Aranyaka Parva: Chapter 91

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೯೧

ಉಳಿದುಕೊಂಡ ಕೆಲವು ಬ್ರಾಹ್ಮಣರು ತಮ್ಮನ್ನೂ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಬೇಕೆಂದು ಕೇಳಿಕೊಳ್ಳಲು ಯುಧಿಷ್ಠಿರನು ಒಪ್ಪಿಕೊಂಡಿದುದು (೧-೧೫). ತೀರ್ಥಯಾತ್ರೆಗೆ ಸಿದ್ಧತೆಗಳು ನಡೆಯುತ್ತಿರುವಾಗ ವ್ಯಾಸ, ನಾರದ-ಪರ್ವತರು ಬಂದು ತೀರ್ಥಯಾತ್ರೆ ಮಾಡುವಾಗ ಶರೀರ ನಿಯಮ, ಮನಸ್ಸು ಮತ್ತು ಬುದ್ಧಿಯ ಶುದ್ಧತೆಗಳ ಕುರಿತು ಹೇಳುವುದು; ಪ್ರಯಾಣ (೧೬-೨೮).

03091001 ವೈಶಂಪಾಯನ ಉವಾಚ|

03091001a ತತಃ ಪ್ರಯಾಂತಂ ಕೌಂತೇಯಂ ಬ್ರಾಹ್ಮಣಾ ವನವಾಸಿನಃ|

03091001c ಅಭಿಗಮ್ಯ ತದಾ ರಾಜನ್ನಿದಂ ವಚನಮಬ್ರುವನ್||

ವೈಶಂಪಾಯನನು ಹೇಳಿದನು: “ರಾಜನ್! ವನವಾಸಿ ಬ್ರಾಹ್ಮಣರು ಪ್ರಯಾಣಕ್ಕೆ ಹೊರಡುತ್ತಿದ್ದ ಕೌಂತೇಯನ ಬಳಿ ಬಂದು ಈ ಮಾತುಗಳನ್ನಾಡಿದರು:

03091002a ರಾಜಂಸ್ತೀರ್ಥಾನಿ ಗಂತಾಸಿ ಪುಣ್ಯಾನಿ ಭ್ರಾತೃಭಿಃ ಸಹ|

03091002c ದೇವರ್ಷಿಣಾ ಚ ಸಹಿತೋ ಲೋಮಶೇನ ಮಹಾತ್ಮನಾ||

“ರಾಜನ್! ನೀನು ನಿನ್ನ ಸಹೋದರರೊಂದಿಗೆ ಮತ್ತು ದೇವರ್ಷಿ ಮಹಾತ್ಮ ಲೋಮಶನ ಸಹಿತ ಪುಣ್ಯತೀರ್ಥಗಳಿಗೆ ಹೋಗುತ್ತಿದ್ದೀಯೆ.

03091003a ಅಸ್ಮಾನಪಿ ಮಹಾರಾಜ ನೇತುಮರ್ಹಸಿ ಪಾಂಡವ|

03091003c ಅಸ್ಮಾಭಿರ್ಹಿ ನ ಶಕ್ಯಾನಿ ತ್ವದೃತೇ ತಾನಿ ಕೌರವ||

ಮಹಾರಾಜ! ಪಾಂಡವ! ಕೌರವ! ನಮ್ಮನ್ನು ಕೂಡ ಕರೆದುಕೊಂಡು ಹೋಗು. ನಿನ್ನ ಸಹಾಯವಿಲ್ಲದೇ ನಾವಾಗಿಯೇ ಆ ಪುಣ್ಯತೀರ್ಥಗಳಿಗೆ ಹೋಗಲು ಶಕ್ಯರಿಲ್ಲ.

03091004a ಶ್ವಾಪದೈರುಪಸೃಷ್ಟಾನಿ ದುರ್ಗಾಣಿ ವಿಷಮಾಣಿ ಚ|

03091004c ಅಗಮ್ಯಾನಿ ನರೈರಲ್ಪೈಸ್ತೀರ್ಥಾನಿ ಮನುಜೇಶ್ವರ||

ಮನುಜೇಶ್ವರ! ಆ ದುರ್ಗ ವಿಷಮ ಪ್ರದೇಶಗಳು ಘೋರಮೃಗಗಳಿಂದ ಕೂಡಿವೆ ಮತ್ತು ಆ ತೀರ್ಥಗಳನ್ನು ಪ್ರಯಾಣಿಕರ ಸಣ್ಣ ಗುಂಪು ತಲುಪಲು ಸಾಧ್ಯವಿಲ್ಲ.

03091005a ಭವಂತೋ ಭ್ರಾತರಃ ಶೂರಾ ಧನುರ್ಧರವರಾಃ ಸದಾ|

03091005c ಭವದ್ಭಿಃ ಪಾಲಿತಾಃ ಶೂರೈರ್ಗಚ್ಚೇಮ ವಯಮಪ್ಯುತ||

ನಿನ್ನ ಸಹೋದರರು ಶೂರರೂ ಧನುರ್ಧರರಲ್ಲಿ ಶ್ರೇಷ್ಠರೂ ಆಗಿದ್ದಾರೆ. ಶೂರರಾದ ನಿಮ್ಮಿಂದ ಸದಾ ರಕ್ಷಿತರಾಗಿ ನಾವೂ ಕೂಡ ಆ ಪ್ರದೇಶಗಳಿಗೆ ಹೋಗಬಹುದು.

03091006a ಭವತ್ಪ್ರಸಾದಾದ್ಧಿ ವಯಂ ಪ್ರಾಪ್ನುಯಾಮ ಫಲಂ ಶುಭಂ|

03091006c ತೀರ್ಥಾನಾಂ ಪೃಥಿವೀಪಾಲ ವ್ರತಾನಾಂ ಚ ವಿಶಾಂ ಪತೇ||

ವಿಶಾಂಪತೇ! ಪೃಥಿವೀಪಾಲ! ನಿನ್ನ ಕರುಣೆಯಿಂದ ನಾವು ತೀರ್ಥಯಾತ್ರಾ ವ್ರತದ ಶುಭ ಫಲವನ್ನು ಪಡೆಯಬಹುದು.

03091007a ತವ ವೀರ್ಯಪರಿತ್ರಾತಾಃ ಶುದ್ಧಾಸ್ತೀರ್ಥಪರಿಪ್ಲುತಾಃ|

03091007c ಭವೇಮ ಧೂತಪಾಪ್ಮಾನಸ್ತೀರ್ಥಸಂದರ್ಶನಾನ್ನೃಪ||

ನೃಪ! ನಿನ್ನ ವೀರ್ಯದಿಂದ ಪರಿರಕ್ಷಿತರಾದ ನಾವು ಆ ತೀರ್ಥಗಳನ್ನು ಭೇಟಿಮಾಡಿ ಮತ್ತು ಅಲ್ಲಿ ಸ್ನಾನಮಾಡಿ ಶುದ್ಧಾತ್ಮರಾಗುತ್ತೇವೆ.

03091008a ಭವಾನಪಿ ನರೇಂದ್ರಸ್ಯ ಕಾರ್ತವೀರ್ಯಸ್ಯ ಭಾರತ|

03091008c ಅಷ್ಟಕಸ್ಯ ಚ ರಾಜರ್ಷೇರ್ಲೋಮಪಾದಸ್ಯ ಚೈವ ಹ||

03091009a ಭರತಸ್ಯ ಚ ವೀರಸ್ಯ ಸಾರ್ವಭೌಮಸ್ಯ ಪಾರ್ಥಿವ|

03091009c ಧ್ರುವಂ ಪ್ರಾಪ್ಸ್ಯಸಿ ದುಷ್ಪ್ರಾಪಾಽಲ್ಲೋಕಾಂಸ್ತೀರ್ಥಪರಿಪ್ಲುತಃ||

ಭಾರತ! ನೀನೂ ಕೂಡ ಈ ತೀರ್ಥಗಳಲ್ಲಿ ಸ್ನಾನಮಾಡಿ ನರೇಂದ್ರ ಕಾರ್ತವೀರ್ಯನಂತೆ, ಅಷ್ಟಕನಂತೆ, ರಾಜರ್ಷಿ ಲೋಮಪಾದನಂತೆ, ವೀರ ಸಾರ್ವಭೌಮ ಪಾರ್ಥಿವ ಭರತನಂತೆ ದುರ್ಲಭ ಲೋಕಗಳನ್ನು ಹೊಂದುತ್ತೀಯೆ. 

03091010a ಪ್ರಭಾಸಾದೀನಿ ತೀರ್ಥಾನಿ ಮಹೇಂದ್ರಾದೀಂಶ್ಚ ಪರ್ವತಾನ್|

03091010c ಗಂಗಾದ್ಯಾಃ ಸರಿತಶ್ಚೈವ ಪ್ಲಕ್ಷಾದೀಂಶ್ಚ ವನಸ್ಪತೀನ್||

03091010e ತ್ವಯಾ ಸಹ ಮಹೀಪಾಲ ದ್ರಷ್ಟುಮಿಚ್ಚಾಮಹೇ ವಯಂ||

ನಿನ್ನೊಂದಿಗೆ ನಾವೂ ಕೂಡ ಪ್ರಭಾಸವೇ ಮೊದಲಾದ ತೀರ್ಥಗಳನ್ನೂ, ಮಹೇಂದ್ರಾದಿ ಪರ್ವತಗಳನ್ನೂ, ಗಂಗೆಯೇ ಮೊದಲಾದ ನದಿಗಳನ್ನೂ, ಪ್ಲಕ್ಷವೇ ಮೊದಲಾದ ವನಗಳನ್ನೂ ನೋಡಲು ಬಯಸುತ್ತೇವೆ.

03091011a ಯದಿ ತೇ ಬ್ರಾಹ್ಮಣೇಷ್ವಸ್ತಿ ಕಾ ಚಿತ್ಪ್ರೀತಿರ್ಜನಾಧಿಪ|

03091011c ಕುರು ಕ್ಷಿಪ್ರಂ ವಚೋಽಸ್ಮಾಕಂ ತತಃ ಶ್ರೇಯೋಽಭಿಪತ್ಸ್ಯಸೇ||

ಜನಾಧಿಪ! ನಿನಗೆ ಬ್ರಾಹ್ಮಣರ ಮೇಲೆ ಸ್ಪಲ್ಪವಾದರೂ ಪ್ರೀತಿಯಿದೆಯೆಂದಾದರೆ ನಮ್ಮ ಮಾತಿನಂತೆ ಮಾಡು. ಇದರಿಂದ ನಿನಗೆ ಶ್ರೇಯಸ್ಸುಂಟಾಗುತ್ತದೆ.

03091012a ತೀರ್ಥಾನಿ ಹಿ ಮಹಾಬಾಹೋ ತಪೋವಿಘ್ನಕರೈಃ ಸದಾ|

03091012c ಅನುಕೀರ್ಣಾನಿ ರಕ್ಷೋಭಿಸ್ತೇಭ್ಯೋ ನಸ್ತ್ರಾತುಮರ್ಹಸಿ||

ಮಹಾಬಾಹೋ! ಈ ತೀರ್ಥಗಳು ಯಾವಾಗಲೂ ತಪಸ್ಸನ್ನು ಭಂಗಗೊಳಿಸುವ ರಾಕ್ಷಸರಿಂದ ತುಂಬಿವೆ. ಅವರಿಂದ ನಮ್ಮನ್ನು ನೀನು ರಕ್ಷಿಸಬೇಕು.

03091013a ತೀರ್ಥಾನ್ಯುಕ್ತಾನಿ ಧೌಮ್ಯೇನ ನಾರದೇನ ಚ ಧೀಮತಾ|

03091013c ಯಾನ್ಯುವಾಚ ಚ ದೇವರ್ಷಿರ್ಲೋಮಶಃ ಸುಮಹಾತಪಾಃ||

03091014a ವಿಧಿವತ್ತಾನಿ ಸರ್ವಾಣಿ ಪರ್ಯಟಸ್ವ ನರಾಧಿಪ|

03091014c ಧೂತಪಾಪ್ಮಾ ಸಹಾಸ್ಮಾಭಿರ್ಲೋಮಶೇನ ಚ ಪಾಲಿತಃ||

ನರಾಧಿಪ! ಧೌಮ್ಯ, ಧೀಮಂತ ನಾರದರು ಹೇಳಿದ ಮತ್ತು ಸುಮಹಾತಪ ದೇವರ್ಷಿ ಲೋಮಶನು ಹೇಳಿದ ಎಲ್ಲ ವಿವಿಧ ತೀರ್ಥಗಳಿಗೆ, ನಮ್ಮನ್ನೂ ಕರೆದುಕೊಂಡು, ಲೋಮಶನಿಂದ ಪಾಲಿತನಾಗಿ ಸಂಚಾರಮಾಡಿ ಪಾಪಗಳನ್ನು ತ್ಯಜಿಸು.”

03091015a ಸ ತಥಾ ಪೂಜ್ಯಮಾನಸ್ತೈರ್ಹರ್ಷಾದಶ್ರುಪರಿಪ್ಲುತಃ|

03091015c ಭೀಮಸೇನಾದಿಭಿರ್ವೀರೈರ್ಭ್ರಾತೃಭಿಃ ಪರಿವಾರಿತಃ||

03091015e ಬಾಢಮಿತ್ಯಬ್ರವೀತ್ಸರ್ವಾಂಸ್ತಾನೃಷೀನ್ಪಾಂಡವರ್ಷಭಃ||

ಹೀಗೆ ಅವರು ಹರ್ಷದ ಕಣ್ಣೀರಿಟ್ಟು ಪ್ರಾರ್ಥಿಸಿದ ನಂತರ ಭೀಮಸೇನನೇ ಮೊದಲಾದ ವೀರ ಸಹೋದರರಿಂದ ಸುತ್ತುವರೆಯಲ್ಪಟ್ಟ ಪಾಂಡವರ್ಷಭನು ಆ ಎಲ್ಲ ಋಷಿಗಳಿಗೂ “ಹಾಗೆಯೇ ಆಗಲಿ! ಎಂದು ಹೇಳಿದನು.

03091016a ಲೋಮಶಂ ಸಮನುಜ್ಞಾಪ್ಯ ಧೌಮ್ಯಂ ಚೈವ ಪುರೋಹಿತಂ|

03091016c ತತಃ ಸ ಪಾಂಡವಶ್ರೇಷ್ಠೋ ಭ್ರಾತೃಭಿಃ ಸಹಿತೋ ವಶೀ||

03091016e ದ್ರೌಪದ್ಯಾ ಚಾನವದ್ಯಾಂಗ್ಯಾ ಗಮನಾಯ ಮನೋ ದಧೇ||

ಲೋಮಶ ಮತ್ತು ಪುರೋಹಿತ ಧೌಮ್ಯನಿಂದ ಅಪ್ಪಣೆಯನ್ನು ಪಡೆದುಕೊಂಡ ನಂತರ ಆ ಪಾಂಡವಶ್ರೇಷ್ಠನು ತನ್ನ ಭ್ರಾತೃಗಳ ಮತ್ತು ಅನವಧ್ಯಾಂಗೀ ದ್ರೌಪದಿಯ ಸಹಿತ ಹೊರಡುವ ತಯಾರಿ ಮಾಡಿದನು.

03091017a ಅಥ ವ್ಯಾಸೋ ಮಹಾಭಾಗಸ್ತಥಾ ನಾರದಪರ್ವತೌ|

03091017c ಕಾಮ್ಯಕೇ ಪಾಂಡವಂ ದ್ರಷ್ಟುಂ ಸಮಾಜಗ್ಮುರ್ಮನೀಷಿಣಃ||

ಅದೇ ಸಮಯದಲ್ಲಿ ಮಹಾಭಾಗ ವ್ಯಾಸ, ಮತ್ತು ನಾರದ-ಪರ್ವತರು ಪಾಂಡವನನ್ನು ಕಾಣಲು ಕಾಮ್ಯಕವನಕ್ಕೆ ಆಗಮಿಸಿದರು.

03091018a ತೇಷಾಂ ಯುಧಿಷ್ಠಿರೋ ರಾಜಾ ಪೂಜಾಂ ಚಕ್ರೇ ಯಥಾವಿಧಿ|

03091018c ಸತ್ಕೃತಾಸ್ತೇ ಮಹಾಭಾಗಾ ಯುಧಿಷ್ಠಿರಮಥಾಬ್ರುವನ್||

ರಾಜಾ ಯುಧಿಷ್ಠಿರನು ಅವರಿಗೆ ಯಥಾವಿಧಿಯಾಗಿ ಪೂಜೆಗೈದನು. ಸತ್ಕೃತರಾದ ಆ ಮಹಾಭಾಗರು ಯುಧಿಷ್ಠಿರನಿಗೆ ಈ ರೀತಿ ಹೇಳಿದರು:

03091019a ಯುಧಿಷ್ಠಿರ ಯಮೌ ಭೀಮ ಮನಸಾ ಕುರುತಾರ್ಜವಂ|

03091019c ಮನಸಾ ಕೃತಶೌಚಾ ವೈ ಶುದ್ಧಾಸ್ತೀರ್ಥಾನಿ ಗಚ್ಚತ||

“ಯುಧಿಷ್ಠಿರ! ಯಮಳರೇ! ಭೀಮ! ನಿಮ್ಮ ಮನಸ್ಸಿನಲ್ಲಿ ಧರ್ಮವನ್ನು ಪಾಲಿಸಿ! ಮನಸ್ಸನ್ನು ಶುದ್ಧಿಮಾಡಿಕೊಂಡೇ ಶುದ್ಧಾತ್ಮರಾಗಿಯೇ ಈ ತೀರ್ಥಗಳಿಗೆ ಹೋಗಬೇಕು.

03091020a ಶರೀರನಿಯಮಂ ಹ್ಯಾಹುರ್ಬ್ರಾಹ್ಮಣಾ ಮಾನುಷಂ ವ್ರತಂ|

03091020c ಮನೋವಿಶುದ್ಧಾಂ ಬುದ್ಧಿಂ ಚ ದೈವಮಾಹುರ್ವ್ರತಂ ದ್ವಿಜಾಃ||

ಶರೀರನಿಯಮವೇ ಮನುಷ್ಯನ ವ್ರತವೆಂದು ಬ್ರಾಹ್ಮಣರು ಹೇಳುತ್ತಾರೆ. ಬುದ್ಧಿಯಿಂದ ಮನಸ್ಸನ್ನು ಶುದ್ಧಿಗೊಳಿಸುವುದೇ ದೇವತಗಳ ವ್ರತವೆಂದು ದ್ವಿಜರು ಹೇಳುತ್ತಾರೆ.

03091021a ಮನೋ ಹ್ಯದುಷ್ಟಂ ಶೂರಾಣಾಂ ಪರ್ಯಾಪ್ತಂ ವೈ ನರಾಧಿಪ|

03091021c ಮೈತ್ರೀಂ ಬುದ್ಧಿಂ ಸಮಾಸ್ಥಾಯ ಶುದ್ಧಾಸ್ತೀರ್ಥಾನಿ ಗಚ್ಚತ||

ನರಾಧಿಪ! ಕಲ್ಮಷವಿಲ್ಲದ ಮನಸ್ಸೇ ಶೂರರಿಗೆ ಪರ್ಯಾಪ್ತ. ಮೈತ್ರೀಭಾವವನ್ನಿಟ್ಟುಕೊಂಡು ಶುದ್ಧನಾಗಿ ತೀರ್ಥಗಳಿಗೆ ಹೋಗು.

03091022a ತೇ ಯೂಯಂ ಮಾನಸೈಃ ಶುದ್ಧಾಃ ಶರೀರನಿಯಮವ್ರತೈಃ|

03091022c ದೈವಂ ವ್ರತಂ ಸಮಾಸ್ಥಾಯ ಯಥೋಕ್ತಂ ಫಲಮಾಪ್ಸ್ಯಥ||

ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಮತ್ತು ಶರೀರನಿಯಮ ವ್ರತನಾಗಿದ್ದು ದೈವವ್ರತವನ್ನು ಪಾಲಿಸಿದರೆ ಹೇಳಿದ ಫಲವನ್ನು ಹೊಂದುತ್ತೀಯೆ.”

03091023a ತೇ ತಥೇತಿ ಪ್ರತಿಜ್ಞಾಯ ಕೃಷ್ಣಯಾ ಸಹ ಪಾಂಡವಾಃ|

03091023c ಕೃತಸ್ವಸ್ತ್ಯಯನಾಃ ಸರ್ವೇ ಮುನಿಭಿರ್ದಿವ್ಯಮಾನುಷೈಃ||

03091024a ಲೋಮಶಸ್ಯೋಪಸಂಗೃಹ್ಯ ಪಾದೌ ದ್ವೈಪಾಯನಸ್ಯ ಚ|

03091024c ನಾರದಸ್ಯ ಚ ರಾಜೇಂದ್ರ ದೇವರ್ಷೇಃ ಪರ್ವತಸ್ಯ ಚ||

ಕೃಷ್ಣೆಯೊಂದಿಗೆ ಪಾಂಡವರು “ಹಾಗೆಯೇ ಮಾಡುತ್ತೇವೆ!” ಎಂದು ಪ್ರತಿಜ್ಞೆ ಮಾಡಿದರು. ರಾಜೇಂದ್ರ! ಲೋಮಶ, ದ್ವೈಪಾಯನ, ನಾರದ ಮತ್ತು ದೇವರ್ಷಿ ಪರ್ವತನ ಪಾದಗಳನ್ನು ಹಿಡಿದು ನಮಸ್ಕರಿಸಲು ಅವರ ಪ್ರಯಾಣವನ್ನು ಸರ್ವ ಮುನಿಗಳೂ ದಿವ್ಯಮಾನುಷರೂ ಹರಸಿದರು.

03091025a ಧೌಮ್ಯೇನ ಸಹಿತಾ ವೀರಾಸ್ತಥಾನ್ಯೈರ್ವನವಾಸಿಭಿಃ|

03091025c ಮಾರ್ಗಶೀರ್ಷ್ಯಾಮತೀತಾಯಾಂ ಪುಷ್ಯೇಣ ಪ್ರಯಯುಸ್ತತಃ||

ಅನಂತರ ಧೌಮ್ಯ ಮತ್ತು ಇತರ ವನವಾಸಿಗಳನ್ನೊಡಗೂಡಿ ಆ ವೀರರು ಅಲ್ಲಿಂದ ಮಾರ್ಗಶೀರ್ಷವು ಕಳೆದ ಪುಷ್ಯದಲ್ಲಿ ಹೊರಟರು.

03091026a ಕಠಿನಾನಿ ಸಮಾದಾಯ ಚೀರಾಜಿನಜಟಾಧರಾಃ|

03091026c ಅಭೇದ್ಯೈಃ ಕವಚೈರ್ಯುಕ್ತಾಸ್ತೀರ್ಥಾನ್ಯನ್ವಚರಂಸ್ತದಾ||

ಕಠಿನ ಚೀರಾಜಿನಗಳನ್ನು ಧರಿಸಿ, ಜಟಾಧಾರಿಗಳಾಗಿ, ಅಭೇಧ್ಯ ಕವಚಗಳನ್ನು ಧರಿಸಿ ತೀರ್ಥಯಾತ್ರೆಗೆ ಹೊರಟರು.

03091027a ಇಂದ್ರಸೇನಾದಿಭಿರ್ಭೃತ್ಯೈ ರಥೈಃ ಪರಿಚತುರ್ದಶೈಃ|

03091027c ಮಹಾನಸವ್ಯಾಪೃತೈಶ್ಚ ತಥಾನ್ಯೈಃ ಪರಿಚಾರಕೈಃ||

03091028a ಸಾಯುಧಾ ಬದ್ಧನಿಷ್ಟ್ರಿಂಶಾಸ್ತೂಣವಂತಃ ಸಮಾರ್ಗಣಾಃ|

03091028c ಪ್ರಾಙ್ಮುಖಾಃ ಪ್ರಯಯುರ್ವೀರಾಃ ಪಾಂಡವಾ ಜನಮೇಜಯ||

ಜನಮೇಜಯ! ಇಂದ್ರಸೇನನೇ ಮೊದಲಾದ ಸೇವಕರೊಂದಿಗೆ, ಹದಿನಾಲ್ಕು ರಥಗಳಲ್ಲಿ, ಅಡುಗೆಮಾಡುವ ಮತ್ತು ಇತರ ಪರಿಚಾರಕರೊಂದಿಗೆ, ಬಾಣ-ಭತ್ತಳಿಕೆ, ಖಡ್ಗ ಮೊದಲಾದ ಆಯುಧಗಳನ್ನು ತೆಗೆದುಕೊಂಡು, ವೀರ ಪಾಂಡವರು ಪೂರ್ವಾಭಿಮುಖವಾಗಿ ಹೊರಟರು.

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಏಕನವತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆ ಎನ್ನುವ ತೊಂಭತ್ತೊಂದನೆಯ ಅಧ್ಯಾಯವು.

Related image

Comments are closed.