Aranyaka Parva: Chapter 95

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೯೫

ಅಗಸ್ತ್ಯ-ಲೋಪಾಮುದ್ರೆಯರ ವಿವಾಹ; ಅಗಸ್ತ್ಯನು ಬೆಲೆಬಾಳುವ ಉಡುಗೆ-ಆಭರಣಗಳನ್ನು ಬಿಸಾಡಲು ಪತ್ನಿಗೆ ಹೇಳಿದುದು (೧-೧೨). ಲೋಪಾಮುದ್ರೆಯನ್ನು ಅಗಸ್ತ್ಯನು ಸಂಭೋಗಕ್ಕೆ ಕರೆದಾಗ ಅವಳು ಇಬ್ಬರೂ ದಿವ್ಯಾಭರಣಗಳಿಂದ ಅಲಂಕೃತರಾಗಿ ಕೂಡಬೇಕೆಂದು ಕೇಳುವುದು; ಅಗಸ್ತ್ಯನು ಸಂಪತ್ತನ್ನು ಅರಸಿ ಹೊರಡುವುದು (೧೩-೨೪).

Related image03095001 ಲೋಮಶ ಉವಾಚ|

03095001a ಯದಾ ತ್ವಮನ್ಯತಾಗಸ್ತ್ಯೋ ಗಾರ್ಹಸ್ಥ್ಯೇ ತಾಂ ಕ್ಷಮಾಮಿತಿ|

03095001c ತದಾಭಿಗಮ್ಯ ಪ್ರೋವಾಚ ವೈದರ್ಭಂ ಪೃಥಿವೀಪತಿಂ||

ಲೋಮಶನು ಹೇಳಿದನು: “ಅವಳು ಗೃಹಿಣಿಯಾಗಲು ಸಿದ್ಧಳಾಗಿದ್ದಾಳೆ ಎಂದು ಯೋಚಿಸಿದ ಅಗಸ್ತ್ಯನು ಪೃಥ್ವೀಪತಿ ವಿದರ್ಭರಾಜನಲ್ಲಿಗೆ ಹೋಗಿ ಹೇಳಿದನು:

03095002a ರಾಜನ್ನಿವೇಶೇ ಬುದ್ಧಿರ್ಮೇ ವರ್ತತೇ ಪುತ್ರಕಾರಣಾತ್|

03095002c ವರಯೇ ತ್ವಾಂ ಮಹೀಪಾಲ ಲೋಪಾಮುದ್ರಾಂ ಪ್ರಯಚ್ಚ ಮೇ||

“ರಾಜನ್! ಪುತ್ರನು ಬೇಕೆಂಬ ಕಾರಣದಿಂದ ನಾನು ಮದುವೆಯಾಗಲು ಮನಸ್ಸುಮಾಡಿದ್ದೇನೆ. ಮಹೀಪಾಲ! ನಿನ್ನಲ್ಲಿ ನಾನು ಕೇಳಿಕೊಳ್ಳುತ್ತಿದ್ದೇನೆ - ಲೋಪಾಮುದ್ರೆಯನ್ನು ನನಗೆ ಕೊಡು.”

03095003a ಏವಮುಕ್ತಃ ಸ ಮುನಿನಾ ಮಹೀಪಾಲೋ ವಿಚೇತನಃ|

03095003c ಪ್ರತ್ಯಾಖ್ಯಾನಾಯ ಚಾಶಕ್ತಃ ಪ್ರದಾತುಮಪಿ ನೈಚ್ಚತ||

ಮುನಿಯು ಹೀಗೆ ಹೇಳಲು ಮಹೀಪಾಲನು ನಿರಾಕರಿಸಲು ಅಶಕ್ತನಾಗಿ, ಕೊಡಲು ಮನಸ್ಸಿಲ್ಲದವನಾಗಿ ದ್ವಂದ್ವದಲ್ಲಿ ಸಿಲುಕಿದನು.

03095004a ತತಃ ಸ ಭಾರ್ಯಾಮಭ್ಯೇತ್ಯ ಪ್ರೋವಾಚ ಪೃಥಿವೀಪತಿಃ|

03095004c ಮಹರ್ಷಿರ್ವೀರ್ಯವಾನೇಷ ಕ್ರುದ್ಧಃ ಶಾಪಾಗ್ನಿನಾ ದಹೇತ್||

ಆಗ ಆ ರಾಜನು ತನ್ನ ಹೆಂಡತಿಯಲ್ಲಿಗೆ ಹೋಗಿ ಹೇಳಿದನು: “ಈ ಮಹರ್ಷಿಯು ಮಹಾವೀರ್ಯವಂತ! ಸಿಟ್ಟಾದರೆ ತನ್ನ ಶಾಪಾಗ್ನಿಯಿಂದ ಸುಟ್ಟುಬಿಡುತ್ತಾನೆ.”

03095005a ತಂ ತಥಾ ದುಃಖಿತಂ ದೃಷ್ಟ್ವಾ ಸಭಾರ್ಯಂ ಪೃಥಿವೀಪತಿಂ|

03095005c ಲೋಪಾಮುದ್ರಾಭಿಗಮ್ಯೇದಂ ಕಾಲೇ ವಚನಮಬ್ರವೀತ್||

ಈ ರೀತಿ ತನ್ನ ಪತ್ನಿಯೊಂದಿಗೆ ದುಃಖಿತನಾಗಿದ್ದ ರಾಜನನ್ನು ನೋಡಿದ ಲೋಪಾಮುದ್ರೆಯು ಅವರಲ್ಲಿಗೆ ಹೋಗಿ ಸಮಯಕ್ಕೆ ಸರಿಯಾಗಿ ಈ ಮಾತುಗಳನ್ನಾಡಿದಳು:

03095006a ನ ಮತ್ಕೃತೇ ಮಹೀಪಾಲ ಪೀಡಾಮಭ್ಯೇತುಮರ್ಹಸಿ|

03095006c ಪ್ರಯಚ್ಚ ಮಾಮಗಸ್ತ್ಯಾಯ ತ್ರಾಹ್ಯಾತ್ಮಾನಂ ಮಯಾ ಪಿತಃ||

“ಅಪ್ಪಾ! ಮಹೀಪಾಲ! ನನ್ನಿಂದಾಗಿ ಈ ರೀತಿಯ ಪೀಡೆಯನ್ನು ಅನುಭವಿಸುವುದು ಸರಿಯಲ್ಲ. ನನ್ನನ್ನು ಅಗಸ್ತ್ಯನಿಗೆ ಕೊಡು. ಈ ರೀತಿ ನನ್ನಿಂದ ನಿನ್ನನ್ನು ಉಳಿಸಿಕೊಳ್ಳಬಹುದು.”

03095007a ದುಹಿತುರ್ವಚನಾದ್ರಾಜಾ ಸೋಽಗಸ್ತ್ಯಾಯ ಮಹಾತ್ಮನೇ|

03095007c ಲೋಪಾಮುದ್ರಾಂ ತತಃ ಪ್ರಾದಾದ್ವಿಧಿಪೂರ್ವಂ ವಿಶಾಂ ಪತೇ||

ವಿಶಾಂಪತೇ! ತನ್ನ ಮಗಳ ಮಾತಿನಂತೆ ಆ ರಾಜನು ಮಹಾತ್ಮ ಅಗಸ್ತ್ಯನಿಗೆ ಲೋಪಾಮುದ್ರೆಯನ್ನು ವಿಧಿವತ್ತಾಗಿ ಕೊಟ್ಟನು.

03095008a ಪ್ರಾಪ್ಯ ಭಾರ್ಯಾಮಗಸ್ತ್ಯಸ್ತು ಲೋಪಾಮುದ್ರಾಮಭಾಷತ|

03095008c ಮಹಾರ್ಹಾಣ್ಯುತ್ಸೃಜೈತಾನಿ ವಾಸಾಂಸ್ಯಾಭರಣಾನಿ ಚ||

ಹೆಂಡತಿಯನ್ನು ಪಡೆದ ಅಗಸ್ತ್ಯನು ಲೋಪಾಮುದ್ರೆಗೆ ಹೇಳಿದನು: “ಈ ಬೆಲೆಬಾಳುವ ಉಡುಗೆಯನ್ನೂ ಆಭರಣಗಳನ್ನು ತೆಗೆದು ಬಿಸಾಡು!”

03095009a ತತಃ ಸಾ ದರ್ಶನೀಯಾನಿ ಮಹಾರ್ಹಾಣಿ ತನೂನಿ ಚ|

03095009c ಸಮುತ್ಸಸರ್ಜ ರಂಭೋರೂರ್ವಸನಾನ್ಯಾಯತೇಕ್ಷಣಾ||

ಅವುಗಳು ಅತೀವ ಸುಂದರವಾಗಿದ್ದರೂ ಬೆಲೆಬಾಳುವವುಗಳಾಗಿದ್ದರೂ ಆ ರಂಭೋರು, ಉದ್ದ ಕಣ್ಣಿನವಳು ತನ್ನ ಉಡುಗೆತೊಡುಗೆಗಳನ್ನು ಬಿಸುಟಳು.

03095010a ತತಶ್ಚೀರಾಣಿ ಜಗ್ರಾಹ ವಲ್ಕಲಾನ್ಯಜಿನಾನಿ ಚ|

03095010c ಸಮಾನವ್ರತಚರ್ಯಾ ಚ ಬಭೂವಾಯತಲೋಚನಾ||

ಅನಂತರ ಆ ಆಯತಲೋಚನೆಯು ಚೀರಾಣಿಯನ್ನು ತೆಗೆದುಕೊಂಡು ವಲ್ಕಲ ಮತ್ತು ಇತರ ಅಜಿನ ವಸ್ತ್ರಗಳನ್ನು ಉಟ್ಟು ತನ್ನ ಪತಿಯೊಂದಿಗೆ ಸಮಾನ ವ್ರತವನ್ನು ಕೈಗೊಂಡಳು.

03095011a ಗಂಗಾದ್ವಾರಮಥಾಗಮ್ಯ ಭಗವಾನೃಷಿಸತ್ತಮಃ|

03095011c ಉಗ್ರಮಾತಿಷ್ಠತ ತಪಃ ಸಹ ಪತ್ನ್ಯಾನುಕೂಲಯಾ||

ಭಗವಾನ್ ಋಷಿಸತ್ತಮನು ಗಂಗಾದ್ವಾರಕ್ಕೆ ಬಂದು ತನ್ನ ಅನುಕೂಲಗಳನ್ನು ನಡೆಸಿಕೊಡುತ್ತಿದ್ದ ಪತ್ನಿಯೊಂದಿಗೆ ಉಗ್ರತಮ ತಪಸ್ಸನ್ನು ಕೈಗೊಂಡನು.

03095012a ಸಾ ಪ್ರೀತ್ಯಾ ಬಹುಮಾನಾಚ್ಚ ಪತಿಂ ಪರ್ಯಚರತ್ತದಾ|

03095012c ಅಗಸ್ತ್ಯಶ್ಚ ಪರಾಂ ಪ್ರೀತಿಂ ಭಾರ್ಯಾಯಾಮಕರೋತ್ಪ್ರಭುಃ||

ಅವಳು ಪ್ರೀತಿ ಮತ್ತು ಗೌರವಗಳಿಂದ ತನ್ನ ಪತಿಯ ಪರಿಚರಿಯನ್ನು ಮಾಡಿದಳು, ಮತ್ತು ಪ್ರಭು ಅಗಸ್ತ್ಯನು ತನ್ನ ಪತ್ನಿಯಿಂದ ಪರಮ ಪ್ರೀತಿಯನ್ನು ಪಡೆದನು.

03095013a ತತೋ ಬಹುತಿಥೇ ಕಾಲೇ ಲೋಪಾಮುದ್ರಾಂ ವಿಶಾಂ ಪತೇ|

03095013c ತಪಸಾ ದ್ಯೋತಿತಾಂ ಸ್ನಾತಾಂ ದದರ್ಶ ಭಗವಾನೃಷಿಃ||

ವಿಶಾಂಪತೇ! ಬಹಳ ದಿನಗಳ ನಂತರ ಭಗವಾನ್ ಋಷಿಯು ಸ್ನಾನಮಾಡಿದ, ತಪಸ್ಸಿನಿಂದ ಕಾಂತಿಯುಕ್ತಳಾಗಿದ್ದ ಲೋಪಾಮುದ್ರೆಯನ್ನು ನೋಡಿದನು.

03095014a ಸ ತಸ್ಯಾಃ ಪರಿಚಾರೇಣ ಶೌಚೇನ ಚ ದಮೇನ ಚ|

03095014c ಶ್ರಿಯಾ ರೂಪೇಣ ಚ ಪ್ರೀತೋ ಮೈಥುನಾಯಾಜುಹಾವ ತಾಂ||

ಅವಳ ಶೌಚ, ದಮ, ಪರಿಚಾರಿಕೆ, ರೂಪ ಮತ್ತು ಗುಣಗಳಿಂದ ಪ್ರೀತನಾಗಿ ಅವಳನ್ನು ಸಂಭೋಗಕ್ಕೆ ಕರೆದನು.

03095015a ತತಃ ಸಾ ಪ್ರಾಂಜಲಿರ್ಭೂತ್ವಾ ಲಜ್ಜಮಾನೇವ ಭಾಮಿನೀ|

03095015c ತದಾ ಸಪ್ರಣಯಂ ವಾಕ್ಯಂ ಭಗವಂತಮಥಾಬ್ರವೀತ್||

ಆಗ ಆ ಭಾಮಿನಿಯು ಅಂಜಲೀ ಬದ್ಧಳಾಗಿ, ನಾಚಿಕೊಂಡು, ಆ ಭಗವಂತನಲ್ಲಿ ಈ ಸಪ್ರಣಯ ಮಾತುಗಳನ್ನಾಡಿದಳು:

03095016a ಅಸಂಶಯಂ ಪ್ರಜಾಹೇತೋರ್ಭಾರ್ಯಾಂ ಪತಿರವಿಂದತ|

03095016c ಯಾ ತು ತ್ವಯಿ ಮಮ ಪ್ರೀತಿಸ್ತಾಮೃಷೇ ಕರ್ತುಮರ್ಹಸಿ||

03095017a ಯಥಾ ಪಿತುರ್ಗೃಹೇ ವಿಪ್ರ ಪ್ರಾಸಾದೇ ಶಯನಂ ಮಮ|

03095017c ತಥಾವಿಧೇ ತ್ವಂ ಶಯನೇ ಮಾಮುಪೈತುಮಿಹಾರ್ಹಸಿ||

“ಮಕ್ಕಳಿಗೋಸ್ಕರ ಪತಿಯು ಪತ್ನಿಯನ್ನು ಮಾಡಿಕೊಳ್ಳುತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಋಷೇ! ನನ್ನಿಂದ ನಿನಗೆ ದೊರೆಯುವ ಸುಖವನ್ನು ನನಗೂ ನೀನು ನೀಡಬೇಕು. ವಿಪ್ರ! ನನ್ನ ತಂದೆಯ ಮನೆಯಲ್ಲಿ ಅಂತಃಪುರದಲ್ಲಿ ಯಾವರೀತಿಯ ಹಾಸಿಗೆಯಿತ್ತೋ ಅದೇ ರೀತಿಯ ಹಾಸಿಗೆಯ ಮೇಲೆ ನನ್ನೊಡನೆ ಮಲಗಬೇಕು.

03095018a ಇಚ್ಚಾಮಿ ತ್ವಾಂ ಸ್ರಗ್ವಿಣಂ ಚ ಭೂಷಣೈಶ್ಚ ವಿಭೂಷಿತಂ|

03095018c ಉಪಸರ್ತುಂ ಯಥಾಕಾಮಂ ದಿವ್ಯಾಭರಣಭೂಷಿತಾ||

ನನಗಿಷ್ಟವಾದ ದಿವ್ಯಾಭರಣಗಳಿಂದ ನಾನು ಅಲಂಕರಿಸಿಕೊಳ್ಳುವ ಹಾಗೆ ನೀನೂ ಕೂಡ ಮಾಲೆ ಮತ್ತು ಭೂಷಣಗಳಿಂದ ವಿಭೂಷಿತನಾಗಿ ಬರಬೇಕೆಂದು ಬಯಸುತ್ತೇನೆ.”

03095019 ಅಗಸ್ತ್ಯ ಉವಾಚ|

03095019a ನ ವೈ ಧನಾನಿ ವಿದ್ಯಂತೇ ಲೋಪಾಮುದ್ರೇ ತಥಾ ಮಮ|

03095019c ಯಥಾವಿಧಾನಿ ಕಲ್ಯಾಣಿ ಪಿತುಸ್ತವ ಸುಮಧ್ಯಮೇ||

ಅಗಸ್ತ್ಯನು ಹೇಳಿದನು: “ಸುಮಧ್ಯಮೇ! ಲೋಪಾಮುದ್ರಾ! ಕಲ್ಯಾಣಿ! ಆದರೆ ನಿನ್ನ ತಂದೆಯಲ್ಲಿ ಇರುವ ಹಾಗಿನ ಧನವು ನನ್ನಲ್ಲಿ ಇಲ್ಲವಲ್ಲ!”

03095020 ಲೋಪಾಮುದ್ರೋವಾಚ

03095020a ಈಶೋಽಸಿ ತಪಸಾ ಸರ್ವಂ ಸಮಾಹರ್ತುಮಿಹೇಶ್ವರ|

03095020c ಕ್ಷಣೇನ ಜೀವಲೋಕೇ ಯದ್ವಸು ಕಿಂ ಚನ ವಿದ್ಯತೇ||

ಲೋಪಾಮುದ್ರೆಯು ಹೇಳಿದಳು: “ಮಹೇಶ್ರರ! ನಿನ್ನ ತಪಸ್ಸಿನ ಶಕ್ತಿಯಿಂದ ಈ ಜೀವಲೋಕದಲ್ಲಿರುವ ಯಾವುದನ್ನಾಗಲೀ ನೀನು ಒಂದೇ ಕ್ಷಣದಲ್ಲಿ ಪಡೆದುಕೊಳ್ಳಬಹುದು.”

03095021 ಅಗಸ್ತ್ಯ ಉವಾಚ|

03095021a ಏವಮೇತದ್ಯಥಾತ್ಥ ತ್ವಂ ತಪೋವ್ಯಯಕರಂ ತು ಮೇ|

03095021c ಯಥಾ ತು ಮೇ ನ ನಶ್ಯೇತ ತಪಸ್ತನ್ಮಾಂ ಪ್ರಚೋದಯ||

ಅಗಸ್ತ್ಯನು ಹೇಳಿದನು: “ನೀನು ಹೇಳಿದಂತೆ ಮಾಡಿದರೆ ನನ್ನ ತಪೋಶಕ್ತಿಯ ವ್ಯಯವಾಗುತ್ತದೆ. ನನ್ನ ತಪೋಶಕ್ತಿಯು ನಾಶವಾಗದಂತೆ ನನ್ನಲ್ಲಿ ಕೇಳಿಕೋ.”

03095022 ಲೋಪಾಮುದ್ರೋವಾಚ|

03095022a ಅಲ್ಪಾವಶಿಷ್ಟಃ ಕಾಲೋಽಯಮೃತೌ ಮಮ ತಪೋಧನ|

03095022c ನ ಚಾನ್ಯಥಾಹಮಿಚ್ಚಾಮಿ ತ್ವಾಮುಪೈತುಂ ಕಥಂ ಚನ||

ಲೋಪಾಮುದ್ರೆಯು ಹೇಳಿದಳು: “ತಪೋಧನ! ನನ್ನ ಋತುವಿನ ಸ್ವಲ್ಪವೇ ಸಮಯ ಉಳಿದಿದೆ. ಅನ್ಯಥಾ ನಾನು ನಿನ್ನೊಡನೆ ಸಂಭೋಗ ಮಾಡಲು ಬಯಸುವುದಿಲ್ಲ.

03095023a ನ ಚಾಪಿ ಧರ್ಮಮಿಚ್ಚಾಮಿ ವಿಲೋಪ್ತುಂ ತೇ ತಪೋಧನ|

03095023c ಏತತ್ತು ಮೇ ಯಥಾಕಾಮಂ ಸಂಪಾದಯಿತುಮರ್ಹಸಿ||

ತಪೋಧನ! ನಾನು ನಿನ್ನನ್ನು ಧರ್ಮಭ್ರಷ್ಟನನ್ನಾಗಿ ಮಾಡಲೂ ಬಯಸುವುದಿಲ್ಲ. ನಾನು ಬಯಸಿದಂತೆ ಇವುಗಳನ್ನು ನೀನು ಸಂಪಾದಿಸಬೇಕು.”

03095024 ಅಗಸ್ತ್ಯ ಉವಾಚ|

03095024a ಯದ್ಯೇಷ ಕಾಮಃ ಸುಭಗೇ ತವ ಬುದ್ಧ್ಯಾ ವಿನಿಶ್ಚಿತಃ|

03095024c ಹಂತ ಗಚ್ಚಾಮ್ಯಹಂ ಭದ್ರೇ ಚರ ಕಾಮಮಿಹ ಸ್ಥಿತಾ||

ಅಗಸ್ತ್ಯನು ಹೇಳಿದನು: “ಸುಭಗೇ! ನಿನ್ನ ಬುದ್ಧಿಯು ನಿಶ್ಚಯಿಸಿದಂತೆಯೇ ನೀನು ಬಯಸಿದ್ದೀಯೆ. ಆಗಲಿ. ಭದ್ರೇ! ನಾನು ಹೋಗುತ್ತೇನೆ. ನೀನು ಇಲ್ಲಿ ನಿನಗಿಷ್ಟವಾದ ಹಾಗೆ ಇರು.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಪಂಚನವತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೈದನೆಯ ಅಧ್ಯಾಯವು.

Related image

Comments are closed.