದ್ಧರಾಗಿ! ಸಿದ್ಧರಾಗಿ!” ಎನ್ನುವ ಕೂಗೂ ಜೋರಾಗಿ ಕೇಳಿಬಂದಿತು.
15030003a ಕೇ ಚಿದ್ಯಾನೈರ್ನರಾ ಜಗ್ಮುಃ ಕೇ ಚಿದಶ್ವೈರ್ಮನೋಜವೈಃ|
15030003c ರಥೈಶ್ಚ ನಗರಾಕಾರೈಃ ಪ್ರದೀಪ್ತಜ್ವಲನೋಪಮೈಃ||
ಕೆಲವರು ಪಲ್ಲಕ್ಕಿಗಳಲ್ಲಿ ಹೊರಟರೆ ಕೆಲವರು ಮನೋವೇಗದ ಕುದುರೆಗಳನ್ನೇರಿದರು. ಇನ್ನು ಕೆಲವರು ನಗರಾಕಾರದ, ಅಗ್ನಿಯಂತೆ ಬೆಳಗುತ್ತಿರುವ ರಥಗಳಲ್ಲಿ ಹೊರಟರು.
15030004a ಗಜೇಂದ್ರೈಶ್ಚ ತಥೈವಾನ್ಯೇ ಕೇ ಚಿದುಷ್ಟ್ರೈರ್ನರಾಧಿಪ|
15030004c ಪದಾತಿನಸ್ತಥೈವಾನ್ಯೇ ನಖರಪ್ರಾಸಯೋಧಿನಃ||
ನರಾಧಿಪ! ಅನ್ಯರು ಆನೆಗಳನ್ನು ಸವಾರಿಮಾಡಿದರೆ, ಉಗುರು ಮತ್ತು ಪ್ರಾಸಗಳೊಡನೆ ಯುದ್ಧಮಾಡುವ ಯೋಧರು ಪದಾತಿಗಳಾಗಿ ಹೊರಟರು.
15030005a ಪೌರಜಾನಪದಾಶ್ಚೈವ ಯಾನೈರ್ಬಹುವಿಧೈಸ್ತಥಾ|
15030005c ಅನ್ವಯುಃ ಕುರುರಾಜಾನಂ ಧೃತರಾಷ್ಟ್ರದಿದೃಕ್ಷಯಾ||
ಕುರುರಾಜ ಧೃತರಾಷ್ಟ್ರನನ್ನು ಕಾಣಲು ಬಯಸಿದ ಪುರ-ಗ್ರಾಮೀಣ ಪ್ರಜೆಗಳು ಬಹುವಿಧದ ಯಾನಗಳಲ್ಲಿ ಹೊರಟರು.
15030006a ಸ ಚಾಪಿ ರಾಜವಚನಾದಾಚಾರ್ಯೋ ಗೌತಮಃ ಕೃಪಃ|
15030006c ಸೇನಾಮಾದಾಯ ಸೇನಾನೀ ಪ್ರಯಯಾವಾಶ್ರಮಂ ಪ್ರತಿ||
ರಾಜನ ವಚನದಂತೆ ಆಚಾರ್ಯ ಸೇನಾನೀ ಗೌತಮ ಕೃಪನೂ ಸೇನೆಯನ್ನು ತೆಗೆದುಕೊಂಡು ಧೃತರಾಷ್ಟ್ರನ ಆಶ್ರಮದ ಕಡೆ ಪ್ರಯಾಣಿಸಿದನು.
15030007a ತತೋ ದ್ವಿಜೈರ್ವೃತಃ ಶ್ರೀಮಾನ್ಕುರುರಾಜೋ ಯುಧಿಷ್ಠಿರಃ|
15030007c ಸಂಸ್ತೂಯಮಾನೋ ಬಹುಭಿಃ ಸೂತಮಾಗಧಬಂದಿಭಿಃ||
15030008a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ|
15030008c ರಥಾನೀಕೇನ ಮಹತಾ ನಿರ್ಯಯೌ ಕುರುನಂದನಃ||
ಆಗ ಕುರುನಂದನ ಶ್ರೀಮಾನ್ ಕುರುರಾಜ ಯುಧಿಷ್ಠಿರನು ದ್ವಿಜರಿಂದ ಆವೃತನಾಗಿ, ಅನೇಕ ಸೂತ-ಮಾಗಧ-ವಂದಿಗಳ ಸ್ತುತಿಗಳೊಡನೆ, ನೆತ್ತಿಯ ಮೇಲೆ ಬೆಳಗುತ್ತಿದ್ದ ಬಿಳಿಯ ಛತ್ರದಡಿಯಲ್ಲಿ, ಮಹಾ ರಥಸೇನೆಯೊಡನೆ ಹೊರಟನು.
15030009a ಗಜೈಶ್ಚಾಚಲಸಂಕಾಶೈರ್ಭೀಮಕರ್ಮಾ ವೃಕೋದರಃ|
15030009c ಸಜ್ಜಯಂತ್ರಾಯುಧೋಪೇತೈಃ ಪ್ರಯಯೌ ಮಾರುತಾತ್ಮಜಃ||
ಮಾರುತಾತ್ಮಜ ಭೀಮಕರ್ಮಿ ವೃಕೋದರನು ಯಂತ್ರಾಯುಧಗಳಿಂದ ಸಜ್ಜಾಗಿದ್ದ ಪರ್ವತೋಪಮ ಗಜಸೇನೆಯೊಂದಿಗೆ ಹೊರಟನು.
15030010a ಮಾದ್ರೀಪುತ್ರಾವಪಿ ತಥಾ ಹಯಾರೋಹೈಃ ಸುಸಂವೃತೌ|
15030010c ಜಗ್ಮತುಃ ಪ್ರೀತಿಜನನೌ ಸಂನದ್ಧಕವಚಧ್ವಜೌ||
ತಾಯಿಗೆ ಪ್ರಿಯರಾಗಿದ್ದ ಮಾದ್ರೀಪುತ್ರರೂ ಕೂಡ ಕವಚ-ಧ್ವಜಗಳಿಂದ ಸನ್ನದ್ಧ ಅಶ್ವಾರೋಹಿಗಳ ಸೇನೆಗಳೊಂದಿಗೆ ಹೊರಟರು.
15030011a ಅರ್ಜುನಶ್ಚ ಮಹಾತೇಜಾ ರಥೇನಾದಿತ್ಯವರ್ಚಸಾ|
15030011c ವಶೀ ಶ್ವೇತೈರ್ಹಯೈರ್ದಿವ್ಯೈರ್ಯುಕ್ತೇನಾನ್ವಗಮನ್ನೃಪಮ್||
ಮಹಾತೇಜಸ್ವೀ ಅರ್ಜುನನು ಶ್ವೇತವರ್ಣದ ಕುದುರೆಗಳನ್ನು ಕಟ್ಟಿದ್ದ ಆದಿತ್ಯವರ್ಚಸ ರಥದಲ್ಲಿ ಕುಳಿತು ನೃಪ ಯುಧಿಷ್ಠಿರನನ್ನು ಹಿಂಬಾಲಿಸಿದನು.
15030012a ದ್ರೌಪದೀಪ್ರಮುಖಾಶ್ಚಾಪಿ ಸ್ತ್ರೀಸಂಘಾಃ ಶಿಬಿಕಾಗತಾಃ|
15030012c ಸ್ತ್ರ್ಯಧ್ಯಕ್ಷಯುಕ್ತಾಃ ಪ್ರಯಯುರ್ವಿಸೃಜಂತೋಽಮಿತಂ ವಸು||
ಪಲ್ಲಕ್ಕಿಗಳಲ್ಲಿ ಕುಳಿತಿದ್ದ ದ್ರೌಪದಿಯೇ ಮೊದಲಾದ ಸ್ತ್ರೀಗಣಗಳೂ, ಸ್ತ್ರೀ ಅಧ್ಯಕ್ಷರ ರಕ್ಷಣೆಯಲ್ಲಿ, ಅಮಿತ ಸಂಪತ್ತನ್ನು ದಾನಮಾಡುತ್ತಾ ಹೊರಟರು.
15030013a ಸಮೃದ್ಧನರನಾಗಾಶ್ವಂ ವೇಣುವೀಣಾನಿನಾದಿತಮ್|
15030013c ಶುಶುಭೇ ಪಾಂಡವಂ ಸೈನ್ಯಂ ತತ್ತದಾ ಭರತರ್ಷಭ||
ಭರತರ್ಷಭ! ಮನುಷ್ಯರು, ಆನೆಗಳು ಮತ್ತು ಕುದುರೆಗಳಿಂದ ಸಮೃದ್ಧವಾಗಿದ್ದ ಮತ್ತು ವೇಣುವೀಣಾನಿನಾದಗಳಿಂದ ತುಂಬಿದ್ದ ಆ ಪಾಂಡವ ಸೇನೆಯು ಶೋಭಿಸುತ್ತಿತ್ತು.
15030014a ನದೀತೀರೇಷು ರಮ್ಯೇಷು ಸರತ್ಸು ಚ ವಿಶಾಂ ಪತೇ|
15030014c ವಾಸಾನ್ಕೃತ್ವಾ ಕ್ರಮೇಣಾಥ ಜಗ್ಮುಸ್ತೇ ಕುರುಪುಂಗವಾಃ||
ವಿಶಾಂಪತೇ! ರಮ್ಯ ನದೀತೀರಗಳಲ್ಲಿ ಮತ್ತು ಸರೋವರಗಳಲ್ಲಿ ತಂಗುತ್ತಾ ಕ್ರಮೇಣವಾಗಿ ಆ ಕುರುಪುಂಗವರು ಪ್ರಯಾಣಬೆಳೆಸಿದರು.
15030015a ಯುಯುತ್ಸುಶ್ಚ ಮಹಾತೇಜಾ ಧೌಮ್ಯಶ್ಚೈವ ಪುರೋಹಿತಃ|
15030015c ಯುಧಿಷ್ಠಿರಸ್ಯ ವಚನಾತ್ ಪುರಗುಪ್ತಿಂ ಪ್ರಚಕ್ರತುಃ||
ಯುಧಿಷ್ಠಿರನ ವಚನದಂತೆ ಮಹಾತೇಜಸ್ವೀ ಯುಯುತ್ಸು ಮತ್ತು ಪುರೋಹಿತ ಧೌಮ್ಯರು ರಾಜಧಾನಿಯ ರಕ್ಷಣಿಯಲ್ಲಿದ್ದರು.
15030016a ತತೋ ಯುಧಿಷ್ಠಿರೋ ರಾಜಾ ಕುರುಕ್ಷೇತ್ರಮವಾತರತ್|
15030016c ಕ್ರಮೇಣೋತ್ತೀರ್ಯ ಯಮುನಾಂ ನದೀಂ ಪರಮಪಾವನೀಮ್||
ರಾಜ ಯುಧಿಷ್ಠಿರನು ಕ್ರಮೇಣವಾಗಿ ಪರಮಪಾವನೀ ಯಮುನಾ ನದಿಯನ್ನು ದಾಟಿ ಕುರುಕ್ಷೇತ್ರವನ್ನು ತಲುಪಿದನು.
15030017a ಸ ದದರ್ಶಾಶ್ರಮಂ ದೂರಾದ್ರಾಜರ್ಷೇಸ್ತಸ್ಯ ಧೀಮತಃ|
15030017c ಶತಯೂಪಸ್ಯ ಕೌರವ್ಯ ಧೃತರಾಷ್ಟ್ರಸ್ಯ ಚೈವ ಹ||
ದೂರದಿಂದಲೇ ಅವನು ಧೀಮಂತ ರಾಜರ್ಷಿ ಶತಯೂಪನ ಮತ್ತು ಕೌರವ್ಯ ಧೃತರಾಷ್ಟ್ರರ ಆಶ್ರಮವನ್ನು ಕಂಡನು.
15030018a ತತಃ ಪ್ರಮುದಿತಃ ಸರ್ವೋ ಜನಸ್ತದ್ವನಮಂಜಸಾ|
15030018c ವಿವೇಶ ಸುಮಹಾನಾದೈರಾಪೂರ್ಯ ಭರತರ್ಷಭ||
ಭರತರ್ಷಭ! ಆಗ ಆ ಎಲ್ಲ ಜನರೂ ಸಂತೋಷಗೊಂಡು ಮಹಾನಾದಗೈಯುತ್ತಾ ಆಶ್ರಮಪದವನ್ನು ಪ್ರವೇಶಿಸಿದರು.”
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಾಶ್ರಮಗಮನೇ ತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಾಶ್ರಮಗಮನ ಎನ್ನುವ ಮೂವತ್ತನೇ ಅಧ್ಯಾಯವು.