ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೧೬
ಬ್ರಾಹ್ಮಣನು ಧೃತರಾಷ್ಟ್ರನಿಗೆ ತನ್ನ ಸಾಂತ್ವನ ಮಾತುಗಳನ್ನು ಮುಂದುವರೆಸಿದುದು (೧-೨೩). ಧೃತರಾಷ್ಟ್ರನು ಪೌರಜನರನ್ನು ಗೌರವಿಸಿ ಕಳುಹಿಸಿಕೊಟ್ಟಿದುದು (೨೪-೨೭).
15016001 ಬ್ರಾಹ್ಮಣ ಉವಾಚ|
15016001a ನ ತದ್ದುರ್ಯೋಧನಕೃತಂ ನ ಚ ತದ್ಭವತಾ ಕೃತಮ್|
15016001c ನ ಕರ್ಣಸೌಬಲಾಭ್ಯಾಂ ಚ ಕುರವೋ ಯತ್ಕ್ಷಯಂ ಗತಾಃ||
ಬ್ರಾಹ್ಮಣನು ಹೇಳಿದನು: “ಕುರುಗಳ ಕ್ಷಯವು ದುರ್ಯೋಧನ ಕೃತ್ಯವಲ್ಲ. ನೀನೂ ಕೂಡ ಮಾಡಿದುದಲ್ಲ. ಕರ್ಣ-ಸೌಬಲರ್ಯಾರೂ ಮಾಡಿದುದಲ್ಲ.
15016002a ದೈವಂ ತತ್ತು ವಿಜಾನೀಮೋ ಯನ್ನ ಶಕ್ಯಂ ಪ್ರಬಾಧಿತುಮ್|
15016002c ದೈವಂ ಪುರುಷಕಾರೇಣ ನ ಶಕ್ಯಮತಿವರ್ತಿತುಮ್||
ಅದು ದೈವಕೃತವಾಗಿತ್ತು. ಯಾರಿಂದಲೂ ತಡೆಯಲು ಸಾಧ್ಯವಾಗಿರಲಿಲ್ಲ. ದೈವವನ್ನು ಪುರುಷಪ್ರಯತ್ನದಿಂದ ತಡೆಯಲು ಶಕ್ಯವಿಲ್ಲ.
15016003a ಅಕ್ಷೌಹಿಣ್ಯೋ ಮಹಾರಾಜ ದಶಾಷ್ಟೌ ಚ ಸಮಾಗತಾಃ|
15016003c ಅಷ್ಟಾದಶಾಹೇನ ಹತಾ ದಶಭಿರ್ಯೋಧಪುಂಗವೈಃ||
15016004a ಭೀಷ್ಮದ್ರೋಣಕೃಪಾದ್ಯೈಶ್ಚ ಕರ್ಣೇನ ಚ ಮಹಾತ್ಮನಾ|
15016004c ಯುಯುಧಾನೇನ ವೀರೇಣ ಧೃಷ್ಟದ್ಯುಮ್ನೇನ ಚೈವ ಹ||
15016005a ಚತುರ್ಭಿಃ ಪಾಂಡುಪುತ್ರೈಶ್ಚ ಭೀಮಾರ್ಜುನಯಮೈರ್ನೃಪ|
15016005c ಜನಕ್ಷಯೋಽಯಂ ನೃಪತೇ ಕೃತೋ ದೈವಬಲಾತ್ಕೃತೈಃ||
ಮಹಾರಾಜ! ಹದಿನೆಂಟು ಅಕ್ಷೋಹಿಣೀ ಸೇನೆಗಳು ಒಂದುಗೂಡಿದ್ದವು. ಹದಿನೆಂಟೇ ದಿನಗಳಲ್ಲಿ ಅವು ಹತ್ತು ಯೋಧಪುಂಗವರಿಂದ - ಭೀಷ್ಮ, ದ್ರೋಣ, ಕೃಪ, ಮಹಾತ್ಮ ಕರ್ಣ, ವೀರ ಯುಯುಧಾನ, ಧೃಷ್ಟದ್ಯುಮ್ನ ಮತ್ತು ನಾಲ್ವರು ಪಾಂಡುಪುತ್ರರು – ಭೀಮಾರ್ಜುನರು ಮತ್ತು ಯಮಳರೀರ್ವರು - ನಾಶಗೊಂಡವು. ನೃಪತೇ! ಈ ಜನಕ್ಷಯವು ದೈವಬಲದಿಂದಲೇ ನಡೆಯಿತು.
15016006a ಅವಶ್ಯಮೇವ ಸಂಗ್ರಾಮೇ ಕ್ಷತ್ರಿಯೇಣ ವಿಶೇಷತಃ|
15016006c ಕರ್ತವ್ಯಂ ನಿಧನಂ ಲೋಕೇ ಶಸ್ತ್ರೇಣ ಕ್ಷತ್ರಬಂಧುನಾ||
ಲೋಕದಲ್ಲಿ ವಿಶೇಷವಾಗಿ ಕ್ಷತ್ರಿಯನು ಸಂಗ್ರಾಮದಲ್ಲಿ ಕ್ಷತ್ರಬಂಧುವಿನ ಶಸ್ತ್ರದಿಂದ ನಿಧನಹೊಂದುವುದು ಅವಶ್ಯ ಕರ್ತವ್ಯವೂ ಆಗಿದೆ.
15016007a ತೈರಿಯಂ ಪುರುಷವ್ಯಾಘ್ರೈರ್ವಿದ್ಯಾಬಾಹುಬಲಾನ್ವಿತೈಃ|
15016007c ಪೃಥಿವೀ ನಿಹತಾ ಸರ್ವಾ ಸಹಯಾ ಸರಥದ್ವಿಪಾ||
ವಿದ್ಯೆ ಮತ್ತು ಬಾಹುಬಲಗಳಿಂದ ಕೂಡಿದ್ದ ಈ ಪುರುಷವ್ಯಾಘ್ರರು ಕುದುರೆ-ರಥ-ಆನೆಗಳ ಸಹಿತ ಭೂಮಿಯನ್ನೇ ನಾಶಪಡಿಸಿದರು.
15016008a ನ ಸ ರಾಜಾಪರಾಧ್ನೋತಿ ಪುತ್ರಸ್ತವ ಮಹಾಮನಾಃ|
15016008c ನ ಭವಾನ್ನ ಚ ತೇ ಭೃತ್ಯಾ ನ ಕರ್ಣೋ ನ ಚ ಸೌಬಲಃ||
ಇದಕ್ಕೆ ನಿನ್ನ ಮಹಾಮನಸ್ವಿ ಮಗ ರಾಜನಾಗಲೀ, ನೀನಾಗಲೀ, ನಿನ್ನ ಅನುಯಾಯಿಗಳಾಗಲೀ, ಕರ್ಣ-ಸೌಬಲರಾಗಲೀ ಕಾರಣರಲ್ಲ.
15016009a ಯದ್ವಿನಷ್ಟಾಃ ಕುರುಶ್ರೇಷ್ಠಾ ರಾಜಾನಶ್ಚ ಸಹಸ್ರಶಃ|
15016009c ಸರ್ವಂ ದೈವಕೃತಂ ತದ್ವೈ ಕೋಽತ್ರ ಕಿಂ ವಕ್ತುಮರ್ಹತಿ||
ಕುರುಶ್ರೇಷ್ಠ! ಸಹಸ್ರಾರು ರಾಜರ ಈ ನಾಶವೆಲ್ಲವೂ ದೈವಕೃತವಾದುದೇ. ಈ ವಿಷಯದಲ್ಲಿ ಯಾರಾದರೂ ಬೇರೆ ಏನನ್ನು ತಾನೇ ಹೇಳಬಹುದು?
15016010a ಗುರುರ್ಮತೋ ಭವಾನಸ್ಯ ಕೃತ್ಸ್ನಸ್ಯ ಜಗತಃ ಪ್ರಭುಃ|
15016010c ಧರ್ಮಾತ್ಮಾನಮತಸ್ತುಭ್ಯಮನುಜಾನೀಮಹೇ ಸುತಮ್||
ನೀನು ನಮ್ಮ ಗುರುವಾಗಿರುವೆ. ಇಡೀ ಜಗತ್ತಿಗೆ ಪ್ರಭುವಾಗಿರುವೆ. ಧರ್ಮಾತ್ಮನಾದ ನಿನ್ನ ಮಗನ ಕುರಿತು ಈ ಮಾತುಗಳನ್ನು ಹೇಳುತ್ತೇವೆ:
15016011a ಲಭತಾಂ ವೀರಲೋಕಾನ್ಸ ಸಸಹಾಯೋ ನರಾಧಿಪಃ|
15016011c ದ್ವಿಜಾಗ್ರ್ಯೈಃ ಸಮನುಜ್ಞಾತಸ್ತ್ರಿದಿವೇ ಮೋದತಾಂ ಸುಖೀ||
ದ್ವಿಜಾಗ್ರರ ಆಶೀರ್ವಾದ ಬಲದಿಂದ ನರಾಧಿಪ ದುರ್ಯೋಧನನು ತನ್ನ ಸಹಾಯಕರೊಂದಿಗೆ ವೀರಲೋಕಗಳನ್ನು ಪಡೆದು ತ್ರಿದಿವದಲ್ಲಿ ಸುಖಿಯಾಗಿ ಮೋದಿಸಲಿ!
15016012a ಪ್ರಾಪ್ಸ್ಯತೇ ಚ ಭವಾನ್ಪುಣ್ಯಂ ಧರ್ಮೇ ಚ ಪರಮಾಂ ಸ್ಥಿತಿಮ್|
15016012c ವೇದ ಪುಣ್ಯಂ ಚ ಕಾರ್ತ್ಸ್ನ್ಯೇನ ಸಮ್ಯಗ್ಭರತಸತ್ತಮ||
ಭರತಸತ್ತಮ! ನೀನೂ ಕೂಡ ಪುಣ್ಯ ಮತ್ತು ಧರ್ಮದ ಪರಮ ಸ್ಥಿತಿಯನ್ನು ಪಡೆಯುತ್ತೀಯೆ. ವೇದಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಸಕಲ ಪುಣ್ಯಗಳನ್ನೂ ಪಡೆಯುವೆ.
15016013a ದೃಷ್ಟಾಪದಾನಾಶ್ಚಾಸ್ಮಾಭಿಃ ಪಾಂಡವಾಃ ಪುರುಷರ್ಷಭಾಃ|
15016013c ಸಮರ್ಥಾಸ್ತ್ರಿದಿವಸ್ಯಾಪಿ ಪಾಲನೇ ಕಿಂ ಪುನಃ ಕ್ಷಿತೇಃ||
ಪುರುಷರ್ಷಭ ಪಾಂಡವರು ಸ್ವರ್ಗವನ್ನೇ ಆಳಲು ಸಮರ್ಥರಾಗಿರುವಾಗ ನಮ್ಮ ಪಾಲನೆಯ ವಿಷಯವಾಗಿ ಇವರಿಗೆ ಹೇಳುವುದೇನಿದೆ?
15016014a ಅನುವತ್ಸ್ಯಂತಿ ಚಾಪೀಮಾಃ ಸಮೇಷು ವಿಷಮೇಷು ಚ|
15016014c ಪ್ರಜಾಃ ಕುರುಕುಲಶ್ರೇಷ್ಠ ಪಾಂಡವಾನ್ಶೀಲಭೂಷಣಾನ್||
ಕುರುಕುಲಶ್ರೇಷ್ಠ! ಶೀಲಭೂಷಣ ಪಾಂಡವರನ್ನು ಪ್ರಜೆಗಳು ಸುಖ-ಕಷ್ಟಗಳೆರಡರಲ್ಲೂ ಅನುಸರಿಸಿಕೊಂಡು ಹೋಗುತ್ತಾರೆ.
15016015a ಬ್ರಹ್ಮದೇಯಾಗ್ರಹಾರಾಂಶ್ಚ ಪರಿಹಾರಾಂಶ್ಚ ಪಾರ್ಥಿವ|
15016015c ಪೂರ್ವರಾಜಾತಿಸರ್ಗಾಂಶ್ಚ ಪಾಲಯತ್ಯೇವ ಪಾಂಡವಃ||
ಪಾರ್ಥಿವ! ಪಾಂಡವನು ಹಿಂದಿನ ರಾಜರು ಬ್ರಾಹ್ಮಣರಿಗೆ ಕೊಟ್ಟಿರುವ ಅಗ್ರಹಾರಗಳನ್ನೂ, ಪರಿಹಾರಗಳನ್ನೂ ಪಾಲಿಸಿಕೊಂಡೇ ಬಂದಿದ್ದಾನೆ.
15016016a ದೀರ್ಘದರ್ಶೀ ಕೃತಪ್ರಜ್ಞಃ ಸದಾ ವೈಶ್ರವಣೋ ಯಥಾ|
15016016c ಅಕ್ಷುದ್ರಸಚಿವಶ್ಚಾಯಂ ಕುಂತೀಪುತ್ರೋ ಮಹಾಮನಾಃ||
ಮಹಾಮನಸ್ವೀ ಕುಂತೀಪುತ್ರನು ವೈಶ್ರವಣನಂತೆ ಸದಾ ದೀರ್ಘದರ್ಶಿಯೂ ಕೃತಪ್ರಜ್ಞನೂ, ಮೃದುಸ್ವಭಾವದವನೂ ಆಗಿದ್ದಾನೆ. ಅವನ ಸಚಿವರೂ ಕೂಡ ಯೋಗ್ಯರಾಗಿದ್ದಾರೆ.
15016017a ಅಪ್ಯಮಿತ್ರೇ ದಯಾವಾಂಶ್ಚ ಶುಚಿಶ್ಚ ಭರತರ್ಷಭ|
15016017c ಋಜು ಪಶ್ಯತಿ ಮೇಧಾವೀ ಪುತ್ರವತ್ಪಾತಿ ನಃ ಸದಾ||
ಭರತರ್ಷಭ! ಇವನು ಶತ್ರುಗಳ ಕುರಿತೂ ದಯಾವಂತನಾಗಿದ್ದಾನೆ. ಶುಚಿಯಾಗಿದ್ದಾನೆ. ಎಲ್ಲರನ್ನೂ ಸರಳತೆಯಿಂದ ಕಾಣುತ್ತಾನೆ. ಈ ಮೇಧಾವಿಯು ಸದಾ ನಮ್ಮನ್ನು ಮಕ್ಕಳಂತೆಯೇ ಪಾಲಿಸುತ್ತಾನೆ.
15016018a ವಿಪ್ರಿಯಂ ಚ ಜನಸ್ಯಾಸ್ಯ ಸಂಸರ್ಗಾದ್ಧರ್ಮಜಸ್ಯ ವೈ|
15016018c ನ ಕರಿಷ್ಯಂತಿ ರಾಜರ್ಷೇ ತಥಾ ಭೀಮಾರ್ಜುನಾದಯಃ||
ರಾಜರ್ಷೇ! ಧರ್ಮಜನ ಸಂಸರ್ಗದಿಂದಾಗಿ ಭೀಮಾರ್ಜುನರೇ ಮೊದಲಾದ ಯಾರೂ ಜನರಿಗೆ ಅಪ್ರಿಯವಾದುದನ್ನು ಮಾಡುವುದಿಲ್ಲ.
15016019a ಮಂದಾ ಮೃದುಷು ಕೌರವ್ಯಾಸ್ತೀಕ್ಷ್ಣೇಷ್ವಾಶೀವಿಷೋಪಮಾಃ|
15016019c ವೀರ್ಯವಂತೋ ಮಹಾತ್ಮಾನಃ ಪೌರಾಣಾಂ ಚ ಹಿತೇ ರತಾಃ||
ಈ ಐವರು ಕೌರವರೂ ಮೃದುಸ್ವಭಾವದವರೊಂದಿಗೆ ಮೃದುವಾಗಿಯೂ ದ್ವೇಷಿಗಳಿಗೆ ವಿಷಸರ್ಪಗಳಂತೆಯೂ ವ್ಯವಹರಿಸುತ್ತಾರೆ. ಈ ವೀರ್ಯವಂತ ಮಹಾತ್ಮರು ಪ್ರಜೆಗಳ ಹಿತದಲ್ಲಿಯೇ ನಿರತರಾಗಿದ್ದಾರೆ.
15016020a ನ ಕುಂತೀ ನ ಚ ಪಾಂಚಾಲೀ ನ ಚೋಲೂಪೀ ನ ಸಾತ್ವತೀ|
15016020c ಅಸ್ಮಿನ್ಜನೇ ಕರಿಷ್ಯಂತಿ ಪ್ರತಿಕೂಲಾನಿ ಕರ್ಹಿ ಚಿತ್||
ಕುಂತಿಯಾಗಲೀ, ಪಾಂಚಾಲಿಯಾಗಲೀ, ಉಲೂಪಿಯಾಗಲೀ, ಸಾತ್ವತೀ ಸುಭದ್ರೆಯಾಗಲೀ ಈ ಜನರೊಂದಿಗೆ ಎಂದೂ ಪ್ರತಿಕೂಲವಾಗಿ ನಡೆದುಕೊಳ್ಳುವವರಲ್ಲ.
15016021a ಭವತ್ಕೃತಮಿಮಂ ಸ್ನೇಹಂ ಯುಧಿಷ್ಠಿರವಿವರ್ಧಿತಮ್|
15016021c ನ ಪೃಷ್ಠತಃ ಕರಿಷ್ಯಂತಿ ಪೌರಜಾನಪದಾ ಜನಾಃ||
ನೀನು ಮಾಡಿಟ್ಟ ಈ ಸ್ನೇಹವನ್ನು ಯುಧಿಷ್ಠಿರನು ಬೆಳೆಸಿದ್ದಾನೆ. ನಗರ-ಗ್ರಾಮೀಣ ಪ್ರದೇಶದ ಜನರು ಇದನ್ನು ಎಂದೂ ಅಲ್ಲಗಳೆಯುವುದಿಲ್ಲ.
15016022a ಅಧರ್ಮಿಷ್ಠಾನಪಿ ಸತಃ ಕುಂತೀಪುತ್ರಾ ಮಹಾರಥಾಃ|
15016022c ಮಾನವಾನ್ಪಾಲಯಿಷ್ಯಂತಿ ಭೂತ್ವಾ ಧರ್ಮಪರಾಯಣಾಃ||
ಮಹಾರಥ ಕುಂತೀಪುತ್ರರು ಧರ್ಮಪರಾಯಣರಾಗಿದ್ದುಕೊಂಡು ಅಧರ್ಮಿಷ್ಠ ಜನರನ್ನೂ ಕೂಡ ಚೆನ್ನಾಗಿ ಪಾಲಿಸುತ್ತಾರೆ.
15016023a ಸ ರಾಜನ್ಮಾನಸಂ ದುಃಖಮಪನೀಯ ಯುಧಿಷ್ಠಿರಾತ್|
15016023c ಕುರು ಕಾರ್ಯಾಣಿ ಧರ್ಮ್ಯಾಣಿ ನಮಸ್ತೇ ಭರತರ್ಷಭ||
ರಾಜನ್! ಭರತರ್ಷಭ! ಯುಧಿಷ್ಠಿರನ ವಿಷಯದಲ್ಲಿ ನಿನ್ನ ಈ ಮಾನಸಿಕ ದುಃಖವನ್ನು ಕಳೆದುಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡು. ನಿನಗೆ ನಮಸ್ಕಾರವು!””
15016024 ವೈಶಂಪಾಯನ ಉವಾಚ|
15016024a ತಸ್ಯ ತದ್ವಚನಂ ಧರ್ಮ್ಯಮನುಬಂಧಗುಣೋತ್ತರಮ್|
15016024c ಸಾಧು ಸಾಧ್ವಿತಿ ಸರ್ವಃ ಸ ಜನಃ ಪ್ರತಿಗೃಹೀತವಾನ್||
ವೈಶಂಪಾಯನನು ಹೇಳಿದನು: “ಅವನ ಆ ಧಾರ್ಮಿಕ ಗುಣಸಂಪನ್ನ ಮಾತನ್ನು ಕೇಳಿ ಎಲ್ಲ ಜನರೂ “ಸಾಧು! ಸಾಧು!” ಎಂದು ಹೇಳಿ ಅನುಮೋದಿಸಿದರು.
15016025a ಧೃತರಾಷ್ಟ್ರಶ್ಚ ತದ್ವಾಕ್ಯಮಭಿಪೂಜ್ಯ ಪುನಃ ಪುನಃ|
15016025c ವಿಸರ್ಜಯಾಮಾಸ ತದಾ ಸರ್ವಾಸ್ತು ಪ್ರಕೃತೀಃ ಶನೈಃ||
ಧೃತರಾಷ್ಟ್ರನೂ ಕೂಡ ಆ ಮಾತನ್ನು ಪುನಃ ಪುನಃ ಗೌರವಿಸಿ, ಎಲ್ಲ ಪ್ರಜಾಜನರನ್ನೂ ಮೆಲ್ಲನೇ ಬೀಳ್ಕೊಟ್ಟನು.
15016026a ಸ ತೈಃ ಸಂಪೂಜಿತೋ ರಾಜಾ ಶಿವೇನಾವೇಕ್ಷಿತಸ್ತದಾ|
15016026c ಪ್ರಾಂಜಲಿಃ ಪೂಜಯಾಮಾಸ ತಂ ಜನಂ ಭರತರ್ಷಭ||
ಆ ಸಮಯದಲ್ಲಿ ರಾಜನನ್ನು ಅವರು ಪೂಜಿಸಿದರು. ಮಂಗಳ ದೃಷ್ಟಿಯಿಂದ ನೋಡಿದರು. ಭರತರ್ಷಭ! ಅವನೂ ಕೂಡ ಕೈಮುಗಿದು ಆ ಜನರನ್ನು ಗೌರವಿಸಿದನು.
15016027a ತತೋ ವಿವೇಶ ಭುವನಂ ಗಾಂಧಾರ್ಯಾ ಸಹಿತೋ ನೃಪಃ|
15016027c ವ್ಯುಷ್ಟಾಯಾಂ ಚೈವ ಶರ್ವರ್ಯಾಂ ಯಚ್ಚಕಾರ ನಿಬೋಧ ತತ್||
ಅನಂತರ ನೃಪನು ಗಾಂಧಾರಿಯ ಸಹಿತ ಭವನವನ್ನು ಪ್ರವೇಶಿಸಿದನು. ರಾತ್ರಿ ಕಳೆದೊಡನೆಯೇ ಅವನು ಏನು ಮಾಡಿದನೆಂದು ಹೇಳುತ್ತೇನೆ. ಕೇಳು!”
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಪ್ರಕೃತಿಸಾಂತ್ವನೇ ಷೋಡಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಪ್ರಕೃತಿಸಾಂತ್ವನ ಎನ್ನುವ ಹದಿನಾರನೇ ಅಧ್ಯಾಯವು.