Aranyaka Parva: Chapter 93

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೯೩

ಪಾಂಡವರು ನೈಮಿಷಾರಣ್ಯಕ್ಕೆ ಹೋದುದು (೧-೨೭).

03093001 ವೈಶಂಪಾಯನ ಉವಾಚ|

03093001a ತೇ ತಥಾ ಸಹಿತಾ ವೀರಾ ವಸಂತಸ್ತತ್ರ ತತ್ರ ಹ|

03093001c ಕ್ರಮೇಣ ಪೃಥಿವೀಪಾಲ ನೈಮಿಷಾರಣ್ಯಮಾಗತಾಃ||

ವೈಶಂಪಾಯನನು ಹೇಳಿದನು: “ಪೃಥಿವೀಪಾಲ! ಹೀಗೆ ಅವರೊಂದಿಗೆ ಆ ವೀರರು ಅಲ್ಲಿ ಇಲ್ಲಿ ಉಳಿದುಕೊಳ್ಳುತ್ತಾ ಕ್ರಮೇಣ ನೈಮಿಷಾರಣ್ಯಕ್ಕೆ ಆಗಮಿಸಿದರು.

03093002a ತತಸ್ತೀರ್ಥೇಷು ಪುಣ್ಯೇಷು ಗೋಮತ್ಯಾಃ ಪಾಂಡವಾ ನೃಪ|

03093002c ಕೃತಾಭಿಷೇಕಾಃ ಪ್ರದದುರ್ಗಾಶ್ಚ ವಿತ್ತಂ ಚ ಭಾರತ||

ನೃಪ! ಭರತ! ಅಲ್ಲಿ ಗೋಮತಿ ತೀರ್ಥದಲ್ಲಿ ಪಾಂಡವರು ಸ್ನಾನಮಾಡಿ ಗೋವುಗಳನ್ನೂ ಧನವನ್ನೂ ದಾನವಾಗಿತ್ತರು.

03093003a ತತ್ರ ದೇವಾನ್ಪಿತೄನ್ವಿಪ್ರಾಂಸ್ತರ್ಪಯಿತ್ವಾ ಪುನಃ ಪುನಃ|

03093003c ಕನ್ಯಾತೀರ್ಥೇಽಶ್ವತೀರ್ಥೇ ಚ ಗವಾಂ ತೀರ್ಥೇ ಚ ಕೌರವಾಃ||

ಅಲ್ಲಿ ಕನ್ಯಾತೀರ್ಥ, ಅಶ್ವತೀರ್ಥ ಮತ್ತು ಗೋತೀರ್ಥಗಳಲ್ಲಿ ಕೌರವರು ದೇವತೆಗಳಿಗೂ, ಪಿತೃಗಳಿಗೂ ಮತ್ತು ವಿಪ್ರರಿಗೂ ಪುನಃ ಪುನಃ ತರ್ಪಣಗಳನ್ನಿತ್ತರು.

03093004a ವಾಲಕೋಟ್ಯಾಂ ವೃಷಪ್ರಸ್ಥೇ ಗಿರಾವುಷ್ಯ ಚ ಪಾಂಡವಾಃ|

03093004c ಬಾಹುದಾಯಾಂ ಮಹೀಪಾಲ ಚಕ್ರುಃ ಸರ್ವೇಽಭಿಷೇಚನಂ||

ಮಹೀಪಾಲ! ವೃಷಪ್ರಸ್ಥಗಿರಿಯ ವಾಲಕೋಟಿಯಲ್ಲಿ ಒಂದು ರಾತ್ರಿಯನ್ನು ಕಳೆದು ಪಾಂಡವರು ಎಲ್ಲರೂ ಬಾಹುದದಲ್ಲಿ ಸ್ನಾನಮಾಡಿದರು.

03093005a ಪ್ರಯಾಗೇ ದೇವಯಜನೇ ದೇವಾನಾಂ ಪೃಥಿವೀಪತೇ|

03093005c ಊಷುರಾಪ್ಲುತ್ಯ ಗಾತ್ರಾಣಿ ತಪಶ್ಚಾತಸ್ಥುರುತ್ತಮಂ||

ಪೃಥಿವೀಪತೇ! ದೇವತೆಗಳ ಯಾಗಕ್ಷೇತ್ರ ಪ್ರಯಾಗದಲ್ಲಿ ಕೈಕಾಲುಗಳನ್ನು ತೊಳೆದು ಉತ್ತಮ ತಪಶ್ಚರ್ಯಕ್ಕೆ ಕುಳಿತುಕೊಂಡರು.

03093006a ಗಂಗಾಯಮುನಯೋಶ್ಚೈವ ಸಂಗಮೇ ಸತ್ಯಸಂಗರಾಃ|

03093006c ವಿಪಾಪ್ಮಾನೋ ಮಹಾತ್ಮಾನೋ ವಿಪ್ರೇಭ್ಯಃ ಪ್ರದದುರ್ವಸು||

ಸತ್ಯಸಂಗರರಾಗಿ ಶುದ್ಧಮನಸ್ಕರಾಗಿ ಗಂಗಾ ಮತ್ತು ಯಮುನೆಯರ ಸಂಗಮದಲ್ಲಿ ಆ ಮಹಾತ್ಮರು ವಿಪ್ರರಿಗೆ ಸಂಪತ್ತನ್ನು ದಾನವನ್ನಾಗಿತ್ತರು.

03093007a ತಪಸ್ವಿಜನಜುಷ್ಟಾಂ ಚ ತತೋ ವೇದೀಂ ಪ್ರಜಾಪತೇಃ|

03093007c ಜಗ್ಮುಃ ಪಾಂಡುಸುತಾ ರಾಜನ್ಬ್ರಾಹ್ಮಣೈಃ ಸಹ ಭಾರತ||

ಭಾರತ! ರಾಜನ್! ಅನಂತರ ಪಾಂಡುಸುತರು ಬ್ರಾಹ್ಮಣರೊಂದಿಗೆ ತಪಸ್ವಿಗಳು ಭೇಟಿಕೊಡುವ ಪ್ರಜಾಪತಿಯ ವೇದಿಕೆಗೆ ಹೋದರು.

03093008a ತತ್ರ ತೇ ನ್ಯವಸನ್ವೀರಾಸ್ತಪಶ್ಚಾತಸ್ಥುರುತ್ತಮಂ|

03093008c ಸಂತರ್ಪಯಂತಃ ಸತತಂ ವನ್ಯೇನ ಹವಿಷಾ ದ್ವಿಜಾನ್||

ಅಲ್ಲಿ ವೀರರು, ಉತ್ತಮ ತಪಸ್ಸನ್ನಾಚರಿಸುತ್ತಾ ಸತತವೂ ದ್ವಿಜರನ್ನು ವನೋತ್ಮತ್ತಿಗಳಿಂದ ತೃಪ್ತಿಗೊಳಿಸುತ್ತಾ ಉಳಿದುಕೊಂಡರು.

03093009a ತತೋ ಮಹೀಧರಂ ಜಗ್ಮುರ್ಧರ್ಮಜ್ಞೇನಾಭಿಸತ್ಕೃತಂ|

03093009c ರಾಜರ್ಷಿಣಾ ಪುಣ್ಯಕೃತಾ ಗಯೇನಾನುಪಮದ್ಯುತೇ||

03093010a ಸರೋ ಗಯಶಿರೋ ಯತ್ರ ಪುಣ್ಯಾ ಚೈವ ಮಹಾನದೀ|

03093010c ಋಷಿಜುಷ್ಟಂ ಸುಪುಣ್ಯಂ ತತ್ತೀರ್ಥಂ ಬ್ರಹ್ಮಸರೋತ್ತಮಂ||

ಅಲ್ಲಿಂದ ಅವರು ಧರ್ಮಜ್ಞ, ಪುಣ್ಯಕೃತ ರಾಜರ್ಷಿಗಳಿಂದ ಸತ್ಕೃತ, ಸರಿಸಾಟಿಯಿಲ್ಲದೇ ಬೆಳಗುತ್ತಿದ್ದ ಗಯವನ್ನು ಸೇರಿದರು. ಅಲ್ಲಿ ಗಯಶಿರ ಸರೋವರವಿದೆ ಮತ್ತು ಇಲ್ಲಿಂದ ಪುಣ್ಯ ಮಹಾನದಿಯು ಹರಿಯುತ್ತದೆ. ಇಲ್ಲಿಯೇ ಋಷಿಗಳಿಗೆ ಪ್ರಿಯವಾದ ಸುಪುಣ್ಯ ಉತ್ತಮ ಬ್ರಹ್ಮಸರೋವರ ತೀರ್ಥವೂ ಇದೆ.

03093011a ಅಗಸ್ತ್ಯೋ ಭಗವಾನ್ಯತ್ರ ಗತೋ ವೈವಸ್ವತಂ ಪ್ರತಿ|

03093011c ಉವಾಸ ಚ ಸ್ವಯಂ ಯತ್ರ ಧರ್ಮೋ ರಾಜನ್ಸನಾತನಃ||

ರಾಜನ್! ಇಲ್ಲಿಯೇ ಸನಾತನ ಧರ್ಮನು ಸ್ವಯಂ ವಾಸಿಸುತ್ತಿದ್ದ ಮತ್ತು ಭಗವಾನ್ ಅಗಸ್ತ್ಯನು ವೈವಸ್ವತನ ಬಳಿ ಹೋಗಿದ್ದ.

03093012a ಸರ್ವಾಸಾಂ ಸರಿತಾಂ ಚೈವ ಸಮುದ್ಭೇದೋ ವಿಶಾಂ ಪತೇ|

03093012c ಯತ್ರ ಸನ್ನಿಹಿತೋ ನಿತ್ಯಂ ಮಹಾದೇವಃ ಪಿನಾಕಧೃಕ್||

ವಿಶಾಂಪತೇ! ಅಲ್ಲಿ ಮಹಾದೇವ ಪಿನಾಕಧೃತನು ನಿತ್ಯವೂ ಸನ್ನಿಹಿತನಾಗಿರುತ್ತಾನೆ ಮತ್ತು ಅಲ್ಲಿಂದಲೇ ಸರ್ವ ನದಿಗಳು ಉದ್ಭವವಾಗುತ್ತವೆ.

03093013a ತತ್ರ ತೇ ಪಾಂಡವಾ ವೀರಾಶ್ಚಾತುರ್ಮಾಸ್ಯೈಸ್ತದೇಜಿರೇ|

03093013c ಋಷಿಯಜ್ಞೇನ ಮಹತಾ ಯತ್ರಾಕ್ಷಯವಟೋ ಮಹಾನ್||

ಅಲ್ಲಿ ವೀರ ಪಾಂಡವರು, ಮಹಾ ಅಕ್ಷಯವಟದ ಬಳಿ ಋಷಿಗಳ ಮಹಾ ಚಾತುರ್ಮಾಸ ಯಜ್ಞವನ್ನು ನಡೆಸಿದರು

03093014a ಬ್ರಾಹ್ಮಣಾಸ್ತತ್ರ ಶತಶಃ ಸಮಾಜಗ್ಮುಸ್ತಪೋಧನಾಃ|

03093014c ಚಾತುರ್ಮಾಸ್ಯೇನಾಯಜಂತ ಆರ್ಷೇಣ ವಿಧಿನಾ ತದಾ||

ನೂರಾರು ಬ್ರಾಹ್ಮಣರು ಅಲ್ಲಿ ನೆರೆದರು ಮತ್ತು ತಪೋಧನರು ಅಲ್ಲಿಗೆ ಬಂದು ಸೇರಿದರು. ಅಲ್ಲಿ ಆರ್ಯ ವಿಧಿಯಂತೆ ಚಾತುರ್ಮಾಸ ಯಾಗವನ್ನು ನೆರೆವೇರಿಸಲಾಯಿತು.

03093015a ತತ್ರ ವಿದ್ಯಾತಪೋನಿತ್ಯಾ ಬ್ರಾಹ್ಮಣಾ ವೇದಪಾರಗಾಃ|

03093015c ಕಥಾಃ ಪ್ರಚಕ್ರಿರೇ ಪುಣ್ಯಾಃ ಸದಸಿಸ್ಥಾ ಮಹಾತ್ಮನಾಂ||

ಅಲ್ಲಿ ವಿದ್ಯೆ ಮತ್ತು ತಪಸ್ಸಿನಲ್ಲಿ ನಿರತ ವೇದಪಾರಂಗತ ಮಹಾತ್ಮ ಬ್ರಾಹ್ಮಣರ ಆ ಸಭೆಯಲ್ಲಿ ಪುಣ್ಯ ಕಥೆಗಳನ್ನು ಹೇಳುತ್ತಿದ್ದರು.

03093016a ತತ್ರ ವಿದ್ಯಾವ್ರತಸ್ನಾತಃ ಕೌಮಾರಂ ವ್ರತಮಾಸ್ಥಿತಃ|

03093016c ಶಮಠೋಽಕಥಯದ್ರಾಜನ್ನಾಮೂರ್ತರಯಸಂ ಗಯಂ||

ರಾಜನ್! ಅಲ್ಲಿಯೇ ಇದ್ದ ವಿದ್ಯಾವ್ರತ ಸ್ನಾತಕ ಕುಮಾರ ವ್ರತಸ್ಥಿತ ಶಮಠ ಎನ್ನುವವನು ಗಯ ಅಮೂರ್ತರಯಸನ ಕಥೆಯನ್ನು ಹೇಳಿದನು.

03093017a ಅಮೂರ್ತರಯಸಃ ಪುತ್ರೋ ಗಯೋ ರಾಜರ್ಷಿಸತ್ತಮಃ|

03093017c ಪುಣ್ಯಾನಿ ಯಸ್ಯ ಕರ್ಮಾಣಿ ತಾನಿ ಮೇ ಶೃಣು ಭಾರತ||

“ಭಾರತ! ರಾಜರ್ಷಿಸತ್ತಮ ಅಮೂರ್ತರಯಸನ ಮಗ ಗಯನ ಪುಣ್ಯಕರ್ಮಗಳ ಕುರಿತು ನನ್ನಿಂದ ಕೇಳು.

03093018a ಯಸ್ಯ ಯಜ್ಞೋ ಬಭೂವೇಹ ಬಹ್ವನ್ನೋ ಬಹುದಕ್ಷಿಣಃ|

03093018c ಯತ್ರಾನ್ನಪರ್ವತಾ ರಾಜಂ ಶತಶೋಽಥ ಸಹಸ್ರಶಃ||

03093019a ಘೃತಕುಲ್ಯಾಶ್ಚ ದಧ್ನಶ್ಚ ನದ್ಯೋ ಬಹುಶತಾಸ್ತಥಾ|

03093019c ವ್ಯಂಜನಾನಾಂ ಪ್ರವಾಹಾಶ್ಚ ಮಹಾರ್ಹಾಣಾಂ ಸಹಸ್ರಶಃ||

ಅವನು ಬಹು ಭೋಜನ ಮತ್ತು ಬಹು ದಕ್ಷಿಣೆಗಳ ಯಾಗವೊಂದನ್ನು ನಡೆಸಿದ್ದನು. ರಾಜನ್! ಆ ಯಾಗದಲ್ಲಿ ನೂರಾರು ಸಹಸ್ರಾರು ಪರ್ವತಗಳಂಥಹ ಅನ್ನದ ರಾಶಿಗಳಿದ್ದವು. ನದಿಗಳಂತೆ ತುಪ್ಪದ ಹೊಳೆಯೇ ಹರಿದಿತ್ತು. ಮಹಾ ಬೆಲೆಬಾಳುವ ಪದಾರ್ಥಗಳ ಸಹಸ್ರಾರು ಪ್ರವಾಹಗಳೇ ಹರಿದಿದ್ದವು.

03093020a ಅಹನ್ಯಹನಿ ಚಾಪ್ಯೇತದ್ಯಾಚತಾಂ ಸಂಪ್ರದೀಯತೇ|

03093020c ಅನ್ಯತ್ತು ಬ್ರಾಹ್ಮಣಾ ರಾಜನ್ಭುಂಜತೇಽನ್ನಂ ಸುಸಂಸ್ಕೃತಂ||

ರಾಜನ್! ಪ್ರತಿದಿನವೂ ಕೇಳಿದವರಿಗೆಲ್ಲ ಆಹಾರವು ದೊರೆಯುತ್ತಿತ್ತು ಮತ್ತು ಬ್ರಾಹ್ಮಣರು ಬೇರೆ ಬೇರೆ ಸುಸಂಕೃತ ಆಹಾರವನ್ನು ಭುಂಜಿಸಿದರು.

03093021a ತತ್ರ ವೈ ದಕ್ಷಿಣಾಕಾಲೇ ಬ್ರಹ್ಮಘೋಷೋ ದಿವಂ ಗತಃ|

03093021c ನ ಸ್ಮ ಪ್ರಜ್ಞಾಯತೇ ಕಿಂ ಚಿದ್ಬ್ರಹ್ಮಶಬ್ಧೇನ ಭಾರತ||

ಭಾರತ! ದಕ್ಷಿಣೆಯನ್ನು ನೀಡುವ ಕಾಲದಲ್ಲಿ ಬ್ರಾಹ್ಮಣರ ಘೋಷವು ಸ್ವರ್ಗವನ್ನೂ ಸೇರಿತ್ತು ಮತ್ತು ಬ್ರಾಹ್ಮಣರ ಶಬ್ಧದ ಹೊರತಾಗಿ ಬೇರೆ ಏನೂ ಕೇಳಿಬರುತ್ತಿರಲಿಲ್ಲ.

03093022a ಪುಣ್ಯೇನ ಚರತಾ ರಾಜನ್ಭೂರ್ದಿಶಃ ಖಂ ನಭಸ್ತಥಾ|

03093022c ಆಪೂರ್ಣಮಾಸೀಚ್ಛಬ್ಧೇನ ತದಪ್ಯಾಸೀನ್ಮಹಾದ್ಭುತಂ||

ರಾಜನ್! ಭೂಮಿ, ಆಕಾಶ, ನಭ ಮತ್ತು ಸ್ವರ್ಗಗಳು ಆ ಪುಣ್ಯರ ನಡುಗೆಯ ಧ್ವನಿಯಿಂದ ತುಂಬಿಹೋಗಿತ್ತು. ಅಂದೊಂದು ಮಹಾ ಅದ್ಭುತದಂತೆ ತೋರುತ್ತಿತ್ತು.

03093023a ತತ್ರ ಸ್ಮ ಗಾಥಾ ಗಾಯಂತಿ ಮನುಷ್ಯಾ ಭರತರ್ಷಭ|

03093023c ಅನ್ನಪಾನೈಃ ಶುಭೈಸ್ತೃಪ್ತಾ ದೇಶೇ ದೇಶೇ ಸುವರ್ಚಸಃ||

ಭರತರ್ಷಭ! ಅಲ್ಲಿಗೆ ದೇಶದೇಶಗಳಿಂದ ಬಂದಿದ್ದ ಸುವರ್ಚಸ ಮನುಷ್ಯರು ಶುಭ ಅನ್ನಪಾನಗಳಿಂದ ತೃಪ್ತರಾಗಿ ಹಾಡನ್ನು ಹಾಡಿದರು.

03093024a ಗಯಸ್ಯ ಯಜ್ಞೇ ಕೇ ತ್ವದ್ಯ ಪ್ರಾಣಿನೋ ಭೋಕ್ತುಮೀಪ್ಸವಃ|

03093024c ಯತ್ರ ಭೋಜನಶಿಷ್ಟಸ್ಯ ಪರ್ವತಾಃ ಪಂಚವಿಂಶತಿಃ||

“ಗಯನ ಯಜ್ಞದಲ್ಲಿ ಇನ್ನೂ ಊಟಮಾಡುವ ಪ್ರಾಣಿಗಳು ಯಾರಿದ್ದಾರೆ? ಅಲ್ಲಿ ಇಪ್ಪತ್ತೈದು ಪರ್ವತಗಳಷ್ಟು ಭೋಜನವು ಉಳಿದಿದೆ!

03093025a ನ ಸ್ಮ ಪೂರ್ವೇ ಜನಾಶ್ಚಕ್ರುರ್ನ ಕರಿಷ್ಯಂತಿ ಚಾಪರೇ|

03093025c ಗಯೋ ಯದಕರೋದ್ಯಜ್ಞೇ ರಾಜರ್ಷಿರಮಿತದ್ಯುತಿಃ||

ಇದಕ್ಕೂ ಮೊದಲು ಯಾರೂ ರಾಜರ್ಷಿ ಅಮಿತದ್ಯುತಿ ಗಯನು ಮಾಡಿದ ಯಜ್ಞದಂಥಹ ಯಾಗವನ್ನು ಮಾಡಿಲ್ಲ ಮುಂದೆ ಮಾಡುವವರೂ ಇಲ್ಲ.

03093026a ಕಥಂ ನು ದೇವಾ ಹವಿಷಾ ಗಯೇನ ಪರಿತರ್ಪಿತಾಃ|

03093026c ಪುನಃ ಶಕ್ಷ್ಯಂತ್ಯುಪಾದಾತುಮನ್ಯೈರ್ದತ್ತಾನಿ ಕಾನಿ ಚಿತ್||

ಗಯನ ಹವಿಸ್ಸಿನಿಂದ ಪರಿತರ್ಪಿತರಾದ ದೇವತೆಗಳಾದರೂ ಪುನಃ ಬೇರೆ ಯಾರಿಂದಲೂ ಕೊಡಲ್ಪಟ್ಟ ಹವಿಸ್ಸನ್ನು ಹೇಗೆ ಸ್ವೀಕರಿಸುತ್ತಾರೆ?”

03093027a ಏವಂವಿಧಾಃ ಸುಬಹವಸ್ತಸ್ಯ ಯಜ್ಞೇ ಮಹಾತ್ಮನಃ|

03093027c ಬಭೂವುರಸ್ಯ ಸರಸಃ ಸಮೀಪೇ ಕುರುನಂದನ||

ಕುರುನಂದನ! ಈ ಸರೋವರದ ಪಕ್ಕದಲ್ಲಿಯೇ ನಡೆದಿದ್ದ ಆ ಮಹಾತ್ಮನ ಯಜ್ಞದಲ್ಲಿ ಈ ರೀತಿ ಬಹಳಷ್ಟು ತರಹದ ಗೀತೆಗಳನ್ನು ಹಾಡುತ್ತಿದ್ದರು.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ತ್ರಿನವತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ಮೂರನೆಯ ಅಧ್ಯಾಯವು.

Related image

Comments are closed.