ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೧೨
ಯುಧಿಷ್ಠಿರನಿಗೆ ಧೃತರಾಷ್ಟ್ರನ ಉಪದೇಶ (೧-೨೩).
15012001 ಧೃತರಾಷ್ಟ್ರ ಉವಾಚ|
15012001a ಸಂಧಿವಿಗ್ರಹಮಪ್ಯತ್ರ ಪಶ್ಯೇಥಾ ರಾಜಸತ್ತಮ|
15012001c ದ್ವಿಯೋನಿಂ ತ್ರಿವಿಧೋಪಾಯಂ ಬಹುಕಲ್ಪಂ ಯುಧಿಷ್ಠಿರ||
ಧೃತರಾಷ್ಟ್ರನು ಹೇಳಿದನು: “ರಾಜಸತ್ತಮ! ಯುಧಿಷ್ಠಿರ! ಸಂಧಿ ಮತ್ತು ಯುದ್ಧಗಳ ವಿಷಯಗಳಲ್ಲಿ ಎರಡು ಕಾರಣಗಳನ್ನೂ, ಮೂರು ವಿಧದ ಉಪಾಯಗಳನ್ನೂ, ಅನೇಕ ಪ್ರಕಾರಗಳನ್ನೂ ತಿಳಿದುಕೊಂಡಿರಬೇಕು.
15012002a ರಾಜೇಂದ್ರ ಪರ್ಯುಪಾಸೀಥಾಶ್ಚಿತ್ತ್ವಾ ದ್ವೈವಿಧ್ಯಮಾತ್ಮನಃ|
15012002c ತುಷ್ಟಪುಷ್ಟಬಲಃ ಶತ್ರುರಾತ್ಮವಾನಿತಿ ಚ ಸ್ಮರೇತ್||
ರಾಜೇಂದ್ರ! ನಿನ್ನದೇ ಬಲಾಬಲಗಳನ್ನು ತಿಳಿದುಕೊಂಡು ಶತ್ರುವು ನಿನಗಿಂತಲೂ ಬಲಿಷ್ಟನಾಗಿದ್ದರೆ ಗೌರವಿಸಬೇಕು. ತುಷ್ಟಪುಷ್ಟ ಸೇನೆಯುಳ್ಳವನು ಬಲಶಾಲಿ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.
15012003a ಪರ್ಯುಪಾಸನಕಾಲೇ ತು ವಿಪರೀತಂ ವಿಧೀಯತೇ|
15012003c ಆಮರ್ದಕಾಲೇ ರಾಜೇಂದ್ರ ವ್ಯಪಸರ್ಪಸ್ತತೋ ವರಃ||
ರಾಜೇಂದ್ರ! ಸಂಧಿಯ ಕಾಲದಲ್ಲಿ ವಿಪರೀತ ನಿಯಮಗಳನ್ನು ವಿಧಿಸುತ್ತಾರೆ. ಅನಿವಾರ್ಯವಾಗಿ ಬಲಿಷ್ಟನೊಡನೆ ಯುದ್ಧಮಾಡಬೇಕಾಗಿ ಬಂದಾಗ ಪಲಾಯನಮಾಡುವುದೇ ಸೂಕ್ತವಾಗುತ್ತದೆ.
15012004a ವ್ಯಸನಂ ಭೇದನಂ ಚೈವ ಶತ್ರೂಣಾಂ ಕಾರಯೇತ್ತತಃ|
15012004c ಕರ್ಶನಂ ಭೀಷಣಂ ಚೈವ ಯುದ್ಧೇ ಚಾಪಿ ಬಹುಕ್ಷಯಮ್||
ಆಗ ಶತ್ರುಗಳಿಗೆ ವ್ಯಸನಗಳನ್ನುಂಟುಮಾಡಬೇಕು ಮತ್ತು ಅವರಲ್ಲಿ ಬಿರುಕನ್ನುಂಟುಮಾಡಬೇಕು. ಕರ್ಶನ, ಭೀಷಣ ಮತ್ತು ಬಹುವಿನಾಶೀ ಯುದ್ಧ – ಇವುಗಳನ್ನೂ ಬಳಸಬೇಕು.
15012005a ಪ್ರಯಾಸ್ಯಮಾನೋ ನೃಪತಿಸ್ತ್ರಿವಿಧಂ ಪರಿಚಿಂತಯೇತ್|
15012005c ಆತ್ಮನಶ್ಚೈವ ಶತ್ರೋಶ್ಚ ಶಕ್ತಿಂ ಶಾಸ್ತ್ರವಿಶಾರದಃ||
ಶಾಸ್ತ್ರವಿಶಾರದ ನೃಪತಿಯು ಯುದ್ಧಕ್ಕೆ ಹೊರಡುವ ಮೊದಲು ತನ್ನ ಮತ್ತು ಶತ್ರುವಿನ ಮೂರು ಶಕ್ತಿಗಳ ಕುರಿತು ಯೋಚಿಸಬೇಕು.
15012006a ಉತ್ಸಾಹಪ್ರಭುಶಕ್ತಿಭ್ಯಾಂ ಮಂತ್ರಶಕ್ತ್ಯಾ ಚ ಭಾರತ|
15012006c ಉಪಪನ್ನೋ ನರೋ ಯಾಯಾದ್ವಿಪರೀತಮತೋಽನ್ಯಥಾ||
ಭಾರತ! ಉತ್ಸಾಹಶಕ್ತಿ, ಪ್ರಭುಶಕ್ತಿ ಮತ್ತು ಮಂತ್ರಶಕ್ತಿ ಇವುಗಳಿಂದ ಸಂಪನ್ನನಾದ ರಾಜನು ಶತ್ರುವಿನ ಮೇಲೆ ಆಕ್ರಮಣಿಸಬಹುದು. ಈ ಮೂರೂ ಶಕ್ತಿಗಳು ಇಲ್ಲದಿದ್ದರೆ ಆಕ್ರಮಿಸಲು ಹೋಗಬಾರದು.
15012007a ಆದದೀತ ಬಲಂ ರಾಜಾ ಮೌಲಂ ಮಿತ್ರಬಲಂ ತಥಾ|
15012007c ಅಟವೀಬಲಂ ಭೃತಂ ಚೈವ ತಥಾ ಶ್ರೇಣೀಬಲಂ ಚ ಯತ್||
ವಿಜಯವನ್ನು ಅಪೇಕ್ಷಿಸುವ ರಾಜನು ಸೈನ್ಯಬಲ, ಧನಬಲ, ಮಿತ್ರಬಲ, ಅರಣ್ಯದ ಬಲ, ಸೇವಕರ ಬಲ ಮತ್ತು ಶಿಲ್ಪಿಗಳ ಬಲ ಇವುಗಳನ್ನು ಸಂಗ್ರಹಿಸಬೇಕು.
15012008a ತತ್ರ ಮಿತ್ರಬಲಂ ರಾಜನ್ಮೌಲೇನ ನ ವಿಶಿಷ್ಯತೇ|
15012008c ಶ್ರೇಣೀಬಲಂ ಭೃತಂ ಚೈವ ತುಲ್ಯ ಏವೇತಿ ಮೇ ಮತಿಃ||
ರಾಜನ್! ಇವುಗಳಲ್ಲಿ ಮಿತ್ರಬಲ ಮತ್ತು ಧನಬಲಗಳು ವಿಶಿಷ್ಟವಾದವುಗಳು. ಶಿಲ್ಪಿಬಲ ಮತ್ತು ವೇತನವನ್ನು ಕೊಟ್ಟು ಇಟ್ಟುಕೊಂಡಿರುವ ಸೇನೆಗಳು ಸಮಾನ ಎಂದು ನನ್ನ ಅಭಿಪ್ರಾಯ.
15012009a ತಥಾ ಚಾರಬಲಂ ಚೈವ ಪರಸ್ಪರಸಮಂ ನೃಪ|
15012009c ವಿಜ್ಞೇಯಂ ಬಲಕಾಲೇಷು ರಾಜ್ಞಾ ಕಾಲ ಉಪಸ್ಥಿತೇ||
ನೃಪ! ಚಾರಬಲ ಮತ್ತು ಭೃತ್ಯಬಲಗಳು ಪರಸ್ಪರ ಸಮನಾಗಿಯೇ ಇರುತ್ತವೆ. ಅನೇಕ ವರ್ಷಗಳಿಗೊಮ್ಮೆ ಯುದ್ಧಕಾಲವು ಸನ್ನಿಹಿತವಾಗುವುದರಿಂದ ರಾಜನು ಈ ಎಲ್ಲ ವಿಷಯಗಳನ್ನೂ ತಿಳಿದುಕೊಂಡಿರಬೇಕು.
15012010a ಆಪದಶ್ಚಾಪಿ ಬೋದ್ಧವ್ಯಾ ಬಹುರೂಪಾ ನರಾಧಿಪ|
15012010c ಭವಂತಿ ರಾಜ್ಞಾಂ ಕೌರವ್ಯ ಯಾಸ್ತಾಃ ಪೃಥಗತಃ ಶೃಣು||
ನರಾಧಿಪ! ಕೌರವ್ಯ! ಬಹುರೂಪೀ ಆಪತ್ತುಗಳನ್ನು ತಿಳಿದುಕೊಂಡಿರಬೇಕು. ಅವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹೇಳುವೆನು ಕೇಳು.
15012011a ವಿಕಲ್ಪಾ ಬಹವೋ ರಾಜನ್ನಾಪದಾಂ ಪಾಂಡುನಂದನ|
15012011c ಸಾಮಾದಿಭಿರುಪನ್ಯಸ್ಯ ಶಮಯೇತ್ತಾನ್ನೃಪಃ ಸದಾ||
ರಾಜನ್! ಪಾಂಡುನಂದನ! ಆಪತ್ತಿನ ವಿಕಲ್ಪಗಳು ಬಹಳ. ನೃಪನು ಸಾಮ-ದಾನಾದಿ ಉಪಾಯಗಳಿಂದ ಅವುಗಳನ್ನು ಸದಾ ಉಪಶಮನಗೊಳಿಸುತ್ತಿರಬೇಕು.
15012012a ಯಾತ್ರಾಂ ಯಾಯಾದ್ಬಲೈರ್ಯುಕ್ತೋ ರಾಜಾ ಷಡ್ಭಿಃ ಪರಂತಪ|
15012012c ಸಂಯುಕ್ತೋ ದೇಶಕಾಲಾಭ್ಯಾಂ ಬಲೈರಾತ್ಮಗುಣೈಸ್ತಥಾ||
ಪರಂತಪ! ದೇಶ-ಕಾಲಗಳ ಅನುಕೂಲತೆಗಳನ್ನು ವಿವೇಚಿಸಿ ಆರು ರಾಜಬಲಗಳಿಂದ ಕೂಡಿರುವ, ಆತ್ಮಗುಣಗಳ ಬಲದಿಂದಲೂ ಇರುವ ರಾಜನು ವಿಜಯಯಾತ್ರೆಯನ್ನು ಕೈಗೊಳ್ಳಬಹುದು.
15012013a ತುಷ್ಟಪುಷ್ಟಬಲೋ ಯಾಯಾದ್ರಾಜಾ ವೃದ್ಧ್ಯುದಯೇ ರತಃ|
15012013c ಆಹೂತಶ್ಚಾಪ್ಯಥೋ ಯಾಯಾದನೃತಾವಪಿ ಪಾರ್ಥಿವಃ||
ಹೃಷ್ಟ-ಪುಷ್ಟ ಸೇನೆಯನ್ನು ಪಡೆದಿರುವ ರಾಜನು ದುರ್ಬಲನಾಗಿರದಿದ್ದರೆ ಯುದ್ಧಕ್ಕೆ ಯೋಗ್ಯವಲ್ಲದ ಋತುವಿನಲ್ಲಿಯೂ ಶತ್ರುವಿನೊಡನೆ ಯುದ್ಧಮಾಡಬಲ್ಲನು.
15012014a ಸ್ಥೂಣಾಶ್ಮಾನಂ ವಾಜಿರಥಪ್ರಧಾನಾಂ
ಧ್ವಜದ್ರುಮೈಃ ಸಂವೃತಕೂಲರೋಧಸಮ್|
15012014c ಪದಾತಿನಾಗೈರ್ಬಹುಕರ್ದಮಾಂ ನದೀಂ
ಸಪತ್ನನಾಶೇ ನೃಪತಿಃ ಪ್ರಯಾಯಾತ್||
ರಾಜನಾದವನು ಶತ್ರುವಿನ ವಿನಾಶಕ್ಕಾಗಿ ಬತ್ತಳಿಕೆಗಳೇ ಬಂಡೆಗಳಂತಿರುವ, ಕುದುರೆ-ರಥಗಳೇ ಪ್ರವಾಹರೂಪದಲ್ಲಿರುವ, ಧ್ವಜಗಳೆಂಬ ವೃಕ್ಷಗಳಿಂದ ಕೂಡಿದ ತೀರಪ್ರದೇಶವಾದ, ಪದಾತಿ-ಗಜಸೇನೆಗಳೇ ಕೆಸರಿನ ರೂಪದಲ್ಲಿರುವ ನದಿಯನ್ನು ಹರಿಯ ಬಿಡಬೇಕು.
15012015a ಅಥೋಪಪತ್ತ್ಯಾ ಶಕಟಂ ಪದ್ಮಂ ವಜ್ರಂ ಚ ಭಾರತ|
15012015c ಉಶನಾ ವೇದ ಯಚ್ಚಾಸ್ತ್ರಂ ತತ್ರೈತದ್ವಿಹಿತಂ ವಿಭೋ||
ಭಾರತ! ವಿಭೋ! ಆಗ ಯುಕ್ತಿಯನ್ನುಪಯೋಗಿಸಿ ಸೇನೆಯನ್ನು ಶಕಟ, ಪದ್ಮ ಅಥವಾ ವಜ್ರ ವ್ಯೂಹಗಳಲ್ಲಿ ರಚಿಸಬೇಕು. ಶುಕ್ರನ ವೇದ ಶಾಸ್ತ್ರದಲ್ಲಿ ಇದರ ಕುರಿತು ಹೇಳಲ್ಪಟ್ಟಿದೆ.
15012016a ಸಾದಯಿತ್ವಾ ಪರಬಲಂ ಕೃತ್ವಾ ಚ ಬಲಹರ್ಷಣಮ್|
15012016c ಸ್ವಭೂಮೌ ಯೋಜಯೇದ್ಯುದ್ಧಂ ಪರಭೂಮೌ ತಥೈವ ಚ||
ಗುಪ್ತಚಾರರ ಮೂಲಕ ಶತ್ರುಸೈನ್ಯದ ಬಲಾಬಲಗಳನ್ನು ತಿಳಿದುಕೊಂಡು, ತನ್ನ ಸೈನ್ಯದ ಬಲವನ್ನೂ ಪರೀಕ್ಷಿಸಿಕೊಂಡು, ತನ್ನ ಭೂಮಿಯಲ್ಲಾಗಲೀ ಶತ್ರುವಿನ ಭೂಮಿಯಲ್ಲಾಗಲೀ ಯುದ್ಧವನ್ನು ಆರಂಭಿಸಬೇಕು. ರಾಜನು ಪಾರಿತೋಷಕಗಳ ಮೂಲಕ ಸೈನಿಕರನ್ನು ಸಂತುಷ್ಟಿಗೊಳಿಸಬೇಕು. ಸೈನ್ಯಕ್ಕೆ ಬಲಿಷ್ಠರಾದವರನ್ನು ಸೇರಿಸಿಕೊಳ್ಳಬೇಕು.
15012017a ಲಬ್ಧಂ ಪ್ರಶಮಯೇದ್ರಾಜಾ ನಿಕ್ಷಿಪೇದ್ಧನಿನೋ ನರಾನ್|
15012017c ಜ್ಞಾತ್ವಾ ಸ್ವವಿಷಯಂ ತಂ ಚ ಸಾಮಾದಿಭಿರುಪಕ್ರಮೇತ್||
ತನ್ನ ಬಲಾಬಲಗಳನ್ನು ಚೆನ್ನಾಗಿ ತಿಳಿದುಕೊಂಡ ನಂತರ ಶತ್ರುವಿನೊಡನೆ ಸಾಮ-ದಾನಾದಿ ಉಪಾಯಗಳಿಂದ ಸಂಧಿಯನ್ನಾದರೂ ಮಾಡಿಕೊಳ್ಳಬಹುದು ಅಥವಾ ಯುದ್ಧವನ್ನಾದರೂ ಮಾಡಬಹುದು.
15012018a ಸರ್ವಥೈವ ಮಹಾರಾಜ ಶರೀರಂ ಧಾರಯೇದಿಹ|
15012018c ಪ್ರೇತ್ಯೇಹ ಚೈವ ಕರ್ತವ್ಯಮಾತ್ಮನಿಃಶ್ರೇಯಸಂ ಪರಮ್||
ಮಹಾರಾಜ! ಸರ್ವಥಾ ಈ ಶರೀರವನ್ನು ರಕ್ಷಿಸಿಕೊಳ್ಳಬೇಕು. ಈ ಶರೀರದ ಮೂಲಕವೇ ಇಹಲೋಕ ಪರಲೋಕಗಳೆರಡರಲ್ಲಿಯೂ ತನಗೆ ಶ್ರೇಯಸ್ಸನ್ನು ಸಾಧಿಸಿಕೊಳ್ಳುವುದು ರಾಜನ ಕರ್ತವ್ಯವಾಗಿರುತ್ತದೆ.
15012019a ಏವಂ ಕುರ್ವನ್ಶುಭಾ ವಾಚೋ ಲೋಕೇಽಸ್ಮಿನ್ಶೃಣುತೇ ನೃಪಃ|
15012019c ಪ್ರೇತ್ಯ ಸ್ವರ್ಗಂ ತಥಾಪ್ನೋತಿ ಪ್ರಜಾ ಧರ್ಮೇಣ ಪಾಲಯನ್||
ನೃಪ! ಈ ಶುಭ ಮಾತುಗಳಂತೆ ಈ ಲೋಕದಲ್ಲಿ ಯಾರು ಪ್ರಜೆಗಳನ್ನು ಧರ್ಮದಿಂದ ಪಾಲಿಸುತ್ತಾರೋ ಅವರು ಮರಣಾನಂತರ ಸ್ವರ್ಗವನ್ನು ಪಡೆಯುತ್ತಾರೆ.
15012020a ಏವಂ ತ್ವಯಾ ಕುರುಶ್ರೇಷ್ಠ ವರ್ತಿತವ್ಯಂ ಪ್ರಜಾಹಿತಮ್|
15012020c ಉಭಯೋರ್ಲೋಕಯೋಸ್ತಾತ ಪ್ರಾಪ್ತಯೇ ನಿತ್ಯಮೇವ ಚ||
ಕುರುಶ್ರೇಷ್ಠ! ಮಗೂ! ಇಹ-ಪರಗಳಲ್ಲಿಯೂ ಸುಖವನ್ನು ಹೊಂದಲು ನೀನು ಹೀಗೆ ನಿತ್ಯವೂ ಪ್ರಜಾಹಿತದಲ್ಲಿಯೇ ವರ್ತಿಸಬೇಕು.
15012021a ಭೀಷ್ಮೇಣ ಪೂರ್ವಮುಕ್ತೋಽಸಿ ಕೃಷ್ಣೇನ ವಿದುರೇಣ ಚ|
15012021c ಮಯಾಪ್ಯವಶ್ಯಂ ವಕ್ತವ್ಯಂ ಪ್ರೀತ್ಯಾ ತೇ ನೃಪಸತ್ತಮ||
ನೃಪಸತ್ತಮ! ಭೀಷ್ಮ, ಕೃಷ್ಣ ಮತ್ತು ವಿದುರರು ನಿನಗೆ ಈ ಮೊದಲೇ ಹೇಳಿದ್ದಾರೆ. ನಿನ್ನ ಮೇಲಿನ ಪ್ರೀತಿಯಿಂದ ನಾನೂ ಕೆಲವು ವಿಷಯಗಳನ್ನು ಹೇಳುವುದು ಅವಶ್ಯವೆಂದು ಭಾವಿಸಿ ಹೇಳಿದ್ದೇನೆ.
15012022a ಏತತ್ಸರ್ವಂ ಯಥಾನ್ಯಾಯಂ ಕುರ್ವೀಥಾ ಭೂರಿದಕ್ಷಿಣ|
15012022c ಪ್ರಿಯಸ್ತಥಾ ಪ್ರಜಾನಾಂ ತ್ವಂ ಸ್ವರ್ಗೇ ಸುಖಮವಾಪ್ಸ್ಯಸಿ||
ಭೂರಿದಕ್ಷಿಣ! ಇವೆಲ್ಲವನ್ನೂ ಯಥಾನ್ಯಾಯವಾಗಿ ಮಾಡು. ಇದರಿಂದ ನೀನು ಪ್ರಜೆಗಳಿಗೂ ಪ್ರಿಯನಾಗುವೆ ಮತ್ತು ಸ್ವರ್ಗದ ಸುಖವನ್ನೂ ಪಡೆಯುವೆ.
15012023a ಅಶ್ವಮೇಧಸಹಸ್ರೇಣ ಯೋ ಯಜೇತ್ಪೃಥಿವೀಪತಿಃ|
15012023c ಪಾಲಯೇದ್ವಾಪಿ ಧರ್ಮೇಣ ಪ್ರಜಾಸ್ತುಲ್ಯಂ ಫಲಂ ಲಭೇತ್||
ಸಾವಿರ ಅಶ್ವಮೇಧವನ್ನು ಮಾಡುವ ರಾಜನಿಗೆ ಲಭಿಸುವ ಫಲವೂ ಧರ್ಮದಿಂದ ಪ್ರಜೆಗಳನ್ನು ರಕ್ಷಿಸುವವನಿಗೆ ಲಭಿಸುವ ಫಲವೂ ಒಂದೇ ಆಗಿರುತ್ತದೆ.”
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರೋಪದೇಶೇ ದ್ವಾದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರೋಪದೇಶ ಎನ್ನುವ ಹನ್ನೆರಡನೇ ಅಧ್ಯಾಯವು.