ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೮೬
ಧೌಮ್ಯನು ಯುಧಿಷ್ಠಿರನಿಗೆ ದಕ್ಷಿಣದಿಕ್ಕಿನಲ್ಲಿರುವ ತೀರ್ಥಕ್ಷೇತ್ರಗಳ ಕುರಿತು ಹೇಳಿದುದು (೧-೨೪).
03086001 ಧೌಮ್ಯ ಉವಾಚ|
03086001a ದಕ್ಷಿಣಸ್ಯಾಂ ತು ಪುಣ್ಯಾನಿ ಶೃಣು ತೀರ್ಥಾನಿ ಭಾರತ|
03086001c ವಿಸ್ತರೇಣ ಯಥಾಬುದ್ಧಿ ಕೀರ್ತ್ಯಮಾನಾನಿ ಭಾರತ||
ಧೌಮ್ಯನು ಹೇಳಿದನು: “ಭಾರತ! ಈಗ ಕೇಳು. ದಕ್ಷಿಣದಲ್ಲಿರುವ ಪುಣ್ಯ ತೀರ್ಥಗಳ ಕುರಿತು ನನಗೆ ತಿಳಿದಷ್ಟನ್ನು ವಿಸ್ತಾರವಾಗಿ ಹೇಳುತ್ತೇನೆ.
03086002a ಯಸ್ಯಾಮಾಖ್ಯಾಯತೇ ಪುಣ್ಯಾ ದಿಶಿ ಗೋದಾವರೀ ನದೀ|
03086002c ಬಹ್ವಾರಾಮಾ ಬಹುಜಲಾ ತಾಪಸಾಚರಿತಾ ಶುಭಾ||
03086003a ವೇಣ್ಣಾ ಭೀಮರಥೀ ಚೋಭೇ ನದ್ಯೌ ಪಾಪಭಯಾಪಹೇ|
03086003c ಮೃಗದ್ವಿಜಸಮಾಕೀರ್ಣೇ ತಾಪಸಾಲಯಭೂಷಿತೇ||
ಆ ದಿಕ್ಕಿನಲ್ಲಿ ಪುಣ್ಯ ನದಿ ಗೋದಾವರಿಯ ಕುರಿತು ಹೇಳುತ್ತಾರೆ. ಬಹಳಷ್ಟು ಕಡೆಗಳಲ್ಲಿ ನಿಂತು, ಬಹಳಷ್ಟು ಕವಲುಗಳಾಗಿ ಹರಿಯುವ ಆ ನದಿಯನ್ನು ತಾಪಸಿಗಳು ಅನುಸರಿಸುತ್ತಾರೆ. ಮೃಗಪಕ್ಷಿಗಳ ಸಂಕೀರ್ಣಗಳಿಂದ ಮತ್ತು ತಾಪಸಿಗಳ ಆಶ್ರಮಗಳಿಂದ ಅಲಂಕರಿಸಲ್ಪಟ್ಟ ವೇಣ್ಣಾ ಮತ್ತು ಭೀಮರಥಿ ಈ ಎರಡು ನದಿಗಳು ಪಾಪಭಯವನ್ನು ಹೋಗಲಾಡಿಸುತ್ತವೆ.
03086004a ರಾಜರ್ಷೇಸ್ತತ್ರ ಚ ಸರಿನ್ನೃಗಸ್ಯ ಭರತರ್ಷಭ|
03086004c ರಮ್ಯತೀರ್ಥಾ ಬಹುಜಲಾ ಪಯೋಷ್ಣೀ ದ್ವಿಜಸೇವಿತಾ||
ಭರತರ್ಷಭ! ಅಲ್ಲಿ ರಾಜರ್ಷಿ ನೃಗನ ನದಿ, ರಮ್ಯತೀರ್ಥ, ತುಂಬಾ ನೀರಿರುವ, ದ್ವಿಜರು ಸೇವಿಸುವ ಪಯೋಷ್ಣಿಯಿದೆ.
03086005a ಅಪಿ ಚಾತ್ರ ಮಹಾಯೋಗೀ ಮಾರ್ಕಂಡೇಯೋ ಮಹಾತಪಾಃ|
03086005c ಅನುವಂಷ್ಯಾಂ ಜಗೌ ಗಾಥಾಂ ನೃಗಸ್ಯ ಧರಣೀಪತೇಃ||
ಅಲ್ಲಿಯೇ ಮಹಾಯೋಗಿ ಮಹಾತಪಸ್ವಿ ಮಾರ್ಕಂಡೇಯನು ಧರಣೀಪತಿ ನೃಗನ ಕುರಿತಾಗಿ ಜಗತ್ತೇ ಪಠಿಸುವ ಈ ಗಾಥವನ್ನು ಹೇಳಿದ್ದನು:
03086006a ನೃಗಸ್ಯ ಯಜಮಾನಸ್ಯ ಪ್ರತ್ಯಕ್ಷಮಿತಿ ನಃ ಶ್ರುತಂ|
03086006c ಅಮಾದ್ಯದಿಂದ್ರಃ ಸೋಮೇನ ದಕ್ಷಿಣಾಭಿರ್ದ್ವಿಜಾತಯಃ||
“ನೃಗನ ಯಾಗದಲ್ಲಿ ಇಂದ್ರನು ಸೋಮವನ್ನು ಕುಡಿದು ಮತ್ತು ದ್ವಿಜರು ಅವನ ದಕ್ಷಿಣೆಯನ್ನು ಪಡೆದು ಅಮಲೇರಿದರು ಎಂದು ಬರೀ ಕೇಳಿದ್ದಲ್ಲ, ಪ್ರತ್ಯಕ್ಷವಾಗಿ ನೋಡಿದ್ದೇನೆ!”
03086007a ಮಾಠರಸ್ಯ ವನಂ ಪುಣ್ಯಂ ಬಹುಮೂಲಫಲಂ ಶಿವಂ|
03086007c ಯೂಪಶ್ಚ ಭರತಶ್ರೇಷ್ಠ ವರುಣಸ್ರೋತಸೇ ಗಿರೌ||
ಭರತಶ್ರೇಷ್ಠ! ವರುಣಸ್ರೋತ ಗಿರಿಯ ಮೇಲೆ ಪುಣ್ಯಕರ, ಮಂಗಳಕರ, ಮತ್ತು ತುಂಬಾ ಮೂಲಿಕೆ ಫಲಗಳಿಂದೊಡಗೂಡಿದ ಮಾಠರ ಎನ್ನುವ ವನವೂ ಯೂಪವೂ ಇದೆ.
03086008a ಪ್ರವೇಣ್ಯುತ್ತರಪಾರ್ಶ್ವೇ ತು ಪುಣ್ಯೇ ಕಣ್ವಾಶ್ರಮೇ ತಥಾ|
03086008c ತಾಪಸಾನಾಮರಣ್ಯಾನಿ ಕೀರ್ತಿತಾನಿ ಯಥಾಶ್ರುತಿ||
ಪ್ರವೇಣಿಯ ಉತ್ತರ ಭಾಗದಲ್ಲಿ ಮತ್ತು ಕಣ್ವನ ಪುಣ್ಯಾಶ್ರಮದಲ್ಲಿ ತಾಪಸರು ವಾಸಿಸುವ ಅರಣ್ಯಗಳಿವೆ ಎಂದು ಹೇಳುವುದನ್ನು ಕೇಳಿದ್ದೇವೆ.
03086009a ವೇದೀ ಶೂರ್ಪಾರಕೇ ತಾತ ಜಮದಗ್ನೇರ್ಮಹಾತ್ಮನಃ|
03086009c ರಮ್ಯಾ ಪಾಷಾಣತೀರ್ಥಾ ಚ ಪುರಶ್ಚಂದ್ರಾ ಚ ಭಾರತ||
ಮಗು! ಭಾರತ! ಶೂರ್ಪಾರಕದಲ್ಲಿ ಮಹಾತ್ಮ ಜಮದಗ್ನಿಯ ರಮ್ಯವಾದ ಪಾಷಾಣ ತೀರ್ಥ ಮತ್ತು ಪುರಶ್ಚಂದ್ರಗಳಿವೆ.
03086010a ಅಶೋಕತೀರ್ಥಂ ಮರ್ತ್ಯೇಷು ಕೌಂತೇಯ ಬಹುಲಾಶ್ರಮಂ|
03086010c ಅಗಸ್ತ್ಯತೀರ್ಥಂ ಪಾಂಡ್ಯೇಷು ವಾರುಣಂ ಚ ಯುಧಿಷ್ಠಿರ||
03086011a ಕುಮಾರ್ಯಃ ಕಥಿತಾಃ ಪುಣ್ಯಾಃ ಪಾಂಡ್ಯೇಷ್ವೇವ ನರರ್ಷಭ|
ಕೌಂತೇಯ! ಯುಧಿಷ್ಠಿರ! ನರರ್ಷಭ! ಮರ್ತ್ಯದೇಶದಲ್ಲಿ ಬಹು ಆಶ್ರಮಗಳಿಂದೊಡಗೂಡಿದ ಅಶೋಕತೀರ್ಥ, ಪಾಂಡ್ಯದೇಶದಲ್ಲಿ ಅಗಸ್ತ್ಯ ಮತ್ತು ವಾರುಣ ತೀರ್ಥಗಳು, ಮತ್ತು ಅದೇ ಪಾಂಡ್ಯದೇಶದಲ್ಲಿ ಪುಣ್ಯ ಕುಮಾರಿಯರು ಇದ್ದಾರೆ ಎಂದು ಹೇಳುತ್ತಾರೆ.
03086011c ತಾಮ್ರಪರ್ಣೀಂ ತು ಕೌಂತೇಯ ಕೀರ್ತಯಿಷ್ಯಾಮಿ ತಾಂ ಶೃಣು||
03086012a ಯತ್ರ ದೇವೈಸ್ತಪಸ್ತಪ್ತಂ ಮಹದಿಚ್ಚದ್ಭಿರಾಶ್ರಮೇ|
03086012c ಗೋಕರ್ಣಮಿತಿ ವಿಖ್ಯಾತಂ ತ್ರಿಷು ಲೋಕೇಷು ಭಾರತ||
03086013a ಶೀತತೋಯೋ ಬಹುಜಲಃ ಪುಣ್ಯಸ್ತಾತ ಶಿವಶ್ಚ ಸಃ|
ಕೌಂತೇಯ! ಈಗ ತಾಮ್ರಪರ್ಣಿಯ ಕುರಿತು ಹೇಳುತ್ತೇನೆ. ಕೇಳು. ಅಲ್ಲಿ ದೇವತೆಗಳು ಮಹದಿಚ್ಛೆಯನ್ನು ಸಾಧಿಸಲು ತಪಸ್ಸನ್ನು ತಪಿಸಿದರು. ಭಾರತ! ಮಗೂ! ಅದೇ ತಣ್ಣೀರಿನ, ತುಂಬಾ ನೀರಿರುವ, ಪುಣ್ಯವೂ ಮಂಗಳಕರವೂ ಆದ ಗೋಕರ್ಣವೆಂದು ಮೂರು ಲೋಕಗಳಲ್ಲಿ ವಿಖ್ಯಾತವಾಗಿದೆ.
03086013c ಹ್ರದಃ ಪರಮದುಷ್ಪ್ರಾಪೋ ಮಾನುಷೈರಕೃತಾತ್ಮಭಿಃ||
ಅಲ್ಲಿಯೇ ತಮ್ಮ ಆತ್ಮವನ್ನು ಪಳಗಿಸದೇ ಇದ್ದವರಿಗೆ ಹೋಗಲು ಕಷ್ಟವಾಗುವ ಸರೋವರವಿದೆ.
03086014a ತತ್ರೈವ ತೃಣಸೋಮಾಗ್ನೇಃ ಸಂಪನ್ನಫಲಮೂಲವಾನ್|
03086014c ಆಶ್ರಮೋಽಗಸ್ತ್ಯಶಿಷ್ಯಸ್ಯ ಪುಣ್ಯೋ ದೇವಸಭೇ ಗಿರೌ||
ಅಲ್ಲಿಯೇ ದೇವಸಭ ಗಿರಿಯಲ್ಲಿ ಅಗಸ್ತ್ಯನ ಶಿಷ್ಯ ತೃಣಸೋಮಾಗ್ನಿಯ ಫಲಮೂಲ ಸಮೃದ್ಧ ಪುಣ್ಯಾಶ್ರಮವಿದೆ.
03086015a ವೈಡೂರ್ಯಪರ್ವತಸ್ತತ್ರ ಶ್ರೀಮಾನ್ಮಣಿಮಯಃ ಶಿವಃ|
03086015c ಅಗಸ್ತ್ಯಸ್ಯಾಶ್ರಮಶ್ಚೈವ ಬಹುಮೂಲಫಲೋದಕಃ||
ಅಲ್ಲಿ ಶ್ರೀಮಂತ, ಮಣಿಮಯ, ಮಂಗಳಕರ ವೈಡೂರ್ಯಪರ್ವತ ಮತ್ತು ಬಹಳಷ್ಟು ಫಲಮೂಲ ಮತ್ತು ನೀರಿನಿಂದೊಡಗೂಡಿದ ಅಗಸ್ತ್ಯಾಶ್ರಮಗಳಿವೆ.
03086016a ಸುರಾಷ್ಟ್ರೇಷ್ವಪಿ ವಕ್ಷ್ಯಾಮಿ ಪುಣ್ಯಾನ್ಯಾಯತನಾನಿ ಚ|
03086016c ಆಶ್ರಮಾನ್ಸರಿತಃ ಶೈಲಾನ್ಸರಾಂಸಿ ಚ ನರಾಧಿಪ||
ನರಾಧಿಪ! ಈಗ ನಾನು ಸುರಾಷ್ಟ್ರದಲ್ಲಿರುವ ಪುಣ್ಯಸ್ಥಳಗಳು, ಆಶ್ರಮಗಳು, ನದಿಗಳು, ಗಿರಿಗಳು, ಮತ್ತು ಸರೋವರಗಳ ಕುರಿತು ಹೇಳುತ್ತೇನೆ.
03086017a ಚಮಸೋನ್ಮಜ್ಜನಂ ವಿಪ್ರಾಸ್ತತ್ರಾಪಿ ಕಥಯಂತ್ಯುತ|
03086017c ಪ್ರಭಾಸಂ ಚೋದಧೌ ತೀರ್ಥಂ ತ್ರಿದಶಾನಾಂ ಯುಧಿಷ್ಠಿರ||
ಯುಧಿಷ್ಠಿರ! ವಿಪ್ರರು ಅಲ್ಲಿರುವ ಚಮಸೋನ್ಮಜ್ಜನ ಮತ್ತು ಸಮುದ್ರ ತೀರದಲ್ಲಿರುವ ಮೂವತ್ತು ದೇವತೆಗಳ ತೀರ್ಥ ಪ್ರಭಾಸದ ಕುರಿತು ಹೇಳುತ್ತಾರೆ.
03086018a ತತ್ರ ಪಿಂಡಾರಕಂ ನಾಮ ತಾಪಸಾಚರಿತಂ ಶುಭಂ|
03086018c ಉಜ್ಜಯಂತಶ್ಚ ಶಿಖರೀ ಕ್ಷಿಪ್ರಂ ಸಿದ್ಧಿಕರೋ ಮಹಾನ್||
ಅಲ್ಲಿ ತಾಪಸಿಗಳು ನಡೆದುಕೊಳ್ಳುವ ಪಿಂಡಾರಕ ಎಂಬ ಹೆಸರಿನ ಶುಭ ಪ್ರದೇಶವೂ ಕ್ಷಿಪ್ರವಾಗಿ ಸಿದ್ಧಿಯನ್ನು ಕೊಡುವ ಉಜ್ಜಯಂತ ಗಿರಿಯೂ ಇವೆ.
03086019a ತತ್ರ ದೇವರ್ಷಿವರ್ಯೇಣ ನಾರದೇನಾನುಕೀರ್ತಿತಃ|
03086019c ಪುರಾಣಃ ಶ್ರೂಯತೇ ಶ್ಲೋಕಸ್ತಂ ನಿಬೋಧ ಯುಧಿಷ್ಠಿರ||
ಯುಧಿಷ್ಠಿರ! ಅಲ್ಲಿ ಹಿಂದೆ ದೇವರ್ಷಿಗಳಲ್ಲಿ ಹಿರಿಯ ನಾರದನು ಹೇಳಿದ ಶ್ಲೋಕವೊಂದಿದೆ, ಕೇಳು.
03086020a ಪುಣ್ಯೇ ಗಿರೌ ಸುರಾಷ್ಟ್ರೇಷು ಮೃಗಪಕ್ಷಿನಿಷೇವಿತೇ|
03086020c ಉಜ್ಜಯಂತೇ ಸ್ಮ ತಪ್ತಾಂಗೋ ನಾಕಪೃಷ್ಠೇ ಮಹೀಯತೇ||
“ಸುರಾಷ್ಟ್ರದಲ್ಲಿರುವ ಮೃಗಪಕ್ಷಿಗಳು ವಾಸಿಸುವ ಉಜ್ಜಯಂತದ ಮೇಲೆ ತನ್ನ ದೇಹವನ್ನು ದಂಡಿಸಿ ತಪಸ್ಸನ್ನಾಚರಿಸುವವನು ಸ್ವರ್ಗದಲ್ಲಿ ಮೆರೆಯುತ್ತಾನೆ.”
03086021a ಪುಣ್ಯಾ ದ್ವಾರವತೀ ತತ್ರ ಯತ್ರಾಸ್ತೇ ಮಧುಸೂದನಃ|
03086021c ಸಾಕ್ಷಾದ್ದೇವಃ ಪುರಾಣೋಽಸೌ ಸ ಹಿ ಧರ್ಮಃ ಸನಾತನಃ||
ಅಲ್ಲಿಯೇ ಪುರಾಣಗಳಲ್ಲಿ ಹೇಳಿರುವ ಸಾಕ್ಷಾದ್ದೇವ ಸನಾತನ ಧರ್ಮ ಮಧುಸೂದನನು ವಾಸಿಸುವ ಪುಣ್ಯ ದ್ವಾರವತಿಯಿದೆ.
03086022a ಯೇ ಚ ವೇದವಿದೋ ವಿಪ್ರಾ ಯೇ ಚಾಧ್ಯಾತ್ಮವಿದೋ ಜನಾಃ|
03086022c ತೇ ವದಂತಿ ಮಹಾತ್ಮಾನಂ ಕೃಷ್ಣಂ ಧರ್ಮಂ ಸನಾತನಂ||
ವೇದವಿದ ವಿಪ್ರರು ಮತ್ತು ಆಧ್ಯಾತ್ಮವನ್ನು ತಿಳಿದ ಜನರು ಮಹಾತ್ಮ ಕೃಷ್ಣನೇ ಸನಾತನ ಧರ್ಮವೆಂದು ಹೇಳುತ್ತಾರೆ.
03086023a ಪವಿತ್ರಾಣಾಂ ಹಿ ಗೋವಿಂದಃ ಪವಿತ್ರಂ ಪರಮುಚ್ಯತೇ|
03086023c ಪುಣ್ಯಾನಾಮಪಿ ಪುಣ್ಯೋಽಸೌ ಮಂಗಲಾನಾಂ ಚ ಮಂಗಲಂ||
ಗೋವಿಂದನೇ ಪವಿತ್ರರಲ್ಲಿ ಪರಮ ಪವಿತ್ರನೆಂದೂ, ಪುಣ್ಯಗಳಲ್ಲಿ ಪುಣ್ಯನೆಂದೂ, ಮಂಗಳಗಳಲ್ಲಿ ಮಂಗಳನೆಂದು ಹೇಳುತ್ತಾರೆ.
03086024a ತ್ರೈಲೋಕ್ಯಂ ಪುಂಡರೀಕಾಕ್ಷೋ ದೇವದೇವಃ ಸನಾತನಃ|
03086024c ಆಸ್ತೇ ಹರಿರಚಿಂತ್ಯಾತ್ಮಾ ತತ್ರೈವ ಮಧುಸೂದನಃ||
ಮೂರು ಲೋಕಗಳಿಗೂ ದೇವದೇವ, ಸನಾತನ, ಪುಂಡರೀಕಾಕ್ಷ, ಹರಿ, ಅಚಿಂತ್ಯಾತ್ಮ ಮಧುಸೂದನನು ಅಲ್ಲಿಯೇ ವಾಸಿಸುತ್ತಾನೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಧೌಮ್ಯತೀರ್ಥಯಾತ್ರಾಯಾಂ ಷಡಶೀತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಧೌಮ್ಯತೀರ್ಥಯಾತ್ರಾ ಎನ್ನುವ ಎಂಭತ್ತಾರನೆಯ ಅಧ್ಯಾಯವು.