ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೨೧
ಧೃತರಾಷ್ಟ್ರನ ವನಗಮನ (೧-೧೩)
15021001 ವೈಶಂಪಾಯನ ಉವಾಚ|
15021001a ತತಃ ಪ್ರಭಾತೇ ರಾಜಾ ಸ ಧೃತರಾಷ್ಟ್ರೋಽಂಬಿಕಾಸುತಃ|
15021001c ಆಹೂಯ ಪಾಂಡವಾನ್ವೀರಾನ್ವನವಾಸಕೃತಕ್ಷಣಃ||
ವೈಶಂಪಾಯನನು ಹೇಳಿದನು: “ಮರುದಿನ ಬೆಳಿಗ್ಗೆ ಅಂಬಿಕಾಸುತ ಧೃತರಾಷ್ಟ್ರನು ವನವಾಸಕ್ಕೆ ಹೊರಡಲು ಸಿದ್ಧನಾಗಿ ವೀರ ಪಾಂಡವರನ್ನು ಕರೆಯಿಸಿದನು.
15021002a ಗಾಂಧಾರೀಸಹಿತೋ ಧೀಮಾನಭಿನಂದ್ಯ ಯಥಾವಿಧಿ|
15021002c ಕಾರ್ತ್ತಿಕ್ಯಾಂ ಕಾರಯಿತ್ವೇಷ್ಟಿಂ ಬ್ರಾಹ್ಮಣೈರ್ವೇದಪಾರಗೈಃ||
ಗಾಂಧಾರಿಯ ಸಹಿತನಾಗಿ ಆ ಧೀಮಂತನು ಯಥಾವಿಧಿಯಾಗಿ ಅವರನ್ನು ಅಭಿನಂದಿಸಿ, ವೇದಪಾರಗ ಬ್ರಾಹ್ಮಣರಿಂದ ಕಾರ್ತೀಕದ ಹುಣ್ಣಿಮೆಯಂದು ಇಷ್ಟಿಯನ್ನು ನೆರವೇರಿಸಿದನು.
15021003a ಅಗ್ನಿಹೋತ್ರಂ ಪುರಸ್ಕೃತ್ಯ ವಲ್ಕಲಾಜಿನಸಂವೃತಃ|
15021003c ವಧೂಪರಿವೃತೋ ರಾಜಾ ನಿರ್ಯಯೌ ಭವನಾತ್ತತಃ||
ಅಗ್ನಿಹೋತ್ರವನ್ನು ಮುಂದೆಮಾಡಿಕೊಂಡು, ವಲ್ಕಲ-ಜಿನವಸ್ತ್ರಗಳನ್ನು ಧರಿಸಿ, ಸೊಸೆಯರಿಂದ ಪರಿವೃತನಾಗಿ ರಾಜನು ತನ್ನ ಭವನದಿಂದ ಹೊರಟನು.
15021004a ತತಃ ಸ್ತ್ರಿಯಃ ಕೌರವಪಾಂಡವಾನಾಂ
ಯಾಶ್ಚಾಪ್ಯನ್ಯಾಃ ಕೌರವರಾಜವಂಶ್ಯಾಃ|
15021004c ತಾಸಾಂ ನಾದಃ ಪ್ರಾದುರಾಸೀತ್ತದಾನೀಂ
ವೈಚಿತ್ರವೀರ್ಯೇ ನೃಪತೌ ಪ್ರಯಾತೇ||
ವಿಚಿತ್ರವೀರ್ಯನ ಮಗ ನೃಪತಿಯು ಹೊರಟ ಆ ಸಮಯದಲ್ಲಿ ಕೌರವ-ಪಾಂಡವರ ಸ್ತ್ರೀಯರ ಮತ್ತು ಕೌರವ ರಾಜ ವಂಶಜರ ಆರ್ತನಾದಗಳು ಎಲ್ಲ ಕಡೆಗಳಿಂದಲೂ ಕೇಳಿ ಬರುತ್ತಿದ್ದವು.
15021005a ತತೋ ಲಾಜೈಃ ಸುಮನೋಭಿಶ್ಚ ರಾಜಾ
ವಿಚಿತ್ರಾಭಿಸ್ತದ್ಗೃಹಂ ಪೂಜಯಿತ್ವಾ|
15021005c ಸಂಯೋಜ್ಯಾರ್ಥೈರ್ಭೃತ್ಯಜನಂ ಚ ಸರ್ವಂ
ತತಃ ಸಮುತ್ಸೃಜ್ಯ ಯಯೌ ನರೇಂದ್ರಃ||
ಅನಂತರ ನರೇಂದ್ರನು ಸುಮನೋಹರ ಅರಳಿನಿಂದಲೂ ವಿಚಿತ್ರ ಪುಷ್ಪಗಳಿಂದಲೂ ತನ್ನ ಅರಮನೆಯನ್ನು ಪೂಜಿಸಿ, ಸೇವಕವರ್ಗದ ಜನರೆಲ್ಲರನ್ನು ಸತ್ಕರಿಸಿ, ಎಲ್ಲವನ್ನೂ ಬಿಟ್ಟು ಹೊರಟನು.
15021006a ತತೋ ರಾಜಾ ಪ್ರಾಂಜಲಿರ್ವೇಪಮಾನೋ
ಯುಧಿಷ್ಠಿರಃ ಸಸ್ವನಂ ಬಾಷ್ಪಕಂಠಃ|
15021006c ವಿಲಪ್ಯೋಚ್ಚೈರ್ಹಾ ಮಹಾರಾಜ ಸಾಧೋ
ಕ್ವ ಗಂತಾಸೀತ್ಯಪತತ್ತಾತ ಭೂಮೌ||
ಆಗ ರಾಜಾ ಯುಧಿಷ್ಠಿರನು ಕೈಮುಗಿದು ನಡುಗುತ್ತಾ ಕಣ್ಣೀರಿನಿಂದ ಗಂಟಲು ಕಟ್ಟಿದವನಾಗಿ “ಸತ್ಪುರುಷನೇ! ಮಹಾರಾಜ! ಎಲ್ಲಿಗೆ ಹೋಗುತ್ತಿರುವೆ?” ಎಂದು ಜೋರಾಗಿ ಕೂಗಿಕೊಳ್ಳುತ್ತಾ ಭೂಮಿಯ ಮೇಲೆ ಬಿದ್ದನು.
15021007a ತಥಾರ್ಜುನಸ್ತೀವ್ರದುಃಖಾಭಿತಪ್ತೋ
ಮುಹುರ್ಮುಹುರ್ನಿಃಶ್ವಸನ್ಭಾರತಾಗ್ರ್ಯಃ|
15021007c ಯುಧಿಷ್ಠಿರಂ ಮೈವಮಿತ್ಯೇವಮುಕ್ತ್ವಾ
ನಿಗೃಹ್ಯಾಥೋದೀಧರತ್ಸೀದಮಾನಃ||
ಆಗ ತೀವ್ರ ದುಃಖದಿಂದ ಪರಿತಪಿಸುತ್ತಿದ್ದ ಭಾರತಾಗ್ರ್ಯ ಅರ್ಜುನನು ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಯುಧಿಷ್ಠಿರನಿಗೆ “ನೀನು ಹೀಗೆ ಅಧೀರನಾಗಬಾರದು!” ಎಂದು ಹೇಳುತ್ತಾ ತಾನೂ ಎದೆಗುಂದಿದನು.
15021008a ವೃಕೋದರಃ ಫಲ್ಗುನಶ್ಚೈವ ವೀರೌ
ಮಾದ್ರೀಪುತ್ರೌ ವಿದುರಃ ಸಂಜಯಶ್ಚ|
15021008c ವೈಶ್ಯಾಪುತ್ರಃ ಸಹಿತೋ ಗೌತಮೇನ
ಧೌಮ್ಯೋ ವಿಪ್ರಾಶ್ಚಾನ್ವಯುರ್ಬಾಷ್ಪಕಂಠಾಃ||
ವೃಕೋದರ, ಫಲ್ಗುನ, ವೀರ ಮಾದ್ರೀಪುತ್ರರು, ವಿದುರ, ಸಂಜಯ, ವೈಶ್ಯಾಪುತ್ರ ಯುಯುತ್ಸು, ಮತ್ತು ಧೌಮ್ಯನೊಡನೆ ವಿಪ್ರ ಗೌತಮ ಕೃಪರು ಬಾಷ್ಪಗದ್ಗದ ಕಂಠಗಳಿಂದ ಕೂಡಿದವರಾಗಿ ರಾಜನನ್ನು ಅನುಸರಿಸಿ ಹೋದರು.
15021009a ಕುಂತೀ ಗಾಂಧಾರೀಂ ಬದ್ಧನೇತ್ರಾಂ ವ್ರಜಂತೀಂ
ಸ್ಕಂಧಾಸಕ್ತಂ ಹಸ್ತಮಥೋದ್ವಹಂತೀ|
15021009c ರಾಜಾ ಗಾಂಧಾರ್ಯಾಃ ಸ್ಕಂಧದೇಶೇಽವಸಜ್ಯ
ಪಾಣಿಂ ಯಯೌ ಧೃತರಾಷ್ಟ್ರಃ ಪ್ರತೀತಃ||
ಕುಂತಿಯು ಕಣ್ಣುಗಳನ್ನು ಕಟ್ಟಿಕೊಂಡಿದ್ದ ಗಾಂಧಾರಿಯ ಎಡತೋಳನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಹೋಗುತ್ತಿದ್ದಳು. ರಾಜಾ ಧೃತರಾಷ್ಟ್ರನು ಗಾಂಧಾರಿಯ ಹೆಗಲಿನ ಮೇಲೆ ಕೈಯನ್ನಿಟ್ಟು ನಿಶ್ಚಿಂತನಾಗಿ ಹೋಗುತ್ತಿದ್ದನು.
15021010a ತಥಾ ಕೃಷ್ಣಾ ದ್ರೌಪದೀ ಯಾದವೀ ಚ
ಬಾಲಾಪತ್ಯಾ ಚೋತ್ತರಾ ಕೌರವೀ ಚ|
15021010c ಚಿತ್ರಾಂಗದಾ ಯಾಶ್ಚ ಕಾಶ್ಚಿತ್ ಸ್ತ್ರಿಯೋಽನ್ಯಾಃ
ಸಾರ್ಧಂ ರಾಜ್ಞಾ ಪ್ರಸ್ಥಿತಾಸ್ತಾ ವಧೂಭಿಃ||
ಹಾಗೆಯೇ ದ್ರೌಪದೀ ಕೃಷ್ಣೆ, ಯಾದವೀ ಸುಭದ್ರೆ, ಮಗುವನ್ನೆತ್ತಿಕೊಂಡಿದ್ದ ಕೌರವೀ ಉತ್ತರೆ, ಚಿತ್ರಾಂಗದಾ ಮತ್ತು ಇತರ ಸ್ತ್ರೀಯರು ಎಲ್ಲರೂ ಒಟ್ಟಾಗಿ ರಾಜ ಧೃತರಾಷ್ಟ್ರನೊಡನೆ ಹೋಗುತ್ತಿದ್ದರು.
15021011a ತಾಸಾಂ ನಾದೋ ರುದತೀನಾಂ ತದಾಸೀದ್
ರಾಜನ್ದುಃಖಾತ್ಕುರರೀಣಾಮಿವೋಚ್ಚೈಃ|
15021011c ತತೋ ನಿಷ್ಪೇತುರ್ಬ್ರಾಹ್ಮಣಕ್ಷತ್ರಿಯಾಣಾಂ
ವಿಟ್ಶೂದ್ರಾಣಾಂ ಚೈವ ನಾರ್ಯಃ ಸಮಂತಾತ್||
ರಾಜನ್! ಆಗ ಅವರೆಲ್ಲರ ರೋದನವು ದುಃಖದಲ್ಲಿರುವ ಕಡಲಹದ್ದುಗಳ ಕೂಗಿನಂತೆ ಕೇಳಿಬರುತ್ತಿತ್ತು. ಅದನ್ನು ಕೇಳಿ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ನಾರಿಯರು ಅಲ್ಲಿಗೆ ಎಲ್ಲಕಡೆಗಳಿಂದ ಬಂದು ಸೇರಿದರು.
15021012a ತನ್ನಿರ್ಯಾಣೇ ದುಃಖಿತಃ ಪೌರವರ್ಗೋ
ಗಜಾಹ್ವಯೇಽತೀವ ಬಭೂವ ರಾಜನ್|
15021012c ಯಥಾ ಪೂರ್ವಂ ಗಚ್ಚತಾಂ ಪಾಂಡವಾನಾಂ
ದ್ಯೂತೇ ರಾಜನ್ಕೌರವಾಣಾಂ ಸಭಾಯಾಮ್||
ರಾಜನ್! ಹಿಂದೆ ದ್ಯೂತದ ಸಮಯದಲ್ಲಿ ಕೌರವರ ಸಭೆಯಿಂದ ಪಾಂಡವರು ಹೊರಟಿದ್ದಾಗ ಹೇಗೋ ಹಾಗೆ ಧೃತರಾಷ್ಟ್ರನು ಹೊರಡುವಾಗಲೂ ಕೂಡ ಹಸ್ತಿನಾಪುರದ ಪೌರವರ್ಗವು ಅತೀವ ದುಃಖಿತಗೊಂಡಿತ್ತು.
15021013a ಯಾ ನಾಪಶ್ಯಚ್ಚಂದ್ರಮಾ ನೈವ ಸೂರ್ಯೋ
ರಾಮಾಃ ಕದಾ ಚಿದಪಿ ತಸ್ಮಿನ್ನರೇಂದ್ರೇ|
15021013c ಮಹಾವನಂ ಗಚ್ಚತಿ ಕೌರವೇಂದ್ರೇ
ಶೋಕೇನಾರ್ತಾ ರಾಜಮಾರ್ಗಂ ಪ್ರಪೇದುಃ||
ಯಾವ ರಮಣೀಯರು ಸೂರ್ಯ-ಚಂದ್ರರನ್ನು ನೋಡಲೂ ಕೂಡ ಹೊರಗೆ ಬರುತ್ತಿರಲಿಲ್ಲವೋ ಅಂಥವರೆಲ್ಲರೂ ಕೌರವೇಂದ್ರನು ಮಹಾವನಕ್ಕೆ ಹೊರಡುವಾಗ ಶೋಕಾರ್ತರಾಗಿ ರಾಜಬೀದಿಗೆ ಬಂದರು.”
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರನಿರ್ಯಾಣೇ ಏಕವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರನಿರ್ಯಾಣ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.