ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ
೧೦
ಯುಧಿಷ್ಠಿರನಿಗೆ ಧೃತರಾಷ್ಟ್ರನ ಉಪದೇಶ (೧-೧೬).
15010001 ಧೃತರಾಷ್ಟ್ರ ಉವಾಚ|
15010001a ವ್ಯವಹಾರಾಶ್ಚ ತೇ ತಾತ ನಿತ್ಯಮಾಪ್ತೈರಧಿಷ್ಠಿತಾಃ|
15010001c ಯೋಜ್ಯಾಸ್ತುಷ್ಟೈರ್ಹಿತೈ ರಾಜನ್ನಿತ್ಯಂ ಚಾರೈರನುಷ್ಠಿತಾಃ||
ಧೃತರಾಷ್ಟ್ರನು ಹೇಳಿದನು: “ವ್ಯವಹಾರಗಳನ್ನು ಯಾವಾಗಲೂ ಆಪ್ತರೂ, ಸಂತುಷ್ಟರೂ ಆದ ಹಿತೈಷಿಗಳಿಗೆ ವಹಿಸಿಕೊಡಬೇಕು ಮತ್ತು ಚಾರರ ಮೂಲಕ ಅವರ ವ್ಯವಹಾರಗಳನ್ನು ಪರಿಶೀಲಿಸುತ್ತಿರಬೇಕು.
15010002a ಪರಿಮಾಣಂ ವಿದಿತ್ವಾ ಚ ದಂಡಂ ದಂಡೇಷು ಭಾರತ|
15010002c ಪ್ರಣಯೇಯುರ್ಯಥಾನ್ಯಾಯಂ ಪುರುಷಾಸ್ತೇ ಯುಧಿಷ್ಠಿರ||
ಭಾರತ! ಯುಧಿಷ್ಠಿರ! ನೀನು ನಿಯೋಜಿಸಿದ ಪುರುಷರು ಯಥಾನ್ಯಾಯವಾಗಿ ಅಪರಾಧದ ಪರಿಣಾಮವನ್ನು ಚೆನ್ನಾಗಿ ಪರಿಶೀಲಿಸಿ ದಂಡಾರ್ಹರಿಗೆ ಶಿಕ್ಷೆಯನ್ನು ವಿಧಿಸುವವರಾಗಿರಬೇಕು.
15010003a ಆದಾನರುಚಯಶ್ಚೈವ ಪರದಾರಾಭಿಮರ್ಶಕಾಃ|
15010003c ಉಗ್ರದಂಡಪ್ರಧಾನಾಶ್ಚ ಮಿಥ್ಯಾ ವ್ಯಾಹಾರಿಣಸ್ತಥಾ||
15010004a ಆಕ್ರೋಷ್ಟಾರಶ್ಚ ಲುಬ್ಧಾಶ್ಚ ಹಂತಾರಃ ಸಾಹಸಪ್ರಿಯಾಃ|
15010004c ಸಭಾವಿಹಾರಭೇತ್ತಾರೋ ವರ್ಣಾನಾಂ ಚ ಪ್ರದೂಷಕಾಃ|
15010004e ಹಿರಣ್ಯದಂಡಾ ವಧ್ಯಾಶ್ಚ ಕರ್ತವ್ಯಾ ದೇಶಕಾಲತಃ||
ಯಾವ ಅಧಿಕಾರಿಗಳು ಲಂಚವನ್ನು ತೆಗೆದುಕೊಳ್ಳುವುದರಲ್ಲಿ ಅಭಿರುಚಿಯುಳ್ಳವರೋ, ಪರಸ್ತ್ರೀಯರೊಡನೆ ಸಂಪರ್ಕವನ್ನಿಟ್ಟುಕೊಂಡಿರುವರೋ, ಉಗ್ರಶಿಕ್ಷೆಯನ್ನು ಕೊಡುವ ಸ್ವಭಾವವುಳ್ಳವರೋ, ಸುಳ್ಳುತೀರ್ಪನ್ನು ಕೊಡುವರೋ, ಸಾಹಸಕಾರ್ಯಗಳಲ್ಲಿ ಅಭಿರುಚಿಯುಳ್ಳವರೋ, ಸಭಾಮಂದಿರಗಳನ್ನೂ ವಿಹಾರಸ್ಥಾನಗಳನ್ನೂ ನಾಶಗೊಳಿಸುವರೋ, ವರ್ಣಾಶ್ರಮ ಧರ್ಮಗಳನ್ನು ದೂಷಿಸುವರೋ ಅಂಥವರನ್ನು ದೇಶ-ಕಾಲಗಳನ್ನನುಸರಿಸಿ ಸುವರ್ಣದಂಡದ ಅಥವಾ ಪ್ರಾಣದಂಡದ ಮೂಲಕ ಶಿಕ್ಷಿಸಬೇಕು.
15010005a ಪ್ರಾತರೇವ ಹಿ ಪಶ್ಯೇಥಾ ಯೇ ಕುರ್ಯುರ್ವ್ಯಯಕರ್ಮ ತೇ|
15010005c ಅಲಂಕಾರಮಥೋ ಭೋಜ್ಯಮತ ಊರ್ಧ್ವಂ ಸಮಾಚರೇಃ||
ಬೆಳಿಗ್ಗೆಯೇ ಮೊದಲು ಆದಾಯ-ವೆಚ್ಚಗಳ ಅಧಿಕಾರಿಗಳನ್ನು ನೋಡಬೇಕು. ಅದರ ನಂತರವೇ ಅಲಂಕಾರ ಮತ್ತು ಭೋಜನಗಳ ಕುರಿತು ಗಮನಕೊಡಬೇಕು.
15010006a ಪಶ್ಯೇಥಾಶ್ಚ ತತೋ ಯೋಧಾನ್ಸದಾ ತ್ವಂ ಪರಿಹರ್ಷಯನ್|
15010006c ದೂತಾನಾಂ ಚ ಚರಾಣಾಂ ಚ ಪ್ರದೋಷಸ್ತೇ ಸದಾ ಭವೇತ್||
ಅನಂತರ ಯೋಧರನ್ನು ಕಾಣಬೇಕು. ಅವರನ್ನು ನೀನು ಸದಾ ಹರ್ಷಗೊಳಿಸುತ್ತಲೇ ಇರಬೇಕು. ದೂತರನ್ನು ಮತ್ತು ಚಾರರನ್ನು ಸದಾ ಸಾಯಂಕಾಲದ ಸಮಯದಲ್ಲಿ ಕಾಣಬೇಕು.
15010007a ಸದಾ ಚಾಪರರಾತ್ರಂ ತೇ ಭವೇತ್ಕಾರ್ಯಾರ್ಥನಿರ್ಣಯೇ|
15010007c ಮಧ್ಯರಾತ್ರೇ ವಿಹಾರಸ್ತೇ ಮಧ್ಯಾಹ್ನೇ ಚ ಸದಾ ಭವೇತ್||
ರಾತ್ರಿಯ ಕಡೆಯ ಭಾಗದಲ್ಲಿ ಅಥವಾ ಬೆಳಗಿನ ಜಾವದಲ್ಲಿ ಮರುದಿನದ ಕಾರ್ಯಕ್ರಮಗಳನ್ನು ನಿಶ್ಚಯಿಸಬೇಕು. ಮಧ್ಯರಾತ್ರಿಯಲ್ಲಿ ಅಥವಾ ಮಧ್ಯಾಹ್ನದಲ್ಲಿ ವಿಹರಿಸಬೇಕು.
15010008a ಸರ್ವೇ ತ್ವಾತ್ಯಯಿಕಾಃ ಕಾಲಾಃ ಕಾರ್ಯಾಣಾಂ ಭರತರ್ಷಭ|
15010008c ತಥೈವಾಲಂಕೃತಃ ಕಾಲೇ ತಿಷ್ಠೇಥಾ ಭೂರಿದಕ್ಷಿಣಃ|
15010008e ಚಕ್ರವತ್ಕರ್ಮಣಾಂ ತಾತ ಪರ್ಯಾಯೋ ಹ್ಯೇಷ ನಿತ್ಯಶಃ||
ಭರತರ್ಷಭ! ಕಾರ್ಯಮಾಡಲು ಎಲ್ಲ ಸಮಯಗಳೂ ಉಪಯುಕ್ತವಾಗಿಯೇ ಇರುತ್ತವೆ. ಆದುದರಿಂದ ಆಯಾಯಾ ಕಾಲಗಳಲ್ಲಿ ಅಲಂಕೃತನಾಗಿ ಕಾರ್ಯಗೈಯಲು ಸಿದ್ಧನಾಗಿರಬೇಕು. ಚಕ್ರದೋಪಾದಿಯಲ್ಲಿ ಕಾರ್ಯಗಳು ಒಂದಾದ ಮೇಲೆ ಒಂದರಂತೆ ನಿರಂತರವಾಗಿ ನಡೆಯುತ್ತಲೇ ಇರಬೇಕು.
15010009a ಕೋಶಸ್ಯ ಸಂಚಯೇ ಯತ್ನಂ ಕುರ್ವೀಥಾ ನ್ಯಾಯತಃ ಸದಾ|
15010009c ದ್ವಿವಿಧಸ್ಯ ಮಹಾರಾಜ ವಿಪರೀತಂ ವಿವರ್ಜಯೇಃ||
ಮಹಾರಾಜ! ಸದಾ ನ್ಯಾಯಸಮ್ಮತವಾಗಿ ಕೋಶವನ್ನು ತುಂಬಿಸುವ ಪ್ರಯತ್ನಮಾಡುತ್ತಿರಬೇಕು. ಆದರೆ ದ್ವಿವಿಧಾ ಭಾವವನ್ನೂ ವಿಪರೀತ ಭಾವವನ್ನೂ ಪರಿತ್ಯಜಿಸಬೇಕು.
15010010a ಚಾರೈರ್ವಿದಿತ್ವಾ ಶತ್ರೂಂಶ್ಚ ಯೇ ತೇ ರಾಜ್ಯಾಂತರಾಯಿಣಃ|
15010010c ತಾನಾಪ್ತೈಃ ಪುರುಷೈರ್ದೂರಾದ್ಘಾತಯೇಥಾಃ ಪರಸ್ಪರಮ್||
ರಾಜರ ನಡುವೆ ಪರಸ್ಪರ ಭೇದವನ್ನುಂಟುಮಾಡುವವರು ಯಾರೆನ್ನುವುದನ್ನು ಗೂಢಚಾರರಿಂದ ತಿಳಿದು ಅಂಥವರನ್ನು ಆಪ್ತಪುರುಷರ ಮೂಲಕ ದೂರದಿಂದಲೇ ನಿಗ್ರಹಿಸಬೇಕು.
15010011a ಕರ್ಮದೃಷ್ಟ್ಯಾಥ ಭೃತ್ಯಾಂಸ್ತ್ವಂ ವರಯೇಥಾಃ ಕುರೂದ್ವಹ|
15010011c ಕಾರಯೇಥಾಶ್ಚ ಕರ್ಮಾಣಿ ಯುಕ್ತಾಯುಕ್ತೈರಧಿಷ್ಠಿತೈಃ||
ಕುರೂದ್ವಹ! ಸೇವಕರ ಕೆಲಸಗಳನ್ನು ಮೊದಲು ನೋಡಿ ನಂತರ ಅವರನ್ನು ನೀನು ಆರಿಸಿಕೊಳ್ಳಬೇಕು. ಒಮ್ಮೆ ಅವರನ್ನು ಸೇವಕರನ್ನಾಗಿ ನಿಯಮಿಸಿಕೊಂಡ ನಂತರ ಅವರು ಯೋಗ್ಯರಾಗಿರಲಿ ಅಯೋಗ್ಯರಾಗಿರಲಿ ಅವರಿಂದ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು.
15010012a ಸೇನಾಪ್ರಣೇತಾ ಚ ಭವೇತ್ತವ ತಾತ ದೃಢವ್ರತಃ|
15010012c ಶೂರಃ ಕ್ಲೇಶಸಹಶ್ಚೈವ ಪ್ರಿಯಶ್ಚ ತವ ಮಾನವಃ||
ಮಗೂ! ನಿನ್ನ ಸೇನಾಪತಿಯು ದೃಢವ್ರತನಾಗಿರಬೇಕು, ಶೂರನಾಗಿರಬೇಕು, ಕ್ಲೇಶಗಳನ್ನು ಸಹಿಸಿಕೊಳ್ಳುವವನಾಗಿರಬೇಕು ಮತ್ತು ನಿನಗೆ ಪ್ರಿಯನಾದವನೂ ಆಗಿರಬೇಕು.
15010013a ಸರ್ವೇ ಜಾನಪದಾಶ್ಚೈವ ತವ ಕರ್ಮಾಣಿ ಪಾಂಡವ|
15010013c ಪೌರೋಗವಾಶ್ಚ ಸಭ್ಯಾಶ್ಚ ಕುರ್ಯುರ್ಯೇ ವ್ಯವಹಾರಿಣಃ||
ಪಾಂಡವ! ಗ್ರಾಮೀಣ, ನಗರದ ಮತ್ತು ಸಭೆಗಳಿಗೆ ಸಂಬಂಧಿಸಿದ ನಿನ್ನ ಕರ್ಮಗಳೆಲ್ಲವನ್ನೂ ವ್ಯವಹಾರಿಗಳಿಂದ ಮಾಡಿಸಬೇಕು.
15010014a ಸ್ವರಂಧ್ರಂ ಪರರಂಧ್ರಂ ಚ ಸ್ವೇಷು ಚೈವ ಪರೇಷು ಚ|
15010014c ಉಪಲಕ್ಷಯಿತವ್ಯಂ ತೇ ನಿತ್ಯಮೇವ ಯುಧಿಷ್ಠಿರ||
ಯುಧಿಷ್ಠಿರ! ನಿತ್ಯವೂ ನೀನು ನಿನ್ನಲ್ಲಿರುವ ದೋಷಗಳನ್ನು ಮತ್ತು ಶತ್ರುಗಳಲ್ಲಿರುವ ದೋಷಗಳನ್ನು ನಿನ್ನವರಿಂದ ಮತ್ತು ಶತ್ರುಗಳಿಂದ ತಿಳಿದುಕೊಳ್ಳುತ್ತಾ ಇರಬೇಕು.
15010015a ದೇಶಾಂತರಸ್ಥಾಶ್ಚ ನರಾ ವಿಕ್ರಾಂತಾಃ ಸರ್ವಕರ್ಮಸು|
15010015c ಮಾತ್ರಾಭಿರನುರೂಪಾಭಿರನುಗ್ರಾಹ್ಯಾ ಹಿತಾಸ್ತ್ವಯಾ||
ನಿನ್ನ ದೇಶದ ತಮ್ಮ ತಮ್ಮ ಕರ್ಮಗಳಲ್ಲಿ ಕುಶಲರಾಗಿರುವ, ನಿನಗೆ ಹಿತರಾಗಿರುವ ಪುರುಷರನ್ನು ಅವರಿಗೆ ಅನುರೂಪ ಜೀವಿಕೆಗಳನ್ನು ಕಲ್ಪಿಸಿಕೊಟ್ಟು ಅನುಗ್ರಹಿಸಬೇಕು.
15010016a ಗುಣಾರ್ಥಿನಾಂ ಗುಣಃ ಕಾರ್ಯೋ ವಿದುಷಾಂ ತೇ ಜನಾಧಿಪ|
15010016c ಅವಿಚಾಲ್ಯಾಶ್ಚ ತೇ ತೇ ಸ್ಯುರ್ಯಥಾ ಮೇರುರ್ಮಹಾಗಿರಿಃ||
ಜನಾಧಿಪ! ಗುಣಾರ್ಥಿ ವಿದುಷರಿಗೆ ಗುಣಯುಕ್ತ ಕಾರ್ಯಗಳನ್ನು ವಹಿಸಿಕೊಡಬೇಕು. ಅವರು ಯಾವಾಗಲೂ ಮೇರು ಮಹಾಗಿರಿಯಂತೆ ನಿಶ್ಚಲರಾಗಿರುತ್ತಾರೆ.””
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರೋಪದೇಶೇ ದಶಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರೋಪದೇಶ ಎನ್ನುವ ಹತ್ತನೇ ಅಧ್ಯಾಯವು.