ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೨೯
ಪಾಂಡವರ ಶೋಕ (೧-೮). ಪಾಂಡವರು ಧೃತರಾಷ್ಟ್ರನ ಆಶ್ರಮಕ್ಕೆ ಹೊರಟಿದುದು (೯-೨೬).
15029001 ವೈಶಂಪಾಯನ ಉವಾಚ|
15029001a ಏವಂ ತೇ ಪುರುಷವ್ಯಾಘ್ರಾಃ ಪಾಂಡವಾ ಮಾತೃನಂದನಾಃ|
15029001c ಸ್ಮರಂತೋ ಮಾತರಂ ವೀರಾ ಬಭೂವುರ್ಭೃಶದುಃಖಿತಾಃ||
ವೈಶಂಪಾಯನನು ಹೇಳಿದನು: “ಹೀಗೆ ಆ ಮಾತೃನಂದನ ಪುರುಷವ್ಯಾಘ್ರ ವೀರ ಪಾಂಡವರು ತಾಯಿಯನ್ನು ಸ್ಮರಿಸಿಕೊಂಡು ಬಹಳ ದುಃಖಿತರಾದರು.
15029002a ಯೇ ರಾಜಕಾರ್ಯೇಷು ಪುರಾ ವ್ಯಾಸಕ್ತಾ ನಿತ್ಯಶೋಽಭವನ್|
15029002c ತೇ ರಾಜಕಾರ್ಯಾಣಿ ತದಾ ನಾಕಾರ್ಷುಃ ಸರ್ವತಃ ಪುರೇ||
ಹಿಂದೆ ರಾಜಕಾರ್ಯಗಳಲ್ಲಿ ನಿತ್ಯವೂ ಆಸಕ್ತಿಯನ್ನಿಟ್ಟುಕೊಂಡಿದ್ದ ಅವರು ರಾಜ್ಯದ ಎಲ್ಲ ರಾಜಕಾರ್ಯಗಳನ್ನು ಮಾಡುತ್ತಿರಲಿಲ್ಲ.
15029003a ಆವಿಷ್ಟಾ ಇವ ಶೋಕೇನ ನಾಭ್ಯನಂದಂತ ಕಿಂ ಚನ|
15029003c ಸಂಭಾಷ್ಯಮಾಣಾ ಅಪಿ ತೇ ನ ಕಿಂ ಚಿತ್ಪ್ರತ್ಯಪೂಜಯನ್||
ಶೋಕದಿಂದ ಆವಿಷ್ಟರಾಗಿರುವರೋ ಎನ್ನುವಂತೆ ಯಾವುದರಿಂದಲೂ ಅವರು ಸಂತೋಷಗೊಳ್ಳುತ್ತಿರಲಿಲ್ಲ. ಸಂಭಾಷಣೆಗಳಲ್ಲಿ ಕೂಡ ಇತರರನ್ನು ಗೌರವಿಸುತ್ತಿರಲಿಲ್ಲ.
15029004a ತೇ ಸ್ಮ ವೀರಾ ದುರಾಧರ್ಷಾ ಗಾಂಭೀರ್ಯೇ ಸಾಗರೋಪಮಾಃ|
15029004c ಶೋಕೋಪಹತವಿಜ್ಞಾನಾ ನಷ್ಟಸಂಜ್ಞಾ ಇವಾಭವನ್||
ದುರ್ಧರ್ಷರೂ ಸಾಗರದಂತೆ ಗಂಭೀರರೂ ಆಗಿದ್ದ ಆ ವೀರರು ಶೋಕದಿಂದ ಪೀಡಿತರಾಗಿ ಬುದ್ಧಿಯನ್ನೇ ಕಳೆದುಕೊಂಡಿರುವರೋ ಎನ್ನುವಂತೆ ತೋರುತ್ತಿದ್ದರು.
15029005a ಅನುಸ್ಮರಂತೋ ಜನನೀಂ ತತಸ್ತೇ ಕುರುನಂದನಾಃ|
15029005c ಕಥಂ ನು ವೃದ್ಧಮಿಥುನಂ ವಹತ್ಯದ್ಯ ಪೃಥಾ ಕೃಶಾ||
ಜನನಿಯನ್ನು ಸ್ಮರಿಸಿಕೊಳ್ಳುತ್ತಾ ಆ ಕುರುನಂದನರು ಚಿಂತಿಸುತ್ತಿದ್ದರು: “ಕೃಶಳಾದ ಪೃಥೆಯು ಆ ವೃದ್ಧ ದಂಪತಿಗಳ ಸೇವೆಯನ್ನು ಹೇಗೆ ತಾನೇ ಮಾಡಬಲ್ಲಳು?
15029006a ಕಥಂ ಚ ಸ ಮಹೀಪಾಲೋ ಹತಪುತ್ರೋ ನಿರಾಶ್ರಯಃ|
15029006c ಪತ್ನ್ಯಾ ಸಹ ವಸತ್ಯೇಕೋ ವನೇ ಶ್ವಾಪದಸೇವಿತೇ||
ಪುತ್ರರನ್ನು ಕಳೆದುಕೊಂಡು ನಿರಾಶ್ರಯನಾದ ಆ ಮಹೀಪಾಲನು ಪತ್ನಿಯ ಸಹಿತ ಏಕಾಂಗಿಯಾಗಿ ಆ ಕ್ರೂರ ಮೃಗಗಳಿರುವ ವನದಲ್ಲಿ ಹೇಗೆ ವಾಸಿಸುತ್ತಿದ್ದಾನೆ?
15029007a ಸಾ ಚ ದೇವೀ ಮಹಾಭಾಗಾ ಗಾಂಧಾರೀ ಹತಬಾಂಧವಾ|
15029007c ಪತಿಮಂಧಂ ಕಥಂ ವೃದ್ಧಮನ್ವೇತಿ ವಿಜನೇ ವನೇ||
ಬಾಂಧವರನ್ನು ಕಳೆದುಕೊಂಡ ಆ ದೇವೀ ಮಹಾಭಾಗೆ ಗಾಂಧಾರಿಯೂ ಕೂಡ ನಿರ್ಜನ ವನದಲ್ಲಿ ಹೇಗೆ ತಾನೇ ಆ ವೃದ್ಧ ಪತಿಯನ್ನು ಅನುಸರಿಸಿ ಹೋಗುತ್ತಿದ್ದಾಳೆ?”
15029008a ಏವಂ ತೇಷಾಂ ಕಥಯತಾಮೌತ್ಸುಕ್ಯಮಭವತ್ತದಾ|
15029008c ಗಮನೇ ಚಾಭವದ್ ಬುದ್ಧಿರ್ಧೃತರಾಷ್ಟ್ರದಿದೃಕ್ಷಯಾ||
ಹೀಗೆ ಅವರ ಕುರಿತು ಮಾತನಾಡಿಕೊಳ್ಳುತ್ತಿರುವಾಗ ಉತ್ಸುಕತೆಯಿಂದ ಧೃತರಾಷ್ಟ್ರನನ್ನು ನೋಡಲು ಹೋಗುವ ಮನಸ್ಸುಮಾಡಿದರು.
15029009a ಸಹದೇವಸ್ತು ರಾಜಾನಂ ಪ್ರಣಿಪತ್ಯೇದಮಬ್ರವೀತ್|
15029009c ಅಹೋ ಮೇ ಭವತೋ ದೃಷ್ಟಂ ಹೃದಯಂ ಗಮನಂ ಪ್ರತಿ||
ಸಹದೇವನಾದರೋ ರಾಜನಿಗೆ ಬಗ್ಗಿ ನಮಸ್ಕರಿಸಿ ಹೇಳಿದನು: “ಅಯ್ಯಾ! ನೀನು ಅರಣ್ಯಕ್ಕೆ ಹೋಗಲು ಬಯಸಿದುದನ್ನು ಕಂಡು ನನಗೆ ಸಂತೋಷವಾಗುತ್ತಿದೆ.
15029010a ನ ಹಿ ತ್ವಾ ಗೌರವೇಣಾಹಮಶಕಂ ವಕ್ತುಮಾತ್ಮನಾ|
15029010c ಗಮನಂ ಪ್ರತಿ ರಾಜೇಂದ್ರ ತದಿದಂ ಸಮುಪಸ್ಥಿತಮ್||
ನಿನ್ನ ಮೇಲಿನ ಗೌರವದಿಂದಾಗಿ ನಾನೇ ಇದನ್ನು ಪ್ರಸ್ತಾವಿಸಲು ಶಕ್ಯನಾಗಿರಲಿಲ್ಲ. ರಾಜೇಂದ್ರ! ಆದರೆ ಅದೃಷ್ಟವಶಾತ್ ವನಕ್ಕೆ ಹೋಗುವ ವಿಚಾರವನ್ನು ನೀನೇ ಪ್ರಸ್ತಾವಿಸಿರುವೆ!
15029011a ದಿಷ್ಟ್ಯಾ ದ್ರಕ್ಷ್ಯಾಮಿ ತಾಂ ಕುಂತೀಂ ವರ್ತಯಂತೀಂ ತಪಸ್ವಿನೀಮ್|
15029011c ಜಟಿಲಾಂ ತಾಪಸೀಂ ವೃದ್ಧಾಂ ಕುಶಕಾಶಪರಿಕ್ಷತಾಮ್||
ತಪಸ್ವಿನಿಯಂತೆ ಜೀವಿಸುತ್ತಿರುವ, ಜಟಾಧಾರಿ, ತಾಪಸೀ, ಕುಶ-ಕಾಶಗಳ ಆಸನ-ಹಾಸಿಗೆಗಳಿಂದ ಗಾಯಗೊಂಡಿರುವ ಆ ವೃದ್ಧ ಕುಂತಿಯನ್ನು ನಾನು ನೋಡಬಲ್ಲೆನೆಂದರೆ ಅದೊಂದು ಅದೃಷ್ಟವೇ ಸರಿ!
15029012a ಪ್ರಾಸಾದಹರ್ಮ್ಯಸಂವೃದ್ಧಾಮತ್ಯಂತಸುಖಭಾಗಿನೀಮ್|
15029012c ಕದಾ ನು ಜನನೀಂ ಶ್ರಾಂತಾಂ ದ್ರಕ್ಷ್ಯಾಮಿ ಭೃಶದುಃಖಿತಾಮ್||
ಪ್ರಾಸಾದ-ಉಪ್ಪರಿಗೆಗಳಲ್ಲಿಯೇ ಅತ್ಯಂತ ಸುಖಭಾಗಿನಿಯಾಗಿ ಬೆಳೆದು ಈಗ ಬಳಲಿರುವ ಮತ್ತು ಅತ್ಯಂತ ದುಃಖಿತಳಾಗಿರುವ ಆ ಜನನಿಯನ್ನು ನಾನು ಯಾವಾಗ ಕಾಣುತ್ತೇನೆ?
15029013a ಅನಿತ್ಯಾಃ ಖಲು ಮರ್ತ್ಯಾನಾಂ ಗತಯೋ ಭರತರ್ಷಭ|
15029013c ಕುಂತೀ ರಾಜಸುತಾ ಯತ್ರ ವಸತ್ಯಸುಖಿನೀ ವನೇ||
ಭರತರ್ಷಭ! ರಾಜಸುತೆ ಕುಂತಿಯು ಅಸುಖಿಯಾಗಿ ಜೀವಿಸುತ್ತಿದ್ದಾಳೆ ಎಂದರೆ ಮನುಷ್ಯರ ಸ್ಥಿತಿಗತಿಗಳು ಅನಿತ್ಯವಾದವುಗಳು ಎಂದಲ್ಲವೇ?”
15029014a ಸಹದೇವವಚಃ ಶ್ರುತ್ವಾ ದ್ರೌಪದೀ ಯೋಷಿತಾಂ ವರಾ|
15029014c ಉವಾಚ ದೇವೀ ರಾಜಾನಮಭಿಪೂಜ್ಯಾಭಿನಂದ್ಯ ಚ||
ಸಹದೇವನ ಮಾತನ್ನು ಕೇಳಿ ಸ್ತ್ರೀಯರಲ್ಲಿಯೇ ಶ್ರೇಷ್ಠಳಾದ ದೇವೀ ದ್ರೌಪದಿಯು ರಾಜನಿಗೆ ನಮಸ್ಕರಿಸಿ ಹೇಳಿದಳು:
15029015a ಕದಾ ದ್ರಕ್ಷ್ಯಾಮಿ ತಾಂ ದೇವೀಂ ಯದಿ ಜೀವತಿ ಸಾ ಪೃಥಾ|
15029015c ಜೀವಂತ್ಯಾ ಹ್ಯದ್ಯ ನಃ ಪ್ರೀತಿರ್ಭವಿಷ್ಯತಿ ನರಾಧಿಪ||
“ನರಾಧಿಪ! ಆ ದೇವೀ ಪೃಥೆಯನ್ನು ಎಂದು ನೋಡುತ್ತೇನೆ? ಅವಳು ಜೀವಿತಳಾಗಿರುವಳಲ್ಲವೇ? ಅವಳು ಜೀವಂತಳಾಗಿದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ.
15029016a ಏಷಾ ತೇಽಸ್ತು ಮತಿರ್ನಿತ್ಯಂ ಧರ್ಮೇ ತೇ ರಮತಾಂ ಮನಃ|
15029016c ಯೋಽದ್ಯ ತ್ವಮಸ್ಮಾನ್ರಾಜೇಂದ್ರ ಶ್ರೇಯಸಾ ಯೋಜಯಿಷ್ಯಸಿ||
ನಿನ್ನ ಬುದ್ಧಿಯು ನಿತ್ಯವೂ ಹೀಗೆಯೇ ಇರಲಿ! ನಿನ್ನ ಮನಸ್ಸು ಧರ್ಮದಲ್ಲಿಯೇ ರಮಿಸಲಿ! ರಾಜೇಂದ್ರ! ಇಂದು ನೀನು ನಮಗೆ ಶ್ರೇಯಸ್ಸಿಗೆ ಭಾಗಿಗಳನ್ನಾಗಿ ಮಾಡುತ್ತಿರುವೆ!
15029017a ಅಗ್ರಪಾದಸ್ಥಿತಂ ಚೇಮಂ ವಿದ್ಧಿ ರಾಜನ್ವಧೂಜನಮ್|
15029017c ಕಾಂಕ್ಷಂತಂ ದರ್ಶನಂ ಕುಂತ್ಯಾ ಗಾಂಧಾರ್ಯಾಃ ಶ್ವಶುರಸ್ಯ ಚ||
ರಾಜನ್! ಕುಂತಿ, ಗಾಂಧಾರಿ ಮತ್ತು ಮಾವನನ್ನು ಕಾಣಲು ಕಾತರರಾಗಿ ಈ ಎಲ್ಲ ಸೊಸೆಯಂದಿರೂ ತುದಿಗಾಲ ಮೇಲೆ ನಿಂತಿದ್ದಾರೆಂದು ತಿಳಿ!”
15029018a ಇತ್ಯುಕ್ತಃ ಸ ನೃಪೋ ದೇವ್ಯಾ ಪಾಂಚಾಲ್ಯಾ ಭರತರ್ಷಭ|
15029018c ಸೇನಾಧ್ಯಕ್ಷಾನ್ಸಮಾನಾಯ್ಯ ಸರ್ವಾನಿದಮಥಾಬ್ರವೀತ್||
ಭರತರ್ಷಭ! ದೇವೀ ಪಾಂಚಾಲಿಯು ಹೀಗೆ ಹೇಳಲು ನೃಪನು ಸೇನಾಧ್ಯಕ್ಷರೆಲ್ಲರನ್ನು ಕರೆದು ಹೀಗೆ ಹೇಳಿದನು:
15029019a ನಿರ್ಯಾತಯತ ಮೇ ಸೇನಾಂ ಪ್ರಭೂತರಥಕುಂಜರಾಮ್|
15029019c ದ್ರಕ್ಷ್ಯಾಮಿ ವನಸಂಸ್ಥಂ ಚ ಧೃತರಾಷ್ಟ್ರಂ ಮಹೀಪತಿಮ್||
“ರಥ-ಕುಂಜರಗಳಿಂದ ಸಮೃದ್ಧವಾದ ನನ್ನ ಸೇನೆಯನ್ನು ಹೊರಡಿಸಿ! ವನದಲ್ಲಿರುವ ಮಹೀಪತಿ ಧೃತರಾಷ್ಟ್ರನನ್ನು ನೋಡಲು ಬಯಸುತ್ತೇನೆ!”
15029020a ಸ್ತ್ರ್ಯಧ್ಯಕ್ಷಾಂಶ್ಚಾಬ್ರವೀದ್ರಾಜಾ ಯಾನಾನಿ ವಿವಿಧಾನಿ ಮೇ|
15029020c ಸಜ್ಜೀಕ್ರಿಯಂತಾಂ ಸರ್ವಾಣಿ ಶಿಬಿಕಾಶ್ಚ ಸಹಸ್ರಶಃ||
ಸ್ತ್ರೀ-ಅಧ್ಯಕ್ಷರಿಗೆ ರಾಜನು ಹೇಳಿದನು: “ಸಹಸ್ರಾರು ವಿವಿಧ ವಾಹನಗಳನ್ನೂ ಪಲ್ಲಕ್ಕಿಗಳೆಲ್ಲವನ್ನೂ ಸಜ್ಜುಗೊಳಿಸಿರಿ!
15029021a ಶಕಟಾಪಣವೇಶಾಶ್ಚ ಕೋಶಶಿಲ್ಪಿನ ಏವ ಚ|
15029021c ನಿರ್ಯಾಂತು ಕೋಶಪಾಲಾಶ್ಚ ಕುರುಕ್ಷೇತ್ರಾಶ್ರಮಂ ಪ್ರತಿ||
ಬಂಡಿಗಳು, ಅಂಗಡಿಗಳು, ಶಿಲ್ಪಿಗಳು ಮತ್ತು ಕೋಶಪಾಲರು ಕುರುಕ್ಷೇತ್ರದಲ್ಲಿರುವ ಆಶ್ರಮಕ್ಕೆ ಹೊರಡಲಿ!
15029022a ಯಶ್ಚ ಪೌರಜನಃ ಕಶ್ಚಿದ್ದ್ರಷ್ಟುಮಿಚ್ಚತಿ ಪಾರ್ಥಿವಮ್|
15029022c ಅನಾವೃತಃ ಸುವಿಹಿತಃ ಸ ಚ ಯಾತು ಸುರಕ್ಷಿತಃ||
ಪಾರ್ಥಿವನನ್ನು ನೋಡಲು ಬಯಸುವ ಪೌರಜನರೂ ಕೂಡ ಎಲ್ಲ ಸುವಿಧಗಳೊಂದಿಗೆ ಸುರಕ್ಷಿತರಾಗಿ ಹೊರಡಲಿ!
15029023a ಸೂದಾಃ ಪೌರೋಗವಾಶ್ಚೈವ ಸರ್ವಂ ಚೈವ ಮಹಾನಸಮ್|
15029023c ವಿವಿಧಂ ಭಕ್ಷ್ಯಭೋಜ್ಯಂ ಚ ಶಕಟೈರುಹ್ಯತಾಂ ಮಮ||
ಅಡಿಗೆಗೆ ಬೇಕಾದ ವಸ್ತುಗಳನ್ನೂ, ಎಲ್ಲ ವಿಧದ ಭಕ್ಷ್ಯ-ಭೋಜ್ಯಗಳೆಲ್ಲವನ್ನೂ ನನ್ನ ಬಂಡಿಗಳಲ್ಲಿ ತುಂಬಿಕೊಂಡು ಅಡುಗೆ ಮಾಡುವವರೂ ಹೊರಡಿರಿ!
15029024a ಪ್ರಯಾಣಂ ಘುಷ್ಯತಾಂ ಚೈವ ಶ್ವೋಭೂತ ಇತಿ ಮಾ ಚಿರಮ್|
15029024c ಕ್ರಿಯಂತಾಂ ಪಥಿ ಚಾಪ್ಯದ್ಯ ವೇಶ್ಮಾನಿ ವಿವಿಧಾನಿ ಚ||
ತಡೆಮಾಡದೇ ನಾಳೆಯೇ ಬೆಳಿಗ್ಗೆ ಹೊರಡುವಂತೆ ಘೋಷಿಸಿರಿ! ಮಾರ್ಗದಲ್ಲಿ ವಿವಿಧ ಶಿಬಿರಗಳನ್ನೂ ಇಂದೇ ನಿರ್ಮಿಸಿರಿ!”
15029025a ಏವಮಾಜ್ಞಾಪ್ಯ ರಾಜಾ ಸ ಭ್ರಾತೃಭಿಃ ಸಹ ಪಾಂಡವಃ|
15029025c ಶ್ವೋಭೂತೇ ನಿರ್ಯಯೌ ರಾಜಾ ಸಸ್ತ್ರೀಬಾಲಪುರಸ್ಕೃತಃ||
ಹೀಗೆ ಆಜ್ಞಾಪಿಸಿ ರಾಜಾ ಪಾಂಡವನು ಸಹೋದರರೊಂದಿಗೆ ಸ್ತ್ರೀಯರು ಮಕ್ಕಳನ್ನು ಮುಂದಿಟ್ಟುಕೊಂಡು ಮರುದಿನ ಬೆಳಗಾಗುತ್ತಲೇ ಹೊರಟನು.
15029026a ಸ ಬಹಿರ್ದಿವಸಾನೇವಂ ಜನೌಘಂ ಪರಿಪಾಲಯನ್|
15029026c ನ್ಯವಸನ್ನೃಪತಿಃ ಪಂಚ ತತೋಽಗಚ್ಚದ್ವನಂ ಪ್ರತಿ||
ಪುರದಿಂದ ಹೊರಟು ಐದು ದಿನಗಳು ಅಲ್ಲಿಯೇ ಕಾಯುತ್ತಿದ್ದು ಎಲ್ಲರೂ ಬಂದು ಸೇರಿದನಂತರ ನೃಪತಿಯು ವನದ ಕಡೆ ಪ್ರಯಾಣಬೆಳೆಸಿದನು.”
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಯುಧಿಷ್ಠಿರಯಾತ್ರಾಯಾಂ ಎಕೋನತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಯುಧಿಷ್ಠಿರಯಾತ್ರಾ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.