ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೮೮
ಧೌಮ್ಯನು ಯುಧಿಷ್ಠಿರನಿಗೆ ಉತ್ತರದಿಕ್ಕಿನಲ್ಲಿರುವ ತೀರ್ಥಕ್ಷೇತ್ರಗಳ ಕುರಿತು ಹೇಳಿದುದು (೧-೩೦).
03088001 ಧೌಮ್ಯ ಉವಾಚ|
03088001a ಉದೀಚ್ಯಾಂ ರಾಜಶಾರ್ದೂಲ ದಿಶಿ ಪುಣ್ಯಾನಿ ಯಾನಿ ವೈ|
03088001c ತಾನಿ ತೇ ಕೀರ್ತಯಿಷ್ಯಾಮಿ ಪುಣ್ಯಾನ್ಯಾಯತನಾನಿ ಚ||
ಧೌಮ್ಯನು ಹೇಳಿದನು: “ರಾಜಶಾರ್ದೂಲ! ಈಗ ನಾನು ಉತ್ತರದಿಕ್ಕಿನಲ್ಲಿರುವ ಪುಣ್ಯ ತೀರ್ಥಗಳ ಮತ್ತು ಪ್ರದೇಶಗಳ ಕುರಿತು ಹೇಳುತ್ತೇನೆ.
03088002a ಸರಸ್ವತೀ ಪುಣ್ಯವಹಾ ಹ್ರದಿನೀ ವನಮಾಲಿನೀ|
03088002c ಸಮುದ್ರಗಾ ಮಹಾವೇಗಾ ಯಮುನಾ ಯತ್ರ ಪಾಂಡವ||
ಪಾಂಡವ! ದಂಡೆಗಳಲ್ಲಿ ಸರೋವರ ಮತ್ತು ವನಗಳನ್ನು ಹೊಂದಿದ ಪುಣ್ಯವಾಹಿನಿ ಸರಸ್ವತಿಯಿದೆ. ಅಲ್ಲಿಯೇ ಮಹಾವೇಗದಿಂದ ಸಮುದ್ರದ ಕಡೆ ಹರಿಯುತ್ತಿರುವ ಯಮುನಾನದಿಯೂ ಇದೆ.
03088003a ತತ್ರ ಪುಣ್ಯತಮಂ ತೀರ್ಥಂ ಪ್ಲಕ್ಷಾವತರಣಂ ಶಿವಂ|
03088003c ಯತ್ರ ಸಾರಸ್ವತೈರಿಷ್ಟ್ವಾ ಗಚ್ಚಂತ್ಯವಭೃಥಂ ದ್ವಿಜಾಃ||
03088004a ಪುಣ್ಯಂ ಚಾಖ್ಯಾಯತೇ ದಿವ್ಯಂ ಶಿವಮಗ್ನಿಶಿರೋಽನಘ|
03088004c ಸಹದೇವೋಽಯಜದ್ಯತ್ರ ಶಮ್ಯಾಕ್ಷೇಪೇಣ ಭಾರತ||
ಅನಘ! ಭಾರತ! ಅಲ್ಲಿಯ ಪುಣ್ಯತಮ ಮಂಗಳಕರ ಸಾರಸ್ವತೀ ತೀರ್ಥದಲ್ಲಿ ದ್ವಿಜರು ಹೋಗಿ ಸ್ನಾನಮಾಡುತ್ತಾರೆ. ಅಲ್ಲಿಯೇ ಪುಣ್ಯವೂ ಮಂಗಳಕರವೂ ಆದ ಅಗ್ನಿಶಿರ ಎನ್ನುವ ತೀರ್ಥವಿದೆ - ಅಲ್ಲಿ ಸಹದೇವನು ಯಾಗದ ಬಟ್ಟಲನ್ನು ಎಸೆದು ಅಳೆದ ಜಾಗದಲ್ಲಿ ಯಜ್ಞವನ್ನು ಮಾಡಿದ್ದನು.
03088005a ಏತಸ್ಮಿನ್ನೇವ ಚಾರ್ಥೇಯಮಿಂದ್ರಗೀತಾ ಯುಧಿಷ್ಠಿರ|
03088005c ಗಾಥಾ ಚರತಿ ಲೋಕೇಽಸ್ಮಿನ್ಗೀಯಮಾನಾ ದ್ವಿಜಾತಿಭಿಃ||
ಯುಧಿಷ್ಠಿರ! ಅದೇ ಸಂದರ್ಭದಲ್ಲಿ ಮೊದಲು ಇಂದ್ರನಿಂದ ಹಾಡಲ್ಪಟ್ಟ ಮತ್ತು ಈ ಲೋಕದಲ್ಲಿ ದ್ವಿಜರು ಹಾಡುವ ಈ ಇಂದ್ರಗೀತೆ ರಚಿಸಲ್ಪಟ್ಟಿತು.
03088006a ಅಗ್ನಯಃ ಸಹದೇವೇನ ಯೇ ಚಿತಾ ಯಮುನಾಮನು|
03088006c ಶತಂ ಶತಸಹಸ್ರಾಣಿ ಸಹಸ್ರಶತದಕ್ಷಿಣಾಃ||
ಯಮುನಾನದಿಯ ತೀರದಲ್ಲಿ ಸಹದೇವನು ಒಂದು ಕೋಟಿ ಅಗ್ನಿಗಳನ್ನು, ಒಂದು ಲಕ್ಷ ದಕ್ಷಿಣೆಗಳನ್ನಿತ್ತು ರಚಿಸಿದನು.
03088007a ತತ್ರೈವ ಭರತೋ ರಾಜಾ ಚಕ್ರವರ್ತೀ ಮಹಾಯಶಾಃ|
03088007c ವಿಂಶತಿಂ ಸಪ್ತ ಚಾಷ್ಟೌ ಚ ಹಯಮೇಧಾನುಪಾಹರತ್||
ರಾಜಾ ಭಾರತ! ಅಲ್ಲಿಯೇ ಮಹಾಯಶಸ್ವಿ ಚಕ್ರವರ್ತಿಯು ಮೂವತ್ತೈದು ಅಶ್ವಮೇಧಯಾಗಗಳನ್ನು ನೆರವೇರಿಸಿದನು.
03088008a ಕಾಮಕೃದ್ಯೋ ದ್ವಿಜಾತೀನಾಂ ಶ್ರುತಸ್ತಾತ ಮಯಾ ಪುರಾ|
03088008c ಅತ್ಯಂತಮಾಶ್ರಮಃ ಪುಣ್ಯಃ ಸರಕಸ್ತಸ್ಯ ವಿಶ್ರುತಃ||
ತಾತ! ದ್ವಿಜರ ಬಯಕೆಗಳನ್ನು ಪೂರೈಸಿದ ಅತ್ಯಂತ ಪುಣ್ಯಕರವೆಂದು ನಾನು ಹಿಂದೆಯೇ ಕೇಳಿದ್ದ ಸರಕಸ್ತನ ಆಶ್ರಮವಿದೆ.
03088009a ಸರಸ್ವತೀ ನದೀ ಸದ್ಭಿಃ ಸತತಂ ಪಾರ್ಥ ಪೂಜಿತಾ|
03088009c ವಾಲಖಿಲ್ಯೈರ್ಮಹಾರಾಜ ಯತ್ರೇಷ್ಟಮೃಷಿಭಿಃ ಪುರಾ||
ಪಾರ್ಥ! ಸರಸ್ವತೀ ನದಿಯು ಸಜ್ಜನರಿಂದ ಯಾವಾಗಲೂ ಪೂಜಿಸಲ್ಪಟ್ಟಿದೆ. ಮಹಾರಾಜ! ಋಷಿ ವಾಲಖಿಲ್ಯರು ಹಿಂದೆ ಇಲ್ಲಿಯೇ ಯಾಗಮಾಡಿದ್ದರು.
03088010a ದೃಷದ್ವತೀ ಪುಣ್ಯತಮಾ ತತ್ರ ಖ್ಯಾತಾ ಯುಧಿಷ್ಠಿರ|
03088010c ತತ್ರ ವೈವರ್ಣ್ಯವರ್ಣೌ ಚ ಸುಪುಣ್ಯೌ ಮನುಜಾಧಿಪ||
03088011a ವೇದಜ್ಞೌ ವೇದವಿದಿತೌ ವಿದ್ಯಾವೇದವಿದಾವುಭೌ|
03088011c ಯಜಂತೌ ಕ್ರತುಭಿರ್ನಿತ್ಯಂ ಪುಣ್ಯೈರ್ಭರತಸತ್ತಮ||
ಯುಧಿಷ್ಠಿರ! ಮನುಜಾಧಿಪ! ಭರತಸತ್ತಮ! ಅಲ್ಲಿಯೇ ಪುಣ್ಯತಮ ವಿಖ್ಯಾತ ಧೃಷದ್ವತೀ ನದಿಯಿದೆ. ಅಲ್ಲಿ ವೇದಜ್ಞ, ವೇದವಿದಿತ, ವೇದವಿದ್ಯೆಗಳನ್ನು ತಿಳಿದಿರುವ, ಸುಪುಣ್ಯ ವೈವರ್ಣ್ಯ ಮತ್ತು ವರ್ಣರು ನಿತ್ಯವೂ ಪುಣ್ಯಕರ ಯಾಗಗಳನ್ನು ಮಾಡುತ್ತಿರುತ್ತಾರೆ.
03088012a ಸಮೇತ್ಯ ಬಹುಶೋ ದೇವಾಃ ಸೇಂದ್ರಾಃ ಸವರುಣಾಃ ಪುರಾ|
03088012c ವಿಶಾಖಯೂಪೇಽತಪ್ಯಂತ ತಸ್ಮಾತ್ಪುಣ್ಯತಮಃ ಸ ವೈ||
ಹಿಂದೆ ಇಂದ್ರ ಮತ್ತು ವರುಣರನ್ನೊಡಗೂಡಿ ಬಹುಸಂಖ್ಯೆಯಲ್ಲಿ ದೇವತೆಗಳು ವಿಶಾಖಯೂಪದಲ್ಲಿ ತಪಸ್ಸುಮಾಡಿದ್ದರು. ಆದುದರಿಂದ ಅದು ಪುಣ್ಯತಮ.
03088013a ಋಷಿರ್ಮಹಾನ್ಮಹಾಭಾಗೋ ಜಮದಗ್ನಿರ್ಮಹಾಯಶಾಃ|
03088013c ಪಲಾಶಕೇಷು ಪುಣ್ಯೇಷು ರಮ್ಯೇಷ್ವಯಜತಾಭಿಭೂಃ||
ಮಹಾನೃಷಿ ಮಹಾಭಾಗ ಮಹಾಯಶಸ್ವಿ ಜಮದಗ್ನಿಯು ಪುಣ್ಯವೂ ರಮ್ಯವೂ ಆದ ಪಕಾಶಕೇಷದಲ್ಲಿ ಪ್ರಮುಖ ಯಜ್ಞಮಾಡಿದ್ದನು.
03088014a ಯತ್ರ ಸರ್ವಾಃ ಸರಿಚ್ಚ್ರೇಷ್ಠಾಃ ಸಾಕ್ಷಾತ್ತಮೃಷಿಸತ್ತಮಂ|
03088014c ಸ್ವಂ ಸ್ವಂ ತೋಯಮುಪಾದಾಯ ಪರಿವಾರ್ಯೋಪತಸ್ಥಿರೇ||
ಅಲ್ಲಿ ಸರ್ವ ನದಿಗಳೂ ಸಾಕ್ಷಾತ್ತಾಗಿ, ಪ್ರತಿಯೊಬ್ಬರೂ ತಮ್ಮ ತಮ್ಮ ನೀರನ್ನು ಹೊತ್ತು. ಆ ಋಷಿಸತ್ತಮನನ್ನು ಸುತ್ತುವರೆದು ನಿಂತಿದ್ದರು.
03088015a ಅಪಿ ಚಾತ್ರ ಮಹಾರಾಜ ಸ್ವಯಂ ವಿಶ್ವಾವಸುರ್ಜಗೌ|
03088015c ಇಮಂ ಶ್ಲೋಕಂ ತದಾ ವೀರ ಪ್ರೇಕ್ಷ್ಯ ವೀರ್ಯಂ ಮಹಾತ್ಮನಃ||
ಮಹಾರಾಜ! ಅಲ್ಲಿಯೂ ಕೂಡ ಸ್ವಯಂ ವಿಶ್ವಾವಸುವು ಆ ಮಹಾತ್ಮ ವೀರನ ವೀರ್ಯವನ್ನು ನೋಡಿ ಈ ಶ್ಲೋಕವನ್ನು ಹಾಡಿದ್ದನು:
03088016a ಯಜಮಾನಸ್ಯ ವೈ ದೇವಾಂ ಜಮದಗ್ನೇರ್ಮಹಾತ್ಮನಃ|
03088016c ಆಗಮ್ಯ ಸರಿತಃ ಸರ್ವಾ ಮಧುನಾ ಸಮತರ್ಪಯನ್||
“ಮಹಾತ್ಮ ಜಮದಗ್ನಿಯು ಯಾಗದಿಂದ ದೇವತೆಗಳನ್ನು ಪೂಜಿಸುತ್ತಿರುವಾಗ ಎಲ್ಲಾ ನದಿಗಳೂ ಆಗಮಿಸಿ ಅವನಿಗೆ ಮಧುವನ್ನು ಸಮರ್ಪಿಸಿದವು.”
03088017a ಗಂಧರ್ವಯಕ್ಷರಕ್ಷೋಭಿರಪ್ಸರೋಭಿಶ್ಚ ಶೋಭಿತಂ|
03088017c ಕಿರಾತಕಿನ್ನರಾವಾಸಂ ಶೈಲಂ ಶಿಖರಿಣಾಂ ವರಂ||
03088018a ಬಿಭೇದ ತರಸಾ ಗಂಗಾ ಗಂಗಾದ್ವಾರೇ ಯುಧಿಷ್ಠಿರ|
03088018c ಪುಣ್ಯಂ ತತ್ಖ್ಯಾಯತೇ ರಾಜನ್ಬ್ರಹ್ಮರ್ಷಿಗಣಸೇವಿತಂ||
ಯುಧಿಷ್ಠಿರ! ರಾಜನ್! ಗಂಧರ್ವ-ಯಕ್ಷ-ರಾಕ್ಷಸ-ಅಪ್ಸರೆಯರರಿಂದ ಶೋಭಿತ, ಕಿರಾತ ಕಿನ್ನರರು ವಾಸಿಸುವ, ಶೈಲಗಳ ಶಿಖರಗಳಲ್ಲಿಯೇ ಶ್ರೇಷ್ಠ, ಬ್ರಹ್ಮರ್ಷಿಗಣಸೇವಿತ, ಗಂಗೆಯು ಉದ್ಭವಿಸುವ ಗಂಗಾದ್ವಾರವು ಪುಣ್ಯಕರವೆಂದು ವಿಖ್ಯಾತವಾಗಿದೆ.
03088019a ಸನತ್ಕುಮಾರಃ ಕೌರವ್ಯ ಪುಣ್ಯಂ ಕನಖಲಂ ತಥಾ|
03088019c ಪರ್ವತಶ್ಚ ಪುರುರ್ನಾಮ ಯತ್ರ ಜಾತಃ ಪುರೂರವಾಃ||
ಕೌರವ್ಯ! ಇಲ್ಲಿಯೇ ಸನತ್ಕುಮಾರ, ಪುಣ್ಯಕರ ಕನಖಲ ಮತ್ತು ಪುರೂರವನು ಹುಟ್ಟಿದ ಪುರು ಎನ್ನುವ ಹೆಸರಿನ ಪರ್ವತವೂ ಇವೆ.
03088020a ಭೃಗುರ್ಯತ್ರ ತಪಸ್ತೇಪೇ ಮಹರ್ಷಿಗಣಸೇವಿತಃ|
03088020c ಸ ರಾಜನ್ನಾಶ್ರಮಃ ಖ್ಯಾತೋ ಭೃಗುತುಂಗೋ ಮಹಾಗಿರಿಃ||
ರಾಜನ್! ಇಲ್ಲಿಯೇ ಮಹರ್ಷಿಗಣಸೇವಿತ, ಭೃಗುವು ತಪಸ್ಸನ್ನು ಮಾಡಿದ, ಭೃಗುತುಂಗ ಆಶ್ರಮ ಎಂದು ಖ್ಯಾತವಾದ ಮಹಾಗಿರಿಯಿದೆ.
03088021a ಯಚ್ಚ ಭೂತಂ ಭವಿಷ್ಯಚ್ಚ ಭವಚ್ಚ ಪುರುಷರ್ಷಭ|
03088021c ನಾರಾಯಣಃ ಪ್ರಭುರ್ವಿಷ್ಣುಃ ಶಾಶ್ವತಃ ಪುರುಷೋತ್ತಮಃ||
ಪುರುಷರ್ಷಭ! ಹಿಂದೆ ಆಗಿಹೋದ, ಮುಂದೆ ಆಗಲಿರುವ ಮತ್ತು ಈಗ ಆಗುತ್ತಿರುವ ಎಲ್ಲವೂ ಪ್ರಭು, ವಿಷ್ಣು, ಶಾಶ್ವತ, ಪುರುಷೋತ್ತಮ ನಾರಾಯಣನಲ್ಲಿವೆ.
03088022a ತಸ್ಯಾತಿಯಶಸಃ ಪುಣ್ಯಾಂ ವಿಶಾಲಾಂ ಬದರೀಮನು|
03088022c ಆಶ್ರಮಃ ಖ್ಯಾಯತೇ ಪುಣ್ಯಸ್ತ್ರಿಷು ಲೋಕೇಷು ವಿಶ್ರುತಃ||
ಆ ಅತಿಯಶಸ್ವಿಯ ಪುಣ್ಯಕರ ವಿಶಾಲ, ಮೂರು ಲೋಕಗಳಲ್ಲಿಯೂ ವಿಶ್ರುತ ಬದರೀ ಆಶ್ರಮವು ಅಲ್ಲಿದೆ.
03088023a ಉಷ್ಣತೋಯವಹಾ ಗಂಗ ಶೀತತೋಯವಹಾಪರಾ|
03088023c ಸುವರ್ಣಸಿಕತಾ ರಾಜನ್ವಿಶಾಲಾಂ ಬದರೀಮನು||
ರಾಜನ್! ವಿಶಾಲ ಬದರಿಕಾಶ್ರಮದಲ್ಲಿ ಬಿಸಿನೀರನ್ನು ಹರಿಸುವ ಗಂಗೆಯು ತಣ್ಣಿರನ್ನು ಹರಿಸುತ್ತಾ, ಬಂಗಾರದ ಬಣ್ಣದ ಮರಳನ್ನು ಚೆಲ್ಲಿ ಹರಿಯುತ್ತಾಳೆ.
03088024a ಋಷಯೋ ಯತ್ರ ದೇವಾಶ್ಚ ಮಹಾಭಾಗಾ ಮಹೌಜಸಃ|
03088024c ಪ್ರಾಪ್ಯ ನಿತ್ಯಂ ನಮಸ್ಯಂತಿ ದೇವಂ ನಾರಾಯಣಂ ವಿಭುಂ||
ಮಹಾಭಾಗ! ಅಲ್ಲಿ ಋಷಿಗಳೂ, ದೇವತೆಗಳೂ, ಮಹೌಜಸರೂ ಬಂದು ನಿತ್ಯವೂ ದೇವ ವಿಭು ನಾರಾಯಣನನ್ನು ನಮಸ್ಕರಿಸುತ್ತಾರೆ.
03088025a ಯತ್ರ ನಾರಾಯಣೋ ದೇವಃ ಪರಮಾತ್ಮಾ ಸನಾತನಃ|
03088025c ತತ್ರ ಕೃತ್ಸ್ನಂ ಜಗತ್ಪಾರ್ಥ ತೀರ್ಥಾನ್ಯಾಯತನಾನಿ ಚ||
ಪಾರ್ಥ! ಎಲ್ಲಿ ದೇವ ಪರಮಾತ್ಮ ಸನಾತನ ನಾರಾಯಣನಿದ್ದಾನೆಯೋ ಅಲ್ಲಿ ಜಗತ್ತಿನ ಎಲ್ಲ ತೀರ್ಥಗಳೂ ಪುಣ್ಯಕ್ಷೇತ್ರಗಳು ಇವೆ.
03088026a ತತ್ಪುಣ್ಯಂ ತತ್ಪರಂ ಬ್ರಹ್ಮ ತತ್ತೀರ್ಥಂ ತತ್ತಪೋವನಂ|
03088026c ತತ್ರ ದೇವರ್ಷಯಃ ಸಿದ್ಧಾಃ ಸರ್ವೇ ಚೈವ ತಪೋಧನಾಃ||
ಅವನು ಪುಣ್ಯ. ಅವನು ಪರಬ್ರಹ್ಮ. ಅವನೇ ತೀರ್ಥ. ಅವನೇ ತಪೋವನ. ಅಲ್ಲಿಯೇ ಎಲ್ಲ ದೇವರ್ಷಿ-ಸಿದ್ಧ-ತಪೋಧನರೂ ಇದ್ದಾರೆ.
03088027a ಆದಿದೇವೋ ಮಹಾಯೋಗೀ ಯತ್ರಾಸ್ತೇ ಮಧುಸೂದನಃ|
03088027c ಪುಣ್ಯಾನಾಮಪಿ ತತ್ಪುಣ್ಯಂ ತತ್ರ ತೇ ಸಂಶಯೋಽಸ್ತು ಮಾ||
ಆದಿದೇವ ಮಹಾಯೋಗಿ ಮಧುಸೂದನನು ಎಲ್ಲಿದ್ದಾನೋ ಅದು ಪುಣ್ಯಗಳಿಗಿಂತಲೂ ಪುಣ್ಯಕರ ಎನ್ನುವುದರಲ್ಲಿ ಏನೂ ಸಂಶವನ್ನಿಟ್ಟುಕೊಳ್ಳಬೇಡ.
03088028a ಏತಾನಿ ರಾಜನ್ಪುಣ್ಯಾನಿ ಪೃಥಿವ್ಯಾಂ ಪೃಥಿವೀಪತೇ|
03088028c ಕೀರ್ತಿತಾನಿ ನರಶ್ರೇಷ್ಠ ತೀರ್ಥಾನ್ಯಾಯತನಾನಿ ಚ||
ರಾಜನ್! ಪೃಥಿವೀಪತೇ! ನರಶ್ರೇಷ್ಠ! ಇವೆಲ್ಲವೂ ಪೃಥ್ವಿಯಲ್ಲಿರುವ ಪುಣ್ಯ ತೀರ್ಥಗಳು ಮತ್ತು ಕ್ಷೇತ್ರಗಳ ವರ್ಣನೆ.
03088029a ಏತಾನಿ ವಸುಭಿಃ ಸಾಧ್ಯೈರಾದಿತ್ಯೈರ್ಮರುದಶ್ವಿಭಿಃ|
03088029c ಋಷಿಭಿರ್ಬ್ರಹ್ಮಕಲ್ಪೈಶ್ಚ ಸೇವಿತಾನಿ ಮಹಾತ್ಮಭಿಃ||
ಇವುಗಳನ್ನು ವಸು-ಸಾಧ್ಯ-ಆದಿತ್ಯ-ಮರುತ್ತು-ಅಶ್ವಿನಿಯರು, ಋಷಿಗಳು, ಬ್ರಹ್ಮಕಲ್ಪ ಮಹಾತ್ಮರು ಎಲ್ಲರೂ ಸೇವಿಸುತ್ತಾರೆ.
03088030a ಚರನೇತಾನಿ ಕೌಂತೇಯ ಸಹಿತೋ ಬ್ರಾಹ್ಮಣರ್ಷಭೈಃ|
03088030c ಭ್ರಾತೃಭಿಶ್ಚ ಮಹಾಭಾಗೈರುತ್ಕಂಠಾಂ ವಿಜಹಿಷ್ಯಸಿ||
ಕೌಂತೇಯ! ಬ್ರಾಹ್ಮಣರು, ಋಷಿಗಳು, ಮತ್ತು ಮಹಾಭಾಗ ತಮ್ಮಂದಿರೊಂದಿಗೆ ಈ ಕ್ಷೇತ್ರಗಳಿಗೆ ಹೋದರೆ ನಿನ್ನ ದುಗುಡವನ್ನು ತೊರೆಯುತ್ತೀಯೆ.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಧೌಮ್ಯತೀರ್ಥಯಾತ್ರಾಯಾಂ ಅಷ್ಟಾಶೀತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಧೌಮ್ಯತೀರ್ಥಯಾತ್ರಾ ಎನ್ನುವ ಎಂಭತ್ತೆಂಟನೆಯ ಅಧ್ಯಾಯವು.