Ashramavasika Parva: Chapter 22

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೨೨

ಅರಮನೆಗೆ ಹಿಂದಿರುಗಬೇಕೆಂದು ಯುಧಿಷ್ಠಿರನು ಕುಂತಿಯನ್ನು ಕೇಳಿಕೊಳ್ಳಲು, ಗಾಂಧಾರಿಯೊಡನೆ ಮುಂದುವರಿಯುತ್ತಿದ್ದ ಕುಂತಿಯು ಆಡಿದ ಮಾತು (೧-೧೬). ಯುಧಿಷ್ಠಿರ-ಭೀಮಸೇನರು ಹಿಂದಿರುಗಬೇಕೆಂದು ಕುಂತಿಯಲ್ಲಿ ಕೇಳಿಕೊಂಡಿದುದು (೧೭-೩೨).

15022001 ವೈಶಂಪಾಯನ ಉವಾಚ|

15022001a ತತಃ ಪ್ರಾಸಾದಹರ್ಮ್ಯೇಷು ವಸುಧಾಯಾಂ ಚ ಪಾರ್ಥಿವ|

15022001c ಸ್ತ್ರೀಣಾಂ ಚ ಪುರುಷಾಣಾಂ ಚ ಸುಮಹಾನ್ನಿಸ್ವನೋಽಭವತ್||

ವೈಶಂಪಾಯನನು ಹೇಳಿದನು: “ಪಾರ್ಥಿವ! ಆಗ ಪ್ರಾಸಾದಗಳಿಂದಲೂ ಉಪ್ಪರಿಗೆಗಳಿಂದಲೂ ಸ್ತ್ರೀ-ಪುರುಷರ ಮಹಾರೋದನವು ಕೇಳಿಬರುತ್ತಿತ್ತು.

15022002a ಸ ರಾಜಾ ರಾಜಮಾರ್ಗೇಣ ನೃನಾರೀಸಂಕುಲೇನ ಚ|

15022002c ಕಥಂ ಚಿನ್ನಿರ್ಯಯೌ ಧೀಮಾನ್ವೇಪಮಾನಃ ಕೃತಾಂಜಲಿಃ||

ಆ ಧೀಮಾನ್ ರಾಜನು ನರ-ನಾರಿಯರ ಗುಂಪಿನ ಮಧ್ಯದಲ್ಲಿ ಕೈಮುಗಿದುಕೊಂಡು ನಡುಗುತ್ತಾ ಕಷ್ಟದಿಂದ ಮುಂದೆ ಸಾಗುತ್ತಿದ್ದನು.

15022003a ಸ ವರ್ಧಮಾನದ್ವಾರೇಣ ನಿರ್ಯಯೌ ಗಜಸಾಹ್ವಯಾತ್|

15022003c ವಿಸರ್ಜಯಾಮಾಸ ಚ ತಂ ಜನೌಘಂ ಸ ಮುಹುರ್ಮುಹುಃ||

ವರ್ಧಮಾನದ್ವಾರದ ಮೂಲಕ ಹಸ್ತಿನಾಪುರದ ಹೊರ ಹೊರಟು ಅವನು ಆ ಜನಸಮೂಹವನ್ನು ತನ್ನ ಹಿಂದೆ ಬರಬಾರದಂತೆ ಮತ್ತೆ ಮತ್ತೆ ತಡೆಯುತ್ತಿದ್ದನು.

15022004a ವನಂ ಗಂತುಂ ಚ ವಿದುರೋ ರಾಜ್ಞಾ ಸಹ ಕೃತಕ್ಷಣಃ|

15022004c ಸಂಜಯಶ್ಚ ಮಹಾಮಾತ್ರಃ ಸೂತೋ ಗಾವಲ್ಗಣಿಸ್ತಥಾ||

ವಿದುರನೂ ಗಾವಲ್ಗಣಿ ಮಹಾಮಂತ್ರಿ ಸೂತ ಸಂಜಯನೂ ರಾಜನ ಜೊತೆಯಲ್ಲಿ ಹೋಗಲು ನಿಶ್ಚಯಿಸಿದರು.

15022005a ಕೃಪಂ ನಿವರ್ತಯಾಮಾಸ ಯುಯುತ್ಸುಂ ಚ ಮಹಾರಥಮ್|

15022005c ಧೃತರಾಷ್ಟ್ರೋ ಮಹೀಪಾಲಃ ಪರಿದಾಯ ಯುಧಿಷ್ಠಿರೇ||

ಮಹೀಪಾಲ ಧೃತರಾಷ್ಟ್ರನು ಕೃಪ ಮತ್ತು ಮಹಾರಥ ಯುಯುತ್ಸುವನ್ನು ಹಿಂದಿರುಗುವಂತೆ ಮಾಡಿ ಯುಧಿಷ್ಠಿರನಿಗೆ ಒಪ್ಪಿಸಿದನು.

15022006a ನಿವೃತ್ತೇ ಪೌರವರ್ಗೇ ತು ರಾಜಾ ಸಾಂತಃಪುರಸ್ತದಾ|

15022006c ಧೃತರಾಷ್ಟ್ರಾಭ್ಯನುಜ್ಞಾತೋ ನಿವರ್ತಿತುಮಿಯೇಷ ಸಃ||

ಪುರಜನರು ಹಿಂದಿರುಗಿದ ನಂತರ ರಾಜಾ ಯುಧಿಷ್ಠಿರನು ಅಂತಃಪುರದ ಸ್ತ್ರೀಯರು ಹಿಂದಿರುಗಲು ಧೃತರಾಷ್ಟ್ರನ ಅನುಮತಿಯನ್ನು ಕೇಳಿದನು.

15022007a ಸೋಽಬ್ರವೀನ್ಮಾತರಂ ಕುಂತೀಮುಪೇತ್ಯ ಭರತರ್ಷಭ|

15022007c ಅಹಂ ರಾಜಾನಮನ್ವಿಷ್ಯೇ ಭವತೀ ವಿನಿವರ್ತತಾಮ್||

ಭರತರ್ಷಭ! ಅವನು ತಾಯಿ ಕುಂತಿಯ ಬಳಿಸಾರಿ “ನಾನು ರಾಜನನ್ನು ಇನ್ನೂ ಸ್ವಲ್ಪ ದೂರ ಅನುಸರಿಸಿ ಹೋಗುತ್ತೇನೆ. ನೀನು ಹಿಂದಿರುಗಬೇಕು.

15022008a ವಧೂಪರಿವೃತಾ ರಾಜ್ಞಿ ನಗರಂ ಗಂತುಮರ್ಹಸಿ|

15022008c ರಾಜಾ ಯಾತ್ವೇಷ ಧರ್ಮಾತ್ಮಾ ತಪಸೇ ಧೃತನಿಶ್ಚಯಃ||

ರಾಣಿಯೇ! ಸೊಸೆಯರೊಂದಿಗೆ ನೀನು ನಗರಕ್ಕೆ ಹಿಂದಿರುಗಬೇಕು. ಧರ್ಮಾತ್ಮ ಧೃತರಾಷ್ಟ್ರನು ತಪಸ್ಸಿನ ನಿಶ್ಚಯವನ್ನು ಮಾಡಿಕೊಂಡು ಹೋಗುತ್ತಿದ್ದಾನೆ.”

15022009a ಇತ್ಯುಕ್ತಾ ಧರ್ಮರಾಜೇನ ಬಾಷ್ಪವ್ಯಾಕುಲಲೋಚನಾ|

15022009c ಜಗಾದೈವಂ ತದಾ ಕುಂತೀ ಗಾಂಧಾರೀಂ ಪರಿಗೃಹ್ಯ ಹ||

ಧರ್ಮರಾಜನು ಹೀಗೆ ಹೇಳಲು ಕಂಬನಿದುಂಬಿದ ಕಣ್ಣುಗಳಿಂದ ವ್ಯಾಕುಲಳಾಗಿ ಕುಂತಿಯು ಗಾಂಧಾರಿಯನ್ನು ಹಿಡಿದುಕೊಂಡು ಮುಂದುವರೆಯುತ್ತಲೇ ಇದ್ದಳು.

15022010a ಸಹದೇವೇ ಮಹಾರಾಜ ಮಾ ಪ್ರಮಾದಂ ಕೃಥಾಃ ಕ್ವ ಚಿತ್|

15022010c ಏಷ ಮಾಮನುರಕ್ತೋ ಹಿ ರಾಜಂಸ್ತ್ವಾಂ ಚೈವ ನಿತ್ಯದಾ||

“ಮಹಾರಾಜ! ಸಹದೇವನ ವಿಷಯದಲ್ಲಿ ನೀನು ಎಂದೂ ಅಪ್ರಸನ್ನನಾಗಬೇಡ! ರಾಜನ್! ಇವನು ನನ್ನಲ್ಲಿ ಮತ್ತು ನಿನ್ನಲ್ಲಿ ನಿತ್ಯವೂ ಅನುರಕ್ತನಾಗಿರುವವನು.

15022011a ಕರ್ಣಂ ಸ್ಮರೇಥಾಃ ಸತತಂ ಸಂಗ್ರಾಮೇಷ್ವಪಲಾಯಿನಮ್|

15022011c ಅವಕೀರ್ಣೋ ಹಿ ಸ ಮಯಾ ವೀರೋ ದುಷ್ಪ್ರಜ್ಞಯಾ ತದಾ||

ಯುದ್ಧದಿಂದ ಎಂದೂ ಪಲಾಯನಮಾಡದೇ ಇದ್ದ ಕರ್ಣನನ್ನು ಸತತವೂ ಸ್ಮರಿಸಿಕೊಳ್ಳುತ್ತಿರು. ನನ್ನ ದುಷ್ಪ್ರಜ್ಞೆಯಿಂದಾಗಿ ಆ ವೀರನು ಯುದ್ಧದಲ್ಲಿ ಮಡಿದನು.

15022012a ಆಯಸಂ ಹೃದಯಂ ನೂನಂ ಮಂದಾಯಾ ಮಮ ಪುತ್ರಕ|

15022012c ಯತ್ಸೂರ್ಯಜಮಪಶ್ಯಂತ್ಯಾಃ ಶತಧಾ ನ ವಿದೀರ್ಯತೇ||

ಮಗೂ! ಸೂರ್ಯಪುತ್ರ ಕರ್ಣನನ್ನು ನೋಡದೆಯೂ ನನ್ನ ಹೃದಯವು ನೂರು ಚೂರುಗಳಾಗಿ ಒಡೆಯುತ್ತಿಲ್ಲವೆಂದರೆ ನನ್ನ ಈ ಹೃದಯವು ಉಕ್ಕಿನದೇ ಆಗಿರಬೇಕು!

15022013a ಏವಂಗತೇ ತು ಕಿಂ ಶಕ್ಯಂ ಮಯಾ ಕರ್ತುಮರಿಂದಮ|

15022013c ಮಮ ದೋಷೋಽಯಮತ್ಯರ್ಥಂ ಖ್ಯಾಪಿತೋ ಯನ್ನ ಸೂರ್ಯಜಃ|

ಅರಿಂದಮ! ಎಲ್ಲವೂ ಹೀಗೆಯೇ ಆಗಬೇಕೆಂದಿದ್ದಾಗ ನಾನೇನು ಮಾಡಲು ಶಕ್ಯವಿದೆ? ಸೂರ್ಯಜನನ್ನು ಮೊದಲು ನಿಮಗೆ ಪರಿಚಯಮಾಡಿಸಿಕೊಡದೇ ಇದ್ದುದು ನನ್ನ ದೋಷವೇ ಸರಿ!

15022013e ತನ್ನಿಮಿತ್ತಂ ಮಹಾಬಾಹೋ ದಾನಂ ದದ್ಯಾಸ್ತ್ವಮುತ್ತಮಮ್||

15022014a ಸದೈವ ಭ್ರಾತೃಭಿಃ ಸಾರ್ಧಮಗ್ರಜಸ್ಯಾರಿಮರ್ದನ|

ಅರಿಮರ್ದನ! ಮಹಾಬಾಹೋ! ನಿನ್ನ ತಮ್ಮಂದಿರೊಡನೆ ನಿನ್ನ ಅಗ್ರಜನಿಗಾಗಿ ಸದಾ ದಾನಗಳನ್ನು ನೀಡುತ್ತಿರು!

15022014c ದ್ರೌಪದ್ಯಾಶ್ಚ ಪ್ರಿಯೇ ನಿತ್ಯಂ ಸ್ಥಾತವ್ಯಮರಿಕರ್ಶನ||

15022015a ಭೀಮಸೇನಾರ್ಜುನೌ ಚೈವ ನಕುಲಶ್ಚ ಕುರೂದ್ವಹ|

ಅರಿಕರ್ಶನ! ದ್ರೌಪದಿಯ ವಿಷಯದಲ್ಲಿಯೂ ನೀನು ನಿತ್ಯವೂ ಪ್ರಿಯವಾದುದನ್ನೇ ಮಾಡುತ್ತಿರಬೇಕು. ಕುರೂದ್ವಹ! ಭೀಮಾರ್ಜುನರನ್ನೂ ನಕುಲನನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿರಬೇಕು.

15022015c ಸಮಾಧೇಯಾಸ್ತ್ವಯಾ ವೀರ ತ್ವಯ್ಯದ್ಯ ಕುಲಧೂರ್ಗತಾ||

15022016a ಶ್ವಶ್ರೂಶ್ವಶುರಯೋಃ ಪಾದಾನ್ಶುಶ್ರೂಷಂತೀ ವನೇ ತ್ವಹಮ್|

15022016c ಗಾಂಧಾರೀಸಹಿತಾ ವತ್ಸ್ಯೇ ತಾಪಸೀ ಮಲಪಂಕಿನೀ||

ವೀರ! ಇಂದಿನಿಂದ ಕುರುವಂಶದ ಪಾಲನೆಯ ಭಾರವು ಸಂಪೂರ್ಣವಾಗಿ ನಿನ್ನ ಮೇಲೆಯೇ ಬಿದ್ದಿದೆ. ನಾನಾದರೋ ವನದಲ್ಲಿ ಅತ್ತೆ-ಮಾವಂದಿರ ಸೇವೆಯನ್ನು ಮಾಡಿಕೊಂಡಿರುತ್ತೇನೆ. ಗಾಂಧಾರಿಯ ಸಹಿತ ಕೊಳಕು-ಧೂಳುಗಳಿಂದ ತುಂಬಿದ ತಾಪಸಿಯಂತೆ ವಾಸಿಸುತ್ತೇನೆ.”

15022017a ಏವಮುಕ್ತಃ ಸ ಧರ್ಮಾತ್ಮಾ ಭ್ರಾತೃಭಿಃ ಸಹಿತೋ ವಶೀ|

15022017c ವಿಷಾದಮಗಮತ್ತೀವ್ರಂ ನ ಚ ಕಿಂ ಚಿದುವಾಚ ಹ||

ಅವಳು ಹೀಗೆ ಹೇಳಲು ಜಿತೇಂದ್ರಿಯ ಧರ್ಮಾತ್ಮಾ ಯುಧಿಷ್ಠಿರನು ಸಹೋದರರೊಡನೆ ತೀವ್ರ ದುಃಖಿತನಾದನು ಮತ್ತು  ಸ್ವಲ್ಪ ಹೊತ್ತು ಅವನ ಬಾಯಿಂದ ಮಾತುಗಳೇ ಹೊರಬರಲಿಲ್ಲ.

15022018a ಸ ಮುಹೂರ್ತಮಿವ ಧ್ಯಾತ್ವಾ ಧರ್ಮಪುತ್ರೋ ಯುಧಿಷ್ಠಿರಃ|

15022018c ಉವಾಚ ಮಾತರಂ ದೀನಶ್ಚಿಂತಾಶೋಕಪರಾಯಣಃ||

ಒಂದು ಮುಹೂರ್ತಕಾಲ ಯೋಚಿಸಿ ಧರ್ಮಪುತ್ರ ಯುಧಿಷ್ಠಿರನು ದೀನ-ಚಿಂತಾ-ಶೋಕಪರಾಯಣನಾಗಿ ತಾಯಿಗೆ ಹೇಳಿದನು:

15022019a ಕಿಮಿದಂ ತೇ ವ್ಯವಸಿತಂ ನೈವಂ ತ್ವಂ ವಕ್ತುಮರ್ಹಸಿ|

15022019c ನ ತ್ವಾಮಭ್ಯನುಜಾನಾಮಿ ಪ್ರಸಾದಂ ಕರ್ತುಮರ್ಹಸಿ||

“ನೀನೇಕೆ ಹೀಗೆ ವರ್ತಿಸುತ್ತಿರುವೆ? ಹೀಗೆ ನೀನು ಮಾತನಾಡಬಾರದು. ನಿನಗೆ ನಾನು ಅನುಮತಿಯನ್ನು ಕೊಡುವುದಿಲ್ಲ. ಪ್ರಸನ್ನಳಾಗಬೇಕು.

15022020a ವ್ಯರೋಚಯಃ ಪುರಾ ಹ್ಯಸ್ಮಾನುತ್ಸಾಹ್ಯ ಪ್ರಿಯದರ್ಶನೇ|

15022020c ವಿದುರಾಯಾ ವಚೋಭಿಸ್ತ್ವಮಸ್ಮಾನ್ನ ತ್ಯಕ್ತುಮರ್ಹಸಿ||

ಪ್ರಿಯದರ್ಶನೇ! ಹಿಂದೆ ವಿದುಲೆಯ ಮಾತುಗಳನ್ನು ಉದಾಹರಿಸಿ ನಮ್ಮಲ್ಲಿ ಉತ್ಸಾಹವನ್ನು ತುಂಬಿದ್ದೆ. ಇಂದು ನಮ್ಮನ್ನು ತ್ಯಜಿಸುವುದು ಸರಿಯಲ್ಲ!

15022021a ನಿಹತ್ಯ ಪೃಥಿವೀಪಾಲಾನ್ರಾಜ್ಯಂ ಪ್ರಾಪ್ತಮಿದಂ ಮಯಾ|

15022021c ತವ ಪ್ರಜ್ಞಾಮುಪಶ್ರುತ್ಯ ವಾಸುದೇವಾನ್ನರರ್ಷಭಾತ್||

ನರರ್ಷಭ ವಾಸುದೇವನ ಮೂಲಕ ನಮಗೆ ಹೇಳಿ ಕಳುಕಳುಹಿಸಿದ ನಿನ್ನ ಬುದ್ಧಿಯಂತೆಯೇ ನಾನು ಪೃಥಿವೀಪಾಲರನ್ನು ಸಂಹರಿಸಿ ಈ ರಾಜ್ಯವನ್ನು ಪಡೆದುಕೊಂಡೆನು.

15022022a ಕ್ವ ಸಾ ಬುದ್ಧಿರಿಯಂ ಚಾದ್ಯ ಭವತ್ಯಾ ಯಾ ಶ್ರುತಾ ಮಯಾ|

15022022c ಕ್ಷತ್ರಧರ್ಮೇ ಸ್ಥಿತಿಂ ಹ್ಯುಕ್ತ್ವಾ ತಸ್ಯಾಶ್ಚಲಿತುಮಿಚ್ಚಸಿ||

ಅಂದು ನಿನಗಿದ್ದ ಬುದ್ಧಿಯೂ ಮತ್ತು ನನಗೆ ಹೇಳಿದ ಮಾತುಗಳೂ ಇಂದು ಎಲ್ಲಿಗೆ ಹೋದವು? ಕ್ಷತ್ರಧರ್ಮದಲ್ಲಿಯೇ ಇರುವಂತೆ ನಮಗೆ ಹೇಳಿ ಈಗ ನೀನು ಕ್ಷತ್ರಧರ್ಮದಿಂದ ಜಾರಿಕೊಳ್ಳಲು ಬಯಸುತ್ತಿರುವೆಯಲ್ಲ!

15022023a ಅಸ್ಮಾನುತ್ಸೃಜ್ಯ ರಾಜ್ಯಂ ಚ ಸ್ನುಷಾಂ ಚೇಮಾಂ ಯಶಸ್ವಿನೀಮ್|

15022023c ಕಥಂ ವತ್ಸ್ಯಸಿ ಶೂನ್ಯೇಷು ವನೇಷ್ವಂಬ ಪ್ರಸೀದ ಮೇ||

ನಮ್ಮನ್ನೂ, ರಾಜ್ಯವನ್ನೂ, ಈ ನಿನ್ನ ಯಶಸ್ವಿನೀ ಸೊಸೆಯನ್ನೂ ತೊರೆದು ಶೂನ್ಯ ವನದಲ್ಲಿ ನೀನು ಹೇಗೆ ತಾನೇ ವಾಸಿಸುವೆ? ಅಮ್ಮಾ! ನಮ್ಮ ಮೇಲೆ ಕರುಣೆ ತೋರು!”

15022024a ಇತಿ ಬಾಷ್ಪಕಲಾಂ ವಾಚಂ ಕುಂತೀ ಪುತ್ರಸ್ಯ ಶೃಣ್ವತೀ|

15022024c ಜಗಾಮೈವಾಶ್ರುಪೂರ್ಣಾಕ್ಷೀ ಭೀಮಸ್ತಾಮಿದಮಬ್ರವೀತ್||

ಹೀಗೆ ಮಗನ ಆ ಬಾಷ್ಪಗದ್ಗದ ಮಾತನ್ನು ಕೇಳುತ್ತಲೂ ಕಣ್ಣೀರುತುಂಬಿದ ಕುಂತಿಯು ಮುಂದೆ ಸಾಗುತ್ತಲೇ ಇದ್ದಳು. ಆಗ ಅವಳಿಗೆ ಭೀಮನು ಹೇಳಿದನು:

15022025a ಯದಾ ರಾಜ್ಯಮಿದಂ ಕುಂತಿ ಭೋಕ್ತವ್ಯಂ ಪುತ್ರನಿರ್ಜಿತಮ್|

15022025c ಪ್ರಾಪ್ತವ್ಯಾ ರಾಜಧರ್ಮಾಶ್ಚ ತದೇಯಂ ತೇ ಕುತೋ ಮತಿಃ||

“ಕುಂತಿ! ಪುತ್ರರು ಜಯಿಸಿದ ಈ ರಾಜ್ಯವನ್ನು ನೀನು ಭೋಗಿಸಬೇಕು. ರಾಜಧರ್ಮವನ್ನು ಪಾಲಿಸುವ ಕಾಲವು ಒದಗಿರುವಾಗ ನಿನಗೆ ಎಲ್ಲಿಂದ ಈ ಬುದ್ಧಿಯು ಬಂದಿತು?

15022026a ಕಿಂ ವಯಂ ಕಾರಿತಾಃ ಪೂರ್ವಂ ಭವತ್ಯಾ ಪೃಥಿವೀಕ್ಷಯಮ್|

15022026c ಕಸ್ಯ ಹೇತೋಃ ಪರಿತ್ಯಜ್ಯ ವನಂ ಗಂತುಮಭೀಪ್ಸಸಿ||

ಮೊದಲು ನಮ್ಮಿಂದ ನೀನು ಏಕೆ ಈ ಭೂಮಿಕ್ಷಯವನ್ನು ಮಾಡಿಸಿದೆ? ಯಾವ ಕಾರಣಕ್ಕಾಗಿ ನೀನು ನಮ್ಮನ್ನು ಪರಿತ್ಯಜಿಸಿ ವನಕ್ಕೆ ಹೋಗಲು ಇಚ್ಛಿಸಿರುವೆ?

15022027a ವನಾಚ್ಚಾಪಿ ಕಿಮಾನೀತಾ ಭವತ್ಯಾ ಬಾಲಕಾ ವಯಮ್|

15022027c ದುಃಖಶೋಕಸಮಾವಿಷ್ಟೌ ಮಾದ್ರೀಪುತ್ರಾವಿಮೌ ತಥಾ||

ವನವಾಸವೇ ನಿನಗೆ ಇಷ್ಟವಾಗಿದ್ದಿದ್ದರೆ ಬಾಲಕರಾಗಿದ್ದ ನಮ್ಮನ್ನೂ ಮತ್ತು ದುಃಖಶೋಕಸಮಾವಿಷ್ಟರಾಗಿದ್ದ ಮಾದ್ರೀಪುತ್ರರನ್ನೂ ನೀನು ವನದಿಂದ ನಗರಕ್ಕೆ ಏಕೆ ಕರೆದುಕೊಂಡು ಬಂದೆ?

15022028a ಪ್ರಸೀದ ಮಾತರ್ಮಾ ಗಾಸ್ತ್ವಂ ವನಮದ್ಯ ಯಶಸ್ವಿನಿ|

15022028c ಶ್ರಿಯಂ ಯೌಧಿಷ್ಠಿರೀಂ ತಾವದ್ಭುಂಕ್ಷ್ವ ಪಾರ್ಥಬಲಾರ್ಜಿತಾಮ್||

ಮಾತಾ! ಯಶಸ್ವಿನೀ! ಪ್ರಸನ್ನಳಾಗು! ನೀನು ಇಂದು ವನಕ್ಕೆ ಹೋಗಬೇಡ! ಯುಧಿಷ್ಠಿರ ಮತ್ತು ಪಾರ್ಥನ ಬಲದಿಂದ ಗೆಲ್ಲಲ್ಪಟ್ಟಿರುವ ಈ ಸಂಪತ್ತನ್ನು ಭೋಗಿಸು!”

15022029a ಇತಿ ಸಾ ನಿಶ್ಚಿತೈವಾಥ ವನವಾಸಕೃತಕ್ಷಣಾ|

15022029c ಲಾಲಪ್ಯತಾಂ ಬಹುವಿಧಂ ಪುತ್ರಾಣಾಂ ನಾಕರೋದ್ವಚಃ||

ವನವಾಸದ ಕುರಿತು ದೃಢವಾಗಿ ನಿಶ್ಚಯಿಸಿದ್ದ ಅವಳು ಪುತ್ರರು ಬಹುವಿಧದಲ್ಲಿ ವಿಲಪಿಸುತ್ತಿದ್ದರೂ ಅವರ ಮಾತಿನಂತೆ ಮಾಡಲಿಲ್ಲ.

15022030a ದ್ರೌಪದೀ ಚಾನ್ವಯಾಚ್ಚ್ವಶ್ರೂಂ ವಿಷಣ್ಣವದನಾ ತದಾ|

15022030c ವನವಾಸಾಯ ಗಚ್ಚಂತೀಂ ರುದತೀ ಭದ್ರಯಾ ಸಹ||

ವನವಾಸಕ್ಕೆ ಹೋಗುತ್ತಿರುವ ಅತ್ತೆಯ ಹಿಂದೆ ವಿಷಣ್ಣವದನಳಾದ ದ್ರೌಪದಿಯೂ ಸುಭದ್ರೆಯೊಡನೆ ರೋದಿಸುತ್ತಾ ಹೋಗುತ್ತಲೇ ಇದ್ದಳು.

15022031a ಸಾ ಪುತ್ರಾನ್ರುದತಃ ಸರ್ವಾನ್ಮುಹುರ್ಮುಹುರವೇಕ್ಷತೀ|

15022031c ಜಗಾಮೈವ ಮಹಾಪ್ರಾಜ್ಞಾ ವನಾಯ ಕೃತನಿಶ್ಚಯಾ||

ರೋದಿಸುತ್ತಿದ್ದ ತನ್ನ ಎಲ್ಲ ಮಕ್ಕಳನ್ನೂ ಪುನಃ ಪುನಃ ನೋಡುತ್ತಿದ್ದರೂ ಆ ಮಹಾಪ್ರಾಜ್ಞೆ ಕುಂತಿಯು ವನವಾಸದ ದೃಢನಿಶ್ಚಯವನ್ನು ಮಾಡಿದವಳಾಗಿ ಮುಂದೆ ಮುಂದೆ ಸಾಗುತ್ತಲೇ ಇದ್ದಳು.

15022032a ಅನ್ವಯುಃ ಪಾಂಡವಾಸ್ತಾಂ ತು ಸಭೃತ್ಯಾಂತಃಪುರಾಸ್ತದಾ|

15022032c ತತಃ ಪ್ರಮೃಜ್ಯ ಸಾಶ್ರೂಣಿ ಪುತ್ರಾನ್ ವಚನಮಬ್ರವೀತ್||

ಪಾಂಡವರಾದರೋ ಅಂತಃಪುರದ ಸ್ತ್ರೀಯರು ಮತ್ತು ಸೇವಕರೊಂದಿಗೆ ಅವಳನ್ನು ಹಿಂಬಾಲಿಸುತ್ತಲೇ ಇದ್ದರು. ಆಗ ಕುಂತಿಯು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಮಕ್ಕಳಿಗೆ ಈ ಮಾತುಗಳನ್ನಾಡಿದಳು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಕುಂತೀವನಪ್ರಸ್ಥಾನೇ ದ್ವಾವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಕುಂತೀವನಪ್ರಸ್ಥಾನ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.

Related image

Comments are closed.