Ashramavasika Parva: Chapter 11

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೧೧

ಯುಧಿಷ್ಠಿರನಿಗೆ ಧೃತರಾಷ್ಟ್ರನ ಉಪದೇಶ (೧-೧೯).

15011001 ಧೃತರಾಷ್ಟ್ರ ಉವಾಚ|

15011001a ಮಂಡಲಾನಿ ಚ ಬುಧ್ಯೇಥಾಃ ಪರೇಷಾಮಾತ್ಮನಸ್ತಥಾ|

15011001c ಉದಾಸೀನಗುಣಾನಾಂ ಚ ಮಧ್ಯಮಾನಾಂ ತಥೈವ ಚ||

ಧೃತರಾಷ್ಟ್ರನು ಹೇಳಿದನು: “ನಿನ್ನ ವಿಷಯದಲ್ಲಿ ಮತ್ತು ನಿನ್ನ ಶತ್ರುಗಳ ವಿಷಯದಲ್ಲಿ ಉದಾಸೀನಗುಣವುಳ್ಳ ಮತ್ತು ಮಧ್ಯಸ್ಥರಾಗಿರುವ ರಾಜಮಂಡಲಗಳನ್ನು ಗುರುತಿಸಿಕೊಂಡಿರಬೇಕು.

15011002a ಚತುರ್ಣಾಂ ಶತ್ರುಜಾತಾನಾಂ ಸರ್ವೇಷಾಮಾತತಾಯಿನಾಮ್|

15011002c ಮಿತ್ರಂ ಚಾಮಿತ್ರಮಿತ್ರಂ ಚ ಬೋದ್ಧವ್ಯಂ ತೇಽರಿಕರ್ಶನ||

ಅರಿಕರ್ಶನ! ಶತ್ರುಗಳಿಂದ ಉಂಟಾಗುವ ನಾಲ್ಕು ಮತ್ತು ಆತತಾಯಿಗಳಿಂದ ಉಂಟಾಗುವ ಸರ್ವ ಅಪಾಯಗಳನ್ನೂ ತಿಳಿದುಕೊಂಡಿರಬೇಕು. ನಿನ್ನ ಮಿತ್ರನು ಯಾರು ಮತ್ತು ಶತ್ರುವಿನ ಮಿತ್ರರ್ಯಾರು ಎಂದು ತಿಳಿದುಕೊಂಡಿರಬೇಕು.

15011003a ತಥಾಮಾತ್ಯಾ ಜನಪದಾ ದುರ್ಗಾಣಿ ವಿಷಮಾಣಿ ಚ|

15011003c ಬಲಾನಿ ಚ ಕುರುಶ್ರೇಷ್ಠ ಭವಂತ್ಯೇಷಾಂ ಯಥೇಚ್ಚಕಮ್||

ಕುರುಶ್ರೇಷ್ಠ! ಅಮಾತ್ಯರು, ಜನಪದಗಳು, ದುರ್ಗ-ಕಣಿವೆಗಳು ಮತ್ತು ಸೇನೆಗಳ ಮೇಲೆ ಶತ್ರುಗಳ ದೃಷ್ಟಿಯು ಯಥೇಚ್ಛವಾಗಿರುತ್ತದೆ.

15011004a ತೇ ಚ ದ್ವಾದಶ ಕೌಂತೇಯ ರಾಜ್ಞಾಂ ವೈ ವಿವಿಧಾತ್ಮಕಾಃ|

15011004c ಮಂತ್ರಿಪ್ರಧಾನಾಶ್ಚ ಗುಣಾಃ ಷಷ್ಟಿರ್ದ್ವಾದಶ ಚ ಪ್ರಭೋ||

ಕೌಂತೇಯ! ಪ್ರಭೋ! ಈ ಹನ್ನೆರಡು ಮತ್ತು ಮಂತ್ರಿಪ್ರಧಾನರಾದ ಅರವತ್ತು ಗುಣಗಳು ಸೇರಿ ರಾಜನ ವಿವಿಧ ಆತ್ಮಕಗಳು.

15011005a ಏತನ್ಮಂಡಲಮಿತ್ಯಾಹುರಾಚಾರ್ಯಾ ನೀತಿಕೋವಿದಾಃ|

15011005c ಅತ್ರ ಷಾಡ್ಗುಣ್ಯಮಾಯತ್ತಂ ಯುಧಿಷ್ಠಿರ ನಿಬೋಧ ತತ್||

ಇವುಗಳನ್ನೇ ನೀತಿಕೋವಿದ ಆಚಾರ್ಯರು ಮಂಡಲವೆಂದು ಕರೆಯುತ್ತಾರೆ. ಯುಧಿಷ್ಠಿರ! ಅದಕ್ಕೆ ಸಂಬಂಧಿಸಿದ ಆರು ಗುಣಗಳ ಕುರಿತು ಕೇಳು.

15011006a ವೃದ್ಧಿಕ್ಷಯೌ ಚ ವಿಜ್ಞೇಯೌ ಸ್ಥಾನಂ ಚ ಕುರುನಂದನ|

15011006c ದ್ವಿಸಪ್ತತ್ಯಾ ಮಹಾಬಾಹೋ ತತಃ ಷಾಡ್ಗುಣ್ಯಚಾರಿಣಃ||

ಕುರುನಂದನ! ಮಹಾಬಾಹೋ! ತನ್ನ ಮತ್ತು ತನ್ನ ಶತ್ರು ಈ ಇಬ್ಬರ ವೃದ್ಧಿ-ಕ್ಷಯಗಳನ್ನೂ ಸ್ಥಾನವನ್ನೂ ಅರಿತುಕೊಂಡಿರಬೇಕು. ಅದು ಷಾಡ್ಗುಣ್ಯಚಾರಣೆ.

15011007a ಯದಾ ಸ್ವಪಕ್ಷೋ ಬಲವಾನ್ಪರಪಕ್ಷಸ್ತಥಾಬಲಃ|

15011007c ವಿಗೃಹ್ಯ ಶತ್ರೂನ್ಕೌಂತೇಯ ಯಾಯಾತ್ಕ್ಷಿತಿಪತಿಸ್ತದಾ|

15011007e ಯದಾ ಸ್ವಪಕ್ಷೋಽಬಲವಾಂಸ್ತದಾ ಸಂಧಿಂ ಸಮಾಶ್ರಯೇತ್||

ಕೌಂತೇಯ! ಯಾವಾಗ ಸ್ವಪಕ್ಷವು ಬಲವಾಗಿಯೂ ಶತ್ರುಪಕ್ಷವು ದುರ್ಬಲವಾಗಿಯೂ ಇವುದೋ ಆಗ ಶತ್ರುವಿನೊಡನೆ ಯುದ್ಧಮಾಡಿ ಕ್ಷಿತಿಪತಿಯೆನಿಸಿಕೊಳ್ಳಬೇಕು. ಸ್ವಪಕ್ಷವು ಅಬಲವಾಗಿರುವಾಗ ಸಂಧಿಯನ್ನು ಆಶ್ರಯಿಸಬೇಕು.

15011008a ದ್ರವ್ಯಾಣಾಂ ಸಂಚಯಶ್ಚೈವ ಕರ್ತವ್ಯಃ ಸ್ಯಾನ್ಮಹಾಂಸ್ತಥಾ|

15011008c ಯದಾ ಸಮರ್ಥೋ ಯಾನಾಯ ನಚಿರೇಣೈವ ಭಾರತ||

ಭಾರತ! ದ್ರವ್ಯಗಳನ್ನು ಕೂಡಿಸಿಕೊಳ್ಳುವುದು ಒಂದು ಮಹಾ ಕರ್ತವ್ಯ! ಯಾವಾಗ ಸಮರ್ಥನೋ ಆಗಲೇ ಸಮಯವ್ಯರ್ಥಮಾಡದೇ ಆಕ್ರಮಣ ಮಾಡಬೇಕು.

15011009a ತದಾ ಸರ್ವಂ ವಿಧೇಯಂ ಸ್ಯಾತ್ ಸ್ಥಾನಂ ಚ ನ ವಿಭಾಜಯೇತ್|

15011009c ಭೂಮಿರಲ್ಪಫಲಾ ದೇಯಾ ವಿಪರೀತಸ್ಯ ಭಾರತ||

15011010a ಹಿರಣ್ಯಂ ಕುಪ್ಯಭೂಯಿಷ್ಠಂ ಮಿತ್ರಂ ಕ್ಷೀಣಮಕೋಶವತ್|

15011010c ವಿಪರೀತಾನ್ನ ಗೃಹ್ಣೀಯಾತ್ಸ್ವಯಂ ಸಂಧಿವಿಶಾರದಃ||

ಆಗ ಎಲ್ಲರೂ ವಿಧೇಯರಾಗಿರುವಂತೆ ನೋಡಿಕೊಳ್ಳಬೇಕು. ಸೇನಾನಾಯಕರ ಸ್ಥಾನಗಳನ್ನು ವಿಭಾಗಿಸಬಾರದು. ಭಾರತ! ಒಂದುವೇಳೆ ಸೋತುಬಿಟ್ಟರೆ ಅಲ್ಪಫಲಗಳನ್ನು ಕೊಡುವ ಭೂಮಿಯನ್ನೂ, ಬೆರಕೆಯ ಚಿನ್ನವನ್ನೂ, ಮತ್ತು ಬಡವ ಮಿತ್ರನನ್ನೂ ಕೊಟ್ಟು ಸಂಧಿಮಾಡಿಕೊಳ್ಳಬೇಕು. ಸೋಲದೇ ತಾನಾಗಿಯೇ ಸಂಧಿಯನ್ನು ಮಾಡಿಕೊಳ್ಳಬಾರದು.

15011011a ಸಂಧ್ಯರ್ಥಂ ರಾಜಪುತ್ರಂ ಚ ಲಿಪ್ಸೇಥಾ ಭರತರ್ಷಭ|

15011011c ವಿಪರೀತಸ್ತು ತೇಽದೇಯಃ ಪುತ್ರ ಕಸ್ಯಾಂ ಚಿದಾಪದಿ|

15011011e ತಸ್ಯ ಪ್ರಮೋಕ್ಷೇ ಯತ್ನಂ ಚ ಕುರ್ಯಾಃ ಸೋಪಾಯಮಂತ್ರವಿತ್||

ಭರತರ್ಷಭ! ಒಂದುವೇಳೆ ಶತ್ರುವಿಗೇ ವಿಪರೀತವಾಗಿ ಸಂಧಿಯನ್ನು ಬಯಸಿದರೆ ರಾಜಪುತ್ರನನ್ನೇ ಒತ್ತೆಇಡುವಂತೆ ಕೇಳಬೇಕು. ಒಂದುವೇಳೆ ಒಪ್ಪಿಕೊಳ್ಳದೇ ಇದ್ದರೆ ಉಪಾಯಮಂತ್ರಗಳನ್ನು ತಿಳಿದವನು ಅವನನ್ನು ಸೆರೆಹಿಡಿಯಲು ಪ್ರಯತ್ನಿಸಬೇಕು.

15011012a ಪ್ರಕೃತೀನಾಂ ಚ ಕೌಂತೇಯ ರಾಜಾ ದೀನಾಂ ವಿಭಾವಯೇತ್|

15011012c ಕ್ರಮೇಣ ಯುಗಪದ್ದ್ವಂದ್ವಂ ವ್ಯಸನಾನಾಂ ಬಲಾಬಲಮ್||

ಕೌಂತೇಯ! ಆ ರಾಜನ ಪ್ರಕೃತಿ[1]ಗಳು ದುರ್ಬಲವಾಗಿವೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಅನಂತರ ಕ್ರಮೇಣವಾಗಿ ಅಥವಾ ಒಂದೇಸಮನೆ ಎಲ್ಲ ಕಾರ್ಯಗಳನ್ನೂ ಪ್ರಾರಂಭಿಸಬೇಕು.

15011013a ಪೀಡನಂ ಸ್ತಂಭನಂ ಚೈವ ಕೋಶಭಂಗಸ್ತಥೈವ ಚ|

15011013c ಕಾರ್ಯಂ ಯತ್ನೇನ ಶತ್ರೂಣಾಂ ಸ್ವರಾಷ್ಟ್ರಂ ರಕ್ಷತಾ ಸ್ವಯಮ್||

ಪೀಡನ, ಸ್ತಂಭನ, ಕೋಶಭಂಗ ಮೊದಲಾದ ಪ್ರಯತ್ನಗಳನ್ನು ಮಾಡಿ ಶತ್ರುಗಳ ನಾಶವನ್ನೂ ತನ್ನ ರಾಷ್ಟ್ರದ ರಕ್ಷಣೆಯನ್ನೂ ಸ್ವಯಂ ಮಾಡಿಕೊಳ್ಳಬೇಕು.

15011014a ನ ಚ ಹಿಂಸ್ಯೋಽಭ್ಯುಪಗತಃ ಸಾಮಂತೋ ವೃದ್ಧಿಮಿಚ್ಚತಾ|

15011014c ಕೌಂತೇಯ ತಂ ನ ಹಿಂಸೇತ ಯೋ ಮಹೀಂ ವಿಜಿಗೀಷತೇ||

ಕೌಂತೇಯ! ಆದರೆ ತನ್ನ ವೃದ್ಧಿಯನ್ನು ಬಯಸುವ ರಾಜನು ಶರಣಾಗತನಾಗಿ ಬಂದ ಸಾಮಂತರಾಜನನ್ನು ಯಾವುದೇ ಕಾರಣದಿಂದಲೂ ಹಿಂಸಿಸಬಾರದು. ವಿಶ್ವವನ್ನು ಜಯಿಸಲು ಬಯಸಿದ ರಾಜನು ಹಿಂಸಿಸಬಾರದು.

15011015a ಗಣಾನಾಂ ಭೇದನೇ ಯೋಗಂ ಗಚ್ಚೇಥಾಃ ಸಹ ಮಂತ್ರಿಭಿಃ|

15011015c ಸಾಧುಸಂಗ್ರಹಣಾಚ್ಚೈವ ಪಾಪನಿಗ್ರಹಣಾತ್ತಥಾ||

ಮಂತ್ರಿಗಳೊಡನೆ ಸಮಾಲೋಚಿಸಿ ಶತ್ರುಗಣಗಳಲ್ಲಿ ಒಡಕನ್ನು ಉಂಟುಮಾಡಲು ಉಪಾಯಮಾಡಬೇಕು. ಸತ್ಪುರುಷರನ್ನು ಸಂಗ್ರಹಿಸಿಕೊಳ್ಳುತ್ತಲೇ ಇರಬೇಕು. ಪಾಪಿಷ್ಟರನ್ನು ನಿಗ್ರಹಿಸುತ್ತಲೇ ಇರಬೇಕು.

15011016a ದುರ್ಬಲಾಶ್ಚಾಪಿ ಸತತಂ ನಾವಷ್ಟಭ್ಯಾ ಬಲೀಯಸಾ|

15011016c ತಿಷ್ಠೇಥಾ ರಾಜಶಾರ್ದೂಲ ವೈತಸೀಂ ವೃತ್ತಿಮಾಸ್ಥಿತಃ||

15011017a ಯದ್ಯೇವಮಭಿಯಾಯಾಚ್ಚ ದುರ್ಬಲಂ ಬಲವಾನ್ನೃಪಃ|

15011017c ಸಾಮಾದಿಭಿರುಪಾಯೈಸ್ತಂ ಕ್ರಮೇಣ ವಿನಿವರ್ತಯೇತ್||

ರಾಜಶಾರ್ದೂಲ! ಬಲಿಷ್ಟರಾಜನು ದುರ್ಬಲರನ್ನು ಎಂದೂ ಬೆನ್ನಟ್ಟಿ ಹೋಗಬಾರದು. ಬಲಿಷ್ಟರಾಜನು ದುರ್ಬಲನನ್ನು ಆಕ್ರಮಿಸಿದರೆ ದುರ್ಬಲನು ವಿನಮ್ರಭಾವವನ್ನು ತೋರಿಸಬೇಕು. ಸಾಮ-ದಾನ ಮೊದಲಾದ ಉಪಾಯಗಳಿಂದ ಅವನನ್ನು ಕ್ರಮೇಣವಾಗಿ ಹಿಂದಿರುವಂತೆ ಮಾಡಬೇಕು.

15011018a ಅಶಕ್ನುವಂಸ್ತು ಯುದ್ಧಾಯ ನಿಷ್ಪತೇತ್ಸಹ ಮಂತ್ರಿಭಿಃ|

15011018c ಕೋಶೇನ ಪೌರೈರ್ದಂಡೇನ ಯೇ ಚಾನ್ಯೇ ಪ್ರಿಯಕಾರಿಣಃ||

ಸಾಧ್ಯವಾಗದಿದ್ದರೆ ಮಂತ್ರಿಗಳು, ಕೋಶ, ಪೌರರು, ದಂಡ ಮತ್ತು ಅನ್ಯ ಪ್ರಿಯಕಾರಿಣಿಗಳು ಇವರೊಡನೆ ಸೇರಿಕೊಂಡು ಶತ್ರುವಿನೊಡನೆ ಯುದ್ಧಮಾಡಬೇಕು.

15011019a ಅಸಂಭವೇ ತು ಸರ್ವಸ್ಯ ಯಥಾಮುಖ್ಯೇನ ನಿಷ್ಪತೇತ್|

15011019c ಕ್ರಮೇಣಾನೇನ ಮೋಕ್ಷಃ ಸ್ಯಾಚ್ಚರೀರಮಪಿ ಕೇವಲಮ್||

ಬಲಿಷ್ಟನಾದವನೊಡನೆ ಯುದ್ಧಮಾಡುವಾಗ ಪರಾಜಯವು ಸಂಭವಿಸಿದರೆ ಯುದ್ಧಮಾಡುತ್ತಾ ಶರೀರತ್ಯಾಗಮಾಡುವುದರಿಂದ ಮುಕ್ತಿಯಾದರೂ ಲಭಿಸುತ್ತದೆ.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರೋಪದೇಶೇ ಏಕಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರೋಪದೇಶ ಎನ್ನುವ ಹನ್ನೊಂದನೇ ಅಧ್ಯಾಯವು.

Image result for indian motifs

[1] ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ, ಸೈನ್ಯ ಮತ್ತು ಪೌರರು ರಾಜನ ಪ್ರಕೃತಿಗಳು.

Comments are closed.