Ashramavasika Parva: Chapter 27

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೨೭

ಧೃತರಾಷ್ಟ್ರನಿಗೆ ಯಾವಾಗ ಯಾವ ಲೋಕಗಳು ದೊರೆಯುತ್ತವೆ ಎಂದು ಶತಯೂಪನು ನಾರದನನ್ನು ಪ್ರಶ್ನಿಸಿದುದು (೧-೬). ನಾರದನ ಉತ್ತರ (೭-೧೬).

15027001 ವೈಶಂಪಾಯನ ಉವಾಚ|

15027001a ನಾರದಸ್ಯ ತು ತದ್ವಾಕ್ಯಂ ಪ್ರಶಶಂಸುರ್ದ್ವಿಜೋತ್ತಮಾಃ|

15027001c ಶತಯೂಪಸ್ತು ರಾಜರ್ಷಿರ್ನಾರದಂ ವಾಕ್ಯಮಬ್ರವೀತ್||

ವೈಶಂಪಾಯನನು ಹೇಳಿದನು: “ನಾರದನ ಆ ಮಾತನ್ನು ದ್ವಿಜೋತ್ತಮರು ಪ್ರಶಂಸಿಸುತ್ತಿರಲು ರಾಜರ್ಷಿ ಶತಯೂಪನಾದರೋ ನಾರದನಿಗೆ ಹೇಳಿದನು:

15027002a ಅಹೋ ಭಗವತಾ ಶ್ರದ್ಧಾ ಕುರುರಾಜಸ್ಯ ವರ್ಧಿತಾ|

15027002c ಸರ್ವಸ್ಯ ಚ ಜನಸ್ಯಾಸ್ಯ ಮಮ ಚೈವ ಮಹಾದ್ಯುತೇ||

“ಆಹಾ! ಮಹಾದ್ಯುತೇ! ನೀನು ಕುರುರಾಜನ, ನನ್ನ ಮತ್ತು ಸರ್ವ ಜನರ ಶ್ರದ್ಧೆಯನ್ನು ವರ್ಧಿಸಿರುವೆ!

15027003a ಅಸ್ತಿ ಕಾ ಚಿದ್ವಿವಕ್ಷಾ ತು ಮಮ ತಾಂ ಗದತಃ ಶೃಣು|

15027003c ಧೃತರಾಷ್ಟ್ರಂ ಪ್ರತಿ ನೃಪಂ ದೇವರ್ಷೇ ಲೋಕಪೂಜಿತ||

ದೇವರ್ಷೇ! ಲೋಕಪೂಜಿತ! ನೃಪ ಧೃತರಾಷ್ಟ್ರನ ಕುರಿತು ನನ್ನ ಒಂದು ಪ್ರಶ್ನೆಯಿದೆ. ಅದನ್ನು ಹೇಳುತ್ತೇನೆ. ಕೇಳು.

15027004a ಸರ್ವವೃತ್ತಾಂತತತ್ತ್ವಜ್ಞೋ ಭವಾನ್ದಿವ್ಯೇನ ಚಕ್ಷುಷಾ|

15027004c ಯುಕ್ತಃ ಪಶ್ಯಸಿ ದೇವರ್ಷೇ ಗತೀರ್ವೈ ವಿವಿಧಾ ನೃಣಾಮ್||

ದೇವರ್ಷೇ! ನಿನ್ನ ದಿವ್ಯ ದೃಷ್ಟಿಯಿಂದ ಸರ್ವವೃತ್ತಾಂತಗಳ ತತ್ತ್ವಗಳನ್ನೂ ತಿಳಿದಿರುವೆ! ಮನುಷ್ಯರು ಪಡೆಯುವ ವಿವಿಧ ಗತಿಗಳನ್ನು ನೀನು ಕಂಡಿರುವೆ!

15027005a ಉಕ್ತವಾನ್ನೃಪತೀನಾಂ ತ್ವಂ ಮಹೇಂದ್ರಸ್ಯ ಸಲೋಕತಾಮ್|

15027005c ನ ತ್ವಸ್ಯ ನೃಪತೇರ್ಲೋಕಾಃ ಕಥಿತಾಸ್ತೇ ಮಹಾಮುನೇ||

ಮಹಾಮುನೇ! ಮಹೇಂದ್ರನ ಲೋಕದಲ್ಲಿ ಈ ಲೋಕದ ಯಾವ ಯಾವ ನೃಪತಿಗಳಿರುವರೆನ್ನುವುದನ್ನು ಹೇಳಿದ್ದೀಯೆ!

15027006a ಸ್ಥಾನಮಸ್ಯ ಕ್ಷಿತಿಪತೇಃ ಶ್ರೋತುಮಿಚ್ಚಾಮ್ಯಹಂ ವಿಭೋ|

15027006c ತ್ವತ್ತಃ ಕೀದೃಕ್ಕದಾ ವೇತಿ ತನ್ಮಮಾಚಕ್ಷ್ವ ಪೃಚ್ಚತಃ||

ವಿಭೋ! ಈ ಕ್ಷಿತಿಪತಿ ಧೃತರಾಷ್ಟ್ರನಿಗೆ ಯಾವ ಸ್ಥಾನಗಳಿವೆ ಎನ್ನುವುದನ್ನು ಕೇಳಲು ಬಯಸುತ್ತೇನೆ. ಇವನಿಗೆ ಯಾವ ರೀತಿಯ ಲೋಕಗಳು ಯಾವಾಗ ದೊರೆಯುತ್ತವೆ ಎನ್ನುವುದನ್ನು ಕೇಳುವ ನನಗೆ ಹೇಳಬೇಕು.”

15027007a ಇತ್ಯುಕ್ತೋ ನಾರದಸ್ತೇನ ವಾಕ್ಯಂ ಸರ್ವಮನೋನುಗಮ್|

15027007c ವ್ಯಾಜಹಾರ ಸತಾಂ ಮಧ್ಯೇ ದಿವ್ಯದರ್ಶೀ ಮಹಾತಪಾಃ||

ಹೀಗೆ ಕೇಳಲು ದಿವ್ಯದರ್ಶೀ ಮಹಾತಪಸ್ವಿ ನಾರದನು ಆ ಸತ್ಪುರುಷರ ಮಧ್ಯೆ ಸರ್ವರ ಮನಸ್ಸಿಗೂ ಹಿತವಾಗುವ ಈ ಮಾತನ್ನಾಡಿದನು:

15027008a ಯದೃಚ್ಛಯಾ ಶಕ್ರಸದೋ ಗತ್ವಾ ಶಕ್ರಂ ಶಚೀಪತಿಮ್|

15027008c ದೃಷ್ಟವಾನಸ್ಮಿ ರಾಜರ್ಷೇ ತತ್ರ ಪಾಂಡುನರಾಧಿಪಮ್||

“ರಾಜರ್ಷೇ! ನನ್ನ ಇಚ್ಛೆಯಂತೆಯೇ ಸಂಚರಿಸುತ್ತಿರುವಾಗ ಶಕ್ರಸದನಕ್ಕೆ ಹೋಗಿ ಅಲ್ಲಿ ಶಚೀಪತಿ ಶಕ್ರನನ್ನೂ ನರಾಧಿಪ ಪಾಂಡುವನ್ನೂ ನಾನು ನೋಡಿದ್ದೇನೆ.

15027009a ತತ್ರೇಯಂ ಧೃತರಾಷ್ಟ್ರಸ್ಯ ಕಥಾ ಸಮಭವನ್ನೃಪ|

15027009c ತಪಸೋ ದುಶ್ಚರಸ್ಯಾಸ್ಯ ಯದಯಂ ತಪ್ಯತೇ ನೃಪಃ||

ನೃಪ! ಅಲ್ಲಿಯೇ ಈ ಧೃತರಾಷ್ಟ್ರನ ಕುರಿತು ಮಾತುಕಥೆಗಳು ನಡೆದವು. ಈ ನೃಪನು ತಪಿಸುತ್ತಿರುವ ದುಶ್ಚರ ತಪಸ್ಸಿನ ವಿಷಯವೂ ಅಲ್ಲಿ ಬಂದಿತ್ತು.

15027010a ತತ್ರಾಹಮಿದಮಶ್ರೌಷಂ ಶಕ್ರಸ್ಯ ವದತೋ ನೃಪ|

15027010c ವರ್ಷಾಣಿ ತ್ರೀಣಿ ಶಿಷ್ಟಾನಿ ರಾಜ್ಞೋಽಸ್ಯ ಪರಮಾಯುಷಃ||

ನೃಪ! ಅಲ್ಲಿ ಶಕ್ರನು ಹೇಳಿದ ಈ ಮಾತನ್ನು ನಾನು ಕೇಳಿದೆ. ಈ ರಾಜನ ಪರಮಾಯುಷ್ಯದಲ್ಲಿ ಇನ್ನು ಮೂರು ವರ್ಷಗಳು ಮಾತ್ರವೇ ಉಳಿದಿದೆ.

15027011a ತತಃ ಕುಬೇರಭವನಂ ಗಾಂಧಾರೀಸಹಿತೋ ನೃಪಃ|

15027011c ವಿಹರ್ತಾ ಧೃತರಾಷ್ಟ್ರೋಽಯಂ ರಾಜರಾಜಾಭಿಪೂಜಿತಃ||

ಅನಂತರ ಈ ರಾಜರಾಜರಿಂದ ಪೂಜಿತನಾದ ನೃಪ ಧೃತರಾಷ್ಟ್ರನು ಗಾಂಧಾರಿಯ ಸಹಿತ ಕುಬೇರಭವನಕ್ಕೆ ಹೋಗುತ್ತಾನೆ.

15027012a ಕಾಮಗೇನ ವಿಮಾನೇನ ದಿವ್ಯಾಭರಣಭೂಷಿತಃ|

15027012c ಋಷಿಪುತ್ರೋ ಮಹಾಭಾಗಸ್ತಪಸಾ ದಗ್ಧಕಿಲ್ಬಿಷಃ||

ತಪಸ್ಸಿನಿಂದ ತನ್ನ ಪಾಪಗಳನ್ನು ಸುಟ್ಟು ಈ ಋಷಿಪುತ್ರನು ದಿವ್ಯಾಭರಣಭೂಷಿತನಾಗಿ ಮನಸ್ಸಿಗೆ ಬಂದಲ್ಲಿಗೆ ಚಲಿಸಬಲ್ಲ ವಿಮಾನದಲ್ಲಿ ಹೋಗುತ್ತಾನೆ.

15027013a ಸಂಚರಿಷ್ಯತಿ ಲೋಕಾಂಶ್ಚ ದೇವಗಂಧರ್ವರಕ್ಷಸಾಮ್|

15027013c ಸ್ವಚ್ಚಂದೇನೇತಿ ಧರ್ಮಾತ್ಮಾ ಯನ್ಮಾಂ ತ್ವಂ ಪರಿಪೃಚ್ಚಸಿ||

ಧರ್ಮಾತ್ಮಾ! ಇವನು ದೇವ-ಗಂಧರ್ವ-ರಾಕ್ಷಸರ ಲೋಕಗಳನ್ನು ಸ್ವಚ್ಚಂದವಾಗಿ ಸಂಚರಿಸುತ್ತಾನೆ. ಇದು ನೀನು ಕೇಳಿದ ಪ್ರಶ್ನೆಗೆ ಉತ್ತರವಾಗಿದೆ.

15027014a ದೇವಗುಹ್ಯಮಿದಂ ಪ್ರೀತ್ಯಾ ಮಯಾ ವಃ ಕಥಿತಂ ಮಹತ್|

15027014c ಭವಂತೋ ಹಿ ಶ್ರುತಧನಾಸ್ತಪಸಾ ದಗ್ಧಕಿಲ್ಬಿಷಾಃ||

ನೀವು ಶ್ರುತಧನರೂ ತಪಸ್ಸಿನಿಂದ ಪಾಪಗಳನ್ನೂ ಸುಟ್ಟವರೂ ಆಗಿದ್ದೀರಿ. ಆದುದರಿಂದಲೇ ನಿಮಗೆ ನಾನು ಪ್ರೀತಿಯಿಂದ ಈ ಮಹಾ ದೇವಗುಹ್ಯವನ್ನು ಹೇಳಿದ್ದೇನೆ.”

15027015a ಇತಿ ತೇ ತಸ್ಯ ತಚ್ಚ್ರುತ್ವಾ ದೇವರ್ಷೇರ್ಮಧುರಂ ವಚಃ|

15027015c ಸರ್ವೇ ಸುಮನಸಃ ಪ್ರೀತಾ ಬಭೂವುಃ ಸ ಚ ಪಾರ್ಥಿವಃ||

ದೇವರ್ಷಿಯ ಆ ಮಧುರ ವಚನವನ್ನು ಕೇಳಿ ಸರ್ವ ಪಾರ್ಥಿವರೂ ಸುಮನಸ್ಕರಾಗಿ ಸಂತೋಷಗೊಂಡರು.

15027016a ಏವಂ ಕಥಾಭಿರನ್ವಾಸ್ಯ ಧೃತರಾಷ್ಟ್ರಂ ಮನೀಷಿಣಃ|

15027016c ವಿಪ್ರಜಗ್ಮುರ್ಯಥಾಕಾಮಂ ತೇ ಸಿದ್ಧಗತಿಮಾಸ್ಥಿತಾಃ||

ಹೀಗೆ ಮನೀಷಿ ವಿಪ್ರರು ಮಾತುಗಳಿಂದ ಧೃತರಾಷ್ಟ್ರನನ್ನು ಸಂತೋಷಗೊಳಿಸಿ ಅವನ ಅನುಮತಿಯನ್ನು ಪಡೆದು ಸಿದ್ಧರ ಗತಿಯನ್ನು ಆಶ್ರಯಿಸಿದವರಾಗಿ ಇಚ್ಛೆಬಂದಲ್ಲಿಗೆ ಹೊರಟುಹೋದರು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ನಾರದವಾಕ್ಯೇ ಸಪ್ತವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ನಾರದವಾಕ್ಯ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.

Related image

Comments are closed.