Ashramavasika Parva: Chapter 25

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೨೫

ಧೃತರಾಷ್ಟ್ರಾದಿಗಳು ಶತಯೂಪನ ಆಶ್ರಮಕ್ಕೆ ತೆರಳಿದುದು (೧-೧೮).

15025001 ವೈಶಂಪಾಯನ ಉವಾಚ|

15025001a ತತೋ ಭಾಗೀರಥೀತೀರೇ ಮೇಧ್ಯೇ ಪುಣ್ಯಜನೋಚಿತೇ|

15025001c ನಿವಾಸಮಕರೋದ್ರಾಜಾ ವಿದುರಸ್ಯ ಮತೇ ಸ್ಥಿತಃ||

ವೈಶಂಪಾಯನನು ಹೇಳಿದನು: “ಅನಂತರ ವಿದುರನ ಅಭಿಪ್ರಾಯದಂತೆ ರಾಜಾ ಧೃತರಾಷ್ಟ್ರನು ಭಾಗೀರಥೀ ತೀರದಲ್ಲಿ ಪುಣ್ಯಜನರಿಗೆ ಉಚಿತವಾದ ನಿವಾಸವನ್ನು ಮಾಡಿಸಿಕೊಂಡನು.

15025002a ತತ್ರೈನಂ ಪರ್ಯುಪಾತಿಷ್ಠನ್ಬ್ರಾಹ್ಮಣಾ ರಾಷ್ಟ್ರವಾಸಿನಃ|

15025002c ಕ್ಷತ್ರವಿಟ್ಶೂದ್ರಸಂಘಾಶ್ಚ ಬಹವೋ ಭರತರ್ಷಭ||

ಭರತರ್ಷಭ! ಅಲ್ಲಿಗೆ ಅನೇಕ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ರಾಷ್ಟ್ರವಾಸೀ ಗಣಗಳು ಬಂದು ಸೇರಿದವು.

15025003a ಸ ತೈಃ ಪರಿವೃತೋ ರಾಜಾ ಕಥಾಭಿರಭಿನಂದ್ಯ ತಾನ್|

15025003c ಅನುಜಜ್ಞೇ ಸಶಿಷ್ಯಾನ್ವೈ ವಿಧಿವತ್ಪ್ರತಿಪೂಜ್ಯ ಚ||

ಅವರಿಂದ ಪರಿವೃತನಾಗಿದ್ದ ರಾಜನು ಸಮಯೋಚಿತ ಮಾತುಕಥೆಗಳಿಂದ ಅವರನ್ನು ಅಭಿನಂದಿಸಿ, ವಿಧಿವತ್ತಾಗಿ ಪ್ರತಿಪೂಜೆಗೊಳಗೊಂಡು ಶಿಷ್ಯರೊಂದಿಗೆ ಅವರಿಗೆ ಅನುಮತಿಯನ್ನಿತ್ತನು.

15025004a ಸಾಯಾಹ್ನೇ ಸ ಮಹೀಪಾಲಸ್ತತೋ ಗಂಗಾಮುಪೇತ್ಯ ಹ|

15025004c ಚಕಾರ ವಿಧಿವಚ್ಛೌಚಂ ಗಾಂಧಾರೀ ಚ ಯಶಸ್ವಿನೀ||

ಸಾಯಂಕಾಲವಾಗುತ್ತಲೇ ಮಹೀಪಾಲ ಮತ್ತು ಯಶಸ್ವಿನೀ ಗಾಂಧಾರಿಯರು ಗಂಗೆಯಲ್ಲಿ ಇಳಿದು ವಿಧಿವತ್ತಾಗಿ ಸ್ನಾನಾದಿಗಳನ್ನು ಮಾಡಿದರು.

15025005a ತಥೈವಾನ್ಯೇ ಪೃಥಕ್ಸರ್ವೇ ತೀರ್ಥೇಷ್ವಾಪ್ಲುತ್ಯ ಭಾರತ|

15025005c ಚಕ್ರುಃ ಸರ್ವಾಃ ಕ್ರಿಯಾಸ್ತತ್ರ ಪುರುಷಾ ವಿದುರಾದಯಃ||

ಭಾರತ! ಹಾಗೆಯೇ ವಿದುರಾದಿ ಅನ್ಯ ಪುರುಷರೂ ಪ್ರತ್ಯೇಕ ಪ್ರತ್ಯೇಕ ತೀರ್ಥಗಳಲ್ಲಿ ಮುಳುಗಿ ಸಂಧ್ಯಾಕ್ರಿಯೆಗಳನ್ನು ಪೂರೈಸಿದರು.

15025006a ಕೃತಶೌಚಂ ತತೋ ವೃದ್ಧಂ ಶ್ವಶುರಂ ಕುಂತಿಭೋಜಜಾ|

15025006c ಗಾಂಧಾರೀಂ ಚ ಪೃಥಾ ರಾಜನ್ಗಂಗಾತೀರಮುಪಾನಯತ್||

ರಾಜನ್! ಶೌಚಗಳನ್ನು ಪೂರೈಸಿದ ವೃದ್ಧ ಮಾವ ಮತ್ತು ಗಾಂಧಾರಿಯರನ್ನು ಕುಂತಿಭೋಜನ ಮಗಳು ಪೃಥೆಯು ಗಂಗಾತೀರಕ್ಕೆ ಕರೆತಂದಳು.

15025007a ರಾಜ್ಞಸ್ತು ಯಾಜಕೈಸ್ತತ್ರ ಕೃತೋ ವೇದೀಪರಿಸ್ತರಃ|

15025007c ಜುಹಾವ ತತ್ರ ವಹ್ನಿಂ ಸ ನೃಪತಿಃ ಸತ್ಯಸಂಗರಃ||

ಅಲ್ಲಿ ಯಾಜಕರು ಮಾಡಿದ್ದ ವೇದಿಯಲ್ಲಿ ರಾಜ ಸತ್ಯಸಂಗರ ನೃಪತಿಯು ಹೋಮಮಾಡಿದನು.

15025008a ತತೋ ಭಾಗೀರಥೀತೀರಾತ್ಕುರುಕ್ಷೇತ್ರಂ ಜಗಾಮ ಸಃ|

15025008c ಸಾನುಗೋ ನೃಪತಿರ್ವಿದ್ವಾನ್ನಿಯತಃ ಸಂಯತೇಂದ್ರಿಯಃ||

ಅನಂತರ ಆ ಸಂಯತೇಂದ್ರಿಯ ನೃಪತಿಯು ನಿಯಮಬದ್ಧನಾಗಿದ್ದುಕೊಂಡು ಭಾಗೀರಥೀ ತೀರದಿಂದ ಕುರುಕ್ಷೇತ್ರಕ್ಕೆ ಹೋದನು.

15025009a ತತ್ರಾಶ್ರಮಪದಂ ಧೀಮಾನಭಿಗಮ್ಯ ಸ ಪಾರ್ಥಿವಃ|

15025009c ಆಸಸಾದಾಥ ರಾಜರ್ಷಿಃ ಶತಯೂಪಂ ಮನೀಷಿಣಮ್||

ಅಲ್ಲಿಗೆ ಹೋಗಿ ಧೀಮಾನ್ ಪಾರ್ಥಿವನು ಮನೀಷೀ ರಾಜರ್ಷಿ ಶತಯೂಪನ ಆಶ್ರಮವನ್ನು ತಲುಪಿದನು.

15025010a ಸ ಹಿ ರಾಜಾ ಮಹಾನಾಸೀತ್ಕೇಕಯೇಷು ಪರಂತಪಃ|

15025010c ಸ ಪುತ್ರಂ ಮನುಜೈಶ್ವರ್ಯೇ ನಿವೇಶ್ಯ ವನಮಾವಿಶತ್||

ಆ ಪರಂತಪನು ಕೇಕಯರ ಮಹಾರಾಜನಾಗಿದ್ದನು. ಮಗನಿಗೆ ಮನುಜೈಶ್ವರ್ಯಗಳನ್ನು ಒಪ್ಪಿಸಿ ವನವನ್ನು ಪ್ರವೇಶಿಸಿದ್ದನು.

15025011a ತೇನಾಸೌ ಸಹಿತೋ ರಾಜಾ ಯಯೌ ವ್ಯಾಸಾಶ್ರಮಂ ತದಾ|

15025011c ತತ್ರೈನಂ ವಿಧಿವದ್ರಾಜನ್ಪ್ರತ್ಯಗೃಹ್ಣಾತ್ಕುರೂದ್ವಹಮ್||

ಅವನೊಡನೆ ರಾಜನು ವ್ಯಾಸನ ಆಶ್ರಮಕ್ಕೆ ಹೋದನು. ರಾಜನ್! ಅಲ್ಲಿ ವ್ಯಾಸನು ಕುರೂದ್ವಹನನ್ನು ವಿಧಿವತ್ತಾಗಿ ಸ್ವಾಗತಿಸಿದನು.

15025012a ಸ ದೀಕ್ಷಾಂ ತತ್ರ ಸಂಪ್ರಾಪ್ಯ ರಾಜಾ ಕೌರವನಂದನಃ|

15025012c ಶತಯೂಪಾಶ್ರಮೇ ತಸ್ಮಿನ್ನಿವಾಸಮಕರೋತ್ತದಾ||

ರಾಜಾ ಕೌರವನಂದನನು ಅಲ್ಲಿ ದೀಕ್ಷೆಯನ್ನು ಪಡೆದು ಶತಯೂಪನ ಆಶ್ರಮದಲ್ಲಿ ನಿವಾಸ ಮಾಡಿದನು.

15025013a ತಸ್ಮೈ ಸರ್ವಂ ವಿಧಿಂ ರಾಜನ್ರಾಜಾಚಖ್ಯೌ ಮಹಾಮತಿಃ|

15025013c ಆರಣ್ಯಕಂ ಮಹಾರಾಜ ವ್ಯಾಸಸ್ಯಾನುಮತೇ ತದಾ||

ರಾಜನ್! ಆಗ ವ್ಯಾಸನ ಅನುಮತಿಯಂತೆ ಮಹಾಮತಿ ಶತಯೂಪನು ರಾಜನಿಗೆ ಆರಣ್ಯಕದ ಎಲ್ಲ ವಿಧಿಗಳನ್ನೂ ತಿಳಿಸಿದನು.

15025014a ಏವಂ ಸ ತಪಸಾ ರಾಜಾ ಧೃತರಾಷ್ಟ್ರೋ ಮಹಾಮನಾಃ|

15025014c ಯೋಜಯಾಮಾಸ ಚಾತ್ಮಾನಂ ತಾಂಶ್ಚಾಪ್ಯನುಚರಾಂಸ್ತದಾ||

ಹೀಗೆ ಮಹಾಮನಸ್ವಿ ರಾಜಾ ಧೃತರಾಷ್ಟ್ರನು ಅವುಗಳನ್ನು ಅನುಚರಿಸುತ್ತಾ ತನ್ನನ್ನು ತಾನೇ ತಪಸ್ಸಿನಲ್ಲಿ ತೊಡಗಿಸಿಕೊಂಡನು.

15025015a ತಥೈವ ದೇವೀ ಗಾಂಧಾರೀ ವಲ್ಕಲಾಜಿನವಾಸಿನೀ|

15025015c ಕುಂತ್ಯಾ ಸಹ ಮಹಾರಾಜ ಸಮಾನವ್ರತಚಾರಿಣೀ||

ಮಹಾರಾಜ! ಹಾಗೆಯೇ ವಲ್ಕಲ-ಜಿನವಸ್ತ್ರಗಳನ್ನು ಧರಿಸಿದ್ದ ದೇವೀ ಗಾಂಧಾರಿಯು ಕುಂತಿಯೊಡನೆ ಸಮಾನವ್ರತಗಳನ್ನು ಆಚರಿಸುತ್ತಿದ್ದಳು.

15025016a ಕರ್ಮಣಾ ಮನಸಾ ವಾಚಾ ಚಕ್ಷುಷಾ ಚಾಪಿ ತೇ ನೃಪ|

15025016c ಸಂನಿಯಮ್ಯೇಂದ್ರಿಯಗ್ರಾಮಮಾಸ್ಥಿತಾಃ ಪರಮಂ ತಪಃ||

ನೃಪ! ಕರ್ಮ-ಮನಸ್ಸು-ಮಾತು-ಕಣ್ಣುಗಳಿಂದ ಇಂದ್ರಿಯಗ್ರಾಮಗಳನ್ನು ನಿಗ್ರಹಿಸಿಕೊಂಡು ಅವರು ಪರಮ ತಪಸ್ಸಿನಲ್ಲಿ ನಿರತರಾಗಿದ್ದರು.

15025017a ತ್ವಗಸ್ಥಿಭೂತಃ ಪರಿಶುಷ್ಕಮಾಂಸೋ

ಜಟಾಜಿನೀ ವಲ್ಕಲಸಂವೃತಾಂಗಃ|

15025017c ಸ ಪಾರ್ಥಿವಸ್ತತ್ರ ತಪಶ್ಚಚಾರ

ಮಹರ್ಷಿವತ್ತೀವ್ರಮಪೇತದೋಷಃ||

ಮಾಂಸಗಳು ಒಣಗಿ ಕೇವಲ ಅಸ್ಥಿಭೂತನಾಗಿ, ಜಟಾಧಾರಿಯಾಗಿ ವಲ್ಕಲ-ಜಿನವಸ್ತ್ರಗಳನ್ನು ಉಟ್ಟು ಮಹರ್ಷಿಗಳಂತೆಯೇ ತೀವ್ರ ತಪಸ್ಸನ್ನು ಮಾಡುತ್ತಿದ್ದ ಆ ಪಾರ್ಥಿವನು ದೋಷಗಳೆಲ್ಲವನ್ನೂ ಕಳೆದುಕೊಂಡನು.

15025018a ಕ್ಷತ್ತಾ ಚ ಧರ್ಮಾರ್ಥವಿದಗ್ರ್ಯಬುದ್ಧಿಃ

ಸಸಂಜಯಸ್ತಂ ನೃಪತಿಂ ಸದಾರಮ್|

15025018c ಉಪಾಚರದ್ ಘೋರತಪೋ ಜಿತಾತ್ಮಾ

ತದಾ ಕೃಶೋ ವಲ್ಕಲಚೀರವಾಸಾಃ||

ಧರ್ಮಾರ್ಥಗಳನ್ನು ತಿಳಿದಿದ್ದ ಮಹಾಮತಿ ಘೋರತಪಸ್ವೀ ಜಿತಾತ್ಮ ವಿದುರನೂ ಕೂಡ ಕೃಶನಾಗಿ, ವಲ್ಕಲ-ಚೀರವಸ್ತ್ರಗಳನ್ನುಟ್ಟು, ಸಂಜಯನೊಡನೆ ನೃಪತಿ ಮತ್ತು ಅವನ ಪತ್ನಿಯ ಸೇವೆಯನ್ನು ಮಾಡುತ್ತಿದ್ದನು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಶತಯೂಪಾಶ್ರಮನಿವಾಸೇ ಪಂಚವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಶತಯೂಪಾಶ್ರಮನಿವಾಸ ಎನ್ನುವ ಇಪ್ಪತ್ತೈದನೇ ಅಧ್ಯಾಯವು.

Related image

Comments are closed.