Aranyaka Parva: Chapter 90

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೯೦

ಧನಂಜಯನು ಯುಧಿಷ್ಠಿರನಿಗೆ ಕಳುಹಿಸಿದ ಸಂದೇಶವನ್ನು ಲೋಮಶನು ತಿಳಿಸುವುದು (೧-೭). ಲೋಮಶನು ಯುಧಿಷ್ಠಿರನಿಗೆ ತೀರ್ಥಯಾತ್ರೆಯನ್ನು ಕೈಗೊಳ್ಳಲೂ, ಜೊತೆಗೆ ತಾನೂ ಬರುವುದಾಗಿಯೂ ಹೇಳಿದುದು (೮-೧೩). ತೀರ್ಥಯಾತ್ರೆಗೆ ಮನಸ್ಸುಮಾಡಿ ಯುಧಿಷ್ಠಿರನು ಬಹಳಷ್ಟು ಬ್ರಾಹ್ಮಣರನ್ನು ಹಸ್ತಿನಾಪುರಕ್ಕೆ ಕಳುಹಿಸಿದುದು (೧೪-೨೪).

03090001 ಲೋಮಶ ಉವಾಚ|

03090001a ಧನಂಜಯೇನ ಚಾಪ್ಯುಕ್ತಂ ಯತ್ತಚ್ಛೃಣು ಯುಧಿಷ್ಠಿರ|

03090001c ಯುಧಿಷ್ಠಿರಂ ಭ್ರಾತರಂ ಮೇ ಯೋಜಯೇರ್ಧರ್ಮ್ಯಯಾ ಶ್ರಿಯಾ||

03090002a ತ್ವಂ ಹಿ ಧರ್ಮಾನ್ಪರಾನ್ವೇತ್ಥ ತಪಾಂಸಿ ಚ ತಪೋಧನ|

03090002c ಶ್ರೀಮತಾಂ ಚಾಪಿ ಜಾನಾಸಿ ರಾಜ್ಞಾಂ ಧರ್ಮಂ ಸನಾತನಂ||

ಲೋಮಶನು ಹೇಳಿದನು: “ಯುಧಿಷ್ಠಿರ! ಧನಂಜಯನು ಹೇಳಿ ಕಳುಹಿಸಿದುದನ್ನು ಕೇಳು. “ನನ್ನ ಅಣ್ಣ ಯುಧಿಷ್ಠಿರನಿಗೆ ಜಯ, ಧರ್ಮ ಮತ್ತು ಶ್ರೀಯನ್ನು ಕರುಣಿಸು. ತಪೋಧನ! ಶ್ರೇಷ್ಠ ಧರ್ಮವನ್ನೂ ತಪಸ್ಸನ್ನೂ ನೀನು ತಿಳಿದಿದ್ದೀಯೆ. ಸನಾತನ ಶ್ರೀಮಂತ ರಾಜರ ಧರ್ಮವನ್ನೂ ನೀನು ತಿಳಿದಿದ್ದೀಯೆ.

03090003a ಸ ಭವಾನ್ಯತ್ಪರಂ ವೇದ ಪಾವನಂ ಪುರುಷಾನ್ಪ್ರತಿ|

03090003c ತೇನ ಸಮ್ಯೋಜಯೇಥಾಸ್ತ್ವಂ ತೀರ್ಥಪುಣ್ಯೇನ ಪಾಂಡವಂ||

ಪುರುಷರನ್ನು ಪಾವನಗೊಳಿಸುವ ಬೇರೆ ಏನು ಗೊತ್ತಿದ್ದರೂ ಅದನ್ನೂ ಆ ತೀರ್ಥಪುಣ್ಯದೊಂದಿಗೆ ಪಾಂಡವನಿಗೆ ದಯಪಾಲಿಸಬೇಕು.

03090004a ಯಥಾ ತೀರ್ಥಾನಿ ಗಚ್ಚೇತ ಗಾಶ್ಚ ದದ್ಯಾತ್ಸ ಪಾರ್ಥಿವಃ|

03090004c ತಥಾ ಸರ್ವಾತ್ಮನಾ ಕಾರ್ಯಮಿತಿ ಮಾಂ ವಿಜಯೋಽಬ್ರವೀತ್||

ಪಾರ್ಥಿವರು ತೀರ್ಥಗಳಿಗೆ ಹೋಗಿ ಗೋವುಗಳ ದಾನವನ್ನಿಡುವಂತೆ ಸಂಪೂರ್ಣಮನಸ್ಸಿನಿಂದ ಈ ಕಾರ್ಯನಡೆಯಲಿ! ” ಎಂದು ವಿಜಯನು ನನಗೆ ಹೇಳಿದ್ದಾನೆ.

03090005a ಭವತಾ ಚಾನುಗುಪ್ತೋಽಸೌ ಚರೇತ್ತೀರ್ಥಾನಿ ಸರ್ವಶಃ|

03090005c ರಕ್ಷೋಭ್ಯೋ ರಕ್ಷಿತವ್ಯಶ್ಚ ದುರ್ಗೇಷು ವಿಷಮೇಷು ಚ||

“ನಿನ್ನ ರಕ್ಷಣೆಯಲ್ಲಿ ಅವನು ಎಲ್ಲ ತೀರ್ಥಗಳನ್ನೂ ಸಂಚರಿಸಲಿ ಮತ್ತು ದುರ್ಗ-ವಿಷಮ ಪ್ರದೇಶಗಳಲ್ಲಿಯ ರಾಕ್ಷಸರಿಂದ ರಕ್ಷಿತನಾಗಿರಲಿ.

03090006a ದಧೀಚ ಇವ ದೇವೇಂದ್ರಂ ಯಥಾ ಚಾಪ್ಯಂಗಿರಾ ರವಿಂ|

03090006c ತಥಾ ರಕ್ಷಸ್ವ ಕೌಂತೇಯಂ ರಾಕ್ಷಸೇಭ್ಯೋ ದ್ವಿಜೋತ್ತಮ||

ದಧೀಚಿಯು ದೇವೇಂದ್ರನನ್ನು ಮತ್ತು ಅಂಗಿರಸನು ರವಿಯನ್ನು ರಕ್ಷಿಸಿದಂತೆ ದ್ವಿಜೋತ್ತಮ! ನೀನು ಕೌಂತೇಯನನ್ನು ರಾಕ್ಷಸರಿಂದ ರಕ್ಷಿಸು.

03090007a ಯಾತುಧಾನಾ ಹಿ ಬಹವೋ ರಾಕ್ಷಸಾಃ ಪರ್ವತೋಪಮಾಃ|

03090007c ತ್ವಯಾಭಿಗುಪ್ತಾನ್ಕೌಂತೇಯಾನ್ನಾತಿವರ್ತೇಯುರಂತಿಕಾತ್||

ಪರ್ವತಗಳ ಮೇಲೆ ಆಕ್ರಮಣಮಾಡುವ ಬಹಳಷ್ಟು ರಾಕ್ಷಸರಿದ್ದಾರೆ. ನೀನು ರಕ್ಷಣೆಯನ್ನಿತ್ತರೆ ಕೌಂತೇಯನನ್ನು ಆಕ್ರಮಣಿಸಿ ಕೊನೆಗೊಳಿಸುವುದಿಲ್ಲ.”

03090008a ಸೋಽಹಮಿಂದ್ರಸ್ಯ ವಚನಾನ್ನಿಯೋಗಾದರ್ಜುನಸ್ಯ ಚ|

03090008c ರಕ್ಷಮಾಣೋ ಭಯೇಭ್ಯಸ್ತ್ವಾಂ ಚರಿಷ್ಯಾಮಿ ತ್ವಯಾ ಸಹ||

ಹೀಗೆ ಇಂದ್ರನ ಆದೇಶ ಮತ್ತು ಅರ್ಜುನನ ನಿಯೋಗದಂತೆ ನಿಮ್ಮನ್ನು ಭಯದಿಂದ ರಕ್ಷಿಸುತ್ತಾ ನಿಮ್ಮ ಜೊತೆ ನಾನೂ ಸಂಚರಿಸುತ್ತೇನೆ.

03090009a ದ್ವಿಸ್ತೀರ್ಥಾನಿ ಮಯಾ ಪೂರ್ವಂ ದೃಷ್ಟಾನಿ ಕುರುನಂದನ|

03090009c ಇದಂ ತೃತೀಯಂ ದ್ರಕ್ಷ್ಯಾಮಿ ತಾನ್ಯೇವ ಭವತಾ ಸಹ||

ಕುರುನಂದನ! ಇದಕ್ಕೂ ಹಿಂದೆ ಎರಡು ಬಾರಿ ಈ ತೀರ್ಥಗಳನ್ನು ನೋಡಿದ್ದೇನೆ. ಈಗ ನಿನ್ನೊಂದಿಗೆ ಬಂದು ಅವುಗಳನ್ನು ಮೂರನೆಯ ಬಾರಿ ನೋಡುತ್ತೇನೆ.

03090010a ಇಯಂ ರಾಜರ್ಷಿಭಿರ್ಯಾತಾ ಪುಣ್ಯಕೃದ್ಭಿರ್ಯುಧಿಷ್ಠಿರ|

03090010c ಮನ್ವಾದಿಭಿರ್ಮಹಾರಾಜ ತೀರ್ಥಯಾತ್ರಾ ಭಯಾಪಹಾ||

ಯುಧಿಷ್ಠಿರ! ಮಹಾರಾಜ! ಪುಣ್ಯಕರ್ಮಿಗಳಾದ ಮನುವೇ ಮೊದಲಾದ ರಾಜರ್ಷಿಗಳು ಭಯವನ್ನು ಕಳೆಯುವ ತೀರ್ಥಯಾತ್ರೆಯನ್ನು ಕೈಗೊಂಡಿದ್ದರು.

03090011a ನಾನೃಜುರ್ನಾಕೃತಾತ್ಮಾ ಚ ನಾವೈದ್ಯೋ ನ ಚ ಪಾಪಕೃತ್|

03090011c ಸ್ನಾತಿ ತೀರ್ಥೇಷು ಕೌರವ್ಯ ನ ಚ ವಕ್ರಮತಿರ್ನರ||

ಕೌರವ್ಯ! ಅಪ್ರಾಮಾಣಿಕನಾದವನು, ಆತ್ಮಸಾಧನೆ ಮಾಡಿಕೊಂಡಿರದವನು, ವಿದ್ಯೆಯಿಲ್ಲದವನು, ಪಾಪಕರ್ಮಗಳನ್ನು ಮಾಡಿದವನು ಮತ್ತು ವಕ್ರಮತಿಯಿರುವ ಯಾವ ನರನೂ ಈ ತೀರ್ಥಗಳಲ್ಲಿ ಸ್ನಾನಮಾಡುವುದಿಲ್ಲ.

03090012a ತ್ವಂ ತು ಧರ್ಮಮತಿರ್ನಿತ್ಯಂ ಧರ್ಮಜ್ಞಃ ಸತ್ಯಸಂಗರಃ|

03090012c ವಿಮುಕ್ತಃ ಸರ್ವಪಾಪೇಭ್ಯೋ ಭೂಯ ಏವ ಭವಿಷ್ಯಸಿ||

ನೀನಾದರೋ ನಿತ್ಯವೂ ಧರ್ಮಮತಿಯಾಗಿದ್ದು, ಧರ್ಮವನ್ನು ತಿಳಿದುಕೊಂಡವನಾಗಿ, ಸತ್ಯಸಂಗರನಾಗಿದ್ದೀಯೆ. ನಿನ್ನ ಎಲ್ಲ ಪಾಪಗಳಿಂದ ವಿಮುಕ್ತನಾಗುತ್ತೀಯೆ.

03090013a ಯಥಾ ಭಗೀರಥೋ ರಾಜಾ ರಾಜಾನಶ್ಚ ಗಯಾದಯಃ|

03090013c ಯಥಾ ಯಯಾತಿಃ ಕೌಂತೇಯ ತಥಾ ತ್ವಮಪಿ ಪಾಂಡವ||

ಕೌಂತೇಯ! ಪಾಂಡವ! ರಾಜ ಭಗೀರಥನಂತೆ ಮತ್ತು ಗಯ, ಯಯಾತಿ ಮೊದಲಾದ ರಾಜರಂತೆ ನೀನೂ ಕೂಡ ಆಗುತ್ತೀಯೆ.”

03090014 ಯುಧಿಷ್ಠಿರ ಉವಾಚ|

03090014a ನ ಹರ್ಷಾತ್ಸಂಪ್ರಪಶ್ಯಾಮಿ ವಾಕ್ಯಸ್ಯಾಸ್ಯೋತ್ತರಂ ಕ್ವ ಚಿತ್|

03090014c ಸ್ಮರೇದ್ಧಿ ದೇವರಾಜೋ ಯಂ ಕಿಂ ನಾಮಾಭ್ಯಧಿಕಂ ತತಃ||

ಯುಧಿಷ್ಠಿರನು ಹೇಳಿದನು: “ಸಂತೋಷದಿಂದ ನನಗೆ ಈ ಮಾತಿಗೆ ಉತ್ತರವೇ ಕಾಣುತ್ತಿಲ್ಲ. ದೇವರಾಜನು ನೆನಪಿಸಿಕೊಂಡಿದ್ದಾನೆ ಎಂದರೆ ಇದಕ್ಕಿಂದ ಹೆಚ್ಚಿನದು ಏನಿದೆ?

03090015a ಭವತಾ ಸಂಗಮೋ ಯಸ್ಯ ಭ್ರಾತಾ ಯಸ್ಯ ಧನಂಜಯಃ|

03090015c ವಾಸವಃ ಸ್ಮರತೇ ಯಸ್ಯ ಕೋ ನಾಮಾಭ್ಯಧಿಕಸ್ತತಃ||

ಧನಂಜಯನ ಭ್ರಾತನನ್ನು ಇಂದ್ರನೇ ನೆನಪಿಸಿಕೊಂಡ ಮತ್ತು ನೀನು ಭೇಟಿಯಾದ ನನ್ನಂಥವನಿಗೆ ಇದಕ್ಕಿಂದಲೂ ಅಧಿಕವಾದುದು ಏನಿದೆ?

03090016a ಯಚ್ಚ ಮಾಂ ಭಗವಾನಾಹ ತೀರ್ಥಾನಾಂ ದರ್ಶನಂ ಪ್ರತಿ|

03090016c ಧೌಮ್ಯಸ್ಯ ವಚನಾದೇಷಾ ಬುದ್ಧಿಃ ಪೂರ್ವಂ ಕೃತೈವ ಮೇ||

ತೀರ್ಥದರ್ಶನದ ಕುರಿತು ನೀನು ನನಗೆ ಹೇಳಿದುದಕ್ಕೆ ಮೊದಲೇ ನಾನು ಧೌಮ್ಯನ ಮಾತಿನಂತೆ ಮನಸ್ಸುಮಾಡಿದ್ದೆ.

03090017a ತದ್ಯದಾ ಮನ್ಯಸೇ ಬ್ರಹ್ಮನ್ಗಮನಂ ತೀರ್ಥದರ್ಶನೇ|

03090017c ತದೈವ ಗಂತಾಸ್ಮಿ ದೃಢಮೇಷ ಮೇ ನಿಶ್ಚಯಃ ಪರಃ||

ಬ್ರಹ್ಮನ್! ತೀರ್ಥದರ್ಶನಕ್ಕೆ ಹೋಗಲು ನೀನು ಎಂದು ಮನಸ್ಸು ಮಾಡುತ್ತೀಯೋ ಅಂದೇ ನಾನೂ ಕೂಡ ನಿಶ್ವಯವಾಗಿಯೂ ಹೊರಡುತ್ತೇನೆ.””

03090018 ವೈಶಂಪಾಯನ ಉವಾಚ|

03090018a ಗಮನೇ ಕೃತಬುದ್ಧಿಂ ತಂ ಪಾಂಡವಂ ಲೋಮಶೋಽಬ್ರವೀತ್|

03090018c ಲಘುರ್ಭವ ಮಹಾರಾಜ ಲಘುಃ ಸ್ವೈರಂ ಗಮಿಷ್ಯಸಿ||

ವೈಶಂಪಾಯನನು ಹೇಳಿದನು: “ಹೊರಡಲು ಮನಸ್ಸುಮಾಡಿದ್ದ ಆ ಪಾಂಡವನಿಗೆ ಲೋಮಶನು ಹೇಳಿದನು: “ಹಗುರಾಗು ಮಹಾರಾಜ! ಹಗುರಾದರೆ ಸುಲಭವಾಗಿ ಹೋಗಬಹುದು.”

03090019 ಯುಧಿಷ್ಠಿರ ಉವಾಚ|

03090019a ಬಿಕ್ಷಾಭುಜೋ ನಿವರ್ತಂತಾಂ ಬ್ರಾಹ್ಮಣಾ ಯತಯಶ್ಚ ಯೇ|

03090019c ಯೇ ಚಾಪ್ಯನುಗತಾಃ ಪೌರಾ ರಾಜಭಕ್ತಿಪುರಸ್ಕೃತಾಃ||

ಯುಧಿಷ್ಠಿರನು ಹೇಳಿದನು: “ಭಿಕ್ಷಾರ್ಥಿಗಳಾದ ಬ್ರಾಹ್ಮಣರು ಮತ್ತು ಯತಿಗಳು, ಮತ್ತು ರಾಜಭಕ್ತಿಯಿಂದ ನನ್ನನ್ನು ಗೌರವಿಸಿ ಅನುಸರಿಸಿ ಬಂದ ಪೌರಜನರೂ ಹಿಂದಿರುಗಲಿ.

03090020a ಧೃತರಾಷ್ಟ್ರಂ ಮಹಾರಾಜಮಭಿಗಚ್ಚಂತು ಚೈವ ತೇ|

03090020c ಸ ದಾಸ್ಯತಿ ಯಥಾಕಾಲಮುಚಿತಾ ಯಸ್ಯ ಯಾ ಭೃತಿಃ||

ಅವರು ಮಹಾರಾಜ ಧೃತರಾಷ್ಟ್ರನಲ್ಲಿಗೆ ಹೋಗಲಿ. ಅವರಿಗೆ ಯಥಾಕಾಲದಲ್ಲಿ ಉಚಿತವಾಗಿ ದೊರೆಯಬೇಕಾದುದನ್ನು ಅವನು ನೀಡುತ್ತಾನೆ.

03090021a ಸ ಚೇದ್ಯಥೋಚಿತಾಂ ವೃತ್ತಿಂ ನ ದದ್ಯಾನ್ಮನುಜೇಶ್ವರಃ|

03090021c ಅಸ್ಮತ್ಪ್ರಿಯಹಿತಾರ್ಥಾಯ ಪಾಂಚಾಲ್ಯೋ ವಃ ಪ್ರದಾಸ್ಯತಿ||

ಒಂದುವೇಳೆ ಆ ಮನುಜೇಶ್ವರನು ಅವರಿಗೆ ಯಥೋಚಿತವಾದ ವೃತ್ತಿಯನ್ನು ಕೊಡದಿದ್ದರೆ ನನ್ನ ಪ್ರೀತಿಹಿತಾರ್ಥವಾಗಿ ಪಾಂಚಾಲನು ಅವರಿಗೆ ನೀಡುತ್ತಾನೆ.””

03090022 ವೈಶಂಪಾಯನ ಉವಾಚ|

03090022a ತತೋ ಭೂಯಿಷ್ಠಶಃ ಪೌರಾ ಗುರುಭಾರಸಮಾಹಿತಾಃ|

03090022c ವಿಪ್ರಾಶ್ಚ ಯತಯೋ ಯುಕ್ತಾ ಜಗ್ಮುರ್ನಾಗಪುರಂ ಪ್ರತಿ||

ವೈಶಂಪಾಯನನು ಹೇಳಿದನು: “ಅನಂತರ ತಮ್ಮ ಭಾರವನ್ನು ಹೊತ್ತುಕೊಂಡು ಪೌರಜನರು, ವಿಪ್ರರು ಮತ್ತು ಯತಿಗಳು ತಮ್ಮ ಅನುಯಾಯಿಗಳೊಂದಿಗೆ ಒಂದಾಗಿ ನಾಗಪುರದ ಕಡೆ ಹೊರಟರು.

03090023a ತಾನ್ಸರ್ವಾನ್ಧರ್ಮರಾಜಸ್ಯ ಪ್ರೇಮ್ಣಾ ರಾಜಾಂಬಿಕಾಸುತಃ|

03090023c ಪ್ರತಿಜಗ್ರಾಹ ವಿಧಿವದ್ಧನೈಶ್ಚ ಸಮತರ್ಪಯತ್||

ಧರ್ಮರಾಜನ ಮೇಲಿನ ಪ್ರೀತಿಯಿಂದ ಅವರೆಲ್ಲರನ್ನೂ ರಾಜ ಅಂಬಿಕಾಸುತನು ಸ್ವಾಗತಿಸಿ ವಿವಿಧ ಧನಗಳಿಂದ ತೃಪ್ತಿಪಡಿಸಿದನು.

03090024a ತತಃ ಕುಂತೀಸುತೋ ರಾಜಾ ಲಘುಭಿರ್ಬ್ರಾಹ್ಮಣೈಃ ಸಹ|

03090024c ಲೋಮಶೇನ ಚ ಸುಪ್ರೀತಸ್ತ್ರಿರಾತ್ರಂ ಕಾಮ್ಯಕೇಽವಸತ್||

ಅನಂತರ ಕುಂತೀಸುತ ರಾಜನು ಸ್ವಲ್ಪವೇ ಬ್ರಾಹ್ಮಣರು ಮತ್ತು ಲೋಮಶನೊಂದಿಗೆ ಸಂತೋಷದಿಂದ ಕಾಮ್ಯಕದಲ್ಲಿ ಮೂರು ರಾತ್ರಿಗಳನ್ನು ಕಳೆದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶಸಂವಾದೇ ನವತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶಸಂವಾದ ಎನ್ನುವ ತೊಂಭತ್ತನೆಯ ಅಧ್ಯಾಯವು.

Related image

Comments are closed.