ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೮೯
ಋಷಿ ಲೋಮಶನ ಆಗಮನ
ಮಹರ್ಷಿ ಲೋಮಶನ ಆಗಮನ; ಶಕ್ರಸಭೆಯಲ್ಲಿ ಅರ್ಜುನನನ್ನು ನೋಡಿದುದನ್ನೂ, ಅವನ ಅಸ್ತ್ರ, ಗೀತ, ನೃತ್ಯ ಅಭ್ಯಾಸದ ಕುರಿತು, ಇಂದ್ರನು ಯುಧಿಷ್ಠಿರನಿಗೆ ಕಳುಹಿಸಿದ್ದ ಸಂದೇಶವನ್ನು ವರದಿಮಾಡಿದುದು (೧-೨೨).
03089001 ವೈಶಂಪಾಯನ ಉವಾಚ|
03089001a ಏವಂ ಸಂಭಾಷಮಾಣೇ ತು ಧೌಮ್ಯೇ ಕೌರವನಂದನ|
03089001c ಲೋಮಶಃ ಸುಮಹಾತೇಜಾ ಋಷಿಸ್ತತ್ರಾಜಗಾಮ ಹ||
ವೈಶಂಪಾಯನನು ಹೇಳಿದನು: “ಕೌರವನಂದನ! ಈ ರೀತಿ ಧೌಮ್ಯನು ಮಾತನಾಡುತ್ತಿರಲು ಅಲ್ಲಿಗೆ ಸುಮಹಾತೇಜಸ್ವಿ ಋಷಿ ಲೋಮಶನು ಆಗಮಿಸಿದನು.
03089002a ತಂ ಪಾಂಡವಾಗ್ರಜೋ ರಾಜಾ ಸಗಣೋ ಬ್ರಾಹ್ಮಣಾಶ್ಚ ತೇ|
03089002c ಉದತಿಷ್ಠನ್ಮಹಾಭಾಗಂ ದಿವಿ ಶಕ್ರಮಿವಾಮರಾಃ||
ಆಗ ಪಾಂಡವಾಗ್ರಜ ರಾಜನು ಬ್ರಾಹ್ಮಣರು ಮತ್ತು ಗುಂಪಿನೊಡನೆ ದಿವದಲ್ಲಿ ಶಕ್ರನು ಬಂದಾಗ ಅಮರರು ಹೇಗೋ ಹಾಗೆ ಆ ಮಹಾಭಾಗನು ಬಂದೊಡನೇ ಎದ್ದು ನಿಂತನು.
03089003a ತಮಭ್ಯರ್ಚ್ಯ ಯಥಾನ್ಯಾಯಂ ಧರ್ಮರಾಜೋ ಯುಧಿಷ್ಠಿರಃ|
03089003c ಪಪ್ರಚ್ಚಾಗಮನೇ ಹೇತುಮಟನೇ ಚ ಪ್ರಯೋಜನಂ||
ಧರ್ಮರಾಜ ಯುಧಿಷ್ಠಿರನು ಅವನನ್ನು ಯಥಾನ್ಯಾಯವಾಗಿ ಅರ್ಚಿಸಿ ಅವನ ಆಗಮನದ ಕಾರಣ ಮತ್ತು ಸಂಚಾರದ ಉದ್ದೇಶದ ಕುರಿತು ಕೇಳಿದನು.
03089004a ಸ ಪೃಷ್ಟಃ ಪಾಂಡುಪುತ್ರೇಣ ಪ್ರೀಯಮಾಣೋ ಮಹಾಮನಾಃ|
03089004c ಉವಾಚ ಶ್ಲಕ್ಷ್ಣಯಾ ವಾಚಾ ಹರ್ಷಯನ್ನಿವ ಪಾಂಡವಾನ್||
ಪಾಂಡುಪುತ್ರನ ಪ್ರಶ್ನೆಯಿಂದ ಸಂತೋಷಗೊಂಡ ಮಹಾಮನಸ್ವಿಯು ಮೃದುವಾಗಿ ಹರ್ಷದಿಂದ ಪಾಂಡವನಿಗೆ ಹೇಳಿದನು.
03089005a ಸಂಚರನ್ನಸ್ಮಿ ಕೌಂತೇಯ ಸರ್ವಲೋಕಾನ್ಯದೃಚ್ಚಯಾ|
03089005c ಗತಃ ಶಕ್ರಸ್ಯ ಸದನಂ ತತ್ರಾಪಶ್ಯಂ ಸುರೇಶ್ವರಂ||
“ಕೌಂತೇಯ! ಇಷ್ಟಬಂದಂತೆ ಸರ್ವ ಲೋಕಗಳನ್ನೂ ಸಂಚರಿಸುತ್ತಿರುವಾಗ ಶಕ್ರನ ಅರಮನೆಗೆ ಹೋಗಿ ಅಲ್ಲಿ ಸುರೇಶ್ವರನನ್ನು ಕಂಡೆನು.
03089006a ತವ ಚ ಭ್ರಾತರಂ ವೀರಮಪಶ್ಯಂ ಸವ್ಯಸಾಚಿನಂ|
03089006c ಶಕ್ರಸ್ಯಾರ್ಧಾಸನಗತಂ ತತ್ರ ಮೇ ವಿಸ್ಮಯೋ ಮಹಾನ್||
03089006e ಆಸೀತ್ಪುರುಷಶಾರ್ದೂಲ ದೃಷ್ಟ್ವಾ ಪಾರ್ಥಂ ತಥಾಗತಂ||
ಪುರುಷಶಾರ್ದೂಲ! ಅಲ್ಲಿ ನಿನ್ನ ತಮ್ಮ ವೀರ ಸವ್ಯಸಾಚಿಯು ಶಕ್ರನ ಆಸನದ ಅರ್ಧಭಾಗದಲ್ಲಿ ಕುಳಿತಿರುವುದನ್ನು ನೋಡಿದೆ. ಪಾರ್ಥನು ಅಲ್ಲಿಗೆ ಹೋಗಿ ಹಾಗೆ ಕುಳಿತಿರುವುದನ್ನು ಕಂಡು ನನಗೆ ಮಹದಾಶ್ಚರ್ಯವಾಯಿತು.
03089007a ಆಹ ಮಾಂ ತತ್ರ ದೇವೇಶೋ ಗಚ್ಚ ಪಾಂಡುಸುತಾನಿತಿ|
03089007c ಸೋಽಹಮಭ್ಯಾಗತಃ ಕ್ಷಿಪ್ರಂ ದಿದೃಕ್ಷುಸ್ತ್ವಾಂ ಸಹಾನುಜಂ||
ಅಲ್ಲಿ ನನಗೆ ದೇವೇಶನು ಪಾಂಡುಸುತರ ಬಳಿ ಹೋಗು ಎಂದು ಹೇಳಿದನು. ಈಗ ನಾನು ಕ್ಷಿಪ್ರವಾಗಿ ಅನುಜರೊಂದಿಗಿರುವ ನಿನ್ನನ್ನು ನೋಡಲು ಬಂದಿದ್ದೇನೆ.
03089008a ವಚನಾತ್ಪುರುಹೂತಸ್ಯ ಪಾರ್ಥಸ್ಯ ಚ ಮಹಾತ್ಮನಃ|
03089008c ಆಖ್ಯಾಸ್ಯೇ ತೇ ಪ್ರಿಯಂ ತಾತ ಮಹತ್ಪಾಂಡವನಂದನ||
ಪುರುಹೂತನ ಮತ್ತು ಮಹಾತ್ಮ ಪಾರ್ಥನ ಮಾತುಗಳಂತೆ ಮಗೂ! ಪಾಂಡುನಂದನ! ನಿನಗೆ ನಾನು ಅತ್ಯಂತ ಪ್ರಿಯಕರ ವಿಷಯಗಳನ್ನು ಹೇಳುತ್ತೇನೆ.
03089009a ಭ್ರಾತೃಭಿಃ ಸಹಿತೋ ರಾಜನ್ಕೃಷ್ಣಯಾ ಚೈವ ತಚ್ಶೃಣು|
03089009c ಯತ್ತ್ವಯೋಕ್ತೋ ಮಹಾಬಾಹುರಸ್ತ್ರಾರ್ಥಂ ಪಾಂಡವರ್ಷಭ||
ರಾಜನ್! ನಿನ್ನ ಸಹೋದರರು ಮತ್ತು ಕೃಷ್ಣೆಯೊಂದಿಗೆ ಅದನ್ನು ಕೇಳು. ಪಾಂಡವರ್ಷಭ! ಆ ಮಹಾಬಾಹುವಿಗೆ ಅಸ್ತ್ರಗಳನ್ನು ತರಲು ನೀನು ಹೇಳಿದ್ದೆ.
03089010a ತದಸ್ತ್ರಮಾಪ್ತಂ ಪಾರ್ಥೇನ ರುದ್ರಾದಪ್ರತಿಮಂ ಮಹತ್|
03089010c ಯತ್ತದ್ಬ್ರಹ್ಮಶಿರೋ ನಾಮ ತಪಸಾ ರುದ್ರಮಾಗತಂ||
ರುದ್ರನಿಂದ ಪಾರ್ಥನು ಬ್ರಹ್ಮಶಿರ ಎಂಬ ಹೆಸರಿನ ಆ ಮಹಾಸ್ತ್ರವನ್ನು ಪಡೆದನು. ರುದ್ರನು ಅದನ್ನು ತಪಸ್ಸುಮಾಡಿ ಪಡೆದುಕೊಂಡಿದ್ದನು.
03089011a ಅಮೃತಾದುತ್ಥಿತಂ ರೌದ್ರಂ ತಲ್ಲಬ್ಧಂ ಸವ್ಯಸಾಚಿನಾ|
03089011c ತತ್ಸಮಂತ್ರಂ ಸಸಂಹಾರಂ ಸಪ್ರಾಯಶ್ಚಿತ್ತಮಂಗಲಂ||
ಅಮೃತದಿಂದ ಉತ್ಪತ್ತಿಯಾದ ಆ ರೌದ್ರ ಅಸ್ತ್ರವನ್ನು ಸವ್ಯಸಾಚಿಯು ಅದರ ಮಂತ್ರ, ಸಂಹಾರ, ಸಪ್ರಾಯ ಮತ್ತು ಮಂಗಲದೊಂದಿಗೆ ಪಡೆದಿದ್ದಾನೆ.
03089012a ವಜ್ರಂ ಚಾನ್ಯಾನಿ ಚಾಸ್ತ್ರಾಣಿ ದಂಡಾದೀನಿ ಯುಧಿಷ್ಠಿರ|
03089012c ಯಮಾತ್ಕುಬೇರಾದ್ವರುಣಾದಿಂದ್ರಾಚ್ಚ ಕುರುನಂದನ||
03089012e ಅಸ್ತ್ರಾಣ್ಯಧೀತವಾನ್ಪಾರ್ಥೋ ದಿವ್ಯಾನ್ಯಮಿತವಿಕ್ರಮಃ||
ಯುಧಿಷ್ಠಿರ! ಕುರುನಂದನ! ಅಮಿತವಿಕ್ರಮಿ ಪಾರ್ಥನು ವಜ್ರ ಮತ್ತು ದಂಡವೇ ಮೊದಲಾದ ಇತರ ದಿವ್ಯಾಸ್ತ್ರಗಳನ್ನು ಯಮ, ಕುಬೇರ, ವರುಣ ಮತ್ತು ಇಂದ್ರರಿಂದ ಪಡೆದುಕೊಂಡಿದ್ದಾನೆ.
03089013a ವಿಶ್ವಾವಸೋಶ್ಚ ತನಯಾದ್ಗೀತಂ ನೃತ್ತಂ ಚ ಸಾಮ ಚ|
03089013c ವಾದಿತ್ರಂ ಚ ಯಥಾನ್ಯಾಯಂ ಪ್ರತ್ಯವಿಂದದ್ಯಥಾವಿಧಿ||
ವಿಶ್ವಾವಸುವಿನ ಮಗನಿಂದ ಅವನು ಯಥಾನ್ಯಾಯವಾಗಿ ಯಥಾವಿಧಿಯಾಗಿ ಗೀತ, ನೃತ್ಯ, ಸಾಮ ಮತ್ತು ವಾದ್ಯಗಳನ್ನು ಕಲಿತುಕೊಂಡಿದ್ದಾನೆ.
03089014a ಏವಂ ಕೃತಾಸ್ತ್ರಃ ಕೌಂತೇಯೋ ಗಾಂಧರ್ವಂ ವೇದಮಾಪ್ತವಾನ್|
03089014c ಸುಖಂ ವಸತಿ ಬೀಭತ್ಸುರನುಜಸ್ಯಾನುಜಸ್ತವ||
ಹೀಗೆ ಅಸ್ತ್ರಗಳನ್ನು ಪಡೆದು, ಗಾಂಧರ್ವವಿದ್ಯೆಯನ್ನು ಪಡೆದು ನಿನ್ನ ತಮ್ಮನ ತಮ್ಮ ಕೌಂತೇಯ ಬೀಭತ್ಸುವು ಅಲ್ಲಿ ಸುಖದಿಂದ ವಾಸಿಸುತ್ತಿದ್ದಾನೆ.
03089015a ಯದರ್ಥಂ ಮಾಂ ಸುರಶ್ರೇಷ್ಠ ಇದಂ ವಚನಮಬ್ರವೀತ್|
03089015c ತಚ್ಚ ತೇ ಕಥಯಿಷ್ಯಾಮಿ ಯುಧಿಷ್ಠಿರ ನಿಬೋಧ ಮೇ||
ಸುರಶ್ರೇಷ್ಠನು ನನಗೆ ಹೇಳಿಕಳುಹಿಸಿದ ಸಂದೇಶದ ಅರ್ಥವನ್ನು ಹೇಳುತ್ತೇನೆ. ಯುಧಿಷ್ಠಿರ! ನನ್ನನ್ನು ಕೇಳು.
03089016a ಭವಾನ್ಮನುಷ್ಯಲೋಕಾಯ ಗಮಿಷ್ಯತಿ ನ ಸಂಶಯಃ|
03089016c ಬ್ರೂಯಾದ್ಯುಧಿಷ್ಠಿರಂ ತತ್ರ ವಚನಾನ್ಮೇ ದ್ವಿಜೋತ್ತಮ||
“ದ್ವಿಜೋತ್ತಮ! ನೀನು ನಿಸ್ಸಂಶಯವಾಗಿಯೂ ಮನುಷ್ಯಲೋಕಕ್ಕೆ ಹೋಗಿ ಅಲ್ಲಿ ಯುಧಿಷ್ಠಿರನಿಗೆ ನನ್ನ ಈ ಮಾತುಗಳನ್ನು ಹೇಳು.
03089017a ಆಗಮಿಷ್ಯತಿ ತೇ ಭ್ರಾತಾ ಕೃತಾಸ್ತ್ರಃ ಕ್ಷಿಪ್ರಮರ್ಜುನಃ|
03089017c ಸುರಕಾರ್ಯಂ ಮಹತ್ಕೃತ್ವಾ ಯದಾಶಕ್ಯಂ ದಿವೌಕಸೈಃ||
ನಿನ್ನ ತಮ್ಮ ಅರ್ಜುನನು ಅಸ್ತ್ರಗಳನ್ನು ಪಡೆದು, ದೇವತೆಗಳಿಗೂ ಅಸಾಧ್ಯವಾದ ಮಹಾ ಸುರಕಾರ್ಯವೊಂದನ್ನು ಪೂರೈಸಿ ಕ್ಷಿಪ್ರವಾಗಿ ಬರುತ್ತಾನೆ.
03089018a ತಪಸಾ ತು ತ್ವಮಾತ್ಮಾನಂ ಭ್ರಾತೃಭಿಃ ಸಹ ಯೋಜಯ|
03089018c ತಪಸೋ ಹಿ ಪರಂ ನಾಸ್ತಿ ತಪಸಾ ವಿಂದತೇ ಮಹತ್||
ನಿನ್ನ ಸಹೋದರರೊಂದಿಗೆ ನೀನು ತಪಸ್ಸಿನಲ್ಲಿಯೇ ನಿನ್ನನ್ನು ತೊಡಗಿಸಿಕೋ. ತಪಸ್ಸಿಗಿಂತ ಶ್ರೇಷ್ಠವಾದುದು ಇನ್ನೊಂದಿಲ್ಲ. ತಪಸ್ಸೇ ಅತಿದೊಡ್ಡದೆಂದು ತಿಳಿ.
03089019a ಅಹಂ ಚ ಕರ್ಣಂ ಜಾನಾಮಿ ಯಥಾವದ್ಭರತರ್ಷಭ|
03089019c ನ ಸ ಪಾರ್ಥಸ್ಯ ಸಂಗ್ರಾಮೇ ಕಲಾಮರ್ಹತಿ ಷೋಡಶೀಂ||
ಭರತರ್ಷಭ! ನಾನೂ ಕೂಡ ಕರ್ಣನನ್ನು ತಿಳಿದುಕೊಂಡಿದ್ದೇನೆ. ಸಂಗ್ರಾಮದಲ್ಲಿ ಅವನು ಪಾರ್ಥನ ಹದಿನಾರರ ಅಂಶವೂ ಇಲ್ಲ.
03089020a ಯಚ್ಚಾಪಿ ತೇ ಭಯಂ ತಸ್ಮಾನ್ಮನಸಿಸ್ಥಮರಿಂದಮ|
03089020c ತಚ್ಚಾಪ್ಯಪಹರಿಷ್ಯಾಮಿ ಸವ್ಯಸಾಚಾವಿಹಾಗತೇ||
ಅರಿಂದಮ! ನಿನ್ನ ಮನಸ್ಸಿನಲ್ಲಿಟ್ಟುಕೊಂಡಿರುವ ಅವನ ಭಯವನ್ನು ಸವ್ಯಸಾಚಿಯು ಹಿಂದಿರುಗಿದ ಕೂಡಲೇ ನಾನು ತೆಗೆದುಹಾಕುತ್ತೇನೆ[1].
03089021a ಯಚ್ಚ ತೇ ಮಾನಸಂ ವೀರ ತೀರ್ಥಯಾತ್ರಾಮಿಮಾಂ ಪ್ರತಿ|
03089021c ತಚ್ಚ ತೇ ಲೋಮಶಃ ಸರ್ವಂ ಕಥಯಿಷ್ಯತ್ಯಸಂಶಯಂ||
ವೀರ! ತೀರ್ಥಯಾತ್ರೆಯ ಕುರಿತು ನೀನು ಮನಸ್ಸು ಮಾಡಿರುವುದರ ಕುರಿತು ನಿಸ್ಸಂಶಯವಾಗಿ ಲೋಮಶನು ಎಲ್ಲವನ್ನೂ ನಿನಗೆ ತಿಳಿಸಿಕೊಡುತ್ತಾನೆ.
03089022a ಯಚ್ಚ ಕಿಂ ಚಿತ್ತಪೋಯುಕ್ತಂ ಫಲಂ ತೀರ್ಥೇಷು ಭಾರತ|
03089022c ಮಹರ್ಷಿರೇಷ ಯದ್ಬ್ರೂಯಾತ್ತಚ್ಛ್ರದ್ಧೇಯಮನನ್ಯಥಾ||
ಭಾರತ! ತೀರ್ಥಗಳಲ್ಲಿ ತಪೋಯುಕ್ತನಾಗಿರುವುದರ ಫಲದ ಕುರಿತು ಮಹರ್ಷಿಯು ಏನೆಲ್ಲಾ ಹೇಳುತ್ತಾನೋ ಅದರಲ್ಲಿ ಶ್ರದ್ಧೆಯಿಡು.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶಸಂವಾದೇ ಏಕೋನನವತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶಸಂವಾದ ಎನ್ನುವ ಎಂಭತ್ತೊಂಭತ್ತನೆಯ ಅಧ್ಯಾಯವು.
[1] ಯುಧಿಷ್ಠಿರನಿಗೆ ಕಳುಹಿಸಿದ ಈ ಸಂದೇಶದಂತೆಯೇ ಮುಂದೆ ಇಂದ್ರನು ಕರ್ಣನ ಸಹಜ ಕವಚ-ಕುಂಡಲಗಳನ್ನು ಪಡೆದುಕೊಳ್ಳುತ್ತಾನೆ [ಆರಣ್ಯಕ ಪರ್ವ, ಕುಂಡಲಾಹರಣ ಪರ್ವ].