ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೧೯೨
ಧುಂಧುಮಾರ
ಇಕ್ಷ್ವಾಕು ರಾಜ ಕುವಲಾಶ್ವನು ಹೇಗೆ ಧುಂಧುಮಾರನೆಂದಾದನೆಂದು ಯುಧಿಷ್ಠಿರನು ಕೇಳಲು ಮಾರ್ಕಂಡೇಯನು ಧುಂಧುಮಾರನ ಚರಿತ್ರೆಯನ್ನು ಹೇಳುವುದು (೧-೭). ಮರುಭೂಮಿಯಲ್ಲಿ ತಪಸ್ಸನ್ನಾಚರಿಸಿದ ಮಹರ್ಷಿ ಉತ್ತಂಕನಿಗೆ ವಿಷ್ಣುವು ಪ್ರತ್ಯಕ್ಷನಾಗಿ ತಪಸ್ಸನ್ನಾಚರಿಸುತ್ತಿದ್ದ ಧುಂಧು ಎಂಬ ಅಸುರನ ಮೃತ್ಯುವಿಗೆ ಉತ್ತಂಕನೂ ಕುವಲಾಶ್ವನೂ ಕಾರಣರಾಗುತ್ತಾರೆ ಎಂದು ವರವನ್ನು ನೀಡಿದುದು (೮-೨೯).
03192001 ವೈಶಂಪಾಯನ ಉವಾಚ|
03192001a ಯುಧಿಷ್ಠಿರೋ ಧರ್ಮರಾಜಃ ಪಪ್ರಚ್ಚ ಭರತರ್ಷಭ|
03192001c ಮಾರ್ಕಂಡೇಯಂ ತಪೋವೃದ್ಧಂ ದೀರ್ಘಾಯುಷಮಕಲ್ಮಷಂ||
ವೈಶಂಪಾಯನನು ಹೇಳಿದನು: “ಭರತರ್ಷಭ! ಧರ್ಮರಾಜ ಯುಧಿಷ್ಠಿರನು ತಪೋವೃದ್ಧ, ಅಕಲ್ಮಷ, ದೀರ್ಘಾಯು ಮಾರ್ಕಂಡೇಯನಲ್ಲಿ ಪುನಃ ಕೇಳಿದನು:
03192002a ವಿದಿತಾಸ್ತವ ಧರ್ಮಜ್ಞ ದೇವದಾನವರಾಕ್ಷಸಾಃ|
03192002c ರಾಜವಂಶಾಶ್ಚ ವಿವಿಧಾ ಋಷಿವಂಶಾಶ್ಚ ಶಾಶ್ವತಾಃ||
03192002e ನ ತೇಽಸ್ತ್ಯವಿದಿತಂ ಕಿಂ ಚಿದಸ್ಮಿಽಲ್ಲೋಕೇ ದ್ವಿಜೋತ್ತಮ||
“ಧರ್ಮಜ್ಞ! ನಿನಗೆ ದೇವ, ದಾನವ, ರಾಕ್ಷಸರ ಮತ್ತು ಶಾಶ್ವತವಾಗಿರುವ ವಿವಿಧ ರಾಜವಂಶಗಳ ಋಷಿವಂಶಗಳ ಕುರಿತು ತಿಳಿದಿದೆ. ದ್ವಿಜೋತ್ತಮ! ಈ ಲೋಕದಲ್ಲಿ ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ.
03192003a ಕಥಾಂ ವೇತ್ಸಿ ಮುನೇ ದಿವ್ಯಾಂ ಮನುಷ್ಯೋರಗರಕ್ಷಸಾಂ|
03192003c ಏತದಿಚ್ಚಾಮ್ಯಹಂ ಶ್ರೋತುಂ ತತ್ತ್ವೇನ ಕಥಿತಂ ದ್ವಿಜ||
ಮುನೇ! ದೇವತೆಗಳ, ಮನುಷ್ಯರ, ಉರಗ ರಾಕ್ಷಸರ ದಿವ್ಯ ಕಥೆಗಳು ನಿನಗೆ ತಿಳಿದಿವೆ. ದ್ವಿಜ! ನಿನ್ನಿಂದ ಈ ವಿಷಯದ ಕುರಿತು ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.
03192004a ಕುವಲಾಶ್ವ ಇತಿ ಖ್ಯಾತ ಇಕ್ಷ್ವಾಕುರಪರಾಜಿತಃ|
03192004c ಕಥಂ ನಾಮ ವಿಪರ್ಯಾಸಾದ್ಧುಂಧುಮಾರತ್ವಮಾಗತಃ||
ಕುವಲಾಶ್ವನೆಂದು ಪ್ರಖ್ಯಾತನಾದ ಅಪರಾಜಿತ ಇಕ್ಷ್ವಾಕುವು ಹೇಗೆ ಹೆಸರನ್ನು ಬದಲಾಯಿಸಿಕೊಂಡು ದುಂಧುಮಾರನಾದ?
03192005a ಏತದಿಚ್ಚಾಮಿ ತತ್ತ್ವೇನ ಜ್ಞಾತುಂ ಭಾರ್ಗವಸತ್ತಮ|
03192005c ವಿಪರ್ಯಸ್ತಂ ಯಥಾ ನಾಮ ಕುವಲಾಶ್ವಸ್ಯ ಧೀಮತಃ||
ಭಾರ್ಗವಸತ್ತಮ! ಇದನ್ನು ತತ್ವದಿಂದ ನಿನ್ನಿಂದ ಕೇಳಬಯಸುತ್ತೇನೆ. ಧೀಮತ ಕುವಲಾಶ್ವನ ಹೆಸರನ್ನು ಏಕೆ ಬದಲಾಯಿಸಲಾಯಿತು?”
03192006 ಮಾರ್ಕಂಡೇಯ ಉವಾಚ|
03192006a ಹಂತ ತೇ ಕಥಯಿಷ್ಯಾಮಿ ಶೃಣು ರಾಜನ್ಯುಧಿಷ್ಠಿರ|
03192006c ಧರ್ಮಿಷ್ಠಮಿದಮಾಖ್ಯಾನಂ ಧುಂಧುಮಾರಸ್ಯ ತಚ್ಛೃಣು||
ಮಾರ್ಕಂಡೇಯನು ಹೇಳಿದನು: “ರಾಜನ್! ಯುಧಿಷ್ಠಿರ! ಆ ಧರ್ಮಿಷ್ಠ ಧುಂಧುಮಾರನ ಆಖ್ಯಾನ[1]ವನ್ನು ನಿನಗೆ ಹೇಳುತ್ತೇನೆ. ಕೇಳು.
03192007a ಯಥಾ ಸ ರಾಜಾ ಇಕ್ಷ್ವಾಕುಃ ಕುವಲಾಶ್ವೋ ಮಹೀಪತಿಃ|
03192007c ಧುಂಧುಮಾರತ್ವಮಗಮತ್ತಚ್ಛೃಣುಷ್ವ ಮಹೀಪತೇ||
ಮಹೀಪತೇ! ಮಹೀಪತಿ ಇಕ್ಷ್ವಾಕು ರಾಜ ಕುವಲಾಶ್ವನು ಧುಂಧುಮಾರನೆಂದು ಹೇಗಾದನು ಎಂದು ಕೇಳು.
03192008a ಮಹರ್ಷಿರ್ವಿಶ್ರುತಸ್ತಾತ ಉತ್ತಂಕ ಇತಿ ಭಾರತ|
03192008c ಮರುಧನ್ವಸು ರಮ್ಯೇಷು ಆಶ್ರಮಸ್ತಸ್ಯ ಕೌರವ||
ಭಾರತ! ಕೌರವ! ಮಗೂ! ಮಹರ್ಷಿಯೆಂದು ವಿಶ್ರುತನಾದ ಉತ್ತಂಕನು ರಮ್ಯವಾದ ಮರುಭೂಮಿಯಲ್ಲಿ ತನ್ನ ಆಶ್ರಮದಲ್ಲಿದ್ದನು.
03192009a ಉತ್ತಂಕಸ್ತು ಮಹಾರಾಜ ತಪೋಽತಪ್ಯತ್ಸುದುಶ್ಚರಂ|
03192009c ಆರಿರಾಧಯಿಷುರ್ವಿಷ್ಣುಂ ಬಹೂನ್ವರ್ಷಗಣಾನ್ವಿಭೋ||
ಮಹಾರಾಜ! ವಿಭೋ! ಈ ಉತ್ತಂಕನು ವಿಷ್ಣುವನ್ನು ಮೆಚ್ಚಿಸಲು ಬಹಳ ವರ್ಷಗಳ ದುಶ್ಚರ ತಪಸ್ಸನ್ನು ನಡೆಸಿದನು.
03192010a ತಸ್ಯ ಪ್ರೀತಃ ಸ ಭಗವಾನ್ಸಾಕ್ಷಾದ್ದರ್ಶನಮೇಯಿವಾನ್|
03192010c ದೃಷ್ಟ್ವೈವ ಚರ್ಷಿಃ ಪ್ರಹ್ವಸ್ತಂ ತುಷ್ಟಾವ ವಿವಿಧೈಃ ಸ್ತವೈಃ||
ಅವನಿಂದ ಪ್ರೀತನಾದ ಭಗವಂತನು ಸಾಕ್ಷಾತ್ ದರ್ಶನವನ್ನಿತ್ತನು. ನೋಡಿದಾಕ್ಷಣವೇ ಋಷಿಯು ನಮಸ್ಕರಿಸಿ, ವಿವಿಧ ಸ್ತವಗಳಿಂದ ಅವನನ್ನು ತುಷ್ಟಿಗೊಳಿಸಿದನು.
03192011a ತ್ವಯಾ ದೇವ ಪ್ರಜಾಃ ಸರ್ವಾಃ ಸದೇವಾಸುರಮಾನವಾಃ|
03192011c ಸ್ಥಾವರಾಣಿ ಚ ಭೂತಾನಿ ಜಂಗಮಾನಿ ತಥೈವ ಚ||
03192011e ಬ್ರಹ್ಮ ವೇದಾಶ್ಚ ವೇದ್ಯಂ ಚ ತ್ವಯಾ ಸೃಷ್ಟಂ ಮಹಾದ್ಯುತೇ||
“ದೇವ! ಮಹಾದ್ಯುತೇ! ನಿನ್ನಿಂದಲೇ ಈ ಸರ್ವ ಪ್ರಜೆಗಳೂ, ದೇವ-ಅಸುರ-ಮಾನವರೂ ಸೇರಿ, ಇರುವ ಸ್ಥಾವರ ಜಂಗಮಗಳೂ ಬ್ರಹ್ಮ, ವೇದಗಳೂ, ವೇದ್ಯಗಳೂ ಸೃಷ್ಟಿಸಲ್ಪಟ್ಟಿವೆ.
03192012a ಶಿರಸ್ತೇ ಗಗನಂ ದೇವ ನೇತ್ರೇ ಶಶಿದಿವಾಕರೌ|
03192012c ನಿಃಶ್ವಾಸಃ ಪವನಶ್ಚಾಪಿ ತೇಜೋಽಗ್ನಿಶ್ಚ ತವಾಚ್ಯುತ||
03192012e ಬಾಹವಸ್ತೇ ದಿಶಃ ಸರ್ವಾಃ ಕುಕ್ಷಿಶ್ಚಾಪಿ ಮಹಾರ್ಣವಃ||
ದೇವ! ನಿನ್ನ ಶಿರವು ಗಗನ, ನೇತ್ರಗಳು ಶಶಿ-ದಿವಾಕರರು. ಅಚ್ಯುತ! ನಿನ್ನ ಉಸಿರು ವಾಯು ಮತ್ತು ತೇಜಸ್ಸು ಅಗ್ನಿ. ಎಲ್ಲ ದಿಕ್ಕುಗಳೂ ನಿನ್ನ ಬಾಹುಗಳು ಮತ್ತು ಮಹಾಸಾಗರವೇ ನಿನ್ನ ಒಡಲು.
03192013a ಊರೂ ತೇ ಪರ್ವತಾ ದೇವ ಖಂ ನಾಭಿರ್ಮಧುಸೂದನ|
03192013c ಪಾದೌ ತೇ ಪೃಥಿವೀ ದೇವೀ ರೋಮಾಣ್ಯೋಷಧಯಸ್ತಥಾ||
ದೇವ! ಮಧುಸೂದನ! ಪರ್ವತಗಳೇ ನಿನ್ನ ತೊಡೆಗಳು. ಆಕಾಶವೇ ನಾಭಿ. ಪೃಥಿವೀ ದೇವಿಯು ನಿನ್ನ ಪಾದಗಳು ಮತ್ತು ಅರಣ್ಯೌಷಧಿಗಳು ನಿನ್ನ ರೋಮಗಳು.
03192014a ಇಂದ್ರಸೋಮಾಗ್ನಿವರುಣಾ ದೇವಾಸುರಮಹೋರಗಾಃ|
03192014c ಪ್ರಹ್ವಾಸ್ತ್ವಾಮುಪತಿಷ್ಠಂತಿ ಸ್ತುವಂತೋ ವಿವಿಧೈಃ ಸ್ತವೈಃ||
ಇಂದ್ರ, ಸೋಮ, ಅಗ್ನಿ, ವರುಣರು, ದೇವಾಸುರಮಹೋರಗರು ನಿನ್ನನ್ನು ವಿವಿಧ ಸ್ತವಗಳಿಂದ ಸ್ತುತಿಸಿ ತಲೆಬಾಗಿ ನಮಸ್ಕರಿಸಿ ನಿಂತಿರುವರು.
03192015a ತ್ವಯಾ ವ್ಯಾಪ್ತಾನಿ ಸರ್ವಾಣಿ ಭೂತಾನಿ ಭುವನೇಶ್ವರ|
03192015c ಯೋಗಿನಃ ಸುಮಹಾವೀರ್ಯಾಃ ಸ್ತುವಂತಿ ತ್ವಾಂ ಮಹರ್ಷಯಃ||
ಭುವನೇಶ್ವರ! ಸರ್ವ ಭೂತಗಳಲ್ಲಿ ನೀನು ವ್ಯಾಪಿಸಿರುವೆ. ಯೋಗಿಗಳು, ಮಹಾವೀರರು, ಮುಹರ್ಷಿಗಳು ನಿನ್ನನ್ನು ಸ್ತುತಿಸುತ್ತಾರೆ.
03192016a ತ್ವಯಿ ತುಷ್ಟೇ ಜಗತ್ಸ್ವಸ್ಥಂ ತ್ವಯಿ ಕ್ರುದ್ಧೇ ಮಹದ್ಭಯಂ|
03192016c ಭಯಾನಾಮಪನೇತಾಸಿ ತ್ವಮೇಕಃ ಪುರುಷೋತ್ತಮ||
ಪುರುಷೋತ್ತಮ! ನೀನು ತುಷ್ಟನಾದರೆ ಜಗತ್ತು ಸ್ವಸ್ಥವಾಗಿರುತ್ತದೆ. ನೀನು ಕ್ರುದ್ಧನಾದರೆ ಮಹಾ ಭಯವುಂಟಾಗುತ್ತದೆ. ನೀನು ಭಯಗಳನ್ನು ಹೋಗಲಾಡಿಸುವವನು.
03192017a ದೇವಾನಾಂ ಮಾನುಷಾಣಾಂ ಚ ಸರ್ವಭೂತಸುಖಾವಹಃ|
03192017c ತ್ರಿಭಿರ್ವಿಕ್ರಮಣೈರ್ದೇವ ತ್ರಯೋ ಲೋಕಾಸ್ತ್ವಯಾಹೃತಾಃ||
03192017e ಅಸುರಾಣಾಂ ಸಮೃದ್ಧಾನಾಂ ವಿನಾಶಶ್ಚ ತ್ವಯಾ ಕೃತಃ||
ದೇವತೆಗಳ, ಮನುಷ್ಯರ ಮತ್ತು ಸರ್ವಭೂತಗಳ ಹಿತಕಾರಕನು ನೀನು. ದೇವ! ತ್ರಿವಿಕ್ರಮನಾಗಿ ಮೂರೂ ಲೋಕಗಳನ್ನು ವ್ಯಾಪಿಸಿ ಸಮೃದ್ಧರಾಗಿದ್ದ ಅಸುರರನ್ನು ನೀನು ನಾಶಗೊಳಿಸಿದೆ.
03192018a ತವ ವಿಕ್ರಮಣೈರ್ದೇವಾ ನಿರ್ವಾಣಮಗಮನ್ ಪರಂ|
03192018c ಪರಾಭವಂ ಚ ದೈತ್ಯೇಂದ್ರಾಸ್ತ್ವಯಿ ಕ್ರುದ್ಧೇ ಮಹಾದ್ಯುತೇ||
ದೇವ! ನಿನ್ನ ವಿಕ್ರಮದಿಂದ ದೇವತೆಗಳು ಪರಮ ನಿರ್ವಾಣವನ್ನು ಹೊಂದಿದರು. ಮಹಾದ್ಯುತೇ! ನಿನ್ನ ಕ್ರೋಧದಿಂದ ದೈತ್ಯೇಂದ್ರರು ಪರಾಭವ ಹೊಂದಿದರು.
03192019a ತ್ವಂ ಹಿ ಕರ್ತಾ ವಿಕರ್ತಾ ಚ ಭೂತಾನಾಮಿಹ ಸರ್ವಶಃ|
03192019c ಆರಾಧಯಿತ್ವಾ ತ್ವಾಂ ದೇವಾಃ ಸುಖಮೇಧಂತಿ ಸರ್ವಶಃ||
ಇಲ್ಲಿರುವ ಎಲ್ಲವುಗಳ ಕರ್ತನೂ ನೀನೇ. ವಿಕರ್ತನೂ ನೀನೇ. ನಿನ್ನನ್ನು ಆರಾಧಿಸಿ ದೇವತೆಗಳೆಲ್ಲರೂ ಸುಖವನ್ನು ಪಡೆಯುತ್ತಾರೆ.”
03192020a ಏವಂ ಸ್ತುತೋ ಹೃಷೀಕೇಶ ಉತ್ತಂಕೇನ ಮಹಾತ್ಮನಾ|
03192020c ಉತ್ತಂಕಮಬ್ರವೀದ್ವಿಷ್ಣುಃ ಪ್ರೀತಸ್ತೇಽಹಂ ವರಂ ವೃಣು||
ಮಹಾತ್ಮ ಉತ್ತಂಕನು ಹೀಗೆ ಸ್ತುತಿಸಲು ಹೃಷೀಕೇಶ ವಿಷ್ಣುವು “ಉತ್ತಂಕ! ನಿನ್ನಿಂದ ಪ್ರೀತನಾಗಿದ್ದೇನೆ. ವರವನ್ನು ಕೇಳು” ಎಂದನು.
03192021 ಉತ್ತಂಕ ಉವಾಚ|
03192021a ಪರ್ಯಾಪ್ತೋ ಮೇ ವರೋ ಹ್ಯೇಷ ಯದಹಂ ದೃಷ್ಟವಾನ್ ಹರಿಂ|
03192021c ಪುರುಷಂ ಶಾಶ್ವತಂ ದಿವ್ಯಂ ಸ್ರಷ್ಟಾರಂ ಜಗತಃ ಪ್ರಭುಂ||
ಉತ್ತಂಕನು ಹೇಳಿದನು: “ನಾನು ಪುರುಷ, ಶಾಶ್ವತ, ದಿವ್ಯ, ಸೃಷ್ಟಾರ, ಜಗತ್ತಿನ ಪ್ರಭು, ಹರಿಯನ್ನು ನೋಡಿದೆ ಎನ್ನುವ ವರದಿಂದಲೇ ತುಂಬಿಹೋಗಿದ್ದೇನೆ.”
03192022 ವಿಷ್ಣುರುವಾಚ|
03192022a ಪ್ರೀತಸ್ತೇಽಹಮಲೌಲ್ಯೇನ ಭಕ್ತ್ಯಾ ಚ ದ್ವಿಜಸತ್ತಮ|
03192022c ಅವಶ್ಯಂ ಹಿ ತ್ವಯಾ ಬ್ರಹ್ಮನ್ಮತ್ತೋ ಗ್ರಾಹ್ಯೋ ವರೋ ದ್ವಿಜ||
ವಿಷ್ಣುವು ಹೇಳಿದನು: “ದ್ವಿಜಸತ್ತಮ! ನಾನು ನಿನ್ನ ನಿಷ್ಟೆ ಮತ್ತು ಭಕ್ತಿಗಳಿಗೆ ಒಲಿದಿದ್ದೇನೆ. ದ್ವಿಜ! ಬ್ರಹ್ಮನ್! ಅವಶ್ಯವಾಗಿ ನೀನು ನನ್ನಿಂದ ವರವನ್ನು ಪಡೆಯಬೇಕು.”
03192023a ಏವಂ ಸಂಚಂದ್ಯಮಾನಸ್ತು ವರೇಣ ಹರಿಣಾ ತದಾ|
03192023c ಉತ್ತಂಕಃ ಪ್ರಾಂಜಲಿರ್ವವ್ರೇ ವರಂ ಭರತಸತ್ತಮ||
ಭರತಸತ್ತಮ! ಈ ರೀತಿ ಹರಿಯು ಒತ್ತಾಯಿಸಿ ವರವನ್ನು ನೀಡಲು ಉಂತ್ತಂಕನು ಕೈಮುಗಿದು ವರವನ್ನು ಕೇಳಿದನು.
03192024a ಯದಿ ಮೇ ಭಗವಾನ್ಪ್ರೀತಃ ಪುಂಡರೀಕನಿಭೇಕ್ಷಣಃ|
03192024c ಧರ್ಮೇ ಸತ್ಯೇ ದಮೇ ಚೈವ ಬುದ್ಧಿರ್ಭವತು ಮೇ ಸದಾ||
03192024e ಅಭ್ಯಾಸಶ್ಚ ಭವೇದ್ಭಕ್ತ್ಯಾ ತ್ವಯಿ ನಿತ್ಯಂ ಮಹೇಶ್ವರ||
“ಭಗವನ್! ಪುಂಡರೀಕಾಕ್ಷ! ನನ್ನ ಮೇಲೆ ಪ್ರೀತನಾದರೆ ನನ್ನ ಬುದ್ಧಿಯು ಸದಾ ಧರ್ಮ, ಸತ್ಯ, ದಮಗಳಲ್ಲಿರಲಿ. ಮಹೇಶ್ವರ! ನಿತ್ಯವೂ ನಿನ್ನ ಭಕ್ತಿಯ ಅಭ್ಯಾಸದಲ್ಲಿರುವಂತಾಗಲಿ.”
03192025 ವಿಷ್ಣುರುವಾಚ|
03192025a ಸರ್ವಮೇತದ್ಧಿ ಭವಿತಾ ಮತ್ಪ್ರಸಾದಾತ್ತವ ದ್ವಿಜ|
03192025c ಪ್ರತಿಭಾಸ್ಯತಿ ಯೋಗಶ್ಚ ಯೇನ ಯುಕ್ತೋ ದಿವೌಕಸಾಂ||
03192025e ತ್ರಯಾಣಾಮಪಿ ಲೋಕಾನಾಂ ಮಹತ್ಕಾರ್ಯಂ ಕರಿಷ್ಯಸಿ||
ವಿಷ್ಣುವು ಹೇಳಿದನು: “ದ್ವಿಜ! ಇವೆಲ್ಲವೂ ನನ್ನ ಪ್ರಸಾದದಿಂದ ಆಗುತ್ತವೆ. ಯೋಗವು ನಿನಗೆ ತೋರಿಸಿಕೊಳ್ಳುತ್ತದೆ. ಅದರಿಂದ ಯುಕ್ತನಾಗಿ ದೇವತೆಗಳಿಗೆ ಮತ್ತು ಮೂರು ಲೋಕಗಳಿಗೆ ಮಹಾ ಕಾರ್ಯವನ್ನು ಮಾಡುತ್ತೀಯೆ.
03192026a ಉತ್ಸಾದನಾರ್ಥಂ ಲೋಕಾನಾಂ ಧುಂಧುರ್ನಾಮ ಮಹಾಸುರಃ|
03192026c ತಪಸ್ಯತಿ ತಪೋ ಘೋರಂ ಶೃಣು ಯಸ್ತಂ ಹನಿಷ್ಯತಿ||
ಲೋಕಗಳನ್ನು ಉರುಳಿಸುವ ಸಲುವಾಗಿ ಧುಂಧು ಎಂಬ ಮಹಾಸುರನು ಘೋರವಾದ ತಪಸ್ಸನ್ನು ತಪಿಸುತ್ತಿದ್ದಾನೆ. ಅವನನ್ನು ನೀನು ಸಂಹರಿಸುತ್ತೀಯೆ. ಕೇಳು.
03192027a ಬೃಹದಶ್ವ ಇತಿ ಖ್ಯಾತೋ ಭವಿಷ್ಯತಿ ಮಹೀಪತಿಃ|
03192027c ತಸ್ಯ ಪುತ್ರಃ ಶುಚಿರ್ದಾಂತಃ ಕುವಲಾಶ್ವ ಇತಿ ಶ್ರುತಃ||
ಬೃಹದಶ್ವ ಎಂದು ಖ್ಯಾತನಾದ ರಾಜನಾಗುತ್ತಾನೆ. ಅವನ ಮಗನು ಶುಚಿಯು, ದಾಂತನೂ ಆದ ಕುವಲಾಶ್ವನೆಂದು.
03192028a ಸ ಯೋಗಬಲಮಾಸ್ಥಾಯ ಮಾಮಕಂ ಪಾರ್ಥಿವೋತ್ತಮಃ|
03192028c ಶಾಸನಾತ್ತವ ವಿಪ್ರರ್ಷೇ ಧುಂಧುಮಾರೋ ಭವಿಷ್ಯತಿ||
ಆ ಪಾರ್ಥಿವೋತ್ತಮನು ನನ್ನ ಯೋಗಬಲವನ್ನು ಆಶ್ರಯಿಸಿ ನಿನ್ನ ಶಾಸನದಂತೆ ಧುಂಧುಮಾರನಾಗುತ್ತಾನೆ.””
03192029 ಮಾರ್ಕಂಡೇಯ ಉವಾಚ|
03192029a ಉತ್ತಂಕಮೇವಮುಕ್ತ್ವಾ ತು ವಿಷ್ಣುರಂತರಧೀಯತ|
ಮಾರ್ಕಂಡೇಯನು ಹೇಳಿದನು: “ಉತ್ತಂಕನಿಗೆ ಹೀಗೆ ಹೇಳಿ ವಿಷ್ಣುವು ಅಂತರ್ಧಾನನಾದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಧುಂಧುಮಾರೋಪಾಖ್ಯಾನೇ ದ್ವಿನವತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಧುಂಧುಮಾರೋಪಾಖ್ಯಾನದಲ್ಲಿ ನೂರಾತೊಂಭತ್ತೆರಡನೆಯ ಅಧ್ಯಾಯವು.
[1] ಧುಂಧುಮಾರನ ಕಥೆಯು ಮುಂದೆ ಅಶ್ವಮೇಧ ಪರ್ವದಲ್ಲಿ ಉತ್ತಂಕ ಚರಿತೆಯಲ್ಲಿ ಪುನಃ ಬರುತ್ತದೆ.