ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೯೭
ತಮ್ಮ ವಾತಾಪಿಯನ್ನು ಜೀರ್ಣಿಸಿಕೊಂಡ ಅಗಸ್ತ್ಯನಲ್ಲಿ ಇಲ್ವಲನು ಬಂದ ಕಾರಣವನ್ನು ಕೇಳಿಕೊಳ್ಳುವುದು (೧-೮). ಅಗಸ್ತ್ಯನು ಇಲ್ವಲನಿಂದ ತನಗೂ ಮತ್ತು ಜೊತೆಯಲ್ಲಿ ಬಂದಿರುವ ರಾಜರಿಗೂ ಧನವನ್ನು ಪಡೆದು ಲೋಪಾಮುದ್ರೆಯಲ್ಲಿಗೆ ಮರಳಿದುದು (೯-೧೬). ಅಗಸ್ತ್ಯನಿಗೆ ಲೋಪಾಮುದ್ರೆಯಲ್ಲಿ ದೃಢಸ್ಯು ಎಂಬ ಮಗನ ಜನನ (೧೭-೨೭).
03097001 ಲೋಮಶ ಉವಾಚ|
03097001a ಇಲ್ವಲಸ್ತಾನ್ವಿದಿತ್ವಾ ತು ಮಹರ್ಷಿಸಹಿತಾನ್ನೃಪಾನ್|
03097001c ಉಪಸ್ಥಿತಾನ್ಸಹಾಮಾತ್ಯೋ ವಿಷಯಾಂತೇಽಭ್ಯಪೂಜಯತ್||
ಲೋಮಶನು ಹೇಳಿದನು: “ನೃಪರೊಂದಿಗೆ ಮಹರ್ಷಿಯು ಬಂದಿದ್ದಾನೆ ಎಂದು ತಿಳಿದ ಇಲ್ವಲನು ಅಮಾತ್ಯರೊಂದಿಗೆ ತನ್ನ ರಾಜ್ಯದ ಗಡಿಯವರೆಗೂ ಬಂದು ಅವರನ್ನು ಪೂಜಿಸಿ ಬರಮಾಡಿಕೊಂಡನು.
03097002a ತೇಷಾಂ ತತೋಽಸುರಶ್ರೇಷ್ಠ ಆತಿಥ್ಯಮಕರೋತ್ತದಾ|
03097002c ಸ ಸಂಸ್ಕೃತೇನ ಕೌರವ್ಯ ಭ್ರಾತ್ರಾ ವಾತಾಪಿನಾ ಕಿಲ||
ಕೌರವ್ಯ! ಆ ಅಸುರಶ್ರೇಷ್ಠನು ಅವರಿಗೆ ಆತಿಥ್ಯವನ್ನು ನೀಡಿದನು ಮತ್ತು ತನ್ನ ತಮ್ಮ ವಾತಾಪಿಯನ್ನೇ ಅಡುಗೆ ಮಾಡಿ ಅವರಿಗೆ ಬಡಿಸಿದನು.
03097003a ತತೋ ರಾಜರ್ಷಯಃ ಸರ್ವೇ ವಿಷಣ್ಣಾ ಗತಚೇತಸಃ|
03097003c ವಾತಾಪಿಂ ಸಂಸ್ಕೃತಂ ದೃಷ್ಟ್ವಾ ಮೇಷಭೂತಂ ಮಹಾಸುರಂ||
ಆಗ ಎಲ್ಲ ರಾಜರ್ಷಿಗಳೂ ಮಹಾಸುರ ವಾತಾಪಿಯನ್ನು ಕುರಿಯ ಮಾಂಸದಂತೆ ಅಡುಗೆಮಾಡಿದ್ದುದನ್ನು ನೋಡಿ ವಿಷಣ್ಣರಾಗಿ ಮೂರ್ಛಿತರಾದರು.
03097004a ಅಥಾಬ್ರವೀದಗಸ್ತ್ಯಸ್ತಾನ್ರಾಜರ್ಷೀನೃಷಿಸತ್ತಮಃ|
03097004c ವಿಷಾದೋ ವೋ ನ ಕರ್ತವ್ಯೋ ಅಹಂ ಭೋಕ್ಷ್ಯೇ ಮಹಾಸುರಂ||
ಋಷಿಸತ್ತಮ ಅಗಸ್ತ್ಯನು ಆ ರಾಜರ್ಷಿಗಳಿಗೆ ಹೇಳಿದನು: “ವಿಷಾದಿಸ ಬೇಡಿ. ಈ ಮಹಾಸುರನನ್ನು ನಾನು ತಿನ್ನುತ್ತೇನೆ!”
03097005a ಧುರ್ಯಾಸನಮಥಾಸಾದ್ಯ ನಿಷಸಾದ ಮಹಾಮುನಿಃ|
03097005c ತಂ ಪರ್ಯವೇಷದ್ದೈತ್ಯೇಂದ್ರ ಇಲ್ವಲಃ ಪ್ರಹಸನ್ನಿವ||
ಮಹಾಮುನಿಯು ಉತ್ತಮ ಆಸನವನ್ನು ಹಿಡಿದು ಕುಳಿತುಕೊಂಡನಂತರ ದೈತ್ಯೇಂದ್ರ ಇಲ್ವಲನು ನಸುನಗುತ್ತಾ ಬಡಿಸಿದನು.
03097006a ಅಗಸ್ತ್ಯ ಏವ ಕೃತ್ಸ್ನಂ ತು ವಾತಾಪಿಂ ಬುಭುಜೇ ತತಃ|
03097006c ಭುಕ್ತವತ್ಯಸುರೋಽಹ್ವಾನಮಕರೋತ್ತಸ್ಯ ಇಲ್ವಲಃ||
ಅಗಸ್ತ್ಯನು ವಾತಾಪಿಯನ್ನು ಸಂಪೂರ್ಣವಾಗಿ ಭುಂಜಿಸಿದನು. ಅವನು ಊಟವನ್ನು ಮುಗಿಸಿದ ನಂತರ ಅಸುರ ಇಲ್ವಲನು ತನ್ನ ತಮ್ಮನನ್ನು ಕೂಗಿ ಕರೆದನು.
03097007a ತತೋ ವಾಯುಃ ಪ್ರಾದುರಭೂದಗಸ್ತ್ಯಸ್ಯ ಮಹಾತ್ಮನಃ|
03097007c ಇಲ್ವಲಶ್ಚ ವಿಷಣ್ಣೋಽಭೂದ್ದೃಷ್ಟ್ವಾ ಜೀರ್ಣಂ ಮಹಾಸುರಂ||
ಆಗ ಮಹಾತ್ಮ ಅಗಸ್ತ್ಯನು ತೇಗು ಬಿಟ್ಟನು. ಆ ಮಹಾಸುರನನ್ನು ಜೀರ್ಣಗೊಳಿಸಿಕೊಂಡಿದುದನ್ನು ಕಂಡು ಇಲ್ವಲನು ವಿಷಣ್ಣನಾದನು.
03097008a ಪ್ರಾಂಜಲಿಶ್ಚ ಸಹಾಮಾತ್ಯೈರಿದಂ ವಚನಮಬ್ರವೀತ್|
03097008c ಕಿಮರ್ಥಮುಪಯಾತಾಃ ಸ್ಥ ಬ್ರೂತ ಕಿಂ ಕರವಾಣಿ ವಃ||
ಅವನು ಅಮಾತ್ಯರೊಂದಿಗೆ ಕೈಜೋಡಿಸಿ ಹೀಗೆ ಹೇಳಿದನು: “ನೀವು ಇಲ್ಲಿಗೆ ಯಾವ ಕಾರಣದಿಂದ ಬಂದಿದ್ದೀರಿ? ನಾನು ನಿಮಗೆ ಏನು ಮಾಡಬೇಕು?”
03097009a ಪ್ರತ್ಯುವಾಚ ತತೋಽಗಸ್ತ್ಯಃ ಪ್ರಹಸನ್ನಿಲ್ವಲಂ ತದಾ|
03097009c ಈಶಂ ಹ್ಯಸುರ ವಿದ್ಮಸ್ತ್ವಾಂ ವಯಂ ಸರ್ವೇ ಧನೇಶ್ವರಂ||
ಆಗ ಅಗಸ್ತ್ಯನು ನಸುನಗುತ್ತಾ ಉತ್ತರಿಸಿದನು: “ಅಸುರ! ನೀನು ತುಂಬಾ ಧನೇಶ್ವರನೆಂದು ನಾವೆಲ್ಲರೂ ತಿಳಿದಿದ್ದೇವ್ತೆ
03097010a ಇಮೇ ಚ ನಾತಿಧನಿನೋ ಧನಾರ್ಥಶ್ಚ ಮಹಾನ್ಮಮ|
03097010c ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ನಃ||
ನನಗೆ ಧನದ ತುಂಬಾ ಅವಶ್ಯಕತೆಯಿದೆ. ಇನ್ನೊಬ್ಬರಿಗೆ ಹಿಂಸೆಯಾಗದ ರೀತಿಯಲ್ಲಿ ನಿನ್ನ ಧನದ ಭಾಗವೊಂದನ್ನು ಯಥಾಶಕ್ತಿಯಾಗಿ ನೀಡು.”
03097011a ತತೋಽಭಿವಾದ್ಯ ತಮೃಷಿಮಿಲ್ವಲೋ ವಾಕ್ಯಮಬ್ರವೀತ್|
03097011c ದಿತ್ಸಿತಂ ಯದಿ ವೇತ್ಸಿ ತ್ವಂ ತತೋ ದಾಸ್ಯಾಮಿ ತೇ ವಸು||
ಆಗ ಆ ಋಷಿಗೆ ನಮಸ್ಕರಿಸಿ ಇಲ್ವಲನು ಹೇಳಿದನು: “ನಾನು ಏನನ್ನು ಕೊಡಬೇಕೆಂದಿರುವೆನೋ ಅದು ನಿನಗೆ ತಿಳಿದಿದ್ದರೆ ಆ ಸಂಪತ್ತನ್ನು ನಿನಗೆ ನೀಡುತ್ತೇನೆ.”
03097012 ಅಗಸ್ತ್ಯ ಉವಾಚ|
03097012a ಗವಾಂ ದಶ ಸಹಸ್ರಾಣಿ ರಾಜ್ಞಾಮೇಕೈಕಶೋಽಸುರ|
03097012c ತಾವದೇವ ಸುವರ್ಣಸ್ಯ ದಿತ್ಸಿತಂ ತೇ ಮಹಾಸುರ||
ಅಗಸ್ತ್ಯನು ಹೇಳಿದನು: “ಅಸುರ! ಮಹಾಸುರ! ಪ್ರತಿಯೊಬ್ಬ ರಾಜನಿಗೂ ನೀನು ಹತ್ತು ಸಹಸ್ರ ಗೋವುಗಳನ್ನು ಮತ್ತು ಅಷ್ಟೇ ಸುವರ್ಣಗಳನ್ನು ನೀಡಬೇಕೆಂದು ನೀನು ಬಯಸಿರುವೆ.
03097013a ಮಹ್ಯಂ ತತೋ ವೈ ದ್ವಿಗುಣಂ ರಥಶ್ಚೈವ ಹಿರಣ್ಮಯಃ|
03097013c ಮನೋಜವೌ ವಾಜಿನೌ ಚ ದಿತ್ಸಿತಂ ತೇ ಮಹಾಸುರ||
03097013e ಜಿಜ್ಞಾಸ್ಯತಾಂ ರಥಃ ಸದ್ಯೋ ವ್ಯಕ್ತಮೇಷ ಹಿರಣ್ಮಯಃ||
ಮಹಾಸುರ! ನನಗೆ ಇದರ ಎರಡು ಪಟ್ಟು ಮತ್ತು ಬಂಗಾರದ ರಥವನ್ನೂ, ಮನೋವೇಗದಲ್ಲಿ ಹೋಗುವ ಎರಡು ಕುದುರೆಗಳನ್ನೂ ನೀಡಲು ಬಯಸುತ್ತೀಯೆ. ತಕ್ಷಣವೇ ರಥವನ್ನು ಪರೀಕ್ಷಿಸು - ಅದು ಸಂಪೂರ್ಣವಾಗಿ ಬಂಗಾರದಿಂದ ಮಾಡಿರಬೇಕು.””
03097014 ಲೋಮಶ ಉವಾಚ|
03097014a ಜಿಜ್ಞಾಸ್ಯಮಾನಃ ಸ ರಥಃ ಕೌಂತೇಯಾಸೀದ್ಧಿರಣ್ಮಯಃ|
03097014c ತತಃ ಪ್ರವ್ಯಥಿತೋ ದೈತ್ಯೋ ದದಾವಭ್ಯಧಿಕಂ ವಸು||
03097015a ವಿವಾಜಶ್ಚ ಸುವಾಜಶ್ಚ ತಸ್ಮಿನ್ಯುಕ್ತೌ ರಥೇ ಹಯೌ|
ಲೋಮಶನು ಹೇಳಿದನು: “ಕೌಂತೇಯ! ಆ ರಥವು ಸಂಪೂರ್ಣವಾಗಿ ಬಂಗಾರದಿಂದ ಮಾಡಿದುದೆಂದು ಪರೀಕ್ಷಿಸಲಾಯಿತು. ಅನಂತರ ಆ ದೈತ್ಯನು ಬಹಳ ವ್ಯಥೆಯಿಂದ ಆ ಅಧಿಕ ಸಂಪತ್ತನ್ನು ನೀಡಿದನು. ವಿವಾಜ ಮತ್ತು ಸುವಾಜ ಎಂಬ ಕುದುರೆಗಳನ್ನು ರಥಕ್ಕೆ ಕಟ್ಟಲಾಯಿತು.
03097015c ಊಹತುಸ್ತೌ ವಸೂನ್ಯಾಶು ತಾನ್ಯಗಸ್ತ್ಯಾಶ್ರಮಂ ಪ್ರತಿ||
03097015e ಸರ್ವಾನ್ರಾಜ್ಞಃ ಸಹಾಗಸ್ತ್ಯಾನ್ನಿಮೇಷಾದಿವ ಭಾರತ||
ಭಾರತ! ಕಣ್ಣು ಮುಚ್ಚಿ ಬಿಡುವುದರೊಳಗೆ ಆ ಸಂಪತ್ತನ್ನು ಅಗಸ್ತ್ಯನ ಆಶ್ರಮಕ್ಕೆ ತರಲಾಯಿತು. ಆಗ ಅಗಸ್ತ್ಯನು ಎಲ್ಲ ರಾಜರನ್ನೂ ಬೀಳ್ಕೊಂಡನು.
03097016a ಅಗಸ್ತ್ಯೇನಾಭ್ಯನುಜ್ಞಾತಾ ಜಗ್ಮೂ ರಾಜರ್ಷಯಸ್ತದಾ|
03097016c ಕೃತವಾಂಶ್ಚ ಮುನಿಃ ಸರ್ವಂ ಲೋಪಾಮುದ್ರಾಚಿಕೀರ್ಷಿತಂ||
ಅಗಸ್ತ್ಯನಿಂದ ಬೀಳ್ಕೊಂಡ ರಾಜರ್ಷಿಗಳು ತೆರಳಿದರು. ಮತ್ತು ಆ ಮುನಿಯು ಲೋಪಾಮುದ್ರೆಯು ಬಯಸಿದಂತೆ ಎಲ್ಲವನ್ನೂ ಮಾಡಿದನು.
03097017 ಲೋಪಾಮುದ್ರೋವಾಚ|
03097017a ಕೃತವಾನಸಿ ತತ್ಸರ್ವಂ ಭಗವನ್ಮಮ ಕಾಮ್ಕ್ಷಿತಂ|
03097017c ಉತ್ಪಾದಯ ಸಕೃನ್ಮಹ್ಯಮಪತ್ಯಂ ವೀರ್ಯವತ್ತರಂ||
ಲೋಪಾಮುದ್ರೆಯು ಹೇಳಿದಳು: “ಭಗವನ್! ನನ್ನ ಎಲ್ಲ ಬಯಕೆಗಳನ್ನೂ ಪೂರೈಸಿದ್ದೀಯೆ. ಈಗ ಮಹಾ ವೀರ್ಯಶಾಲಿಯಾದ ಮಗನನ್ನು ನನ್ನಲ್ಲಿ ಹುಟ್ಟಿಸು.”
03097018 ಅಗಸ್ತ್ಯ ಉವಾಚ|
03097018a ತುಷ್ಟೋಽಹಮಸ್ಮಿ ಕಲ್ಯಾಣಿ ತವ ವೃತ್ತೇನ ಶೋಭನೇ|
03097018c ವಿಚಾರಣಾಮಪತ್ಯೇ ತು ತವ ವಕ್ಷ್ಯಾಮಿ ತಾಂ ಶೃಣು||
ಅಗಸ್ತ್ಯನು ಹೇಳಿದನು: “ಕಲ್ಯಾಣಿ! ಶೋಭನೇ! ನಿನ್ನ ನಡವಳಿಕೆಯಿಂದ ನಾನು ಸಂತುಷ್ಟನಾಗಿದ್ದೇನೆ. ನಿನ್ನ ಸಂತಾನದ ಕುರಿತು ನಾನು ಏನನ್ನು ಯೋಚಿಸುತ್ತಿದ್ದೇನೆ ಎನ್ನುವುದನ್ನು ಹೇಳುತ್ತೇನೆ. ಕೇಳು.
03097019a ಸಹಸ್ರಂ ತೇಽಸ್ತು ಪುತ್ರಾಣಾಂ ಶತಂ ವಾ ದಶಸಮ್ಮಿತಂ|
03097019c ದಶ ವಾ ಶತತುಲ್ಯಾಃ ಸ್ಯುರೇಕೋ ವಾಪಿ ಸಹಸ್ರವತ್||
ನೀನು ಒಂದು ಸಾವಿರ ಪುತ್ರರನ್ನು ಬಯಸುತ್ತೀಯಾ ಅಥವಾ ಪ್ರತಿಯೊಬ್ಬರೂ ಹತ್ತು ಮಕ್ಕಳಿಗೆ ಸಮರಾದ ನೂರು ಮಕ್ಕಳನ್ನು ಬಯಸುತ್ತೀಯಾ ಅಥವಾ ಪ್ರತಿಯೊಬ್ಬರೂ ನೂರು ಮಕ್ಕಳಿಗೆ ಸಮನಾದ ಹತ್ತು ಮಕ್ಕಳನ್ನು ಬಯಸುತ್ತೀಯಾ ಅಥವಾ ಸಾವಿರ ಮಕ್ಕಳಿಗೆ ಸಮನಾದ ಓರ್ವನೇ ಮಗನನ್ನು ಬಯಸುತ್ತೀಯಾ?”
03097020 ಲೋಪಾಮುದ್ರೋವಾಚ|
03097020a ಸಹಸ್ರಸಮ್ಮಿತಃ ಪುತ್ರ ಏಕೋ ಮೇಽಸ್ತು ತಪೋಧನ|
03097020c ಏಕೋ ಹಿ ಬಹುಭಿಃ ಶ್ರೇಯಾನ್ವಿದ್ವಾನ್ಸಾಧುರಸಾಧುಭಿಃ||
ಲೋಪಾಮುದ್ರೆಯು ಹೇಳಿದಳು: “ತಪೋಧನ! ಸಾವಿರ ಮಕ್ಕಳಿಗೆ ಸಮನಾದ ಓರ್ವನೇ ಪುತ್ರನು ಬೇಕು. ಒಳ್ಳೆಯತನವಿರುವ ಸಹಸ್ರಾರು ಮಕ್ಕಳಿಗಿಂತ ವಿದ್ವಾಂಸನೂ ಸಾಧುವೂ ಆದ ಒಬ್ಬನೇ ಮಗನು ಶ್ರೇಯಸ್ಕರ.””
03097021 ಲೋಮಶ ಉವಾಚ|
03097021a ಸ ತಥೇತಿ ಪ್ರತಿಜ್ಞಾಯ ತಯಾ ಸಮಭವನ್ಮುನಿಃ|
03097021c ಸಮಯೇ ಸಮಶೀಲಿನ್ಯಾ ಶ್ರದ್ಧಾವಾಂ ಶ್ರದ್ದಧಾನಯಾ||
ಲೋಮಶನು ಹೇಳಿದನು: “ಹಾಗೆಯೇ ಆಗಲಿ ಎಂದು ಮಾತುಕೊಟ್ಟ ಮುನಿಯು ಸರಿಯಾದ ಸಮಯದಲ್ಲಿ ಶ್ರದ್ಧಾವಂತನಾಗಿ ಶ್ರದ್ಧಾವಂತ ಸಮಶೀಲೆಯೊಡನೆ ಕೂಡಿದನು.
03097022a ತತ ಆಧಾಯ ಗರ್ಭಂ ತಮಗಮದ್ವನಮೇವ ಸಃ|
03097022c ತಸ್ಮಿನ್ವನಗತೇ ಗರ್ಭೋ ವವೃಧೇ ಸಪ್ತ ಶಾರದಾನ್||
03097023a ಸಪ್ತಮೇಽಬ್ಧೇ ಗತೇ ಚಾಪಿ ಪ್ರಾಚ್ಯವತ್ಸ ಮಹಾಕವಿಃ|
03097023c ಜ್ವಲನ್ನಿವ ಪ್ರಭಾವೇನ ದೃಢಸ್ಯುರ್ನಾಮ ಭಾರತ||
03097023e ಸಾಂಗೋಪನಿಷದಾನ್ವೇದಾಂ ಜಪನ್ನೇವ ಮಹಾಯಶಾಃ|
03097024a ತಸ್ಯ ಪುತ್ರೋಽಭವದೃಷೇಃ ಸ ತೇಜಸ್ವೀ ಮಹಾನೃಷಿಃ||
ಗರ್ಭವನ್ನು ನೀಡಿ ಅವನು ವನವನ್ನು ಸೇರಿದನು. ಅವನು ವನಕ್ಕೆ ಹೋಗಲು, ಗರ್ಭವು ಏಳು ವರ್ಷಗಳ ಪರ್ಯಂತ ಬೆಳೆಯಿತು. ಭಾರತ! ಏಳು ವರ್ಷಗಳು ಕಳೆದ ನಂತರ ದೃಡಸ್ಯು ಎಂಬ ಹೆಸರಿನ ಶಕ್ತಿಯಿಂದ ಉರಿಯುತ್ತಿರುವ ಮಹಾಕವಿಯು, ಉಪನಿಷತ್ತುಗಳ ಜೊತೆ ಮಹಾಯಶ ವೇದಗಳನ್ನು ಜಪಿಸುತ್ತಾ ಜನಿಸಿದನು. ಆ ತೇಜಸ್ವಿ ಮಹಾನೃಷಿಯು ಅಗಸ್ತ್ಯನ ಮಗನಾದನು.
03097024c ಸ ಬಾಲ ಏವ ತೇಜಸ್ವೀ ಪಿತುಸ್ತಸ್ಯ ನಿವೇಶನೇ|
03097024e ಇಧ್ಮಾನಾಂ ಭಾರಮಾಜಹ್ರೇ ಇಧ್ಮವಾಹಸ್ತತೋಽಭವತ್||
ಬಾಲಕನಾಗಿದ್ದಾಗಲೇ ಆ ತೇಜಸ್ವಿಯು ತನ್ನ ತಂದೆಯ ಮನೆಯಲ್ಲಿ ಭಾರವಾದ ಇಂಧನಗಳನ್ನು ಹೊತ್ತು ತರುತ್ತಿರುವುದರಿಂದ ಅವನು ಇಧ್ಮವಾಹನೆಂದು ಕರೆಯಲ್ಪಟ್ಟನು.
03097025a ತಥಾಯುಕ್ತಂ ಚ ತಂ ದೃಷ್ಟ್ವಾ ಮುಮುದೇ ಸ ಮುನಿಸ್ತದಾ|
03097025c ಲೇಭಿರೇ ಪಿತರಶ್ಚಾಸ್ಯ ಲೋಕಾನ್ರಾಜನ್ಯಥೇಪ್ಸಿತಾನ್||
ಈ ರೀತಿ ಸಮರ್ಥನಾಗಿರುವ ಮಗನನ್ನು ನೋಡಿ ಮುನಿಯು ಸಂತೋಷಗೊಂಡನು. ರಾಜನ್! ಹೀಗೆ ಅವನ ಪಿತೃಗಳು ಅವರು ಬಯಸಿದ ಲೋಕಗಳನ್ನು ಪಡೆದರು.
03097026a ಅಗಸ್ತ್ಯಸ್ಯಾಶ್ರಮಃ ಖ್ಯಾತಃ ಸರ್ವರ್ತುಕುಸುಮಾನ್ವಿತಃ|
03097026c ಪ್ರಾಹ್ರಾದಿರೇವಂ ವಾತಾಪಿರಗಸ್ತ್ಯೇನ ವಿನಾಶಿತಃ||
ಇದು ಖ್ಯಾತ ಅಗಸ್ತನ ಆಶ್ರಮ. ಇಲ್ಲಿ ಸರ್ವ ಋತುಗಳಲ್ಲಿ ಹೂವುಗಳು ಅರಳುತ್ತವೆ. ಈ ರೀತಿಯಲ್ಲಿ ಅಗಸ್ತನಿಂದ ವಾತಾಪಿಯು ನಾಶಗೊಂಡನು ಎಂದು ಹೇಳುತ್ತಾರೆ.
03097027a ತಸ್ಯಾಯಮಾಶ್ರಮೋ ರಾಜನ್ರಮಣೀಯೋ ಗುಣೈರ್ಯುತಃ|
03097027c ಏಷಾ ಭಾಗೀರಥೀ ಪುಣ್ಯಾ ಯಥೇಷ್ಟಮವಗಾಹ್ಯತಾಂ||
ರಾಜನ್! ಅವನ ಆಶ್ರಮವು ರಮಣೀಯವೂ, ವಿಶಿಷ್ಠವೂ ಆಗಿದೆ. ಇದೇ ಪುಣ್ಯ ಭಾಗೀರಥೀ ನದಿ. ಇಲ್ಲಿ ನಿನಗಿಷ್ಟವಾದಷ್ಟು ಸ್ನಾನಮಾಡಬಹುದು[1].”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಸಪ್ತನವತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೇಳನೆಯ ಅಧ್ಯಾಯವು.
[1]ಈ ಶ್ಲೋಕದ ನಂತರ ಗೋರಖಪುರ ಸಂಪುಟದಲ್ಲಿ ೪೦ ಶ್ಲೋಕಗಳಲ್ಲಿ ಜಾಮದಗ್ನಿ ರಾಮನ ತೇಜೋವಧೆಯ ಕುರಿತಾದ ಕಥೆಯಿದೆ. ಪುಣೆಯ ಸಂಪುಟದಲ್ಲಿ ಸೇರಿಸಿಲ್ಲದಿರುವ ಈ ಶ್ಲೋಕಗಳನ್ನು ಅನುಬಂಧ ೩ರಲ್ಲಿ ನೀಡಲಾಗಿದೆ.