Ashramavasika Parva: Chapter 26

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೨೬

ನಾರದನು ಇಂದ್ರಲೋಕಕ್ಕೆ ಹೋಗಿರುವ ರಾಜರ್ಷಿಗಳ ಕುರಿತು ಹೇಳಿ, ಧೃತರಾಷ್ಟ್ರಾದಿಗಳೂ ಉತ್ತಮ ಲೋಕಗಳನ್ನು ಪಡೆಯುವರೆಂದು ಹೇಳಿದುದು (೧-೨೨).

15026001 ವೈಶಂಪಾಯನ ಉವಾಚ|

15026001a ತತಸ್ತಸ್ಮಿನ್ಮುನಿಶ್ರೇಷ್ಠಾ ರಾಜಾನಂ ದ್ರಷ್ಟುಮಭ್ಯಯುಃ|

15026001c ನಾರದಃ ಪರ್ವತಶ್ಚೈವ ದೇವಲಶ್ಚ ಮಹಾತಪಾಃ||

15026002a ದ್ವೈಪಾಯನಃ ಸಶಿಷ್ಯಶ್ಚ ಸಿದ್ಧಾಶ್ಚಾನ್ಯೇ ಮನೀಷಿಣಃ|

15026002c ಶತಯೂಪಶ್ಚ ರಾಜರ್ಷಿರ್ವೃದ್ಧಃ ಪರಮಧಾರ್ಮಿಕಃ||

ವೈಶಂಪಾಯನನು ಹೇಳಿದನು: “ಆಗ ಅಲ್ಲಿಗೆ ರಾಜನನ್ನು ಕಾಣಲು ಮುನಿಶ್ರೇಷ್ಠ ನಾರದ-ಪರ್ವತರೂ, ಮಹಾತಪಸ್ವೀ ದೇವಲನೂ, ಶಿಷ್ಯರೊಂದಿಗೆ ದ್ವೈಪಾಯನನೂ, ಅನ್ಯ ಮನೀಷೀ ಸಿದ್ಧರೂ, ಪರಮ ಧಾರ್ಮಿಕ ವೃದ್ಧ ರಾಜರ್ಷಿ ಶತಯೂಪನೂ ಆಗಮಿಸಿದರು.

15026003a ತೇಷಾಂ ಕುಂತೀ ಮಹಾರಾಜ ಪೂಜಾಂ ಚಕ್ರೇ ಯಥಾವಿಧಿ|

15026003c ತೇ ಚಾಪಿ ತುತುಷುಸ್ತಸ್ಯಾಸ್ತಾಪಸಾಃ ಪರಿಚರ್ಯಯಾ||

ಮಹಾರಾಜ! ಕುಂತಿಯು ಅವರನ್ನು ಯಥಾವಿಧಿಯಾಗಿ ಪೂಜಿಸಿದಳು. ಆ ತಾಪಸರೂ ಕೂಡ ಅವಳ ಪರಿಚರ್ಯೆಯಿಂದ ತೃಪ್ತರಾದರು.

15026004a ತತ್ರ ಧರ್ಮ್ಯಾಃ ಕಥಾಸ್ತಾತ ಚಕ್ರುಸ್ತೇ ಪರಮರ್ಷಯಃ|

15026004c ರಮಯಂತೋ ಮಹಾತ್ಮಾನಂ ಧೃತರಾಷ್ಟ್ರಂ ಜನಾಧಿಪಮ್||

ಮಗೂ! ಅಲ್ಲಿ ಆ ಪರಮಋಷಿಗಳು ಧಾರ್ಮಿಕ ವಿಷಯಗಳ ಕುರಿತು ಮಾತನಾಡುತ್ತಾ ಮಹಾತ್ಮ ಜನಾಧಿಪ ಧೃತರಾಷ್ಟ್ರನನ್ನು ರಮಿಸುತ್ತಿದ್ದರು.

15026005a ಕಥಾಂತರೇ ತು ಕಸ್ಮಿಂಶ್ಚಿದ್ದೇವರ್ಷಿರ್ನಾರದಸ್ತದಾ|

15026005c ಕಥಾಮಿಮಾಮಕಥಯತ್ಸರ್ವಪ್ರತ್ಯಕ್ಷದರ್ಶಿವಾನ್||

ಆ ಮಾತುಕಥೆಯ ಮಧ್ಯದಲ್ಲಿ ಎಲ್ಲದರ ಪ್ರತ್ಯಕ್ಷದರ್ಶಿಯಾದ ದೇವರ್ಷಿ ನಾರದನು ಈ ಕಥೆಯನ್ನು ಹೇಳಲು ಉಪಕ್ರಮಿಸಿದನು:

15026006a ಪುರಾ ಪ್ರಜಾಪತಿಸಮೋ ರಾಜಾಸೀದಕುತೋಭಯಃ|

15026006c ಸಹಸ್ರಚಿತ್ಯ ಇತ್ಯುಕ್ತಃ ಶತಯೂಪಪಿತಾಮಹಃ||

“ಹಿಂದೆ ಶತಯೂಪನ ಪಿತಾಮಹ ಪ್ರಜಾಪತಿಯಂತಿದ್ದ ಮತ್ತು ಭಯವೇನೆಂಬುದನ್ನೇ ತಿಳಿಯದಿದ್ದ ಸಹಸ್ರಚಿತ್ಯ ಎಂಬ ಹೆಸರಿನ ರಾಜನಿದ್ದನು.

15026007a ಸ ಪುತ್ರೇ ರಾಜ್ಯಮಾಸಜ್ಯ ಜ್ಯೇಷ್ಠೇ ಪರಮಧಾರ್ಮಿಕೇ|

15026007c ಸಹಸ್ರಚಿತ್ಯೋ ಧರ್ಮಾತ್ಮಾ ಪ್ರವಿವೇಶ ವನಂ ನೃಪಃ||

ಧರ್ಮಾತ್ಮ ನೃಪ ಸಹಸ್ರಚಿತ್ಯನು ರಾಜ್ಯವನ್ನು ತನ್ನ ಪರಮಧಾರ್ಮಿಕ ಜ್ಯೇಷ್ಠ ಪುತ್ರನಿಗೆ ಒಪ್ಪಿಸಿ ವನವನ್ನು ಪ್ರವೇಶಿಸಿದನು.

15026008a ಸ ಗತ್ವಾ ತಪಸಃ ಪಾರಂ ದೀಪ್ತಸ್ಯ ಸ ನರಾಧಿಪಃ|

15026008c ಪುರಂದರಸ್ಯ ಸಂಸ್ಥಾನಂ ಪ್ರತಿಪೇದೇ ಮಹಾಮನಾಃ||

ಆ ಮಹಾಮನಸ್ವಿ ನರಾಧಿಪನು ದೀಪ್ತ ತಪಸ್ಸನ್ನು ಪೂರೈಸಿ ಪುರಂದರನ ಸಂಸ್ಥಾನವನ್ನು ಪಡೆದನು.

15026009a ದೃಷ್ಟಪೂರ್ವಃ ಸ ಬಹುಶೋ ರಾಜನ್ಸಂಪತತಾ ಮಯಾ|

15026009c ಮಹೇಂದ್ರಸದನೇ ರಾಜಾ ತಪಸಾ ದಗ್ಧಕಿಲ್ಬಿಷಃ||

ರಾಜನ್! ತಪಸ್ಸಿನಿಂದ ಪಾಪಗಳನ್ನು ಸುಟ್ಟ ಆ ರಾಜನನ್ನು ನಾನು ಈ ಮೊದಲು ಅನೇಕ ಬಾರಿ ಮಹೇಂದ್ರಸದನದಲ್ಲಿ ನೋಡಿದ್ದೇನೆ.

15026010a ತಥಾ ಶೈಲಾಲಯೋ ರಾಜಾ ಭಗದತ್ತಪಿತಾಮಹಃ|

15026010c ತಪೋಬಲೇನೈವ ನೃಪೋ ಮಹೇಂದ್ರಸದನಂ ಗತಃ||

ಹಾಗೆಯೇ ಭಗದತ್ತನ ಪಿತಾಮಹ ರಾಜಾ ಶೈಲಾಲಯ ನೃಪನು ತಪೋಬಲದಿಂದಲೇ ಮಹೇಂದ್ರಸದನಕ್ಕೆ ಹೋಗಿದ್ದಾನೆ.

15026011a ತಥಾ ಪೃಷಧ್ರೋ ನಾಮಾಸೀದ್ರಾಜಾ ವಜ್ರಧರೋಪಮಃ|

15026011c ಸ ಚಾಪಿ ತಪಸಾ ಲೇಭೇ ನಾಕಪೃಷ್ಠಮಿತೋ ನೃಪಃ||

ಹಾಗೆಯೇ ವಜ್ರಧರನಿಗೆ ಸಮನಾಗಿದ್ದ ಪೃಷಧ್ರ ಎಂಬ ರಾಜ ನೃಪನೂ ಕೂಡ ತಪಸ್ಸಿನಿಂದ ಸ್ವರ್ಗಲೋಕವನ್ನು ಪಡೆದನು.

15026012a ಅಸ್ಮಿನ್ನರಣ್ಯೇ ನೃಪತೇ ಮಾಂಧಾತುರಪಿ ಚಾತ್ಮಜಃ|

15026012c ಪುರುಕುತ್ಸೋ ನೃಪಃ ಸಿದ್ಧಿಂ ಮಹತೀಂ ಸಮವಾಪ್ತವಾನ್||

ನೃಪತೇ! ಇದೇ ಅರಣ್ಯದಲ್ಲಿ ಮಾಂಧಾತನ ಮಗ ನೃಪ ಪುರುಕುತ್ಸನೂ ಕೂಡ ಮಹಾ ಸಿದ್ಧಿಯನ್ನು ಪಡೆದನು.

15026013a ಭಾರ್ಯಾ ಸಮಭವದ್ಯಸ್ಯ ನರ್ಮದಾ ಸರಿತಾಂ ವರಾ|

15026013c ಸೋಽಸ್ಮಿನ್ನರಣ್ಯೇ ನೃಪತಿಸ್ತಪಸ್ತಪ್ತ್ವಾ ದಿವಂ ಗತಃ||

ನದಿಗಳಲ್ಲಿ ಶ್ರೇಷ್ಠಳಾದ ನರ್ಮದೆಯು ಅವನ ಪತ್ನಿಯಾಗಿದ್ದಳು. ಆ ನೃಪತಿಯು ಇದೇ ಅರಣ್ಯದಲ್ಲಿ ತಪಸ್ಸನ್ನು ತಪಿಸಿ ಸ್ವರ್ಗಕ್ಕೆ ಹೋದನು.

15026014a ಶಶಲೋಮಾ ಚ ನಾಮಾಸೀದ್ರಾಜಾ ಪರಮಧಾರ್ಮಿಕಃ|

15026014c ಸ ಚಾಪ್ಯಸ್ಮಿನ್ವನೇ ತಪ್ತ್ವಾ ತಪೋ ದಿವಮವಾಪ್ತವಾನ್||

ಶಶಲೋಮ ಎಂಬ ಹೆಸರಿನ ಪರಮಧಾರ್ಮಿಕ ರಾಜನಿದ್ದನು. ಅವನೂ ಕೂಡ ಇದೇ ವನದಲ್ಲಿ ತಪಸ್ಸನ್ನು ತಪಿಸಿ ಸ್ವರ್ಗವನ್ನು ಪಡೆದುಕೊಂಡನು.

15026015a ದ್ವೈಪಾಯನಪ್ರಸಾದಾಚ್ಚ ತ್ವಮಪೀದಂ ತಪೋವನಮ್|

15026015c ರಾಜನ್ನವಾಪ್ಯ ದುಷ್ಪ್ರಾಪಾಂ ಸಿದ್ಧಿಮಗ್ರ್ಯಾಂ ಗಮಿಷ್ಯಸಿ||

ರಾಜನ್! ದ್ವೈಪಾಯನನ ಪ್ರಸಾದದಿಂದ ನೀನೂ ಕೂಡ ಈ ತಪೋವನಕ್ಕೆ ಬಂದಿರುವೆ. ನೀನು ಕಷ್ಟಕರ ಹೆಚ್ಚಿನ ಸಿದ್ಧಿಯನ್ನು ಪಡೆದು ಮೇಲೆ ಹೋಗುತ್ತೀಯೆ!

15026016a ತ್ವಂ ಚಾಪಿ ರಾಜಶಾರ್ದೂಲ ತಪಸೋಽಂತೇ ಶ್ರಿಯಾ ವೃತಃ|

15026016c ಗಾಂಧಾರೀಸಹಿತೋ ಗಂತಾ ಗತಿಂ ತೇಷಾಂ ಮಹಾತ್ಮನಾಮ್||

ರಾಜಶಾರ್ದೂಲ! ನೀನೂ ಕೂಡ ತಪಸ್ಸಿನ ಅಂತ್ಯದಲ್ಲಿ ಶ್ರೀಯಿಂದ ಆವೃತನಾಗಿ ಗಾಂಧಾರಿಯ ಸಹಿತ ಆ ಮಹಾತ್ಮರು ಹೋದ ಗತಿಯಲ್ಲಿಯೇ ಹೋಗುತ್ತೀಯೆ.

15026017a ಪಾಂಡುಃ ಸ್ಮರತಿ ನಿತ್ಯಂ ಚ ಬಲಹಂತುಃ ಸಮೀಪತಃ|

15026017c ತ್ವಾಂ ಸದೈವ ಮಹೀಪಾಲ ಸ ತ್ವಾಂ ಶ್ರೇಯಸಿ ಯೋಕ್ಷ್ಯತಿ||

ಬಲಹಂತು ಇಂದ್ರನ ಸಮೀಪದಲ್ಲಿರುವ ಪಾಂಡುವು ನಿತ್ಯವೂ ನಿನ್ನನ್ನು ಸ್ಮರಿಸಿಕೊಳ್ಳುತ್ತಾನೆ. ಮಹೀಪಾಲ! ಅವನು ಸದೈವ ನಿನಗೆ ಶ್ರೇಯಸ್ಸನ್ನುಂಟುಮಾಡಲು ನಿರತನಾಗಿದ್ದಾನೆ.

15026018a ತವ ಶುಶ್ರೂಷಯಾ ಚೈವ ಗಾಂಧಾರ್ಯಾಶ್ಚ ಯಶಸ್ವಿನೀ|

15026018c ಭರ್ತುಃ ಸಲೋಕತಾಂ ಕುಂತೀ ಗಮಿಷ್ಯತಿ ವಧೂಸ್ತವ||

ನಿನ್ನ ಸೊಸೆ ಯಶಸ್ವಿನೀ ಕುಂತಿಯು ನಿನ್ನ ಮತ್ತು ಗಾಂಧಾರಿಯರ ಶುಶ್ರೂಷೆಯಿಂದಾಗಿ ತನ್ನ ಪತಿಯ ಲೋಕಕ್ಕೇ ಹೋಗುತ್ತಾಳೆ.

15026019a ಯುಧಿಷ್ಠಿರಸ್ಯ ಜನನೀ ಸ ಹಿ ಧರ್ಮಃ ಸನಾತನಃ|

15026019c ವಯಮೇತತ್ ಪ್ರಪಶ್ಯಾಮೋ ನೃಪತೇ ದಿವ್ಯಚಕ್ಷುಷಾ||

ಯುಧಿಷ್ಠಿರನ ಜನನಿಯು ಅನುಸರಿಸುತ್ತಿರುವುದೇ ಸನಾತನ ಧರ್ಮವಾಗಿದೆ. ನೃಪತೇ! ದಿವ್ಯದೃಷ್ಟಿಯಿಂದ ನಾನು ಇದನ್ನು ಕಂಡಿದ್ದೇನೆ.

15026020a ಪ್ರವೇಕ್ಷ್ಯತಿ ಮಹಾತ್ಮಾನಂ ವಿದುರಶ್ಚ ಯುಧಿಷ್ಠಿರಮ್|

15026020c ಸಂಜಯಸ್ತ್ವದನುಧ್ಯಾನಾತ್ಪೂತಃ ಸ್ವರ್ಗಮವಾಪ್ಸ್ಯತಿ||

ವಿದುರನು ಮಹಾತ್ಮ ಯುಧಿಷ್ಠಿರನನ್ನು ಪ್ರವೇಶಿಸುವನು. ಧ್ಯಾನಮಾಡುತ್ತಿದ್ದಾಗ ಸಂಜಯನು ಪವಿತ್ರ ಸ್ವರ್ಗವನ್ನು ಪಡೆಯುತ್ತಾನೆ.”

15026021a ಏತಚ್ಛೃತ್ವಾ ಕೌರವೇಂದ್ರೋ ಮಹಾತ್ಮಾ

ಸಹೈವ ಪತ್ನ್ಯಾ ಪ್ರೀತಿಮನ್ಪ್ರತ್ಯಗೃಹ್ಣಾತ್|

15026021c ವಿದ್ವಾನ್ ವಾಕ್ಯಂ ನಾರದಸ್ಯ ಪ್ರಶಸ್ಯ

ಚಕ್ರೇ ಪೂಜಾಂ ಚಾತುಲಾಂ ನಾರದಾಯ||

ಇದನ್ನು ಕೇಳಿ ಮಹಾತ್ಮಾ ಕೌರವೇಂದ್ರನು ಪತ್ನಿಯೊಡನೆ ಸುಪ್ರೀತನಾದನು. ನಾರದನ ವಾಕ್ಯವನ್ನು ಕೇಳಿ ವಿದ್ವಾನ್ ಧೃತರಾಷ್ಟ್ರನು ನಾರದನಿಗೆ ಅತುಲ ಪೂಜೆಯನ್ನೂ ಮಾಡಿದನು.

15026022a ತಥಾ ಸರ್ವೇ ನಾರದಂ ವಿಪ್ರಸಂಘಾಃ

ಸಂಪೂಜಯಾಮಾಸುರತೀವ ರಾಜನ್|

15026022c ರಾಜ್ಞಃ ಪ್ರೀತ್ಯಾ ಧೃತರಾಷ್ಟ್ರಸ್ಯ ತೇ ವೈ

ಪುನಃ ಪುನಃ ಸಮಹೃಷ್ಟಾಸ್ತದಾನೀಮ್||

ರಾಜನ್! ಹಾಗೆಯೇ ವಿಪ್ರಸಂಘಗಳೆಲ್ಲವೂ ನಾರದನನ್ನು ಅತೀವವಾಗಿ ಪೂಜಿಸಿದವು. ರಾಜ ಧೃತರಾಷ್ಟ್ರನು ಸಂತೋಷಗೊಂಡಿದ್ದುದನ್ನು ನೋಡಿ ಅವರೂ ಕೂಡ ಪುನಃ ಪುನಃ ನಾರದನನ್ನು ಶ್ಲಾಘಿಸಿದರು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಶತಯೂಪಾಶ್ರಮನಿವಾಸೇ ಷಡ್ವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಶತಯೂಪಾಶ್ರಮನಿವಾಸ ಎನ್ನುವ ಇಪ್ಪತ್ತಾರನೇ ಅಧ್ಯಾಯವು.

Related image

Comments are closed.